'ಹಂಗಾಮ' ಕಾರ್ನರ್ ನಲ್ಲಿ ಟೂರಿಂಗ್ ಟಾಕೀಸ್…

ಸ್ವರ್ಗ ಬಣ್ಣ ನೋಡಿದಿರಾ?…

-ಎ.ಎನ್. ಪ್ರಸನ್ನ
ಅದೊಂದು ಮಕ್ಕಳ ಸಿನಿಮಾ ಎಂದರೆ ನಾವು ಕಣ್ಣಿದ್ದೂ ಕುರುಡರ ಹಾಗೆ. ಸುಮಾರು ಹನ್ನೆರಡು ವರ್ಷದ ಕುರುಡು ಹುಡುಗನ್ನು “ಹೀರೋ” ಮಾಡಿ ಪ್ರತಿ ಸೀನಿನಲ್ಲುಳ ಅವನ ಸುತ್ತಲೇ ಗಿರಕಿ ಹೊಡೆಯುತ್ತ ಕಥೆ ಹೆಣೆದಿದೆಯೆಂದ ಮೇಲೆ ಅಂಥದೊಂದು ಹಣೆಪಟ್ಟಿ ಹಚ್ಚಿದರೆ ಇರಾನಿನ ಮಜಿದ್ ಮಜಿದಿ ನಿರ್ದೇಶನದ “ಸ್ವರ್ಗ ಬಣ್ಣ”(ಕಲರ್ ಅಫ್ ಪ್ಯಾರಾಡೈಸ್) ಚಲನಚಿತ್ರ ಎಲ್ಲ ವಯಸ್ಸಿನವರಲ್ಲಿ ಮೆಲ್ಲಮೆಲ್ನೆ ಉಂಗುಷ್ಠದಿಂದ ನೆತ್ತಿಯ ತನಕ, ಕೆಲವೊಮ್ಮೆ ನಮ್ಮ ಎದೆಯ ಸದ್ದು ತಡೆಯಲಾಗದೆ ಎದ್ದು ಅಲ್ಲಿರಲಾಗದೆ ಹೆಜ್ಜೆ ಇಟ್ಟು ಪಕ್ಕದವನಿಗೂ ಅದೇ ಗತಿಯಾದದ್ದೂ ಕಂಡು ಸಮಾಧಾನಪಡುವಷ್ಟು ಬೆರಗು ಭಾವಗಳ ಬಣ್ಣದ ಬುಗ್ಗೆಯ ಚಿತ್ರ.
ಸುಮಾರು ಕಳೆದೆರಡು ದಶಕದ ಇರಾನಿನ ಪ್ರಮುಖ ನಿರ್ದೇಶಕ(ಉದಾ: ಮಕ್‌ಬಲ್ ಬಫ್, ಸಮೀರ್ ಮಕ್‌ಬಲ್ ಬಫ್, ಅಬ್ಬಾಸ್ ಕಿಯಾರೋಸ್ತಮಿ ಇತ್ಯಾದಿ) ಚಿತ್ರಗಳನ್ನು ನೋಡುತ್ತಿದ್ದರೆ ಆಗಸ್ಟ ಹದಿನೈದರ ಆಸುಪಾಸಿನಲ್ಲಿ ಲಾಲ್ಬಾಗ್ ಹೊಕ್ಕ ಹಾಗೆ. ಹೂಗಳು ಎಷ್ಟೊಂದು ಎಳೆ, ಮನಸ್ಸಿನ ಸದರಿನೊಳಗಿನ ಪದರು-ಇವುಗಳಿಗೆಲ್ಲೂ ಕೃತ್ರಿಮದ ಸೋಂಕಿರದ ಭಾಷ್ಯ. ಹೀಗಾಗಿ ನೋಟಕನ ಕಣ್ಣು, ಕಿವಿ, ಅಂತರಂಗಕ್ಕೆ ಸಹಜ ಸಾವಯವ ಸಂಬಂಭ ಉಂಟಾಗುತ್ತದೆ.
“ಸ್ವರ್ಗ ಬಣ್ಣ”ದಲ್ಲಿ ಆದುದ್ದೆ ಅದೇ. ಸುಮ್ಮನೆ ಕಥೆಯ ಚೌಕಟ್ಟು ಹೇಳಿದರೆ ಕನ್ನಡ ಸಾಹಿತ್ಯದಲ್ಲಿ ಪ್ರಗತಿಶೀಲ ಕಾಲದಲ್ಲಿ ಇಂಥ ಕಥೆಗಳನ್ನು ಸಾಕಷ್ಟು ಪೇರಿಸಿಟ್ಟಾಗಿದೆ ಎಂದು ಯಾರಾದರೂ ಹೇಳಿಬಿಡಬಹುದು.ಅಮ್ಮನಿಲ್ಲದ ಕುರುಡು ಹುಡುಗ ಮಹಮ್ಮದ್‌ಗೆ ಓದಬೇಕೆಂಬಾಸೆ. ಹಳ್ಳಿಯಲ್ಲಿ ಬಡತನದಲ್ಲಿರುವ ಅಪ್ಪ ಇಬ್ಬರು ತಂಗಿಯರು ಹಾಗೂ ಅಜ್ಜಿಯ ಬಗ್ಗೆ ಇನ್ನಿಲ್ಲದಷ್ಟು ಅಕ್ಕರೆ.
ಬ್ರೈಲ್ ಲಿಪಿಯಲ್ಲಿ ಅಕ್ಷರಗಳನ್ನು ಪೋಣಿಸಿ ಓದುವ ಸಲೀಸಿನಷ್ಟೇ ಗಾಳಿಯ ಬೆನ್ನೇರಿ ಬರುವ ಹಕ್ಕಿಗಳ ಉಲಿಗೆ ಹಠಾತ್ ಕಿವಿಗೊಟ್ಟು ಅವುಗಳ ಪದರದಲ್ಲಿನ ಅಕ್ಷರಗಳನ್ನು ಬಿಡಿಸಿ ಹೇಳುವ, ನೋಡುವವರ ರೆಪ್ಪೆಗಳನ್ನು
ಕಟ್ಟಿಹಾಕುವ ಏಕಾಗ್ರತೆ ಮಹಮದ್‌ನದ್ದು.
ಚಿತ್ರದ ಪ್ರಾರಂಭದಲ್ಲೇ ಸ್ಕೂಲಿನ ರಜಾ ದಿನಗಳಲ್ಲಿ ಮಗ ಒಂದು ರೀತಿಯಲ್ಲಿ ಭಾರವಾಗುತ್ತಾನೆಂದು ಅಲ್ಲೇ ಇಟ್ಟುಕೊಳ್ಳಲು ಅಧ್ಯಾಪಕರನ್ನು ಕೇಳಿಕೊಳ್ಳುವ ಅಪ್ಪನ ಕಠೋರ ಧೋರಣೆ ಮತ್ತು ಅದರ ಜೊತೆಗೆ ಆ ಸಂದರ್ಭವನ್ನು ನಿಭಾಯಿಸಬೇಕಾ ಹೆಂಡತಿ ಇಲ್ಲದಿರುವುದರಿಂದ ಅವನ ಅಸಹಾಯಕತೆಯೂ ಬೆರೆತು ವಿಚಿತ್ರ ಭಾವನೆ ಹುಟ್ಟಿಸುತ್ತಲೇ ಅದರಿಂದ ಹೊರಳಿ ಮಗನನ್ಲ್ಲಿ ನಿರ್ದೇಶಕರ ಒತ್ತು ಮೂಡುತ್ತದೆ.
ಅವನಿಗೆ ಅಲ್ಲಿ ಮರದ ಮೇಲಿನ ಗೂಡಿನಿಂದ ಕೆಳಗೆ ಬಿದ್ದು, ಅಮ್ಮನಿಂದ ಬೇರೆಯಾದ ಮರಿಹಕ್ಕಿಯ ಅಳಲು ಮತ್ತಿ ಜೀವಾಪಾಯ ಮರಿಗಲ್ಲ, ತನಗೇ ಎನ್ನುವಂತೆ ಸಂಪೂರ್ಣ ಏಕಾಗ್ರತೆಯಿಂದ ಆ ಅಳಲಿನ ಜಾಡು ಹಿಡಿಯುತ್ತಾನೆ. ಅವನ ಅಂತರಂಗವನ್ನು ಬಿಂಬಿಸುವಂತೆ ಕ್ಯಾಮೆರಾ ಅವನ ಕೈ, ಕಾಲು, ಮರಿಹಕ್ಕಿ ಬಿದ್ದಿರುವ ಒಂಗಿದೆಲೆಗಳ ಹರುಹು-ಹರಿದಾಡುತ್ತದೆ.
ಅವನ ಹುಡುಕಾಟದ ಕೈಗಳನ್ನು ಕೊಂಚ ಅದರುವಂತೆ ಮಾಡುತ್ತ ಸಾವಿನ ರೂಪದ ಬೆಕ್ಕು ಮರಿಹಕ್ಕಿಗಾಗಿ ಹೊಂಚು ಹಾಕುವಾಗ ನಮ್ಮ ಕಣ್ಣು ಅವನ ಕುರುಡುಗಣ್ಣಲ್ಲಿ ಮತ್ತಷ್ಟು ನೆಡುತ್ತದೆ.
ಮಹಮದ್ ಹೇಗೋ ಅದನ್ನು ಓಡಿಸಲು ಸಮರ್ಥನಾದಾಗ ಅವನಿಗೆ ನಿರಾಳ; ಉಳಿದವರಿಗೂ ಕೂಡ. ಸಿಕ್ಕ ಮರಿಹಕ್ಕಿಯನ್ನು ಜೇಬಿನೊಳಗೆ ಇಟ್ಟುಕೊಂಡರೆ ಅವನ ಕೆಲಸ ಪೂರ್ತಿಯಾಗುವುದಿಲ್ಲ. ಅವನು ಶ್ರಮದಿಂದ ಮರ ಹತ್ತಿ ಮರಿಹಕ್ಕಿಯನ್ನು ಅದರ ಶ್ರಮದಿಂದ ಮರ ಹತ್ತಿ ಮರಿಹಕ್ಕಿಯನ್ನು ಅದರ ಅಮ್ಮನ ಬಳಿ ಬಿಟ್ಟು ಧನ್ಯತೆ ಪಡೆಯುತ್ತನೆ. ಮರದ ರಂಬೆಗೆ, ಗೂಡಿಗೆ, ಮಹಮದ್‌ನ ಮಂದಹಾಸಕ್ಕೆ ಹೊಸ ಮೆರುಗು ದೊರಕುತ್ತದೆ.
ಅಮ್ಮ ಹಕ್ಕಿಯ ಕೊಕ್ಕುಗಳಲ್ಲಿ ಆಟವಾಡುತ್ತ ಸುಖಿಸುವ ಅವನ ಕೈ ಬೆರಳುಗಳು, ಅಷ್ಟೇನೂ ಸುಂದರನಲ್ಲದ, ಹಲ್ಲುಬ್ಬಿನ, ತುಂಡುಗೂದಲಿನ ಮಹಮದ್ ಎಲ್ಲರ ಹೃದಯಕ್ಕೆ ಲಗ್ಗೆ ಹಾಕಿ ಪತಾಕೆ ಹಾರಿಸುತ್ತಾನೆ; ನಮ್ಮೊಳಗಿರಬಹುದಾದ ಒಂದಂಶವಾಗುತ್ತಾನೆ.ಕಾಡುವ ಬೆಳಕಿಗೆ ಒಂದಷ್ಟು ಬೆಳಕು ತುಂಬುತ್ತಾನೆ.
ಮೇಲಿನ ಘಟನೆಯಿಂದ ಒಂದು ಸ್ಧಿತಿ ನಿರ್ಮಾಣವಾಗುತ್ತದೆ. ಕುರುಡನಾದ ಅವನ್ನು ಉಳಿದವರು ಕೈ ಹಿಡಿದು ಮಾರ್ಗ ತೋರಿಸುತ್ತಾನೆ. ದೃಶ್ಯ ಸುರುಳಿಗಳು ಉರುಳುತ್ತಿರುತ್ತಾನೆ. ದೃಶ್ಯ ಸುರುಳಿಗಳು ಉರುಳುತ್ತಿದ್ದಂತೆ ಅವನಿಗೆ ಮನೆಯವರ ಬಗ್ಗೆ ಇರುವ ಪ್ರೀತಿ ತೆರೆದುಕೊಳ್ಳುತ್ತದೆ.
ಆಗಲೇ ನಾವು ಕಾಣುತ್ತೇವೆ-ಎಳೆ ಹೃದಯದ ತಂಗಿಯರ ಕಣ್ಣಲ್ಲಿ ಅವನ ಬಗ್ಗೆ ಇರುವ ಪ್ರೀತಿಯ ವಿಸ್ತಾರ; ಅಜ್ಜಿಗಿರುವ ಇನ್ನಿಲ್ಲದಷ್ಟು ವಾತ್ಸಲ್ಯ.
ಮಹಮದ್‌ಗೆ ಸ್ಕೂಲು ಬಿಡಿಸಿ, ಅವನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಅಪ್ಪ ಇನ್ನೊಬ್ಬ ಕುರುಡು ಬಡಗಿಯ ಬಳಿ ಬಿಟ್ಟು  ಬಂದಾಗ ಅಜ್ಜಿಗೆ ಕತ್ತಲು ಮುತ್ತುತ್ತದೆ. ಆಗ ನಿರ್ದೇಶಕ ಅವಳ ಮನಸ್ಸನ್ನೂ ಮಹಮದ್‌ನ ಪರಿಯನ್ನೂ ಒಟ್ಟಿಗೆ ಧ್ವನಿಸುವಂತೆ ಅಜ್ಜಿಯನೋಳಗೊಂಡಂತೆ ಮುಂದುವರೆದು, ಇಡೀ ಪರದೆಯ ಮೇಲೆ ಅವರ ಮನೆಯ ಕೋಲೀಯ ಪುಕ್ಕಗಳು ಮೆಲ್ಲನೆ ಗಾಳಿಯಲ್ಲಿ ಮೇಲೇರಿ ಸಾಗಿ ಬೀಳುವುದನ್ನು ಕಾಣುತ್ತೇವೆ.
ಅತಿಯಾಗಿ ನೊಂದ ಅವಳು ಮಗನನ್ನು ಧಿಕ್ಕರಿಸಿ ಮೊಮ್ಮಗನಿಗೆ ಮರುಗಿ ಪರೋಕ್ಷವಾಗಿ ಆತ್ಮಗತ್ಯೆ ಮಾಡಿಕೊಳ್ಳುತ್ತಾಳೆ.
ಅಪ್ಪನ ವರ್ತನೆಗಳು-ಅಮ್ಮನಿದ್ದಾಗ ಅವಳ ಬಗ್ಗೆ, ಬಡತನದ ಬಗ್ಗೆ ಮಹಮದ್ ಸ್ಕೂಲಿಗೆ ಹೋಗದೆ ಬದುಕುವ ದಾರಿ ಹಿಡಿಯಲಿ ಎಂಬ ಅಪೇಕ್ಷೇಯ ಬಗ್ಗೆ, ಮಧ್ಯ ವಯಸ್ಕನಾದ ತನಗೆ ಹೆಣ್ಣೊಂದು ಬೇಕೆಂದು ನಡೆಸುವ ವಿಫಲ ಪ್ರಯತ್ನದ ಬಗ್ಗೆ ನಮ್ಮಲ್ಲಿ ತಕರಾರು ಹುಟ್ಟುವುದಿಲ್ಲ.
ಕುರುಡು ಮಹಮದ್‌ನ ವಿದ್ಯಾಭ್ಯಾಸ, ಅವನ ವ್ಯಕ್ತಿತ್ವ ವಿಕಸನ, ಪ್ರೀತಿಗೆ ತಕ್ಕ ಪ್ರತಿಕ್ರಿಯೆ ಇತ್ಯಾದಿಗಳು ಮರುಳುತ್ತವೆ ಎಂದು ಅವನ ಮೂಲಕವೇ ಅನುಭಿಸುವ ನಮಗೆ ಪ್ರತಿಯೊಂದುಕ್ಕೂ ಮನುಷ್ಯ ಸಹಜವಾದ ಪ್ರಾಥಮಿಕ ಭಾವಬಣ್ಣಗಳನ್ನು ಬಿಂಬಿಸುವ ಅಪ್ಪನನ್ನೇ ಹೊಣೆಯಾಗಿಸಲು ಸಾಧ್ಯವಾಗುವಿದಿಲ್ಲ. ಆಗಲೇ ಚಿತ್ರದ ಅತ್ಯಂತ  ಪರಿಣಾಮಕಾರಿ ದೃಶ್ಯ ಆರಂಭವಾಗುತ್ತದೆ.
ಊರಿಗೆ ವಾಪಸು ಕರೆದುಕೊಂಡು ಹೋಗುತ್ತೇನೆಂದು ಕುದುರೆಯ ಮೇಲೆ ಮಗನನ್ನು ಕೂಡಿಸಿಕೊಂಡು ಅಪ್ಪ ಭೋರ್ಗರೆವ ನದಿಯ ದಡಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿಗೆ ತಲುಪುವ ಮುಂಚೆಯೇ ಮಹಮದ್‌ಗೆ ಸುತ್ತಲ ಮರಗಿಡಗಳ ವಾಸನೆ, ಕೇಳುವ ಹಕ್ಕಿಗಳ ಧ್ವನಿಗಳಿಂದ ತಾವು ಹೋಗತ್ತ್ತಿರುವುದು ತಮ್ಮ ಊರಿಗಲ್ಲ ಎಂದು ಮನದಟ್ಟಾಗುತ್ತದೆ. ಆದರೆ ಅಪ್ಪನ ಯೋಚನೆಯೇ ಬೇರೆ.
ಅವನಿಗೆ ಮಗನನ್ನು ಮುಗಿಸಿಬಿಡಬೇಕೆಂದು ಅಪೇಕ್ಷೆ! ದಡದಲ್ಲಿ ನಿಂತ ಮಹಮದ್ ಕೊಂಚ ಮುಂದೆ ಹೆಜ್ಜೆ ಇಡುತ್ತಿದ್ದಂತೆ ನೀರಿನ ರಭಸದಲ್ಲಿ ಕೊಚ್ಚಿಕೊಂಡು ಹೋಗುತ್ತಾನೆ. ದಡದಲ್ಲಿ ನಿಂತ ಅಪ್ಪ, ಅವನು ಆರ್ತನಾಗಿ ಕೂಗುತ್ತ ದೂರ ದೂರ ಹೋಗುತ್ತಿರುವುದನ್ನು ನಿರ್ಭಾವದಿಂದ ನೋಡುತ್ತಿರುತ್ತಾನೆ. ಅಲ್ಲಿಯ ತನಕ ಸಾಕಷ್ಟು ರಮಣೀಯವಾದ ದೃಶ್ಯಗಳನ್ನು ಹಸಿರುಕ್ಕುವ ನೆಲದ ಸೊಬಗನ್ನು ಮಿಡಿಯುವ ಅಂತ:ಕರಣಕ್ಕೆ ಮುಗಿಬಿದ್ದಿರುತ್ತಿದ್ದ ನಮಗೆ ಹಠಾತ್ ರೈದ್ರ, ಕ್ರೂರ, ಸ್ವಾರ್ಥಗಳನ್ನು ಬಿಚ್ಚಿ ಹೇಳುವ ಪ್ರವಾಹದ ಅಬ್ಬರ ಎದುರಾಗಿ ಕೆಲವು ಕ್ಷಣ ಮೌನ ಮೆರೆಯುತ್ತದೆ.
ಆಗೊಮ್ಮೆ ಈಗೊಮ್ಮೆ ಸಾವಿನ ಅಟ್ಟಹಾಸದ ಬಣ್ಣಗಳು ಇಳಿಯುತ್ತವೆ, ಮಗನ ಬಗ್ಗೆ ಮಡುಗಟ್ಟಿದ ಮಮತೆ ಉಕ್ಕುತ್ತದೆ. ಅವನನ್ನು ಉಳಿಸಲು ಅಪ್ಪ ನೀರಿಗೆ  ಬಿದ್ದು ಪ್ರವಾಗಕ್ಕೆ  ಸುಮ್ಮನೆ ಒಪ್ಪಿಸಿಕೊಳ್ಳುತ್ತಾನೆ. ಅದೆಷ್ಟೋ ಸಮಯದ ನಂತರ ನೆರೆ ಇಳಿದು ಅವನು ದಡದಲ್ಲಿ ಬಿದ್ದುರುತ್ತಾನೆ.
ಹೊರಳಾಡಿ ಎದ್ದು ಕಣ್ಣು ಬಿಟ್ಟು ಹೆಜ್ಜೆಯಿಟ್ಟರೆ  ಅಷ್ಟು ದೂರದಲ್ಲಿ ಮಹಮದ್. ಹತ್ತಿರ ಹೋಗಿ ಬಾಚಿ ತಬ್ಬುವ ಅವನಿಗೆ ಮಗ ಬದುಕಿರುವ ಬಗ್ಗೆ ಅನುಮಾನವಿರುತ್ತದೆ. ಆಗಲೇ ಎಂದಿನಂತೆ ದಾರಿ ಹುಡುಕುವ ಮಹಮದ್‌ನ ಕೈ ಬೆರಳುಗಳು ನಲುಗಿ ಅಪ್ಪನ ಕೈನೊಂದಿಗೆ ಬೆಸೆದುಕೊಳ್ಳುತ್ತವೆ; ಜೊತೆಗೆ ಎಲ್ಲಿಂದಲೋ ಬಿದ್ದ ಸೂರ್ಯನ ಬೆಳಕಲ್ಲಿ ಬೆಳಗುತ್ತದೆ.
ಚಿತ್ರ ಸುಖಾಂತವಾಗಿದೆ.ಹಾಗಾಗಲೇಬೇಕಿಲಿಲ್ಲ. ಏನೇ ಆದರೂ ಉಳಿದೆಲ್ಲ ವಿಧದಲ್ಲಿ ಅದು ಬಾಚಿಕೊಳ್ಳಲು ಸಾಧ್ಯವಾಗದಷ್ಟು ಅಂಕಗಳನ್ನು ಗಿಟ್ಟಿಸುತ್ತದೆ.
]]>

‍ಲೇಖಕರು avadhi

October 20, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This