’ಹಾಡಿನ್ನು ಬಾಕಿಯಿತ್ತು…’ – ಕೆ ನೀಲಾ ಕಥೆ

ಕಂಗಳ ಮರೆಯ ಬೆಳಗು

ನೀಲಾ ಕೆ

ಹುಟ್ಟು ಆಕಸ್ಮಿಕ. ಸಾವು ಖಚಿತ. ಸಾಯುವುದೇ ಹೌದಾದರೆ ಹುಟ್ಟುವುದು ಯಾಕೆ ಬೇಕಿತ್ತು? ಇದೆಂಥ ಪ್ರಕೃತಿಯ ಆಟ? ಗೆಳತಿಯ ಪ್ರಶ್ನೆಗಳು ಒಮ್ಮೊಮ್ಮೆ ಬೇಕೆಂದೇ ನಿಗೂಢೀಕರಣದತ್ತ ಮುಖಮಾಡಿ ನಿಲ್ಲುತ್ತವೆ. ‘ಹುಟ್ಟು-ಸಾವು ಜೀವಭಾವದ ಭ್ರಮಿ .. ..’ ಧುನಿಯ ಮುಂದೆ ಕೂತು ಗಾಂಜಾ ಚಿಲುಮಿಯ ದಮ್ಮೆಳೆಯುತ ಅಂಗೈ ಚಪ್ಪಾಳೆಯೇ ಪಕ್ಕವಾದ್ಯದಂತೆ ಬಳಸಿ ಹಾಡುವ ಸಂತರ ಧುಂಧಿನ ಲೋಕದಲ್ಲಿ ಅನೇಕ ಬಾರಿ ತೇಲಿ ಹೋದ ಗೆಳತಿ, ಈಗ ನನ್ನೊಂದಿಗೆ ಸಾವಿನ ಬಗ್ಗೆ ಸತ್ಯವಾಗಲೂ ನಿತ್ಯ ನಿರಂತರ ತರ್ಕ ಹೂಡುತ್ತಾಳೆ. ಈ ನೆಲದ ಮೇಲೆ ನಿಂತು.

ಸಾವು ಎಲ್ಲರಿಗೂ ಕಾಡಿದೆ. ಸಾವಿನ ಸಮ್ಮುಖದಲ್ಲಿ ಎಲ್ಲರೂ ಅಕ್ಷರಶ: ಕೂಸಿನಂತಾಗುವುರೇನೋ.. ಎಲ್ಲ ತರ್ಕಗಳನ್ನು ಮೀರಿ ಧುತ್ತೆಂದು ಅವತರಿಸಿ ಬಿಡುವ ಸಾವಿನೊಂದಿಗೆ ಕದನ ಹಿಡಿಯದವರು ಯಾರು? ಬದುಕು ಸಹ್ಯವಾಗದೇ ಇದ್ದಾಗ ಸಾವಿನ ಬಾಗಿಲು ತಾವಾಗಿಯೇ ತಟ್ಟುವವರು ಸಹ ಬಯಸಿದ್ದನ್ನ ಸಿಗಲಾರದಕ್ಕೆ ರಚ್ಚೆ ಹಿಡಿದು ಅಳುವ ಕಂದನಂತಾಗಿರುತ್ತಾರೆ. ಅದೂ ಕದನವೇ. ಸರಿ ತಪ್ಪುಗಳು ಸಾವಿನ ಮುಂದೆ ಸಮರ್ಪಿಸಿ ತಪ್ಪುಗಳಿಗಾಗಿ ಕಣ್ಣೀರು ತಂದು ಎಲ್ಲ ಮೋಹ-ವ್ಯಾಮೋಹಗಳ ಹಂಗು ಹರಿದು ಬರೇ ಮಾನವರಾಗಿ ಮಾತ್ರ ನಿಲ್ಲುತ್ತಾರೆ. ಸಾವು ಸ್ಪರ್ಶಿಸುವ, ಆ ಹೊತ್ತಿನ ದಕ್ಕುವ ಅನುಭವದ ಅನುಭೂತಿಗಾಗಿ ತಹತಹಿಸುವವರೆಷ್ಟು? ಆದರೆ ಸಾವು ಮತ್ತು ಬದುಕು ಮುಖಾಮುಖಿಯಾಗುವ ಘಟ್ಟವು ಅಪೂರ್ವ ಅನುಭವಲೋಕದ ಕ್ಷಣಗಳೇ. ಸಾವಿನ ಸೆರಗಮರೆಯಿಂದಲೇ ಬದುಕಿನ ಸೆಳೆತದ ಎಳೆಗಳಿಗೆ ಸಿಕ್ಕಿ ಹಾಕಿಕೊಂಡ ವ್ಯಕ್ತಿಯ ಒಳತೋಟಿಯ ತಲ್ಲಣಗಳು ಗಾಬರಿ ಮತ್ತು ಅಚ್ಚರಿಗಳೇ. ಮನುಷ್ಯರೇ ರೂಪಿಸಿಕೊಂಡ ಈ ಲೋಕ ದ ನೀತಿ ನಿಯಮಗಳು. ಎಲ್ಲ ನಿಯಮಗಳ ಕರಿ ಕಡಿದು ತಾನೇ ತಾನಾಗಿ ವಿಜೃಂಭಿಸುವ ಸಾವಿನ ಕೈಗಳು. ಇವೆರಡರ ನಡುವೆ ಮರಣಮಂಚದಲ್ಲಿ ತನ್ನಿಚ್ಛೆಗಾಗಿ ಬಡಿದಾಡುವ ವ್ಯಕ್ತಿ.. .. ಥೇಟ್ ಹಸಿದ ಕೂಸಿನಂಥ ಹಟ…..
ಚಿಕ್ಕವಳಿದ್ದಾಗ ನಡೆದ ಘಟನೆಯೊಂದು ನನ್ನನ್ನು ಲೋಕದತ್ತ ನೋಡಲು ಅರಿಯಲು ಕಲಿಸಿತು. ನಮ್ಮ ಪಕ್ಕದ ಮನೆಯಲ್ಲಿ ಹಣ್ಣು-ಹಣ್ಣು ಮುತ್ಯಾ ಒಬ್ಬ ಸಾವಿನ ಬಾಗಿಲಿಗೆ ತಲುಪಿದ್ದ. ಭರ್ತಿ ಜೀವನ ಬಾಳಿ ಬದುಕಿದವನು. ವಯಸ್ಸಾಗಿ ನೆಲ ಹಿಡಿದಿದ್ದನು. ಮನೆ ತುಂಬ ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳು, ಸೊಸೆಯಂದಿರು. ಸಾಯುವ ವಯಸ್ಸೇ. ಆರಂಭದಲ್ಲಿ ಮುತ್ಯಾನ ಜಡ್ಡು ಒಂದು ನಮೂನಿ ದು:ಖ ಮತ್ತು ಎಲ್ಲ ಜವಾಬ್ದಾರಿ ನಿಭಾಯಿಸಿ ಸಾಯುತ್ತಿರುವುದರಿಂದ ಬೀಳ್ಕೊಡುವ ನೋವು ಬೆರೆತ ಸಂಭ್ರಮ ಆವರಿಸಿಕೊಂಡಿತ್ತು. ದಿನಗಳು ಸರಿದವು. ಮುತ್ಯಾ ಸಾಯುತಿಲ್ಲ. ಉಸಿರೊಂದೇ ಅವನ ಒಟ್ಟು ಶರೀರದ ಉಪಸ್ಥಿತಿಯನ್ನು ಎತ್ತರದ ಕಂಠದಲ್ಲಿ ಸಾರುತ್ತಿರುವಂತಿತ್ತು. ಎಷ್ಟೋ ದಿನ ಎಲ್ಲರೂ ಕಾದರು. ಅದೊಂದು ದಿನ ಉಸಿರು ಗಂಟಲಲ್ಲಿ ಸಿಕ್ಕಿಹಾಕಿಕೊಂಡಿತು. ವಿಚಿತ್ರ ಹಿಂಸೆ. ಯಾರಿಗೂ ನೋಡಲಾಗದು. ‘ಶಿವನೇ ಇಂವ ಏನೇ ತಪ್ಪ ಮಾಡಿದರ್ನೂ ನಿನ್ ಹೊಟ್ಟ್ಯಾಗ ಹಾಕ್ಕೊಂಡು ಇವನಿಗಿ ಕರ್ಕೊ.. ಇಟ್ ತ್ರಾಸ್ ಕುಡಬ್ಯಾಡ……’ ಮನೆಯವರೂ ಎಷ್ಟೆಲ್ಲ ಹರಕೆ ಹೊತ್ತರು. ಈ ಲೋಕದ ಮೇಲಿನ ವ್ಯಾಮೋಹ ಇಚ್ಛೆಯನ್ನೆಲ್ಲ ಅರಿತು ಪೂರೈಸಲು ಮುಂದಾದರು. ಬಂಧು – ಬಳಗ, ತಿಂಡಿ-ತಿನಿಸು, ಭಕ್ತಿ ಹರಕೆ ಎಲ್ಲ ಮಾಡಿದರು. ಆದರೆ ಉಸಿರು ಗಂಟಲಲ್ಲಿಯೇ ಬಡಿದಾಡುತ್ತಿತ್ತು. ಯಾರೋ ಹೇಳಿದರು, ‘ಎಲ್ಲ್ಯಾನ ಗಂಟು ಹೂಳಿಟ್ಟಾನ ಏನ್ ನೋಡ್ರಿ.. ಆಸಿ ಅಂಬಾದು ಬಲು ಖರಾಬು. ಹ್ಯಾಂಗ ಒದ್ದ್ಯಾಡಲತಾನ .. ..’
ಮುತ್ತ್ಯಾ ಮಲಗುವ ಖೋಲಿ ಪೂರ್ತಿ ತಲಾಶಿ ಮಾಡಿದರು. ನೆಲದ ಅಡಿಯಲ್ಲಿ ಒಂದು ಸಣ್ಣ ಮಣ್ಣಿನ ಮಡಕೆ. ಅದರ ತುಂಬ ಬೆಳ್ಳಿ ಬಂಗಾರ ಮತ್ತು ಕೆಲವು ರೊಕ್ಕದ ಬಂದಿಗಳು. ಅವುಗಳನ್ನು ತಂದು ತೇಕುವ ಮುತ್ತ್ಯಾನ ಎದೆಯ ಮೇಲಿಟ್ಟರು. ಅವನೆರಡೂ ಕೈ ಬೆರಳುಗಳಿಂದ ಸ್ಪರ್ಶಿಸಿದರು. ಮುತ್ತ್ಯಾನ ಕಣ್ಣ ಕೊನೆಯಿಂದ ಹನಿಗಳು ಜಾರಿದವು. ಹಿಂದೆಯೇ ಮುದುಡಿದ ರೆಪ್ಪೆಗಳು ಮೆತ್ತಗೆ ಅಪ್ಪಿಕೊಂಡವು. ಅಲ್ಲಿವರೆಗೂ ದಾಂಗುಡಿಯಿಡುತ್ತಿರುವ ಉಸಿರು ಶರೀರದಿಂದ ತನಗೊಪ್ಪುವ ಬಾಗಿಲು ದಾಟಿ ಹೋಯಿತು. ಸಾವಿನ ಸತಾಯಿಸುವಿಕೆಯಿಂದ ಬಿಡುಗಡೆಗೊಂಡ ಇಡೀ ಜನ ಹೆಣ ಸಿಂಗರಿಸಿ ಮಣ್ಣು ಮಾಡುವ ತರಾತುರಿಯಲ್ಲಿ ತೊಡಗಿದರು.
ಆಗ ನನ್ನ ಎಳೆಯ ಮೆದುಳಿನಲ್ಲಿ ಬೆರಗು ಮತ್ತು ಪ್ರಶ್ನೆ ಸತಾಯಿಸುತಿತ್ತು. ಯಾಕೆ ಮುತ್ತ್ಯಾ ಸಾಯದೆ ಬದುಕದೆ ಒದ್ದಾಡಿದ್ದು…..? ಭರ್ತಿ ಬದುಕಿನ ಬಂಡಿಗೆ ಅವನು ಸಿಂಗಾರ ಮಾಡಿದ್ದು ಕಮ್ಮಿಯೇ? ಹೆಂಡತಿ ಮಕ್ಕಳನ್ನು ಜೀವಕ್ಕಿಂತ ಹೆಚ್ಚು ಪ್ರೀತಿಸಿದವನು. ಹೆಂಡತಿಯ ಅಂಗಾಲಲ್ಲಿ ಮುಳ್ಳು ಮುರಿದರೆ ಮುತ್ತ್ಯಾನ ಎದೆಯಲ್ಲಿ ಮುರಿದಂತಾಗುತ್ತಿತ್ತು ಎಂದು ಅವ್ವ ಅಪ್ಪನೊಂದಿಗೆ ಜಗಳ ಬಂದಾಗೆಲ್ಲ ಹೇಳುತ್ತಿದ್ದಳು. ಅಪ್ಪನ ಪ್ರೀತಿ ಏನೇನೂ ಅಲ್ಲ ಎಂಬುದಕ್ಕೆ ಅಳತೆಗೋಲಾಗಿ. ಆದರೆ ಸಾಯುವ ಹೊತ್ತಲ್ಲಿ ಅವನ ಬಯಕೆಯ ಮೊತ್ತ ಸಂಗ್ರಹಿಸಿಟ್ಟ ಸಂಪತ್ತೆನ್ನುವುದು ಸಾಬೂತಾದಂತಾಯಿತು. ಹಾಗಾದರೆ ಹೆಂಡತಿಯ ಮೇಲಿನ ಪ್ರೀತಿ, ಮಕ್ಕಳ ಮೇಲಿನ ಮಮತೆ, ಸಂಸಾರದ ಮೋಹ ಸುಳ್ಳೇ ಆಗಿತ್ತೇನು? ಜೀವನದುದ್ದಕ್ಕೂ ಮುತ್ತ್ಯಾನ ಕಾಣಿಸಿಕೊಂಡ ವ್ಯಕ್ತಿತ್ವದ ಮೇಲೆ ಗಾಢ ಪರದೆ ಹೊದ್ದಿತ್ತೇನು? ಆದರೆ ಸಾವಿನ ಕೈ ಎಷ್ಟು ಸಲೀಸಾಗಿ ಅವನ ಪೊರೆ ಕಳಚಿತು…..! ಮತ್ತು ಅವನ ಒಳಗಣ ನಿಜವನ್ನು ಬಯಲುಗೊಳಿಸಿತು……! ಕಟ್ಟ ಕಡೆ ಗಳಿಗೆಯಲ್ಲಿ ಸಾವಿನ ಮುಂದೆ ಎಲ್ಲ ಒಣ ಡಂಭ, ಬಡಿವಾರ, ಮುಖವಾಡಗಳನ್ನು ಸಮರ್ಪಿಸಿ ಬೆತ್ತಲೆ ಮಗುವಾಗುವುದು. ಮತ್ತು ಬೇಕಿದ್ದನ್ನು ಪಡೆಯಲು ಸಂಘರ್ಷ ನಡೆಸುವುದು. ಬಹುಶ: ಎಲ್ಲರ ಜೀವನದ ಕೊನೆಯ ಕ್ಷಣಗಲ್ಲಿ ನಡೆಯುವಂಥಾದ್ದೇ ಇರಬೇಕು.
ಆದರೆ ಮುಖವಾಡವಿಲ್ಲದೆ ಬಾಳಿದರೂ ಸಹ ಕಡೆಗಳಿಗೆಯಲ್ಲಿ ಈ ನೆಲದ ದಂದುಗಕ್ಕೇ ಅಪ್ಪಿಕೊಂಡಿದ್ದೂ ಇದೆ. ತನ್ನ ಜೀವ ಭಾವಕ್ಕೆ ಆಪ್ತರಾದವರನ್ನು ಬಿಟ್ಟು ಹೋಗೆನೆಂದು ಹಟ ಹಿಡಿದ ಘಟನೆಗಳೂ ನಡೆದಿವೆ. ಕೆಲವು ಸಾರಿ ಹೀಗೂ ಆಗಿದೆ ಹೃದಯಕ್ಕೆ ತೀರ ಹತ್ತಿರವಿದ್ದವರು ಇಲ್ಲವಾದರು ಎಂದು ಗೊತ್ತಾದ ಕೂಡಲೆ ತಾನೂ ಕಣ್ಮುಚ್ಚಿ ಇಗೋ ನಾನೂ ಬಂದೆ ನಿಲ್ಲು… ಎಂದು ತೀರ ಅಪರೂಪದ ಪ್ರಕರಣಗಳು ಕೇಳಿ ಕಣ್ಣಾಲಿ ಒದ್ದೆಯಾಗಿದ್ದಿದೆ. ರಜಾಕಾರ ಚಳುವಳಿಯಲ್ಲಿ ಊರು ಬಿಟ್ಟ ನನ್ನ ಗಂಡನ ಚಿಕ್ಕಪ್ಪ ಮಹಾರಾಷ್ಟ್ರದ ಔಸಾಕ್ಕೆ ಹೋಗಿ ನೆಲೆಸಿದ್ದರಂತೆ. ಇಸ್ಮಾಯಲ್ ಸಾಬ್ ಎಂಬುವರೊಂದಿಗೆ ಗೆಳೆತನವು ತುಂಬ ಅಪ್ಯಾಯಮಾನವಾಗಿ ಹರಿದು ಬಂದಿತ್ತಂತೆ. ವಯಸ್ಸು ಊರುಗೋಲಾಗಿ ಬಂದೇ ಬಿಟ್ಟಿತು. ಚಿಕ್ಕಪ್ಪನ ಆರೋಗ್ಯ ಕ್ಷೀಣಿಸಿತು. ಅದೊಂದು ಮುಂಜಾನೆ ದೋಸ್ತ್ ಎಲ್ಲಿ..? ಕರಿರಿ..ಅನ್ನುತ್ತಲೇ ಕನಸಲ್ಲಿಯೇ ಗೆಳೆಯ ಕಣ್ಣ ಮುಂದೆ ಬಂದಂತೆ ಭಾಸವಾಗಿ ‘ನೀ ಚಲೋ ಇರು.. ನಾ ಹೊಂಟೆ’ ಅಂತ ಬಡಬಡಿಸಿ ಕಣ್ಣು ಮುಚ್ಚಿದನಂತೆ.
ಅಂದು ಶುಕ್ರವಾರದ ನಮಾಜು ಮುಗಿಸಿಕೊಂಡು ಮಸೀದಿಯ ಪ್ರಾಂಗಣದ ಕಂಬಕ್ಕೆ ಬೆನ್ನು ಕೊಟ್ಟು ಕೂತ ಇಸ್ಮಾಯಲ್ ಸಾಬನಿಗೆ ಗೆಳೆಯ ಸತ್ತ ಸುದ್ದಿ ಮುಟ್ಟಿಸಲಾಯಿತಂತೆ. ‘ಯಾ ಅಲ್ಲಾ .. ಈಗ ಇಲ್ಲೇನು ಕೆಲಸ? ನಂಗೂ ಕರಕೊ..’ ಅಂತ ಒಂದು ಸಾರಿ ಎರಡೂ ಅಂಗೈಯನ್ನು ಮುಗಿಲಿಗೆ ಅರಳಿಸಿ, ಅವೇ ಬೊಗಸೆಯಿಂದ ಮುಖವನ್ನು ಸ್ಪಷರ್ಿಸಿ ಗೋಣು ವಾಲಿಸಿದವನು ಮೇಲೇಳಲೇ ಇಲ್ಲವಂತೆ.
ಇದೆಂಥ ಬಂಧ-ಸಂಬಂಧ? ಯಾವ ಕಳ್ಳು-ಬಳ್ಳಿಯ ಹೆಣಿಕೆ? ಬೇಕೆಂದಾಗ ಸಾವು ಬರುವುದೇ? ಎದೆಯ ಬಡಿತಕ್ಕೆ ಗಂಟೆ ಹೊಡೆಯುವುದು ಬಿಟ್ಟಂತೆ ನಿಲ್ಲಿಸಲು ಸಾಧ್ಯವಾಗುವುದೇ? ಬಲಿಷ್ಠ ಇಚ್ಛಾ ಶಕ್ತಿಯನ್ನು ಕೈವಶ ಮಾಡಿಕೊಳ್ಳುವ ತಾಖತ್ತಿಗೆ ಏನೆನ್ನಬೇಕು? ಏನೆಲ್ಲ ಸಾಧಿಸುವ, ಪ್ರಕೃತಿಯ ಬೆನ್ನೇರುವ, ನಿಸರ್ಗವನ್ನು ಮಣಿಸುವ ಮನೋದಾಢ್ರ್ಯದ ಹಿಂದೆ ಇಂಥ ಬಲವಾದ ಇಚ್ಛಾ ಶಕ್ತಿಯೇ ಇರಬೇಕು. ನಾನಾ ನಮೂನೆಯ ಅಟಾಟೋಪಗಳ ಮೂಲಕ ಈ ನಿಸರ್ಗವು ಮನುಷ್ಯನನ್ನು ತನ್ನೆಡೆಗೆ ಸೆಳೆದು ಸಾಹಸದ ಸಂಸ್ಕಾರ ರೂಢಿಸಿದ್ದೇ ಇದಕ್ಕೆ ಕಾರಣವಿರಬೇಕು. ಎಲ್ಲವನ್ನೂ ಗೆಲ್ಲುವ, ಎದುರಾದದ್ದನ್ನು ಮಣಿಸುವ, ಬೇಕಾದದ್ದನ್ನು ಪಡೆಯುವ ಬಯಕೆಯು ಇಚ್ಛಾಬಲವಾಗಿ ಸಾಹಸಿಗರೆದೆಯಲ್ಲಿ ಮನೆ ಮಾಡಿರುತ್ತದೇನೋ..
ಸಾವಿನೊಂದಿಗೆ ಜಗಳ ಹಿಡಿಯುವ ಎದುರಿಸುವ ಅಷ್ಟೇ ಯಾಕೆ ಸಾವನ್ನು ಪ್ರೀತಿಸುವ, ಸಾವಿನ ತಲೆ ಸವರುತ ಅದರ ಸನಿಹದಲ್ಲೂ ಜೀವನದ ಪ್ರೀತಿ ಮೆರೆವ ಜನರು ಕೆಲವರಿಗೆ ನಿಗೂಢ ಚೇತನದಂತೆ ಕಾಣಬಹುದು. ಆದರೆ ಸಾವೆಂಬ ಏಕೈಕ ಸತ್ಯದ ಮಗ್ಗುಲಲಿ ಎಲ್ಲ ನಿಜದ ನೆಲೆಗಳು ಅನಾವರಣಗೊಳ್ಳುತ್ತಿರುತ್ತವೆ.
ಸಾವು ಮತ್ತು ಬದುಕಿನ ನಡುವಲ್ಲಿ ನಿಂತು ನಿರ್ಣಯಿಸುವ ಸಂದರ್ಭ ಇದೆಯಲ್ಲ ಅದು ಬಲು ಕಠಿಣವಾದದ್ದು. ಸ್ವಲ್ಪ ಮೆದುಳು ಬೆಳೆದು ಹೃದಯ ಹಿಗ್ಗಿ, ಸುತ್ತಲಿನದೆಲ್ಲ ಅರಿವಿಗೆ ದಕ್ಕುವ ಹೊತ್ತಲ್ಲಿ ಶಾರದಮ್ಮ ನನ್ನ ಮೆಚ್ಚಿನ ಹೆಂಗಸಾಗಿದ್ದಳು. ಅವಳು ತನ್ನ ಗಂಡನ ಸಾವು ಮತ್ತು ತನ್ನ ಬದುಕು ಇವುಗಳ ಮಧ್ಯೆ ಸಂವಾದ ಹೆಣೆದು ಬದುಕು ಜೈಸಿದಳು……..

* * * * *

ಶಾರದಮ್ಮ ಮತ್ತು ಶರಣಪ್ಪನ ಜೋಡಿ ಹೆಣಿಕೆಗೊಂಡಿದ್ದು ಕೂಸುಗಳಿದ್ದಾಗ. ನಮ್ಮಲ್ಲಿ ತೊಟ್ಟಿಲಿಗೆ ಭಾಸಿಂಗು ಕಟ್ಟುವ, ಬಸಿರಿದ್ದಾಗಲೇ ನೆಂಟಸ್ತನ ಮಾಡುವ ಅದ್ಭುತ ಪ್ರಕರಣಗಳು ನಡಿತಾನೆ ಇರುತ್ತವೆ. ಇದು ಹೇಗೆ ಎಂದು ಬೆರಗಾಗಬೇಕಿಲ್ಲ. ಹೊಟ್ಟೆಯಲ್ಲಿರುವ ಕೂಸು ಹೆಣ್ಣಾದರೆ ಹುಟ್ಟಿದ ಗಂಡು ಮಗನಿಗೆ, ಗಂಡಾಗಿದ್ದರೆ ಮುಂದೆ ಯಾವತ್ತಾದರೂ ಹುಟ್ಟುವ ಹೆಣ್ಣುಮಗಳಿಗೆ ಎಂದು ಹೆಸರಿಟ್ಟು ಸಕ್ಕರೆ ತಿಂದು ಮದುವೆ ಗಟ್ಟಿ ಮಾಡುವ ಪದ್ಧತಿ ಈಗಲೂ ಇದೆ. ಅಂಥ ಸಂಬಂಧಗಳ ಭಾಗವಾಗಿಯೇ ನಮ್ಮ ಶಾರದಮ್ಮಕ್ಕನನ್ನು ಅವಳಿಗಿಂತ ಕನಿಷ್ಠ 12 ವರ್ಷ ಹಿರಿಕನಾಗಿದ್ದ ಶರಣಪ್ಪನೊಂದಿಗೆ ಕಂಕಣ ಕೂಡಿಸಲಾಯಿತು. ಮೈನೆರೆವ ಮೊದಲೇ ಗಂಡನ ಮನೆಗೆ ನಡೆಯಲು ಬಂದಳು. ಯಾಕೆಂದರೆ ಮನೆಯಲ್ಲಿ ಅಡುಗೆ ಕೆಲಸ ಮಾಡುವವರು ಯಾರೂ ಇರಲಿಲ್ಲ.
ದೊಡ್ಡ ಅಂಗಳದ ಮೂರೂ ಕಡೆ ಆವರಿಸಿಕೊಂಡ ತಲಾ ನಾಲ್ಕು ಕಂಬಗಳ ಪಡಸಾಲೆ. ಯಾವ ಬಾಗಿಲೊಳಗೆ ಇಣುಕಿದರೂ ದಿಟ್ಟಿ ಮಂದಾಗಿಸುವ ಕತ್ತಲೆಯ ರಾಶಿ. ಯಾವುದೋ ಒಂದು ಇಂಥದೇ ಕತ್ತಲೆ ಖೋಲಿಯಿಂದ ಬರುವ ನರಳುವ ಆವಾಜಿನಗುಂಟ ನಡೆದಳು. ಶರಣಪ್ಪನ ಅವ್ವ ಹೊರಸಿನ ಮೇಲೆ ಕೆಮ್ಮುತ ಮಲಗಿದ್ದಳು. ಒಳಗೆ ಹೆಜ್ಜೆಯಿಟ್ಟು ನೋಡುವವರೆಗೆ ಕೆಮ್ಮುವ ಆವಾಜೊಂದೇ ಇದ್ದು, ಹತ್ತಿರ ಹೋದ ಮೇಲೆಯೇ ಹೊರಸು ಕಾಣಿಸಿತು. ಮತ್ತು ಗುಬ್ವಚ್ಚಿಯಂಥ ವಯಸ್ಸಾದ ಶರೀರದ ಕೈಗಳು ಇವಳ ತಲೆ ಸವರಿದವು. ಅಂಥ ಕಾಳ ಕತ್ತಲಲ್ಲೂ ಅವಳ ಹಣೆಯ ಕುಂಕುಮವು ಕಾಸಿನಗಲವಿದ್ದು ಲಕಲಕ ಹೊಳೆಯುತ್ತಿತ್ತು. ಇವಳು ಮೆಲ್ಲಗೆ ಹೊರಬಂದಳು. ತಲಬಾಗಿಲ ಹೊರಗಿನ ಕಟ್ಟೆಯ ಮೇಲೆ ಗಲ್ಲಿ ಮಂದಿಯ ತಖರಾರುಗಳ ಪಂಚಾಯಿತಿ ಮುಗಿಸಿ ಒಳಗೆ ಬಂದ ಮಾವ ‘ರೊಟ್ಟಿ ಮಾಡಲಾಕ ಬರ್ತದಿಲ್ಲ?’ ಅಂತ ಕೇಳುವ ಗತ್ತಿಗೆ ಶಾರದಮ್ಮ ತಲ್ಲಣಿಸಿದಳು. ಏನು ಹೇಳುವುದು? ತಡವರಿಸುತ ‘ಹುಂ’ ಅಂದಳು.
ರೊಟ್ಟಿ ಮಾಡುವುದೆಂದರೆ ಸುಮ್ಮನಲ್ಲ. ಹಿಟ್ಟು ಮಿದ್ದು-ನಾದಿ ಹದಗೊಳಿಸಿ ತಟ್ಟಬೇಕು. ಹರಿಯದಂತೆ ಅಂಗೈಗೆ ರವಾನಿಸಿಕೊಂಡು, ಹಂಚಿನ ಮೇಲೆ ಹಾಕುವಾಗ ಕೈಸುಡಬಹುದು. ಕೂದಲೆಳೆಯ ಅಂತರದಿಂದಲೇ ಪ್ರತಿ ಬಾರಿಯೂ ಸುಡುವುದರಿಂದ ಬಚಾವಾಗಬೇಕು. ಶಾರದಮ್ಮ ರೊಟ್ಟಿ ತಟ್ಟಿ ಬೇಯಿಸುವುದರಲ್ಲಿ ಪಳಗುತ್ತಲೇ ಇಡೀ ಮನೆಯವರನೆಲ್ಲ ನಿಭಾಯಿಸುವ ಗತ್ತು ಕಲಿತದ್ದೊಂದು ಸೋಜಿಗ ಅನ್ನಬೇಡಿ. ಹುಟ್ಟಿದ ಮನೆ ಬಿಟ್ಟು ಗಂಡನ ಮನೆಗೆ ಬಂದು ಅವರವರ ಮಾನಸಿಕ ಸ್ಥಿತಿ ಅಧ್ಯಯನಿಸಿ ಸಂಭಾಳಿಸುವ ತಾಖತ್ತಿರುವ ಹೆಂಗಸರು ಮನೆ-ಮನೆಗೆ ಸಿಗುತ್ತಾರೆ. ಹೀಗಾಗಿ ಅಚ್ಚರಿಯಿಂದ ಹುಬ್ಬೇರಿಸಬೇಕಿಲ್ಲ. ಇವರಿಗೆ ಮನ:ಶಾಸ್ತ್ರಜ್ಞೆಯರು ಸಹ ಅನ್ನಬಹುದು. ತವರು ಮನೆಯಲ್ಲಿ ಕುಂಟಾಪಿಲ್ಲೆ ಆಡಿದವಳು ಗಂಡನ ಮನೆಗೆ ಬಂದ ಕೂಡಲೆ ಥಟ್ಟಂತ ಬದಲಾದಳು.
ಕತ್ತಲೆ ಖೋಲಿಯಲ್ಲಿ ನಿರಂತರ ನರಳುವ ಅತ್ತೆಯ ಏಕೈಕ ಬಯಕೆ ಎಂದರೆ ತಾನು ಮುತ್ತೈದೆಯಾಗಿ ಸಾಯಬೇಕೆಂಬುದು. ವರ್ಷದ ಹಿಂದೆ ಗಂಡನಿಗೆ ಇನ್ನೇನು ಸತ್ತೇ ಹೋಗುವಂತ ಜಡ್ಡು ಬಂದಿತ್ತು. ಆಗ ಇದ್ದ-ಬಿದ್ದ-ಇಲ್ಲದ ದೇವರಿಗೆಲ್ಲ ಹರಕೆ ಹೊತ್ತಿದ್ದಳು. ಸೊಲ್ಲಾಪೂರಿನ ದಾವಖಾನೆಯಲ್ಲಿ ತಿಂಗಳುಗಟ್ಟಲೆ ಅಡ್ಮಿಟ್ ಮಾಡಿ ಹಣೆಯ ಕುಂಕುಮ ಮುತ್ತೈದಿತಾನ ಉಳಿಸಿಕೊಳ್ಳಲು ಹೈರಾಣಾಗಿದ್ದಳು. ಗಂಡ ಉಳಿದ. ಆರು ತಿಂಗಳು ಹೋಗಲಿಲ್ಲ ಇವಳಿಗೆ ಮಿಜಾಜು ತಪ್ಪಿತು. ಆ ದೇವರು ತನ್ನ ಆಯುಷ್ಯ ತನ್ನ ಗಂಡನಿಗೆ ಕೊಟ್ಟು ತನ್ನನ್ನು ಮುತ್ತೈದೆಯಾಗಿಯೇ ಕರೆದುಕೊಳ್ಳಲು ತೀಮರ್ಾನಿಸಿರುವನು ಎಂದು ಭಾವಿಸಿದಳು. ದಿನೇ ದಿನೇ ಶರೀರ ಕೃಶವಾಗತೊಡಗಿತು. ಊಟ ನಿಂತಿತು. ಅದೊಂದು ಬೆಳಗು ಮುಂಜಾನೆ ಶಾರದಮ್ಮ ಅತ್ತೆಗೆ ಎಬ್ಬಿಸಲು ಖೋಲಿಗೆ ಬಂದಾಗ ನೋಡಿದ್ದೇನು……ಅದು ಯಾವ ಹೊತ್ತಲ್ಲಿ ಪ್ರಾಣ ಪಕ್ಷಿ ಗೂಡು ಬಿಟ್ಟಿತೊ ಗೊತ್ತಿಲ್ಲ…..
ಶಾರದಮ್ಮ ನೋಡಿದ ಮೊದಲ ಸಾವಾಗಿತ್ತು ಅದು. ಭಯ ಆವರಿಸಿತು. ಅತ್ತೆಯ ಹಣೆಯ ತುಂಬ ಮುಗಿಲ ಚಂದ್ರಮನಂಥ ಕೆಂಪು ಕುಂಕುಮ ಹಸಿರು ಸೀರೆ. ಅವುಗಳ ನಡುವಲ್ಲಿ ಅತ್ತೆ ಕಾಣುತ್ತಲೇ ಇಲ್ಲ. ಎಳೆಯ ಕಣ್ಣುಗಳು ಎಲ್ಲವೂ ನೋಡುತ್ತಿದ್ದವು. ನಡು ಅಂಗಳದಲ್ಲಿ ಭಜನೆ ಶುರುವಾದದ್ದೇ ತಡ ಶಾರದಮ್ಮ ಕೊಂಚ ಹಗುರವಾದಳು. ಒಳಗಿನ ಭಯ ದೂರವಾದಂತಾಯಿತು. ಭಜನೆ ಮಾಡುವವರ ನಡುವಲ್ಲಿ ಶರಣಪ್ಪ ಇದ್ದ. ಅವಳಿಗೆ ಅಚ್ಚರಿಯಾಯಿತು. ಅವ್ವ ಸತ್ತ ದು:ಖದಲ್ಲಿ ಬಹುಶ ಎಲ್ಲೋ ಅಳುತ ಮೂಲೆ ಹಿಡಿದಿರಬಹುದು ಎಂದು ನಿರೀಕ್ಷಿಸಿದವಳಿಗೆ ಅವನು, ಕೈಯಲ್ಲಿ ಚಳ್ಳಾಮು ಹಿಡಿದು ಹಾಡಲು ಸನ್ನದ್ದನಾಗುತ್ತಿದ್ದ. ನೋಡು ನೋಡುತ್ತಲೇ ತಾನೇ ಮೊದಲು ಆಲಾಪಕ್ಕೆ ಮುನ್ನುಡಿ ಹಾಕಿದ. ಅವ್ವನ್ನು ಕಳಕೊಂಡ ನೋವು, ಕರುಳೊಳಗಿನ ಕ್ರಂದನವು ಹಾಡಿನ ಮೂಲಕ ಅಲೆ ಅಲೆಯಾಗಿ ಹರಿದು ಬಂದು ಕೇಳುಗರ ಎದೆಯಲ್ಲಿ ತಡೆಯಲಾರದ ಕಣ್ಣೀರಾಗಿ ಧಾರೆಗಟ್ಟುವಂತೆ ಮಾಡುತ್ತಿತ್ತು. ಶಾರದಮ್ಮನಿಗೆ ತನ್ನ ಗಂಡನ ಕಂಠದ ಮೋಹ ಅರಿಯುವ ಹೊತ್ತು ಸಾವಿನ ಸಂದರ್ಭದಲ್ಲಾಗಿತ್ತು. ಸೂತಕದ ನೋವು ಹಿಂದಾಗಿ ಶಾರದಮ್ಮ, ಶರಣಪ್ಪನ ದನಿಯ ಬೆರಗಿನಲ್ಲಿ ನಲಿವಿನ ತರಂಗಗಳ ಬೆನ್ನು ಹತ್ತಿದಳು…… ಆರಂಭದಲ್ಲಿ ಆವರಿಸಿಕೊಂಡಿದ್ದ ಭಯ ಮೆಲ್ಲಗೆ ಇಲ್ಲವಾಯಿತು.
ಸುತ್ತ ನೆರೆದವರು ಶರಣಪ್ಪನ ಜೊತೆಗೆ ಕಣ್ಣೀರ ಹನಿಗಳಂತೆ ಮೆಲ್ಲಗೆ ಚಳ್ಳಾಮುಗಳಿಂದ ತಾಳ ಹಾಕುತ್ತಿದ್ದರು. ಅಲ್ಲೊಂದು ಸಂಕಟದ ಕಡಲೂ ಇತ್ತು ಮತ್ತು ಸಂಕಟ ಮೀರುವ ಸಂಗೀತವೂ ಇತ್ತು. ಸಾವಿನ ನೋವು ಮರೆಯಲು ಭಜನಾ ಹಾಡುಗಳು ಹುಟ್ಟು ಮತ್ತು ಸಾವಿನ ನಡುವಿನ ಒಂದೊಂದೇ ಸತ್ಯಗಳನ್ನು ಅನಾವರಣ ಮಾಡುತ್ತಿರುತ್ತವೆ. ಆ ಹಾಡುಗಳು ಲೋಕದಂತಿರುವುದಿಲ್ಲ. ಬದಲಿಗೆ ಹುಟ್ಟು ಸಾವು ಮೀರಿದ ತಾತ್ವಿಕ ಜೀವನದರ್ಶನವನ್ನೊಳಗೊಂಡ ಚಿಂತನೆಗಳಾಗಿರುತ್ತವೆ. ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿದ ಬುದ್ದನ ಕಣ್ಣ ಬೆಳಕಿನಗುಂಟ ಹಾಡಿನ ಸಾಲುಗಳು ಹೆಜ್ಜೆ ಇಡುತ್ತಿರುತ್ತವೆ. ಶರಣಪ್ಪ ಇಷ್ಟು ಸಣ್ಣ ವಯಸ್ಸಿನಲ್ಲಿ ಕಂಠದಿಂದ ಮಾತ್ರ ಹಾಡುತ್ತಿರಲಿಲ್ಲ. ಹಾಡಿನ ಅರ್ಥದ ಭಾವವೇ ಮೈಯಾಗಿ ಕೇಳುಗರ ಒಳಗನ್ನು ಒಮ್ಮೆ ಝಲ್ಲೆನ್ನುವಂತೆ ಹಾಡುತಿದ್ದ. ಕೇಳುಗರು ಹಾಡಿನ ಬೆನ್ಹತ್ತಿ ಅದರ ಪರಮೋಚ್ಛ ಸ್ಥಿತಿಯತ್ತ ತೇಲಿ ಹೋಗುವುದು ಅನಿವಾರ್ಯವಾಗುತ್ತಿತ್ತು.
ಸಾವಿಗೆ ಸಾವಾಗಿ ಸಾವು ಸತ್ತಿತು
ಮರವಿನ ಮರವೆ, ಸಾವಿನ ಸಾವು, ಸಾವೆಂಬುದು ಮಾಯಾ
ಮಾಯಾಯೆಂಬುದು ಮರಗಿ, ಮರಗಿಯೆಂಬುದು ದುರಗಿ…….
 
ಹಾಡು ಬೆಳೆಯುತ್ತಲೇ ಇತ್ತು. ಕುಳಿತವರಲ್ಲಿ ಅನೇಕರು ಅಳು ಮರೆತು ಹಾಡಿಗೆ ಹೃದಯ ಕೊಟ್ಟರು.
 
ಗುರುವೆಂಬುದೇ ಪರ, ಪರವೆಂಬುದೇ ತಾನು
ತಾನೆಂಬುದೇ ಬೈಲು, ಬೈಲೆಂಬುದೇ ಮುಕ್ತಿ
ಮುಕ್ತಿ ಎಂಬುದೇ ಏನೋ, ಏನೋ ಎಂಬುದೇ ಮಾತು
ಮಾತೆಂಬುದೇ ವಚನ, ವಚನ ಎಂಬುದೇ ಅಕ್ಷರ…….
 
ಈ ಹಾಡಿಗೊಂದು ಕೊನೆಯುಂಟೆ? ನಿರ್ಬಯಲ ಹುಡುಕುತ ಹೊರಡುವ ಹಾಡು. ಬಂದ ನೆಂಟರು ಅತ್ತರು ಸತ್ತವಳೊಂದಿಗೆ ಲೋಕದಲ್ಲಿದ್ದಾಗಿನ ನಂಟು ನೆನೆದು. ಮತ್ತೆ ಎಲ್ಲವನ್ನೂ ಸಮನಿಸಿಕೊಳ್ಳಲು ಭಜನೆಯತ್ತ ಚಿತ್ತವಿಟ್ಟರು. ಬದುಕಿನ ಅರ್ಥ ಸಿಗುವ ಬಯಕೆಯಿಂದ ಕ್ಷಣ ಹೊತ್ತಿನವರೆಗೆ ಇಲ್ಲಿನ ದಂದುಗದಿಂದ ಬಿಡುಗಡೆಗೊಂಡರು. ದು:ಖದಿಂದ ಭಾರವಾಗಿದ್ದ ಹೃದಯ ಹೂವಿನಂತೆ ಹಗುರಾಗಲು ……..
ಶೃತಿ ಬಿಡದ ಭಜನೆ. ಎಳೆ-ಎಳೆಯಾಗಿ ಪದಗಳು. ಸಾವೇ ಹೈರಾಣಾಗುವಂಥ ಪದಗಳು. ಕುಳಿತವರು ಮುಂದೊಮ್ಮೆ ಸಾವ ಎದುರಿಸಲು ಸನ್ನದ್ಧರಾಗುವಂಥ ಹಾಡುಗಳು.
 
ಸಾವೇ ಹುಟ್ಟಿತು ಸಾವೇ ಬೆಳೆದಿತು
ಸಾವೇ ಸತ್ತಿತು ಸಾವೇ ಅತ್ತಿತು
ಸಾವೇ ಅರ್ತಿರು ಸಾವೇ ಬೆರ್ತಿತು
ಸಾವೇ ಮರತಿತು ತನ್ನ ಮುಂದೆ.
 
ಹಾಡಿನ ಧಾಟಿ ಧರತಿಗೆ ಶಾರದಮ್ಮ ಬೆರಗಾಗಿದ್ದಳು. ಸಾವೆಂಬುದೇ ಭಯ. ಭಯವೆಂಬುದೇ ಸಾವು. ಸಾವಿಗೇ ಸವಾಲು ಹಾಕಿದರೇ…? ಸಾವೆಂಬ ಸತ್ಯವನ್ನು ಬೆನ್ನಿಗೆ ಕಟ್ಟಿಕೊಂಡು ಜೀವನ ಜೈಸುವ ಧೈರ್ಯ ಮತ್ತು ನೈಪುಣ್ಯತೆ ಮೆಲ್ಲ ಮೆಲ್ಲಗೆ ಅವಳ ಮನಸಿನಲ್ಲಿ ಹರಳುಗಟ್ಟತೊಡಗಿತು. ಬದಕಿರಬೇಕಾದಷ್ಟು ದಿನಗಳನ್ನು ಒಪ್ಪ ಓರಣಗೊಳಿಸಿಕೊಂಡು ಸೈ ಅನಿಸಿಕೊಳ್ಳುವಂಥಾದ್ದು ಅಂತ ಆಲೋಚಿಸತೊಡಗಿದಳು. ಸಾವಿನ ಹೊತ್ತಲ್ಲಿ ಸಂಸಾರ ವೈರಾಗ್ಯ ಮೂಡಿ ‘ಯಾರಿಗೆ ಬೇಕೀ ಬದುಕು.. ಕ್ಷಣ ಭಂಗುರ.. ನೀರ ಮೇಲಿನ ಗುಳ್ಳಿ? ಎಂದಾದರೊಮ್ಮೆ ಸಾಯಲೇಬೇಕಲ್ಲ..’ ಅನ್ನಿಸದೆ ಮುಂದಿನ ದಿನಗಳನ್ನು ಚೆಂದಗೊಳಿಸುವ ಪ್ರಭಾವಳಿ ದೊರಕಿದಂತಾಯಿತು. ಇದಕ್ಕೆಲ್ಲ ಕಾರಣ ಶರಣಪ್ಪನೇ ಆಗಿದ್ದನು. ಹೆತ್ತವ್ವ ಬದುಕಿದ್ದಾಗ ಸೇವೇ ಮಾಡಿದ. ಸತ್ತ ಮೇಲಿನ ಸಹಜ ದು:ಖವನ್ನೂ ಸ್ವೀಕರಿಸಿದ ಪರಿ ಅವಳಲ್ಲಿ ಅವನ ಬಗ್ಗೆ ಹೆಮ್ಮೆ ಮತ್ತು ವ್ಯಕ್ತಿಸಲಾಗದ ಒಲವು ಹುಟ್ಟಿತು. ಶರಣಪ್ಪನ ಕಡೆಯ ಹಾಡು;
ಮರಣ ಬಂದರೇನು ಸಿಟ್ಟಿಲ್ಲ
ಮಹಾ ತಿಳಿದ ಮಹಾತ್ಮರಿಗೆ ಬಿಟ್ಟಿಲ್ಲ.
ಭಜನೆಗಾರರಲ್ಲಿ ಸಂಖ್ಯೆ ಹೆಚ್ಚಾಗುತ್ತಿತ್ತು. ನೆರೆದ ಹೆಂಗಸರು ಕಣ್ಣೊರೆಸಿಕೊಳ್ಳುತ ‘ಪುಣ್ಯ ಮಾಡ್ಯಾಳ. ಮುತ್ತೈದಿ ಸಾವು ಬಂತು’ ಅಂತ ಮಾತಾಡಿಕೊಂಡರು.

* * * *

ಶಾರದಮ್ಮ ಬದುಕಿನ ಕೌದಿಯನ್ನು ತಾನೇ ಹೊಲಿದಳು. ಹೆತ್ತ ಮಕ್ಕಳನ್ನು ತಿದ್ದಿ ತೀಡಿ ಬೆಳೆಸಿದಳು. ಓದಲು ಹುರಿದುಂಬಿಸಿದಳು. ತಪ್ಪಿದಾಗ ಶಿಕ್ಷಿಸಿ ಬುದ್ದಿ ಹೇಳಿದಳು. ಹಿರಿಯರು ಗಳಿಸಿಟ್ಟ ಆಸ್ತಿಯನ್ನು ಜತನದಿಂದ ಬಳಸಿದಳು. ಹೊಲ ಮನೆಯ ರೇಖ್ ದೇಖಿ ಮಾಡಿದಳು. ಅತ್ತೆಯ ಬೆನ್ನ ಹಿಂದೆಯೇ ಮಾವ ಹೆಜ್ಜೆ ಹಾಕಿದನು. ಆಗ ಅವಶ್ಯಕತೆ ಬಿದ್ದಾಗ ಮಾತ್ರ ಶರಣಪ್ಪನ ನೆರವು ಪಡೆಯಲು ಮುಂದಾಗುತ್ತಿದ್ದಳು. ಅವಳಿಗೆ ಶರಣಪ್ಪನ ಬಗ್ಗೆ ಜಿಂದಗಾಣಿಯ ಸಂಬಂಧಪಟ್ಟಂತೆ ಯಾವ ದೂರುಗಳಿರಲಿಲ್ಲ. ಶರಣಪ್ಪ ಮುಂಜಾನೆದ್ದು ಹೊಲಕ್ಕೆ ಹೋಗಿ ಆಳು-ಹೋಳು ಅಂತೆಲ್ಲ ನೋಡಿಕೊಂಡು ಬಂದು ಹೆಂಡತಿಯೊಂದಿಗೆ ಎಲ್ಲ ವರದಿ ಒಪ್ಪಿಸಿ ಚಚರ್ಿಸುತ್ತಿದ್ದ. ಶಾರದಮ್ಮ ಹುಂ ಹುಂ ಅನ್ನುತ್ತಲೇ ಊಟಕ್ಕಿಟ್ಟು ‘ಆಯ್ತು ನೀ ಏನ್ ತಲಿ ಕೆಡಿಸ್ಕೊಬ್ಯಾಡ. ರಾಶಿ ಆದ ಮ್ಯಾಲ, ರೇಟ್ ಇದ್ದಾಗ, ಮಾಲ್ ತಗೊಂಡು ಅಡತಿ ಬಾಜಾರಕ ಹೋಗು. ……ಇವತ್ತ ನಿನ ಭಜನಿ ಎಲ್ಲ್ಯಾದ?’ ಊರಲ್ಲಿಯೇ ಇದ್ದರಂತೂ ಶಾರದಮ್ಮ ಯಾವ ಕಾರಣಕ್ಕೂ ಭಜನಿ ಕೇಳಲು ಹೋಗುವಾಕಿನೇ. ಅದೂ ಎಲ್ಲರಕಿನಾ ಮುಂದೆ ಕೂತು ಇವಳ ಹಾಡು ಕೇಳುವ ದಾಹಕ್ಕೆ ಇಬ್ಬರೊಳಗೂ ವಿಚಿತ್ರ ಅನ್ಯೋನ್ಯತೆ ಬೆಳೆದಿತ್ತು. ಇದು ಸಮಾಜದಲ್ಲಿ ಇಬ್ಬರಿಗೂ ಗೌರವ ತಂಡು ಕೊಟ್ಟಿತ್ತು.
ಗಂಡನ ಭಜನಿ ಪದ ಕೇಳುವ ಅವಳ ಬಯಕೆಗೊಂದು ಮಿತಿಯಿರಲಿಲ್ಲ. ಅದೊಂದು ಹುಚ್ಚುತನವೇ ಆಗಿತ್ತೇನೋ.. ನಂಟರೆಲ್ಲ ಅವಳನ್ನು ತೆಗಳಿದಾಗಲೂ ಅವಳು ಗಂಡನನ್ನು ಬಿಟ್ಟುಕೊಟ್ಟಿರಲಿಲ್ಲ. ಶರಣಪ್ಪ ಭಜನೆ ಮಾಡುವುದು ಬಿಟ್ಟು ಹೊಲಮನೆ ಅಂತ ನೋಡಿಕೊಂಡರೆ ಇನ್ನಷ್ಟು ಅನುಕೂಲಸ್ಥರಾಗಬಹುದು ಎಂಬುದು ಅವಳ ತವರಿನವರ ಸಲಹೆಯೂ ಆಗಿತ್ತು. ಶಾರದಮ್ಮ ಮಾತ್ರ ಊಹುಂ, ಗಂಡ ಮನೆ ವಹಿವಾಟು ಅಷ್ಟಿಷ್ಟು ನೋಡಿಕೊಂಡರೆ ಸಾಕು. ಉಳಿದದ್ದೆಲ್ಲ ತಾನೇ ನೋಡಿಕೊಳ್ಳುವ ಸಾಮಥ್ರ್ಯ ಉಳ್ಳವಳಾಗಿರುವುದರಿಂದ ಗಂಡ ಭಜನೆ ಪದದ ಮೂಲಕ ನಾಲ್ಕು ಜನರಲ್ಲಿ ಬೆರೆಯುವುದು ಅವಳಿಗೆ ಖುಷಿ ಕೊಡುತ್ತಿತ್ತು. ಇದರಿಂದಾಗಿ ಹತ್ತೂರ ಜನರಲ್ಲಿ ಇವಳದ್ದೂ ಇವಳ ಮನೆತನದ್ದೂ ಆಸ್ಕರಿ ಆಗಿತ್ತು. ಅದೂ ಅವಳಿಗೆ ಹೆಮ್ಮೆ ಅನಿಸುತ್ತಿತ್ತು.
ಸೂರ್ಯ ಕಂದುವ ಹೊತ್ತಾಯಿತೆಂದರೆ ಸಾಕು, ಬಸವಣ್ಣದೇವರ ಗುಡಿಯಲ್ಲಿ ಶರಣಪ್ಪನೊಂದಿಗೆ ಇತರೆ ಹಾಡುಗಾರರು ಸೇರುತಿದ್ದರು. ಬೆಳಕು ಮಂದವಾಗುತ್ತಿದ್ದಂತೆಯೇ ಭಜನೆಯ ಟೀಮಿಗೆ ಉಮೇದು ಬರುತ್ತಿತ್ತು. ಒಂದೊಂದೇ ಹಾಡುಗಳು ಸಾಲಿನಲ್ಲಿ ನಿಂತು ಕಾಯುತ್ತಿದ್ದವು. ಗಲ್ಲಿಯವರ ಮನೆಯಲ್ಲಿನ ಜನರಿಗೆ ಬೇಗ ಉಂಡು ಬರುವ ತವಕ ಹೆಚ್ಚಾಗುತ್ತಿತ್ತು. ಅವರು ಬರುವುದರೊಳಗೆ ಎಷ್ಟೊಂದು ಹಾಡುಗಳು ಗಾಳಿಯಲ್ಲಿ ಬೆರೆತು ಸಳಸಳ ಹರಿದಾಡುತ್ತಿದ್ದವು. ಶರಣಪ್ಪನ ಹಾಡುಗಾರಿಕೆ ಊರಲ್ಲಿ ವಿಚಿತ್ರ ನಮೂನೆಯ ಹಾಡಿನ ಗುಂಗಿನವರನ್ನು ಸೃಷ್ಟಿಸಿತ್ತು.
ಹ್ಯಾಂಗ ಭ್ರಾಂತಿ ನೀಗುತು
ಹ್ಯಾಂಗ ಮಹಾಂತನಾಗುತಿ
ಹಾಂಗ ಹೀಂಗ ಹೊತ್ತುಗಳೆದು
ಹಿಂಗೆ ನೀ ಸತ್ಹೋಗುತಿ
ಹಾಡು ಮುಗಿಯುವುದರೊಳಗೆ ‘ಶರಣಪ್ಪ ಅದು ಹಾಡು, ಯಾವದಂದರ, ‘ಬಂಗಾಲಿ ಸಂತಿ ಬಲು ಗಡಿಬಿಡಿ..’ ಕೇಳುಗರು ದಣಿವಿಲ್ಲದೆ ಪಟ್ಟಿ ಸಲ್ಲಿಸುತ್ತಿದ್ದರು. ಶರಣಪ್ಪನ ಕಂಠವು ಹಾಡುತ ಹಾಡುತ ಮತ್ತಷ್ಟು ಹರಿತವಾಗುತ್ತಿತ್ತು. ಒಮ್ಮೆ ವಚನಗಳು, ಮತ್ತೊಮ್ಮೆ ತತ್ವಪದಗಳು, ಮರಾಠಿ ಅಭಂಗಗಳು ಇನ್ನೊಮ್ಮೆ ಭಕ್ತಿ ಹಾಡುಗಳು.
ಹೊಲಗಳಲ್ಲಿ ದುಡಿದು ಹೈರಾಣಾಗಿ ಬಂದವರು ಶರಣಪ್ಪನ ಹಾಡಿನ ಧುಂಧಿನಲ್ಲಿ ಎಲ್ಲವೂ ಮರೆಯುತ್ತಿದ್ದರು. ಮೈಮನ ಹೂವಿನಷ್ಟೇ ಹಗುರಾಗಿ ಆಸರಕಿ-ಬ್ಯಾಸರಕಿಯ ಪೊರೆ ಕಳಚಿ ಉಲ್ಲಾಸದಿಂದ ಮರಳುತ್ತಿದ್ದರು.
ಶರಣಪ್ಪನಿಗೋ ಹಾಡೊಂದು ಧ್ಯಾನ. ತಪಸ್ಸು. ಹಾಡೊಳಗೆ ತಾ ಬೆರೆತು ತೇಲಿ ಹೋಗುವ ಪರಿ ಅವನ ಜೀವನದ ಅದ್ಭುತ ಪರಮಾನಂದದ ಕ್ಷಣವಾಗುತಿತ್ತು. ದಿನವೆಲ್ಲ ಹಾಡಿದನು. ಜೀವನಪೂರ್ತಿ ಹಾಡಿದನು. ಮನದುಂಬಿ ಹಾಡಿದನು. ಹಾಡೊಂದು ಉಸಿರಾಯಿತು. ಥೇಟ್ ಶಾರದಮ್ಮನಂತೆ. ಹಾಡಿನಷ್ಟೆ ಅವನಿಗಿರುವ ಆಪ್ತ ಜೀವವೆಂದರೆ ಶಾರದಮ್ಮ ಮಾತ್ರ. ಅವನಿಗೆ ಯಾರ ನೆನಪೂ ಆಗುತಿರಲಿಲ್ಲ. ಶಾರದಮ್ಮ ಇರಬೇಕು. ಹಾಡೊಳಗಿನ ಆನಂದದ ತರಂಗಗಳಿಗಿರುವ ಶಕ್ತಿಯ ಬಗ್ಗೆ ಇರುವಷ್ಟೆ ಅಚ್ಚರಿ ಅವನಿಗೆ ಶಾರದಮ್ಮನ ಬಗೆಗಿತ್ತು. ಅವಳು ಅವನ ಹಾಡನ್ನು ಪ್ರೀತಿಸುತ್ತಲೇ ಅವನನ್ನು ಆವರಿಸಿಕೊಂಡಿದ್ದಳು. ಶರಣಪ್ಪನಿಗೆ ಅವಳು ತನ್ನ ದೇಹ ಬಿಟ್ಟು ಆಚೆ ಇರುವಂತೆ ಅನಿಸುತ್ತಲೇ ಇರಲಿಲ್ಲ. ಅವಳೆ ಹಾಡೋ, ಹಾಡೇ ಅವಳೊ…..
ಒಮ್ಮೊಮ್ಮೆ ಮಲಗುವಾಗ ಇಬ್ಬರೂ ಪಡಸಾಲೆ ಕಂಬಕ್ಕೆ ಬೆನ್ನು ಕೊಟ್ಟು ‘ಯಾಕೋ ಜೀವ ಹೈರಾಣಾಗ್ಯಾದ, ಒಂದು ಪದಾನಾರೇ ಹೇಳು…’ ಎಂದು ಶಾರದಮ್ಮ ಕಂದೀಲ ಬತ್ತಿಯ ಮೇಲಿನ ಕುಡಿ ತೆಗೆದು ಬೆಳಕಿಗೆ ಮತ್ತಿಷ್ಟು ಹೊಳಪು ತರುತ ಕೇಳುತ್ತಿದ್ದಳು. ‘ಹಾಂಗಂತೀ….. ಏಟರೆ ಖಟಿಪಿಟಿ ಮಾಡ್ತಿ ನೋಡು…ದಣಿವಾಗಲ್ದೆ ಬಿಡ್ತದೇನು…? ನಾಳಿಗಿ ನಾನೂ ನಿನ ಸಂಗಾಟ ಹೊಲಕ ಬರ್ತಿನಿ’ ಅಂತ ಶರಣಪ್ಪ ಕಣ್ಣ ತುಂಬ ಪ್ರೀತಿಯ ಕಕ್ಕುಲಾತಿಯ ಮಹಾಪೂರ ಉಕ್ಕಿಸಿ ಕೇಳಿದರೆ, ‘ಆಯ್ತು ಬರುವಂತಿ. ಈಗ ಒಂದ ಹಾಡು ಹೇಳು’. ಶರಣಪ್ಪ ಪಡಗಾಲುಪಂಚಿ ಹಾಕಿಕೊಂಡು, ಪಕ್ಕದಲ್ಲಿಯೇ ಮಲಗಿದ ಶಾರದಮ್ಮಳ ತಲೆ ನೇವರಿಸುತ ಹಾಡು ಆರಂಭ ಮಾಡುವನು. ಶಾಂತ ಪ್ರಶಾಂತ ರಾತ್ರಿ. ದವಣಿಯ ದನಗಳ ಕೊರಳ ಗಂಟೆಯ ನಾದ. ಅಂಗಳದ ಮೇಲೆ ಹರವಿಕೊಂಡ ಮುಗಿಲು. ಮುಗಿಲ ಒಡಲಿಗೆ ಚಿತ್ತಾರದ ಚೆಲುವು ತಂದ ನಕ್ಷತ್ರಗಳು. ಹಾಸಿದ ಕೌದಿಯ ಮೇಲೆ ರೆಕ್ಕೆ ಬಡಿಯುವ ಹಕ್ಕಿಗಳು.
ತನ್ನ ತಾನು ತಿಳಿದ ಮ್ಯಾಲೆ ಇನ್ನೇನಿನ್ನೇನೋ
ತನ್ನಂತೆ ಸರ್ವರ ಮನ್ನಿಸಿ ಮೂಕಾದ ಮೇಲೆ ಇನ್ನೇನಿನ್ನೇನೋ…..
ಯಾವ ಮಾಂತ್ರಿಕ ಮೋಹದ ಕೊರಳೋ…ಒಡಪು ಒಡೆಯದ ಮರುಳೋ.. ಎಲ್ಲ ಎಲ್ಲವನ್ನೂ ಮೀರಿ ಕರೆದೊಯ್ಯುವ ಬೆರಳೋ…
ಶಾರದಮ್ಮ ತಲೆದಿಂಬಿಗೆ ಮೊಣಕೈಯನ್ನೇ ಆಸರೆಯಾಗಿಸಿಕೊಂಡು ಶರಣಪ್ಪನ ಹಾಡಿನಲ್ಲಿ ಲೀನವಾಗತೊಡಗಿದಳು. ಅವನ ಕೊರಳೇರಿ ಹೊರಟವಳು ಕಡೆಗೆ ನಿಶ್ಚಿಂತ ಶಾಂತ ಲೋಕದಲ್ಲಿ ವಿಹರಿಸತೊಡಗಿ ನಿದ್ರಾವಸ್ಥೆಗೆ ಜಾರಿದಳು. ಶರಣಪ್ಪನ ಹಾಡು ಮುಗಿಲೇರಿ ವಿಹರಿಸುತ್ತಲೇ ಇತ್ತು. ದಣಿವರಿಯದ ಕಂಠ ಅವನದು. ಅವನೊಂದಿಗೆ ಸುತ್ತಲಿನದೆಲ್ಲವೂ ಹಾಡುತ್ತಿರುವಂತೆ ಭಾಸವಾಗಿ ಹಾಡುತ್ತಲೇ ಇದ್ದನು……..
ಶೃತಿ ಹಿಡಿದು ಹೊರಟ ಬದುಕ ಹಾಡು. ಇವರ ಶರೀರಕ್ಕೆ ಮುಪ್ಪು ಬಂದಿದ್ದು ಮಾತ್ರ ಹೌದು. ಮಕ್ಕಳು ಹಾಡಿನ ಪಲ್ಲವಿಯಲ್ಲಿ ಚರಣದಲ್ಲಿ ಆಡಿ ಬೆಳೆದರು. ಶಾರದಮ್ಮ ಎಲ್ಲರನ್ನೂ ಒಂದು ಹಂತಕ್ಕೆ ಮುಟ್ಟಿಸಿದಳು. ಮನೆಯ ಯಜಮಾನಿಕೆ ಪೂರ್ತಿ ಅವಳದೇ ಆಗಿತ್ತು. ಮಕ್ಕಳು ಮೊಮ್ಮಕ್ಕಳು ಸೊಸೆಯಂದಿರರು ಭತರ್ಿ ಸಂಸಾರದ ಸದಸ್ಯರು. ಅವರೆಲ್ಲ ಶರಣಪ್ಪನ ಹಾಡಿನಿಂದುಂಟಾಗುವ ಅಲೆಗಳಿಗೆ ಕಿವಿಕೊಡುತ ಸಂಸಾರದ ನಡೆಯಲ್ಲಿ ಹೆಜ್ಜೆ ಹಾಕುತ್ತಿದ್ದರು. ಇವರಿಬ್ಬರೂ ಬದುಕಿದ ಪರಿ ಎಲ್ಲರಿಗೂ ಒಂದು ಅಚ್ಚರಿಯೇ ಆಗಿತ್ತು.

* * * * *

ಅದೇ ಹೊರಸು. ಸವೆದು ಜೀರ್ಣಗೊಂಡ ಕೌದಿ. ಆ ಪಕ್ಕದ ಕತ್ತಲ ಖೋಲಿಯಲ್ಲಿದ್ದ ಇದೇ ಹೊರಸಿನ ಮೇಲೆ ಶರಣಪ್ಪನ ಅವ್ವ ಮತ್ತು ಕೆಲ ದಿನಗಳ ನಂತರ ಅಪ್ಪ ನಿರಮ್ಮಳವಾಗಿ ಉಸಿರು ಬಿಟ್ಟು ಸಂಸಾರದ ಕೊಂಡಿ ಕಳಚಿಕೊಂಡಿದ್ದರು. ಬಹುಶ: ಅವರು ಸಾಯುವ ಗಳಿಗೆಯಲ್ಲಿ ಶರಣಪ್ಪನಷ್ಟು ಒದ್ದಾಡಿರಲಿಲ್ಲ. ಅವ್ವನ ಬಯಕೆ ಒಂದೇ ಆಗಿತ್ತು ‘ಕೈಲಾದಷ್ಟು ನಿಭಾಯಿಸಿದೆ. ಸಾಕೀಗ. ಹೆಂಗೂ ಮುತ್ತೈದೆ ಸಾವು ಅಪರೂಪ. ಆ ಭಾಗ್ಯ ನಂದಾಗಿದೆ… ಕರಕೊ’ ಅವಳು ಜಡ್ಡಿನಿಂದ ನರಳಿದ್ದಳು. ಆದರೆ ಸಾಯುವಾಗ ಒಲ್ಲೆನ್ನಲಿಲ್ಲ…… ಅಪ್ಪನಂತೂ ಹೆಂಡತಿ ಹೋದ ಮೇಲೆ ಅವನಿಗೂ ಆಸರೆ ತಪ್ಪಿದಂತಾಗಿತ್ತು. ಆದರೆ ಮಗ ಸೊಸೆ ಸಣ್ಣವರು. ದೊಡ್ಡ ಆಸ್ತಿ ಇನ್ನಷ್ಟು ದಿನ ನಿಭಾಯಿಸಬೇಕಾದ ಕರ್ತವ್ಯ ಎಳೆಯುತ್ತಿತ್ತು. ಸಾವಿನ ಬಾಗಿಲು ತೆರೆದುಕೊಂಡಾಗ ತೀವ್ರ ಪ್ರತಿಭಟಿಸುವ ಹಿಮ್ಮತ್ತು ಮಾಡಲಿಲ್ಲ. ಹಾಂ ಹಾಂ ಅನ್ನುವುದರಲ್ಲಿಯೇ ಗಂಟೆ ಢಣ್ಣೆಂದಿತ್ತು.
ಅದೊಂದು ದಿನ ಶರಣಪ್ಪ ಬಸವಣ್ಣ ದೇವರ ಗುಡಿಯಲ್ಲಿ ರಾತ್ರಿ ಸರಿ ಹೊತ್ತಿನ ತನಕ ಭಜನೆ ಮಾಡಿ ಮನೆಗೆ ಬರುವಾಗ ಎಡವಿ ಬಿದ್ದಿದ್ದೊಂದೇ ನೆಪವಾಯಿತು. ವಯಸ್ಸಿಗೆ ಸಹಜ ಮುಪ್ಪು. ಮನೆಯಲ್ಲಿ ಮಲಗಿದನು. ನಿರಂತರ ದುಡಿದ ಜೀವ ಶಾರದಮ್ಮ ಸ್ವಲ್ಪ ಗಟ್ಟಿ-ಮುಟ್ಟಾಗಿಯೇ ಇದ್ದಳು. ಆದರೆ ಶರಣಪ್ಪ ಹೀಗೆ ನೆಲ ಹಿಡಿದಿರುವುದರಿಂದ ಅವಳಿಗೆ ಮುಗಿಲು ಕಳಚಿ ಬಿದ್ದಂತೆ ಆಘಾತವಾಯಿತು. ಎಷ್ಟೋ ದಿನಗಳವರೆಗೆ ಶರಣಪ್ಪನಿಗೆ ಎಲ್ಲ ರೀತಿಯ ಸೇವೆ ಮಾಡಿದಳು. ಮತ್ತು ಅವನಿಗೆ ಆಯಾಸವಾಗುವುದಿಲ್ಲ ಅನಿಸಿದಾಗ ಒಂದೊಂದೇ ಪದ ಹಾಡಿಸುತ್ತಿದ್ದಳು. ಸ್ವಲ್ಪ ಕೆಮ್ಮು ಕಂಡಾಗ ತಕ್ಷಣ ನಿಲ್ಲಿಸಲು ಹೇಳುತ್ತಿದ್ದಳು. ದಿನಗಳು ಸರಿಯುತ್ತಿದ್ದವು. ಶರಣಪ್ಪನ ಪರಿಸ್ಥಿತಿ ಚಿಂತಾಜನಕದತ್ತ ವಾಲಿತು. ಶಾರದಮ್ಮ ಒಳಗಿನ ನೋವನ್ನು ನುಂಗುತ್ತಲೇ
‘ನೀ ಚಿಂತಿ ಮಾಡಬ್ಯಾಡ. ನಾನಿದ್ದಿನಲ್ಲ…..ಎಲ್ಲ ಚಲೊ ಆಗ್ತದ. ಹಣೆಯ ಬೆವರು ಸೆರಗಿನಿಂದ ಒರೆಸುತ್ತಿದ್ದಳು. ‘ನಾ ಚಿಂತಿ ಮಾಡಾದಿಲ್ಲ….. ನೀ ನನ್ ಸಂಗಾಟೇ ಇದ್ರ.’ ಶರಣಪ್ಪನ ಕಡಿಯ ಆಸಿಗೆ ನಾನಾ ಅರ್ಥಗಳಿದ್ದವು. ಕಣ್ಣುಗಳ ಕೊನೆಯಲ್ಲಿ ಎಷ್ಟೊಂದು ಒಗಟಿನ ಭಾವ ಹೊತ್ತ ಭಾರದಲ್ಲಿ ಹನಿಗಳು ಮೆಲ್ಲ-ಮೆಲ್ಲಗೆ ಜಾರುತ್ತಿದ್ದವು.
ಜಾರಿದ ದಿನಗಳು ಸುಮ್ಮನೇ ಹೋಗಲಿಲ್ಲ. ಶರಣಪ್ಪನ ಇದ್ದಬಿದ್ದ ಶಕ್ತಿಯೆಲ್ಲ ಬಳಿದುಕೊಂಡು ಹೊರಟವು. ಶಾರದಮ್ಮ ವ್ಯಕ್ತಿಸಲಾರದ ಒದ್ದಾಟದಿಂದ ಕುಗ್ಗುತ್ತಿದ್ದಳು. ಹಿಮ್ಮತ್ತಿನ ಬದುಕು ಬಾಳಿದ ಜೀವ. ಊರ ಮಂದಿಗೇ ಧೈರ್ಯ ಹೇಳಿದವಳು. ಅವಳ ಒಳಅರಿವಿಗೆ ಎಲ್ಲವೂ ಹೊಳೆಯುತ್ತಿತ್ತು. ಶರಣಪ್ಪ ಸಾವಿನ ಬಾಗಿಲಲ್ಲಿ ನಿಂತಿದ್ದಾನೆ. ಉಳಿಯುವುದಿಲ್ಲ. ತಾನೀಗ ಎದೆ ಗಟ್ಟಿ ಮಾಡಿಕೊಳ್ಳಬೇಕು. ಅವನು ನರಳುತ್ತಿದ್ದ. ಇವಳ ಕರುಳಿನಲ್ಲಿ ಹರಿತ ಕತ್ತರಿಯಾಡುತ್ತಿತ್ತು. ಅವನ ಕಣ್ಣೊಳಗಿನ ಬೆಳಕಿನಗುಂಟ ಬಂದ ಮಾತುಗಳು. ಅವಳಿಗೆಲ್ಲವೂ ಗೊತ್ತಾಗುತ್ತಿತ್ತು.
ಎಷ್ಟು ದಿನಗಳು ಕಾಯುವುದು? ಆದರೂ ಕಾದರು. ಊಹುಂ ಶರಣಪ್ಪನ ಹಾಡು ನಿಲ್ಲಲಿಲ್ಲ. ಅವನು ಪಿಳಿ-ಪಿಳಿ ಕಣ್ಣೆರಡು ಬಿಡುತ್ತಿದ್ದ. ಎಲ್ಲೆಲ್ಲಿಂದ ಭಜನಾ ಮಂಡಳಿಗಳು ಬಂದವು. ಅಂಗಳದ ತುಂಬ ಚಿಕ್ಕೆಗಳಂತೆ ಹರವಿ ಕುಂತರು. ಪ್ರತಿ ಹಾಡುಗಳೂ ಈ ಲೋಕದ ಮಿತಿ ಮೀರುವ ಅರ್ಥದಿಂದ ಹೊರ ಹೊಮ್ಮುತ್ತಿದ್ದವು. ಎಲ್ಲರ ಪ್ರಯತ್ನ ಒಂದೇ ಆಗಿತ್ತು. ಏನೆಂದರೆ ಜೀವನದ ತುಂಬ ಯಾರಿಗೂ ಕೇಡು ಬಗೆಯದ ಶರಣಪ್ಪನಿಗೆ ನೆಮ್ಮದಿಯ ಸಾವು ಬರಬೇಕು. ಅವನ ಬೇಕು ಬೇಡಗಳನ್ನೆಲ್ಲ ಪೂರೈಸಲು ಅಣಿಯಾಗಿದ್ದರು. ಆದರೆ ಅವನಿಗೆ ಯಾವುದೂ ಬೇಕಿರಲಿಲ್ಲ.
ಶರಣಪ್ಪ ನೆಲ ಹಿಡಿದ ಮೇಲೆ ಶಾರದಮ್ಮನಿಗೂ ಒಳ-ಒಳಗೆ ಕಾಡುವಿಕೆ ಸತಾಯಿಸುತ್ತಿತ್ತು. ತನ್ನತ್ತೆ ಮುತ್ತೈದೆ ಸಾವು ಪಡೆದಳು. ಒಮ್ಮೆ ಬಹಳ ಭಾರದ ಮನಸಿನಿಂದ ತನ್ನ ತಾನು ಕನ್ನಡಿಯಲ್ಲಿ ನೋಡಿಕೊಂಡಳು. ಹೂಬಾಹೂಬ್ ತನ್ನತ್ತೆಯಂಥದೇ ಮುಖ ಕನ್ನಡಿಯಲ್ಲಿದೆ. ಕಾಸಿನಗಲ ಕುಂಕುಮ ಕ್ಯಾದಿಗಿ ಅಂಚಿನ ಹಸಿರು ಇಳಕಲ್ ಸೀರೆ. ಎತ್ತಿ ಬಾಚಿದ ಬೆಳ್ಳಿ ಕೂದುಲು. ತನ್ನದೇ ಕಣ್ಣುಗಳಲ್ಲಿ ದಿಟ್ಟಿ ನೆಟ್ಟಳು. ನೀರು ತುಂಬಿದವು. ಅಲ್ಲಿ ಶರಣಪ್ಪ ಚಳ್ಳಾಮು ತಟ್ಟುತ ಹಾಡುತ್ತಿದ್ದಾನೆ. ಅವಳು ತಕ್ಷಣವೇ ಕಣ್ಣು ಬಿಗಿಯಾಗಿ ಮುಚ್ಚಿದಳು. ಹೆಜ್ಜೆಗಳು ಪಾತಾಳಕ್ಕಿಳಿಯುತ್ತಿದ್ದವು. ಆದರೂ ಗಂಡನಿದ್ದ ಕಡೆ ನಡೆದು ಬಂದಳು. ಎದೆಯ ಮೇಲಿನ ಬಂಡೆಗಲ್ಲು ಕೊಡವಿ ಬಂದಷ್ಟೆ ಹಗುರವಾಗಲು ಹೆಣಗಿದಳು. ಸುತ್ತಲಿದ್ದವರು ಪಕ್ಕಕ್ಕೆ ಸರಿದರು. ಮೆಲ್ಲಗೆ ಶರಣಪ್ಪನ ನೆರೆತ ಕೂದಲಲ್ಲಿ ಬೆರಳಾಡಿಸಿದಳು.
‘ನೀ ನಂಗ ಬಿಟ್ಟು ಹೋಗಬಾರದು ಅಂತಿಯಲ್ಲ?’ ಶರಣಪ್ಪನ ಕಣ್ಣುಗಳಲ್ಲಿ ಕಣ್ಣಿಟ್ಟು ಕೇಳಿದಳು.
ಅವನ ಕಣ್ಣಿಂದ ಅದೆಲ್ಲಿದ್ದವೋ ನೀರರಾಶಿ ದಳ ದಳ ಹರಿಯತೊಡಗಿದವು. ಗಂಟಲು ಬಿಕ್ಕುತ್ತಿತ್ತು. ಅವನಿಗದೊಂದೇ ಭಾಷೆ ನಿಲುಕುತಿತ್ತು.
‘ಯಾಕಿಂಥ ಮೋಹ ಇಟ್ಕೊಂಡಿದ್ದಿ? ಲೌಕಿಕ ಮೋಹದ ಕರಿ ಹರಿದು ನಿನ ಸಂಗಾಟ ನನಗೆ ಜೋಡಿಸ್ಕೊಮಾ ಹಂಗ ಮಾಡಿದ್ದಿ. ಆದರ ಈಗ ನೀನೇ ಈ ಸಂಸಾರಕ್ಕ ಅಂಟ್ಕೊಂಡಿದ್ದಿಯಲ್ಲ….. ಯಾಕ?’ ಶಾರದಮ್ಮ ಕೊಂಚ ಸಿಟ್ಟು ವ್ಯಕ್ತಿಸಿ ಕೇಳಿದಳು.
ಶರಣಪ್ಪನ ಕಣ್ಣಲ್ಲಿ ನೀರ ಹನಿಗಳು ಹಂಗೇ ನಿಂತವು. ಅವನ ಕೈಗಳನ್ನು ತನ್ನ ಬೊಗಸೆಯಲ್ಲಿ ಹಿಡಿದು, ‘ಈ ಸಾವು ಯಾರಿಗಿ ಬಿಟ್ಟದ? ಬದುಕಿದಷ್ಟು ವರ್ಷ ಚೆಂದ ಜಿಂದಗಾಣಿ ಮಾಡಿದೇವಲ್ಲ….. ಮತ್ತೇನು? ನಂಗ ನೀನು – ನಿಂಗ ನಾನು. ನಮ್ಮಿಬ್ಬರ ನಡಬರಕ ನಿನ್ನ ಹಾಡು ಅಂಬಾದು, ಹಳಿ ಬಟ್ಟಿ ಮುಚ್ಚಿ ಹೊಸ ಅರಿಬಿಲಿಂದ ಕೌದಿಗಿ ಹೊಲಿಯಾ ಸೂಜಿ ದಾರಾ ಆಗಿತ್ತು. ನೋಡು ಕೌದಿ ಇನ್ನಾ ಹರದಿಲ್ಲ. ನೀ ಚಿಂತಿ ಮಾಡಬ್ಯಾಡ. ನನಗ ಏನೂ ತಿಳಿಲಾರದ ವ್ಯಾಳೆದಾಗ ‘ಹುಟ್ಟೂದು ಸಾವೂದು ಜೀವ ಭಾವದ ಭ್ರಮಿ. ಸಾವೇ ಸಾವೇನವಗ. ನೋವೇ ನೋವೇನವಗ’ ಅಂತ ಹಾಡಿ ಸಾವು ಎದುರಿಸಿ ಜೀವನ ಗೆಲ್ಲಾದು ಕಲಿಸಿದ್ದಿ. ಈಗ ನೀನೇ ಈ ಬದುಕಿನ ಹುದಲಾಗ ಮತ್ತ ಏನ್ ಹುಡುಕಬೇಕಂತಿ…..? ಸಾಕು. ಸಾಕೀಗ. ನಿನ್ನ ಕಷ್ಟ ನೋಡಾದು ನಂಗ ಆಗವಲ್ದು. ನಿನ್ನ ಹಾಡುಗೋಳು ನನ ಸಂಗಾಟ ಇದ್ದೇ ಇರ್ತಾವ. ಹಾಡು ಸವೆದು ಹೋದ ದಿನ ನಾನೂ ಇಲ್ಲಿಂದ ಜಾಗ ಖಾಲಿ ಮಾಡೇಬೇಕು. ತಿಳಿತೇನು?’.
ಶಾರದಮ್ಮ ಮೆಲ್ಲ ಮೆಲ್ಲಗೆ ಒಂದೊಂದೇ ಮೋಹದ ಎಳೆಗಳನ್ನು ಕಡಿಯುವಲ್ಲಿ ಮುನ್ನುಗ್ಗುತ್ತಿದ್ದಳು. ಶರಣಪ್ಪ ಹೆಂಡತಿಯ ಮುಖವನ್ನು ನೋಡುತ್ತಲೇ ಇದ್ದ. ಅವಳು ಬಡಿವ ಕಣ್ ರೆಪ್ಪೆ ಮೂಗಿನ ನತ್ತು, ಹಣೆಯ ಕುಂಕುಮದಲ್ಲೆಲ್ಲ ಏಕತಾರಿ, ಚಳ್ಳಮಗಳ ಶಬ್ದ ಧ್ವನಿಸುತ್ತಿದ್ದಂತೆ ಭಾಸವಾಗುತ್ತಿತ್ತು. ಅವನು ಅವಳನ್ನು ಆದ್ರ್ರವಾಗಿ ನೋಡುತ್ತ, ಒಳಗಿನ ದನಿ ಒಟ್ಟುಗೂಡಿಸಿ, ‘ಹಾಂ ನಾ ನಿನ್ ಸಂಗಾಟೇ ಕಡಿ ತನಕ ಇರಬೇಕಂತಿನಿ’ ಅವನ ಮುಖವು ಕೂಸಿನಂತೆ ಆಗಿತ್ತು. ‘ನೀ ನಾ ಸತ್ತ ಮ್ಯಾಲನೂ ಈ ಕುಂಕುಮ ತಗಿಬ್ಯಾಡ.’ ಶರಣಪ್ಪನ ಮಾತಿಗೆ ಶಾರದಮ್ಮನ ಕಣ್ಣಾಲಿ ತೇವವಾಯಿತು. ಅವಳು, ‘ಹಾಂ. ಆಗಲಿ…..’ ಅಂದಳು. ನೆರೆದವರ ಕಣ್ಣಲ್ಲಿಯೂ ವಿಚಿತ್ರ ದು:ಖ ಮನೆಮಾಡಿತ್ತು. ಇಡೀ ಮನೆಯೇ ಜಾತ್ರೆಯಾಗಿತ್ತು. ಹೊರಸಿನ ಕಾಲುದಸಿಗೆ ಶಾರದಮ್ಮ ಅದೆ ಹಿಮ್ಮತ್ತಿನಿಂದ ಕೂತಳು. ಎಲುಬು ತೊಗಲಿನ ಗೂಡಿನಂಥ ಶರಣಪ್ಪ. ಜೀವನ ಪೂತರ್ಿ ರಾಗ-ತಾಳದಂತೆ ಜೊತೆಯಾಗಿ ಬಂದವರು. ಎಲ್ಲರೊಳಗೂ ಮುಂದೇನು ಎಂಬ ಕುತೂಹಲ ಇತ್ತು. ‘ನಂಗ ಚಳ್ಳಾಮ ಕುಡ್ರಿ’ ಶರಣಪ್ಪನ ಬಾಯಿಯಿಂದ ಈ ಮಾತು ಬಂದಿದ್ದೇ ತಡ ಭಜನಿಗಾರರೆಲ್ಲ ಏಕಕಾಲಕ್ಕೆ ತಮ್ಮ ಕೈಯಲ್ಲಿದ್ದ ಚಳ್ಳಾಮುಗಳನ್ನು ಮುಂದೆ ಮಾಡಿದರು.
ಶರಣಪ್ಪನ ಕೈಗಳು ಅದೆಲ್ಲಿಂದ ಶಕ್ತಿ ತರಿಸಿಕೊಂಡವೋ….. ಚಳ್ಳಾಮುಗಳನ್ನು ಬಡಿಯತೊಡಗಿದವು. ಅವನ ಗಂಟಲ ನರಗಳು ಹಾಡಿಗೆ ಅಣಿಯಾಗತೊಡಗಿದವು. ಎಲ್ಲಿಂದಲೋ ಬಂದ ಸಾಧುವೊಬ್ಬ ಅಂಗಳದ ಮೂಲೆಯಲ್ಲಿ ಧುನಿ ಹಾಕಿ ಏಕತಾರಿ ಟೀಂವ್ಗುಟ್ಟಿಸುತ್ತಿದ್ದ. ಅವನಿಗೆ ಹಾಡುವುದಕ್ಕಾಗಿ ಶಬ್ದ ಮತ್ತು ದನಿ ಬೇಕಿರಲಿಲ್ಲ. ಕಣ್ಣುಗಳನ್ನು ಮುಚ್ಚಿ ತನ್ನ ಲೋಕದಲ್ಲಿ ತಾನೇ ಏಕತಾರಿಯ ನಾದದೊಂದಿಗೆ ವಿಹರಿಸುತ್ತಿದ್ದ.
ಶರಣಪ್ಪ ಶಾರದಮ್ಮನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಲೇ ಹಾಡತೊಡಗಿದನು
ನಾ ಹೋದ ಮ್ಯಾಲ ನೀ ಹ್ಯಾಂಗಿರುತಿ
ನಿನ ಮರಿಯಲಿ ಹ್ಯಾಂಗ ನಾ ಗುಣವಂತಿ……
ಹಾಡಿನ್ನು ಬಾಕಿಯಿತ್ತು. ಚಳ್ಳಾಮುಗಳು ಶರಣಪ್ಪನ ಕೈಗಳಿಂದ ಕಳಚಿಕೊಂಡು ನೆಲ ಸೋಕುತ ಚಲ್ಲಾಡಿದವು. ಗಂಟೆ ಢಣ್ಣೆಂದಿತು.

* * * * * *

(ತತ್ವಪದಗಳು ಕಡಕೋಳ ಮಡಿವಾಳಪ್ಪನವರದ್ದು)
 
 

‍ಲೇಖಕರು avadhi

September 3, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

ಪ್ರಸಂಗಾವಧಾನ…

ಪ್ರಸಂಗಾವಧಾನ…

ಟಿ. ಎಸ್.‌ ಶ್ರವಣ ಕುಮಾರಿ ನಮ್ಮಗುಂಡಣ್ಣನನ್ನು ಚಿತ್ರವಳ್ಳಿಯ ಅನಭಿಷಕ್ತ ರಾಜನೆನ್ನಲು ಏನಡ್ಡಿಯಿಲ್ಲ. ಲೋಕಸೇವಾ ಇಲಾಖೆಯ ಸರ್ಕಾರಿ...

6 ಪ್ರತಿಕ್ರಿಯೆಗಳು

 1. mahantesh navalkal

  ನಿಲಕ್ಕ ಅವರ ಒಳ್ಳೆಯ ಕಥೆಗಳಲ್ಲಿ ಇದು ಒಂದು
  ನವಲಕಲ್

  ಪ್ರತಿಕ್ರಿಯೆ
 2. g.n.nagaraj

  ನಾ ಹೋದ ಮ್ಯಾಲ ನೀ ಹ್ಯಾಂಗಿರತಿ
  ನಿನ ಮರೆಯಲಿ ಹ್ಯಾಂಗ ಗುಣವಂತಿ
  ಜಗತ್ತೆಲ್ಲ ಹೀಗೆ ಜೀವಿಸಿ ಹೀಗೆ ಜೀವ ಬಿಡಲೆಂದು ಬಯಸುವಂತ ಸುಖ ಸೊಕ್ಕಿದೆ ಈ ಕಥೆಯಲ್ಲಿ.ಅಲ್ಲಲ್ಲಿ ಸಾಹಿತ್ಯದಲ್ಲಿ ಇಂಥ ಚಿತ್ರಗಳು ನೋಡ ಸಿಕ್ಕಿವೆ.ಶಿವರಾಮ ಕಾರಂತರ ‘ಮೈ ಮನಗಳ ಸುಳಿಯಲ್ಲಿ ‘ನ ಪಮ್ಮ-ಪಮ್ಮಿ ( ? ),ಇತ್ತೀಚೆಗಿನ ವಸುಧೇಂಧ್ರರು ಅನುವಾದಿಸಿದ ಒಂದು ತೆಲುಗು ಕಥೆ. ತಟ್ಟನೆ ನೆನಪಿಗೆ ಬಂದಂತವು. ಆದರೆ ಆಸ್ತಿಯ ಮೋಹ ಅದರಿಂದ ಹುಟ್ಟುವ ಈರ್ಷೆ,ದ್ವೇಷ,ಅಹಂ ಇವು ಮನುಷ್ಯನ/ಳ ವ್ಯಕ್ತಿತ್ವವನ್ನು ಎಷ್ಟು ಕೆಡಿಸಿಬಿಟ್ಟಿರುತ್ತವೆಂದರೆ ಇಂತಹ ುದಾಹರಣೆಗಳು ಇರಲಿಕ್ಕೇ ಸಾಧ್ಯವಿಲ್ಲ ಎಂದು ಅಪನಂಬಿಕೆ ಬರುವಷ್ಟು.ಜೊತೆಗೆ ಸಾಲ, ಬರ,ಮಕ್ಕಳ ಬೆಳವಣಿಗೆಯ, ನೆರೆಹೊರೆಯವರ ಕಾಟದ ಸಮಸ್ಯೆಗಳು ಅವರನ್ನು ಹಣ್ಣಾಗಿಸಲಿಲ್ಲವೇ ? ಅವುಗಳನ್ನೂ ನಿಭಾಯಿಸಿ ಅವರ ಸುಖದ ಸೊಕ್ಕುವಿಕೆಯನ್ನು ಕಾಪಾಡಿಕೊಂಡರೆ?
  ಇರಲಿ, ಇಂತಹ ಜೊತೆಗಳು ಹೆಚ್ಚಾಗಲಿ. ಗಂಡನ ಕಂಠದಿಂದ ಹೊಮ್ಮುವ ತತ್ವ ಪದಗಳ ಮೋಹಕ್ಕೆ ಇಡೀ ಸಂಸಾರದ ಭಾರವನ್ನೆಲ್ಲ ಹೊತ್ತ ಶಾರದೆ ಸಾಯಲಾರದ ಗಂಡನ ಸಂಕಟವನ್ನು ಅರಿತ ರೀತಿಯೇ ಅವನನ್ನು ಸಾವಿಗಟ್ಟಿದ ರೀತಿಯೇ ಅವರ ಮನಸ್ಸುಗಳ ಬೆರೆಯುವಿಕೆಯನ್ನು ಸೂಚಿಸುತ್ತದೆ. ಒಳ್ಳೆಯ ಕಥೆ ಹಾಗೂ ಕಥೆಗಾರಿಕೆಯ ಕುಸುರಿ ಕೆಲಸ.

  ಪ್ರತಿಕ್ರಿಯೆ
 3. g.n.nagaraj

  ಸಾಮಾನ್ಯವಾಗಿ ಅವಧಿಯಲ್ಲಿ ಕಥೆ, ಲೇಖನಗಳ ಜೊತೆ ಒಳ್ಳೆಯ ಚಿತ್ರಗಳನ್ನು ಇಂತಹ ಚಿತ್ರ ಎಲ್ಲಿ ಹುಡುಕಿದರಪ್ಪ ಎಂದು ಆಶ್ಚರ್ಯ ಪಡುವಂತಹ ಚಿತ್ರಗಳನ್ನು ಹಾಕುತ್ತಾರೆ. ಆದರೆ ಈ ಕಥೆಯ ಜೊತೆ ಹಾಕಿದ ಚಿತ್ರಗಳು ಎಷ್ಟೂ ಮಾತ್ರಕ್ಕೂ ಸೂಕ್ತವಲ್ಲ

  ಪ್ರತಿಕ್ರಿಯೆ
 4. Bhanu

  ನಿಮ್ಮ ಒಪ್ಪಿಗೆ ಇದ್ದರೆ ನಾನು ಇದನ್ನು ನಮ್ಮ ಪತ್ರಿಕೆಯಲ್ಲಿ ಹಾಕುತ್ತೇನೆ ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: