ಹಣದ ಗಿಡ ಬೆಳೆಸಿದವನು

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು.

ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ.

ಬೆಂಗಳೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿರುವ ಇವರ ಟೈಪಿಸ್ಟ್ ತಿರಸ್ಕರಿಸಿದ ಕಥೆಯನ್ನು ಬಹುರೂಪಿ’ ಪ್ರಕಟಿಸಿದೆ. ಇವರು ಇಂಗ್ಲಿಷ್ ಕುರಿತೇ ವಿಜಯ ಕರ್ನಾಟಕದಲ್ಲಿ ಬರೆಯುವ ಅಂಕಣ ಅತ್ಯಂತ ಜನಪ್ರಿಯ

ಪ್ರತಿ ಬುಧವಾರದ ‘ಮಾವಲಿ ರಿಟರ್ನ್ಸ್’ನಲ್ಲಿ ಅವರುಂಟು ನೀವುಂಟು.

ತನ್ನ ಮನೆಯ ಹಿತ್ತಲಲ್ಲಿ ಇರುವ ಅದೊಂದು ಗಿಡ ಯಾವುದೆಂದು ಅವನಿಗೆ ಸ್ಪಷ್ಟವಾಗಿ ತಿಳಿದಿರಲಿಲ್ಲ. ಅದರ ಎಲೆಗಳನ್ನು ಗಮನಿಸಿದಾಗ ಇದುವರೆಗೂ ತಾನು ಎಲ್ಲೂ ನೋಡಿರದ ಗಿಡವಿದು ಎಂಬುದು ಮಾತ್ರ ಅವನಿಗೆ ಖಾತರಿಯಿತ್ತು. ಆ ಗಿಡವನ್ನು ತನ್ನ ಹಿತ್ತಲಲ್ಲಿ ಬೆಳೆಸಿದ್ದರ ಬಗ್ಗೆಯೂ ಸರಿಯಾಗಿ‌ ನೆನಪಿರಲಿಲ್ಲ. ಅದರ ಬೀಜವನ್ನು ಎಲ್ಲಿಂದ ತಂದಿದ್ದು, ಯಾರಾದರೂ ಕೊಟ್ಟಿದ್ದರೆ? ಇದರ ಪೋಷಣೆಯನ್ನು ತಾನು ಅಷ್ಟಾಗಿಯೇನು ಮಾಡಿಲ್ಲವಾದರೂ ಇದು ಹುಲುಸಾಗಿ ಬೆಳೆದು ನಿಂತಿರುವುದು ಹೇಗೆ ?

ಯಾವುದೋ ಕಾಡು ಜಾತಿಯ ಗಿಡವಿರಬೇಕು ಎಂದು ತನಗೆ ತಾನೇ ಸಮಾಧಾನ ಪಟ್ಟುಕೊಳ್ಳುತ್ತಿದ್ದವನು ಊರಿನಲ್ಲಿದ್ದ ಸ್ವಲ್ಪ ಹೆಚ್ಚು ತಿಳಿದುಕೊಂಡವರನ್ನು ಯಾರ್ಯಾರನ್ನೋ ಕರೆಸಿ ಅದರ ತಪಾಸಣೆ ಮಾಡಿಸಿದ. ಬಂದವರ್ಯಾರೂ ಆ ಗಿಡದ ಹೆಸರನ್ನು ನಿಖರವಾಗಿ ಹೇಳಲಿಲ್ಲ. ಆದರೆ ಈ ರೀತಿಯ ಎಲೆಗಳಿರುವ ಗಿಡಗಳನ್ನು ತಾವು ಹಲವಾರು ಕಡೆಗಳಲ್ಲಿ ನೋಡಿರುವುದಾಗಿ ಮಾತ್ರ ಹೇಳಿದರು. ಅದರ ಹಣ್ಣಾಗಲೀ , ಹೂವಾಗಲೀ ತಾವು ಎಲ್ಲಿಯೂ ನೋಡಿಲ್ಲವೆಂದೇ ತಿಳಿಸಿದರು. ನಂತರ ಅವನೂ ಆ ಗಿಡದ ಬಗ್ಗೆ ವಿಶೇಷವಾಗಿ ಏನೂ ತಲೆ ಕೆಡಿಸಿಕೊಳ್ಳಲಿಲ್ಲ. 

ಒಂದು ದಿನ ಮನೆಯಲ್ಲಿ ಏನೋ ದುಡ್ಡಿನ ತೊಂದರೆ ಇತ್ತೆಂದು ಬೇಸರಿಸಿಕೊಂಡು ಯಾರಿಗೂ ಕಾಣದಂತೆ ಹಿತ್ತಲಿಗೆ ಬಂದು ಆ ಗಿಡದ ಕೆಳಗೆ ಕೂತು ಅಲೋಚನೆಯಲ್ಲಿ ತೊಡಗಿರುವಾಗ ಅದರಿಂದ ಒಂದು ಎಲೆ ಉದುರಿ ಅವನ ಕೈಗೆ ಬಿತ್ತು. ಆಶ್ಚರ್ಯ ! ಗಿಡದಿಂದ ಉದುರುವಾಗ ಎಲೆಯಾಗಿದ್ದ ಅದು ಅವನ ಕೈಗೆ ಬಿದ್ದಾಕ್ಷಣ ಹಣದ ನೋಟಾಗಿತ್ತು. ಅವನು ಮತ್ತೊಮ್ಮೆ ಪರಿಶೀಲಿಸಿಕೊಂಡ. ಹೌದು, ಅದು ಹಣವೇ ಆಗಿತ್ತು. ಯಾರಿಗೂ ಏನೂ ಹೇಳದೆ ಮನೆಯೊಳಗೆ ಬಂದು ಅದನ್ನು ದೇವರಕೋಣೆಯಲ್ಲಿ ಯಾರಿಗೂ ಗೊತ್ತಾಗದಂತೆ  ಬಚ್ಚಿಟ್ಟ. ಮರುದಿನ ನೋಡಿದ.‌ ಅದು ಹಣವಾಗಿಯೇ ಇಟ್ಟ ಜಾಗದಲ್ಲೇ ಇತ್ತು. ಆಗ ಅದನ್ನು ಅಲ್ಲಿಂದ‌ ತೆಗೆದುಕೊಂಡು ಹೋಗಿ ಖರ್ಚು ಮಾಡಿದ.

ಹಿತ್ತಲಿಗೆ ಬಂದು ಆ ಗಿಡ ನೋಡಿದ. ಅಲ್ಲಿ ಯಾವುದೂ ನೋಟು ಇರಲಿಲ್ಲ. ಕೆಲ ದಿನಗಳ ನಂತರ ಇನ್ನೊಮ್ಮೆ ಮನೆಯಲ್ಲಿ ಹಣದ ಸಮಸ್ಯೆ ಎದುರಾಯಿತು. ಯಾರ ಬಳಿ ಕೇಳಿದರೂ ಹಣ ಸಿಗಲಿಲ್ಲ.‌ ಆಗ ಅವನಿಗೆ ಕಳೆದ ಬಾರಿ ನಡೆದ ಘಟನೆ ನೆನಪಾಯ್ತು. ಅದೇನು ಕಾಕತಾಳೀಯವೋ ಅಂದುಕೊಂಡಿದ್ದರೂ ಅವನು ಹಿತ್ತಲಿನಲ್ಲಿದ್ದ ಅದೇ ಗಿಡದ ಕೆಳಗೆ ಆ ದಿನವೂ ಬಂದು ಕೂತ. ಅವನ ನಿರೀಕ್ಷೆಯೇ ನಿಜವಾಯಿತು. ಆಗಲೂ ಅವನ ಕೈಮೇಲೆ ಆ ಗಿಡದಿಂದ ಉದುರಿದ ಎಲೆಗಳು ಹಣವಾಗಿ ಮಾರ್ಪಾಡಾಗಿದ್ದವು. ಅವುಗಳನ್ನು ತೆಗೆದುಕೊಂಡು ಹೋದವನು ದೇವರಕೋಣೆಯಲ್ಲಿ ಇಡದೆ ತನ್ನ ಜೇಬಿನಲ್ಲಿಯೇ ಇಟ್ಟುಕೊಂಡನು. ಅವುಗಳಲ್ಲಿ ಏನೂ ಬದಲಾವಣೆ ಆಗಲಿಲ್ಲ. ಆಗ ಅವನಿಗೆ ಅರಿವಾಯಿತು. ಆ ಗಿಡ ಹಣದ ಗಿಡ.‌ ಆದರೆ ಹಣ ಎಲೆಗಳ ರೂಪದಲ್ಲಿ ಇರುತ್ತದೆ ಎಂಬುದು. 

ಅಂದಿನಿಂದ ಅವನು ಆ ಗಿಡದ ಮರ್ಮವನ್ನು ಅರ್ಥ ಮಾಡಿಕೊಂಡ. ತನಗೆ ಕಷ್ಟ ಇದ್ದಾಗೆಲ್ಲ ಹಣದ ಗಿಡವನ್ನು ಆಶ್ರಯಿಸತೊಡಗಿದ. ಮನೆಯವರಿಗೆ ಸಣ್ಣದೊಂದು ಅನುಮಾನ ಬಂತಾದರೂ ಸಾಲ ಮಡುತ್ತಿರಬಹುದು ಎಂದುಕೊಂಡು ಯಾರೂ ಅವನನ್ನು ಪ್ರಶ್ನಿಸಲಿಲ್ಲ. ತನಗೆ ಅಗತ್ಯ ಇದ್ದಾಗ ಮಾತ್ರ ಗಿಡದಿಂದ ಹಣವನ್ನು ಬಿಡಿಸಿಕೊಳ್ಳುತ್ತಿದ್ದವನು ನಿಧಾನಕ್ಕೆ ಲಕ್ಸುರಿಗಾಗಿ ಹಣ ಬೇಕೆಂದು ಬಯಸಿ ಗಿಡದ ಕೆಳಗೆ ಹೋಗಿ ಕೂರ ತೊಡಗಿದ. ಮನೆಗೆ ಎಲ್ಲಾ ರೀತಿಯ ಐಷಾರಾಮಿ ವಸ್ತುಗಳೂ ಬಂದವು.

ಹಳ್ಳಿಯ ಬಡ ಮನುಷ್ಯನೊಬ್ಬ ಅತಿ ಶೀಘ್ರದಲ್ಲಿ ಹೀಗೆ ಶ್ರೀಮಂತನಾದುದರ ಬಗ್ಗೆ ಊರಿಗೆ ಊರೇ ಆಶ್ಚರ್ಯಪಟ್ಟಿತು. ಊರಿನ ಮುಖ್ಯಸ್ಥ ಅವನನ್ನು ಕರೆಸಿ ಈ ಬಗ್ಗೆ ಕೇಳಿದರೆ ಈತ ಏನನ್ನೂ ಹೇಳಲು ಹಿಂಜರಿದ. ಮುಖ್ಯಸ್ಥ ಹೆದರಿಸಿದಾಗ ನಿಜ ತಿಳಿಸಿದ.‌ ತನ್ನ ಮನೆಯಲ್ಲಿ ಇಂಥದ್ದೊಂದು ಗಿಡ ಇರುವುದಾಗಿ ಹೇಳಿದ್ದನ್ನು ನಂಬಲು ತಯಾರಿದ್ದವರು ಯಾರು ? ಅದು ನಂಬಲರ್ಹವಾದ ವಿಷಯವಾಗಿರಲಿಲ್ಲ. ‘ಬೇಕಾದ್ರೆ,‌ ನೀವೇ ಬಂದು ಒಮ್ಮೆ ನೋಡಿ. ನಾನು ಸುಳ್ಳು ಹೇಳುತ್ತಿಲ್ಲ’ ಎಂದ. ಆಯ್ತು ಎಂದು ಊರಿನ ಮುಖ್ಯಸ್ಥನೂ ಒಪ್ಪಿಕೊಂಡ. 

 *       *      * 

ಹಣದ ಗಿಡದ ಕೆಳಗೆ ಕೂತಿದ್ದ ಊರಿನ ಮುಖ್ಯಸ್ಥ ಎಷ್ಟು ಹೊತ್ತು ಕಾದರೂ ಒಂದೂ ಎಲೆ ಉದುರಿ ಬೀಳಲಿಲ್ಲ. ಕೋಪದಿಂದ, ಗಿಡ ಬೆಳೆಸಿದವನನ್ನು ಬೈದು ‘ನಿನ್ನ ಈ ಕಳ್ಳಾಟ ಬಹಳ ದಿನ ನಡೆಯೋಲ್ಲ, ನೋಡ್ತಿರು’ ಎಂದು ಹೇಳಿ ಅಲ್ಲಿಂದ ಹೊರಟು ಹೋದ.

ಇದಾದ ಮೇಲೆ ಆ ಮನೆಯವನು ತಾನು ಕೂತು ಪರೀಕ್ಷಿಸಿದ. ‌ಆಗ ಹಣದ ಎಲೆ ಉದುರಿ ಅವನ ಕೈಗೆ ಬಿತ್ತು. ಇದರಿಂದ ಅವನಿಗೆ ತನ್ನನ್ನು ಬಿಟ್ಟು ಬೇರೆ ಯಾರಿಗೂ ಈ ಗಿಡ ಹಣವನ್ನು ಕೊಡುವುದಿಲ್ಲ ಎಂಬುದು ಖಚಿತವಾಯಿತು. ಆ ದಿನ ವಿಷಯವನ್ನು ತನ್ನ ಮನೆಯವರಿಗೆಲ್ಲ ತಿಳಿಸಿದ. ಅವರಿಗೆಲ್ಲ ಇವನು ಸಾಲ ಮಾಡಿ ಇದನ್ನೆಲ್ಲ ಮಾಡುತ್ತಿಲ್ಲ ಎಂಬುದು ಗೊತ್ತಾಯಿತು. ಆ ರಾತ್ರಿ ಯಾರಿಗೂ ತಿಳಿಯದಂತೆ ಅವನ ಮಗ ಗಿಡದ ಕೆಳಗೆ ಹೋಗಿ ಕೂತ. ಬೆಳಗಿನ ಜಾವದ ತನಕ ಕಾದರೂ ಉಪಯೋಗವಾಗಲಿಲ್ಲ. ಅವನ ಹೆಂಡತಿ, ಮಗಳು ಕೂಡ ಇದನ್ನೇ ಮಾಡಿ ನಿರಾಶರಾದರು. ಅಲ್ಲಿಗೆ ಅವರ ವೈಯಕ್ತಿಕ ಆಸೆಗಳಿಗೆ ಗಿಡ ಪ್ರಯೋಜನವಾಗಲಾರದು ಎಂದೆನ್ನಿಸಿತು. 

ಮನೆಯವರಿಗೆಲ್ಲ ವಿಷಯ ತಿಳಿದಾದ ಮೇಲೆ ಇನ್ನೇನು ಬಚ್ಚಿಡುವ ಅಗತ್ಯವಿಲ್ಲ ಎಂದುಕೊಂಡು ಈಗಿರುವ ಹಳೆಯ ಮನೆ ಕೆಡವಿ ಊರಾಚೆ ಒಂದು ದೊಡ್ಡ ಬಂಗಲೆ ಕಟ್ಟುವ ಯೋಚನೆ ಮಾಡಿದ ಆತ, ಕೆಲಸ ಪ್ರಾರಂಭಿಸುವ ಮೊದಲು ಈ ಹಣದ ಗಿಡವನ್ನು ಬಂಗಲೆ ಕಟ್ಟುವಲ್ಲಿ‌ಗೆ ಸ್ಥಳಾಂತರಿಸಿಕೊಂಡರೆ ಒಳ್ಳೆಯದು‌ ಎಂಬ ಯೋಚನೆ ಮಾಡಿ ಅದನ್ನು ಹೇಗೆ ಮಾಡುವುದು ಎಂದು ತಿಳಿದ ಸಸ್ಯಶಾಸ್ತ್ರಜ್ಞನನ್ನು ಕರೆಸಿಕೊಂಡ.

ಅವನಿಗೆ ಸತ್ಯ ಹೇಳದೆ ಆ ಗಿಡವನ್ನು ಯಾವುದೇ ತೊಂದರೆ ಆಗದಂತೆ ಬೇರೆಡೆ ಸ್ಥಳಾಂತರಿಸುವುದು ಹೇಗೆ ಎಂಬುದರ ಬಗ್ಗೆ ಮಾತ್ರ ಮಾಹಿತಿ ಕೇಳಿ ಅದನ್ನು ಮಾಡಿಕೊಟ್ಟು ತಕ್ಕುದಾದ ಹಣ ಪಡೆಯಬಹುದೆಂದು ತಿಳಿಸಿದ. ಅವರು ಒಪ್ಪಿಕೊಂಡು ಹಾಗೆ ಸ್ಥಳಾಂತರಿಸಲು ಕೆಲವು ತಿಂಗಳು ಬೇಕು , ಸೀಸನ್ ಗಳನ್ನು ನೋಡಿಕೊಂಡು ಆ ಕೆಲಸ ಮಾಡಬೇಕೆಂದು ಹೇಳಿ, ಸಮಯ ಬೇಕೆಂದು ಅನುಮತಿ ಪಡೆದು ಹೋದರು. 

ಅವರು ಬಂದು ಗಿಡವನ್ನು ಇಲ್ಲಿಂದ ಸ್ಥಳಾಂತರ ಮಾಡಲು ಕೆಲವು ತಿಂಗಳುಗಳು ಬೇಕಾಗುವುದರಿಂದ ಮತ್ತು ಯಾವುದೇ ಬದಲಾವಣೆಯಿಲ್ಲದೆ ಗಿಡವನ್ನು ಸ್ಥಳಾಂತರಿಸುವುದರ ಸಾಧ್ಯತೆಯ ಬಗ್ಗೆ ಆ ಸಸ್ಯಶಾಸ್ತ್ರಜ್ಞ       ಸಂಪೂರ್ಣ ಭರವಸೆ ಕೊಟ್ಟಿದ್ದರಿಂದ ಆತ ಮೊದಲು ಬಂಗಲೆ ಕಟ್ಟಿ ಬಿಡೋಣ ಎಂದುಕೊಂಡು ಪ್ರತಿ‌ದಿನ ಹಲವಾರು ಬಾರಿ ಗಿಡದ ಕೆಳಗೆ ಕೂತು ಹಣ ಸಂಗ್ರಹಿಸುತ್ತಾ ಹೋದ. ಆಗಾಗ ಸಸ್ಯಶಾಸ್ತ್ರಜ್ಞನಿಗೆ ಕಾಲ್ ಮಾಡಿ ವಿಚಾರಿಸುತ್ತಿದ್ದ. ಆತನೂ ತಾನು ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವುದಾಗಿ ತಿಳಿಸುತ್ತಿದ್ದ.

ಇತ್ತ ಬಂಗಲೆ ನಿರ್ಮಾಣವನ್ನೇ ಮಾಡಿ ಮುಗಿಸಿದ್ದ ಈತ. ಮನೆ ಕಟ್ಟುವಾಗ ಆ ಗಿಡವನ್ನು ಮನೆಯ ಒಳಗೇ ಬೆಳೆಸಲು ಅನುವಾಗವಂತೆ ವಿಶಾಲವಾದ ನೆಲವನ್ನು ಖಾಲಿ ಬಿಟ್ಟುಕೊಂಡಿದ್ದ.‌ ಹಣದ ಗಿಡ ಹಿತ್ತಲಲ್ಲಿರುವ ಬದಲು ಮನೆಯೊಳಗೇ ಇದ್ದರೆ ಒಳ್ಳೆಯದಲ್ಲವೆ ಎಂದು ಯೋಚಿಸಿದ್ದನೇನೊ. ಮನೆ ಕಟ್ಟಿ ಅದ್ದೂರಿಯಾಗಿ ಬಂಗಲೆಯ ಪ್ರದರ್ಶನವಾಗುವಂತೆ ಸಂಬಂಧಿಕರೆಲ್ಲರನ್ನು, ಊರಿನವರನ್ನು ಆಮಂತ್ರಿಸಿ ಗೃಹ ಪ್ರವೇಶ ಮಾಡಿ ಮುಗಿಸಿದ್ದೂ ಆಯಿತು. ಬಂದವರೆಲ್ಲ ‘ಏನೂ ಇಲ್ಲದವನು ಇಷ್ಟೆಲ್ಲ ಹೇಗೆ ಮಾಡಿರಬಹುದು’ ಎಂದು ಮನಸೋಯಿಚ್ಛೆ ಕಾರಣಗಳನ್ನು ತಾವೇ ಮಾತಾಡಿಕೊಂಡು ಹೋದರು. ಆತ ಯಾರ ಮಾತಿಗೂ ತಲೆ ಕೆಡಿಸಿಕೊಳ್ಳಲಿಲ್ಲ.

ಸಸ್ಯಶಾಸ್ತ್ರಜ್ಞ ಬಂದು ಆ ಗಿಡವನ್ನು ಹೊಸ ಬಂಗಲೆಯೊಳಗೆ ಅದಕ್ಕಾಗಿಯೇ ಬಿಟ್ಟಿದ್ದ ವಿಶಾಲವಾದ ಖಾಲಿ ನೆಲದೊಳಗೆ ಸ್ಥಳಾಂತರ ಮಾಡಿ ನೆಟ್ಟು ಹೋದ. ಗಾಳಿ, ಬೆಳಕಿನ ಲಭ್ಯತೆ ಮತ್ತು ಸ್ವಾಭಾವಿಕ ಮಣ್ಣಿನಲ್ಲಿ ಆ ಗಿಡ ಸಹಜವಾಗಿಯೇ ಬೆಳವಣಿಗೆ ಮುಂದುವರೆಸುವುದು ಎಂಬ ಅಭಯವನ್ನು ಆತನಿಗೆ ನೀಡಿ ಹೋದ. ಎಲ್ಲಾ ಸರಿ ಹೋಯಿತು ಎಂದು ಭಾವಿಸಿದ ಆತ ನಿಶ್ಚಿಂತೆಯಿಂದ ಮಲಗಿದ. 

*        *         * 

ಆ ರಾತ್ರಿ ಅವನಿಗೊಂದು ಕನಸು ಬಿತ್ತು. ಅದರಲ್ಲಿ ಆತ ನ್ಯೂಸ್ ಪೇಪರಿನಲ್ಲಿ ಓದಿದ ಸುದ್ದಿ ಹೀಗಿತ್ತು :

ಜಗತ್ತಿನ ಯಾವುದೋ ದೇಶವೊಂದರಲ್ಲಿ ದೇಶದ ಅತೀ‌‌ ದೊಡ್ಡ ಸಿರಿವಂತನನ್ನು ಯಾವ ಕಾರಣವನ್ನೂ ನೀಡದೆ ಬಂಧಿಸಲಾಗಿತ್ತು. ಅವನು ತನ್ನ ಸಂಪತ್ತಿನ ಅರ್ಧ ಭಾಗವನ್ನು ಉಚಿತವಾಗಿ ನೀಡಲು ಒಪ್ಪಿದರೆ ಮಾತ್ರ ಜೈಲಿನಿಂದ ಬಿಡುಗಡೆ ಮಾಡುವುದಾಗಿ ಸರ್ಕಾರ ಅವನಿಗೆ  ವಾಗ್ದಾನ ನೀಡಿತ್ತು. ಆತ ತನ್ನ ನಿರ್ಧಾರವನ್ನು ಇನ್ನೂ ತಿಳಿಸಿಲ್ಲ. ಇಂಥ ಕನಸು ಕಂಡವನು ಅಪರಾತ್ರಿಯಲ್ಲಿ ಬಂದೊಮ್ಮೆ ಹಣದ ಗಿಡವನ್ನು ನೋಡಿಕೊಂಡು ಹೋದ.

   *         *          *        * 

ಮರುದಿನ ಬೆಳಗ್ಗೆ ಮನೆಯ ಖರ್ಚುಗಳನ್ನು ನಿಭಾಯಿಸಲು ಹಣ ಬೇಕಾಗಿ ಆತ ಗಿಡದ ಕೆಳಗೆ ಕೂತ. ಯಾವ ಎಲೆಯೂ ಅವನ ಕೈಮೇಲೆ ಬೀಳಲಿಲ್ಲ. ತುಂಬಾ ಹೊತ್ತು ಹಾಗೆಯೇ ಕುಳಿತ. ಆದರೂ ಬೀಳಲಿಲ್ಲ. ಕೊನೆಗೆ ತಾನೆ ಒಂದು ಎಲೆಯನ್ನು ಕಿತ್ತು ಅದನ್ನು ದೇವರ ಮನೆಯಲ್ಲಿ ಇಟ್ಟು ಬಂದ. ಒಂದು ದಿನ ಬಿಟ್ಟು ನೋಡಿದರೂ ಅದು ಕೇವಲ ಎಲೆಯಾಗಿಯೇ ಇತ್ತು. ಹಾಗೆಯೇ ನಾಲ್ಕೈದು ಬಾರಿ ಮಾಡಿದರೂ ಯಾವ ಎಲೆಯೂ ಹಣವಾಗಿ ಮಾರ್ಪಾಡಾಗಿರಲಿಲ್ಲ. ತಕ್ಷಣ ಸಸ್ಯ ಶಾಸ್ತ್ರಜ್ಞನಿಗೆ ಕಾಲ್ ಮಾಡಿ ಕರೆಸಿ ಆ ಗಿಡದ ಬೆಳವಣಿಗೆಯನ್ನು ಒಮ್ಮೆ ಪರೀಕ್ಷಿಸುವಂತೆ ಕೇಳಿಕೊಂಡ. ತಪಾಸಣೆ ಮಾಡಿದ ಸಸ್ಯಶಾಸ್ತ್ರಜ್ಞ ಗಿಡವು ತುಂಬಾ ಕರಾರುವಕ್ಕಾಗಿ ಬೆಳೆಯುತ್ತಿದೆ. ಆರೋಗ್ಯವಾಗಿಯೂ, ಸಹಜವಾಗಿಯೂ ಬೆಳೆಯುತ್ತಿರುವ ಈ ಗಿಡವನ್ನು ಸ್ಥಳಾಂತರಿಸಿರುವುದರಿಂದ ಯಾವುದೇ ಬದಲಾವಣೆ ಆಗಿಲ್ಲ ಎಂದು ಹೇಳಿ ಹೋದ. 

*      *        *        *

ಬದಲಾವಣೆ ಆಗಿದ್ದು ಆತನಿಗೆ ಮತ್ತು ಆ ಮನೆಯವರಿಗೆ ಮಾತ್ರ ತಿಳಿದಿತ್ತು. ಅವನಿಗೆ ಪ್ರತಿ ರಾತ್ರಿ ಕನಸು ಬೀಳುತ್ತಿತ್ತು. ಊರಿನ ಮುಖ್ಯಸ್ಥ ಸರ್ಕಾರಕ್ಕೆ ಇವನ ಆದಾಯದ ಬಗ್ಗೆ ದೂರು ಕೊಟ್ಟಂತೆ; ಸರ್ಕಾರೀ‌ ಅಧಿಕಾರಿಗಳು ಬಂದು ಆದಾಯದ ಮೂಲವಿಲ್ಲದ ತನ್ನ ಬಂಗಲೆಯನ್ನು ಮುಟ್ಟುಗೋಲು ಹಾಕಿಕೊಂಡಂತೆ.‌ ಅದೇ ನಿಜವಾಗುತ್ತದೆಂದು ಬಲವಾಗಿ ನಂಬಿ ಅದನ್ನೇ ಎದುರು ನೋಡುತ್ತಾ , ಸಂಸಾರ ಸಾಗಿಸಲು, ದೊಡ್ಡ ಬಂಗಲೆಯಲ್ಲಿದ್ದುಕೊಂಡು, ಸಣ್ಣ ಕೆಲಸವೊಂದನ್ನು ಹುಡುಕ ತೊಡಗಿದ. ಹಾಗೆಯೇ‌ ನೆಲಸಮ ಮಾಡಿದ್ದ ತನ್ನ ಹಳೆಯ ಮನೆಯನ್ನು ಕಂಡು ಹಲುಬುತ್ತಿದ್ದ…

January 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This