“ಹಜಾಮ” ಎಂಬ ಶಬ್ದ ಬಳಸುವ ಮೂಲಕ…

gali.gif“ಗಾಳಿ ಬೆಳಕು”

 

 

 

ನಟರಾಜ್ ಹುಳಿಯಾರ್

ಚೆಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಡಾ. ಸಿ.ಎಸ್.ದ್ವಾರಕಾನಾಥ್ ಅವರು ತಮಗೆ ಬಂದಿರುವ ಮನವಿಯೊಂದನ್ನು ಕುರಿತು ಹೇಳುತ್ತಿದ್ದರು. ಕ್ಷೌರಿಕರ ಜಾತಿಯ ಸಂಘಗಳ ವತಿಯಿಂದ ಸಲ್ಲಿಸಿದ ಈ ಮನವಿಯಲ್ಲಿ “ಹಜಾಮ” ಎಂಬ ಶಬ್ದವನ್ನು ಬಳಸಿ ತಮ್ಮನ್ನು ಅವಹೇಳನ ಮಾಡುತ್ತಿರುವುದನ್ನು ತಪ್ಪಿಸಲು ಈ ಶಬ್ದದ ಬಳಕೆಯನ್ನು ಕೈಬಿಡಬೇಕೆಂದು ಈ ಮನವಿ ಕೇಳಿತ್ತು.

ಈ ಮನವಿ ಕೇವಲ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಲ್ಲಿಸಿದ ಮನವಿಯಲ್ಲ; ಜಾತಿಗ್ರಸ್ತ ಭಾರತದ ಹೀನ ಮನಸ್ಸುಗಳಿಗೆ ಸಲ್ಲಿಸಿದ ಮನವಿ ಕೂಡ. ಭಾರತದ ಜಾತಿಮನಸ್ಸುಗಳು ಹೇಗೆ ರೂಪುಗೊಂಡಿವೆಯೆಂದರೆ ಇಲ್ಲಿ ಶ್ರಮಜೀವಿ ಜಾತಿಗಳನ್ನೇ ನಿಕೃಷ್ಟರನ್ನಾಗಿ, ಅಸ್ಪೃಶ್ಯರನ್ನಾಗಿ ನೋಡಲಾಗುತ್ತದೆ. ದಿನಿವಿಡೀ ನಿಂತು ಕ್ಷೌರಿಕ ವೃತ್ತಿ ಮಾಡುವ ಶ್ರಮಜೀವಿಗಳನ್ನು ನಿಕೃಷ್ಟವಾಗಿ ಕಾಣುವ ಹಾಗೂ “ಹಜಾಮ” ಎಂಬ ಪದವನ್ನು ಬೈಗುಳವಾಗಿ ಬಳಸುವ ಪ್ರವೃತ್ತಿ ಭಾರತದ ನೀಚ ಜಾತಿ ಮನಸ್ಸಿನಿಂದಲೇ ಬಂದಿದೆ. ಹಾಗೆಯೇ, ನಿಂತು ಕೆಲಸ ಮಾಡುವ ಮಡಿವಾಳ ವೃತ್ತಿಜೀವಿಗಳ ಬಗೆಗೆ ಕೂಡ ಈ ಥರದ ಸಣ್ಣತನ ತೋರುತ್ತಲೇ ಬರಲಾಗಿದೆ. ಇನ್ನು ಮಲ ಹೊರುವ, ಚಪ್ಪಲಿ ಮಾಡುವ ಶ್ರಮಜೀವಿಗಳ ಬಗೆಗಂತೂ ಅತ್ಯಂತ ಬರ್ಬರವಾಗಿ ಈ ಹಿಂದೂ ಜಾತಿ ಮನಸ್ಸು ನಡೆದುಕೊಳ್ಳುತ್ತಾ ಬಂದಿದೆ. ಬಸವಣ್ಣನವರ ಕಾಲದಲ್ಲಿ ನಡೆದ ಚಿಂತನೆಗಳಿಂದಾಗಿ, ವಿವಿಧ ಜಾತಿಗಳು ಲಿಂಗಾಯತ ಧರ್ಮದೊಳಗೆ ಬೆರೆತ ನಂತರ ಈ ಜಾತಿ ಮನಸ್ಸು ಕೊಂಚ ಬದಲಾಯಿತೇನೋ. ಅದು ಕೂಡ ತಾತ್ಕಾಲಿಕವಾಗಿತ್ತು. ಆನಂತರ ಇಪ್ಪತ್ತನೆಯ ಶತಮಾನದ ಭಾರತದಲ್ಲಿ ನಡೆದ ವೈಚಾರಿಕ ಚರ್ಚೆಗಳು ಹಾಗೂ ಚಳುವಳಿಗಳಿಂದಾಗಿ ಈ ಮನಸ್ಸು ಒಂಚೂರು ಎಜುಕೇಟ್ ಆಗತೊಡಗಿತ್ತು. ಆದರೆ ಕಳೆದ ಇಪ್ಪತ್ತು ವರ್ಷಗಳಲ್ಲಿ ಧರ್ಮ-ಅಧರ್ಮಗಳ ನಡುವೆ ತಿಕ್ಕಾಟ ಶುರು ಮಾಡಿದ ನೀಚರಿಂದಾಗಿ ಈ ಜಾತಿ ಮನಸ್ಸು ಮತ್ತೆ ತನ್ನ ಹಳೆಯ ವರಸೆಗೆ ಮರಳಿದೆ. ಅಷ್ಟೇ ಅಲ್ಲ, ಈ ಬಗ್ಗೆ ವಿದ್ಯಾವಂತರಲ್ಲಿ ಇದ್ದ ಅಷ್ಟಿಷ್ಟು ಸಭ್ಯತೆಯೂ ಮಾಯವಾಗಿ ಜಾತಿಯ ಭಂಡತನ ಹೆಚ್ಚತೊಡಗಿದೆ.

ಈ ಮಾತು ಬರೆಯುವಾಗ ಸ್ವಾಮಿ ಎಂಬ ಮಿತ್ರರೊಬ್ಬರ ಮನೆಯ ಆಸುಪಾಸಿನಲ್ಲಿ ನಡೆದ ಘಟನೆಯೊಂದು ನೆನಪಾಗುತ್ತಿದೆ. ಸ್ವಾಮಿಯವರ ಮನೆಯ ಎದುರಿಗೆ ಒಂದು ಜೆಂಟ್ಸ್ ಪಾರ್ಲರ್ ಶುರುವಾಯಿತು. ಇದು ಸ್ವಲ್ಪ ಆಧುನೀಕರಣಗೊಂಡ ಹೇರ್ ಕಟಿಂಗ್ ಸಲೂನ್. ಆದರೆ ಆ ಪಾರ್ಲರಿನಲ್ಲಿ ಅಬ್ಬರದ ಸಂಗೀತ ಹಾಕಿ ಬೀದಿಯ ಎಲ್ಲರಿಗೂ ಕಿರಿಕಿರಿ ಮಾಡುವ ಚಾಳಿ ಶುರುವಾಯಿತು. ಸ್ವಾಮಿ ಇದರ ಬಗ್ಗೆ ದೂರು ನೀಡಲೆಂದು ಬೀದಿಯ ಕೆಲವರ ಸಹಿ ಹಾಕಿಸಿದರು. ಹೀಗೆ ಸಹಿ ಹಾಕಿದವರಲ್ಲಿ ಒಬ್ಬ ಮಡಿವಂತ ಮನಸ್ಸಿನ ವ್ಯಕ್ತಿಯೂ ಇದ್ದ. ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಮನವಿ ಪತ್ರ ತಲುಪಿತು.

ಒಂದೆರಡು ದಿನಗಳಲ್ಲಿ ಈ ಮನವಿಯ ವಿಚಾರ ತಿಳಿದ ಪಾರ್ಲರ್ ಮಾಲೀಕ ಬಂದು ಸ್ವಾಮಿಯವರ ಕ್ಷಮೆ ಕೋರಿದ. ತನ್ನ ಪಾರ್ಲರಿನಿಂದ ಆಗುತ್ತಿರುವ ಗಲಾಟೆಯನ್ನು ಇನ್ನು ಮುಂದುವರೆಸುವುದಿಲ್ಲವೆಂದೂ ಹೇಳಿದ. ಪ್ರಕರಣ ಸುಖಾಂತ್ಯವಾಯಿತು. ಆದರೆ ಈ ನಿವೇದನೆಯ ನಡುವೆ ಆ ಪಾರ್ಲರ್ ವ್ಯಕ್ತಿ ಹೇಳಿದ ಒಂದು ಮಾತು ಸ್ವಾಮಿಯವರನ್ನು ದಂಗುಬಡಿಸಿತು. ಮೇಲ್ಕಂಡ ಮನವಿಗೆ ಸಹಿ ಹಾಕಿದ್ದ ಒಬ್ಬ ಮಡಿವಂತ ವ್ಯಕ್ತಿ ಪಾರ್ಲರಿನ ಒಡೆಯನಿಗೆ ಹೀಗೆಂದಿದ್ದನಂತೆ: “ನಾವು ಉತ್ತಮ ಜಾತಿಯವರು. ಬೆಳಗಾಗೆದ್ದು ನಿಮ್ಮಂಥವರ ಮುಖ ನೋಡಬಾರದು, ಆದ್ದರಿಂದ ನಿನ್ನನ್ನು ಓಡಿಸಲು ನಾವೆಲ್ಲ ಒಂದಾಗಿ ಸಹಿ ಹಾಕಿದ್ದೇವೆ.”

ಮೊದಲಿನಿಂದಲೂ ಜಾತಿ, ಮತಗಳ ವಿಕಾರಗಳನ್ನು ವಿರೋಧಿಸುವ ಚಳುವಳಿಗಳ ಜೊತೆಯಲ್ಲೇ ಬೆಳೆದು ಜಾತ್ಯತೀತ ಮನಸ್ಥಿತಿ ಬೆಳೆಸಿಕೊಂಡ ಸ್ವಾಮಿ ಇದರಿಂದೆಲ್ಲ ಬೇಸರಗೊಂಡು “ಆ ದೂರನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ. ನಿಮ್ಮ ಬಗ್ಗೆ ನನಗಾಗಲೀ ನಮ್ಮ ಮನೆಯವರಿಗಾಗಲೀ ಆ ರೀತಿಯ ಹೀನ ಭಾವನೆ ಇಲ್ಲ. ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ” ಎಂದು ಪಾರ್ಲರಿನ ಮಾಲೀಕರನ್ನು  ಬೀಳ್ಕೊಟ್ಟರು. ಆ ಪಾರ್ಲರ್ ಇನ್ನೂ ಸ್ವಾಮಿಯವರ ಮನೆಯ ಬಳಿ ಇದೆ. ಆ ಪಾರ್ಲರಿನ ಎದುರಿಗಿದ್ದ ಮಡಿವಂತ ಮಾತ್ರ ಪಾರ್ಲರಿನಲ್ಲಿ ಕೆಲಸ ಮಾಡುವವರ ಜಾತಿಯ ಬಗೆಗೆ ಗೊಣಗುತ್ತಾ ತನ್ನ ಮನೆ ಮಾರಿ ಹೋದನಂತೆ. ತಾನು ಕೊಂಡದ್ದಕ್ಕಿಂತ ಮೂರು, ನಾಲ್ಕು ಪಟ್ಟು ಲಾಭ ಬಂದ ಕಾರಣಕ್ಕಾಗಿ ಆ ಮನೆ ಮಾರಿಕೊಂಡ ವ್ಯಕ್ತಿ ಕೊನೆಗೂ ಆ ಪಾರ್ಲರಿನ ಶ್ರಮಜೀವಿಗಳನ್ನು ಹೀಗಳೆಯುತ್ತಲೇ ಅಲ್ಲಿಂದ ಹೋದನಂತೆ. ತನ್ನ ಗೊಣಗಾಟದಿಂದ ಆ ಪಾರ್ಲರ್ ನವರ ಮನಸ್ಸಿಗೆ ಎಂಥ ಆಘಾತವಾಗುತ್ತದೆ ಎಂಬುದು ಆತನಿಗೆ ಗೊತ್ತಾಗಲೇ ಇಲ್ಲ. ಅಥವಾ ಹಾಗೆ ಗೊತ್ತಾಗದಂತೆ ಅವನ ಜಾತಿ ದುರಹಂಕಾರ ಅವನನ್ನು ನಿರ್ದೇಶಿಸುತ್ತಿತ್ತು.

ಜಾತಿಯ ವಿಕಾರಗಳಿಂದಾಗಿ ಪ್ರತಿನಿತ್ಯ ಮಾನಸಿಕ, ದೈಹಿಕ ಕಿರುಕುಳಗಳಿಗೆ ಒಳಗಾಗುವ ಜನರ ಕಷ್ಟ ಹಾಗೂ ಅಭದ್ರತೆಗಳು ಕೊಂಚ ಆರಾಮಾಗಿರುವ ಜಾತಿಗಳ ಜನಕ್ಕೆ ಸುಲಭವಾಗಿ ಗೊತ್ತಾಗುವುದಿಲ್ಲ. ಹಲವು ಬಾರಿ ಶಾಸಕಿಯಾಗಿ, ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಅತ್ಯುತ್ತಮ ಮಂತ್ರಿಯಾಗಿ ಸ್ತ್ರೀಶಕ್ತಿ ಚಳುವಳಿಯನ್ನೇ ಕಟ್ಟಿದ ಮೋಟಮ್ಮನವರು ಒಂದು ಸಂದರ್ಶನದಲ್ಲಿ ಹೀಗೆ ಹೇಳಿದ್ದರು: “ದಲಿತ ಜಾತಿಯಲ್ಲಿ ಹುಟ್ಟಿದ ನನಗೆ ಅಸ್ಪೃಶ್ಯತೆಯ ಬಹಳ ಮುಖ್ಯವಾದ ಅನುಭವ ಎಂದರೆ “ಭಯ”; ಎಲ್ಲಿ, ಯಾವಾಗ, ಯಾರು ನನ್ನ ಜಾತಿ ಕೇಳುತ್ತಾರೋ ಎಂಬ ಭಯ”. ಈ ಭಯ ಅನೇಕ ಜಾತಿಗಳ ಜನರಿಗಿದೆ. ಈ ಭಯಗಳನ್ನು ಮೀರುವ ವೈಚಾರಿಕ ಧೋರಣೆಗಳು, ಆತ್ಮವಿಶ್ವಾಸದ ಮಾರ್ಗಗಳು ಎಲ್ಲವನ್ನೂ  ನಾವು ನೋಡಿದ್ದೇವೆ. ಆದರೂ ಆ ಭಯ ಹಾಗೂ ಮುಜುಗರಗಳು ಕೋಟ್ಯಂತರ ಜನರಲ್ಲಿ ಹಾಗೇ ಉಳಿದಿವೆ. ಆ ಮುಜುಗರ ಇಂಥ ಆತಂಕಕ್ಕೊಳಗಾದವರ ಸಂಕೋಚದ ವರ್ತನೆಗಳಲ್ಲಿ, ದೇಹಭಾಷೆ ಅಥವಾ ಬಾಡಿ ಲಾಂಗ್ವೇಜಿನಲ್ಲಿ ವ್ಯಕ್ತವಾಗುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಮೊನ್ನೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಕ್ಷೌರಿಕ ವೃತ್ತಿ ಮಾಡುವ ಜನ ಅಥವಾ ಆ ಜಾತಿಗೆ ಸೇರಿದ ಜನ “ಹಜಾಮ” ಎಂಬ ಶಬ್ದವನ್ನು ತಮ್ಮ ಜಾತಿಯನ್ನು ಗುರುತಿಸಲು ಬಳಸಬಾರದು ಎಂದು ಕೊಟ್ಟ ಮನವಿಯನ್ನು ಸಂಬಂಧಪಟ್ಟ ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು.

ಅದಕ್ಕಿಂತ ಮುಖ್ಯವಾಗಿ ನಮ್ಮ ಜಾತಿಪೀಡಿತ ನಾಲಗೆಗಳಲ್ಲಿ ಸರಾಗವಾಗಿ ಬರುವ “ಹಜಾಮ” ಎಂಬ ಬೈಗುಳಕ್ಕೆ ಕೊನೆ ಹಾಡಲೇಬೇಕು. ಈ ಶಬ್ದವನ್ನು ಬಳಸುವ ನಮ್ಮ ನೀಚತನದಿಂದಾಗಿ ಲಕ್ಷಾಂತರ ಜನರಿರುವ ಒಂದು ಶ್ರಮಜೀವಿ ಸಮುದಾಯಕ್ಕೆ ನೋವಾಗುತ್ತದೆ ಎಂಬ ಎಚ್ಚರ ನಮಗೆಲ್ಲ ಇರಬೇಕಾಗಿದೆ. ಹಿಂದುಳಿಗ ವರ್ಗಗಳ ಆಯೋಗದ ಅಧ್ಯಕ್ಷರಿಗಿಂತ ಮಿಗಿಲಾಗಿ ನಮ್ಮ ಜನರ ಹೃದಯಕ್ಕೆ ಈ ಮನವಿ ಗಾಢವಾಗಿ ಮುಟ್ಟಬೇಕಾಗಿದೆ. ಇದಾಗದಿದ್ದರೆ, ನಿಂದನೆಗೊಳಗಾದ ಜನ ನಿಂದಿಸಿದವರ ಮೂತಿಗೆ ಗುದ್ದುವುದು ಅನಿವಾರ್ಯವಾಗುತ್ತದೆ ನಾನು ಒಂದನ್ನು ಗಮನಿಸಿದ್ದೇನೆ: ಈ ಕಾಲದಲ್ಲಿ ಎಚ್ಚೆತ್ತ ಎಲ್ಲ ನೊಂದ ಜಾತಿಗಳ ಜನ ಹಿಂದಿನವರಂತೆ ನಿಂದನೆಯನ್ನು ಸುಲಭವಾಗಿ ಸಹಿಸುವವರಲ್ಲ. ಅವರು ಹಿಂದುಳಿದ ವರ್ಗಗಳ ಆಯೋಗಕ್ಕೆ ಕೊಟ್ಟಿರುವ ಮನವಿ ಈ ಪ್ರಜ್ಞೆ ಜಾಗೃತವಾಗಿರುವುದರ ಖಚಿತ ಪ್ರತಿಬಿಂಬದಂತಿದೆ.

‍ಲೇಖಕರು avadhi

November 29, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This