ಹಸಿರು ಸೇನಾನಿ ಮತ್ತು ಕೆಂಟಕಿ ಚಿಕನ್

ಹಸಿರು ಸೇನಾನಿ ಎಂದೇ ಹೆಸರಾದ ಪ್ರೊಫೆಸರ್ ಎಂ ಡಿ ನಂಜುಂಡಸ್ವಾಮಿ ಅವರ ನೆನಪು ನಿಜಕ್ಕೂ ಸದಾ ಹಸಿರು. ಜಾಗತೀಕರಣದ ಆಕ್ರಮಣದ ದಿನಗಳಲ್ಲಿ ಅದರ ಹುನ್ನಾರಗಳನ್ನು ಬಹು ಬೇಗ ಅರ್ಥ ಮಾಡಿಕೊಂಡ ಪ್ರೊಫೆಸರ್, ಅದನ್ನು ಎದುರಿಸುವ ಹತಾರಗಳನ್ನೂ ಸೃಷ್ಟಿ ಮಾಡಿದರು. ಅದರಲ್ಲಿ ಮುಖ್ಯವಾದದ್ದು ಕೆ ಎಫ್ ಸಿ ಎಂದೇ ಗುರುತಾಗಿರುವ ಕೆಂಟಕಿ ಫ್ರೈಡ್ ಚಿಕನ್ ವಿರುಧ್ಧದ ಚಳವಳಿ.

ನಮ್ಮ ನಾಡಿನ ಇನ್ನೊಬ್ಬ ಪ್ರಮುಖ ಚಿಂತಕರಾದ ಡಿ ಆರ್ ನಾಗರಾಜ್ ಅವರು ಈ ಚಳವಳಿಯನ್ನು ಕಂಡ ಬಗೆ ಇಲ್ಲಿದೆ.  

cartonu-008

ಕೆಂಟಕಿ ಚಿಕನ್ ಮತ್ತು ಜಾಗತೀಕರಣ :

ಪ್ರೊಫೆಸರ್ ರೂಪಿಸಿದ ಹೋರಾಟ

-ಡಿ. ಆರ್. ನಾಗರಾಜ್

 

ಗಾಂಧಿ ಹುತಾತ್ಮರಾದ ದಿನದ ನಲವತ್ತೆಂಟನೇ ವಾರ್ಷಿಕ ಆಚರಣೆಯ ಅಂಗವಾಗಿ 1996ರ ಮಾರ್ಚ್ 31 ರಂದು ಕರ್ನಾಟಕ ರಾಜ್ಯ ರೈತಸಂಘವು ಬೆಂಗಳೂರು ನಗರದಲ್ಲಿ ಪ್ರತಿಷ್ಠಿತ ಬಹುರಾಷ್ಟ್ರೀಯ ಸಂಸ್ಥೆ ಕೆಂಟಕಿಫ್ರೈಡ್ ಚಿಕನ್ ನ ಮಳಿಗೆಯ ಮೇಲೆ ಹಠಾತ್ ದಾಳಿಯನ್ನು ನಡೆಸಿತು. ಆ ಸಂದರ್ಭದಲ್ಲಿ ರೈತಸಂಘ ಗಾಂಧಿಯನ್ನು ನೆನಪಿಸಿಕೊಂಡಿತು. ಸಂಘದ ನೇತಾರ ಪ್ರೊ. ಎಂ. ಡಿ. ನಂಜುಂಡಸ್ವಾಮಿಯವರು ನಮ್ಮ ಕಾಲದ ಬಹುಮುಖ್ಯ ಗಾಂಧಿವಾದಿ-ಎಡಪಂಥೀಯರಲ್ಲೊಬ್ಬರಾಗಿದ್ದ ಡಾ. ರಾಮಮನೋಹರ ಲೋಹಿಯಾರ ನಿಷ್ಠ ಅನುಯಾಯಿಯೂ ಹೌದು. ಹೀಗಾಗಿ, ರೈತಸಂಘದ ಘೋಷಣೆಗೆ ಎಲ್ಲ ರೀತಿಯ ಅಧಿಕೃತತೆಯೂ ಪ್ರಾಪ್ತವಾಯಿತು. ರೈತರು ಆ ದಾಳಿಯನ್ನು ಯೋಜಿಸಿದ್ದ ಕ್ರಮವು ವಾಮಾಚಾರದಲ್ಲಿ ಕಾಣಬರುವ ವಿರೋಧಿ ಕ್ರಿಯಾವಿಧಿಯಂತೆಯೇ ತೋರುತ್ತಿತ್ತು: ಊಟದ ಅಂಗಡಿಯೊಂದಕ್ಕೆ ದಾಳಿ ಮಾಡಿ ಆ ಮೂಲಕ ಅದರ ಹಿಂದಿನ ಶಕ್ತಿಗಳಾದ ಜಾಗತಿಕ ಮಾರುಕಟ್ಟೆ ಹಾಗೂ ರಾಜಕೀಯ ವ್ಯವಸ್ಥೆಗಳೆರಡರ ಹೊಟ್ಟೆಗೂ ಏಟು ಹಾಕುವಂತಹ ಸಾಂಕೇತಿಕತೆ ಅದರಲ್ಲಡಗಿತ್ತು. ಅಮೆರಿಕನ್ ತೀವ್ರಗಾಮಿಗಳು ಒಮ್ಮೆ ಹೇಳಿದಂತೆ ಸಮಸ್ಯೆಯೇ ನಿಜವಾದ ಸಮಸ್ಯೆಯಲ್ಲ; ಅದನ್ನು ಸೃಷ್ಟಿಸುವ ಶಕ್ತಿಗಳೇ ನಿಜವಾದ ಸಮಸ್ಯೆ. ಅಂತೆಯೇ, ಇಲ್ಲಿ ರೈತರ ಅಂತಿಮ ವೈರಿ ಹಾಗೂ ಅವರ ವಿರೋಧದ ಗುರಿ ಭಾರತದ ಅರ್ಥವ್ಯವಸ್ಥೆಯನ್ನು ಹಾಳುಗೆಡುವುತ್ತಿದ್ದ ಬಹುರಾಷ್ಟ್ರೀಯ ಸಂಸ್ಥೆಗಳಾಗಿದ್ದವೇ ಹೊರತು ಕೇವಲ ಕೆಂಟುಕಿ ಫ್ರೈಡ್ ಚಿಕನ್ ನ ಅಂಗಡಿಯಲ್ಲ. ಮಂತ್ರ-ಮಾಟ ಕ್ರಿಯೆಯಲ್ಲಿ ಮಂತ್ರವಾದಿ ವೈರಿಯನ್ನು ನಾಶಮಾಡಲು ಆತನ ಬೊಂತೆ ಬೊಂಬೆಯೊಂದನ್ನು ಮಾಡಿ ಅದರ ಮೈಮೇಲೆಲ್ಲ ಸೂಜಿಗಳನ್ನು ಚುಚ್ಚಿ ಸಂಕೇತಕ್ಕೆ ಘಾತ ಮಾಡುವದರ ಮುಖಾಂತರ ವಾಸ್ತವವನ್ನೂ ಘಾತಿಸಲೆತ್ನಿಸುತ್ತಾನೆ. ಇದು ಮೂಲತಃ ವೈರಿಯು ತನ್ನ ವಿರುದ್ಧ ಹೂಡಿದ ಮಾಟದ ಪ್ರಭಾವದಿಂದ ತನ್ನನ್ನು ರಕ್ಷಿಸಿಕೊಳ್ಳುವ ಒಂದು ತಂತ್ರವೂ ಹೌದು. ಮೊದಲಾಗಿ ವೈರಿ ಬಿಟ್ಟ ಅಸ್ತ್ರವನ್ನು ನಿಶ್ಯಕ್ತಗೊಳಿಸುವ ಪ್ರತ್ಯಸ್ತರ-ತಂತ್ರವೂ ಹೌದು. ಅಂದು ರೈತಸಂಘದ ಕಾರ್ಯಕರ್ತರು ಮಿಂಚಿನಂತೆ ಎರಗಿದರು; ಅಲ್ಲಿದ್ದ ಗಿರಾಕಿಗಳನ್ನು- ಅದರಲ್ಲಿ ಹೆಚ್ಚಿನವರು ಬಿಳಿಯರಾಗಿದ್ದರು-ಹೊರಗೆ ಹೋಗುವಂತೆ ವಿನಯಪೂರ್ವಕವಾಗಿ ಕೇಳಿಕೊಂಡರು; ಗಲ್ಲಾದಲ್ಲಿದ್ದ ಹಣವನ್ನು ತುಸುವೂ ಮುಟ್ಟದೆ ಅದನ್ನು ಭದ್ರವಾಗಿ ಬೀಗ ಹಾಕಿಡುವಂತೆ ಗುಮಾಸ್ತನಿಗೆ ಹೇಳಿದರು. ಅನಂತರ ಇಡೀ ಅಂಗಡಿಯನ್ನು ಧ್ವಂಸಗೈದರು. ಆ ಹೊತ್ತಿಗೆ ಅಲ್ಲಿ ಅಂತಾರಾಷ್ಟ್ರೀಯ ಟೆಲಿವಿಷನ್ ಸಂಸ್ಥೆಗಳವರೂ ಸೇರಿದಂತೆ ಅನೇಕ ಸುದ್ದಿಗಾರರಿದ್ದರು. ಪೊಲೀಸರು ಆ ದಾಳಿಗಾರ(ಸತ್ಯಾಗ್ರಹಿ?)ರನ್ನು ತಕ್ಷಣ ಬಂಧಿಸಿದರು. ಅದಾದ ಸ್ವಲ್ಪ ವೇಳೆಯಲ್ಲಿ ಅವರ ಗುರುವಿನ ದಸ್ತಗಿರಿಯೂ ಆಯಿತು. ಆಮೇಲೆ ಅವರೆಲ್ಲರನ್ನೂ ಬೆಂಗಳೂರಿನ ರೇಸ್ ಕೋರ್ಸ್ ಗೆ ಒಂದೆಡೆ ಅಂಟಿಸಿಕೊಂಡಂತೆ ಇರುವ, ಕರ್ಣಾಟಕದ ಅತಿ ದೊಡ್ಡ ಸೆರೆಮನೆಯಾದ ಸೆಂಟ್ರಲ್ ಜೈಲಿನಲ್ಲಿ ಇಡಲಾಯಿತು.

ಈ ಪ್ರಸಂಗದ ಅತಿ ಜಟಿಲ ಭಾಗ ಇರುವುದು ಇಲ್ಲಿ. ಆರ್ಥಿಕ ಉದಾರೀಕರಣ ಈ ವೇಳೆಗಾಗಲೇ ಭಾರತೀಯ ರಾಜಕಾರಣದ ಗುಣವನ್ನು ಬದಲಿಸಿಯಾಗಿತ್ತು. ಇಂಥ ಸನ್ನಿವೇಶದಲ್ಲಿ, ಸಾಮಾನ್ಯವಾಗಿ ಚುನಾವಣಾ ಹೋರಾಟಗಳಲ್ಲಿ ಈ ಬಗೆಯ ಸಾಂಕೇತಿಕ ರಾಜಕೀಯ ಕ್ರಿಯೆಗಳು ಅಂಥ ಬೆಂಬಲವನ್ನೇನೂ ಗೆದ್ದುಕೊಳ್ಳುವುದಿಲ್ಲ. ರೈತ ಚಳುವಳಿ ಅಂಥದೊಂದು ಸಾಹಸಕ್ಕೆ ಕೈ ಹಾಕಿತು. ಕೆಲವು ದಿನಗಳಲ್ಲಿ ನಡೆಯಲಿದ್ದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸಾಂಕೇತಿಕ ರಾಜಕೀಯಾತ್ಮಕ ಪ್ರತಿಭಟನೆಯು ವಾಸ್ತವವಾಗಿ ಶಾಸಕ ಸಂಖ್ಯೆ-ಶಕ್ತಿಗಳಾಗಿ ಫಲ ಕೊಡುವುದೆನ್ನುವ ನಿರೀಕ್ಷೆಯಲ್ಲಿ ರೈತಸಂಘ ಇದ್ದಂತಿತ್ತು.

ಜೈಲಿಗೆ ಹೋದ ತಾವು ಬಿಡುಗಡೆಯಾಗಲು ಯತ್ನಿಸಬಾರದೆಂಬ ಪಾಠವನ್ನು ರೈತರು ಆ ಮುಂಚಿನ ಅನುಭವದಿಂದ ಕಲಿತಿದ್ದರು. ಎಂಬತ್ತರ ದಶಕದ ಮಧ್ಯಭಾಗದವರೆಗೂ ಭಾರತೀಯ ರಾಜಕಾರಣದಲ್ಲಿ ಶಾಸಕಾಂಗವನ್ನು ಪ್ರವೇಶಿಸಲು ಜೈಲಿಗೆ ಹೋಗುವುದೇ ಅತಿ ಶಿಘ್ರ ಮಾರ್ಗವಾಗಿತ್ತು. ಈ ರೈತರೂ ಸಹ ಅಂಥದೇ ನಂಬಿಕೆಯನ್ನು ಹೊಂದಿದ್ದರು. ತಮ್ಮ ಕಥನ ಕೊನೆಯ ಪಕ್ಷ ಕರ್ನಾತಕದಲ್ಲಾದರೂ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಹೊಡೆದೆಬ್ಬಿಸುವುದೆಂದು ಅವರು ವಿಶ್ವಾಸವಿಟ್ಟುಕೊಂಡಿದ್ದರು. ಆದರೆ ಅವರೆಲ್ಲ ಆಸೆಗಳು ಬಹು ಬೇಗನೆ ಇಂಗಿಹೋದವು. ಅವರ ಸಾಂಕೇತಿಕ ಕ್ರಿಯೆಗೆ ವಾಸ್ತವಿಕ ಜನಬೆಂಬಲವೇನೂ ಸಿಗಲಿಲ್ಲ; ಬೀದಿಗಳಲ್ಲಿ ಜನ ತಮ್ಮ ನಿತ್ಯದ ಸಮಸ್ಯೆಗಳನ್ನು ಹೊತ್ತುಕೊಂಡು ತಿರುಗಾಡಿದರೇ ಹೊರತು ರೈತರ ಪ್ರತಿಭಟನೆಗೆ ದನಿಗೂಡಿಸಲಿಲ್ಲ. ಕೊನೆಗೆ ರೈತ ಕಾರ್ಯಕರ್ತರು-ಅವರು ಯಾರೂ ಅಳ್ಳೆದೆಯವರಾಗಿರಲಿಲ್ಲ-ಜಾಮೀನು ಅರ್ಜಿ ಹಾಕಿ, ಬಿಡುಗಡೆಯಾಗಿ, ತಾವಾಗಿ ಸೆರೆಯಿಂದ ಹೊರಬಂದರು. ಅನಂತರ ನಡೆದ ಚುನಾವಣೆಯಲ್ಲಿ ಅವರು ತಮ್ಮ ಹಳೆಯ ಸ್ಥಾನಗಳಲ್ಲಿ ಒಂದನ್ನು ಬಿಟ್ಟು ಬೇರೆ ಎಲ್ಲೆಡೆಯಲ್ಲೂ ತೀವ್ರ ಸೋಲನ್ನು ಕಂಡರು. ಈ ರೀತಿಯಲ್ಲಿ ಚುನಾವಣಾ ರಾಜಕಾರಣದಲ್ಲಿ ಹಸಿವೆಯ ಪ್ರಶ್ನೆಯನ್ನು ಆಧರಿಸಿದ ಸ್ವಂತಿಕೆಯ ಕಥನ ಮೂಲೆಗುಂಪಾದ ವಿದ್ಯಮಾನವನ್ನು ಅರ್ಥೈಸಿಕೊಲ್ಲುವಲ್ಲಿ ಪ್ರಥಮತಃ ಭಾರತೀಯ ರಾಜಕೀಯದಲ್ಲಿ ಆರ್ಥಿಕ ಉದಾರೀಕರಣವು ತಂದ ಬದಲಾವಣೆಗಳನ್ನು ವಿಶ್ಲೇಷಿಸಿಕೊಳ್ಳಲೇಬೇಕು.

ಈ ಲೇಖನವನ್ನು ನಟರಾಜ್ ಹುಳಿಯಾರ್ ಸಂಪಾದಿಸಿರುವ ಚಕ್ರ ಪ್ರತಿಷ್ಠಾನದ ‘ಹಸಿರು ಸೇನಾನಿ’ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.

‍ಲೇಖಕರು avadhi

February 14, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಐದು ದಶಕಗಳ ಹಿಂದೆ

ಐದು ದಶಕಗಳ ಹಿಂದೆ

ಶ್ಯಾಮಲಾ ಮಾಧವ ಕೋವಿಡ್ ಸಂಕಷ್ಟದ ಈ ದುಷ್ಕರ ಕಾಲದಲ್ಲಿ ಐದು ದಶಕಗಳ ಹಿಂದಿನ ದುರ್ಭರ ದಿನಗಳು ನೆನಪಾಗುತ್ತಿವೆ. ರೇಬಿಸ್ ಹಾಗೂ ಟೆಟನಸ್ ಬಗ್ಗೆ...

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ರಮಾಕಾಂತ್ ಆರ್ಯನ್‌ ಅವನು ಕಾಲ ಹೆಬ್ಬರಳ ತುದಿಯಲ್ಲಿ ವಿಶ್ವವನ್ನೇ ಪುಟಿಪುಟಿದು ಕುಣಿಸಿದವನು. ಫುಟ್ಬಾಲ್ ಅಂಗಳದಲ್ಲಿ ಅವನು ಓಡಿದ, ಓಡಾಡಿದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This