'ಹಂಗಾಮ ಕಾರ್ನರ್' ನಲ್ಲಿ ಕತೆಯ ಬಾಜೂ ಕೂತು…

ಹೊರಗಿನ ಸದ್ದುಗಳೆಲ್ಲ ಒಳಗಿನ ಕಾಳಜಿಯಾಗುತ್ತ

-ಸುನಂದಾ ಪ್ರಕಾಶ ಕಡಮೆ
‘ ಪಮ್ಮೇಚನ ಶಿವರಾತ್ರಿ’ ಕತೆಯಲ್ಲಿ ಬರುವ ಶರಣಯ್ಯ ತಾತನನ್ನು ಒಂದು ಅಪೂರ್ವ ಜೀವನಾನುಭವವುಳ್ಳ  ಜೀವವಾಗಿ ಜಯಂತ್ ಕಾಯ್ಕಿಣಿ  ಸೃಷ್ಟಿಸುತ್ತಾರೆ . ಪ್ರತಿವರ್ಷದಂತೆ ಗೋಕರ್ಣಕ್ಕೆ ಬರುವ ಐದು ದಿನಗಳ ಶಿವರಾತ್ರಿ .
ಅಲ್ಲಿ ತೇರು, ಕಾಣಿಕೆ ಡಬ್ಬಿಗೆ ಹೊಸ ಬೀಗ , ಮಿಠಾಯಿ , ಶರಬತ್ತು, ಅಗಸೆ ಬಾಗಿಲಲ್ಲಿ ಇಂಜೆಕ್ಷನ್ನು ಟೆಂಟು ಸಿನೆಮಾ, ಜಾದೂ,
ಹೊಸ ಜ್ಯೂಸ್ ಸೆಂಟರ್, ದೋಸೆ ಸ್ಟಾಲ್ , ಕೋಟಿ ತೀರ್ಥದಲ್ಲಿ ತೆಪ್ಪ ಗದ್ದಲ , ನಾಟಕ ಕಂಪನಿ …ಹೀಗೆ . ಅಂಥ ನಾಟಕ ಕಂಪನಿಯೊಂದರ ಜತೆ ಬರುವ ಬಯಲು ಸೀಮೆಯ ಅಂಧ ಪೇಟಿ ಮಾಸ್ತರ್ ಶರಣಯ್ಯ ತಾತ .
ಲೋಕದ ಎಲ್ಲ ಸೌಂದರ್ಯವನ್ನು ನಾದದಲ್ಲೇ ಗಳಿಸಬೇಕೆಂದು ಕುರುಡಾದಂತಿರುವ ಈ ತಾತನ ಕೆಲ ದಿನಗಳ ಸಾಂಗತ್ಯ ,
ಗೋಕರ್ಣದ ನಿಖರವಾದೊಂದು ಕೆಲಸವಿಲ್ಲದ ಹದಿನೆಂಟರ ಪಮ್ಮೇಚನಲ್ಲಿ ಹೊಸ ಚೈತನ್ಯದ ಅಲೆಗಳನ್ನು ತುಂಬಿ ಬಿಡುತ್ತದೆ.
ಜಾತ್ರೆಯ ದತ್ತಣೆಯಲ್ಲೂ ಪಮ್ಮೇಚ ಶರಣಯ್ಯವರನ್ನು ಕೈ ಹಿಡಿದು ಎಲ್ಲ ಛಂದದ ಜಾಗೆಗಳಿಗೂ ಕರೆದೊಯ್ಯುವ . ಮಾಣೆಶ್ವರದ  ಮೆಟ್ಟಿಲಲ್ಲಿ  ಕೂತ ಆ ತಾತ ” ಇಲ್ಲಿಂದ ಸಮುದ್ರಾ ಛಲೋ ಕೇಳಿಸ್ತದಲ್ಲ, ನಿಮ್ಮ ಸಮುದ್ರಾನ ನನ್ನ ಕಿವಿಯಾಗ ಕಟಕೊಂಡು ನಮ್ಮ ಬಯಲ ಸೀಮಿಗೆ ಒಯ್ತೀನಿ , ಮಳೆಗಾಲದಾಗ ಇದರ ಸಂಗೀತ ಎಷ್ಟು ರುದ್ರವಾಗಿರ್ತದೋ” ಎನ್ನುತ್ತಾ  ನೋಡದೆ  ಪಡೆಯಬಹುದಾದ ಆನಂದದ ಕಡೆಗೆ ಪಮ್ಮೇಚನನ್ನು ಒಯ್ಯುವರು.
ತಾತನ ಬಳಿ ತನ್ನ ಆಯಿ-ಅಪ್ಪನ ವಿವರಗಳನ್ನು ಚೂರು ಚೂರೇ  ಹಂಚಿಕೊಳ್ಳುತ್ತಾ ಪಮ್ಮೇಚ ” ಈ ಆಯಿ ಮತ್ತು ಮನೆಯನ್ನು ಬಿಟ್ಟುಹೋಗುವ ಹಾಗಿದ್ದರೆ ಏನೋ ಆಗುತ್ತಿದ್ದೆ ” ಎಂಬಂತಹ ಮಾತಾಡುತ್ತಾನೆ . ಅದಕ್ಕೆ ” ಛೆ ಛೆ ಆಯಿ- ಅಪ್ಪ ನಿನಗೊಂದು ಬಾಳು ಕೊಟ್ಟಾರ , ಅದಕ್ಕಿಂತ ಜಾಸ್ತಿ ಏನು ಕೇಳ್ತಿ ಅವರಿಂದ . ಹೀಂಗ ಸಮುದ್ರದ ಬಾಜೂಕೆ ಇರ್ತಿದ್ದಿ. ಮನಸ್ಸು ಸಣ್ಣ ಯಾಕೆ ಮಾಡ್ತಿ, ಮನಸ್ಸು ತೆರಿ.
ಎಲ್ಲಾ ನೀನಿದ್ದಲ್ಲೇ ಬರ್ತದ. ಇದೆಲ್ಲ ಬರಿ ಸದ್ದು , ಸ್ವರಾ ಕೇಳು” ಎನ್ನುವ ತಾತ , ಪ್ರೀತಿ ಮತ್ತು ಅಂತ:ಕರಣದ ಸ್ವರಗಳ ಮೂರ್ತರೂಪವಾಗಿ  ಕಾಣುತ್ತಾರೆ.
ಗರ್ಭಗುಡಿಯ ಕತ್ತಲಲ್ಲಿ ಆತ್ಮಲಿಂಗ ಮುಟ್ಟಲು ಹೋಗಿ ಸೆಖೆಯಿಂದ ಬೆವೆತು ಹೊರಬಂದು ಕೂತಾಗ ” ನನ್ನ ಗರ್ಭ ಗುಡಿಯಾಗ ಯಾವಾಗಲು ಕತ್ತಲೆ ಇರ್ತದ , ನಾನೂ ಆತ್ಮಲಿಂಗ ಮುಟ್ಟೋದು  ಹೀಂಗ” ಎನ್ನುತ್ತಾ  ತಾತ ರಾಗವಾಗಿ ವಚನವೊಂದನ್ನು  ಹಾಡುತ್ತಾರೆ. ಪೇಟಿಯ ಸಾಥ್ ಇಲ್ಲದೇ ಸೊರಗಿದ ದನಿಯಲ್ಲಿ ಮಾತ್ರ ಶರಣಯ್ಯನವರ ವಯಸ್ಸಿನ ದಣಿವು ತೂರಿಬರುತ್ತದೆ.
” ಪ್ರತೀ ಮನಿಯಾಗಿನ ಹೆಂಗಸರು , ಮನೀ ಗಂಡಸರ , ಯಾತ್ರಿಕರ ಸಲುವಾಗಿ ಬರೀ ಅಡಿಗೆ ಮಾಡ್ತಾನೆ ಇರ್ತಾರಲ್ಲ  ಅವರು ಜಾತ್ರೀ ನೋಡೋದು ಯಾವಾಗ ?” ಎಂದು ಮರುಗುತ್ತಾರೆ , ತಾತ ಕಣ್ಣು ಮುಚ್ಹಿಕೊಂಡಿದ್ದರು ಲೋಕಕ್ಕೆ ಬೇಕಾಗುವ ಬೆಳಕೆಲ್ಲವೂ ಅವರ ಮನಸ್ಸು ಹಾಗು ಮಾತಿನಲ್ಲೇ ತೆರೆದುಕೊಳ್ಳುತ್ತದೆ.
ಶಾಲೆ ಗುಡ್ಡದ ಮೆಟ್ಟಿಲು ಹತ್ತುವಾಗ “ನಿಮ್ಮ ಊರು ಎಷ್ಟು ಛಲೋ , ಎಲ್ಲಿ ಹೋದ್ರು ಮೆಟ್ಟಿಲಾನೆ ಸಿಕ್ತಾವು” ಎನ್ನುತ್ತಾ ನಮ್ಮನ್ನು ಅಮೂರ್ತ ಸ್ವರಗಳ ಒಂದೊಂದೇ ಮೆಟ್ಟಿಲನ್ನು ಕೈ ಹಿಡಿದು ಏರಿಸುತ್ತಾ ನಡೆದಿರುತ್ತಾರೆ .
ಪಾರ್ಟಿಯೊಂದರಲ್ಲಿ ಶಿರಾ ತಿನ್ನುತ್ತ ಅಲ್ಲಿಯೇ ಬಿದ್ದು ಒಡೆದ ಗ್ಲಾಸೊಂದರ ಠಲ್ಲೆಂಬ ಸದ್ದು ಗ್ರಹಿಸಿದ ತಾತ , ಎಲ್ಲರು ಕೈ ತೊಳೆಯಲು ಎದ್ದಾಗ ” ಕಾಜು ತಾಗೀತು-ಕಾಜು ತಾಕೀತು” ಎಂದು ಎಚ್ಹರಿಸುವರು. ಹೀಗೆ ಶರಣಯ್ಯ ನವರು ಕೇಳಿದ ಹೊರಗಿನ ಸದ್ದುಗಳೆಲ್ಲ ಒಳಗಿನ ಕಾಳಜಿಗಳಾಗಿ ಹೊರ ಹೊಮ್ಮುತ್ತಿರುತ್ತದೆ.
ಮನೆಯ ಹತ್ತಿರ ಬಂದಾಗ “ಬಾವಿ ತೋರಿಸು” ಎಂದು ಕೇಳಿ , ಬಗ್ಗಿ ಕಿವಿಗೊಟ್ಟು ಒಂದು ಪುಟ್ಟ ಕಲ್ಲು ಒಗೆದು ನೀರಿನ ‘ಪುಳಕ್’ ಸದ್ದು  ಆಲಿಸಿದ ಶರಣಯ್ಯ ನೀರು ಕುಡಿದು ” ಇಷ್ಟು ಸನಿಕ ಸಮುದ್ರಾ  ಇದ್ರೂ ಎಷ್ಟು ಸಿಹಿ ನೀರು ಅದ ನೋಡು ” ಎಂದು ಉದ್ಗರಿಸುವರು .
ಬದುಕಿನ ಎಲ್ಲ ಅಮೂಲ್ಯ ಕ್ಷಣಗಳ ಸ್ವರಗಳನ್ನೂ  ತೋರಿಸುತ್ತಾ ಶರಣಯ್ಯ ತಾತ ಪಮ್ಮೇಚನಲ್ಲಿ ಅನನ್ಯ ಉತ್ಸಾಹವನ್ನು ತುಂಬುತ್ತಾ ಸಾಗುತ್ತಾರೆ .
ತೀರ್ಥದ ಧಾರೆಗೆ ತಲೆ ಕೊಟ್ಟು  ತಪಸ್ಸಿಗೆ ಕೂತಂತೆ ಕಾಣುವ ಶರಣಯ್ಯ ತಾತನ ಸುತ್ತಲು ಬಾಗಲಕೋಟೆ ಬೈಲ್ ಹೊಂಗಲ್ ಕಡೆಯ ಹೆಂಗಸರೆಲ್ಲ ತುಂಡು ಸೀರೆಯಲ್ಲಿ ಜಲ ಕ್ರೀಡೆಯಾಡುವಂತೆ ಸ್ನಾನ ಮಾಡುತ್ತಿರುವುದನ್ನು  ಹಾಗು ಅವರು ಆ ತಾತ ಇರುವೆಡೆಗೆ ಜರುಗಿ , ಇದೊಂದೇ ಸುರಕ್ಷಿತ ದಿಕ್ಕೆಂಬಂತೆ ಟವೆಲ್ ಸುತ್ತಿಕೊಂಡು ತಮ್ಮ ಉಡುಪುಗಳನ್ನು ಕೊಡವಿ ಕೊಳ್ಳುತ್ತಿರುವಾಗಲೇ ಸಹಜವಾಗಿ ಮಾತಿಗಿಳಿದುದನ್ನು ನೋಡಿದ ಆ ಕ್ಷಣದಿಂದ ಪಮ್ಮೇಚನಿಗೆ ಎಂದಿಲ್ಲದ ಹಗುರು ಆವರಿಸಿಬಿಡುತ್ತದೆ .
ಆ ನಂತರದಲ್ಲಿ ಅವನನ್ನು ಉದ್ವಿಗ್ನಗೊಳಿಸುವ, ಕೆರಳಿಸುವ ಸಂಗತಿಗಳಿಗೆಲ್ಲ  ಒಂದು ಸಣ್ಣ ಶಾಂತಿಯ ಲೇಪ ಬಂದು ಬಿಟ್ಟಿರುತ್ತದೆ . ಇದರಿಂದಲೋ  ಏನೋ ಪಮ್ಮೇಚ ಅನೇಕ ವರ್ಷಗಳಲ್ಲಿ ಮೊದಲ ಬಾರಿಗೆ ಅಪ್ಪನನ್ನು ಬರಮಾಡಿಕೊಳ್ಳಲು ಬಸ್ ಸ್ಟ್ಯಾಂಡಿಗೆ  ಹೋಗುತ್ತಾನೆ . ಗಡ್ಡ ಹೆರೆಯದ ಹಣ್ಣು ಗೂದಲ ಅಪ್ಪ ಒರಗಿದಾಗ ಆತನ ಮೇಲೆ ಲುಂಗಿ ಹೊದಿಸುತ್ತಾನೆ . ರಾತ್ರಿ ಧಾರಾಕಾರ ಮಳೆಯಲ್ಲಿ ಹಿತ್ತಿಲ ಕಲ್ಲಿನಲ್ಲಿ ತನ್ನ ಮುತ್ತಿನ ಉಡುಪುಗಳನ್ನು ತೊಳೆಯುತ್ತ ಕೂತಆಯಿಯ ಕುರಿತು ರೇಜಿಗೆಯ  ಬದಲು ಅವನಿಗೆ ಕರುಣೆ ಉಕ್ಕುತ್ತದೆ.
ಯಾವ ಕೀಳರಿಮೆಯೂ ಇಲ್ಲದೇ  ಒಕ್ಕಲಕೊಪ್ಪ ಹೊಕ್ಕು ಓದು ಬರಹ ಬಾರದ  ಮಕ್ಕಳಿಗೆ ಅ ಆ ಇ ಈ ಕಲಿಸ ತೊಡಗುತ್ತಾನೆ .
ಕಾಮ , ಕ್ರೋಧ,ಮದ,ಮತ್ಸರಗಳಂಥ  ವಿಕಾರಗಳಿಂದ ಹೊರಗಿರುವ ಈ ಶರಣಯ್ಯ ತಾತನ  ನಿಸ್ವಾರ್ಥ ಭಾವ ಪ್ರಪಂಚವನ್ನು ತನ್ನದಾಗಿಸಿಕೊಂಡ ಪಮ್ಮೇಚ , ಎಲ್ಲ ಕ್ಶುದ್ರತೆಯಿಂದ  ಬಿಡುಗಡೆ ಹೊಂದುತ್ತಾನೆ .
ನಂತರದ ಶಿವರಾತ್ರಿಗೆ ಬರುವ ಪಾರ್ಶವಾಯು  ಪೀಡಿತ ಶರಣಯ್ಯ ತಾತನ ಬಳಿ ಹೋಗಲು ಪಮ್ಮೇಚನಿಗೆ ಮುಜುಗರ .
ತಾನೇ ಅವರನ್ನು ತನ್ನೊಳಗೆ ಹಿಗ್ಗಿಸಿ ನೋಯಿಸುತ್ತಿದ್ದೇನೆ  ಅನ್ನಿಸತೊಡಗಿದೆ . ತನಗೊಂದು ಹೊಸ ದೃಷ್ಟಿಯನ್ನೇ ನೀಡಿದ ಅಂಧ ಅಜ್ಜನನ್ನು ಅವರ ಪಾಡಿಗೆ ಬಿಟ್ಟು ಕತೆಯ ಕೊನೆಯಲ್ಲಿ ತನ್ನದೇ ಆದ ಸ್ವತಂತ್ರ ಸ್ವರಗಳನ್ನು ಹುಡುಕುತ್ತಾ ನಡೆದಿರುತ್ತಾನೆ ಪಮ್ಮೇಚ .
ಕತೆಯನ್ನೋದಿ ಕಣ್ಣು ಮುಚ್ಹಿ ಕೂತರೆ ನಮ್ಮಲ್ಲೂ ಶರಣಯ್ಯ ತಾತ ಹುಟ್ಟಿ ಬೆಳೆದ ಅದೇ ಕತ್ತಲು ಮತ್ತು ಅದರಲ್ಲಿ ಆ ತಾತನೆ ದಯಪಾಲಿಸಿದ  ಬೆಳಕಿನ ಸ್ವರಗಳು ದಾರಿ ತೋರಲಾರಂಭಿಸುತ್ತವೆ.
]]>

‍ಲೇಖಕರು avadhi

October 16, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This