…ಹಾಗಂತ ಬೆತ್ತಲಾಗಿ ಓಡಾಡೋಕ್ಕಾಗುತ್ತಾ?

ವೇಶ್ಯೆಯರ ಬಗ್ಗೆ ಮಾತನಾಡಲೂ ಹಿಂಜರಿಯುವ ಸ್ಥಿತಿಯಿರುವಾಗ, ಆ ನತದೃಷ್ಟೆಯರ ಲೋಕವನ್ನು ಮಾತನಾಡಿಸಲು ಮುಂದಾದವರು ಪತ್ರಕರ್ತೆ ಕುಸುಮಾ ಶಾನಭಾಗ. ಸುಮಾರು ಹತ್ತು ವರ್ಷಗಳ ಕಾಲ ಅವರು ಬೀದಿ ವೇಶ್ಯೆಯರ ಬದುಕಿನ ಬಗ್ಗೆ ಅಧ್ಯಯನ ನಡೆಸಿದರು. ವೇಶ್ಯೆಯರ ನಿಕೃಷ್ಟ ಬದುಕಿನ ಕಥೆಗಳನ್ನು ಕುಸುಮಾ ಅವರು ಓರ್ವ ಆಪ್ತಳಂತೆ ಆಲಿಸಿದ್ದಾರೆ. ಆ ನೋವಿನ ಕಥೆಗಳಿಗೆ ಅವರು ಕೊಟ್ಟ ಅಕ್ಷರ ರೂಪವೇ “ಕಾಯದ ಕಾರ್ಪಣ್ಯ” ಎಂಬ ಕೃತಿ. ಅದರಲ್ಲಿ ಬಂದು ಕೂಡಿರುವ ಹಲವು ಕಥೆಗಳ ನಡುವೆ, ಬೀದಿ ಹುಡುಗಿಯೊಬ್ಬಳು ನಿತ್ಯ ಡೈರಿ ಬರೆಯುವ ರೂಢಿ ಇಟ್ಟುಕೊಂಡಿದ್ದರ ಬಗೆಗಿನ ವಿವರ ಮಿಂಚಂತೆ ಸೆಳೆಯುತ್ತದೆ. ಆಕೆಯ ಡೈರಿಯಲ್ಲಿನ ಎರಡು ಪ್ರಸಂಗಗಳನ್ನು ಕುಸುಮಾ ಅವರು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಕತ್ತಲ ಲೋಕದ ಕರಾಳತೆಯ ನೂರು ಮುಖಗಳನ್ನು ಹಿಡಿದಿಟ್ಟಿವೆ ಈ ತಳಮಳದ ದಾಖಲಾತಿಗಳು.

* * *

painting11.jpg

“ಹಿಂದಿನ ದಿನ ಬೀಟು ಪೊಲೀಸರಿಗೆ ಪೈಸೆ ಹಣ ಕೊಟ್ಟಿರಲಿಲ್ಲ. ಇವತ್ತು ಬೀದಿಯಲ್ಲಿ ಮತ್ತೆ ನನ್ನನ್ನು ನೋಡಿದರೆ ಅವನು ಎಳೆದುಕೊಂಡು ಹೋಗಿ ಸ್ಟೇಟ್ ಹೋಮಿನಲ್ಲಿ ಹಾಕುವುದು ಗ್ಯಾರಂಟಿ. ನಾನು ಬೀದಿಗೆ ಬಂದುಬಿಟ್ಟಿದ್ದೇನೆ. ಕ್ಯಾಶ್ ಫಾರ್ಮಸಿ ಹತ್ತಿರ ನಿಂತಿದ್ದೆ. ರಿಚ್ ಮಂಡ್ ಸರ್ಕಲ್ ಕಡೆಯಿಂದ ಪೊಲೀಸರು ಬರುತ್ತಿರುವುದು ನೋಡಿದೆ. ತಪ್ಪಿಸಿಕೊಳ್ಳೋದು ಹೇಗೇಂತ ಯೋಚಿಸುತ್ತಿದ್ದೆ. ಕ್ಯಾಶ್ ಫಾರ್ಮಸಿಯ ಒತ್ತಿನ ಹೋಟೆಲಿನಿಂದ ಯುವಕನೊಬ್ಬ ಹೊರಗೆ ಬಂದ. ಅವನು ಪಾರ್ಕ್ ಮಾಡಿದ್ದ ಬೈಕನ್ನು ಸ್ಟಾರ್ಟ್ ಮಾಡುವುದರಲ್ಲಿದ್ದ. ನಾನು ಓಡಿ ಹೋಗಿ ಬೈಕ್ ಹತ್ತಿರ ನಿಂತುಕೊಂಡೆ. ನನಗೆ ಡ್ರಾಪ್ ಕೊಡುವಂತೆ ಹೇಳಿದೆ. ಅವನು ಒಪ್ಪಲಿಲ್ಲ. ಗಲಾಟೆ ಮಾಡೋದಾಗಿಯೂ, ಜೋರಾಗಿ ಕಿರುಚಿಕೊಳ್ಳುತ್ತೇನೆಂತಲೂ ಹೇಳಿದೆ. ಅವನು ಹೆದರಿ ಹೋದ. ಎಲ್ಲಿಗೆ ಬಿಡಬೇಕೂಂತ ಕೇಳಿದ. ನಾನು ಶಿವಾಜಿ ನಗರಕ್ಕೆ ಬಿಡುವಂತೆ ಕೇಳಿದೆ. ಅವನು ನನ್ನೊಡನೆ ಯಾಕೆ ಏನು ಅಂತ ಒಂದು ಮಾತೂ ಆಡಲಿಲ್ಲ. ಶಿವಾಜಿನಗರದಲ್ಲಿ ಬಿಟ್ಟು ಹೊರಟು ಹೋದ.

“ಆ ಬೀಟ್ ಪೊಲೀಸಿಗೆ ಎಷ್ಟು ಹಣ ಕೊಟ್ಟರೂ ಸಾಕಾಗುತ್ತಿರಲಿಲ್ಲ. ನಮ್ಮ ಸಂಪಾದನೆಯ ಅರ್ಧದಷ್ಟು ಅವನ ಜೇಬಿಗೇ ಹೋಗುತ್ತಿತ್ತು. ಅವನಿಗೆ ಬುದ್ಧಿ ಕಲಿಸಲೇಬೇಕು ಅಂದುಕೊಂಡಿದ್ದೆ. ನಿನ್ನೆ ರಾತ್ರಿ ಆ ಅವಕಾಶ ನನಗೆ ಸಿಕ್ಕಿತು. ರಸ್ತೆಗೆ ಬಂದಿದ್ದೆ. ಮಾಮೂಲಿ ಕೇಳಿದ. ಯಾವತ್ತಿನಷ್ಟೆ ಕೊಟ್ಟೆ. ಸಾಲದೆಂದು ದಬಾಯಿಸಿದ. ನಾನು ಅವನ ಕೈಯಲ್ಲಿದ್ದ ಸ್ಟಿಕ್ ಕಿತ್ತುಕೊಂಡು ಓಡಿದೆ. ವುಡ್ ಲ್ಯಾಂಡ್ ಮುಂದಿನ ಸರ್ಕಲ್ ವರೆಗೂ ಓಡಿಕೊಂಡು ಹೋದೆ, ಅಲ್ಲಿ ಆಟೋ ಹತ್ತಿಕೊಂಡು ಮನೆಗೆ ಹೋಗಿಬಿಟ್ಟೆ. ಇನ್ನೂ ಸರಿಯಾಗಿ ಬೆಳಗಾಗಿರಲಿಲ್ಲ. ಮನೆ ಬಾಗಿಲು ತಟ್ಟಿದ ಸದ್ದಾಯಿತು. ಬಾಗಿಲು ತೆಗೆದೆ. ಅದೇ ಪೊಲೀಸ್ ನಿಂತಿದ್ದ. “ಸ್ಟಿಕ್ ಕೊಡು ದಮ್ಮಯ್ಯ” ಹೇಳಿದ, ನಾನು ಮಾಮೂಲಿಗಿಂತ ಹೆಚ್ಚು ವಸೂಲಿ ಮಾಡುತ್ತಿರುವುದಕ್ಕೆ ತರಾಟೆಗೆ ತೆಗೆದುಕೊಂಡೆ. ಅವನು ಇನ್ನು ಮುಂದೆ ಹೆಚ್ಚು ವಸೂಲಿ ಮಾಡೋದಿಲ್ಲ, ಹಿಡಿದು ಪೆಟ್ಟಿಕೇಸ್ ಹಾಕುವುದಿಲ್ಲ ಅಂದ ಮೇಲೆ ಸ್ಟಿಕ್ ಕೊಟ್ಟು ಕಳಿಸಿದೆ. ಬೀಟ್ ಪೊಲೀಸರು ಸ್ಟಿಕ್ ಇಲ್ಲದೆ ಕೆಲಸ ಮಾಡುವಂತಿಲ್ಲ. ಇದು ಗೊತ್ತಿದ್ದುದರಿಂದಲೇ ಹೀಗೆ ಮಾಡಿದ್ದೆ.

“ರಿಚ್ ಮಂಡ್ ರಸ್ತೆ, ಮಾರ್ಕ್ ರಸ್ತೆ, ಎಂ.ಜಿ.ರಸ್ತೆಗೆ ರಾತ್ರಿ ಬರುತ್ತಿದ್ದ ನಮ್ಮನ್ನೆಲ್ಲ ಪೊಲೀಸರು ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಗೆ ಕರೆದೊಯ್ದರು. ಸೂಳೆಗಾರಿಕೆ ಮಾಡ್ತೀರಾಂತ ಪೊಲೀಸ್ ಇನ್ಸ್ ಪೆಕ್ಟರ್ ನಮಗೆಲ್ಲ ಲಾಠಿ ಬೀಸಿ ಬೀಸಿ ಹೊಡೆದರು. ಕೈ ಬಳೆಗಳು ಒಡೆದು ಗಾಯವಾಯಿತು. ಮೈ ಮೇಲೆ ಕೆಂಪು ಬರೆಗಳು. ಅವರು ಹೊಡೆಯುತ್ತಲೇ ಇದ್ದರು. ನಾವೆಲ್ಲ ಅಳುತ್ತಿದ್ದೆವು. ಲಾಠಿ ಎಸೆದು ಕುರ್ಚಿಯಲ್ಲಿ ಕುಳಿತುಕೊಂಡರು. ನಮ್ಮ ಕೈಯಲ್ಲಿದ್ದ ವಾಚುಗಳನ್ನೆಲ್ಲ ಬಿಚ್ಚಿಸಿ ನೆಲಕ್ಕೆ ಹಾಕಿದರು. ಅವನ್ನೆಲ್ಲಾ ತುಳಿದು ಹಾಕಿದರು. ಒಬ್ಬರೂ ವಾಚುಗಳನ್ನು ತೆಗೆದುಕೊಳ್ಳುವ ಹಾಗಿಲ್ಲವೆಂದು ಆರ್ಡರ್ ಮಾಡಿ ಮನೆಗಳಿಗೆ ಹೋಗುವಂತೆ ಆಜ್ಞೆ ಮಾಡಿದರು. ಜೊತೆಗೆ ನಾವು ಎಲ್ಲಿ ಹೋಗುತ್ತೇವೆಂದು ನೋಡಲು ಹಿಂದೆಯೇ ಪೊಲೀಸರನ್ನು ಕಳಿಸಿದರು. ಇನ್ಸ್ ಪೆಕ್ಟರ್ ಅವತ್ತು ಇಪ್ಪತ್ತು ಮೂವತ್ತು ಹುಡುಗಿಯರ ಅನ್ನಕ್ಕೆ ಕಲ್ಲು ಹಾಕಿದರು.”

*

“ಗೂಂಡಾಗಳಿಂದ ತಪ್ಪಿಸಿಕೊಳ್ಳುವುದು ನಮಗೆ ಯಾರಿಗೂ ಸುಲಭವಲ್ಲ. ಯಾರು ಗೂಂಡಾಗಳು ಎಂದು ಗುರುತಿಸುವುದು ಕಷ್ಟ. ಕೆಲವು ಸಲ ಮೆಜೆಸ್ಟಿಕ್ ಗೂಂಡಾಗಳು ರಿಚ್ ಮಂಡ್ ಸರ್ಕಲ್ ಕಡೆಗೆ ಬರುತ್ತಾರೆ, ಹುಡುಗಿಯರು ಬೇಕೂಂತ. ಆದರೆ ಗೂಂಡಾಗಳು ನಾವು ಓಡಾಡುವ ರಸ್ತೆಗಳಿಗೆ ಪೊಲೀಸರ ಕಣ್ಣು ತಪ್ಪಿಸಿ ಹಾಜರಾಗುತ್ತಾರೆ. ಎಷ್ಟೋ ಸಲ ಅವರು ಪೊಲೀಸರನ್ನೂ ಕ್ಯಾರ್ ಮಾಡೋದಿಲ್ಲ. ನನ್ನನ್ನು ಕೆಲವು ಹುಡುಗರು ಕರೆದರು. ಅವರು ದುಡ್ಡು ಕೊಡುವುದಿಲ್ಲವೆಂದು ನಾನು ಹೋಗಲು ಒಪ್ಪದೆ ಮಾರ್ಕ್ ರಸ್ತೆಯಿಂದ ಚರ್ಚ್ ಸ್ಟ್ರೀಟ್ ಗೆ ತಿರುಗಿಕೊಂಡೆ. ಕಾರಿನಲ್ಲಿ ಎಂ.ಜಿ. ರೋಡಿನಿಂದ ಬಂದ ಈ ಹುಡುಗರು ನನ್ನನ್ನು ಎತ್ತಿ ಕಾರೊಳಗೆ ಹಾಕಿಕೊಂಡರು. ಕರೆದಾಗ ಬರಲಿಲ್ಲವೆಂದು ಮುಖದ ಮೇಲೆ ಬ್ಲೇಡಿನಿಂದ ಗೀರಿದರು. ರಕ್ತ ಬರುತ್ತಿತ್ತು, ಒರೆಸಲೂ ಬಿಡಲಿಲ್ಲ. ಅಶ್ಲೀಲವಾಗಿ ಮಾತಾಡಿಕೊಂಡು ಕಬ್ಬನ್ ಪಾರ್ಕಿನೊಳಗೆ ಕರೆದುಕೊಂಡು ಹೋದರು. ಒಬ್ಬರಾದ ಮೇಲೆ ಒಬ್ಬರು ಉಪಯೋಗಿಸಿಕೊಂಡರು. ನನ್ನ ಬಟ್ಟೆಗಳನ್ನೆಲ್ಲಾ ಸುತ್ತಿ ಕಾರೊಳಗೆ ಹಾಕಿಕೊಂಡು ನನ್ನನ್ನು ಅಲ್ಲೇ ಬಿಟ್ಟು ಹೋಗಿಬಿಟ್ಟರು. ನಾನು ಕಿರುಚಿಕೊಂಡೆ. ಗೋಗರೆದೆ. ಕೇಳಲಿಲ್ಲ. ಮೈ ಮೇಲೆ ಬಟ್ಟೆಯೇ ಇಲ್ಲ. ಬೆಳಗಾದರೆ ಜನ ತಿರುಗಾಡುತ್ತಾರೆ. ದಿಕ್ಕು ತೋಚದಂತೆ ಆಯಿತು.

“ಇನ್ನೂ ಬೆಳಕಾಗಿರಲಿಲ್ಲ. ಪೊಲೀಸರು ಹೋಗುತ್ತಿರುವುದು ನೋಡಿದೆ. ಅವರನ್ನು ಜೋರಾಗಿ ಕರೆದೆ. “ಅಣ್ಣಾ, ಗೂಂಡಾಗಳು ಹೀಗೆ ಮಾಡಿವೆ. ಮೈ ಮೇಲೆ ಬಟ್ಟೆಯಿಲ್ಲ. ಮನೆಗೆ ಹೋಗಬೇಕು, ಸ್ವಲ್ಪ ಸಹಾಯ ಮಾಡಣ್ಣ…” ಪೊಲೀಸರಲ್ಲೂ ಒಳ್ಳೆಯವರಿರುತ್ತಾರೆ. ಬೆಡ್ ಶೀಟ್ ತಂದುಕೊಟ್ಟರು. ಆಟೋ ಮಾಡಿಕೊಟ್ಟು, ಡ್ರೈವರನಿಗೆ ನನ್ನನ್ನು ಮನೆಗೆ ಬಿಡುವಂತೆ ಹೇಳಿದರು. ಆ ಪೊಲೀಸಣ್ಣನಿಗೆ ಒಳ್ಳೇದಾಗಲೀಂತ ದೇವರನ್ನು ಬೇಡಿಕೊಂಡೆ. ನಾನು ದೇವರ ಪೂಜೆ ಮಾಡುವಾಗೆಲ್ಲಾ ಆ ಪೊಲೀಸಣ್ಣನಿಗೆ ಒಳ್ಳೇದಾಗಲೀಂತ ಪ್ರಾರ್ಥಿಸುತ್ತೇನೆ. ನಾವು ಸೂಳೆಯರೇ ಇರಬಹುದು. ಹಾಗೇಂತ ಮೈಮೇಲೆ ಬಟ್ಟೆಯಿಲ್ಲದೆ ರಸ್ತೆಯಲ್ಲಿ ಓಡಾಡಲಿಕ್ಕಾಗುತ್ತಾ?”

‍ಲೇಖಕರು avadhi

September 1, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹಿರೋಶಿಮಾದಲ್ಲಿ ಆರತಿ  

ಹಿರೋಶಿಮಾದಲ್ಲಿ ಆರತಿ  

          ಆರತಿ ಎಚ್.ಎನ್     ನ್ಯೂಕ್ಲಿಯರ್ ಬಾಂಬ್ ದಾಳಿಯಲ್ಲಿ ನಲುಗಿದ ಹಿರೋಶಿಮಾ, ತತ್ತರಿಸುವ...

… ಆಮೆನ್! 

… ಆಮೆನ್! 

ಸುಮಾರು ಹೊತ್ತು ಸುಧಾರಿಸಿಕೊಂಡ ನಂತರ ಎದ್ದು ನಮ್ಮ ನಡಿಗೆ ಮುಂದುವರೆಸುವ ತುಸು ಮಾತ್ರದ ತ್ರಾಣ ಬಂದಿತು. ಆದರೆ ಅಪ್ಪ-ಅಮ್ಮ ನಡೆಯುವ...

ಸಮಾಧಿಗಳ ಮಧ್ಯೆ ‘ಭಾರತಿ ಟೂಂಬ್’

ಸಮಾಧಿಗಳ ಮಧ್ಯೆ ‘ಭಾರತಿ ಟೂಂಬ್’

ಇಡೀ ಜಾಗದ ತುಂಬ ಓಡಾಡಿ ಫೋಟೋಗಳನ್ನು ತೆಗೆದಿದ್ದಾದ ನಂತರ ಅಲ್ಲಿಯವರೆಗೆ ನಾವು ನಡೆದಿರುವುದು ಎರಡು ಕಿಲೋಮೀಟರ್‌ ಆಸುಪಾಸು ಅಂದ ಮಹಮ್ಮದ್. ಹಾಗೆ...

15 ಪ್ರತಿಕ್ರಿಯೆಗಳು

 1. ಚೇತನಾ

  ಒಂದು ಸುದೀರ್ಘ ನಿಟ್ಟುಸಿರು…
  ಅದೂ ಎದೇಲೇ ಸಿಕ್ಕಿ ಹಾಕ್ಕೊಂಡ್ ಬಿಡ್ತು.
  ಕಾಯದ ಕಾರ್ಪಣ್ಯ ಓದಬೇಕು.

  ಪ್ರತಿಕ್ರಿಯೆ
 2. ಲಕ್ಷ್ಮೀನರಸಿಂಹ

  ಇದೊಂದು ಬಗೆಯ ಅಧೋಲೋಕದ, ಮಧ್ಯಮ ವರ್ಗದ ‘ಭದ್ರಲೋಕ’ಕ್ಕೆ ಶಾಕ್ ಕೊಡುವ ವೃತ್ತಾಂತ. ‘ಪ್ರಗತಿಪಂಥ’ದ ಕಥಾನಕಗಳಲ್ಲಿ ಈ ತರಹದ ಜಗತ್ತಿನ ಒಂದು ರೀತಿಯ ಅನಾವರಣ ಆಗಿದೆ. ಈ ಅಧೋಲೋಕದ ಈಗಿನ ಸದ್ಯದ ಪರಿಯನ್ನು ಬಿಂಬಿಸುವಂತಹ ಸಾಹಸವನ್ನು ಒಬ್ಬ ಪತ್ರಿಕಾಕರ್ತೆ ಮಾಡಿರುವುದು ಪುಸ್ತಕವನ್ನು ಓದಲು ಪ್ರೇರೇಪಿಸುತ್ತಿದೆ.

  ಪ್ರತಿಕ್ರಿಯೆ
 3. parasurama kalal

  §tÚzÀ¯ÉÆÃPÀzÉƼÀUÉ §mÉÖ E®èzÀ d£ÀgÀ ºÁqÀÄ-¥ÁqÀÄ PÀgÀ¼ÀÄ aÃjzÀAvÉ EvÀÄÛ.
  -¥ÀgÀıÀÄgÁªÀÄ PÀ¯Á¯ï

  ಪ್ರತಿಕ್ರಿಯೆ
 4. Jaishankar P

  Where is this Book available I tried in Sapna And Ankita Book stall both of them doesn’t have this Book.

  ಪ್ರತಿಕ್ರಿಯೆ
 5. ಜಗದೀಶ್

  ಇವರೆಲ್ಲ ವ್ಯವಸ್ಥೆಯ ಬಲಿಪಶುಗಳು, ಅಪರಾದಿ ಭಾವ ಕಾಡುತ್ತದೆ

  ಪ್ರತಿಕ್ರಿಯೆ
 6. Nagendra Shah

  ಕೆಲ ವೇಶ್ಯೆಯರೂ ನಿಯತ್ತಿನಿಂದಿರುತ್ತಾರೆ. ತಮ್ಮ ವೃತ್ತಿಯಲ್ಲಿದ್ದಾಗ ಮಾತ್ರ ಗಿರಕಿಯ ಜೊತೆ ಕಾಮನೆ. ಅದು ಬಿಟ್ಟು ಅವರು ಬೇರೆಲ್ಲೆ ಸಿಗಲಿ ನಿಮ್ಮನ್ನು ಕ್ಯಾರೆ ಎಂದು ಕೂಡ ಅನ್ನುವುದಿಲ್ಲ. ಹಾಗೆ ವೇಶ್ಯಾವೃತ್ತಿಯನ್ನು ಬಿಟ್ಟು ಬದುಕುವ ಪ್ರಯತ್ನವನ್ನು ಮಾಡುತ್ತಾರೆ. ನನ್ನ ಸ್ನೇಹಿತನೊಬ್ಬನ ಅನುಭವ ಕೇಳಿ. ಆತ ಒಂದು ಸಂಸ್ಥೆಗೆ ಇಂಟರ್‌ವ್ಯೂಗೆ ಹೋಗಿದ್ದನಂತೆ. ಅದರ ಹಿಂದಿನ ರಾತ್ರಿಯೆ ಒಬ್ಬಳೊಡನೆ ಇದ್ದು ಬಂದಿದ್ದನಂತೆ. ನೋಡಿದರೆ ಮಾರನೆ ದಿನ ಆ ಹುಡುಗಿಯು ಇಂಟರ್‌ವ್ಯೂಗೆ ಬಂದಿದ್ದಳಂತೆ. ಇವನಿಗೆ ಮುಜುಗರ. ಎಲ್ಲಿ ಆಕೆ ಮಾತನಾಡಿಸಿ ತನ್ನ ಮಾನ ಕಳೆಯುತ್ತಾಳೋ ಎಂದು. ಆಕೆಯ ಕಣ್ಣು ತಪ್ಪಿಸಿ ಕೂರಲು ನೋಡುತ್ತಿದ್ದನಂತೆ. ಆದರೆ ಆ ಹುಡುಗಿ ಇತನ ಕಡೆ ಕಣ್ಣೆತ್ತಿಯು ನೋಡುತ್ತಿಲ್ಲವಂತೆ. ಹೇಗೋ ತನ್ನ ಇಂಟರ್‌ವ್ಯೂ ಮುಗಿಸಿ ನಿರಾಳವಾಗಿ ಬಂದನಂತೆ. ಆಮೇಲೆ ಆತನಿಗೆ ಅಲ್ಲಿ ಕೆಲಸವೂ ಸಿಕ್ಕಿತಂತೆ. ಇಷ್ಟೆಲ್ಲ ಆದ ಮೇಲೆ ಆತನಿಗೆ ಏನನ್ನಿಸಿತೊ ಏನೋ ಆ ಹುಡುಗಿಗೆ ಅಂದು ಅಲ್ಲಿ ತನ್ನ ಮಾನ ಕಳಿಯದಿದ್ದಕ್ಕೆ ಕೃತಜ್ನತೆ ಹೇಳಬೇಕೆನಿಸಿ ಅವಳ ಅಡ್ಡಾಕ್ಕೆ ಹೋಗಿ ಆ ಹುಡುಗಿಯನ್ನು ಹುಡುಕಿ ಬುಕ್ ಮಾಡಿ ರೂಮು ಸೇರಿದ ಮೇಲೆ ಅವಳಿಗೆ ಥ್ಯಾಂಕ್ಸ್ ಹೇಳಿದ. ಅಂದು ಅವನ ಮಾನ ಕಳೆಯದಿದ್ದಕ್ಕೆ. ಆ ಹುಡುಗಿ ನಕ್ಕು. ಆ ಕೆಲಸ ನನಗೆ ಸಿಗುತ್ತಿತ್ತು. ಯಾಕೆಂದರೆ ಅಲ್ಲಿ ಇಂಟರ್‌ವ್ಯೂ ಮಾಡಿದ ವ್ಯಕ್ತಿ ನನ್ನ ಗಿರಾಕೆಯೆ ಆಗಿದ್ದ. ಆದರೆ ಅಲ್ಲಿ ನಿನ್ನನ್ನು ಕಂಡು ನನಗಿಂತ ನಿನಗೆ ಆ ಕೆಲಸದ ಅವಶ್ಯಕತೆ ಇದೆ ಎಂದು ಗೊತ್ತಿತ್ತು. ನನಗೆ ಬದುಕಲು ದಾರಿಯಿದೆ. ಆದರೆ ನಿನಗೆ ವೇಶ್ಯೆಯಾಗಲು ಆಗುವುದಿಲ್ಲವಲ್ಲ ಎಂದು ನಕ್ಕು ಸೆರಗು ಜಾರಿಸಿದಳಂತೆ ಮುಂದಿನ ಕಾರ್ಯಕ್ರಮಕ್ಕೆ… ಸ್ನೇಹಿತನಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಕೆಲವು ಬಾರಿ ಅವರುಗಳೊಡನೆ ರಾತ್ರಿ ಕಳೆಯುವಾಗ ಆತ್ಮಿಯರಾಗುತ್ತ ತಮ್ಮ ವೃತ್ತಾಂತನ್ನೆಲ್ಲ ಬಿಚ್ಚಿಟ್ಟಿರುತ್ತಾರೆ. ನನ್ನ ಸ್ನೇಹಿತ ತನ್ನ ಮನೆಯ ಪರಿಸ್ಥಿತಿಯನ್ನು ಇಂಟರ್‌ವ್ಯೂಗೆ ಹೋಗುವ ಹಿಂದಿನ ರಾತ್ರಿ ಸೇರಿದ್ದನಲ್ಲ… ಆಗ ಅವಳಿಗೆ ಹೇಳಿದ್ದನಂತೆ.

  ಪ್ರತಿಕ್ರಿಯೆ
 7. my pen from shrishaila

  ವೇಶ್ಯೆಯರ ಜೀವನ ಘೋರ! ಅವರದು ಮರೀಚಿಕೆಯ ಬದುಕು. ಎಲ್ಲರಿಂದಲೂ ತುಳಿಸಿಕೊಳ್ಳುವುದೇ ಅವರ ಜೀವನ. ಯಾಕಾಗಿ ಮನುಷ್ಯನಿಗೆ ಕರುಣೆಯೆಂಬುವುದಿಲ್ಲ?
  ಶೈಲಜ

  ಪ್ರತಿಕ್ರಿಯೆ
 8. vijaykumarnargund

  ಛೇ! ಬದುಕು ಅದೆಷ್ಟು ಕ್ರೂರಿ ಎನಿಸುತ್ತಲ್ಲ. ವೇಶ್ಯಾವಾಟಿಕೆ ಅನಿವಾರ್ಯವೋ, ಅವಶ್ಯಕತೆಯೋ ಹೇಳುವುದು ಕಷ್ಟ. ಆದರೆ ಅವರ ಸ್ಥಿತಿ ಮಾತ್ರ ದುರ್ಭರ ಎನಿಸುತ್ತದೆ. ಇಡೀ ಲೇಖನದ ತುಣುಕೆ ಕರುಣಾಜನಕವಾಗಿರುವಾಗ ನಿಜವಾಗಿಯೂ “ಕಾಯದ ಕಾರ್ಪಣ್ಯ” ಕರುಳು ಹಿಂಡುವಂತಹ ಘಟನೆಗಳನ್ನು ಹೊಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಖಂಡಿತಾ ಕಾಯದ ಕಾರ್ಪಣ್ಯ ಓದುವ ಮನಸಾಗುತ್ತಿದೆ……………..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: