ಹಣವೊಂದು ಕೆಡಿಸಿತ್ತು ಹಾಡಿಯನ್ನು..

ಹರ್ಷ ಕುಗ್ವೆ ಅವರ ’ಹಳ್ಳಿಹೈದನ ತಲೆ ಕೆಡಿಸಿದವರಾರು?’ ಲೇಖನದ ಮು೦ದಿನ ಭಾಗ ಇಲ್ಲಿದೆ.

– ಹರ್ಷ ಕುಗ್ವೆ

ಕೃಪೆ : ದ ಸ೦ಡೆ ಇ೦ಡಿಯನ್

೧೯೮೦ರಲ್ಲಿ ದಕ್ಷಿಣ ಆಫ್ರಿಕದ ಸಿನಿಮಾ ನಿರ್ದೇಶಕ ಜೇಮಿ ಉಯಿಸ್ ಎಂಬುವವರು ನಿರ್ದೇಶಿಸಿದ್ದ ’ದ ಗಾಡ್ಸ್ ಮಸ್ಟ್ ಬಿ ಕ್ರೇಝಿ’ ಸಿನಿಮಾದಲ್ಲಿ ಕಲಹರಿ ಮರುಭೂಮಿಯ ಬುಷ್‌ಮನ್ ಎಂಬ ಬುಡಕಟ್ಟು ಸಮುದಾಯವು ನಾಗರಿಕತೆಯೊಂದಿಗೆ ಎದುರುಗೊಳ್ಳುವ ಕತೆಯನ್ನು ಅದ್ಭುತವಾಗಿ ಚಿತ್ರ್ರಿಸಿದ್ದರು. ವಿಮಾನದಿಂದ ಕುಡಿದು ಎಸೆದ ಕೋಕೊಕೋಲಾ ಬಾಟಲಿಯೊಂದು ಬುಡಕಟ್ಟು ಜನರ ಹಾಡಿಗೆ ಬಂದು ಬಿದ್ದದ್ದೇ ಅವರ ನಡುವೆ ಇನ್ನಿಲ್ಲದ ಸ್ವಾರ್ಥ-ಹೊಡದಾಟ ಶುರುವಾಗಿಬಿಡುತ್ತದೆ. ತಮ್ಮ ನಡುವೆ ಕಲಹ ಸೃಷ್ಟಿಸಿದ ಅದು ಭೂತವೆಂದುಕೊಂಡು ಭೂಮಿಯ ಮತ್ತೊಂದು ತುದಿಯಲ್ಲಿ ಎಸೆದು ಬರಲು ಹೋಗುವ ಬುಡಕಟ್ಟು ಮನುಷ್ಯನೊಬ್ಬ ’ಆಧುನಿಕ’ಜಗತ್ತಿನೊಳಗೆ ಪಜೀತಿಗೆ ಸಿಕ್ಕಿಹಾಕಿಕೊಳ್ಳುವ ಕತೆ ಅದು. ಇದೇ ವೇಳೆಗೆ ಈ ಸಿನಿಮಾ ಬುಡಕಟ್ಟು ಜನರ ನಿಜವಾದ ’ನಾಗರಿಕ’ಬದುಕನ್ನು ಹಾಗೂ ಮಾನವೀಯತೆಯನ್ನೂ ಮನಮುಟ್ಟುವಂತೆ ಹೇಳಿತ್ತು. ನಮ್ಮ ನಾಗರಿಕ ಜಗತ್ತಿನ ಈ ಕಾಲದ ಐಲುಗಳಾದ ರಿಯಾಲಿಟಿ ಶೋಗಳು ಮತ್ತು ಹುಚ್ಚು ಭ್ರಮೆಗಳಲ್ಲಿ ಮುಳುಗಿಸುವ ಸಿನಿಮಾಗಳೂ, ಅವುಗಳನ್ನು ತಯಾರಿಸುವವರೂ, ನೋಡುವವರೂ ಎಲ್ಲಾ ಸೇರಿ ರಾಜೇಶನ ’ಜೇನು ಕುರುಬರ’ ಹಾಡಿಯಲ್ಲಿ ಸೃಷ್ಟಿಸಿರುವ ತಳಮಳ ಕೂಡ ಇದೇ ತೆರನಾದದ್ದು. ಅಲ್ಲಿ ಏನಾಗಿದೆ ನೋಡಿ.

ರಾಜೇಶನ ಮನೆ

’ಹಳ್ಳಿ ಹೈದ ಪ್ಯಾಟೆಗ್ ಬಂದ’ ರಿಯಾಲಿಟಿ ಶೋದಲ್ಲಿ ತಮ್ಮ ಮಗನನ್ನು ನೋಡಲು ರಾಜೇಶನ ತಂದೆ ಟೀವಿಯೊಂದನ್ನು ತಂದರು. ಆದರೆ ಅಲ್ಲಿ ಕರೆಂಟಿಲ್ಲ. ಹೀಗಾಗಿ ನಾಲ್ಕಾರು ಸೋಲಾರ್ ಬ್ಯಾಟರಿಗಳನ್ನು ಹಾಕಿ ಕಾರ್ಯಕ್ರಮ ವೀಕ್ಷಿಸುವ ಪ್ರಯತ್ನ ಹಾಡಿಯಲ್ಲಿ ನಡೆಯುತ್ತದೆ. ಆದರೆ ಆ ಬ್ಯಾಟರಿ ಸುಟ್ಟು ಹೋಗುತ್ತದೆ. ಕೊನೆಗೆ ದೂರದ ಮನೆಗಳಿಗೆ ಹೋಗಿ ಟೀವಿ ನೋಡಿ ಅಲ್ಲಿ ಬಲವಂತವಾಗಿ ಖುಷಿಪಡುತ್ತಾರೆ. ನಂತರ ಮನೆಗೆ ಬಂದ ರಾಜೇಶ ಮನೆಯಲ್ಲೇ ಟೀವಿ ನೋಡುವಂತಾಗಲು ಒಂದು ಜನರೇಟರ್ ಖರೀದಿಸುತ್ತಾನೆ. ಅದಕ್ಕೆ ಇದುವರೆಗೆ ಏನಿಲ್ಲೆಂದರೂ ಲೀಟರ್‌ಗೆ ೪೦ ರೂಪಾಯಿಯಂತೆ ೩೦೦-೪೦೦ ಲೀಟರ್ ಸೀಮೆ ಎಣ್ಣೇ ಖರೀದಿಸಲಾಗಿದೆ. ರಿಯಾಲಿಟಿ ಶೋದಲ್ಲಿ ಗೆದ್ದರೆ ಊರಿನ ದೇವರಿಗೆ ದೇವಸ್ಥಾನ ಕಟ್ಟಿಸುತ್ತೇನೆಂದಿದ್ದ ರಾಜೇಶ. ವಾಹಿನಿಯವರು ಶೋ ಮುಗಿದ ಮೇಲೆ ಕೊಡಬೇಕಿದ್ದ ಹಣಕ್ಕಾಗಿ ಪಾನ್ ಕಾರ್ಡ್ ತರಲು ಮತ್ತು ಅಕೌಂಟ್ ತೆರೆಯಲು ಹೇಳೀದ್ದಾರೆ. ಆದರೆ ಪಾನ್‌ಕಾರ್ಡ್ ಬರಲು ತಿಂಗಳಾನುಗಟ್ಟಲೆಯಗಿದೆ. ಕೊನೆಗೂ ಹೆಚ್.ಡಿ.ಕೋಟೆಯ ಬ್ಯಾಂಕೊಂದರಲ್ಲಿ ೪,೯೦,೦೦೦ ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಇಡಲಾಗಿದೆ. ಇಷ್ಟರ ಹೊತ್ತಿಗೆ ರಾಜೇಶನನ್ನು ಆರಂಭದಲ್ಲಿ ಶೋಗೆ ಹೋಗಲು ಒಪ್ಪಿಸಿದ್ದ ಬುಡಕಟ್ಟು ಮುಖಂಡರನ್ನು ಕಂಡರೂ ಮಾತಾಡಿಸದಂತಾಗಿದ್ದ ರಾಜೇಶ. ರಾಜೇಶನನ್ನು ಸನ್ಮಾನ ಮಾಡಲು ಕೆಲವು ಸ್ಥಳೀಯ ಹಾಡಿಯ ಜನರು ಪ್ರಯತ್ನಿಸಿದ್ದಾರೆ. ಅದಕ್ಕಾಗಿ ಆತನನ್ನು ಕರೆತರಲು ನಿರ್ದೇಶಕ ರವಿ ಕಡೂರು ಮನೆಗೆ ಹೋದವರಿಗೆ ’ಅವರು ಹಾಕುವ ಹಾರ ತೊಗೊಂಡು ನಾನೇನು ಮಾಡಲಿ? ಎಷ್ಟು ದುಡ್ಡು ಕೊಡ್ತಾರೆ ಹೇಳಿ ಬರ‍್ತೇನೆ’ ಎಂದು ಮುಖಕ್ಕೆ ಹೊಡೆದಂತೆ ಹೇಳಿ ವಾಪಸ್ಸು ಕಳಿಸಿಬಿಟ್ಟ. ಸಿನೆಮಾದವರು ಕೊಟ್ಟ ಹಣದಿಂದ ಪಲ್ಸಾರ್ ಬೈಕ್ ರಾಜೇಶನ ಗುಡಿಸಲು ನುಗ್ಗಿದೆ. ಟ್ಯಾಂಕ್ ಪೂರ್ತಿ ಭರ್ತಿ ಮಾಡಿಕೊಂಡು ಸಾಲದಾದರೆ ಎಂದು ಬೈಕಿನ ಹಿಂದುಗಡೆ ಒಂದು ಕ್ಯಾನ್ ಭರ್ತಿ ಪೆಟ್ರೋಲಿಟ್ಟುಕೊಂಡು ಬಳ್ಳೇ ಹಾಡಿ ಟು ಕಡೂರು ವಯಾ ಬೆಂಗಳೂರು ಹಲವಾರು ಸಲ ಸವಾರಿ ಮಾಡಿದ್ದಾನೆ. ಹಾಡಿಯಲ್ಲಿ ಮೊದಮೊದಲು ರಾಜೇಶನ ಕುರಿತು ಸಂತಸಗೊಂಡಿದ್ದ ಜೊತೆಗಾರ ಹುಡುಗರನ್ನು ಈಗ ಮಾತಾಡಿಸದಂತಾಗಿಬಿಟ್ಟಿದ್ದ. ಹಾಡಿಗೆ ಬಂದರೂ ರಾಜೇಶನ ಲೋಕವೇ ಬೇರೆ ಆಗಿತ್ತು. ಈಗ ಅವನ ’ಅಭಿಮಾನಿಗಳೇ’ ಬೇರೆಯಾಗಿದ್ದರು. ಹೊಸ ಸೂಟು, ಬೂಟಿನ ರಾಜೇಶನಿಗೆ ಆ ಹಾಡಿಯ ತಲೆಗೆ ಎಣ್ಣೆ ಕಾಣದ, ದುಡಿಮೆ ಮಾಡುವ, ಕೂಲಿಕಾರ ಬಡವರು ’ಯಕಶ್ಚಿತ್’ ಎನಿಸಿದ್ದಾರೆ. ಇಷ್ಟೊತ್ತಿಗೆ ರಾಜೇಶ ಹಾಡಿಯ ಇತರರಂತೆ ಲೋಕಲ್ ಸಾರಾಯಿ ಕುಡಿಯುತ್ತಿರಲಿಲ್ಲ. ಬ್ರಾಂಡೆಡ್ ಕುಡುಕನಾಗಿದ್ದ. ರಾಜೇಶನ ಮದುವೆಗೆ ಹ್ಯಾಂಡ್ ಪೋಸ್ಟ್‌ನ ಕಲ್ಯಾಣಮಂಟಪವೊಂದರಲ್ಲಿ ಅರೇಂಜಾಗಿದೆ. ಅಲ್ಲಿನ ’ಇವೆಂಟ್ ಮ್ಯಾನೇಜ್‌ಮೆಂಟ್’ನವರು ಮದುವೆಯನ್ನು ವಹಿಸಿಕೊಂಡಿದ್ದಾರೆ. ರಾಜೇಶನ ಅಭಿಮಾನಿಗಳು ನೂರಾರು ಜನ ಮದುವೆಗೆ ಸಾಕ್ಷಿಯಾಗಿದ್ದಾರೆ. ರಾಜೇಶನ ಹಾಡಿಯ ಜನರನ್ನು ಹೊರತುಪಡಿಸಿ! ನಿಜ. ರಾಜೇಶನ ಕುಟುಂಬದ ಸಂಬಂಧಿಕರೂ ಒಳಗೊಂಡಂತೆ ಊರಿನ ಯಾರಿಗೂ ಮದುವೆಗೆ ಆಹ್ವಾನಿಸಿಯೇ ಇರಲಿಲ್ಲ!. ಇದರಿಂದಾಗಿ ಇಡೀ ಹಾಡಿಯ ಜನರು ಬೇಸರಗೊಂಡಿದ್ದಾರೆ. ಇನ್ನು ಸಿನಿಮಾದವರು ನೀಡಿದ ಐದು ಲಕ್ಷ ರೂಪಾಯಿಗಳಲ್ಲಿ ಒಂದು ಲಕ್ಷ ರೂಪಾಯಿಯನ್ನು ಅಮ್ಮನ ಹೆಸರಿಗೆ ಫಿಕ್ಸೆಡ್ ಮಾಡಿಸಿಡಲಾಗಿದೆ. ಉಳಿದ ಹಣವು ನೀರಿನಂತೆ ಖರ್ಚಾಗಿದೆ. ಅದು ಖಾಲಿಯಾದಾಗ ಕೊನೆಗೆ ತನ್ನ ಫಿಕ್ಸೆಡ್ ಹಣವನ್ನಾದರಿಸಿ ೭೫ ಸಾವಿರ ರೂಪಾಯಿ ಸಾಲವನ್ನೂ ತೆಗೆದುಕೊಂಡಿದ್ದಾನೆ. ಇದನ್ನು ತಿಳಿದ ರಾಜೇಶನ ತಂದೆಗೆ ಗಾಬರಿಯಾಗಿದೆ. ಟಿಎಸ್‌ಐನೊಂದಿಗೆ ಮಾತನಾಡಿದ ರಾಜೇಶ್ ತಂದೆ ಈ ಕುರಿತು ಕೆಲವೆ ತಿಂಗಳಲ್ಲಿ ಈ ಸಾಲದ ಬಡ್ಡಿ ಒಂದು ಲಕ್ಷ ಮುಟ್ಟಿ ಮತ್ತೊಂದು ಅಕೌಂಟ್‌ನಲ್ಲಿಟ್ಟಿರುವ ನಾಲ್ಕು ಲಕ್ಷ ರೂಪಾಯಿ ಫಿಕ್ಸೆಡ್‌ನ್ನೂ ತಿನ್ನಲು ಶುರುಮಾಡುತ್ತೆ ಅಂತ ಗೊತ್ಯಾಯ್ತು ಸರ್. ಹಿಂಗಾಗಿ ನಾನು ನನ್ನ ಉಳಿತಾಯದ ಹಣದಲ್ಲಿ ೫೦ ಸಾವಿರ ರೂಪಾಯಿ ತೆಗೆದು ಬ್ಯಾಂಕಿಗೆ ಕೊಟ್ಟು ಬಂದು ೩ ತಿಂಗಳಾಯ್ತು. ಆದರೆ ಅವರು ಅದನ್ನು ಇನ್ನೂ ಪಾಸ್‌ಬುಕ್‌ನಲ್ಲಿ ಬರೆದೇ ಇಲ್ಲ. ಆಸ್ಪತ್ರೆಯಿಂದ ಹೋದ ಕೂಡಲೇ ಆ ಕೆಲಸ ಮಾಡಬೇಕು ಎಂದು ತಮ್ಮ ಆತಂಕ ತೋಡಿಕೊಂಡರು.

ಪಲ್ಸಾರ್ ಬೈಕು, ಜನರೇಟರ್ , ಕರ್ಲಾನ್ ಬೆಡ್ಡು

ರಾಜೇಶ ಲಕ್ಷಗಳನ್ನು ಗೆದ್ದು ಬರುವುದು ಖಾತ್ರಿಯಾದೊಡನೆ ಹಾಡಿಯ ಜನರಲ್ಲಿ ಒಂದು ಆಸೆ ಬಂದಿತ್ತು. ಒಂದು ಸಣ್ಣ ಪಾಲನ್ನಾದರೂ ರಾಜೇಶ ಹಾಡಿಯ ಎಲ್ಲಾ ಬಡವರಿಗೆ ನೀಡಬಹುದೇ ಎಂಬ ಆಸೆ ಅದು. ಆದರೆ ಹಣ ನೀಡುವುದಿರಲಿ ಹಾಡಿಯ ದೇವರಿಗೆ ದೇವಸ್ಥಾನ ಕಟ್ಟಿಸುವ ತನ್ನ ಹರಕೆಯನ್ನೂ ಮರೆತು ಐಶಾರಾಮಿ ದುಂದುವೆಚ್ಚದಲ್ಲಿ ತೊಡಗಿದ್ದ ರಾಜೇಶನನ್ನು ನೋಡಿ ಹಾಡಿಯವರು ಬೇಸರಿಸಿಕೊಂಡುಬಿಟ್ಟರು. ನಾವು ಹಿಂದೆ ಒಂದು ಸೇರು ರಾಗಿ ಸಿಕ್ಕರೆ ಗಂಜಿ ಮಾಡಿಕೊಂಡು ಇಡೀ ಹಾಡಿಯವರು ಸಮನಾಗಿ ಹಂಚಿಕೊಂಡು ಕುಡೀತಿದ್ದೋರು, ಕಾಡಿನಲ್ಲಿ ಸಿಕ್ಕಿದ ಗೆಡ್ಡೆಗೆಣಸು ಸಿಕ್ಕದ್ದನ್ನೆಲ್ಲಾ ಒಟ್ಟು ಬೇಯಿಸಿ ಹಂಚಿಕೊಂಡು ತಿಂದೋರು ಸ್ವಾಮಿ. ಇಂತಾದ್ದರಲ್ಲಿ ರಾಜೇಶ ಹೀಗೆ ಮಾಡಿದಾಗ ಎಲ್ಲರಿಗೂ ಬೇಜಾರಾಗಿದ್ದು ನಿಜಾ ಸ್ವಾಮಿ ಎನ್ನುತ್ತಾರೆ ಹಾಡಿಯ ಯಜಮಾನ ಚಿಕ್ಕಮರಿ. ಹಲವು ಹಾಡಿಗಳ ಜೇನುಕುರುಬ ಜನರೇ ಸೇರಿ ಪಕ್ಕದ ಬಾವಲಿ ಹಾಡಿಯಲ್ಲಿ ಆಯೋಜಿಸಿದ್ದ ಸನ್ಮಾನವೊಂದನ್ನು ತಿರಸ್ಕರಿಸಿದ್ದ ರಾಜೇಶ ನಾನು ಹಾಡಿಗೆ ಬರಬೇಕಾ? ಆಗೋದಿಲ್ಲ ಎಂದು ಅವಮಾನಿಸಿ ಕಳಿಸಿದ್ದ. ಇಷ್ಟಾದ ಮೇಲೂ ಈಗ ರಾಜೇಶ ಆಸ್ಪತ್ರೆಗೆ ಸೇರಿರುವ ಸುದ್ದಿ ತಿಳಿದು ಹಾಡಿಯ ಜನರೆಲ್ಲಾ ತಮ್ಮ ದೇವರಿಗೆ ಪೂಜೆ ಮಾಡಿದ್ದಾರೆ. ನಮ್ಮ ಹುಡುಗ ಬೇಗನೇ ಹುಷಾರಾಗಲಿ ಎಂದು ಬೇಡಿಕೊಂಡಿದ್ದಾರೆ.

ನಾವು ಜೇನು ಕುರುಬ ಮಕ್ಕಳು…

ನಂಗ ಜೇನು ಕುರುಬ ಮಕ್ಕಳು ದೂರಿ ದೂರಿ

ನಂಗ ಕಾಡಿಗೆ ಅರಸರು ದೂರಿ ದೂರಿ

ನಂಗ ಹುಲಿಯ ಜೊತೆ ಹುಡುಗಾಟ ದೂರಿ ದೂರಿ

ನಂಗ ಆನೆ ಜೊತೆ ಐಲಾಟ ದೂರಿದೂರಿ

ನಂಗ ನವಿಲು ಜೊತೆ ನಲಿದಾಟ ದೂರಿ ದೂರಿ

ನಂಗ ಕಾಡಲಿ ಬದುಕವರು ದೂರಿ ದೂರಿ

ನಂಗ ಕತ್ತಲ ಲೋಕದಿ ಮಿಡಿತವರು ದೂರಿದೂರಿ…

ಎಂದು ಸಾಗುತ್ತದೆ ಜೇನುಕುರುಬರ ಹಾಡಿಯ ಹಾಡು. ದೇಶದ ಅತ್ಯಂತ ಪ್ರಾಚೀನ ಬುಡಕಟ್ಟುಗಳಲ್ಲಿ ಜೇನು ಕುರುಬ ಬುಡಕಟ್ಟು ಸಹ ಒಂದಾಗಿದೆ. ಈ ಹಿಂದೆ ಕಾಡಿನ ಅರಸರಾಗಿದ್ದ ಜೇನು ಕುರುಬರು ಎಂದೂ ಒಂದು ಕಡೆ ನೆಲೆ ನಿಲ್ಲುತ್ತಿರಲಿಲ್ಲ. ಒಂದೆಡೆಯಿಂದ ಮತ್ತೊಂದೆಡೆ ಅಲೆಯುತ್ತ ಜೇನು ಸಂಗ್ರಹಿಸುತ್ತ, ಗೆಡ್ಡೆ ಗೆಣಸು ಸಂಗ್ರಹಿಸುತ್ತ, ಕುಮರಿ ಬೇಸಾಯ ಮಾಡುತ್ತ, ಕರ್ನಾಟಕ-ಕೇರಳ-ತಮಿಳು ನಾಡುಗಳ ಗಡಿಭಾಗಗಳ ದಟ್ಟಾರಣ್ಯದಲ್ಲಿ ಅಲೆಮಾರಿಗಳಾಗಿ ಬದುಕಿದ್ದ ಸಮುದಾಯ ಇದು. ಆಗ ಅವರದ್ದು ಅತ್ಯಂತ ಕಷ್ಟದ ಬದುಕು. ಆದರೆ ಎಂದೂ ಸ್ವಾರ್ಥದ ಬದುಕಾಗಿರಲಿಲ್ಲ. ತೀರಾ ಇತ್ತೀಚೆಗೆ ಅವರು ಆಧುನಿಕತೆಗೆ ಒಡ್ಡಿಕೊಳ್ಳುವವರೆಗೂ ಸಾಮೂಹಿಕತೆ ಎನ್ನುವುದು ಅವರ ರಕ್ತದಲ್ಲಿತ್ತು. ಈಗಲೂ ಒಂದು ಮಟ್ಟಿಗಿದೆ. ನಾಳೆಯ ಚಿಂತೆ ಅವರಿಗಿಲಿಲ್ಲ. ಇಂದಿಗೆ ಇಂದೇ ಹುಡುಕಿಕೊಂಡು ಸಿಕ್ಕಷ್ಟು ಹಂಚಿಕೊಂಡು ತಿಂದು ತಮ್ಮ ಕಾಡಿನ ದೇವರುಗಳಾದ ತಾಳಬಳ್ಳಿ, ಕುಳಿತಳ ದೊರೆ, ಬಳ್ಳೆಗದ್ದೆ ತಾಯಿ, ಮಾಸ್ತ್ಯಮ್ಮರನ್ನು ಪೂಜಿಸಿಕೊಂಡು ಬದುಕಿದ್ದರು. ರಾಜೇಶನ ಅಜ್ಜಿ ಲಿಂಗಮ್ಮ ಟಿಎಸ್‌ಐನೊಂದಿಗೆ ಆಡಿದ ಈ ಮಾತು ಕೇಳಿ. ನಮ್ಮ ಅರಮನೆ ಇದೇ ಸಾ. ನಿಮ್ಮರಮನೆ ನಮಗೆ ಆಗಲ್ಲ ಸಾ. ನಾವೆಂದೂ ಕಳ್ತನ ಮಾಡ್ದೋರಲ್ಲ ಸಾ. ಸರ್ಕಾರದೋರು ಬಂದು ಹಣ ಕೊಡ್ತೀವಿ ನೀವು ಕಾಡು ಬಿಟ್ಟು ಹೊರಗೆ ಹೋಗಿ ಅಂದರೆ ನಾವು ಹೋಗಕಾಗತ್ತಾ ಸಾ… ನಮಗೆ ಕರೆಂಟು ಕೊಡಿ, ನೀರು ಕೊಡಿ, ಮಕ್ಕಳಿಗೆ ಶಾಲೆ ಕೊಡಿ ಆದರೆ ಇಲ್ಲಿಂದ ಹೊರಗೆ ಕರೆದರೆ ಬೇಕಾದರೆ ವಿಷವನ್ನೇ ಕುಡೀತೀವಿ ಸಾ… ಮತ್ತೂ ಮುಂದುವರೆದು ಮಾತನಾಡಿದ ಅವರು ನಂಗೆ ಹತ್ತು ಜನ ಮಕ್ಕಳು. ಆ ಕಾಲದಲ್ಲಿ ಆಪೇಸನ್ನು ಇಲ್ಲ ಸಾ. ಇದ್ದಿದ್ರೆ ನಾನು ಮೂರೇ ಮಕ್ಕಳನ್ನ ಮಾಡ್ಸಿಕೊಳ್ವೇನು. ನಮ್ ತಾತನ ಕಾಲದಲ್ಲಿ ಅವೆಲ್ಲ ಇಲ್ಲ. ಈಗ ಹೊಟ್ಟೆ ಕತ್ತರಸಿ ಬನ್ನಿ, ಅಂತ ಸುರುವಗಿರದು. ನಾನು ಗುಂಡು ಕಲ್ಲಿನಂಗೆ ಇವ್ನಲ್ಲ? ಹತ್ತು ಮಕ್ಕಳು ಹೆತ್ರೂ ನಂಗೆ ಯಾವ ರೋಗ ಬಂದಿಲ್ವಲ್ಲ? ಈಗಿನವರು ಅಲ್ವಾ ರೋಗ ನೋಡ್ತಾ ಇರಾದು? ಲಕ್ಷ ಲಕ್ಷ ಡಾಕುಟ್ರಿಗೆ ಸುರಿಯಾದು? ಇಲ್ಲಿ ನಮಗೆ ಸೊಪ್ಪು ತಿಂದ ಮೇಲೆ ನಮಗೆ ಯಾವ ರೋಗ ಬರಲ್ಲ. ಪ್ಯಾಟೇಲೇ ರೋಗ. ನಿಮ್ ರೋಗ ನಂಗ ಹತ್ತಕಳದು ನನ್ನ ರೋಗ ನಿಮಗ ಹತ್ತಕಳದು. ನಾವು ಗಲೀಜು ನೀರು ಕುಡಿಯೋಕಾಗಲ್ಲ. ನಾವು ಗುಂಡಿ ಮಾಡಿಕಂಡು ಹೊಸ ನೀರನ್ನೇ ತೆಗೆಯೋದು. ಅರ್ಥ ಮಾಡ್ಕಳಿ. ಹಿಂಗೆ ಬದುಕದವರು ನಾವ್ ಅಲ್ಲೆಲ್ಲ ಹೋಗಿ ಬದುಕಕಾಯ್ತದ ಸಾ? ನಮ್ಮನ್ನು ಹಾಳು ಮಾಡಕಿರದು ಗೌರ‍್ಮೆಂಟು. ನಮ್‌ಗೆ ಅದೆಲ್ಲಾ ಬ್ಯಾಡ. ನನ್ನ ರಾಜೇಶನನ್ನ ಒಳ್ಳೇದ ಮಾಡಿ ಕಳಿಸಿ. ಅಷ್ಟೇ ಸಾಕು ಸಾ ನಮಗೆ.. ವಾಸ್ತವದಲ್ಲಿ ಜೇನುಕುರುಬರು ಕಾಡಿನ ಕುರಿತ ಅಪಾರ ಜ್ಞಾನ ಹೊಂದಿರುವಂತವರು. ಕಾಡಿನಲ್ಲಿ ಜೇನು ಕೀಳಲು ಹೋಗುವಾಗ ಬಾಯಾರಿತೆಂದರೆ ಇಂತದ್ಧೇ ಮರದ ಕಾಂಡದಲ್ಲಿ ನೀರಿದೆ ಹುಡುಕಿ ಆ ಮರವನ್ನು ಏರಿ ನೀರಿನ ಬುಗ್ಗೆ ಚಿಮ್ಮಿಸುವಷ್ಟು ಪಕ್ಕಾ ಪ್ರತಿಭೆ ಅವರದ್ದು. ಆದರೆ ಬುದ್ಧಿ ಮಾತ್ರ ಬಲಿತು ಹೃದಯವನ್ನೇ ಕಳೆದುಕೊಂಡ ಪೇಟೆಯ ಕೆಲ ವಿಕೃತ ಮನಸ್ಸಿನವರು ಇಂತಹ ಆದಿವಾಸಿಗಳನ್ನು ಇಲ್ಲಿ ತಂದು ಅವರನ್ನು ರಿಯಾಲಿಟಿ ಶೋಗಳಲ್ಲಿ ಅವಮಾನಿಸಿದ್ದ ರೀತಿ ಮಾತ್ರ ಅಕ್ಷಮ್ಯವಾದದ್ದು. ಇದೇ ವಹಿನಿಯಲ್ಲಿ ನಂತರ ಪ್ಯಾಟೆ ಮಂದಿ ಕಾಡಿಗೆ ಬಂದ್ರು ಎಂಬ ರಿಯಾಲಿಟಿ ಶೋ ಸಹ ಆದಿವಾಸಿಗಳನ್ನು ಹಳೆ ಶಿಲಾಯುಗದ ಜನರಂತೆ ತೋರಿಸಿ ಆದಿವಾಸಿ ಬದುಕನ್ನು ವಿಕೃತವಾಗಿ ತೋರಿಸಿದ್ದನ್ನು ನೆನಪಿಸಿಕೊಳ್ಳಬಹುದು.

ಬಳ್ಳೇಹಾಡಿ

ವಾಸ್ತವದಲ್ಲಿ ಜೇನುಕುರುಬರಂತಹ ಬುಡಕಟ್ಟುಗಳು ಇಂದು ಅತ್ಯಂತ ಸಂಕಷ್ಟದಲ್ಲಿ ಸಿಲುಕಿವೆ. ಬಂಡೀಪುರ, ನಗರಹೊಳೆ ಅಭಯಾರಣ್ಯಗಳಲ್ಲಿನ ಐವತ್ತಕ್ಕೂ ಹೆಚ್ಚು ಜೇನುಕುರುಬ ಹಾಡಿಗಳನ್ನು ಈಗಾಗಲೇ ಎತ್ತಂಗಡಿ ಮಾಡಿರುವ ಕಾರಣ ಅವರಲ್ಲಿ ಅನೇಕರು ತಮ್ಮ ಸಾಂಪ್ರದಾಯಿಕ ಬದುಕಿನ ಮೂಲಗಳಿಂದ ದೂರವಾಗಿ ಹೊರಜಗತ್ತಿನ ಬದುಕಿಗೂ ಹೊಂದಿಕೊಳ್ಳಲಾಗದೆ ಸೋತುಸುಣ್ಣವಾಗುತ್ತಿದ್ದಾರೆ. ಬಳ್ಳೇ ಹಾಡಿ ಮತ್ತು ಸುತ್ತಲಿನ ಹಾಡಿಗಳ ಜನರು ಹೊರಹೋಗಲು ಒಪ್ಪಿಲ್ಲ. ಆದರೆ ಅರಣ್ಯ ಇಲಾಖೆಯ ನಿರ್ಬಂಧಗಳು ಅವರನ್ನು ಇದ್ದಲ್ಲಿಯೇ ಅಸಹಾಯಕರನ್ನಾಗಿ ಮಾಡಿವೆ. ವರ್ಷದಲ್ಲಿ ಮೂರುತಿಂಗಳು ಕಾಲ ಕೊಡಗಿನ ಕಾಫಿ ಎಸ್ಟೇಟುಗಳಿಗೆ ಹೋಗಿ ಒಂದಷ್ಟು ಕಾಸು ಮಾಡಿಕೊಂಡು ಬರುತ್ತಾರಾದರೂ ಅದು ಅವರ ಬದುಕಿನ ನಿರ್ವಹಣೆಗೆ ಸಾಲುತ್ತಿಲ್ಲ. ೨೦೦೬ರ ಅರಣ್ಯ ಹಕ್ಕು ಕಾಯ್ದೆ ಅವರಿಗೆ ತಮ್ಮ ಕಾಡಿನ ನೆಲೆಗಳನ್ನು ಖಾಯಂಗೊಳಿಸಿದೆಯಾದರೂ ಅದೂ ಸಹ ಈ ಜೇನುಕುರುಬರ ಸಾಮೂಹಿಕ ಬದುಕನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ. ಈ ಹಿಂದೆ ಮೈಸೂರಿನ ಕಮಿಷನರ್ ಆಗಿದ್ದ ಹರ್ಷಗುಪ್ತ ಈ ಜನರನ್ನು ಅರಿಯಲು ಒಂದಷ್ಟು ಪ್ರಯತ್ನಿಸಿದ್ದರು ಮಾತ್ರವಲ್ಲ ಅವರ ಸಮಸ್ಯೆಗಳಿಗೆ ಸ್ಪಂದಿಸಲೂ ಯತ್ನಿಸಿದ್ದರು. ಅವರು ವರ್ಗಾವಣೆಯಾದಮೇಲೆ ಅದೂ ಈಗ ಅಂತಹ ಯಾವ ಪ್ರಯತ್ನಗಳೂ ನಡೆದಿಲ್. ತಮ್ಮ ಬದುಕುವ ಹಕ್ಕನ್ನು ರಕ್ಷಿಸಿಕೊಳ್ಳುವ ಹಿನ್ನೆಲೆಯಲ್ಲಿ ಜೇನುಕುರುಬರು ಸಂಘಟಿತರಾಗಿ ಹೋರಾಟವನ್ನೂ ನಡೆಸಿಕೊಂಡು ಬಂದಿದ್ದಾರೆ. ಪರಿಣಾಮವಾಗಿ ಸರ್ಕಾರವು ಡಾ. ಮುಜಾಫರ್ ಅಸ್ಸಾದಿಯವರ ನೇತೃತ್ವದಲ್ಲಿ ನೇಮಿಸಿದ್ದ ಅಧ್ಯಯನ ಸಮಿತಿಯು ಮಧ್ಯಂತರ ವರದಿಯು ಒಂದಷ್ಟು ಆಶಾಭಾವನೆಯನ್ನು ಮೂಡಿಸಿದೆ. ಅದರ ಪೂರ್ಣ ವರದಿ ಇನ್ನೂ ಬರಬೇಕಿದೆ ಎಂಬ ಅಭಿಪ್ರಾಯ ಸಮುದಾಯದ ಹೋರಾಟಗಾರ ಸೋಮಣ್ಣ ಅವರದ್ದು. ಟಿಎಸ್‌ಐನೊಂದಿಗೆ ಮಾತನಾಡಿದ ಸೋಮಣ್ಣ ೨೦೦೬ರ ಅರಣ್ಯ ಹಕ್ಕು ಕಾಯ್ದೆ ವಯುಕ್ತಿಕ ಆಸ್ತಿಯನ್ನು ಮಾತ್ರ ಗುರುತಿಸುವುದರಿಂದ ಜೇನು ಕುರುಬರಿಗೆ ಅನ್ಯಾಯವಾಗಿದೆ. ಅದರ ಪ್ರಕಾರ ನಾವು ಜೇನು ಸಂಗ್ರಹಿಸಬಹುದಾದರೂ ಅದನ್ನು ಮಾರುವಂತಿಲ್ಲ. ಈ ಕಾರಣಗಳಿಂದ ನಾವು ನಮ್ಮ ಸಮುದಾಯಕ್ಕೆ ಸಾಮೂಹಿಕ ಆಸ್ತಿಯನ್ನು ನೀಡಿ ಹಕ್ಕುಪತ್ರಗಳನು ನೀಡಲು ಒತ್ತಾಯಿಸುತ್ತಿದ್ದೇವೆ ಎಂದರು. ಪೋಷಿಣಿ ಬಿ.ಟಿ. ಹೀಗೆನ್ನುತ್ತಾರೆ…. ಪೋಷಿಣಿ ಬಿ.ಟಿ. ವಿವೇಕಾನಂದ ಯೂತ್ ಮೂವ್ಮೆಂಟ್ ಸಂಘಟಕಿ “ಜೇನುಕುರುಬರಿಗೆ ಯಾವತ್ತೂ ವೈಯುಕ್ತಿಕ ಆಸ್ತಿ ಎಂಬುದಿಲ್ಲ. ಈ ಅರಣ್ಯ ಹಕ್ಕು ಕಾಯ್ದೆ ಇತರೆ ಆದಿವಾಸಿಗಳಿಗೆ ಅನುಕೂಲ ಮಾಡಿದ್ದರೂ ಜೇನುಕುರುಬರು ಮಾತ್ರ ಅನ್ಯಾಯಕ್ಕೊಳಗಾಗಿದ್ದಾರೆ. ಅವರ ಗುಡಿಸಲು ಬಿಟ್ಟರೆ ಅವರ ಜಮೀನು ಇಲ್ಲ. ಕಾನೂನು ಏನಾದರೂ ಬದಲಾಗದ ಹೊರತು ಅವರಿಗೆ ಬದುಕು ಕಷ್ಟ. ಅವರ ಬದುಕು ಕಾಡಿನಲ್ಲೂ ಕಷ್ಟ ಹೊರಗೂ ಕಷ್ಟ ಎಂಬಂತಾಗಿದೆ. ನೇರವಾಗಿ ಅವರಿಗೆ ಬಿಟ್ಟು ಹೋಗಿ ಅನ್ನದಿದ್ದರೂ ಬೇರೆ ಬೇರೆ ತಂತ್ರಗಳ ಮೂಲಕ ಹೊಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ”- ಪೋಷಿಣಿ. ಬಿ.ಟಿ. ವಿವೇಕಾನಂದ ಯೂಥ್ ಮೂವ್‌ಮೆಂಟ್, ಸರಗೂರು.]]>

‍ಲೇಖಕರು G

July 23, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

  1. D.RAVI VARMA

    ನಮ್ಮ ನಾಗರಿಕ ಜಗತ್ತಿನ ಈ ಕಾಲದ ಐಲುಗಳಾದ ರಿಯಾಲಿಟಿ ಶೋಗಳು ಮತ್ತು ಹುಚ್ಚು ಭ್ರಮೆಗಳಲ್ಲಿ ಮುಳುಗಿಸುವ ಸಿನಿಮಾಗಳೂ, ಅವುಗಳನ್ನು ತಯಾರಿಸುವವರೂ, ನೋಡುವವರೂ ಎಲ್ಲಾ ಸೇರಿ ರಾಜೇಶನ ’ಜೇನು ಕುರುಬರ’ ಹಾಡಿಯಲ್ಲಿ ಸೃಷ್ಟಿಸಿರುವ ತಳಮಳ ಕೂಡ ಇದೇ ತೆರನಾದದ್ದು
    ಒಂದೆಡೆ ಇದು ಕ್ರೂರ ವಾಸ್ತವ ವಾದರೆ ಮತ್ತೊಂದೆಡೆ, ಚಿತ್ರರಂಗ ವೆಂಬ ಮಾಯಕುದುರೆ ಇಂದೆ ಬೆನ್ನು ಬಿದ್ದು ಕಲ್ಪನಾ,ಶೋಭಾ,ಮಂಜುಳಾ,ದಿವ್ಯಭಾರಥಿ,ಸಿಲ್ಕ್ ಸ್ಮಿತಾ, ಹೀಗೆ,ಹೀಗೆ ಇನ್ನು ಅದೆಸ್ತು ಜೀವಗಳು ಇಲ್ಲಿ ಸಿಕ್ಕು,ಅವಮಾ ನ ಚಿತ್ರಹಿಂಸೆ,ದಬ್ಬಾಳಿಕೆಗೆ ಬಲಿಯಾದ ಸತ್ಯ ನಮ್ಮ ಕಣ್ಣ ಮುಂದೆ ಇದೆ ಅದೆಸ್ತೋ ಜೀವಗಳು ಈ ಮಾಯವಿ ಹಿಂದೆ ಬಿದ್ದು ಹುಚ್ಚರಾದದ್ದು, ಪ್ರಾಣಕಳೆದು ಕೊಂಡಿದ್ದು, ಬೀದಿಪಾಲಾದದ್ದು , ಒಂದು ದೊಡ್ಡ ದುರಂತವೇ ಸರಿ , ನಿಮ್ಮ ಸೂಕ್ಷ್ಮ ಮನಸಿನ ಚಿಂತನೆಗ ಹಾಗು ಕಳಕಳಿಗೆ ನನ್ನ ಪ್ರೀತಿಯ ನಮಸ್ಕಾರಗಳು .
    ರವಿ ವರ್ಮ ಹೊಸಪೇಟೆ .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: