ಹಬೀಬ್ ದಾ…

ಹಬೀಬ್ ತನ್ವೀರ್ ಇನ್ನಿಲ್ಲ ಎಂಬುದು ಕೇವಲ ರಂಗಭೂಮಿಯನ್ನು ಮಾತ್ರವಲ್ಲ ಒಂದು ಮಾನವೀಯ ಲೋಕವನ್ನು ಕಟ್ಟಲು ಹೆಣಗುತ್ತಿರುವ ಎಲ್ಲರೂ ತಲ್ಲಣಿಸುವಂತೆ ಮಾಡಿದೆ.
ಏಕೆಂದರೆ ಹಬೀಬ್ ದಾ ರಂಗದ ಕತ್ತಲು ಬೆಳಕಿನಲ್ಲಿ ಮಾತ್ರ ಕೆಲಸ ಮಾಡಿದವರಲ್ಲ. ಸಮಾಜದ ಕತ್ತಲು ಬೆಳಕಿನಲ್ಲೂ ದುಡಿದವರು. ನೊಂದವರ ಮನಕ್ಕೆ ಸಾಂತ್ವನ ಹೇಳಿದವರು.
ಹಬೀಬ್ ತನ್ವೀರ್ ಇಲ್ಲವಾಗುವುದರೊಂದಿಗೆ ಕಲೆ ಮತ್ತು ಸಮಾಜಕ್ಕೆ ಬೆಸುಗೆ ಹಾಕಿದ್ದ ಮುಖ್ಯ ಕೊಂಡಿಯೊಂದು ಕಳಚಿ ಹೋಗಿದೆ. ರಂಗಕರ್ಮಿ ಬಿ ಸುರೇಶ ಹಬೀಬ್ ಅವರನ್ನು ನೆನಪಿಸಿಕೊಂಡ ಬಗೆ ಇಲ್ಲಿದೆ-
M_Id_77238_habib_tanvir
ಒಬ್ಬ ರಂಗಕರ್ಮಿಯ ಹೆಜ್ಜೆ ಗುರುತು
-ಬಿ ಸುರೇಶ
(ಹಬೀಬ್ ತನ್ವೀರ್ ಭಾರತೀಯ ರಂಗಭೂಮಿಯ ಶ್ರೇಷ್ಟ ನಿರ್ದೇಶಕರು. ಈಚೆಗೆ ಅವರು ನಿಧನರಾದರು. ಸೆಪ್ಟಂಬರ್ ೧, ೧೯೨೩ರಲ್ಲಿ ರಾಯಪುರದಲ್ಲಿ ಜನಿಸಿದ ಕಾಲದಿಂದ ೨೦೦೯ರ ಜೂನ್ ೮ರ ವರೆಗೆ ಹಬೀಬ್ ಅವರ ಸೃಜನಶೀಲ ಚಟುವಟಿಕೆಯ ಮೌಲ್ಯಮಾಪನ ಅವಶ್ಯ ಎನಿಸಿ ಈ ಲೇಖನವನ್ನು ಸಿದ್ಧಪಡಿಸಲಾಗಿದೆ.)
ವ್ಯಕ್ತಿಯೊಬ್ಬರು ತಮ್ಮ ಜೀವಿತದ ಅವಧಿಯಲ್ಲಿಯೇ ದಂತಕಥೆಯಾಗುವುದು ಅಪರೂಪ. ಆದರೆ ಹಬೀಬ್ ತನ್ವೀರ್ ಅವರ ಪ್ರಯತ್ನಗಳಿಗೆ ದೊರಕಿದ ಪ್ರೇಕ್ಷಕರ ಬೆಂಬಲ ಮತ್ತು ಆ ಪ್ರದರ್ಶನಗಳನ್ನು ಕುರಿತಂತೆ ಜಗತ್ತಿನಾದ್ಯಂತ ಇರುವ ಪ್ರತಿಕ್ರಿಯೆಯನ್ನು ಗಮನಿಸಿದರೆ ಅವರನ್ನು ನಮ್ಮ ಸಮಕಾಲೀನ ರಂಗಭೂಮಿಯ ದಂತಕಥೆಯಾದವರ ಪಟ್ಟಿಯಲ್ಲಿ ಸೇರಿಸಬಹುದು. ಸತ್ಯವೇನೆಂದರೆ ಇಂತಹ ದಂತಕತೆಗಳು ಸ್ವತಃ ಹುಟ್ಟುವುದಿಲ್ಲ, ಅದಕ್ಕಾಗಿ ಅವರು ಜೀವಮಾನವನ್ನೇ ಒಂದು ಅಪರೂಪದ ಪ್ರಯಾಣವಾಗಿಸಿರುತ್ತಾರೆ. ಹಬೀಬ್ ತನ್ವೀರ್ ಅವರ ರಂಗಭೂಮಿಯ ಯಶಸ್ಸಿಗೆ ಅವರು ಜೀವನದುದ್ದಕ್ಕೂ ಮಾಡಿದ ಪ್ರಯೋಗ ಹಾಗೂ ಪಯಣ ಕಾರಣವೆನ್ನುವುದರಲ್ಲಿ ಅನುಮಾನವಿಲ್ಲ.
ಬಹುತೇಕರು ಹಬೀಬ್ ತನ್ವೀರ್ ಅವರನ್ನು ಜನಪದ ರಂಗಭೂಮಿಯ ಜೊತೆಗೆ ಗುರುತಿಸುತ್ತಾರೆ. ಆದರೆ ಹಬೀಬ್ ತಮ್ಮ ರಂಗಪ್ರಯಾಣವನ್ನು ಆರಂಭಿಸುವ ಕಾಲಘಟ್ಟದ ರಂಗಭೂಮಿಯಲ್ಲಿ ಜನಪದದ ಬಳಕೆಯು ಸಂಗೀತದಲ್ಲಿ ಹೊರತು ಪಡಿಸಿ ಉಳಿದಾವ ವಿಭಾಗದಲ್ಲಿಯೂ ಇರಲಿಲ್ಲ. ನಿಜ ಹೇಳಬೇಕೆಂದರೆ, ಹಬೀಬ್ ತನ್ವೀರ್ ಭಾರತೀಯ ರಂಗಭೂಮಿಯಲ್ಲಿ ಜಾನಪದವನ್ನು ಸಂಪೂರ್ಣವಾಗಿ ಬಳಸಿಕೊಂಡ ಮೊದಲಿಗರು. ಆ ಪ್ರಭಾವ ಅದೆಷ್ಟು ದಟ್ಟವಾಗಿತ್ತೆಂದರೆ ಈಗ ರಂಗಪ್ರಯೋಗಗಳಲ್ಲಿ ಜಾನಪದ ಪ್ರಾಕಾರಗಳನ್ನು ಬಳಸುವುದು ಫ್ಯಾಷನ್ ಆಗಿಹೋಗಿದೆ. ಆದರೆ, ಇತರರು ಜಾನಪದವನ್ನು ರಂಗಭೂಮಿಯಲ್ಲಿ ಬಳಸಿದ ಕ್ರಮಕ್ಕೂ ಹಬೀಬ್ ಅವರು ಜಾನಪದವನ್ನು ಬಳಸಿದ ಕ್ರಮಕ್ಕೂ ಢಾಳಾದ ವ್ಯತ್ಯಾಸವಿದೆ. ಹಬೀಬ್ ಅವರು ಮಾಡಿದ ಎಲ್ಲಾ ಪ್ರಯೋಗಗಳ ಹಿಂದೆ ಇದ್ದದ್ದು ಅವರ ಎಡಪಂಥೀಯ ಆಲೋಚನೆಗಳು. ಹಬೀಬ್ ತನ್ವೀರ್ ಅವರು ಇಪ್ಟಾ (ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್) ಹಾಗೂ ಪಿಡಬ್ಲ್ಯುಎ (ಪ್ರೋಗ್ರೇಸಿವ್ ರೈಟರ‍್ಸ್ ಅಸೋಸಿಯೇಷನ್) ಜೊತೆಗೆ ತಮ್ಮ ವಿದ್ಯಾಭ್ಯಾಸದ ನಂತರದ ದಿನಗಳಿಂದ ತೊಡಗಿಕೊಂಡಿದ್ದರು. ಅವರ ರಾಜಕೀಯ ಮತ್ತು ಸಾಮಾಜಿಕ ಚಿಂತನೆಗಳ ಮೇಲೆ ಇವೆರಡೂ ಸಂಸ್ಥೆಗಳಲ್ಲಿನ ಸಂಬಂಧವೂ ಪರಿಣಾಮ ಬೀರಿದ್ದವು.
ಹಬೀಬ್ ಹುಟ್ಟಿದ್ದು, ಬೆಳೆದದ್ದು ಮಧ್ಯಪ್ರದೇಶದ ಉತ್ತರ ಭಾಗದಲ್ಲಿರುವ ರಾಯಪುರ ಎಂಬ ಸಣ್ಣ ಪಟ್ಟಣದಲ್ಲಿ. ಆ ಪಟ್ಟಣದ ಸುತ್ತಲೂ ಇದ್ದದ್ದು ಸಣ್ಣಸಣ್ಣ ಹಳ್ಳಿಗಳಿದ್ದ ಗುಡ್ಡಗಾಡು ಪ್ರದೇಶ. ರಾಯಪುರ ನಗರಿಗರಿಗೂ ಮತ್ತು ಸುತ್ತಲ ಹಳ್ಳಿಗಳಿಂದ ಪ್ರತಿನಿತ್ಯ ಬರುತ್ತಿದ್ದ ಹಳ್ಳಿಗರಿಗೂ ನಿರಂತರ ಸಂಪರ್ಕ ಇರುತ್ತಿತ್ತು. ಹಬೀಬ್ ಅವರ ಅನೇಕ ಚಿಕ್ಕಪ್ಪಂದಿರುಗಳಿಗೆ ಅವರ ಊರಿನ ಸುತ್ತಲ ಹಳ್ಳಿಗಳಲ್ಲಿ ಜಮೀನುಗಳಿದ್ದವು. ಹೀಗಾಗಿ ಹಬೀಬ್ ತನ್ವೀರ್ ತಮ್ಮ ಬಾಲ್ಯದ ದಿನಗಳಲ್ಲಿ ಬಹುಕಾಲವನ್ನು ಹಳ್ಳಿಗರೊಂದಿಗೆ ಹಾಗೂ ಅಲ್ಲಿನ ಜಾನಪದ ಕಲೆಗಳೊಂದಿಗೆ ಕಳೆದರು. ತಮ್ಮ ಬಾಲ್ಯದಲ್ಲಿ ಕೇಳಿದ ಹಾಡುಗಳು ಮತ್ತು ಕಥನಗಳು ಹಬೀಬ್ ಅವರನ್ನು ಕಡೆಗಾಲದವರೆಗೂ ಕಾಡಿದವು. ಶಾಲೆಯನ್ನು ಮುಗಿಸಿದೊಡನೆ ಹಬೀಬ್ ಅವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪದವಿ ಪರೀಕ್ಷೆ ಬರೆಯಲು ಸೇರಿದರು. ಅಲ್ಲಿಂದಾಚೆಗೆ ಅವರ ಓದು ಮುಂದುವರೆದದ್ದು ಮುಂಬೈನಲ್ಲಿ. ಮುಂಬೈ ಶಹರಿಗೆ ಬಂದೊಡನೆ ಹಬೀಬ್ ಇಪ್ಟಾ ಮತ್ತು ಪಿಡಬ್ಲ್ಯೂಎ ಸೇರಿದರು.
habib_tanveer_1ಹಬೀಬ್ ತನ್ವೀರ್ ಅವರಿಗೆ ಇದ್ದ ಸಂಗೀತ ಮತ್ತು ಕಾವ್ಯ ರಚನೆಯ ಆಸಕ್ತಿಯು ಪ್ರಕಟಗೊಂಡದ್ದು ‘ಅಗ್ರಾಬಜಾರ್’ ನಾಟಕದಲ್ಲಿ. ಈ ನಾಟಕವನ್ನು ಹಬೀಬ್ ಸ್ವತಃ ಬರೆದು ನಿರ್ಮಿಸಿದ್ದರು. ಇದಾಗಿದ್ದು ೧೯೫೪ರಲ್ಲಿ, ದೆಹಲಿಯಲ್ಲಿ. ಹಬೀಬ್ ಅವರು ದೆಹಲಿಯ ರಂಗಭೂಮಿಯನ್ನು ಪ್ರವೇಶಿಸಿದ ಕಾಲದಲ್ಲಿ ಅಲ್ಲಿ ಹವ್ಯಾಸೀ ಮತ್ತು ಕಾಲೇಜ್ ರಂಗಭೂಮಿ ಮತ್ತು ಆಂಗ್ಲ ರಂಗಭೂಮಿಯು ಉಚ್ಛ್ರಾಯದಲ್ಲಿ ಇತ್ತು. ಇವರೆಲ್ಲರೂ ಪಾಶ್ಚಾತ್ಯ ರಂಗಭೂಮಿಯ ಮಾದರಿಗಳನ್ನೇ ತಮ್ಮ ನಾಟಕದಲ್ಲಿಯೂ ಬಳಸುತ್ತಾ ಇದ್ದರು. ಇವರೆಲ್ಲರ ರಂಗಭೂಮಿಯನ್ನು ಭಾರತೀಯ ಮನಸ್ಸುಗಳಿಗೆ ಒಗ್ಗಿಸುವ ಪ್ರಯತ್ನವೂ ಇರಲಿಲ್ಲ. ಹಾಗಾಗಿ ಇವರ ನಾಟಕಗಳಲ್ಲಿನ ವಿವರಗಳೊಂದಿಗೆ ಭಾರತೀಯ ಪ್ರೇಕ್ಷಕರು ತೊಡಗಿಕೊಳ್ಳುವುದು ಸಹ ಸಾಧ್ಯವಾಗುತ್ತಾ ಇರಲಿಲ್ಲ. ಇಂತಹ ಸಂದರ್ಭದಲ್ಲಿ, ಆ ಕಾಲದ ಸಮಕಾಲೀನ ರಂಗಭೂಮಿಗೆ ವೈರುಧ್ಯ ಎಂಬಂತೆ ಹಬೀಬ್ ತನ್ವೀರ್ ತಮ್ಮ ‘ಅಗ್ರಾಬಜಾರ್’ ಸಿದ್ಧಪಡಿಸಿದರು. ಈ ನಾಟಕದ ಸ್ವರೂಪ, ವಸ್ತು ಮತ್ತು ಅನುಭವವು ಆವರೆಗೆ ದೆಹಲಿಯ ರಂಗಭೂಮಿ ಪ್ರೇಕ್ಷಕರು ಎಂದೂ ನೊಡದೆ ಇದ್ದಂತಹ ವಾತವರಣವನ್ನು ಒದಗಿಸಿದವು.
ಈ ನಾಟಕವು ೧೮ನೇ ಶತಮಾನದ ಸೂಫಿ ತತ್ವಜ್ಞಾನಿ ನಜೀರ್ ಅಹಮದಬಾದೀ ಅವರ ಕತೆಯೊಂದನ್ನ ಆಧರಿಸಿತ್ತು. ನಜೀರ್ ಅಹಮದಬಾದಿಯವರ ಕತೆಗಳು ಸಾಮಾನ್ಯ ಜನರ ದೈನಂದಿನ ಬದುಕನ್ನೇ ಇಟ್ಟುಕೊಂಡು, ಅವರದ್ದೇ ನುಡಿಗಟ್ಟಲ್ಲಿ ಬರೆದಂತಹವು. ಈ ಕತೆಗಳಲ್ಲಿ ಸಾಂಪ್ರದಾಯಿಕವಾದ ಶಿಷ್ಟತೆಯಾಗಲೀ, ಅಲ್ಲಿರುವಂತಹ ರೂಪಕಗಳ ಬಳಕೆಯಾಗಲಿ ಇರಲಿಲ್ಲ. ಹಬೀಬ್ ತನ್ವೀರ್ ದೆಹಲಿಯ ಬೀದಿಯಲ್ಲಿದ್ದ ಜನಗಳನ್ನ ಮತ್ತು ಆ ವರೆಗೆ ರಂಗಭೂಮಿಯನ್ನೇ ಪ್ರವೇಶಿಸಿಲ್ಲದಂತಹ ಹೊಸಬರನ್ನ ಮತ್ತು ಹತ್ತಿರದ ಓಕ್ಲಾ ಎಂಬ ಹಳ್ಳಿಯ ಜನರನ್ನು ಬಳಸಿ ‘ಅಗ್ರಾಬಜಾರ್’ ಸಿದ್ಧಗೊಳಿಸಿದರು. ಆ ಕಾಲಕ್ಕೆ ಅದೊಂದು ಕ್ರಾಂತೀಕಾರಿ ಪ್ರಯೋಗವಾಗಿತ್ತು. ಇದಲ್ಲದೆ, ಆ ಕಾಲದ ರಂಗಭೂಮಿಯಲ್ಲಿದ್ದ ಬಾಕ್ಸ್ ಸೆಟ್ ಡ್ರಾಯಿಂಗ್ ರೂಂ ವಾತಾವರಣಕ್ಕೆ ಬದಲಾಗಿ, ಹಬೀಬ್ ತನ್ವೀರ್ ತಮ್ಮ ನಾಟಕವನ್ನು ಮಾರುಕಟ್ಟೆಯ ನಡುವೆಯೇ ನಡೆಯುವಂತೆ ಯೋಜಿಸಿದ್ದರು. ಮಾರುಕಟ್ಟೆಯಲ್ಲಿನ ಎಲ್ಲಾ ಶಬ್ದಗಳನ್ನ – ಕಾಕುಗಳನ್ನ ಹಬೀಬ್ ತನ್ವೀರ್ ಬಳಸಿದ್ದರು. ಮಾರುಕಟ್ಟೆಯ ಎಲ್ಲಾ ಗೊಂದಲಗಳ ನಡುವೆ ಇರಬಹುದಾದ ಸಾಮರಸ್ಯವನ್ನು ಮತ್ತು ಸಮಕಾಲೀನ ರಾಜಕೀಯ ಹಾಗೂ ಸಾಮಾಜಿಕ ವಿವರಗಳನ್ನು ಯಥಾವತ್ತಾಗಿ ಕಟ್ಟಿಕೊಡಲು ಹಬೀಬ್ ತನ್ವೀರ್ ಪ್ರಯತ್ನಿಸಿದ್ದರು. ಈ ನಾಟಕವನ್ನು ಕುರಿತು ಮಾತಾಡುತ್ತಾ ಮಿಖೈಲ್ ಬಕ್ತೀನ್ ಅವರು ‘ಮಾರುಕಟ್ಟೆಯಲ್ಲಿನ ಸಂಸ್ಕೃತಿಗಳ ಅನಾವರಣ’ ಎಂಬ ಮಾತನ್ನ ಹೇಳುತ್ತಾರೆ. ಹಬೀಬ್ ತನ್ವೀರ್ ಅವರ ಪ್ರಯೋಗದ ಯಶಸ್ಸಿಗೆ ಕಾರಣವಾದ್ದೇ ಈ ಅನಾವರಣದ ಪ್ರಕ್ರಿಯೆ. ಹಬೀಬ್ ತನ್ವೀರ್ ಅವರು ಸ್ವತಃ ‘ಅಗ್ರಾಬಜಾರ್’ ಬಗ್ಗೆ ಮಾತಾಡುತ್ತಾ ‘ಅದು ಮಾರುಕಟ್ಟೆಯಲ್ಲಿಯೇ ಬದುಕುವವರ ಉತ್ಸವದ ಉತ್ಸಾಹ ಈ ನಾಟಕದ ತಿರುಳು’ ಎಂದಿದ್ದರು. ಅಂತೆಯೇ ಹಬೀಬ್ ಅವರ ಈ ಪ್ರಯತ್ನವೂ ಎಲ್ಲಾ ಕಾಲಕ್ಕೂ ನೆನಪಲ್ಲುಳಿಯುವ ಒಂದು ರಂಗಪ್ರಯೋಗವಾಯಿತು.
ಹಬೀಬ್ ತನ್ವೀರ್ ಅವರ ಕಲಾಭಿವ್ಯಕ್ತಿಯ ಎರಡು ಪ್ರಧಾನ ಅಂಶಗಳು ಎಂದರೆ ಜನಪ್ರಿಯ ಸಂಸ್ಕೃತಿಯಲ್ಲಿನ ವೈರುಧ್ಯಗಳನ್ನು ಕಲಾತ್ಮಕವಾಗಿ ಎದುರಾಗಿಸುವುದು ಹಾಗೂ ಬ್ರೆಕ್ಟ್‌ನ ಹಾಗೆ ನಾಟಕದ ಭಾಗವಾಗಿಯೇ ಸಂಗೀತವನ್ನು ಬಳಸುವುದು. ಇವರೆಡರ ಸಮಾಗಮವು ತನ್ವೀರ್ ಅವರ ‘ಅಗ್ರಾಬಜಾರ್’ನಲ್ಲಿಯೇ ಆಗಿತ್ತು.
ಈ ನಾಟಕದ ಪ್ರದರ್ಶನವಾದೊಡನೆ ಹಬೀಬ್ ತನ್ವೀರ್ ಇಂಗ್ಲೆಂಡ್ಗೆ ಹೋಗುತ್ತಾರೆ. ರಾಯಲ್ ಅಕಾಡೆಮಿ ಆಫ್ ಡ್ರಾಮೆಟಿಕ್ ಆರ‍್ಟ್ಸ್ (ರಾಡಾ) ಮತ್ತು ಬ್ರಿಸ್ಟಲ್‌ನ ಓಲ್ಡ್‌ವಿಕ್ ಥಿಯೇಟರ್ ಸ್ಕೂಲ್‌ನಲ್ಲಿ ಮೂರು ವರ್ಷಗಳ ರಂಗಭೂಮಿಯ ಅಭ್ಯಾಸ ಮಾಡುತ್ತಾರೆ. ಇದೇ ಸಮಯದಲ್ಲಿ ಯೂರೋಪಿನಾದ್ಯಂತ ರಂಗಾಭ್ಯಾಸಕ್ಕಾಗಿಯೇ ಸಂಚಾರ ಮಾಡುತ್ತಾರೆ. ೧೯೫೬ರಲ್ಲಿ ಸುಮಾರು ಆರು ತಿಂಗಳ ಕಾಲ ಬರ್ಲಿನ್‌ನಲ್ಲಿಯೇ ಇದ್ದು ಬರ್ಟೊಲ್ಟ್ ಬ್ರೆಕ್ಟ್‌ನ ಅನೇಕ ನಾಟಕಗಳನ್ನು ನೋಡುತ್ತಾರೆ. ಇದು ಹಬೀಬ್ ತನ್ವೀರ‍್ಗೆ ಬ್ರೆಕ್ಟ್ ಜೊತೆಗೆ ಮೊದಲ ಅನುಸಂಧಾನ. ಈ ಭೇಟಿಯ ಪರಿಣಾಮವು ಹಬೀಬ್ ಮೇಲೆ ರಾಡಾದ ಪಠ್ಯಗಳಿಗಿಂತ ಹೆಚ್ಚಾಯಿತು. ನಂತರ ಆತ ಭಾರತಕ್ಕೆ ಹಿಂದಿರುಗಿದ ಕೂಡಲೇ ತಾನು ಇಂಗ್ಲೆಂಡಿನಲ್ಲಿ ಕಲಿತದ್ದನ್ನು ಮರೆಯಲು ಪ್ರಯತ್ನಿಸುತ್ತಾರೆ. ಇದರಿಂದಾಗಿ ಆ ವರೆಗೆ ಬ್ರಿಟಿಷರಿಂದ ಕಲಿತು ಬಂದಿದ್ದ ರಂಗಕರ್ತರಿಗೆ ವಿರುದ್ಧವೆನಿಸುವ ನೆಲೆಯಲ್ಲಿಯೇ ಕೆಲಸ ಮಾಡಲು ಆರಂಭಿಸುತ್ತಾರೆ. ನಮ್ಮದೇ ಸಾಂಸ್ಕೃತಿಕ ವಿವರಗಳು ಮತ್ತು ಸಾಂಪ್ರದಾಯಿಕ ವಿವರಗಳ ನಡುವೆ ಅರಳದ ರಂಗಭೂಮಿಯು ಬದುಕಿದ್ದೂ ಸತ್ತಂತೆ ಎಂದು ಹಬೀಬ್ ತನ್ವೀರ್ ನಂಬಿದ್ದರು.
ಇಂತಹ ನಂಬಿಕೆಯ ಪರಿಣಾಮವಾಗಿ ಆ ವರೆಗೆ ರಂಗಭೂಮಿಯನ್ನು ಆವರಿಸಿಕೊಂಡಿದ್ದ ವಸಾಹತುಷಾಹಿ ಮನಸ್ಥಿತಿಯನ್ನು ಧಿಕ್ಕರಿಸುವುದು ಹಬೀಬ್‌ಗೆ ಸಾಧ್ಯವಾಯಿತು. ಹಬೀಬ್ ತನ್ವೀರ್ ಅವರು ಭಾರತೀಯ ಮೂಲದಲ್ಲಿಯೇ ತಮ್ಮ ರಂಗತಂತ್ರವೊಂದನ್ನು ಹುಡುಕಲು ಆರಂಭಿಸಿದರು. ಈ ಹುಡುಕಾಟದ ಹಾದಿಯಲ್ಲಿ ಎರಡು ಘಟ್ಟಗಳನ್ನು ದಾಟಿದ ನಂತರ ರಂಗನಿರ‍್ದೇಶಕ ಹಬೀಬ್ ತನ್ವೀರ್ ತಮ್ಮದೇ ಆದ ಒಂದು ವಿಶಿಷ್ಟ ತಂತ್ರವನ್ನು ರೂಢಿಸಿಕೊಳ್ಳಲು ಸಾಧ್ಯವಾಯಿತು. ಮೊದಲಿಗೆ ಹಬೀಬ್ ತನ್ವೀರ್ ಅವರು ಚತ್ತೀಸ್‌ಘಡ್‌ನ ಜಾನಪದ ಹಾಗೂ ಸಾಂಪ್ರದಾಯಿಕ ಕಲೆಗಳನ್ನ ಅಭ್ಯಾಸ ಮಾಡುವವರ ಜೊತೆಗೆ ದುಡಿಯಲಾರಂಭಿಸಿದರು. ಈ ಹಂತದಲ್ಲಿ ಅವರು ನಿರ‍್ದೇಶಿಸಿದ ನಾಟಕ ಶೂದ್ರಕನ ‘ಮೃಚ್ಛಕಟಿಕಾ’ದ ಅನುವಾದವಾಗಿದ್ದ ‘ಮಿಟ್ಟೀಕಾ ಗಾಡಿ’. ಈ ನಾಟಕದಲ್ಲಿ ಚತ್ತೀಸ್‌ಗಡ್‌ನ ಆರು ಜನ ಜಾನಪದ ಕಲಾವಿದರನ್ನ ಪಾತ್ರಧಾರಿಯನ್ನಾಗಿ ಬಳಸಿದ್ದರು. ಅದರೊಂದಿಗೆ ಜಾನಪದ ಕಲೆಗಳಲ್ಲಿದ್ದ ರಂಗಾಭ್ಯಾಸ ಸಂಪ್ರದಾಯವನ್ನು ಸಹ ಯಥಾವತ್ ಆಗಿ ಬಳಸಲಾಗಿತ್ತು. ಇದರಿಂದಾಗಿ ಇಡಿಯ ನಾಟಕಕ್ಕೆ ಸಂಪೂರ್ಣ ಭಾರತೀಯ ಎನಿಸುವ ಸ್ವರೂಪವೊಂದು ದಕ್ಕಿತ್ತು. ಇಂದಿಗೂ ಆಗೀಗ ಜಾನಪದ ಕಲಾವಿದರನ್ನೇ ಇಟ್ಟುಕೊಂಡು ಪುನರ್ ಪ್ರದರ್ಶನ ಆಗುತ್ತಿರುವ ಈ ನಾಟಕವನ್ನು ಭಾರತದ ಪುರಾತನ ನಾಟಕವೊಂದರ ಶ್ರೇಷ್ಟ ಅವತರಣಿಕೆಯೆಂದು ಇಂದಿಗೂ ಗುರುತಿಸಲಾಗುತ್ತದೆ.
ಸಂಸ್ಕೃತ ನಾಟಕಗಳಲ್ಲಿರುವ ತಿರುಳನ್ನು ಹಿಡಿಯುವುದಕ್ಕೆ ನಮ್ಮ ಜಾನಪದ ಕಲೆಗಳಲ್ಲಿ ಮಾತ್ರ ಸ್ಪಷ್ಟ ಶಕ್ತಿಯಿದೆ ಎಂಬುದನ್ನು ಹಬೀಬ್ ತನ್ವೀರ್ ‘ಮಿಟ್ಟೀಕಾಗಾಡಿ’ ಪ್ರಯೋಗದಿಂದ ಕಂಡುಕೊಂಡರು. ಸಂಸ್ಕೃತ ನಾಟಕಗಳಲ್ಲಿರುವ ಕಾಲ ಲಂಘನ ಮತ್ತು ಸ್ಥಳ ಲಂಘನಗಳನ್ನು ಸುಲಭವಾಗಿ ಸಾಧಿಸಬಹುದಾದ ಅನೇಕ ಸುಲಭೋಪಾಯಗಳು ಭಾರತೀಯ ಜಾನಪದ ಕಲೆಗಳಲ್ಲಿವೆ ಎಂಬುದನ್ನು ಹಬೀಬ್ ತನ್ವೀರ್ ಆಗಾಗ ಹೇಳುತ್ತಲೇ ಇದ್ದರು. ‘ಮಿಟ್ಟೀಕಾಗಾಡಿ’ ಮತ್ತು ಆನಂತರ ಸಿದ್ಧಪಡಿಸಿದ ವಿಶಾಖದತ್ತನ ‘ಮುದ್ರಾರಾಕ್ಷಸ’ ನಾಟಕಗಳಲ್ಲಿ ಹಬೀಬ್ ತನ್ವೀರ್ ಅವರ ಹೇಳಿಕೆಯನ್ನು ರಂಗದ ಮೇಲೆಯೇ ಕಾಣಬಹುದು. ಈ ಮಾತಿಗೆ ಉದಾಹರಣೆಯಾಗಿ ಮಿಟ್ಟೀಕಾಗಾಡಿಯ ಒಂದು ದೃಶ್ಯವನ್ನು ನೆನಪಿಸಿಕೊಳ್ಳಬಹುದು. ಒಬ್ಬ ಸೇನಾಧಿಪತಿಯು ತನ್ನ ಸೇವಕನಿಗೆ ಉದ್ಯಾನವನದಲ್ಲಿ ಯಾವುದಾದರೂ ಹೆಣ ಬಿದ್ದಿದೆಯೇ ನೋಡಿ ಬಾ ಎನ್ನುತ್ತಾನೆ. ಆ ಸೈನಿಕ ವೇದಿಕೆಯನ್ನು ಒಂದು ಸುತ್ತು ಸುತ್ತಿ, ಸೇನಾಧಿಪತಿಯ ಬಳಿಗೆ ಬಂದು ಉದ್ಯಾನವನದಲ್ಲಿ ಯಾವ ಹೆಣವೂ ಇಲ್ಲ ಎನ್ನುತ್ತಾನೆ. ಇದು ಸ್ಥಳ ಮತ್ತು ಕಾಲೈಕ್ಯದ ಲಂಘನಕ್ಕೆ ಬಹುದೊಡ್ಡ ಉದಾಹರಣೆಯೂ ಹೌದು.
ಹಬೀಬ್ ತನ್ವೀರ್ ಮತ್ತು ಆತನ ಮಡದಿ ಮೋನಿಕಾ ಮಿಶ್ರಾ ೧೯೫೯ರಲ್ಲಿ ನಯಾ ಥಿಯೇಟರ್ ಎಂಬ ತಮ್ಮದೇ ರಂಗತಂಡವೊಂದನ್ನು ಆರಂಭಿಸಿದರು. ಈ ತಂಡದಿಂದ ಅನೇಕ ಆಧುನಿಕ ಮತ್ತು ಸಂಸ್ಕೃತ ನಾಟಕಗಳನ್ನು ಭಾರತ ಹಾಗೂ ಯೂರೋಪ್‌ಗಳಲ್ಲಿ ಪ್ರದರ್ಶಿಸಿದರು. ಈ ನಾಟಕಗಳಲ್ಲಿ ನಗರದ ಹಿನ್ನೆಲಯ ನಟರುಗಳು ಹೆಚ್ಚಾಗಿದ್ದರಾದರೂ ಹಬೀಬ್ ತನ್ವೀರ್ ಅವರಿಗೆ ಜಾನಪದ ಕಲಾವಿದರ ಬಗ್ಗೆ ಇದ್ದ ವಿಶೇಷ ಆಸ್ಥೆ ಅವರ ಕಡೆಯ ದಿನಗಳವರೆಗೂ ಹಾಗೆಯೇ ಇತ್ತು. ೧೯೭೦ರ ಸುಮಾರಿಗೆ ಹಬೀಬ್ ಅವರ ಈ ಜಾನಪದ ಕಲಾವಿದರನ್ನು ಕುರಿತ ಪ್ರೀತಿಗೆ ಹೊಸ ಅವಕಾಶ ದೊರೆಯಿತು.
ಆ ಹೊತ್ತಿಗೆ ಹಬೀಬ್ ತನ್ವೀರ್ ಅವರಿಗೆ ತಾವು ಜಾನಪದ ಕಲಾವಿದರೊಂದಿಗೆ ಮಾಡುತ್ತಿದ್ದ ರಂಗಪ್ರಯೋಗಗಳು ಸರಿಯಾಗಿಲ್ಲ ಎನಿಸುತ್ತಿತ್ತು. ಅದರಲ್ಲಿ ತನ್ವೀರ್ ಎರಡು ಪ್ರಧಾನ ‘ತಪ್ಪು’ಗಳನ್ನು ಗುರುತಿಸಿದ್ದರು. ರಂಗಪ್ರದರ್ಶನವನ್ನು ಮೊದಲೇ ತಾಲೀಮಿನಲ್ಲಿ ಬ್ಲಾಕಿಂಗ್ ಮಾಡುವುದು ಮತ್ತು ಬೆಳಕಿನ ವಿನ್ಯಾಸವನ್ನು ಮೊದಲೇ ಸಿದ್ಧಪಡಿಸಿಕೊಂಡು ರಂಗಪ್ರದರ್ಶನ ಮಾಡುವುದು ಮೊದಲ ತಪ್ಪು ಎಂದು ಅವರಿಗನ್ನಿಸಿತ್ತು. ಹಳ್ಳಿಗಾಡಿನಿಂದ ಬಂದ ಅನೇಕ ಕಲಾವಿದರು ಅನಕ್ಷರಸ್ಥರಾಗಿದ್ದರು. ಆದ್ದರಿಂದ ಮೊದಲೇ ಸಿದ್ಧಪಡಿಸಲಾದ ಬ್ಲಾಕಿಂಗ್‌ಗೆ ಹೊಂದಿಕೊಳ್ಳುವುದು ಮತ್ತು ಲಿಖಿತ ಅಕ್ಷರವನ್ನು ಓದುವುದು ಅವರಿಗೆ ಕಷ್ಟವಾಗುತ್ತಿತ್ತು. ಹಾಗಾಗಿ ಅವರು ಯಾವ ಹಂತದಲ್ಲಿ ಎತ್ತ ಕಡೆಗೆ ಚಲಿಸಬೇಕು, ಎಲ್ಲಿ ನಿಷ್ಕ್ರಮಿಸಿಬೇಕು ಎಂಬುದನ್ನು ನೆನಪಿಸಿಕೊಳ್ಳುವುದರಲ್ಲಿ ಅಭಿನಯ ಹಾಳಾಗುತ್ತಿತ್ತು. ಇದಲ್ಲದೆ ಹಿಂದಿಯ ನಾಟಕಗಳನ್ನು ಈ ಕಲಾವಿದರಿಂದ ಸಿದ್ಧಪಡಿಸುವಾಗ ನಾಗರೀಕ ಹಿಮದಿಯ ಮಾತುಗಳನ್ನು ಇದೇ ಜಾನಪದ ಕಲಾವಿದರಿಂದ ಹೇಳಿಸಬೇಕಾಗುತ್ತಿತ್ತು. ಈ ಭಾಷೆಗೆ ಹೊಂದಿಕೊಳ್ಳದ ಜಾನಪದ ಕಲಾವಿದರಿಗೆ ಮಾತು ಎಂಬುದೇ ತೊಡಕಾಗುತ್ತಿತ್ತು. ಇದರಿಂದಾಗಿಯೂ ಅವರ ಅಭಿನಯಕ್ಕೆ ಲಗಾಮು ಬೀಳುತ್ತಿತ್ತು. ಇದು ಎರಡನೆಯ ತಪ್ಪು ಎಂದು ಹಬೀಬ್ ಭಾವಿಸಿದ್ದರು.
ಈ ತಪ್ಪುಗಳಿಂದ ತಪ್ಪಿಸಿಕೊಳ್ಳಲೆಂಬಂತೆ ಆವರೆಗೆ ತಾವು ಸಾಗಿ ಬಂದ ನಾಟಕ ಕಟ್ಟುವ ಕ್ರಮವನ್ನು ಬಿಟ್ಟು ಹೊಸದೊಂದು ಮಾರ್ಗವನ್ನು ಹಬೀಬ್ ಹುಡುಕಿಕೊಂಡರು. ಈ ಮಾರ್ಗದಲ್ಲಿ ಸ್ಫೂರ್ತ ವಿಸ್ತರಣೆಗೆ (ಇಂಪ್ರೂವೈಸೇಷನ್) ಹೆಚ್ಚಿನ ಅವಕಾಶವಿತ್ತು. ಅದಲ್ಲದೆ ಕಲಾವಿದರು ತಮ್ಮದೇ ಭಾಷೆಯಲ್ಲಿ ಮಾತಾಡುವ ಅವಕಾಶವನ್ನು ಸಹ ಹಬೀಬ್ ತನ್ವೀರ್ ಒದಗಿಸಿದರು. ೧೯೭೦-೭೩ರ ವರೆಗೆ ಇಂತಹ ಹೊಸ ಪ್ರಯೋಗಗಳನ್ನು ಮಾಡಿದರು. ಈ ಅವಧಿಯಲ್ಲಿ ಗ್ರಾಮೀಣ ಕಲಾವಿದರೊಂದಿಗೆ ಅತಿಹೆಚ್ಚು ದುಡಿದ ಹಬೀಬ್ ತನ್ವೀರ್ ಅವರೆಲ್ಲರಿಗೂ ತಮ್ಮದೇ ಆದ ದೇಸಿ ನುಡಿಗಟ್ಟಲ್ಲಿ ಮಾತಾಡುವ ಹೊಸ ಶೈಲಿಯ ರಂಗಭೂಮಿಯನ್ನು ಪ್ರಯತ್ನಿಸಿದರು. ಇದಲ್ಲದೆ ಗ್ರಾಮೀಣ ಕಲಾವಿದರು ಅದಾಗಲೇ ಪರಿಣತಿ ಪಡೆದಿದ್ದ ತಮ್ಮದೇ ಜಾನಪದೀಯ ಶೈಲಿಯನ್ನ ಅವರ ಇಚ್ಛೆಯಂತೆಯೇ ಪ್ರಯೋಗಿಸುವ ಅವಕಾಶವನ್ನು ನೀಡಿದರು. ಈ ಹಾದಿಯಲ್ಲಿ ದೇವಸ್ಥಾನಗಳಲ್ಲಿ ಬಳಕೆಯಾಗುವ ಸಂಪ್ರದಾಯಗಳಿಂದ ಹಿಡಿದು ಪಂಡ್ವಾನಿ ಎಂದೇ ಪ್ರಸಿದ್ಧವಾದ ಜಾನಪದ ಕಲೆಯನ್ನು ಸಹ ವೇದಿಕೆಯ ಮೇಲೆ ತರಲು ಪ್ರಯತ್ನಿಸಿದರು.
೧೯೭೨ರಲ್ಲಿ ರಾಯಪುರದಲ್ಲಿಯೇ ತನ್ವೀರ್ ನಡೆಸಿದ ‘ನಾಚ ಜಾನಪದ ಕಲೆ’ಯ ಶಿಬಿರವೊಂದರಲ್ಲಿ ಮತ್ತೊಂದು ಹೊಸಬಗೆಯ ಸಾಧ್ಯತೆ ಹುಟ್ಟುಕೊಂಡಿತು. ಈ ಶಿಬಿರದಲ್ಲಿ ದೆಹಲಿ, ಕಲ್ಕತ್ತಾ ಮುಂತಾದ ನಗರಗಳಿಂದ ಬಂದಿದ್ದ ಕಲಾವಿದರಲ್ಲದೆ ನೂರಕ್ಕೂ ಹೆಚ್ಚು ಜಾನಪದೀಯ ಕಲಾವಿದರು ಭಾಗವಹಿಸಿದ್ದರು. ಈ ಶಿಬಿರದಲ್ಲಿ ನಾಚಾ ಜಾನಪದ ಕಲೆಯಿಂದಾಯ್ದ ಮೂರು ನಾಟಕಗಳನ್ನು ಆಯ್ದುಕೊಂಡು, ಅವುಗಳನ್ನು ಒಂದರೊಳಗಿನ್ನೊಂದು ಕತೆ ಎಂಬಂತೆ ಮಿಶ್ರಣ ಮಾಡಿ ಹೊಸದೊಂದು ನಾಟಕ ಸಿದ್ಧಪಡಿಸಲಾಯಿತು. ಕೆಲವು ಸಣ್ಣ ದೃಶ್ಯಗಳನ್ನು ಬರೆದುಕೊಂಡು ವಿಭಿನ್ನ ಕತೆಗಳಿಗೆ ಕೊಂಡಿಗಳನ್ನು ಸೃಷ್ಟಿಸಲಾಗಿತ್ತು. ಆವರೆಗೆ ಭಾರತೀಯ ರಂಗಭೂಮಿಯಲ್ಲಿ ಬಳಸದೆ ಉಳಿದಿದ್ದ ಅನೇಕ ಹಾಡು, ಹಾಡುಗಾರಿಕೆಯ ಶೈಲಿಯನ್ನ ಬಳಸಿಕೊಂಡು ‘ಗಾಂವ್ ಕಾ ನಾಮ್ ಸಸುರಾಲ್, ಮೋರ್ ನಾಮ್ ದಾಮಾದ್’ ಎಂಬ ನಾಟಕವನ್ನು ಸಿದ್ಧಪಡಿಸಲಾಯಿತು.
ಈ ನಾಟಕವು ಹಬೀಬ್ ತನ್ವೀರ್ ಅವರ ಪ್ರಯೋಗಗಳಲ್ಲಿ ತುಂಬಾ ವಿಶಿಷ್ಟವೆನಿಸುವ ಬೆಳವಣಿಗೆಯಾಗಿತ್ತು. ಈ ನಾಟಕವು ಚತ್ತೀಸ್‌ಗಡ್‌ನಲ್ಲಿ ಮಾತ್ರವಲ್ಲ ದೇಶದಾದದ್ಯಂತ ಜನಪ್ರಿಯವಾಯಿತು. ಹಬೀಬ್ ತನ್ವೀರ್ ಈ ನಾಟಕದ ಮೂಲಕ ಹೊಸದೊಂದು ಲಂಘನವನ್ನು ಸಾಧಿಸಿದ್ದರು. ಇಷ್ಟೂ ಕಾಲ ತಾನು ಹುಡುಕುತ್ತಿದ್ದ ರಂಗ ಶೈಲಿಯೊಂದು ಈ ನಾಟಕದ ಮೂಲಕ ದೊರೆಯಿತು ಎಂಬ ಧನ್ಯತೆಯ ಭಾವ ಹಬೀಬ್ ತನ್ವೀರ‍್ಗೆ ಸಿಕ್ಕಿತ್ತು. ೧೯೭೩ರಲ್ಲಿ ಆದ ಈ ರಂಗ ಶಿಬಿರದ ನಂತರ ಕೇವಲ ಸ್ಫೂರ್ತ ವಿಸ್ತರಣೆಯಿಂದಲೇ ನಾಟಕಗಳನ್ನು ಕಟ್ಟುವ ಶಕ್ತಿಯು ಹಬೀಬ್ ತನ್ವೀರ್‌ಗೆ ಸಿದ್ಧಿಸಿತ್ತು. ಹಬೀಬ್ ಜೀವನದ ಸರ್ವಶ್ರೇಷ್ಟ ಕೃತಿಯೆಂದೆನಿಸಿಕೊಂಡಿರುವ ‘ಚರಣದಾಸ ಚೋರ್’ ಸಿದ್ಧವಾಗಿದ್ದು ಇದೇ ಅವಧಿಯಲ್ಲಿ. ಈ ನಾಟಕದಲ್ಲಿ ಹಬೀಬ್ ತನ್ವೀರ್ ಅವರ ರಂಗಶೈಲಿ ಪಕ್ವವಾಯಿತು ಎನ್ನಬಹುದು.
ಹಬೀಬ್ ತನ್ವೀರ್‌ರ ನಯಾ ಥಿಯೇಟರ್ ಆನಂತರ ಪೂರ್ಣಪ್ರಮಾಣದಲ್ಲಿ ಜಾನಪದ ರಂಗಭೂಮಿಯಲ್ಲಿ ತೊಡಗಿತು. ಆದರೂ ಆಗೀಗ ಹಬೀಬ್ ತನ್ವೀರ್ ಇತರ ತಂಡಗಳಿಗೆ ನಗರ ಕೇಂದ್ರೀತ ನಟವರ್ಗದವರಿಗೆ ಬೇರೆಯ ನಾಟಕಗಳನ್ನೂ ಮಾಡಿಸುತ್ತಿದ್ದರು. ಹಾಗೆ ಎನ್‌ಎಸ್‌ಡಿ ರೆಪರ್ಟರಿಗೆ ಮ್ಯಾಕ್ಸಿಂ ಗಾರ್ಕಿಯ ‘ಎನಿಮೀಸ್’ ಕೃತಿಯನ್ನು ‘ದುಷ್ಮನ್’ ಎಂಬ ಹೆಸರಿನಲ್ಲಿ ನಿರ‍್ದೇಶಿಸಿದರು. ಶ್ರೀರಾಂ ಸೆಂಟರ್‌ನ ರೆಪರ್ಟರಿಗೆ ಅಸ್ಗರ್ ವಜಾಹತಿ ಅವರ ‘ಜಿಸ್ನೆ ಲಾಹೋರ್ ನಹಿ ದೇಖಾ ವೋ ಜಾಮಾಯಿ ನಹಿ’ ಸಿದ್ಧಪಡಿಸಿದರು. ಇವೆರಡು ನಾಟಕಗಳಲ್ಲಿ ಈಗಾಗಲೇ ಹಬೀಬ್ ತನ್ವೀರ್ ಬೆಳೆಸಿಕೊಂಡಿದ್ದ ತಮ್ಮದೇ ಆದ ಛಾಪನ್ನು ಒತ್ತಿದ್ದರು. ಇಷ್ಟಾದರೂ ಹಬೀಬ್ ತನ್ವೀರ್ ಅವರ ರಂಗಭೂಮಿಯನ್ನ ಜಾನಪದ ರಂಗಭೂಮಿ ಎನ್ನಲಾಗದು. ಆತ ಸಂಕೀರ್ಣ ವ್ಯಕ್ತಿತ್ವದ ನಗರ ಕಲಾವಿದರಾಗಿದ್ದರು. ಸಮಕಾಲೀನ ಸಾಮಾಜಿಕ ಮತ್ತು ರಾಜಕೀಯ ಪಲ್ಲಟಗಳನ್ನು ಕುರಿತಂತೆ ಅತೀವ ಕಾಳಜಿ ಹಬೀಬ್ ತನ್ವೀರ್ ಅವರಿಗಿತ್ತು. ಜಾನಪದ ಮತ್ತು ಸಾಂಪ್ರದಾಯಿಕ ರಂಗಭೂಮಿಯನ್ನು ಹಬೀಬ್ ತನ್ವೀರ್ ಆಯ್ಕೆ ಮಾಡಿಕೊಂಡದ್ದು ಕೂಡ ಅತೀವ ಎಚ್ಚರಿಕೆಗಳ ಜೊತೆಗೆ. ಅವರಿಗಿದ್ದ ಎಡಪಂಥೀಯ ಆಲೋಚನೆಗಳಿಗೂ ಮತ್ತು ಜನಪ್ರಿಯ ಕಲೆಯ ಬಗ್ಗೆ ಅವರಿಗಿದ್ದ ನಿಲುವುಗಳಿಗೂ ನೇರ ಸಂಬಂಧವಿತ್ತು. ಅವರಿಗೆ ಅನಾರೋಗ್ಯ ಹೆಚ್ಚಾಗಿ ಓಡಾಟವೇ ಅಸಾಧ್ಯವಾದ ದಿನಗಳವರೆಗೆ ಹಬೀಬ್ ತನ್ವೀರ್ ಸಮಾಜವಾದೀ ಸಂಘಟನೆಗಳ ಜೊತೆಗೆ ನಿಕಟ ಸಂಪರ್ಕದಲ್ಲಿದ್ದರು. ಹೀಗಾಗಿ ಅವರು ಭಾರತದ ಶ್ರೀಸಾಮಾನ್ಯನ ಸಂಕಷ್ಟ ನಿವಾರಣೆಗೆ ಬದ್ಧರಾಗಿಯೇ ತಮ್ಮ ಸೃಜನಶೀಲ ಚಟುವಟಿಕೆ ನಡೆಸಿದರು. ಹಬೀಬ್ ತನ್ವೀರ್ ಅವರ ಎಲ್ಲಾ ನಾಟಕಗಳಲ್ಲಿಯೂ ಅವರಿಗೆ ಇದ್ದ ಸಾಮಾಜಿಕ ಬದ್ಧತೆ ಮತ್ತು ಜನಸಾಮಾನ್ಯರನ್ನ ಕುರಿತ ಕಾಳಜಿಯು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.
ಹಬೀಬ್ ತನ್ವೀರ್ ಅವರಿಗೆ ಜಾನಪದ ಕಲೆಗಳ ಜೊತೆಗೆ ಮೂಡಿದ್ದ ಅನುಸಂಧಾನದ ಕಾರಣವಾಗಿಯೇ ಅವರು ರೂಪಾಂತರಗೊಳಿಸಿ ನಿರ‍್ದೇಶಿಸಿದ ಷೇಕ್ಸ್‌ಪಿಯರ್‌ನ ‘ಮಿಡ್‌ಸಮ್ಮರ್ ನೈಟ್ ಡ್ರೀಮ್’ (ಕಾಮದೇವ್ ಕಾ ಆಪ್ನ, ಬಸಂತಿ ರಿತು ಕಾ ಸಪ್ನ) ಮತ್ತು ಬ್ರೆಕ್ಟ್‌ನ ‘ಗುಡ್ ವುಮನ್ ಆಫ್ ಸೆಜುವಾನ್’ (ಷಾಜಾಪುರ್ ಕಿ ಶಾಂತಿಬಾಯ್) ನಾಟಕಗಳು ಹಬೀಬ್‌ರದ್ದೇ ಎಂದು ಗುರುತಿಸಬಹುದಾದ ಸಂಗೀತಮಯ, ಉತ್ಸವರೂಪೀ ರಂಗಪ್ರಯೋಗಗಳಾದವು. ಹಬೀಬ್ ತನ್ವೀರ್ ಅವರ ‘ದೇಖ್ ರಹೇ ಹೇ ನೈನ್’ (ಸ್ಟೀಫನ್ ಜ್ವೈಗ್‌ನ ಸಣ್ಣ ಕತೆಯನ್ನಾಧರಿಸಿದ್ದು) ನಾಟಕದಲ್ಲಿಯಂತೂ ಜಾನಪದ ಸಂಗೀತ ಮತ್ತು ನೃತ್ಯಗಳ ಬಳಕೆ ಹಾಗೂ ಇಂಪ್ರೂವೈಸೇಷನ್ ಶೈಲಿಯೂ ಉಚ್ಛ್ರಾಯಕ್ಕೆ ತಲುಪಿತ್ತು. ಮೂಲಕತೆಯ ಸಂಕೀರ್ಣ ವಿವರಗಳನ್ನು ಜಾನಪದ ಕಲಾವಿದರನ್ನು ಬಳಸಿಕೊಂಡೇ ಮೂಡಿಸುವಲ್ಲಿ ಹಬೀಬ್ ತನ್ವೀರ್ ಸಫಲರಾಗಿದ್ದರು. ಆದರೆ ಮೂಲಕತೆಯೊಂದನ್ನು ನಾಟಕವಾಗಿಸುವಾಗ ಹಬೀಬ್ ತನ್ವೀರ್ ತಮ್ಮ ಕಲ್ಪನೆಯನ್ನು ಹರಿಯಬಿಟ್ಟು ಅನೇಕ ಹೊಸ ದೃಶ್ಯಗಳನ್ನ ಹಾಗೂ ಸನ್ನಿವೇಶಗಳನ್ನ ಸೃಷ್ಟಿಸಿದ್ದರು. ಹೀಗಾಗಿ ಈ ನಾಟಕದಲ್ಲಿ ಅಸಂಗತ, ಆಧ್ಯಾತ್ಮಿಕ ಮತ್ತು ಸಂಕೀರ್ಣ ಪ್ರತಿಮೆಗಳ ಕೊಲಾಜ್ ತಯಾರಾಗಿತ್ತು. ಯುದ್ಧ ಕಾಲದಲ್ಲಿ ಸಾಮಾನ್ಯ ಜನ ಅನುಭವಿಸುವ ಸಂಕಷ್ಟಗಳನ್ನು ಹೇಳುತ್ತಲೇ ಹಬೀಬ್ ತನ್ವೀರ್ ತಮ್ಮ ಯುದ್ಧವಿರೋಧಿ ನಿಲುವನ್ನು ಮತ್ತು ರಾಜಕೀಯ ಶಕ್ತಿಗಳು ಶ್ರೀಸಾಮಾನ್ಯರಿಗೆ ಸಿಕ್ಕು ಎಲ್ಲವೂ ಶಾಂತವಾಗಬೇಕು ಎಂಬ ವಾದವನ್ನು ಪ್ರತಿಪಾದಿಸಿದ್ದರು.
ತಮ್ಮ ತಂಡದಲ್ಲಿದ್ದ ಶಾಲೆಯನ್ನೇ ಕಂಡಿಲ್ಲದ, ಅಕ್ಷರಸ್ಥರಲ್ಲದ ಜಾನಪದ ಕಲಾವಿದರ ಜೊತೆಗೆ ಸ್ವತಃ ಅಕ್ಷರಸ್ಥರು, ಕವಿಗಳು, ಸಂಗೀತಗಾರರು, ನಿರ‍್ದೇಶಕರು ಆಗಿ ದುಡಿಯುವಾಗ ಹಬೀಬ್ ತನ್ವೀರ್ ಎಂದೂ ಹೈರಾರ‍್ಕಿಯನ್ನು ಸೃಷ್ಟಿಸಲಿಲ್ಲ. ಬದಲಿಗೆ ಎಲ್ಲಾ ಕಲಾವಿದರಿಗೂ ಮುಕ್ತವಾಗಿ ತೆರೆದುಕೊಳ್ಳುವ ಅವಕಾಶ ಒದಗಿಸಿದರು. ಹೀಗಾಗಿಯೇ ಅವರ ನಾಟಕಗಳಲ್ಲಿ ವಿಸ್ತೃತ ಸೆಟ್‌ಗಳ ಬಳಕೆಗಿಂತ ಕಲಾವಿದ ತನ್ನನ್ನು ತಾನು ಬಿಚ್ಚಿಟ್ಟುಕೊಳ್ಳಬಹುದಾದ ತೆರಪನ್ನು ಸೃಷ್ಟಿಸುತ್ತಾ ಇದ್ದರು. ಈ ಎಲ್ಲಾ ಕಾರಣಗಳಿಗಾಗಿಯೇ ಹಬೀಬ್ ತನ್ವೀರ್ ಅವರ ನಾಟಕಗಳು ಹೊಸತನವನ್ನು ಪಡೆಯುತ್ತಿದ್ದವು ಹಾಗೂ ಜನಪ್ರಿಯವಾಗುತ್ತಿದ್ದವು.
ಇಂತಹ ಅಪರೂಪದ ಕಲಾವಿದನೊಬ್ಬನನ್ನು ಕಳೆದುಕೊಂಡದ್ದು ಭಾರತೀಯ ರಂಗಭೂಮಿಗೆ ದೊಡ್ಡ ನಷ್ಟವೇ ಆದರೂ ಹಬೀಬ್ ಬಿಟು ಹೋಗಿರುವ ಪರಂಪರೆ ನಮ್ಮೊಂದಿಗೆ ಇದೆ. ಅತ್ಯಂತ ಪ್ರಜಾಪ್ರಭುತ್ವವಾದೀ ನಿಲುವುಗಳ ನಗರ-ಗ್ರಾಮೀಣ ಕಲೆಗಳ ಸಂಬಂಧ ಬೆಸೆಯುವ ಗುಣ ಹಬೀಬ್ ಬಿಟ್ಟುಹೋಗಿರುವ ಪರಂಪರೆಗೆ ಇದೆ. ಆ ಪರಂಪರೆಯನ್ನು ಉಳಿಸಿಕೊಂಡು ಹೋದರೂ ಸಾಕು ನಮ್ಮ ರಂಗಭೂಮಿಯು ಜೀವಂತವಾಗಿ ಇರುತ್ತದೆ.
* * *
ಆಕರಗಳು : ೧. ಸಮರ್ ಪತ್ರಿಕೆಯಲ್ಲಿ ಜಾವೇದ್ ಮಲ್ಲಿಕ್ ಬರೆದಿದ್ದ ಲೇಖನ, ೨. ಅಂತರ್ಜಾಲ ವಿಶ್ವಕೋಶ ವಿಕಿಪೀಡಿಯಾ, ೩. ದಿ ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯಲ್ಲಿ ಬಂದಿದ್ದ ಲೇಖನ, ೪. ಅಂತರ್ಜಾಲದಲ್ಲಿ ದೊರೆತ ಹಬೀಬ್ ತನ್ವೀರ್ ಕುರಿತ ಅನೇಕ ವಿವರಗಳು. ೫. ಹಂಪಿಯಲ್ಲಿ ಬಿ.ವಿ.ಕಾರಂತರು ನಡೆಸಿದ ರಂಗಚಿಂತನಾ ಶಿಬಿರದಲ್ಲಿ ಆಡಿದ ಮಾತುಗಳಿಂದ ಆಯ್ದ ಟಿಪ್ಪಣಿಗಳು

‍ಲೇಖಕರು avadhi

June 19, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ರಮಾಕಾಂತ್ ಆರ್ಯನ್‌ ಅವನು ಕಾಲ ಹೆಬ್ಬರಳ ತುದಿಯಲ್ಲಿ ವಿಶ್ವವನ್ನೇ ಪುಟಿಪುಟಿದು ಕುಣಿಸಿದವನು. ಫುಟ್ಬಾಲ್ ಅಂಗಳದಲ್ಲಿ ಅವನು ಓಡಿದ, ಓಡಾಡಿದ...

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

೧ ಪ್ರತಿಕ್ರಿಯೆ

  1. kaviswara shikaripura

    idarondige Suresharu Habeeb-da ravara kannada ranga -bhoomiyondigina sambandhada kuritu swalpa barediddare channagitthu… ottare lekhana habeeb-da ravara saakshya chithradanthe bhaasavagthide… dhanya-suresh..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: