`ಹಿಂದೀ ಆತೀ ಹೈ?'

-ಅಂತರ್ಮುಖಿ
ಒಳಗೂ…ಹೊರಗೂ..
NARA4ಡಾ.ಎಚ್.ನರಸಿಂಹಯ್ಯ ಎಂಬ ಹೆಸರಿನ ಜತೆಗೆ ನಮ್ಮ ಕಣ್ಣ ಮುಂದೆ ಚಿತ್ರಗಳು ಒಂದೆರಡಲ್ಲ. ಶುಭ್ರ ಬಿಳಿ ಟೋಪಿ, ಅಂಗಿ ಮತ್ತು ಪಂಚೆ ತೊಟ್ಟ ಸರಳ ಜೀವಿ. ಹೋರಾಟದ ಹಾದಿಯಲ್ಲೇ ಜೀವನದ ಕಡೆ ದಿನದವರೆಗೆ ಹೆಜ್ಜೆ ಹಾಕಿದವರು. ವೈಚಾರಿಕತೆಯನ್ನು ಜೀವವಾಗಿಸಿಕೊಂಡಿದ್ದವರು.ಎಚ್ಚೆನ್ ಎಂದೇ ನಮ್ಮ ನಡುವೆ ಆಪ್ತರಾಗಿದ್ದ ಇವರ ಈ ಅಗಾಧ ವ್ಯಕ್ತಿತ್ವದ ಹಿಂದೆ ಮಹಾತ್ಮ ಗಾಂಧಿ ಅವರ ಪ್ರಭಾವ ಅಪಾರ. ಇದನ್ನು ಎಚ್ಚೆನ್ ತಮ್ಮ ಆತ್ಮಕಥನ `ಹೋರಾಟದ ಹಾದಿ’ ಪುಸ್ತಕದಲ್ಲಿ ದಾಖಲಿಸಿದ್ದಾರೆ.
`ನಾನು ಗಾಂಧಿಯನ್ನು ಕಂಡಿದ್ದು 1933 ಅಥವಾ 1934ನೇ ಇಸವಿ ಇರಬಹುದು. ಗಾಂಧೀಜಿ ತಮ್ಮ ಆರೋಗ್ಯ ಸುಧಾರಿಸಿಕೊಳ್ಳಲು ನಂದಿಬೆಟ್ಟಕ್ಕೆ ಬಂದಿದ್ದರು.ನಂದಿ ಬೆಟ್ಟ ನಮ್ಮೂರಿಗೆ (ಹೊಸೂರಿಗೆ) ಸುಮಾರು 22 ಮೈಲಿ ದೂರದಲ್ಲಿದೆ. ಹಿರಿಯರಾದ ಎಂ.ಎಸ್. ನಾರಾಯಣರಾಯರು, ಎಸ್.ವೆಂಕಟಾಚಲಯ್ಯ ಅವರು ಗಾಂಧೀಜಿ ಕಾಣಲು ಹೊರಟರು. ಜೊತೆಗೆ ನನ್ನನ್ನೂ ಕರೆದುಕೊಂಡು ಹೋದರು. ನಾವೆಲ್ಲಾ ಬಸ್ಸಿನಲ್ಲಿ ಹೋದೆವು. ಒಂದು ದಿನ ಸಂಜೆ ಸುಮಾರು ಐದು ಗಂಟೆಯ ಹೊತ್ತಿಗೆ ಬೆಟ್ಟದ ಮೇಲೆ ಹೋದೆವು.
ಸಂಜೆ ವಾಕಿಂಗ್ ಬರುವ ಗಾಂಧೀಜಿ ಅವರಿಗಾಗಿ ಸಾಕಷ್ಟು ಜನರು ಅವರು ಹೋಗುವ ಹಾದಿಯಲ್ಲಿ ಕಾದು ನಿಂತಿದ್ದರು.ಮೊಳಕಾಲು ತನಕ ಖಾದಿ ಪಂಚೆ ಉಟ್ಟುಕೊಂಡು, ಒಂದು ಖಾದಿ ಶಾಲು ಹೊದ್ದುಕೊಂಡು ಬಿರುಸಾಗಿ ನಡೆಯುತ್ತಾ ಬಂದರು. ಗಾಂಧೀಜಿ. ಷರಟಿಲ್ಲ. ಎಲ್ಲವೂ ಶುಭ್ರವಾದ, ಬಿಳಿಯ ಬಟ್ಟೆಗಳು. ಅವರ ಕೈಲಿ ಕೋಲು ಇತ್ತೋ ಇಲ್ಲವೋ ನೆನಪಿಲ್ಲ. ಅವರ ಸಮಕ್ಕೆ ನಡೆಯಬೇಕಾದರೆ ಅವರ ಸ್ನೇಹಿತರು ಓಡಬೇಕಾಗಿತ್ತು. ಅಷ್ಟು ಬೇಗ ಬೇಗ ನಡೆಯುತ್ತಿದ್ದರು. ಅವರನ್ನು ನೋಡಿದ ಮೇಲೆ ನಾವು ಸಂಜೆ ಅವರ ನಿವಾಸದ ಮುಂದೆ ನಡೆದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದೆವು.
ಗಾಂಧೀಜಿಯವರನ್ನು ಮೊದಲನೆಯ ಸಲ ನೋಡಿದಾಗ ನಮಗೆ ಅಂಥಹ ಪರಿಣಾಮವೇನೂ ಆಗಲಿಲ್ಲ.’ಇಷ್ಟಕ್ಕೇ ಗಾಂಧಿ ಸಂಪರ್ಕ ಕಡಿದು ಹೋಗಲಿಲ್ಲ. ಎಚ್ಚೆನ್ ಅವರಿಗೆ ಗಾಂಧಿ ಅವರನ್ನೇ ಮಾತಾಡಿಸುವ ಅವಕಾಶ ಸಿಕ್ಕಿತ್ತು. ಇದಕ್ಕೆ ಕಾರಣ, ಎಚ್ಚೆನ್ ಅವರಿಗೆ ಇದ್ದ ಹಿಂದಿ ಭಾಷೆಯ ಜ್ಞಾನ. ಇದನ್ನೂ ಅವರ ಮಾತಲ್ಲೇ ಕೇಳಿ…`1938ರಲ್ಲಿ ಬೆಂಗಳೂರಿಗೆ ಬಂದಿದ್ದಾಗ ನಾನು ಗಾಂಧೀಜಿಯವರನ್ನು ಭೇಟಿಯಾದೆ. ನ್ಯಾಷನಲ್ ಹೈಸ್ಕೂಲಿನಲ್ಲಿ ಕೆಲವು ವಿದ್ಯಾಥರ್ಿಗಳು ಕುಮಾರಕೃಪಾದಲ್ಲಿ ಅವರನ್ನು ಭೇಟಿಯಾಗಲು ಕಾದು ನಿಂತಿದ್ದೆವು.
ತಮ್ಮ ಭಾಷಣವನ್ನು ಕನ್ನಡದಲ್ಲಿ ಅನುವಾದಿಸಲು ಹಿಂದೀ ಗೊತ್ತಿರುವವರೊಬ್ಬರನ್ನು ಹುಡುಕುವಂತೆ ಅವರು ಯಾರಿಗೋ ಹೇಳಿದ್ದರು. ನನ್ನ ಮೇಷ್ಟ್ರು ನನ್ನನ್ನು ಮುಂದೆ ತಳ್ಳಿದರು, `ನಾಂ ಕ್ಯಾ ಹೈ?’ ಎಂದು ಗಾಂಧೀಜಿ ಕೇಳಿದರು. ನಾನು ನನ್ನ ಹೆಸರು ಹೇಳಿದೆ. `ಹಿಂದೀ ಆತೀ ಹೈ?’ ಎಂದು ಇನ್ನೊಂದು ಪ್ರಶ್ನೆ ಕೇಳಿದರು. `ಥೋಡಾ ಥೋಡಾ’ ಎಂದುತ್ತರಿಸಿದೆ ನಾನು. ಗಾಂಧೀಜಿ ನಕ್ಕು ಬಿಟ್ಟರು’.
ಎಚ್ಚೆನ್ ಜೀವನದಲ್ಲಿ ಇದು ಮಹತ್ವದ ಗಳಿಗೆ. ಆಗ ಅವರು ಒಂಭತ್ತನೇ ತರಗತಿ ವಿದ್ಯಾರ್ಥಿ.ಹೀಗೆ ಗಾಂಧೀಜಿ ಅವರ ಸಖ್ಯದಲ್ಲಿ, ಅವರ ವ್ಯಕ್ತಿತ್ವದಿಂದ ಪ್ರಭಾವಿತರಾದ ಎಚ್ಚೆನ್ ಚಲೇಜಾವ್ ಚಳವಳಿಯಲ್ಲಿ ಸಕ್ರಿಯರಾಗಿ ಪಾಲ್ಗೊಂಡರು. ಮೈಸೂರು, ಬೆಂಗಳೂರು, ಯರವಾಡ ಜೈಲುಗಳಲ್ಲಿ ಸೆರೆವಾಸ ಅನುಭವಿಸಿದರು. ನಂತರ ಗಾಂಧೀಜಿ ಅವರ ಚಿಂತನೆಗಳನ್ನು ತಮ್ಮ ಜೀವನದುದ್ದಕ್ಕೂ ಅನುಸರಿಸಿದರು

‍ಲೇಖಕರು avadhi

October 26, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This