
ಮಾಲಾ ಮ ಅಕ್ಕಿಶೆಟ್ಟಿ
ಹಿಂಗ ಮಳಿಗಾಲದ್ದ ದಿನಗಳು ಪ್ರಾರಂಭ ಆಗಿದ್ವು. ಮಳಿ ಒಂದ ಸಮನ ಬರಾತಿತ್ತ. ರೋಡ ಮ್ಯಾಲ ಮಳಿ ನೀರ ಹಿಂಗ ಹರ್ಯಾತಿತ್ತಲಾ, ಒಂದ ಸಣ್ಣ ನದಿ ಮನಿ ಮುಂದ ಬಂದ ಹರ್ಯಾತಿತ್ತ ಅನ್ನೊವಂಗ. ಮಳಿಗ ತಕ್ಕಂತ ಗಾಳಿ, ಚಳಿನೂ ಇತ್ತ. ಮೈ ಮ್ಯಾಲಿನ ಬಟ್ಟೆ, ಅದರ ಮ್ಯಾಲಿನ ಸ್ವೆಟರಗಳು ದೇಹಕ್ಕ ಯಾವ ರಕ್ಷಣಾ ಕೊಡಾತಿರಲಿಲ್ಲ. ತಂಡಿಯಿಂದ ಮೈ ತಣ್ಣಗಾದ್ರ, ಮ್ಯಾಲಿಂದ ಮ್ಯಾಲ ಚಹಾ ಕುಡದ್ರೂ ಅದೇನ ಹೋಗಲಿಲ್ಲ. ಈಗ ನಮ್ಮದ ಕಾಲ ಅಂದ.. ಮಳಿ ಮತ್ತ ಥಂಡಿ ಹಟ ಹಿಡಿದ ಕಾಡಾತಿದ್ವ.
ಅವತ್ತ ರವಿವಾರ ಇದ್ದದ್ದರಿಂದ ಎಲ್ಲಾರೂ ಮನ್ಯಾಗ ಇದ್ದು, ಭರ್ಜರಿ ನಾಸ್ಟಾ ಊಟದಂಗ ತಿಂದು, ಹಂಗ ಹರಟಿ ಹಾಕಾತಿದ್ವಿ. ಅಷ್ಟರಾಗ ಜೋರಾಗಿ “ಕೂರ್ಯೆ ಕೂರ್ಯೆ” ಅಂತ ಧ್ವನಿ ಕೇಳಾತಿತ್ತ. ಗಾಬರಿಯಾಗಿ ಹೊರಗ ಬಂದ ನೋಡಿದ್ರ, ನಾಲ್ಕೈದ ನಾಯಿಗೋಳ ಪಕ್ಕಾ ಬ್ಯಾಟಿ ನಾಯಿಂಗ ಕಾಣಾತಿದ್ವ, ಒಮ್ಮೆಗೆಲೇ ಪಾಪ ಒಂದು ಸಣ್ಣ ಹಂದಿ ಮರಿಯನ್ನ ಅಟ್ಟಾಡಿಸಿಕೊಂಡ್ರ, ಮರಿ ಹಂದಿ ನಾಯಿಗಳ ಕಾಟಾ ತಪ್ಪಿಸಿಕೊಳ್ಳಾಕ “ಕೂರ್ಯೆ ಕೂರ್ಯೆ” ಅಂತ ಕರ್ಕಶ ಧ್ವನಿಯಿಂದ ಕೂಗಿ ಇಡೀ ಓಣ್ಯಾಗಿನ ಜನರನ್ನ ಕೂಡಿಸಿತ್ತ.

ನಾಯಿಗೋಳರ ದೊಡ್ಡ ದೊಡ್ಡವು, ಅವುಗಳ ಚೂಪಾದ ಹಲ್ಲ, ಬಲಿಷ್ಠ ಕಾಲುಗಳಿಂದ ಹಂದಿನ್ನ ಹಂಗ ಓಣಿ ತುಂಬ ಓಡಾಡಸಾಕತ್ರ, ಹೇಳಿ ಕೇಳಿ ಸಣ್ಣ ಮರಿ ಎನ ಮಾಡೋದ ತಿಳಿದ ಹುಚ್ಚ ಹಿಡಿದಾರಂಗ ಒದರಕೋತ ಓಡಾಡಾತಿತ್ತ. ಏನೂ ಗೊತ್ತಾಗದ ಜನ ಹಂಗ “ಹಚ್ಚ ಹಚ್ಚ” ಅಂತದ್ರ, ನಾಯಿಗೋಳ ಎನ ಹೆದರಲಿಲ್ಲ. ಮತ್ತ ಬ್ಯಾಟಿ ಮುಂದವರಿಸಿದ್ವ. ಒಬ್ಬಕ್ಕಿ ತಾಳಲಾರದ ಕಲ್ಲ ಒಗದಳ. ಕಲ್ಲ ನಾಯಿಗ ಹತ್ತಿದ್ದ್ರೂ ಅದೇನ ಕ್ಯಾರೆ ಅನ್ನಲಿಲ್ಲ. ಇನ್ನುಳಿದ ನಾಯಿಗಳ ಜೊತಿ ಮತ್ತ ಆ ನಾಯಿ ಕೊಲ್ಲು ಆಟಾ ಆಡಾಕತ್ತಿತ್ತ.
ಹಸಿವು ಅನ್ನೋದು ಬಹಳ ಕೆಟ್ಟ. ಅದು ಬೇಕ್ಕಾದ್ದ ಹಿಂಸೆಯನ್ನೂ ಮಾಡಸತದ. ಅದೂ ಇಂಥಾ ಧೋ ಧೋ ಮಳಿಗಾಲದಾಗ ಹೊರಗಡೆ ತಿಪ್ಪ್ಯಾಗ ಹಾಕಿದ್ದ ಆಹಾರ ಕೊಳತ ಹೋಗತದ, ಹೀಂಗಾಗಿ ಬೀದಿ ನಾಯಿಗಳಿಗೆ ಆಹಾರ ಸಿಗಲ್ಲ. ಅದಕ್ಕ ಅವು ಬೆಕ್ಕ, ಕೋಳಿ, ಸಣ್ಣ ಕುರಿ, ಆಡ ಮತ್ತ ಹಂದಿಯನ್ನ ಗುಂಪಾಗಿ ಬ್ಯಾಟಿ ಆಡತಾವ. ನಾಯಿಗಳದ್ದರ ಎನ ತಪ್ಪಾ? ಬ್ಯಾಟಿ ಆಡಿ ಹೊಟ್ಟಿ ತುಂಬಿಸಿಕೊಳ್ಳಾಕ ನೋಡಿದ್ವು. ಯಾರಿಗೇ ಆದ್ರೂ ಹಸಿವು ಅನ್ನೋದನ್ನ ತಡ್ಯಾಕ ಆಗಲ್ಲ. ಬಡದಾಡಿ, ಕಿತ್ತಾಡ್ಯಾದ್ರೂ ತಿನ್ನತಾವ.
ಮರಿ ಓಡಾಡಿ ಸುಸ್ತ ಹೊಡದರ, ಒಂದ ನಾಯಿ ಚೂಪಂದ ಹಲ್ಲಿನಿಂದ ಹಂದಿದ ಒಂದ ಕಾಲ ಎಳದರ, ಒಂದ ಕಿವಿ ಜಗ್ಗಾತಿತ್ತ, ಇನ್ನೊಂದ ಅದರ ಗೋಣಿಗೆ ಬಾಯಿ ಹಾಕಿತ್ತ, ಮತ್ತೊಂದ ಅದರ ಪುಷ್ಠ ಭಾಗ ಗಟ್ಟಿಯಾಗಿ ಕಚ್ಚಿ, ಎತ್ತ ಬೇಕೊ ಅತ್ತ ಹಂಗ ಎಳದಾಡಾಕತ್ರ, ಜನರೂ ನಾಯಿಗಳನ್ನ ಓಡಸಾಕ ನೋಡಿ, ನೋಡಿ ಬ್ಯಾಸತ್ರ. ಈ ಎಲ್ಲಾ ಗುದ್ದಾಟದಾಗ ರೋಡ ಮ್ಯಾಲ ಪಾಪ ಮರಿ ಹಂದಿದ ರಕ್ತದ ಹನಿಗೋಳ ಅಲ್ಲಲ್ಲಿ ಚೆಲ್ಲಿತ್ತ. ಒಬ್ಬ ಧೈರ್ಯ ಮಾಡಿ, ನಾಯಿಗೋಳ ಹತ್ರಕ್ಕ ಬಂದ, ಬಾಯಿ ಮಾಡಕೋತ ಕಲ್ಲ ಒಗದ, ಓಡಸಾಕ ನೋಡಿದ. ಇದರಿಂದ ಸ್ವಲ್ಪ ಹೆದರಿದ ನಾಯಿಗಳು, ಓಣಿ ದಾಟಿ ಹೋದ್ವ.
ನಿಸ್ತೇಜವಾಗಿ ಒದರಾಕೂ ಬಾಯಿ ಬರಲ್ಲದ ಹಂದಿ ಹಗರವಾಗಿ “ಕೂರ್ಯೆ ಕೂರ್ಯೆ” ಅಂತಾ ಮೈ ಸವರಕೋತ, ಗಟಾರದ ಬಾಜು ಬಂತ. ಮಳಿ ಜೋರ ಇದ್ದದ್ದರಿಂದ ಹಂದಿ ತೊಯ್ದ ತಂಪಾಗಿತ್ತ. ನಾಯಿಗಳ ಕಡಿತ, ಮಳಿ, ತಂಡಿ ಜೊತೆಗೆ ಮೈಯಿಂದ ಸೋರಾತ್ತಿದ್ದ ರಕ್ತ ಹಂದಿನ್ನ ಅರ್ಧ ಕೊಂದಂಗ ಮಾಡಿದ್ವ.
ಬದುಕಿತ ಬಡ ಜೀವ ಅಂದ ಜನ ತಮ್ಮ ಮನ್ಯಾಗ ಹೋದ್ರ ಉಳಿದವರ ತಮ್ಮ ಕೆಲಸ ಮಾಡಾಕತ್ರ. ಆದರ ಯಮಾ ಬಂದಂಗ ಮತ್ತ ವಾಪಸ್ ಬಂದ ನಾಯಿಗೋಳ ಅದರ ಮ್ಯಾಲ ಎಗರಿದ್ವು. ಮತ್ತ ಅದ ಆರ್ತನಾದ ಕೇಳಾತ್ತಿತ್ತ. ಕಡಿಸಿಕೊಂಡ ರಕ್ತ ಸೋರು ದೇಹದ ಮ್ಯಾಲ ಮತ್ತ ಮತ್ತ ಹಲ್ಯೆ ಮಾಡಾಕತ್ವ. ದೇವರ ಆ ಹಂದಿ ನೋವ ಯಾರಿಗೂ ಕೊಡಬಾರ್ದ ಅನ್ನಿಸಿತ. ಮತ್ತ ಯಾರೋ ಗದರಿಸಿದ್ರ, ಅವು ಮತ್ತ ರೋಡ ದಾಟಿ ಹೋದ್ವ. ಆದರ ಮತ್ತ ಬರಾಂಗಿಲ್ಲ ಅಂತ ಭರವಸೆ ಇರಲಿಲ್ಲ.

ಮರಿಹಂದಿ ಕುಂಟಕೋತ, ತೆವಳಕೋತ, ರಕ್ತ ಸುರಸಕೋತ, ಗಟಾರದಾಗ ಬಿತ್ತ. ಮಳಿ ನೀರ ಜೋರಂಗ ಗಟಾರದಾಗ ಹರದರ ಹಂದಿ ಮೈ ಗಡಗಡ ನಡಗಾತಿತ್ತ. ಇನ್ನೇನ ನಾಯಿಗಳ ಬರಲ್ಲ ಅನ್ನೋದ್ರಾಗ ಮತ್ತ ಎಲ್ಲಿಂದಲೋ ಒಂದ ನಾಯಿ ಬಂದ ಗಟಾರದ ಕಡೆ ಹೋಗಿ ಮತ್ತ ಬ್ಯಾಟಿ ಆಡಾಕ ನೋಡಿತ. ಹಂದಿ ಕೆಳಗ ಬಿದ್ದಿದ್ದರಿಂದ ಮತ್ತ ಒಂದ ನಾಯಿಗೆ ಅದನ್ನ ಮ್ಯಾಲ ಎತ್ತಾಕ ಬರಲಿಲ್ಲ. ಹಂದಿ ಒಂದ ಸಮನ ಜೀವಾ ಒತ್ತೆ ಇಟಗೊಂಡ ಒದರಾತಿತ್ತ. ಇನ್ನ ಬ್ಯಾಟಿ ಆಗಲ್ಲ ಅಂದ ನಾಯಿ, ಆಹಾರ ಇಲ್ಲದ ವಾಪಸ್ ಹೋತ. ಇದರ ನಂತ್ರ ಯಾವ ನಾಯಿ ಸುಳಿಲಿಲ್ಲ.
ಹಂದಿ ಒದರಾಟ ನಿಂತಿರಲಿಲ್ಲ. ಗೋಣ, ಕೈ,ಕಾಲ ಅಲಗಾಡಸತಿತ್ತ. ಎಲ್ಲಾರಿಗೂ ಖುಷಿಯಾಗಿತ್ತ ಹಂದಿ ಸಾಯಲಿಲ್ಲ, ನಾಯಿಗಳಿಗೆ ಬಲಿಯಾಗಲಿಲ್ಲ ಅಂದ. ಹಂಗ ಸುಮಾರ 3 ತಾಸ ಆಗಿರಬೇಕ, ಹಂದಿ ಎಲ್ಲಿ ಮಲಗಿತ್ತೊ ಅಲ್ಲೆ ಇತ್ತ. ಆದರ ಅಲುಗಾಡುವಿಕೆ ನಿಂತಿರಲಿಲ್ಲ.
ಹಂದಿ ಬದುಕಿತು ಅಂತಾ ಜನರ ಅನ್ನಕೊಂಡ್ರ. ನಾಯಿಗಳಿಗೆ ಕಲ್ಲ ಒಗದದ್ದು, ಅವುಗಳ ಆಹಾರ ಕಸಗೊಂಡಂಗ. ಹಿಂಸೆ ನೋಡಲಾರದ ಹಂದಿನ್ನ ಉಳಸಾಕ ಪ್ರಯತ್ನ ಪಟ್ಟ್ರ. ರೋಡ ಮ್ಯಾಲಿನ ರಕ್ತ ಜನ್ರಿಗೆ ಪ್ರತಿಭಟಿಸೋವಂಗ ಮಾಡಿತ್ತ. ಆದ್ರ ನಾಯಿಗೋಳ ತಮ್ಮ ನ್ಯಾಯಬದ್ಧವಾದ ಆಹಾರದಿಂದ ವಂಚಿತ ಆಗಿದ್ವು. ಆದ್ರ ಒಂದು ಖುಷಿ ಎಲ್ಲಾರಿಗೂ ಇತ್ತ.. ಹಂದಿ ನಾಯಿಗಳ ಬಾಯಾಗಿಂದ ಬದಕಿತ ಅಂತ.
ಸಂಜೆ ಆದಾಗ ನೋಡಿದ್ರೂ ಹಂದಿದ ಯಥಾಸ್ಥಿತಿ ಇತ್ತ. ಆದರ ರಾತ್ರಿ ಆದ್ರೂ ಹಂದಿ ಯಾವಾಗ ತನ್ನ ಮಗ್ಗುಲ ಬದಲಾಯಿಸಲಿಲ್ಲೊ ಅವಾಗ ಚೂರ ಆತಂಕ ಆಗಾಕತ್ತಿ. ಬೆಳಗ್ಗೆ ಎದ್ದ ನೋಡಿದ್ರ ಹಂದಿ ಎಲ್ಲಿ ಮಲಗಿತ್ತೋ ಅಲ್ಲೇ ಇತ್ತ. ಸ್ವಲ್ಪ ಹೊತ್ತಿನ್ಯಾಗ ಯಾರೋ ಪೋನ್ ಮಾಡಿದ್ರಂತ ಕಾರ್ಪೋರೇಷನ್ ಗಾಡಿ ಬಂದ, ಸಣ್ಣ ಮರಿನ್ನ ಗಾಡ್ಯಾಗ ಹಾಕಿ ಕರಕೊಂಡ ಹೋದ್ರ.ಅಲ್ಲಿಗೆ ಹಂದಿನೂ ಬದಕಲಿಲ್ಲ, ನಾಯಿಗಳಿಗೆ ಆಹಾರಾನೂ ಸಿಗಲಿಲ್ಲ. ಒಂದರ ಜೀವ ಮತ್ತೊದಂಕ್ಕ ಆಹಾರ ಅನ್ನೋದನ್ನ ಯಾಕೊ ಮನಸ್ಸ ಒಪ್ಪಾಂಗಿಲ್ಲ..
0 ಪ್ರತಿಕ್ರಿಯೆಗಳು