ಹಸಿ ಕೋಡುಗಳು ಒಣಗಿದಂತೆಲ್ಲಾ…

ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ.

ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.

ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.

ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾ ‘ಮಣ್ಣಪಳ್ಳದ ಮೂಕಿಚಿತ್ರ’ದಲ್ಲಿ ಈ ಊರಿನಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.

ಇನ್ನೇನು ಒಣಗಲು ಸಿದ್ಧವಾದ ತರಕಾರಿ ರಾಶಿಯ ಪಕ್ಕದಲ್ಲೇ ಶಾಲೆಯಿಂದ ಆಗಷ್ಟೇ ಬಂದಿದ್ದ ಮಗಳನ್ನು ವ್ಯಾಪಾರದ ಕೂಗಿಗೆ ಒಂದಿಷ್ಟು ಕರೆಯುತ್ತಾ, ಪಕ್ಕದಲ್ಲಿಯೇ ಇದ್ದ ಇವರ ತರಕಾರಿ ರಾಶಿಯನ್ನು ಕಂಡೂ ಕಾಣದಂತೆ ಹೋಗುತ್ತಿರುವ ಕೊಳ್ಳುಗರನ್ನು ಓಲೈಸುತ್ತಾ, ಬಾಡಿಹೋಗುವ ತರಕಾರಿಗಳು ತರಬಹುದಾದ ನಷ್ಟದ ಲೆಕ್ಕಾಚಾರದಲ್ಲಿ ಕೂತಿದ್ದಳು ‘ಸೈಬತಿ ಅಕ್ಕ’. ಮಗಳೂ ಅಮ್ಮ ಹೇಳಿದ್ದಕ್ಕೆ ಗೋಣು ಆಡಿಸುತ್ತಾ ತನ್ನ ಅಂಗೈ ಅಳತೆ ಮೀರಿದ ಬೆಂಡೆಕಾಯಿಗಳನ್ನು ಹಿಡಿದು “ಬನ್ನಿ…ಹತ್ತಕ್ಕೆ ಒಂದು ಪಾಲು…” ಎನ್ನುತ್ತಾ ಅಮ್ಮನನ್ನು ಮೆಚ್ಚಿಸುವ ದಾಟಿಯಲ್ಲಿ ತಾನೂ ವ್ಯಾಪಾರಕ್ಕೆ ಕೈ ಹಾಕಿದ್ದಳು. ‘ಸೈಬತಿ ಅಕ್ಕ’ನ್ನ ಹಾಗೆಯೇ ಕರೆಯುವುದು ಅಂತ ಅವಳ ಜೊತೆ ಕೂತು ವ್ಯಾಪಾರ ಮಾಡುವ ಗದಗದಾಕೆ ಹೇಳಿದ್ದು. ಸಾಮಾನ್ಯವಾಗಿ ಈ ಕಡೆ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೆ ‘ಸೈಬತಿ’ ಎಂದು ಕರೆಯುವ ರೂಢಿ ಇರುವುದರಿಂದ ಅವಳು ‘ಸೈಬತಿ ಅಕ್ಕ’ ಆಗಿರಬಹುದು.

ಮಣಿಪಾಲದ ಹೆಬ್ಬಾಗಿಲಾದ ಟೈಗರ್ ಸರ್ಕಲ್ ನ್ನು ದಾಟಿ ಹೋಗುವ ರೋಡಿನ ಪಕ್ಕದಲ್ಲಿಯೇ ಇರುವ ಮಣ್ಣಿನ ನೆಲಕ್ಕೆ ನೀಟಾಗಿ ಪ್ಲಾಸ್ಟಿಕ್ ಚೀಲಗಳನ್ನು ಹಾಸಿ, ಅದರ ಮೇಲೆ ಪೇಪರ್ ಗಳನ್ನು ಇಟ್ಟು ತರಕಾರಿಗಳನ್ನು ಗುಪ್ಪೆ ಗುಪ್ಪೆಯಾಗಿ ಹಾಕಿಕೊಂಡು ಇವಳಂತೆಯೇ ನಾಲ್ಕಾರು ಹೆಂಗಸರು ಇಲ್ಲಿಯೇ ಕೂತಿರುತ್ತಿದ್ದರು. ಹಸಿ ತರಕಾರಿಗಳ ಪಾಲನ್ನು ಅವತ್ತಿನ ಬೆಲೆಗೆ ಅನುಗುಣವಾಗಿ ವಿಂಗಡಿಸಿಕೊಂಡು, ಇದು ಹತ್ತರ ಪಾಲು, ಇದು ಇಪ್ಪತ್ತರ ಕಟ್ಟು, ಶುಂಠಿ ಕೊಂಬು ಐದಕ್ಕೆ, ಎನ್ನುತ್ತಾ ಬೆಳ್ಳಂಬೆಳಗ್ಗೆ ಶುರುವಿಡುತ್ತಿದರು.

ಬದುಕಲಿಕ್ಕೆ ನೂರು ದಾರಿ ಎನ್ನುವ ದುಡಿಮೆಗಾರ್ತಿ ‘ಸೈಬತಿ ಅಕ್ಕ’ ಕೈಯಗಲ ಜಾಗದಲ್ಲಿ ತನ್ನ ಬದುಕು ಕಟ್ಟಿಕೊಂಡಿದ್ದಾಳೆ. ಬೆಳಗ್ಗಿನ ಎಳೆ ಬಿಸಿಲು, ಮಧ್ಯಾಹ್ನದ ಸುಡು ಬಿಸಿಲು, ಸಂಜೆಯ ತಂಪು ಎಲ್ಲವೂ ಹಾದು ಹೋದದ್ದನ್ನು ಅರಿಯದಂತೆಯೇ ಇರುವ ಇವಳು, ತನ್ನ ಹತ್ತಿರ ಒಬ್ಬ ಗ್ರಾಹಕ ಕೂಡ ಹಾದು ಹೋದರೂ ತಲೆ ಎತ್ತಿ, ನಿಲ್ಲಿಸಿ ವ್ಯಾಪಾರ ಕುದುರಿಸಿಯೇ ಬಿಡುತ್ತಾಳೆ. ಅಂತಹ ಸ್ಪಷ್ಟ ಮಾತು, ಗಟ್ಟಿ ಸ್ವರ, ವ್ಯಾಪಾರಸ್ಥರ ಜಾಣ್ಮೆ ಇಲ್ಲದೆ ಇದ್ದರೂ, ತಕ್ಕ ಮಟ್ಟಿನ ವಿಷಯಗಳನ್ನೆಲ್ಲ ಅಕ್ಕ ಪಕ್ಕದವರನ್ನ ನೋಡಿ ಕಲಿತು ಕೊಂಡವಳು ಇವಳು.

ಹತ್ತಿರದ ಬೇರೆ ಬೇರೆ ಜಾಗಗಳಿಂದ ಹೊರಟು ಇಲ್ಲಿ ಬಸ್ಸು ಇಳಿದು ಬರುವಾಗ ನೀಟಾಗಿಯೇ ಉಟ್ಟಿರುವ ನೈಲಾನ್ ಸೀರೆಗಳನ್ನು ಹನಿಯಷ್ಟು ಮೇಲೆ ಕಟ್ಟಿದ್ದಾರೆ ಎಂದರೆ ಇವರೆಲ್ಲರೂ ದುಡಿಮೆಗೆ ತಯಾರಾಗಿಯೇ ಬಂದಿದ್ದಾರೆ ಎಂದು ಸಂಕೇತ. ಇಲ್ಲಿನ ಹೆಂಗಳೆಯರ ದುಡಿಮೆಗೆ ಟೈಗರ್ ಸರ್ಕಲ್ ಎಂಬ ಜಾಗದ ಮಹಿಮೆಯಿಂದ ಒಂದಿಷ್ಟು ಕಾಸು ಒಲಿಯುತ್ತಾದರೂ, ಲಾಭ ನಷ್ಟಗಳೆರಡೂ ನಾ ಮುಂದು ತಾ ಮುಂದೆನ್ನುತ್ತಾ, ಒಂದನ್ನೊಂದು ಬಿಟ್ಟು ಕೊಡದೆ ಹದದಲ್ಲಿಯೇ ಹೋಗುತ್ತಿರುತ್ತದೆ. 

ಈ ಚಿಕ್ಕ ದುಡಿಮೆಗಾರ್ತಿಯರ ವ್ಯಾಪಾರದ ವಿಷಯಕ್ಕೆ ಬಂದರೆ ಮಣಿಪಾಲದ ಮೂಲೆ ಮೂಲೆಯಲ್ಲೂ ಸಂತೆಗಳಿಗೇನು ಕಡಿಮೆ ಇಲ್ಲ. ವಾರದ ಆಯಾಯ ದಿನ ಮಾರು ದೂರದ ಊರುಗಳಲ್ಲೂ ಸಂತೆಗಳು ಇದ್ದೇ ಇದೆ. ಮಣಿಪಾಲದ ಇನ್ನೊಂದು ತುದಿ ದಾಟಿದರೆ ಸಿಗುವ ಪರ್ಕಳ, ಪೆರಂಪಳ್ಳಿ ದಾರಿಯಿಂದ ಇಳಿದರೆ ಸೀದಾ ಸಂತೆಕಟ್ಟೆ, ಉಡುಪಿ ಹೊಗ್ಗಿದರೆ ಖಾಯಂ ಸಂತೆಯಂತಿರುವ ರಥಬೀದಿ, TAPMI ದಾರಿ, ಶಾಂತಿನಗರದಲ್ಲಿ ವಾರಕ್ಕೊಮ್ಮೆಯಾದರೂ ಸಂತೆ. ಹೀಗೆ ಇಲ್ಲಿ ತರಕಾರಿ, ದಿನಸಿ ಖರೀದಿಗೆ ಆಯಾಯ ದಿಕ್ಕಲ್ಲೂ ಸಂತೆಗಳು ನಡೆಯುತ್ತಲೇ ಇರುತ್ತದೆ.

ಇನ್ನು ಸಾಮಾನ್ಯ ದಿನಸಿ ಅಂಗಡಿಗಳಿಗಂತೂ ಲೆಕ್ಕವೇ ಇಲ್ಲ. ಒಂದಿಲ್ಲೊಂದು ಕಾರಣಕ್ಕೆ ಮಣಿಪಾಲಿಗರು ಒಂದೊಂದು ದಿನಸಿ ಅಂಗಡಿಗಳನ್ನೂ, ತರಕಾರಿ ಮಂಡಿಗಳನ್ನು ನೆಚ್ಚಿಕೊಂಡಿದ್ದಾರೆ. ಇವೆರಡನ್ನೂ ಮೀರಿ ಬೃಹತ್ ಗಾತ್ರದ ಸೂಪರ್ ಮಾರ್ಕೆಟ್ಗಳು, ಬ್ರಾಂಡೆಡ್ ಸ್ಟೋರ್ ಗಳು ಮಣಿಪಾಲಿಗಾರ ದಿನಚರಿಯಿಂದ ಸ್ಥಳೀಯ ಮಾರುಕಟ್ಟೆಗಳ ಜಾಗವನ್ನು ಕಸಿಯುತ್ತಿರುವ ಹೊತ್ತಲ್ಲಿ, ಮಣಿಪಾಲದ ಕೇಂದ್ರ ಭಾಗದಲ್ಲಿ ಕೂತು ತರಕಾರಿಗಳನ್ನು ಪಾಲು ಲೆಕ್ಕದಲ್ಲಿ ಮಾರಿ ಬದುಕುತ್ತೇವೆ ಎಂದು ಹಠ ಹಿಡಿದು ಕೂತಿದ್ದರಲ್ಲ ಇವರಿಗೆ ಏನೆನ್ನಬೇಕು? ಅನ್ನಿಸಿತು.

ಹೀಗೆಲ್ಲ ಯೋಚಿಸುತ್ತ ಸೈಬತಿ ಅಕ್ಕ ಮತ್ತು ಸಂಗಡಿಗರಿಂದ ಅನತಿ ದೂರದಲ್ಲಿ ಕೂತು ಅವರಿಗೆ ಹತ್ತಿರವಾಗ ತೊಡಗಿದ್ದೆ. ಅವರಲ್ಲಿ ಯಾರೊಬ್ಬರೂ ತಾವು ಇದೇ ಊರಿನವರು ಎಂದು ಹೇಳಿಕೊಳ್ಳಲಿಲ್ಲ. ಇವರೆಲ್ಲರೂ ಮಣಿಪಾಲದ ಮಣ್ಣಲ್ಲೇ ವರ್ಷಗಟ್ಟಲೆಯಿಂದ ಬೆಳೆದಿದ್ದರೂ ಬಯಲು ಸೀಮೆ, ಹತ್ತಿರದ್ದೇ ಕಡಲೂರುಗಳು, ಮಲೆನಾಡ ತಪ್ಪಲು ಹೀಗೆ ಹತ್ತಿರವೋ ದೂರವೋ ಬೇರೆ ಬೇರೆ ಊರುಗಳಿಂದ ಬಂದವರಷ್ಟೆ. ಎಲ್ಲಾ ಹೊತ್ತು ಮಣಿಪಾಲಿಗರೇ ತುಂಬಿಕೊಂಡಿರುವ ಜಾಗದ ಮಧ್ಯೆ ತಮ್ಮದೇ ಸಂತೆಯಂತ ಲೋಕ ತೆರೆದು ಅವತ್ತಿನ ದಿನದ ಅವಶ್ಯಕತೆಗಳು ಏನೆಂಬುದನ್ನು ಮಾತಾಡುತ್ತಿರುತ್ತಾರೆ.

ಸೈಬತಿ ಅಕ್ಕ ಮತ್ತು ಅವಳ ಮಗಳಿಗೂ ಎಲ್ಲರಂತದ್ದೇ ಜೀವನದ ಅವಶ್ಯಕತೆಗಳು ಇವೆ. ಬೆಳಗ್ಗೆ ಬರುವಾಗ ಆಗಷ್ಟೇ ಬಿಡಿಸಿದ ಎಳೆ ಕಾಳುಗಳಂತೆಯೇ ಇರುವ ಹಸನು ಮುಖ, ಸಂಜೆ ಕೆಂಪಿಳಿದರೂ ಏನೂ ವ್ಯಾಪಾರ ಆಗದೆ ಇದ್ದಾಗ ಬಿಸಿಲಿಗೆ ಬಾಡಿದ ಕೋಡುಗಳಂತಾಗುತ್ತದೆ. ಹೀಗೆ ಈ ಲಾಭ ನಷ್ಟದ ಏರಿಳಿತವೆಲ್ಲ ಅಮ್ಮ ಮಗಳ ಮುಖದಲ್ಲಿಯೇ ಪ್ರತಿಬಿಂಬಿತ ಆಗುತ್ತಿತ್ತು.

ಅವತ್ತಿನ ದಿನಕ್ಕೆ ಅವತ್ತಿನ ಹೊಟ್ಟೆಗೆ ಅವತ್ತಿನ ದುಡಿಮೆ ಮಾತ್ರ ಎಂಬುದು ಮಾತ್ರ ಅವಳ ಕೈಗೆ ಎಟಕುವುದು. ಬೆಳಿಗ್ಗೆಯಿಂದ ಸಂಜೆವರೆಗೆ ದುಡಿದವಳಿಗೆ ಅವಳ ಆ ದಿನದ ದುಡಿಮೆಗಿಂತ ಖುಷಿ ತರುವುದು ಅವಳಿಗೆ ಕೈ ಜೋಡಿಸಲು ಬರುವ ಮಗಳೇ. ಒಬ್ಬರಿಗೊಬ್ಬರು ಆ ದಿನ ಏನಾಯ್ತು ಎನ್ನುವ ಕಥೆ ಹೇಳುತ್ತಾ ಸಂಜೆಗೆ ಒಟ್ಟಿಗೆ ಪೊಟ್ಟಣ ಕಟ್ಟಿ ಹೊರಡುವುದನ್ನು ನೋಡುವುದೇ ಸೊಗಸು. 

ಇಷ್ಟು ದೊಡ್ಡ ಊರಲ್ಲಿ ಇದೇ ಜಾಗದಲ್ಲಿ, ಈ ದುಡಿಮೆ ಏತಕ್ಕೆ ಎಂಬ ನನ್ನ ಪ್ರಶ್ನೆಗೆ, ನಾವಿಲ್ಲಿಯೇ ಕೂತು ವ್ಯಾಪಾರ ಮಾಡೋದರಲ್ಲಿ ಒಂದಿಷ್ಟು ಲೆಕ್ಕಾಚಾರ ಇದ್ದೇ ಇದೆ ಎಂದು ವಾದಿಸುವ ಇವರು, ಎಲ್ಲಾ ಕಡೆ ಕೆಜಿ ತೂಕದಲ್ಲಿ ಮಾರುವ ತರಕಾರಿಗಳನ್ನು ಪಾಲಿಗೆ ಕೊಡುವುದು ನಾವು ಮಾತ್ರವೇ, ಸಂಜೆ ದುಡಿದು ಬಸ್ ಹತ್ತಲಿಕ್ಕೆ ಇನ್ನೇನು ಗಡಿಬಿಡಲ್ಲಿ ಬರುವ ಹೆಂಗಸರಿಗೆ ಅತೀ ಹತ್ತಿರದಲ್ಲಿ ಸಿಕ್ಕುವವರು ನಾವೇ ಅಲ್ಲವೇ? ಎಷ್ಟು ಜನ ಓಡಾಡುವ ಪ್ರತಿದಿನದ ಸಂತೆಯಂತ ಜಾಗ ಮತ್ಯಾವ ಭಾಗದಲ್ಲಿ ಇದೆ ಹೇಳಿ? ಒಂದು ದಿನ ಹೆಚ್ಚು, ಒಂದು ದಿನ ಕಡಿಮೆ, ಆದರೆ ಈ ಜಾಗದಲ್ಲಿ ಆಗುವ ದುಡಿಮೆ ದುಡಿಮೆಯೇ ಎನ್ನುತ್ತಾ ತನ್ನ ಆಯ್ಕೆಗೆ ಸಮರ್ಥನೆಯ ಮಹಾಪೂರವನ್ನೇ ಹರಿಸಿದಳು. ಇವರೆಲ್ಲರೂ ನನ್ನ ಲೆಕ್ಕಾಚಾರಕ್ಕಿಂತಲೂ ಹೆಚ್ಚು ಅರಿತವರು ಎಂದೆನಿಸಿ ಹ್ಞೂ ಗುಟ್ಟಿದೆ.

ಇದೆಲ್ಲಾ ಹತ್ತು ತಿಂಗಳ ಹಿಂದಿನ ಕಥೆ, ಸದ್ಯಕ್ಕೆ ಮಣಿಪಾಲ ತನ್ನ ಹಿಂದಿನ ಜಾಗಕ್ಕೆ ಹೊರಳಿಕೊಳ್ಳುತ್ತಿದೆಯಾದರೂ ಈ ಹೆಂಗಳೆಯರನ್ನು ಸೇರಿಸಿ ಅನೇಕ ಬದುಕುಗಳು ತಮ್ಮ ದಿಕ್ಕನ್ನು ಬದಲಿಸಿವೆ. ಒಂದೆರಡು ಹೆಂಗಸರು ಅದೇ ಜಾಗದಲ್ಲಿ ವಾಪಸ್ಸು ದುಡಿಮೆ ಮಾಡುತ್ತಿದ್ದಾರೆ, ಆದರೆ  ಹೊಟ್ಟೆ ಪಾಡನ್ನು ಹುಡುಕಿ ಸೈಬತಿ ಅಕ್ಕ ಮತ್ತು ಮಗಳೂ ಬೇರೆ ಯಾವ ಕೆಲಸಕ್ಕೆ ಹೊರಳಿಕೊಂಡರೋ ಗೊತ್ತಾಗಲಿಲ್ಲ. ಆದರೆ ಈ ಸಂಜೆ ಹೊತ್ತಲ್ಲಿ ಮಾತ್ರ ಅವರಿಬ್ಬರೂ ಮಣಿಪಾಲದ ಹೆಬ್ಬಾಗಿಲಲ್ಲಿ ಮಾತ್ರ ಕಾಣಿಸುತ್ತಿಲ್ಲ.

December 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This