ಹಳ್ಳಿಯ ಸಾಮ್ರಾಜ್ಯವೂ ಮತ್ತು ಗ್ರಾಮ ಸ್ವರಾಜ್ಯವೂ

ಬಾಲಾಜಿ ಕುಂಬಾರ

ರಾಜ್ಯದಲ್ಲಿ ಪಂಚಾಯ್ತಿ ಚುನಾವಣೆಯ ಕಾವು ಬಿರುಸಾಗಿ ನಡೆಯುತ್ತಿದೆ. ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಪ್ರಚಾರದ ಗುಂಗಿನಲ್ಲಿದ್ದಾರೆ. ಹಳ್ಳಿಗಳು ಈಗ ರಾಜಕೀಯ ಚುಟುವಟಿಕೆಗಳ ಕೇಂದ್ರಗಳಾಗಿ ಬದಲಾಗಿವೆ. ಹಳ್ಳಿ ಗಾದಿಗಾಗಿ ‘ಮಾಡು ಇಲ್ಲವೇ ಮಡಿ’ ಎನ್ನುವ ರಾಜಕೀಯ ಸಮರ ಎಲ್ಲೆಡೆ ಮೊಳಗುತ್ತಿದೆ. ಎಲ್ಲಾ ಚುನಾವಣೆಗಳಂತೆ ಈ ಚುನಾವಣೆಯಲ್ಲ, ಬೇರೆ ಎಲೆಕ್ಷನ್ ಸಂದರ್ಭದಲ್ಲಿ ಹಣ, ಹೆಂಡ, ಹಣಬಲ, ತೋಳ್ಬಲ ಧರ್ಮ, ಜಾತಿಗಳು ಮುಖ್ಯವಾದರೆ, ‘ಪಂಚಾಯತ್ ಫೈಟ್’ ಹಳೆ ದ್ವೇಷ, ಜಗಳ, ಜಾತಿ, ಮತ, ಸಂಬಂಧಗಳು ಪ್ರಾಮುಖ್ಯತೆ ಪಡೆದಿರುತ್ತವೆ.

ಊರಲ್ಲಿ ಅವರವರ ತಾಕತ್ತು, ಹಿಮ್ಮತ್ತು ಎಲ್ಲಾ ಬಹಿರಂಗವಾಗುವುದು ಕೇವಲ ಪಂಚಾಯ್ತಿ ಎಲೆಕ್ಷನ್ ನಲ್ಲಿ ಮಾತ್ರ, ಇಲ್ಲಿ ಇನ್ನೂ ಒಂದು ಇಂಟ್ರೆಸ್ಟಿಂಗ್ ವಿಷಯ ಹೇಳಬೇಕೆಂದರೆ, ಕೆಲವೊಂದು ಗ್ರಾಮಗಳಲ್ಲಿ ಪ್ರತಿಷ್ಠೆಯ ಕಣದಲ್ಲಿರುವ ಎರಡು ಬಣಗಳು ತಮ್ಮ ಅವಧಿ ಮುಗಿಯುವ ತನಕ ಅಪ್ಪಿತಪ್ಪಿಯೂ ಒಬ್ಬರನ್ನೊಬ್ಬರ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲ. ಇಂಥ ಹಲವು ವೈರುಧ್ಯಗಳನ್ನು ಚಿಗುರೊಡಿಸುವ ‘ಲೋಕಲ್ ಫೈಟ್’ ಜನರ ಬಾಂಧವ್ಯ, ಹಳ್ಳಿಯ ಶಾಂತಿ, ನೆಮ್ಮದಿ, ಸೌಹಾರ್ದತೆ ಎಲ್ಲವೂ ಮಣ್ಣುಪಾಲು ಮಾಡುವುದಂತೂ ಗ್ಯಾರಂಟಿ. ಒಮ್ಮೊಮ್ಮೆ ‘ಯಪ್ಪಾ ಈ ಪಂಚಾಯತ್ ಎಲೆಕ್ಷನ್ ಯಾಕಾರಾ ಬಂದೈತೋ’ ಅಂತ ಅನಿಸದೇ ಇರದು. ಆದರೆ ಸ್ಥಳೀಯ ಸರ್ಕಾರಗಳು ರೂಪುಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಸ್ಥಳೀಯ ಸರ್ಕಾರ ಹೇಗಿರಬೇಕು, ವಿಕೇಂದ್ರೀಕೃತ ಸರ್ಕಾರ ಹೇಗೆ ರೂಪುಗೊಳ್ಳಬೇಕೆಂದು ನಿರ್ಧರಿಸುವುದು ಮತದಾರರಾದ ನಮಗೆ ಮೊದಲು ಸ್ಪಷ್ಟವಾಗಿರಬೇಕು. ಸೂಕ್ಷ್ಮವಾಗಿ ಗ್ರಹಿಸಿ ‘ಯೋಗ್ಯ’ರನ್ನು ಆಯ್ಕೆ ಮಾಡಬೇಕಾಗಿದೆ.

ಊರಿನ ಭೂಮಾಲಿಕರು, ಮೇಲ್ವರ್ಗದವರು ಗ್ರಾಮಾಡಳಿತದ ಮೇಲೆ ಸಂಯಮ ಸಾಧಿಸಲು ‘ಗ್ರಾಮ ಪಂಚಾಯಿತಿ’ ಚುನಾವಣೆಗಳಲ್ಲಿ ಅನಕ್ಷರಸ್ಥ ಬಡವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರನ್ನು ‘ರಬ್ಬರ್ ಸ್ಟ್ಯಾಂಪ್‌’ಗಳಾಗಿ ಉಪಯೋಗಿಸಿಕೊಳ್ಳುವ ತಂತ್ರಗಾರಿಕೆ ಈಗಾಗಲೇ ಕರಗತವಾಗಿದೆ. ಆದರೆ ಸಾಂವಿಧಾನಿಕ ಹಕ್ಕುಗಳು ಮತ್ತು ಅವುಗಳಿಗಾಗಿ ಹೋರಾಡುವುದು, ಪಾರದರ್ಶಕ ಆಡಳಿತ ಒದಗಿಸುವುದು, ಸ್ವಾಭಿಮಾನ ಬದುಕು ಸವೆಸುವುದು ಸೇರಿ ಇತರ ಪ್ರಜಾತಂತ್ರದ ಹಕ್ಕುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ‘ಸಣ್ಣವರು’ ಊರಿನ ‘ದೊಡ್ಡವರ’ ಆಣತಿಗಳಿಗೆ ತಲೆದೂಗುವ ‘ಹೌದಪ್ಪ’ಗಳಾಗಿರುವುದು ಬಹುತೇಕ ಹಳ್ಳಿಗಳಲ್ಲಿ ಇನ್ನೂ ಜೀವಂತವಾಗಿದೆ.

ಚುನಾವಣೆ ಆಯೋಗ ಪ್ರಕಟಿಸಿದ ‘ಪಂಚಾಯತ್ ಎಲೆಕ್ಷನ್’ ನಿಯಮಗಳನ್ನು ಲೆಕ್ಕಿಸದೆ ಕೆಲವೊಂದು ಹಳ್ಳಿಗಳಲ್ಲಿ ಪಂಚಾಯ್ತಿ ಸದಸ್ಯರುಗಳನ್ನು ‘ಅವಿರೋಧ’ ಆಯ್ಕೆ ನಡೆಸಿದ್ದಾರೆ, ಇನ್ನು ಕೆಲವು ಕಡೆಗಳಲ್ಲಿ ಲಕ್ಷಾಂತರ ರೂಪಾಯಿಗಳ ‘ಹರಾಜು’ ಪ್ರಕ್ರಿಯೆ ಮೂಲಕ ಸದಸ್ಯರನ್ನು ಆಯ್ಕೆಮಾಡಿಕೊಳ್ಳುವ ದಂಧೆ ಬೇಕಾಬಿಟ್ಟಿಯಾಗಿ ನಡೆದಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಅಲ್ಲದೇ ಮತ್ತೇನಲ್ಲ. ಹೌದು, ಆದರೆ ಇದೇನು ಹೊಸದಲ್ಲ ಬಿಡಿ. ಪಕ್ಷ ಬಿಟ್ಟು ‘ಸೆಲ್’ ಆಗುವ ಶಾಸಕರು, ಹಣಬಲ, ತೋಳ್ಬಲದಿಂದ ಸಚಿವರಾಗಿ ‘ಬಾಲ್ಕನಿ’ ಮೂಲಕ ಅಧಿಕಾರ ಹಿಡಿಯುವ ಅತೃಪ್ತ ಹಿರಿಯ ರಾಜಕಾರಣಿಗಳೇ ಇಂದಿನ ತಳಮಟ್ಟದ ರಾಜಕಾರಣಿಗಳಿಗೆ ‘ರೋಲ್ ಮಾಡೆಲ್’ ಎಂದು ಹೇಳಿದರೂ ತಪ್ಪಾಗಲಾರದು. 

ರಾಜಕೀಯ ‘ವಿಕೇಂದ್ರೀಕರಣ’ದ ಘನವಾದ ಆಶಯವನ್ನು ಹೊಂದಿರುವ ಪಂಚಾಯತ್ ರಾಜ್ ವ್ಯವಸ್ಥೆ ಹಳ್ಳಿಗಳ ಉನ್ನತಿಗಾಗಿ ‘ಅಧಿಕಾರ ಹಂಚಿಕೆ’ ಮಾಡಿದೆ. ಅಧಿಕಾರ ವಿಕೇಂದ್ರೀಕರಣ ಎಂದರೆ, ‘ಸ್ವಾಯತ್ತ ಸರ್ಕಾರವಾಗಿ ಕಾರ್ಯನಿರ್ವಹಿಸಲು ಮತ್ತು ತನ್ನ ಹಂತಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರದ ರೀತಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಅಧಿಕಾರಗಳನ್ನು ಹೊಂದಿರಬೇಕು’ ಎಂದು ಸಂವಿಧಾನ ಹೇಳುತ್ತದೆ, ಹಾಗೇ “ಪ್ರತಿ ಹಳ್ಳಿಗಳು ಸ್ವಾವಲಂಬಿಗಳಾಗಬೇಕು, ಭಾರತದ ಭವಿಷ್ಯ ಹಳ್ಳಿಗಳಲ್ಲಿ ಅಡಗಿದೆ” ಎಂದು ಗಾಂಧೀಜಿಯವರ ದೃಢವಾದ ನಂಬಿಕೆ, ಮತ್ತು ರಾಜಕೀಯ ಮತ್ತು ಆರ್ಥಿಕ ಪ್ರಜಾಪ್ರಭುತ್ವವನ್ನು ತಳಮಟ್ಟದಲ್ಲಿ ಸಂಘಟಿಸಲು ಅತ್ಯಂತ ಸೂಕ್ತ ಸಾಧನವೆಂದರೆ ಪಂಚಾಯತ್ ರಾಜ್ ವ್ಯವಸ್ಥೆ ಎಂಬುದು ನಮಗೆ ಮನದಟ್ಟಾಗಬೇಕು, ‘Think globally Act Locally’ ಎನ್ನುವ ಮೂಲ ತತ್ವಗಳನ್ನು ಇಂದಿನ ಹಳ್ಳಿಗಳು ಆಧರಿಸಿ ಪಂಚಾಯ್ತಿಗಳನ್ನು ಮತ್ತಷ್ಟು ಬಲಪಡಿಸಬೇಕಾಗಿದೆ.

ಈ ನಿಟ್ಟಿನಲ್ಲಿ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಅಂಶಗಳು ಹೀಗಿವೆ:
1. ಗ್ರಾಮ ಸ್ವರಾಜ್ಯವೆಂದರೆ ಮೂಲಭೂತ ಅಗತ್ಯಗಳಿಗಾಗಿ ನೆರೆಯವರನ್ನು ಅವಲಂಬಿಸದೆ, ಇತರೆ ಅಗತ್ಯಗಳಿಗಾಗಿ ಪರಸ್ಪರ ಅವಲಂಬನೆ ಹೊಂದಿರುವ ಸಂಪೂರ್ಣ ಜನತಂತ್ರ ಗಣರಾಜ್ಯ.
2. ಗ್ರಾಮದ ವಯಸ್ಕ ಮತದಾರರು ಐದು ವರ್ಷಕ್ಕೊಮ್ಮೆ ಆಯ್ಕೆ ಮಾಡುವ ಪಂಚಾಯ್ತಿ ಗ್ರಾಮದ ಆಡಳಿತವನ್ನು ನೋಡಿಕೊಳ್ಳಬೇಕು. ಅಗತ್ಯ ಇರುವ ಎಲ್ಲ ಅಧಿಕಾರ ಮತ್ತು ವ್ಯಾಪ್ತಿ ಅವರಿಗೆ ಇದೆ.
3. ಪರಿಪೂರ್ಣ ಪ್ರಜಾಸತ್ತೆಯು ತನ್ನ ಸರ್ಕಾರದ ಶಿಲ್ಪಿಯು ತಾನೇ ಆಗಿರುವ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಅವಲಂಬಿತವಾಗಿದೆ.

ನಿಜವಾದ ಜನತಂತ್ರದ ಪಂಚಾಯತ್‌ರಾಜ್‌ ವ್ಯವಸ್ಥೆಯ ಕನಸು ಸಾಕಾರಗೊಂಡಿದ್ದೆಯೇ? ಎಂದು ಮರುಪ್ರಶ್ನೆ ಮಾಡಿಕೊಳ್ಳಬೇಕಾಗಿದೆ. ದೇಶದ ಉನ್ನತ ಆಡಳಿತಗಾರರಿಗೆ ಇರುವ ಎಲ್ಲಾ ಹಕ್ಕುಗಳನ್ನು ತಳಮಟ್ಟದ ಆಡಳಿತಗಾರರಿಗೂ ಇವೆ. ಇಬ್ಬರಿಗೂ ಸಮಾನ ಆಡಳಿತಗಾರರು ಎಂದೇ ಪರಿಗಣಿಸುತ್ತೇವೆ. ಎಲ್ಲಾ ಅಧಿಕಾರವನ್ನು ಸ್ಥಳೀಯ ಸರ್ಕಾರಕ್ಕೆ ಹಂಚುವುದು ಪಂಚಾಯತ್ ರಾಜ್ ವ್ಯವಸ್ಥೆಯ ಮಹತ್ವದ ಪರಿಕಲ್ಪನೆಯಾಗಿದೆ. ಆದರೆ, ಇಂದು ಹಳ್ಳಿಗಳ ಅಭಿವೃದ್ಧಿಯ ಕುರಿತು ಅವಲೋಕನ ನಡೆಸಿದಾಗ ಹಲವು ಪ್ರತಿಕ್ರಿಯೆಗಳು ಎದುರಾಗುತ್ತವೆ.

‘ಹಳ್ಳಿಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚದ ನಂತರವೂ ಕರ್ನಾಟಕದ ಹೆಚ್ಚಿನ ಗ್ರಾಮಗಳಲ್ಲಿ ಈಗಲೂ ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್ ದೀಪಗಳು ಸೇರಿ ಇನ್ನಿತರ ಮೂಲಸೌಕರ್ಯ ಇಲ್ಲದಿರುವುದು ಕಾಣುತ್ತೇವೆ. ಅನೇಕ ಗ್ರಾಮಗಳಿಗೆ ಪ್ರವೇಶ ಮಾಡಿದರೆ ಮುಂಚೆ ‘ಬಯಲು ಬಹಿರ್ದೆಸೆ ಮುಕ್ತ ಗ್ರಾಮ’ ಎನ್ನುವ ದೊಡ್ಡ ಬೋರ್ಡ್ ನಮ್ಮನ್ನು ಸ್ವಾಗತ ಕೋರುತ್ತದೆ. ಆದರೆ ಗ್ರಾಮದ ಮನೆಮನೆಗೂ ಶೌಚಾಲಯಗಳಿಲ್ಲ, ಇದ್ದರೂ ಅವು ಬಳಕೆಯಲಿಲ್ಲ.

ಈ ಬಗ್ಗೆ ಜನರಿಗೆ ಅಸಮಾಧಾನ ಇದೆ. ಶೌಚಾಲಯ ನಿರ್ಮಾಣದ ಮುಂಚೆ ವಿಶೇಷವಾಗಿ ಕಾಳಜಿ ವಹಿಸುವ ‘ಪಂಚಾಯತ್ ಆಡಳಿತ’ ಶೌಚಾಲಯ ನಿರ್ಮಾಣದ ನಂತರ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಶೌಚಾಲಯ ಬಳಸುವ ಬಗ್ಗೆ ಮಹಿಳೆಯರು ಇದಕ್ಕೂ ಮುಖ್ಯವಾದ ಮತ್ತು ಹೆಚ್ಚು ತುರ್ತಾದ ಆದ್ಯತೆಗಳನ್ನು ಹೊಂದಿರುವುದು ಕಾರಣ. ಮೂಲ ಸೌಕರ್ಯಗಳನ್ನು ಒದಗಿಸಿದ ಗ್ರಾಮ ಪಂಚಾಯ್ತಿ ಬೇರೇನೂ ಮಾಡಿದರೂ ಅದು ಅರ್ಥಹೀನ‌‌‌.‌..!

ತಮ್ಮ ಗ್ರಾಮದ ಮೂಲ ಸಮಸ್ಯೆಗಳನ್ನು ಉತ್ತಮಪಡಿಸಿಕೊಳ್ಳುವುದು ಗ್ರಾಮಸ್ಥರ ಪ್ರವೃತ್ತಿಯಾಗಬೇಕು. ಜನರ ಕುಂದುಕೊರತೆಗಳನ್ನು ಆಲಿಸುವ ಪ್ರಜ್ಞಾವಂತ ರಾಜಕಾರಣಿಗಳು ನಂಬಬೇಕು ಮತ್ತು ಗ್ರಾಮಾಭಿವೃದ್ಧಿಗೆ ಬೇಕಾದ ಎಲ್ಲಾ ಆಯ್ಕೆಗಳನ್ನು ಅವರಿಗೇ ಬಿಡಬೇಕು. ಗ್ರಾಮ ಸಭೆಗಳ ಮೂಲಕವೇ ಗ್ರಾಮಾಭಿವೃದ್ಧಿ ಕಾರ್ಯಗಳ ಪಟ್ಟಿ ಸಿದ್ಧಪಡಿಸಲು ಪಂಚಾಯಿತಿ ಮುತುವರ್ಜಿವಹಿಸಬೇಕು. ಹಳ್ಳಿಯ ವರ್ತಮಾನ ಮತ್ತು ಭವಿಷ್ಯವನ್ನು ಯೋಜಿಸುವ ಮತ್ತು ನಿರ್ಧರಿಸುವ ಹಕ್ಕು ಜನರಿಗೆ ಇದೆ, ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಅಷ್ಟೇ.

ಗ್ರಾಮ ಪಂಚಾಯ್ತಿಗಳು ಜನರ ಕಾಳಜಿಗಳನ್ನು ಪ್ರತಿನಿಧಿಸುವುದಕ್ಕಾಗಿಯೇ ವಿವಿಧ ಸಮಿತಿಗಳಿವೆ.  ಎಲ್ಲಾ ಸಮಿತಿಯಲ್ಲಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರು  ಎಲ್ಲಾ ಸದಸ್ಯರು ಒಳಗೊಂಡಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಮಿತಿಯಲ್ಲಿರುತ್ತಾರೆ. ಅವುಗಳ ಮೂಲಕ ಗ್ರಾಮಗಳ ಅಭ್ಯುದಯಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಇರುವ ಸಾಂವಿಧಾನಿಕ ಅಧಿಕಾರಗಳನ್ನು ಚಲಾಯಿಸಲು ಪಂಚಾಯ್ತಿಗೆ ಅವಕಾಶವಿದೆ. 

ಪ್ರತಿಯೊಂದು ಪಂಚಾಯ್ತಿ ಕೂಡ ರಾಜ್ಯ ಸರ್ಕಾರ ಹೊಂದಿರುವಂತಹ ಸ್ವಾಯತ್ತೆಯನ್ನು ಪಡೆದಿದೆ.  ಸರ್ಕಾರ ನೀಡುವ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಿದರೆ ಮಾತ್ರ ನಿಜವಾದ ಗ್ರಾಮ ಸ್ವರಾಜ್ಯ ಸಾಕಾರವಾಗುತ್ತದೆ. ಜನಕಲ್ಯಾಣದ ಆಶಯವನ್ನು ಈಡೇರಿಸಬೇಕಾದರೆ ರಾಜ್ಯ ಸರ್ಕಾರಗಳು ಇನ್ನಷ್ಟು ‘ಗ್ರಾಮೀಣಾಭಿವೃದ್ಧಿ’ ಕಾರ್ಯಕ್ರಮಗಳನ್ನು ಯೋಜಿಸಿ, ಅನುಷ್ಠಾನಗೊಳಿಸಬೇಕು. ಗ್ರಾಮ ಸಭೆಯ ಮಹತ್ವ, ಕ್ರಿಯಾ ಯೋಜನಾ ಪ್ರಕ್ರಿಯೆ, ಹಣಕಾಸು ಹಂಚಿಕೆ, ನರೇಗಾ ಯೋಜನೆ ಸೇರಿ ಗ್ರಾಮ ಸ್ವರಾಜ್ಯದ ಆಶಯಗಳನ್ನು ಎತ್ತಿಹಿಡಿಯುವ ಅಂಶಗಳನ್ನು ಜನಸಾಮಾನ್ಯರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಬಹುತೇಕ ಪಂಚಾಯ್ತಿಗಳು ಮಾಡುವುದಿಲ್ಲ. ತಮ್ಮ ಎಲ್ಲಾ ಹಕ್ಕುಗಳನ್ನು  ಚಲಾಯಿಸಲು, ಅಧಿಕಾರಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ವಿಶೇಷ ತರಬೇತಿ, ಸಭೆಗಳನ್ನು ಏರ್ಪಡಿಸುವುದು ತುಂಬಾ ಅವಶ್ಯಕತೆಯೂ ಇದೆ.

ಬದಲಾಗುತ್ತಿರುವ ಸಂದರ್ಭದಲ್ಲಿ ಗ್ರಾಮೀಣ ಬದುಕು ತನ್ನ ಮೂಲ ಸತ್ವವನ್ನು ಕಳೆದುಕೊಳ್ಳುತ್ತಿದೆ. ಕೈಗಾರೀಕರಣದ ಅಬ್ಬರ ಇಂದು ಹಳ್ಳಿಗಳಿಗೂ ವಕ್ಕರಿಸಿದೆ. ಇದರಿಂದ ಬದುಕಿನ ಭಾಗವಾಗಿದ್ದ ಗುಡಿ ಕೈಗಾರಿಕೆಗಳು, ಸಾಂಪ್ರದಾಯಿಕ ಉದ್ಯಮಗಳು ನಶಿಸುತ್ತಿವೆ. ಇಂಥ ಸ್ಥಿತಿಯಲ್ಲಿ ‘ಆತ್ಮನಿರ್ಭರ’ದ ಕನಸು ಕಾಣುವ ನಮ್ಮ ಜನಪ್ರತಿನಿಧಿಗಳಿಂದ ಅಪೇಕ್ಷಿಸುವುದು ಔಚಿತ್ಯವೇ? ಯೋಚಿಸಬೇಕಾಗಿದೆ.

ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಹೃದಯವೇ ಪಂಚಾಯತ್‌ರಾಜ್‌. ಪಂಚಾಯಿತಿಗಳು ಸ್ಥಳೀಯ ಸರ್ಕಾರಗಳಾಗಿ ಕಾರ್ಯನಿರ್ವಹಿಸಬೇಕು. ಈಗ ನಮ್ಮ ದೇಶದ ಅಭಿವೃದ್ಧಿ ಪರಿಗಣಿಸಬೇಕಾದರೆ ಮೊದಲು ಹಳ್ಳಿಗಳು  ಹಸನಾಗಿರಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ‘ಗ್ರಾಮ ರಾಜ್ಯ’ ಉದ್ಧಾರಕ್ಕಾಗಿ ಬಲವಾದ ಅಡಿಪಾಯ ಹಾಕಬೇಕು. ಜನತೆಗೆ ಸಾಮಾಜಿಕ ನ್ಯಾಯ, ಆರ್ಥಿಕ ನೆಮ್ಮದಿ, ಹಾಗೂ ವ್ಯಕ್ತಿ ಸ್ವಾತಂತ್ರ್ಯ ದೊರಕುವಂತಾಗಬೇಕು. ಯಾವುದೇ ರೀತಿಯ ಸರ್ಕಾರಿ ಅಂಕುಶವಿಲ್ಲದಿದ್ದರೆ ಮಾತ್ರ ”ಪೂರ್ಣಪ್ರಜಾರಾಜ್ಯ” ಸಾಕಾರಗೊಳ್ಳುತ್ತದೆ. ನಮ್ಮ ಜನತಂತ್ರ ಗಣರಾಜ್ಯವನ್ನು ರಕ್ಷಿಸಬೇಕಾದರೆ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕಾಗಿದೆ.

ಲಾಸ್ಟ್ ಡ್ರಾಪ್: ಪ್ರಜ್ಞಾವಂತ ಯೋಗ್ಯರನ್ನು ಆಯ್ಕೆಗೊಳಿಸಿ ಹಳ್ಳಿ ಹಸನಾಗಿಸೋಣ, ಪೈಪೋಟಿ ಎಷ್ಟೇ ಇರಲಿ, ಸೋಲು – ಗೆಲುವು ಸಮವಾಗಿ ಸ್ವೀಕರಿಸಿ, ಚುನಾವಣೆ ನಂತರ ಮತ್ತೆ ಎಲ್ಲರೂ ಕೂಡಿ ಬಾಳೋಣ, ಗ್ರಾಮದ ಅಭಿವೃದ್ಧಿ ಕುರಿತು ಒಕ್ಕೊರಲಿನಿಂದ ಕೈಜೋಡಿಸೋಣ. ಹಳ್ಳಿಯ ಶಾಂತಿ, ನೆಮ್ಮದಿ ಮತ್ತು ಬಹುತ್ವ ಸಂಸ್ಕೃತಿ ಮರೆಯದಿರೋಣ. ಹಾಗೇ ತಪ್ಪದೇ ಮತಹಕ್ಕು ಚಲಾಯಿಸೋಣ.

‍ಲೇಖಕರು Avadhi

December 25, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This