‘ಹಂಗಾಮ’ ಕಾರ್ನರ್ ನಲ್ಲಿ ಟೂರಿಂಗ್ ಟಾಕೀಸ್…

ಕಣ್ಣಿಗೆ ಬೆಳಕು ಬೇಡುತ್ತಾ……

-ವಿಕಾಸ ನೇಗಿಲೋಣಿ

ಸೆಲ್ಮಾ ಜಕೋವಾ ಒಬ್ಬ ಸಾಧಾರಣ ಹೆಂಗಸು. ಮಧ್ಯಮ ವರ್ಗದ ಜೀವನ. ಸಂಗೀತದ ತನ್ಮಯದಲ್ಲಿ ಸದಾ ನೃತ್ಯ ಮಾಡುವ ಗೀಳು ಅವಳಿಗೆ. ಬದುಕು ಸಾಗಿಸಲಿಕ್ಕಾಗಿ ಫ್ಯಾಕ್ಟರಿಯೊಂದರಲ್ಲಿ ದುಡಿಮೆ. ತನ್ನ ಕನಿಷ್ಠ ಪಗಾರದಲ್ಲಿ ದಿನದಿನಕ್ಕೂ ದುಬಾರಿಯಾಗುತ್ತಿರುವ ಬದುಕು ದೂಡುವುದೇ ಅವಳಿಗೆ ಸವಾಲು. ಬೆಣ್ಣೆಯಂಥ ಸುಕೋಮಲ ಮುಖದಲ್ಲಿ ತುಂಬು ಆತ್ಮವಿಶ್ವಾಸ, ಚೆಲುವು, ಚಿಕ್ಕ ಮಕ್ಕಳ ಕಾತರತೆ….. ಆದರೆ ಚೌಕಾಕಾರದ ಕನ್ನಡದೊಳಗಿನ ಕಣ್ಣುಗಳಲ್ಲಿ ದೃಷ್ಟಿಯೇ ಇಲ್ಲ! ಸೆಲ್ಮಾಳಿಗೆ ಕಣ್ಣು ಕಾಣಿಸದ ಆನುವಂಶಿಕೆ ಖಾಯಿಲೆ. ಅದು ತನ್ನ ಪುಟ್ಟ ಕಂದನಿಗೂ ತಗಲದಿರಲಿ ಎಂಬುದು ಅವಳ ಕಾಳಜಿ. ಈ ಕಾಳಜಿಯಿಂದಾಗಿಯೇ ಆಕೆಯ ಬದುಕು ದುಸ್ತರ ತಿರುವುಗಳನ್ನು ಪಡೆದುಕೊಳ್ಳುತ್ತಾ ದುರಂತದ ಅಂಚಿಗೆ ಬಂದು ನಿಲ್ಲತ್ತದೆ. ಇದು ೨೦೦೦ದಲ್ಲಿ ಬಿಡುಗಡೆಯಾದ ಲಾರ್ಸ್‌ವನ್ ಟ್ರೈಯರ್ ನಿರ್ದೇಶನದ ’ ಡ್ಯಾನ್ಸರ್ ಇನ್ ದಿ ಡಾರ್ಕ್’ (ಕಗ್ಗತ್ತಲಲ್ಲಿ ನೃತ್ಯಗಾರ್ತಿ) ಚಿತ್ರದ ಕಥೆ. ಒಂದು ಅಸಹಾಯಕ ಮುಗ್ಧತೆ ಒಬ್ಬ ಮಹಾತ್ವಕಾಂಕ್ಷೆಯುಳ್ಳ ಹೆಂಗಸನ್ನು ತಿರುಗಿ ತೊಂದರೆಗೆ ನೂಕುತ್ತಾ ಹೋಗುತ್ತದೆ. ಇದ್ದುದರಲ್ಲೇ ಬದುಕುವ, ಕೈ ಜಾರುವ ಸಂತೋಷವನ್ನು ಅವುಚಿಕೊಳ್ಳುತ್ತಾ ಸಾಗುವ, ಏಟು ಬಿದ್ದಾಗೆಲ್ಲಾ ಸಾವರಿಸಿಕೊಳ್ಳುವ ಸೆಲ್ಮಾಳಿಗೆ ಕೊನೆಗೂ ತನ್ನ ಪರಿಸರವೇ ಮುಳುವಾಗುತ್ತದೆ. ಸೆಲ್ಮಾಳ ಆಸೆ ದೊಡ್ಡದೇನಲ್ಲ. ತನ್ನ ಮಗನಿಗಾದರೂ ಅಂಧತ್ವ ತಟ್ಟದಿರಲಿ ಎಂದು ಹಂಬಲಿಸಿ ಆಕೆ, ಬರುವ ಪಗಾರದಲ್ಲಿ ಒಂದಿಷ್ಟನ್ನು ಕೂಡಿಟಿದ್ದಾಳೆ. ಅದಕ್ಕಾಗಿ ಮಗ ಸೈಕಲ್ ಕೇಳಿದರೂ ಆಕೆ ಹಣ ಭರಿಸಲಾರಳು. ಆದರೆ ಆಕೆಗಿರುವ ಕುರುಡುತನವನ್ನು ದುರುಪಯೋಗಪಡಿಸಿಕೊಂಡಿದ್ದು ಆಕೆಯ ನೆರೆ ಮನೆಯ ಬಿಲ್.

ಪಾಪ, ಕೂಡಿಟ್ಟ ದುಡ್ಡನ್ನೆಲ್ಲಾ ಆ ಮಧ್ಯಾಹ್ನ ವೈದ್ಯರಿಗೆ ಕೊಡಬೇಕೆಂದು ಬಂದು ನೋಡಿದರೆ ಅಲ್ಲಿ ದುಡ್ಡೇ ಇಲ್ಲ! ಇದನ್ನು ತಿಳಿದವ ಬಿಲ್ ಮಾತ್ರ ಆಗಿರುವುದರಿಂದ ಆತನೇ ಹಣ ಕದ್ದಿದ್ದಾನೆ ಎಂದು ಖಾತ್ರಿಯಾಗಿದ್ದೇ ಹೋಗಿ ಹಣ ಕೊಡುವಂತೆ ಬೇಡಿದ್ದಾಳೆ. ಆತ ಕೊಡಲು ಒಪ್ಪಿಲ್ಲ. ಅಲ್ಲಿ ಚಕಮಕಿ ಆಗಿ ಆತ ತನ್ನೆಡೆಗೆ ಹಿಡಿದ ಪಿಸ್ತೂಲನ್ನು ತಿರುಗಿಸಿ ಸೆಲ್ಮಾ ಆತನಿಗೆ ಗುರಿ ಇಟ್ಟಿದ್ದಾಳೆ. ಒಂದರ ಹಿಂದೆ ಒಂದರಂತೆ ಮೂರು ಗುಂಡುಗಳು ಆತನ ಎದೆಯನ್ನು ನಾಟಿವೆ. ಆತ ಸತ್ತಿದ್ದಾನೆ. ಇದಕ್ಕಾಗಿ ಆಕೆಗೆ ಗಲ್ಲಿಗೇರುವ ಶಿಕ್ಷೆ. ಇಲ್ಲಿಂದ ಮುಂದೆ ನಾವು ಕಾಣುವುದು ಅಸೀಮ ಅಹಾಯಕತೆ ಮತ್ತು ತುಂಬು ಆತ್ಮವಿಶ್ವಾಸದಂತೆ ಕಾಣುವ ಸೆಲ್ಮಾಳ ಹುಚ್ಚು ಸಾಹಸ. ಆಕೆ ಕೊಲೆ ಮಾಡಿ ತಪ್ಪಿಸಿಕೊಳ್ಳುತ್ತಾಳೆ. ಆದರೂ ಸಿಕ್ಕಿಬೀಳುತ್ತಾಳೆ. ಸಿಕ್ಕಿಬಿದ್ದ ಮೇಲೂ ತನಗೆ ವಿಧಿಸಲಾದ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ತರುತ್ತಾಳೆ. ಇಷ್ಟೆಲ್ಲಾ ಪ್ರಯತ್ನಗಳ ಹಿಂದೆ ಸೆಲ್ಮಾಗಿರುವ ಉದ್ದೇಶ ಒಂದೇ, ಮಗನ ಕಣ್ಣಿನ ಶಸ್ತ್ರಕ್ರಿಯೆ. ಈ ಹಂತದಲ್ಲಿ ಆಕೆ ಅದೆಷ್ಟು ದಾರುಣವಾಗಿ ಹೋರಾಡುತ್ತಾಳೆಂದರೆ, ಆಕೆಯ ಹಿಂದೆ ಬಿದ್ದಿರುವ ಸಾವೆಂಬ ಗುಮ್ಮ ತನ್ನನ್ನು ಮುಟ್ಟಲಾರದು ಎಂಬ ನಂಬಿಕೆಯಿಂದಲೇ ಆಕೆ ನಡೆಯತೊಡಗುತ್ತಾಳೆ. ಆದರೆ ಆಕೆಯನ್ನು ನಿರ್ಬಂಧಿಸುವುದು ಸರಳುಗಳು ಜೈಲರ್‌ಗಳು. ಈ ಚಿತ್ರ ಎಷ್ಟೊಂದು ಮನಮುಟ್ಟುವಂತಿದೆಯೆಂದರೆ ಇದನ್ನು ನೋಡಿದ ಅಮೆರಿಕದವನೊಬ್ಬ ’ನಾನು ಮೊದಲ ಬಾರಿ ಅತ್ತಿದ್ದು’ ಎಂದು ಉದ್ಗರಿಸಿದ್ದನಂತೆ. ಇದನ್ನು ಸಂಗೀತಮಯ ಚಿತ್ರ ಎಂದು ನಿರ್ದೇಶಕರ ಕರೆದುಕೊಂಡಿದ್ದರೂ ನೋಡಿದ ಮೇಲೆ ಹಾಗನ್ನಿಸದು. ಏಕೆಂದರೆ ಇದು ತಟ್ಟುವುದು ಚಿತ್ರದ ಭಾವನಾತ್ಮಕ ನೆಲೆಯಿಂದ, ಸೆಲ್ಮಾಳ ದುಃಖ, ಹತ ಭಾಗ್ಯ ರೀತಿ, ಮುಗ್ಧತೆಯಿಂದ. ಹಾಗಾಗಿ ’ಡ್ಯಾನ್ಸರ್’ ಆಗಿ ಸೆಲ್ಮಾ ತಟ್ಟದೆ ಕೇವಲ ಹೊಟ್ಟೆಬಾಕಳಂತೆ ಬೆಳಕು ಬಯಸುವ ’ಕತ್ತಲ ಲೋಕ’ದವಳಾಗಿ ತಟ್ಟುತ್ತಾಳೆ. ಅಲ್ಲಿ ಸಂಗೀತ, ನೃತ್ಯಕ್ಕೆ ನಂತರದ ಪ್ರಾಧಾನ್ಯವಿದ್ದಂತೆ ಕಾಣುತ್ತದೆ. ಚಿತ್ರದ ಕೆಲವು ದೃಶ್ಯಗಳನ್ನು ಸುಮ್ಮನೆ ಗಮನಿಸೋಣ. ಆಕೆ ನೃತ್ಯ ಮಾಡುವುದು ಹೆಜ್ಜೆ ಸದ್ದನ್ನು ಆಲಿಸಿಕೊಂಡು. ಆದರೆ ಗೆಳತಿಯೊಬ್ಬಳು ಸೆಲ್ಮಾಳನ್ನು ಬ್ಯಾಲೆಯೊಂದರ ತಾಲೀಮಿಗೆ ಕರೆದೊಯ್ದಿದ್ದಾಳೆ. ಆಕೆಗೆ ಬ್ಯಾಲೆಯ ನೃತ್ಯದ ಸೊಬಗು ಕಾಣದು. ಆಗ ಸೆಲ್ಮಾಳ ಅಂಗೈ ಮೇಲೆ ಗೆಳತಿ ತನ್ನ ಬೆರಳುಗಳ ಮೂಲಕ ನೃತ್ಯದ ಸನ್ನೆ ಮಾಡಿ ತೋರಿಸುತ್ತಾಳೆ. ಆಗ ಸೆಲ್ಮಾಳ ಮುಖದಲ್ಲಿ ಮೂಡುವ ಸಂತೋಷ ನೋಡಿಯೇ ತೀರಬೇಕು. ಅದೇ ರೀತಿ ಆಕೆಯನ್ನು ಜೈಲಿನಲ್ಲಿ ಕೂಡಿಹಾಕಲಾಗಿದೆ. ಆ ಜೈಲು ಸಂಪೂರ್ಣ ಗೋಡೆಯಿಂದಾವೃತವಾದದ್ದು, ಅದಕ್ಕೆ ಒಂದೇ ಒಂದು ಜಾಲರಿಯಿರುವ ಕಿಟಕಿ. ಆ ಕಿಟಕಿ ಮೂಲಕ ದೋರದ ಚಾಪಲ್‌ನ್ನು ಪ್ರಾರ್ಥನೆ ಕೇಳಿ ಬರುತ್ತಿದೆ. ಆಕೆಗೆಷ್ಟು ಸಂತೋಷವಾಗುತ್ತದೆಯೆಂದರೆ, ಅಲ್ಲಿರುವ ಪೇಸ್ಟ್, ಬ್ರಷ್‌ಗಳನ್ನೇ ಗೋಡೆಗಳಿಗೆ ಬಡಿಯುತ್ತಾ, ಮುರಳಿಗೆ ಮರುಳಾದ ಗೋಪಿಕೆಯಂತೆ ತನ್ನಷ್ಟಕ್ಕೇ ನೃತ್ಯ ಮಾಡುತ್ತಾಳೆ. ಅದು ಉಮ್ಮಳಿಕೆ ತರುವ ಒಂದು ಅಪೂರ್ವ ದೃಶ್ಯವೆಂದೆನಿಸಿದರೆ ನಿರ್ದೇಶಕ ಟ್ರೈಯರ್‌ಗೆ ಥ್ಯಾಂಕ್ಸ್ ಹೇಳಿ. ಸೆಲ್ಮಾಳ ಆಸೆ ಕೊನೆಗೂ ಕೈಗೂಡುವುದಿಲ್ಲ. ನೋಡನೋಡುತ್ತಾ ಆಕೆಯ ದಿನಗಳು ಕಳೆದು ಹೋಗುತ್ತವೆ. ಜೈಲಿನ ಗೋಡೆಗಳ ನಡುವೆ, ತನ್ನ ಮಗನಿಗೆ ಕಣ್ಣು ಕೊಡುವ ಕನಸು ಸೋಲುತ್ತಾ ಹೋಗುತ್ತದೆ. ಗಲ್ಲಿಗೇರುವ ಕ್ಷಣ ಬಂದ ದಿನ ಆಕೆ ಕಣ್ತೆರೆಯುವುದಿಲ್ಲ. ಜೇಲರ್‌ಗಳು ತಂದಿಟ್ಟ ಅನ್ನ ಉಣ್ಣುವುದಿಲ್ಲ. ಸಂಗೀತ ಕೇಳಿದರೆ ಅಮಾಯಕವಾಗಿ ಕುಣಿದುಬಿಡುತ್ತಿದ್ದ ಸೆಲ್ಮಾ ಈಗ ಗಲ್ಲಿನ ವಿಧಿ ವಿಧಾನವಾದ ೧೦೮ ಹೆಜ್ಜೆ ನಡೆಯುವ ಕ್ರಮ ಮಾಡಬೇಕೆಂದಾಗ ಒಂದು ಹೆಜ್ಜೆಯನ್ನೂ ಕಿತ್ತಿಡಲಾರಳು. ಆಕೆ ಗಲ್ಲಿಗೇರುವವರೆಗಿನ ಕ್ಷಣಗಳ ಚಿತ್ರಣ ಅದ್ಬುತವಾದುದು. ಅಂತಿಮವಾಗಿ ಆಕೆ ಹಾಡುತ್ತಲೇ ನೇಣಿಗೆ ಕೊರಳು ಕೊಡುವುದು ಅತ್ಯಂತ ಹೃದಯ ವಿದ್ರಾವಕ. ಸೆಲ್ಮಾ ಆಗಿ ನಟಿ ಬಿಜಾರ್ಕ್ ಶ್ರೇಷ್ಠವಾಗಿ ನಟಿಸಿದ್ದಾಳೆ. ಆಕೆಯ ಮುಖದ ಮುಗ್ಧತೆಗೆ ಸೆಲ್ಮಾ ಪಾತ್ರ ಒಪ್ಪುತ್ತದೆ. ಸಂಗೀತ ಈ ಚಿತ್ರದ ಪ್ಲಸ್ ಪಾಯಿಂಟ್. ಒಂದು ವಿಷಾದವುಳ್ಳ ಸಂಗೀತದ ಜೀವಸ್ವರದಂತೆ ಕಾಣುವ ಸೆಲ್ಮಾ ಸತ್ತ ನಂತರವೂ ಬದುಕುತ್ತಾಳೆ, ನೋಡುಗರೊಳಗೆ.]]>

‍ಲೇಖಕರು avadhi

October 2, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This