ಹಸಿವೆ ಆಯ್ತಂತಾ ಸಿಕ್ಕಿಸಿಕ್ಕಿದ್ದನ್ನು ತಿನ್ನೋಕ್ಕಾಗತ್ತಾ…

 ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ..

…………….ಮಗ………….
ಯಾಕೋ ನೀವು ತುಂಬಾ ಇಷ್ಟ ಆಗ್ತಾ ಇದ್ದೀರಿ
ನಾನು ಆಶ್ಚರ್ಯದಿಂದ ನೋಡಿದೆ.
ನಿಮ್ಮನ್ನು ನಾನೀಗ ಪ್ರೊಪೋಸ್ ಮಾಡಿದರೆ ನೀವು ಬೈಯ್ಯಲ್ಲ ತಾನೆ
ಸಿಲ್ಲಿ ಎಂದು ನಕ್ಕೆ. ನನಗಿಂತ ಏನಿಲ್ಲಾ ಅಂದ್ರೂ 8 ವರ್ಷ ಚಿಕ್ಕವನು. ಈ ರೀತಿ ಯೋಚನೆ ಕೂಡ ಬರಬಾರದು ನಿಂಗೆ.
ನೀವು ಯಾವುದೋ ಕಾಲದಲ್ಲಿದ್ದೀರಾ
ಅವನ ಉತ್ತರ ಅಸಹ್ಯ ಹುಟ್ಟಿಸಿತು.
ನೀವು ತುಂಬಾ ಚೆನ್ನಾಗಿದ್ದೀರಿ
ಬಿಹೇವ್ ಯುವರ್ ಸೆಲ್ಪ್…ನಾನು ಕೆಂಗಣ್ಣು ಬೀರಿದ್ದೆ. ಅಷ್ಟೊತ್ತಿಗಾಗಲೇ ಅವಳಮ್ಮ ಒಳಗೆ ಬಂದಿದ್ದು, ಅವನು ಸುಮ್ಮನಾಗಿಬಿಟ್ಟಿದ್ದ. ಹಾಗೇ ಸ್ವಲ್ಪ ಹೊತ್ತು ಟಿ.ವಿ. ನೋಡುತ್ತಿದ್ದವನು ಅಲ್ಲಿಂದ ಜಾಗ ಖಾಲಿ ಮಾಡಿದ್ದ.
………….ತಾಯಿ…………………..
ಅವಳಿಗೆ 55 ತುಂಬಿತ್ತು. ಗೆಳೆಯ-ಗೆಳತಿಯರೆಲ್ಲಾ ಸೇರಿ ಹುಟ್ಟು ಹಬ್ಬವನ್ನು ಗ್ರಾಂಡ್ ಆಗಿಯೇ ಸೆಲೆಬ್ರೆಟ್ ಮಾಡಿದ್ದರು. ಅದ್ಯಾವ ಗಳಿಗೆಯಲ್ಲೋ ಏನೋ ಪಕ್ಕದ ಮನೆಯಲ್ಲಿ ಬಾಡಿಗೆಗಿದ್ದ ಮಗನ ವಯಸ್ಸಿನ ಪಡ್ಡೆಹುಡುಗನೊಬ್ಬನ ಸಹವಾಸಕ್ಕೆ ಈಕೆ ಬಿದ್ದಿದ್ದು, ಮಗ ಮಾನಸಿಕವಾಗಿ ತಾಯಿಯಿಂದ ದೂರವಾಗಿದ್ದ. ಚೆನ್ನಾಗಿಯೇ ಇದ್ದವಳು ಇಂಥ ದಾರಿ ಹಿಡಿದಿದ್ದು ನಮಗೂ ಬೇಸರ ತರಿಸಿತ್ತು. ಅದೊಂದೇ ಕಾರಣಕ್ಕಾಗಿ ಅವಳ ಗೆಳೆತನ ತೊರೆಯಕೂಡದು ಎಂದು ನಾನೂ ನಿರ್ಧರಿಸಿದ್ದೆ. ನನಗೆ ಆಶ್ಚರ್ಯವಾಗಿದ್ದು, ತಾನು ಪ್ರೀತಿಸಿ ಮದುವೆಯಾದವನೊಂದಿಗಿನ ಒಡನಾಟವನ್ನು ಹಗಲೆಲ್ಲಾ ನನ್ನ ಮುಂದೆ ಹೇಳಿಕೊಂಡಿದ್ದವಳು ಇವಳೇನಾ ಎಂಬುದು. ಪ್ರೀತಿಯ ಗಂಡನನ್ನು ಕಳೆದುಕೊಂಡು ಮಾನಸಿಕವಾಗಿ ಆಘಾತಕ್ಕೊಳಗಾಗಿ ನೊಂದು ಬೆಂದು ಹೋದವಳು ಇವಳೇನಾ. ಇಷ್ಟು ವರ್ಷ ಕಾಲ ಆ ಪ್ರೀತಿಯ ನೆನಪು ಹೊದ್ದ ಮಂಚದ ಮೇಲೆ ಗೊತ್ತುಗುರಿಯಿಲ್ಲದ ಯಾವನೋ ಅಬ್ಬೇಪಾರಿಯನ್ನು ಬಿಟ್ಟುಕೊಳ್ಳುವಷ್ಟರ ಮಟ್ಟಿಗೆ ಅವಳು ಇಳಿದಿರುವ, ಕಾರಣ ನನಗೆ ಅರ್ಥವಾಗಲಿಲ್ಲ.
ತಾಯಿಯ ವರ್ತನೆಯಿಂದ  ಬೇಸತ್ತಿದ್ದ ಮಗ ಎಲ್ಲವನ್ನೂ ಸಲೀಸಾಗಿ ತೆಗೆದುಕೊಳ್ಳಲು ಹುರುದುಂಬಿಸಿರಬೇಕೆಂಬುದು  ಅವನ ಅಂದಿನ ವರ್ತನೆ ಹೇಳತೊಡಗಿತ್ತು. ಮನೆಗೆ ಅತಿಥಿಯಂತೆ ಬರುವ ಮಗನ ನಡುವಳಿಕೆ ಅವಳನ್ನು ಘಾಸಿಗೊಳಿಸಿತ್ತಾದರೂ ಮೈಗೆ ಮೆತ್ತಿಕೊಂಡ ಕೊಚ್ಚೆಯಿಂದ ಇತ್ತ ಬರಲಾಗದೆ ಅವಳು ತಳಮಳಪಡುತ್ತಿರುವುದು ನನ್ನ ಗಮನಕ್ಕೂ ಬಂದಿತ್ತು. ಸಾಕಷ್ಟು ಆತ್ಮೀಯಳಾಗಿದ್ದ ಅವಳ ಬಗ್ಗೆ ಕನಿಕರವೂ ಉಂಟಾಗುತ್ತಿತ್ತು. ಅವಳ ಈ ನಡವಳಿಕೆಯಿಂದ ಸ್ವಲ್ಪ ದೂರ ಉಳಿದಿದ್ದ ನಾನು ತುಂಬಾ ದಿನಗಳ ನಂತರ ಅಂದು ಅವಳ ಮನೆಗೆ ಬಂದಿದ್ದೆ. ಬರುಬರುತ್ತಿದ್ದಂತೆ ಅವಳ ಮಗ ನನ್ನನ್ನು ಸ್ವಾಗತಿಸಿದ್ದು ನೋಡಿ ಎಲ್ಲವೂ ಇದ್ದು ಏನೂ ಇಲ್ಲದಂತಾಗಿದ್ದ ಮನೆಯ ಪರಿಚಯವಾಗಿತ್ತು.
—–ಇದರ ಅವಶ್ಯಕತೆ ಇತ್ತಾ?—
ಅವಳು ಕೆಟ್ಟುಹೋಗಿರುವುದು ನನ್ನ ಗಮನಕ್ಕೆ ಬಂದಿರುವ ವಿಚಾರ ಅವಳನ್ನು ತಬ್ಬಿಬ್ಬು ಮಾಡಿತ್ತು.
ಕಣ್ಣಲ್ಲಿ ನೀರು ತುಂಬಿಕೊಂಡು ಅವಳು ಮೌನವಾಗಿದ್ದಳು. ಇನ್ನು ಹೆಚ್ಚಿಗೆ ಕೇಳಲು ನನಗೂ ಮುಜುಗರ ಎನಿಸಿತು. ಇದು ನಿನ್ನ ಲೈಫ್. ನಿನಗಿಷ್ಟ ಬಂದಂತೆ ನೀನು ಇರಲು ನಿನಗೆ ಎಲ್ಲಾ ಸ್ವಾತಂತ್ರ್ಯ ಇದೆ. ನೀನು ನೊಂದಿದ್ದೀಯಾ ಅಂತ ನನಗೂ ಗೊತ್ತು. ನೋವು ಯಾರಿಗೆ ಇರಲ್ಲ ಹೇಳು. ಆದರೆ ಅದನ್ನು ಈ ರೀತಿ ಮರೆಯುವ ಅವಶ್ಯಕತೆ ಇರಲಿಲ್ಲವೇನೋ. ಆತ್ಮಸಮ್ಮಾನ ಕೂಡ ಅಷ್ಟೇ ಮುಖ್ಯ ಅಲ್ವಾ…ಹಸಿವೆ ಆಯ್ತಂತಾ ಸಿಕ್ಕಿಸಿಕ್ಕಿದ್ದನ್ನು ತಿನ್ನೋಕ್ಕಾಗತ್ತಾ…
ನನ್ನ ಕೊನೆಯ ಮಾತು ಅವಳನ್ನು ಘಾಸಿಗೊಳಿಸಿತ್ತೇನೋ. ಮತ್ತೆ ಸಿಗರೇಟಿಗೆ ಮೊರೆ ಹೋಗಿದ್ದಳು. ಅಂದು ರಾತ್ರಿ ನನಗೂ ನಿದ್ದೆ ಬರಲಿಲ್ಲ. ಅವಳು ಪರಿಚಯವಾದ ದಿನಗಳು ನೆನಪಾಗತೊಡಗಿದವು.
————
೫೫ ವರ್ಷದ ಆಕೆ ಗರಿಗರಿ ಕಾಟನ್ ಸೀರೆ ಉಟ್ಟುಕೊಂಡು ಭರ್ರನೆ ಕಾರಿನಲ್ಲಿ ಇಳಿಯುವಾಗ ನಾವೆಲ್ಲಾ ಕಕ್ಕಾಬಿಕ್ಕಿಯಾಗುತ್ತಿದ್ದೆವು. ಗಂಡ ಏರ್ಫೋರ್ಸ್ ನಲ್ಲಿ ಪೈಲಟ್ ಆಗಿದ್ದವರು ತೀರಿಹೋಗಿ ಎರಡು ವರ್ಷ ಕಳೆದಿತ್ತು. ಹುಟ್ಟು ಶ್ರೀಮಂತೆ. ಸುತ್ತಮುತ್ತಲು ಶ್ರೀಮಂತ ಪರಿಸರದಲ್ಲಿಯೇ ಜೀವನ ಕಳೆದ ಅವಳಿಗೆ ಗಂಡನ ಅಗಲಿಕೆ ಇನ್ನಿಲ್ಲದಂತೆ ಕಾಡಿತ್ತು. ಸಂಜೆ ಆಯಿತೆಂದರೆ ಗಂಡನೊಂದಿಗೆ ಗೆಳೆಯರ ಬಳಗದಲ್ಲಿ ನಕ್ಕು ನಲಿಯುತ್ತಿದ್ದ ಆಕೆಗೆ ಬದುಕು ಸಾಗಿಸುವುದೇ ದುಸ್ತರ ಎನ್ನಿಸಿತ್ತು. ಬೇಸರ ಕಳೆದುಕೊಳ್ಳಲಿ ಅಂಥ ಅವಳ ಪರಿಚಯದವರು ನಮ್ಮ ಕಛೇರಿಯಲ್ಲಿ ಯಾವುದೊ ಟೈಪಿಸ್ಟ್ ಕೆಲಸ ಕೊಡಿಸಿದ್ದು ನಮಗೂ ಒಬ್ಬ ಒಳ್ಳೆ ಸೀನಿಯರ್ ಗೆಳತಿಯನ್ನ ಕೊಟ್ಟಂತಾಗಿತ್ತು..
ಬಂದಾಗೆಲ್ಲ ನಮಗೆ ಸ್ವೀಟ್ಸ್, ತಿಂಡಿ ಅದು ಇದು ಎಲ್ಲ ತಂದುಕೊಡೋಳು. ನನಗಿಂತ ಏನಿಲ್ಲವೆಂದರೂ 30 ವರ್ಷ ಹಿರಿಯಳಾದರೂ ನನಗ್ಯಾಕೋ ಅವಳು ತುಂಬಾ ಇಷ್ಟವಾಗುತ್ತಿದ್ದಳು. ಹಿಂದಿ ಸಿನಿಮಾ, ಮುಖೇಶ್, ಲತಾ.. ಹೀಗೆ ನಮ್ಮಿಬ್ಬರ ಟೇಸ್ಟ್ ಒಂದೇ ಆಗಿದ್ದು ನಮ್ಮಿಬ್ಬರನ್ನ ಇನ್ನೂ ಹತ್ತಿರ ಬರುವಂತೆ ಮಾಡಿತ್ತು. ಅವಳ ಪರಿಚಯ ಹೆಚ್ಹುತ್ತಿದ್ದಂತೆ ನಾನು ಅಗಾಗ ಅವರ ಮನೆಗೆ ಹೋಗೋದು ಹೆಚ್ಚಾಗಿತ್ತು. ಎಲ್ಲೋ ಒಂದು ಕಡೆ ಅವಳ ಆತ್ಮೀಯತೆ, ಹಾಸ್ಯ ಪ್ರವೃತ್ತಿ ನನಗೆ ಹೆಚ್ಚು ಹೊತ್ತು ಅವಳೊಂದಿಗೆ ಕಾಲ ಕಳೆಯುವಂತೆ ಮಾಡಿತ್ತು. ವಿಚಿತ್ರವಾಗಿರುವವರನ್ನು ನೋಡಿ ನಗೆಯಾಡೋದ್ರಲ್ಲಿ ಕೂಡ ನಾವಿಬ್ಬರು ತುಂಬಾ ಮುಂದೆ ಇದ್ವಿ ಆದರೆ ಅವಳ ಸಿಗರೇಟ್ ಸೇದುವ ಮತ್ತು ಕಂಠಮಟ್ಟ ಕುಡಿದು ತೂರಾಡುವ ಎರಡು  ಗುಣಗಳು ನನಗೆ ಸ್ವಲ್ಪವೂ ಹಿಡಿಸುತ್ತಿರಲಿಲ್ಲ. ಸಿಗರೇಟ್ ವಾಸನೆಗೆ ನನಗೆ ಎಷ್ಟೋ ಸಾರಿ ವಾಕರಿಕೆ ಬಂದಂತಾಗಿ ನಿಮ್ಮ ಈ ಲೈಫ್ ಸ್ಟೈಲ್ ನನಗೆ ನಿಜಕ್ಕೂ ಹಿಡಿಸಲ್ಲ ಅಂದರೆ ಆಕೆ ನಕ್ಕು ಸುಮ್ಮನಾಗುತ್ತಿದ್ದಳಷ್ಟೇ.
ಇಬ್ಬರು ಮಕ್ಕಳಲ್ಲಿ ಹಿರಿಯ ಮಗಳು ಮದುವೆಯಾಗಿ ದೆಹಲಿ ಸೇರಿದ್ದಳು. ಕೊನೆಯ ಮಗ ರಾಜ್ ಅವಳ ಜೊತೆನೆ ಇದ್ದರೂ ಇಲ್ಲದಂತಿದ್ದ. ಅಮ್ಮ ಬಂದಾಗ ನಾಪತ್ತೆಯಾಗುವ ಈತ ಅಮ್ಮ ಹೊರಹೋಗುತ್ತಿದ್ದಂತೆ ಹಾಜರಾಗುತ್ತಿದ್ದ. ತಾಯಿ ಮಗ ಇಬ್ಬರೂ ಸಿಗರೇಟ್ ಸೇದುವ ಪರಿ ನನಗಂತೂ ಇನ್ನಿಲ್ಲದ ಆಶ್ಚರ್ಯ ಮೂಡಿಸಿತ್ತು. ಅದರಲ್ಲೂ ಇಬ್ಬರೂ ಸ್ವಲ್ಪ ಡಿಸಿಪ್ಲಿನ್ ಮೆಂಟೇನ್ ಮಾಡಿದಂತಿತ್ತು. ಮಗ ತಾಯಿಯ ಮುಂದಾಗಲಿ ಅಥವಾ ತಾಯಿ ಮಗನ ಮುಂದಾಗಲಿ ಸಿಗರೆಟ್ ಹಚ್ಚಿದ್ದನ್ನು ನಾನಂತೂ ಕಂಡಿರಲಿಲ್ಲ. ಸರಿ ಇಷ್ಟಾದರೂ ಒಬ್ಬರಿಗೊಬ್ಬರ ಮೇಲೆ ಅದೇನೋ ಗೌರವ ಇಟ್ಟುಕೊಂಡಿದ್ದಾರಲ್ಲ ಅಂತ ನಾನು ಸುಮ್ಮನಾಗಿದ್ದೆ.
ಕೇರಳ ಮೂಲದ ಅವಳ ಕೈ ಅಡುಗೆಯಲ್ಲಿ ಅದೆಂಥ ಜಾದೂ ಇತ್ತೋ ನಾನರಿಯೆ. ಕ್ಷಣಾರ್ಧದಲ್ಲಿ ಅಡಿಗೆ ಮುಗಿಸುವ ಅವಳ ಡೈನಿಂಗ್ ಟೇಬಲ್ ನಲ್ಲಿ ವೆರೈಟಿ ಡಿಶ್ ರೆಡಿಯಾಗಿರುತ್ತಿತ್ತು. ಒಮ್ಮೆ ಅವಳ ಕೈಅಡುಗೆ ತಿಂದವರು ಇನ್ನು ಅವಳನ್ನು ಮರೆಯಲು ಸಾಧ್ಯವಿರಲಿಲ್ಲ. ನಮ್ಮೆಲ್ಲರ ಜೊತೆ ಇದ್ದಷ್ಟು ಹೊತ್ತು ಚೆನ್ನಾಗಿಯೇ ಇರುತ್ತಿದ್ದ ಆಕೆ ಸಂಜೆಯಾಗುತ್ತಿದ್ದಂತೆ ಮೌನಿಯಾಗುವುದನ್ನು ಎಷ್ಟೋ ಸಾರಿ ನಾನು ಗಮನಿಸಿದ್ದೆ. ಅದ್ಯಾವ ಗಳಿಗೆಯಲ್ಲಿ ಆತ ಪರಿಚಯವಾದನೋ.. ಪರಿಚಯ ನಂಜಿನಂತೆ ಅಂಟಿಕೊಂಡಿತ್ತು. ಆತನಿಗೋ ಪುಕ್ಕಟ್ಟೆ ಮೋಜು. ಆರಂಭದಲ್ಲಿ ಸುಂದರ್ಎನಿಸಿದ್ದ ಸ್ನೇಹ ಬರುಬರುತ್ತ ಅಸಹ್ಯ ಹುಟ್ಟಿಸಿದ್ದು, ಅವಳು ಇನ್ನಿಲ್ಲದಂತೆ ಸೋತು ಸುಣ್ಣವಾಗಿದ್ದಳು. ತಪ್ಪಿನ ಅರಿವಾಗುವ ವೇಳೆಗೆ ತನ್ನ ಆತ್ಮಗೌರವವನ್ನು ತಾನೇ ಹೊಂಡತೋಡಿ ಹೂತುಬಿಟ್ಟಿದ್ದಳು. ಮೊದಲೇ ಅಂತರ್ಮುಖಿಯಂತಿದ್ದ ಮಗ ಈ ಘಟನೆ ಬಳಿಕ ಮತ್ತೆ ದೂರವಾಗಿದ್ದ.
ಅವಳನ್ನು ನೋಡಿ ತುಂಬಾ ವರ್ಷವಾಗಿಬಿಟ್ಟಿದೆ. ಮೊನ್ನೆ ಹಾಗೆ ಒಂದು ಸಿನೇಮಾ ನೋಡುತ್ತಾ ಅವಳು ನೆನಪಾದಳು.
ಹೆಸರು ಲೀಲಾ. ಸಿನೆಮಾ ನೋಡೋಕೆ ಚೆನ್ನಾಗಿಯೇ ಇತ್ತು. ಬಾಬ್ಬಿ ಹುಡುಗಿ ಡಿಂಪಲ್ ಕಪಾಡಿಯಾ  ಎಂದಿನಂತೆ ಪ್ರಬುದ್ಧವಾಗಿಯೇ ನಟಿಸಿದ್ದಾಳೆ. ಡಿಂಪಲ್ ನನಗೆ ತುಂಬಾ ಅಚ್ಹುಮೆಚ್ಚು. ಆದರೆ ಸಿನೆಮಾ ಕೊನೆಯಲ್ಲಿ ತುಂಬಾ ಕಾಡಿತು. ನಮ್ಮಲ್ಲೊಬ್ಬರು ಶ್ರೀಮಂತ ಹೆಣ್ಣುಮಕ್ಕಳ ವಿಷಯ ಬಂದಾಗಲೆಲ್ಲ ಹೇಳೋದುಂಟು. ಶ್ರೀಮಂತ ಹೆಣ್ಣುಮಕ್ಕಳಿಗೆ ಕೆಲವೊಮ್ಮೆ  ಹಣ ಹೇಗೆ ಖರ್ಚು ಮಾಡಬೇಕೆಂದೇ ಗೊತ್ತಾಗದೆ ಏನೇನೋ ಮಾಡ್ತಾರೆ ಅಂತ. ತಮ್ಮನ್ನು ಸಮಾಜ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ಎಷ್ಟೋ ಶ್ರೀಮಂತ ಹೆಣ್ಣುಮಕ್ಕಳು ನಮ್ಮ ಕಣ್ಣ ಮುಂದೆಯೇ ಇದ್ದಾರೆ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗಬೇಡಿ ಎಂದು ಆಗಾಗ ನಾನೂ ಹೇಳುತ್ತೇನೆ.

‍ಲೇಖಕರು avadhi

August 18, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. sprinkle

    how you can say some thing is wrong or right… who sets the yardsticks …. more over i feel that some where our society see this issues through a biased lens. parameters used for judging are too simple to judge the complexities of the mind.
    when you tell she is spoiled is it just because she is old and fell for a youngster. …….. to criticise there are many .. including you or the son whether anyone has shown her any other alternative that is right according to you…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: