ಹಾಡೋ ಹುಡುಗರಿಗೆ ಆಟಾನೂ ಬೇಕು

ಅಕ್ಷತಾ ಕೆ
ak1
ದಣಪೆಯಾಚೆ…
 
ಇತ್ತೀಚಿಗೆ ನಮ್ಮ ಮನೆಗೆ ಬಂದ ಹಿರಿಯರೊಬ್ಬರು ಆ ಹುಡುಗರ ಮನೆಗೆ ನನ್ನನ್ನು ಕರೆದೊಯ್ದಿದ್ದರು. ಮೊದಲನೆಯವನು ಏಳನೇ ತರಗತಿ. ಚಿಕ್ಕವನಿನ್ನೂ ಐದನೇ ತರಗತಿ. ಇಬ್ಬರೂ ಹಾಡುಗಾರರು. ಈಗಾಗಲೇ ಕನ್ನಡದ ಎಲ್ಲ ಟಿವಿ ಚಾನೆಲ್ ಗಳ ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಎರಡನೇ ಸುತ್ತು, ಮೂರನೇ ಸುತ್ತು, ಸೆಮಿಫೈನಲ್ ಹೀಗೆಲ್ಲ ವಿವಿಧ ಹಂತಗಳಿಗೆ ತಲುಪಿ ಬಂದಿದ್ದಾರೆ. ಮುಂದಿನ ಕೆಲವು ಸ್ಪರ್ದೆಗಳಿಗೆ ತಯಾರಿಯನ್ನು ಮಾಡಿಕೊಳ್ಳುತಿದ್ದಾರೆ.
ಈ ವಿವರಗಳನ್ನೆಲ್ಲ ಹುಡುಗರ ತಾಯಿ ನಮಗೆ ನೀಡಿದರು. ಜೊತೆಗೆ ಆ ಚಾನೆಲ್ ನ ನಿರೂಪಕರು ತಮ್ಮ ಮಗನಿಗೆ ನಿನ್ನ ಹೆಸರಿಗೆ ತಕ್ಕಂತೆ ನಿನ್ನ ಕಂಠ ಸಿರಿಯು ಅದ್ಭುತ ಎಂದು ಹೊಗಳಿದ್ದನ್ನು, ಇನ್ನೊಂದು ಚಾನೆಲ್ನಲ್ಲಿ ತೀರ್ಪುಗಾರರು ತಮ್ಮ ಮಗನ ಪರವಿದ್ದರೂ ವೀಕ್ಷಕರ ಎಸ್ ಎಂಎಸ್ ಜಾಸ್ತಿ ಸಂಖ್ಯೆಯಲ್ಲಿ ಬೇರೆಯವನಿಗೆ ಹೋದುದರಿಂದ ತಮ್ಮ ಮಗ ಸೋಲುಣ್ಣಬೇಕಾಯಿತೆಂದು, ಮಗದೊಂದರಲ್ಲಿ ತೀರ್ಪುಗಾರರೆ ಮೋಸ ಮಾಡಿಬಿಟ್ಟರು ಎಂದೆಲ್ಲ ವಿವರಣೆ ನೀಡಿದರು.
 
ttap_music_15
ಅಲ್ಲೇ ನಿಂತು ಇದನ್ನೆಲ್ಲ ಕೇಳಿಸಿಕೊಳ್ಳುತಿದ್ದ ಆ ಇಬ್ಬರು ಹುಡುಗರು ಅಮ್ಮನ ಮಾತಿನಿಂದ ಮುಜುಗರ ಪಡುತ್ತಿರುವುದು ಸ್ಪಷ್ಟ ಗೋಚರಿಸುತ್ತಿತ್ತು. ಅವಕ್ಕೆ ಸ್ಪರ್ಧೆ ಎಂದರೆ ಸ್ಪರ್ಧೆ ಅಷ್ಟೆ, ಅದಕ್ಕಿಂತ ಹೆಚ್ಚಲ್ಲ. ಗೆದ್ದರೂ ಸೋತರೂ ಅದರ ನಡುವಿನ ಅಂತರ ತುಂಬಾ ಕಡಿಮೆ. ಆದರೆ ಹಿರಿಯರಿಗೆ ಅದರ ನಡುವೆ ಭೂಮಿ ಆಕಾಶದಷ್ಟು ಅಂತರ. ಅಷ್ಟೊತ್ತಿಗೆ ಆ ಹುಡುಗರ ಅಪ್ಪ ಬಂದರು. ನಮಗೆ ಹಲೋ ಹೇಳಿದವರೇ ಎಲ್ಲಿ ಹಾರ್ಮೋನಿಯಮ್ ತೆಗೆದುಕೊಂಡು ಬನ್ನಿ ಇವರೆದುರಿಗೆ ಎರಡು ಹಾಡು ಹೇಳಿ. ಈ ಅಂಕಲ್ ತುಂಬಾ ಚೆನ್ನಾಗಿ ಹಾಡು ಹೇಳ್ತಾರೆ ನಿಮ್ಮ ಹಾಗೆ ಅವಕಾಶ ಸಿಗ್ಲಿಲ್ಲ ಅದಕ್ಕೆ ಎಲ್ಲೂ ಹಾಡ್ಲಿಲ್ಲ. ನಿಮ್ಮ ಹಾಗೆಲ್ಲ ಅವಕಾಶ, ಪ್ರೋತ್ಸಾಹ ಎಲ್ಲ ಸಿಕ್ಕಿದ್ದರೆ ಇವತ್ತು ಏನಾಗಿಬಿಡ್ತಿದ್ದರೋ ಎಂಬ ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ನನ್ನನ್ನು ಅವರ ಮನೆಗೆ ಕರೆದೊಯ್ದಿದ್ದ ಹಿರಿಯರ ಮುಖ ನೋಡಿದರು!
ಹುಡುಗರಿಬ್ಬರು ಹಾರ್ಮೋನಿಯಮ್ ತಾರದೇ ನೀ ಕೇಳು ನೀ ಕೇಳು ಎಂದು ಪರಸ್ಪರ ಗುನುಗು ಸ್ವರದಲ್ಲಿ ಒತ್ತಾಯಿಸುತ್ತಾ ಅಲ್ಲೇ ನಿಂತಿದ್ದರು. ಅವರಿಬ್ಬರು ಹಾಡಲು ಈ ಕ್ಷಣದಲ್ಲಿ ಮನಸಿಲ್ಲ ಎಂದು ನನಗೆ ಖಾತ್ರಿಯಾಯಿತು. ಮನಸಿಲ್ಲದೆ ಏನನ್ನೂ, ಯಾವ ಕಾರಣಕ್ಕೂ, ಯಾವ ಅನಿವಾರ್ಯತೆಗೂ ಮಾಡುವ ಅವಶ್ಯಕತೆ ಇದೆ ಎಂದು ನನಗೆ ಅನ್ನಿಸುವುದಿಲ್ಲ. ಜೊತೆಗೆ ಸಂಜೆ ಸಮಯದಲ್ಲಿ ಕ್ರಿಕೆಟ್ ಫೀಲ್ಡ್ ಕರೆಯುತ್ತಿರಲು ಯಾವ ಹುಡುಗನಾದರೂ ಯಾಕೆ ಒತ್ತಾಯಪೂರ್ವಕವಾಗಿ ಹಾಡಬೇಕು? ಅಂಥ ಅನಿವಾರ್ಯವಾದರೂ ಏನಿದೆ? ಇರಲಿ ಬಿಡಿ ಇನ್ನೊಂದು ದಿನ ನಿಮ್ಮ ಹಾಡು ಕೇಳಲಿಕ್ಕೆ ಅಂತಲೇ ಬರುತ್ತೇವೆ. ಆಗಿನಿಂದ ಅಣ್ಣ ತಮ್ಮ ಎಲ್ಲಿಗೋ ಹೋಗಲು ತಯಾರಿ ಮಾಡಿಕೊಳ್ಳುತಿದ್ದೀರಿ ಹೋಗಿ ಎಂದು ಬಿಟ್ಟೆ.
ಕೂಡಲೇ ಅವರಪ್ಪ ಏನು ಮೇಡಂ ಹೀಗೆ ಹೇಳ್ತೀರಾ ಇವರ ಜೊತೆ ಟಿವಿ ಚಾನೆಲ್ನಲ್ಲಿ ಕಾಂಪಿಟ್ ಮಾಡ್ತಾರಲ್ಲ ಅವರೆಲ್ಲ ಎಷ್ಟು ಗಂಟೆ ಪ್ರಾಕ್ಟೀಸ್ ಮಾಡ್ತಾರೆ ಗೊತ್ತಾ. ಜೊತೆಗೆ ಇವತ್ತು ನಿಮ್ಮಿಬ್ಬರೆದುರಿಗೆ ಹಾಡೋಕೆ ಆಗದಿದ್ದರೆ ಅಲ್ಲಿ ಸಾವಿರಾರು ಜನ ಇರ್ತಾರಲ್ಲ ಅವರೆದುರಿಗೆ ಹೇಗೆ ಕಾಂಪಿಟ್ ಮಾಡೋಕಾಗೋದು. ನಾವು ಗಂಡ ಹೆಂಡತಿ ಇಬ್ಬರು ಸಂಜೆ ಎಲ್ಲಿಗೂ ಹೋಗದೆ ವಾರದಲ್ಲಿ ಮೂರು ದಿನವಾದರೂ ಇವರಿಗೆ ದಿನಕ್ಕೆ ಮೂರ್ನಾಲ್ಕು ಗಂಟೆ ಪ್ರಾಕ್ಟೀಸ್ ಮಾಡಿಸೇ ಮಾಡಿಸ್ತೀವಿ. ಇದೊಂದು ಸ್ಟೇಜ್ ನೋಡಿ ಈಗ ಶಿಸ್ತಿನಿಂದ ಕಲಿತು ಬಿಡಬೇಕು. ಎಲ್ಲಿಗ್ರೋ ಹೊರಟಿದ್ದೀರಿ ಆಟ ಆಡೋಕೆ ಅಂತ ಹೋಗಿ ಐಸ್ಕ್ರೀಮ್, ಗೋಭಿಮಂಚೂರಿ ಅಂತೆಲ್ಲ ತಿನ್ಕೊಬಂದು ಗಂಟಲು ಕೆಡಿಸ್ಕೊಂಡ್ರೆ ಇನ್ನೊಂದ್ವಾರಕ್ಕೆ ಇದ್ಯಲ್ಲ ಸುವರ್ಣ ಟಿವಿ ಕಾಂಪಿಟೇಷನ್ ಅಲ್ಲಿ ಏನು ಮಾಡ್ತೀರಿ? ಈ ಸರ್ತಿ ಹೇಗಾದರೂ ಮಾಡಿ ಫೈನಲ್ ತಲುಪೋಕೆ ಟ್ರೈ ಮಾಡಿ. ಫೈನಲ್ ತಲುಪಿದ್ರೆ ಡಿಜಿಟಲ್ ಕ್ಯಾಮರಾ ಕೊಡಸ್ತೀನಿ ಅಪ್ಪ ಭರವಸೆ ಇತ್ತ.
ಅಮ್ಮ ಶುರು ಹಚ್ಚಿಕೊಂಡಳು ಇವರ ಸಂಗೀತಾಭ್ಯಾಸಕ್ಕೆ ಈಗ ಮನೆಗೆ ಗುರುಗಳನ್ನು ಬರಕ್ಕೇಳ್ತೀವಿ. ವಾರಕ್ಕೊಂದು ಸರ್ತಿ ಹುಬ್ಬಳ್ಳಿಯ ಒಬ್ಬರು ಫೇಮಸ್ ಮೇಷ್ಟ್ರು ಬಂದು ಸೆಲೆಕ್ಟೆಡ್ ಐದು ಜನಕ್ಕೆ ಇಡೀ ದಿನ ಹೇಳಿ ಕೊಡ್ತಾರೆ. ಸಾರೆಗಮದಲ್ಲಿ ಹೋದ ಸರ್ತಿ ಫಸ್ಟ್ ಬಂದ್ಲಲ್ಲ ಅವಳು ಈ ಮೇಷ್ಟ್ರ ಹತ್ತಿರಾನೇ ಕಲಿತಿದ್ದು. ಈ ಸರ್ತಿ ಬೇಸಿಗೆ ರಜದಲ್ಲೂ ಎರಡು ದಿನಕ್ಕೂ ತವರು ಮನೆಗೆ ಹೋಗ್ಲಿಲ್ಲ. ನಾನು ಹೊರಟ ಕೂಡಲೇ ಇವರಿಬ್ಬರು ಹೊರಟು ಬಿಡ್ತಾರೆ. ಕಾನ್ಸಂಟ್ರೇಷನ್ ಡೈವರ್ಟ್ ಆಗಿ ಬಿಡತ್ತೆ. ಅಲ್ಲಿ ಅಣ್ಣನ ಮಕ್ಕಳು ಇದ್ದಾವೆ ಹಳ್ಳಿ ಸ್ಕೂಲಿಗೆ ಹೋಗ್ತಾವೆ ಸಂಗೀತ ಎಲ್ಲ ಗೊತ್ತಿಲ್ಲ. ಅವರುಗಳ ಜೊತೆ ಸೇರಿ ಇಡೀ ರಜಾನೆಲ್ಲ ವೇಸ್ಟ್ ಆಗಿ ಕಳೆದು ಬಿಡ್ತಾರೆ. ಮತ್ತೂ ಮುಂದುವರೆದಿತ್ತು ಆ ತಾಯಿಯ ಲೆಕ್ಚರ್
ನಾವಿಬ್ಬರು ಇನ್ನು ಹೊರಡ್ತೀವಿ ಸುಮ್ನೆ ಬಂದ್ವಿ ಎಂದು ಎದ್ದೆವು. ಇಲ್ಲವೇ ಇಲ್ಲ ಹಾಡು ಕೇಳ್ಕಂಡೆ ಹೋಗಬೇಕು ಎಂದು ನಮ್ಮಿಬ್ಬರನ್ನು ಮತ್ತೆ ಕೂರಿಸಲಾಯಿತು. ಹುಡುಗರಿಬ್ಬರು ಹೋಗಿ ಒಬ್ಬ ಹಾರ್ಮೋನಿಯಮ್ ಮತ್ತೊಬ್ಬ ತಬಲ ಹಿಡಿದು ಬಂದು ಹಾಡಲು ಪ್ರಾರಂಭಿಸಿದರು. ಹಾಡುವ ಮೊದಲು ನಮ್ಮಿಬ್ಬರಿಗೂ ನಮಸ್ಕರಿಸಿ, ನಮ್ಮ ಹೆಸರನ್ನು ಅದೂ ಶ್ರೀಯುತರಾದ ಇಂಥವರು ಮತ್ತು ಶ್ರೀಮತಿಯವರಾದ ಇಂಥವರು ನಮ್ಮ ಗಾಯನವನ್ನು ಕೇಳಲು ಆಗಮಿಸಿದ್ದಾರೆ ಎಂದು ನಮಗೆ ಸ್ವಾಗತ ಕೋರಿದರು. ಅದಕ್ಕೂ ಮೊದಲು ಎಲ್ಲ ವಾದ್ಯಗಳಿಗೆ ನಮಸ್ಕರಿಸಿದರು. ಇಬ್ಬರ ಸ್ವರವೂ ಬಹಳ ಚೆನ್ನಾಗಿಯೇ ಇತ್ತು. ಅವರು ಆಯ್ದುಕೊಂಡ ಹಾಡುಗಳು ಉತ್ತಮವಾಗಿದ್ದು ಅವರ ಅಭಿರುಚಿಯನ್ನು ತೋರಿಸುತಿತ್ತು.
ಆದರೆ ಅವರು ಎಷ್ಟೆ ಚೆನ್ನಾಗಿ ಹಾಡಿದರೂ ಟಿವಿ ಭಾಷೆಯಲ್ಲಿಯೇ ಹೇಳುವುದಾದರೆ ಎಂಜಾಯ್ ಮಾಡಿಕೊಂಡು ಹಾಡುತ್ತಿಲ್ಲ ಎಂಬ ಅಂಶ ಸ್ಪಷ್ಥವಾಗುತಿತ್ತು. ಅಪ್ಪ ಅಮ್ಮನ ಒತ್ತಾಯಕ್ಕೆ ಆ ಕ್ಷಣದಲ್ಲಿ ಹಾಡುತಿದ್ದರೇ ವಿನಃ ಅವರ ಖುಷಿಯಿಂದಲ್ಲ. ಹಾಡುವಾಗ ಆ ಹುಡುಗರು ಅಪ್ಪ ಅಮ್ಮನ ಮುಖವನ್ನೆ ನೋಡುತ್ತಾ ಹಾಡುತಿದ್ದವು. ಅಪ್ಪ ಅಮ್ಮ ನಮ್ಮಿಬ್ಬರ ಮುಖವನ್ನು. ನಾವಿಬ್ಬರು ಸಂಗೀತದಲ್ಲಿ ತನ್ಮಯರಾದಂತೆ ಮುಖಭಾವ ಪ್ರದರ್ಶಿಸುತ್ತಾ ಕುಳಿತಿದ್ದೆವು. ಅಂತೂ ಸಂಗೀತ ಮುಗಿಯಿತು. ಹೊರಗೆ ಬರುವಾಗ ಆ ಹಿರಿಯರು ಹೇಳಿದರು. ನೋಡು ಪ್ರತಿ ಟಿವಿ ಚಾನೆಲ್ನಲ್ಲೂ ಸಂಗೀತದ ಷೋ ಇಟ್ಕಂಬಿಟ್ಟು ಇಂಥಾ ಹುಡುಗರಿಗೆ ವೇದಿಕೆ ಸಿಗತ್ತೆ ಅನ್ನೋದು ಖರೆ.
ನಮ್ಮ ಕಾಲದಲ್ಲಿ ಹಳ್ಳಿಯ ಹುಡುಗರಾಗಿದ್ದ ನಮಗೆ ಈ ರೀತಿಯ ವೇದಿಕೆ ಇರಲೇ ಇಲ್ಲ. ಈಗಲೂ ಹಳ್ಳಿಯ ಅವಿದ್ಯಾವಂತ ಕುಟುಂಬದಿಂದ ಬರುವ ಹುಡುಗರು ಎಷ್ಟೇ ಚೆನ್ನಾಗಿ ಹಾಡು ಹೇಳುವವರಾದರೂ ಅವರಿಗೆ ಇಂಥ ಶೋಗಳು ಬಾಗಿಲು ತೆಗೆಯುತ್ತವೆ ಎಂಬುದು ಸುಳ್ಳು. ಆದೇನೆ ಇರಲಿ ಚಿಕ್ಕ ಪುಟ್ಟ ಹುಡುಗರು ಇಂಥ ಶೋಗಳಲ್ಲಿ ಭಾಗವಹಿಸಿ ಬಹುಮಾನ ತಗೊಂಡು ಬರ್ತಾರೆ ನೋಡು ಅವರ ವರ್ತನೆಯಲ್ಲೆ ಬದಲಾವಣೆ ಆಗಿ ಬಿಟ್ಟಿರತ್ತೆ. ಅವು ತಮ್ಮನ್ನು ಅಸಾಮಾನ್ಯರು ಎಂದು ಕೊಂಡು ಬಿಡ್ತಾವೆ. ಉಳಿದ ಹುಡುಗರ ಜೊತೆ ಬೆರೆಯೋದರಿಂದ ತಾವು ಕೀಳಾಗಿ ಬಿಡ್ತೀವಿ ಅನ್ನೋ ಭಾವನೆ ಬೆಳೆಸಿಕೊಳ್ಳುತ್ತವೆ. ಇದಕ್ಕೆಲ್ಲ ಅಪ್ಪ ಅಮ್ಮನ ಕುಮ್ಮಕ್ಕು ಬೇರೆ. ನೀವು ಉಳಿದ ಮಕ್ಕಳಿಗಿಂತ ಭಿನ್ನ ಅನ್ನೋ ಭಾವನೆಯನ್ನು ಅವರು ಮಕ್ಕಳಲ್ಲಿ ಬೆಳೆಸುತ್ತಾರೆ. ಅದು ಈ ಚಿಕ್ಕ ಪುಟ್ಟ ಪಟ್ಟಣದ ಇದೀಗ ತಾನೇ ಟಿವಿ ಮೂಲಕ ಒಂದು exposure ಸಿಗ್ತಾ ಇದ್ಯಲ್ಲ ಆ ಹುಡುಗರಿಗೆ ಹೀಗ್ತಾಗ್ತಿದೆ.
ನಾನು ನಮ್ಮೂರಿನ ಸುತ್ತ ಮುತ್ತ ಒಂದು ಎಂಟ್ಹತ್ತು ಹುಡುಗರನ್ನು ನೋಡಿದ್ದೀನಿ ಈ ರೀತಿಯ ಶೋಗಳಿಗೆ ಹೋಗಿ ಬಂದವರು. ಹತ್ತನ್ನೆರಡು ವರ್ಷಕ್ಕೆ ದೊಡ್ಡವರ ರೀತಿ ಆಡೋಕೆ ಶುರು ಮಾಡಿ ಬಿಟ್ಟಿರ್ತಾವೆ. ಅವರ ವರ್ತನೆಯೇ ಬದಲಾಯಿಸಿರ್ತದೆ. ಮತ್ತೆ ಅವರವರದೇ ಒಂದು ಗುಂಪು. ಜೊತೆಗೆ ಅವರಪ್ಪ, ಅಮ್ಮಂದಿರದೂ ಒಂದು ಗುಂಪು. ಯಾವ ಷೋಗೆ ಕಾಂಪಿಟ್ ಮಾಡ್ತಾ ಇದಾನೆ/ಇದಾಳೆ. ಮೊನ್ನೆದರಲ್ಲಿ ಏನಾಯಿತು. ಆವತ್ತಿಂದು ಒಂದು ಮಾರ್ಕಲ್ಲಿ ಹೋಯ್ತು ಕಣ್ರಿ… ಇಂಥದೇ ಮಾತುಕಥೆ. ಒಟ್ಟಿನಲ್ಲಿ ಟಿವಿ ಷೋ ನಲ್ಲಿ ಗೆಲ್ಲುವುದೇ ತಮ್ಮ ಬದುಕಿನ ಗುರಿ ಅಂತ ಈ ಹುಡುಗ್ರು ಅನ್ಕಂಬಿಡಬೇಕು ಹಾಗೊಂದು ಟ್ರೆಂಡ್ ನಿರ್ಮಾಣ ಆಗಿಬಿಟ್ಟಿದೆ…

‍ಲೇಖಕರು avadhi

December 17, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮೋಹನ ಮುರುಳಿಯ ಸೆಳೆತ.

ಮೋಹನ ಮುರುಳಿಯ ಸೆಳೆತ.

ಕಳೆದು ಹೋಗುವುದು ಎಚ್.ಆರ್. ರಮೇಶ ಇರುವುದರ ಮಹತ್ವವ ತಿಳಿಯದೆ ಇಲ್ಲದುದರ, ಕಳೆದು ಹೋದುದರ ಬಗ್ಗೆನೇ ಕೊರಗುತ್ತೇವೆ. ಕಳೆದು ಹೋದುದು ನಮ್ಮ...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

೧ ಪ್ರತಿಕ್ರಿಯೆ

  1. guru

    nivu heliddu 200% nija. ashtella madi geddaru saha munde avarige vedike sigode illa. udaharanege india idol na abhijit sawanth hagu fame gurukulna roorrekha banerji, khaji ivarella yarado maduvege, functionge hadta iddare ashte. mukyavagi poshakaru makkala manasannu artha madkobeku alva???

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: