ಹಿತ್ತಿಲ ಬಾಗಿಲಲ್ಲಿ ಕುಳಿತು ಅಪ್ಪನ ಹಾದಿ ಕಾಯುತ್ತಾ…

chetana2.jpg“ಭಾಮಿನಿ ಷಟ್ಪದಿ”

ಚೇತನಾ ತೀರ್ಥಹಳ್ಳಿ

“ಈ ಸಾರ್ತಿ ನೀನು ಬೆಂಗಳೂರಿಗೆ ಹೋದಾಗ ನನ್ನಪ್ಪ ಸಿಗ್ತಾರಾ ನೋಡು ಆಯ್ತಾ?” ಅಂತ ಗೋಡೆ ಮೇಲೆ ನೇತು ಹಾಕಿದ್ದ ಅವರಪ್ಪನ ಫೋಟೋ ತೋರಿಸ್ತಾ ಅಳುದನಿಯಲ್ಲಿ ಹೇಳಿದ್ಲು ನಾಗಲಕ್ಷ್ಮಿ. ಅವಳಪ್ಪ ನೀಲಿ ಬಜಾಜ್ ಸ್ಕೂಟರ್ ಸ್ಟಾರ್ಟ್ ಮಾಡ್ತಾ  ಕ್ಯಾಮೆರಾಗೆ ಪೋಸು ಕೊಟ್ಟಿದ್ದರು. ಅವಳ ತಮ್ಮ ಸಿಂಬಳಸುರುಕ ರಾಘು ಹುಟ್ಟಿದ ಆರನೇ ತಿಂಗಳಿಗೆ ಅವರು ಮನೆ ಬಿಟ್ಟು ಹೋಗಿದ್ದರು. ಬಾಣಂತನಕ್ಕೆ ಬಂದಿದ್ದ ನಾಗಲಕ್ಷ್ಮಿ ಅಮ್ಮ ಗೀತಮ್ಮ ಅಲ್ಲೇ ಉಳಿಯಬೇಕಾಯ್ತು.

ಈ ನಾಗಲಕ್ಷ್ಮಿಗಿಂತಲೂ ಅವಳ ತಾತ ಅಂಗಡಿ ಶೆಟ್ಟರು ಮತ್ತು ಅವಳಮ್ಮನ ಜೊತೆಗೇ ನನ್ನ ದೋಸ್ತಿ ಹೆಚ್ಚಿತ್ತು. ಪ್ರತಿ ಶನಿವಾರ ಗೀತಮ್ಮನೊಟ್ಟಿಗೆ ಶನಿ ದೇವಸ್ಥಾನಕ್ಕೆ ತಪ್ಪದೆ ಹೋಗಿ ಚಟ್ನಿಪುಡಿ ಹಚ್ಚಿದ ಮೂಲಂಗಿ ಹೋಳಿನ ಪ್ರಸಾದ ಮೆದ್ದು ಬರ್ತಿದ್ದೆ ನಾನು. ಅಲ್ಲಿ ಕುಂತು ಬೋರಾಗ್ತಿದ್ರೂ ಸ್ವಲ್ಪ ಖಾರ ತಿಂಡಿಗಳ ಖಯಾಲಿಯಿದ್ದ ನಂಗೆ ಅಲ್ಲಿಯ ಪ್ರಸಾದದ ಆಸೆ ಅತ್ತ ಸೆಳೀತಿತ್ತು. ಉಳಿದಂತೆ ಮುಗುಮ್ಮಾಗೇ ಇರ್ತಿದ್ದ ಗೀತಮ್ಮ ಮಾತ್ರ ದೇವಸ್ಥಾನದಿಂದ ವಾಪಸು ಬರುವ ದಾರಿಯುದ್ದಕ್ಕೂ ವಟಗುಟ್ಟುತ್ತಲೇ ಇರುತ್ತಿದ್ದರು. “ನಾಗಲಕ್ಷ್ಮಿ ಅಪ್ಪ ಬರ್ತಾರಲ್ವಾ?” ಅಂತ ಕೇಳಿ ಕೇಳಿ ಅಂತೂ ಇಂತೂ ನನ್ನಿಂದ “ಹೂಂ” ಅನ್ನಿಸಿ ನಿಸೂರಾಗುತ್ತಿದ್ದರು.

* * *

hands.jpg

“ಅಶೋಕನ ಹೆಂಡ್ತಿ ಆನೆಮರಿ!”
ಗಂಡ ಹೆಂಡತಿ ಅಂದ್ರೇನು ಅಂತಲೂ ಅರಿಯದ ಪಿಳ್ಳೆಗಳಾದ್ರೂ ಅಕ್ಕಪಕ್ಕದ ಮನೆ ಹಿರಿಯರು ಹಿಂದಿನಿಂದ ಪಿಸುಗುಟ್ಟೋದನ್ನ ಕೇಳಿ ನಾವೂ ಅದನ್ನೇ ಹೇಳಿ ಅಮ್ಮನ ಹತ್ರ ಪೆಟ್ಟು ತಿಂದ ನೆನಪು.
ಅವರು ಉಷಾ. ಆ ಉಷಾ ಆಂಟಿಯ ಧಡೂತಿ ದೇಹದ ಹಿಂದೆ ಅದಕ್ಕಿಂತ ಧಡೂತಿಯಾದ ನೋವಿತ್ತು, ಕಥೆಯಿತ್ತು. ಗಂಡನ್ನ ಕಳಕೊಂಡಿದ್ದ ಅವರನ್ನ ಅಶೋಕ್ ಅಂಕಲ್ ಮದುವೆಯಾಗಿದ್ರು. ಮೊದಲ ಗಂಡನ ಮಗ ಅಮಿತನ್ನ ತಮ್ಮ ಮಗನ್ನ ನೋಡಿಕೊಳ್ಳಬಹುದಾಗಿದ್ದಕ್ಕಿಂತಲೂ ಹೆಚ್ಚು ಮುಚ್ಚಟೆಯಿಂದ ಸಾಕುತ್ತಿದ್ದರು.
ಅಂಥಾ ಅಶೋಕ್ ಅಂಕಲ್, ಆಂಟಿ ಮಗನೊಟ್ಟಿಗೆ ತವರಿಗೆ ಹೋಗಿದ್ದಾಗ ಹಿಂದಿನ ಮನೆ ವಚ್ಚಿಯ ವಶವಾಗಿಹೋದ್ರು. ಆ ವಚ್ಚಿ  ಅದೇನು ಮೋಡಿ ಹಾಕಿದಳೋ (ಹಾಗಂತ ಅಮ್ಮ ಮತ್ತು ಪಕ್ಕದ ಮನೆಯವ್ರು ಮಾತಾಡ್ತಿದ್ದರು). ಅಂತೂ ಅವರಿಬ್ಬರೂ ಓಡಿಹೋಗಿ ಮದುವೆಯಾದ್ರು ಅನ್ನೋವರೆಗೂ ಕಥೆ ಬೆಳೀತು. ಹಾಗೆ ಹೋದ ಅಂಕಲ್ ಮತ್ತೆ ಬರಲೇ ಇಲ್ಲ. ನನ್ನ ತಮ್ಮ ಅಪ್ಪಿಗಿಂತ ಪುಟ್ಟವನಾಗಿದ್ದ ಅಮಿತನಂತೂ “ಡ್ಯಾಡಿ ಬೇಕು” ಅಂತ ಕೊರಗಿಕೊರಗಿಯೇ ಪೀಚಲಾಗಿಬಿಟ್ಟ. ನಾವೆಲ್ಲ ಆನೆಮರಿ ಅಂತ ಅಣಕಿಸ್ತಿದ್ದ ಉಷಾ ಆಂಟಿ ಅರ್ಧಕ್ಕರ್ಧ ಇಳಿದುಹೋಗ್ಬಿಟ್ಟಿದ್ದರು. ಮನಸ್ಸು ಭಾರವಾಗಿಸ್ಕೊಂಡು ಮೈ ಹಗುರಾಗಿಸ್ಕೊಳ್ತಿದ್ದರು.
ಅಮಿತ ಆಗೀಗ ಅಪ್ಪಿ ಹತ್ತಿರ ಕಣ್ಣೊರೆಸಿಕೊಳ್ತಲೇ “ಡ್ಯಾಡಿ ಬರ್ತಾರೆ ಅಲ್ವೇನೋ? ಬಂದೇ ಬರ್ತಾರೆ” ಅಂತ ಮುಸುಗರೆಯುತ್ತಿದ್ದ.

* * *

“ಮಾರ್ಕ್ಸ್ ಕಾರ್ಡಿಗೆ ತಾಯಿ ಸೈನ್ ಯಾಕೆ ಹಾಕಿಸಿದ್ದೀ? ತಂದೆಯ ಸೈನ್ ಹಾಕಿಸಿ ತರಲಿಕ್ಕೆ ಹೇಳಿದ್ದು ನಾನು” ಟೀಚರ್ ಗದರ್ತಿದ್ದರೆ, ಸಂಧ್ಯಾಳ ಬಟ್ಟಲುಗಣ್ಣು ತುಂಬಿ ತುಳುಕುತ್ತಿತ್ತು. ಅವಳಪ್ಪ, ಹೆಂಡತಿಗೆ ಪ್ರಮೋಷನ್ ಮೇಲೆ ಪ್ರಮೋಷನ್ ಸಿಕ್ಕಿದ್ದೇ ನೆವ ಮಾಡ್ಕೊಂಡು ತನ್ನ ನಾಮರ್ದತನವನ್ನೆಲ್ಲ ಕಾರಿಕೊಂಡು, ಅವಳನ್ನ ಝಾಡಿಸಿ ಮನೆ ಬಿಟ್ಟು ಹೋಗಿದ್ದರು. ಅವಳಮ್ಮ ಗಟ್ಟಿಗಿತ್ತಿ. ಹಾಗೆ ಹೋದವರ ಕೈಕಾಲು ಹಿಡಿಯದೆ ಡೈವೋರ್ಸ್ ಗೀಚಿ ಎಸೆದಿದ್ದರು. ಮಕ್ಕಳಿಗೆ ಏನೂ ಕೊರತೆಯಾಗದ ಹಾಗೆ ಸಾಕುತ್ತಿದ್ದರು. ಆದರೆ ಸಂಧ್ಯಾ ಮಾತ್ರ ಮಕ್ಕಳನ್ನ ಶಾಲೆಯಿಂದ ಕರೆದುಕೊಂಡು ಹೋಗಲಿಕ್ಕೆ ಸ್ಕೂಟರ್ ನಲ್ಲಿ ಬರ್ತಿದ್ದ ಅಪ್ಪಂದಿರನ್ನ ನೋಡಿ, “ನಂಗೂ ಅಪ್ಪ ಬೇಕು” ಅಂತ ಮುಖ ಮುಚ್ಚಿಕೊಳ್ತಿದ್ದಳು. ಆಗೆಲ್ಲ, ಗಂಭೀರ ಮುಖ ಮಾಡಿಕೊಳ್ತಿದ್ದ ನಾನು, “ನೀನು ಉಗುರು ಕಚ್ಚೋದು ಬಿಟ್ರೆ, ಎಲ್ಲ ಸರಿ ಹೋಗತ್ತೆ. ನೀ ಉಗುರು ಕಚ್ಚಿ ಮನೇಲಿ ಹಾಕಿದ್ದಕ್ಕೇ ಅವರಿಗೆ ಜಗಳವಾಗಿದ್ದು” ಅಂತೇನೇನೋ ಹೇಳಿಬಿಟ್ಟಿದ್ದೆ. ಪಾಪ, ಅವಳು ನಾನು ಶಿವಮೊಗ್ಗ ಬಿಟ್ಟು ಬರೋವರೆಗೂ “ನಾನು ನಾಳೆಯಿಂದ ಉಗುರು ಕಚ್ಚೋಲ್ಲ ಕಣೇ” ಅಂತ ಪ್ರತಿಜ್ಞೆ ಮಾಡುತ್ತಲೇ ಉಳಿದಳು!

* * *

ಈ ಎಲ್ಲ ಕಥೆಗಳಿಗೂ ಈಗ ಹದಿನೆಂಟಿಪ್ಪತ್ತು ವರ್ಷ.

ನಾಗಲಕ್ಷ್ಮಿಯ ಅಳುದನಿ, ಅಮಿತನ ಕನವರಿಕೆ, ಸಂಧ್ಯಾಳ ತುಳುಕುವ ಬಟ್ಟಲುಗಣ್ಣುಗಳು ಇನ್ನೂ ನನ್ನ ಕಾಡ್ತಲೇ ಇರುತ್ತವೆ. ಆದರೆ ಅವರೆಲ್ಲರಿಗಿಂತ ಅವರ ಅಮ್ಮಂದಿರ ಸಂಕಟಕ್ಕೆ ನನ್ನ ಕರುಳು ಹಿಂಡುತ್ತೆ. ಧೋಕಾ ಮಾಡಿದ ಗಂಡಂದಿರನ್ನ ಹಂಬಲಿಸೋ ಮಕ್ಕಳನ್ನ ಸಂಭಾಳಿಸಿದ ಅವರ ಹಾದಿಯಲ್ಲೀಗ ನಾನಿದ್ದೇನೆ.

ಯಾವ ಸಬೂಬೂ ಇಲ್ಲದೆ ಹೊರಟುಹೋದ ಅಂವ ಮರಳದಂತೆ ನಾನೇನೋ ಕದಹಾಕಿ ಬೆನ್ನು ತಿರುಗಿಸಿದ್ದೇನೆ. ಆದರೆ? ಆದರೀಗ ನನ್ನ ಎಂಟರ ಮಗಳು ಹಿತ್ತಲ ಬಾಗಿಲಲ್ಲಿ ಕುಂತು ಅಪ್ಪನ ಹಾದಿ ಕಾಯ್ತಿದ್ದಾಳೆ. ತನ್ನ ಎಳೆ ಗೆಳತಿಯರಿಗೆ ದುಂಬಾಲು ಬೀಳುತ್ತ… ಹೊರಬಹುದಾದ ಹರಕೆಗಳ ಲಿಸ್ಟು ತಡಕುತ್ತ… ಉಗುರು ಕಚ್ಚೋದನ್ನ ಬಿಡಲಿಕ್ಕೆ ಶತಪ್ರಯತ್ನ ಮಾಡುತ್ತ… ಅಪ್ಪನ ಫೋಟೋ ಗೆಳತಿಯರಿಗೆ ತೋರಿಸಿ, “ಅಪ್ಪನ್ನ ಹುಡುಕಿ ಕೊಡಿರೇ” ಅನ್ನುತ್ತ… ನನ್ನ ಹೊಟ್ಟೆ ಉರಿಸುತ್ತಿದ್ದಾಳೆ.

‍ಲೇಖಕರು avadhi

December 27, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚೇತನಾ ಎಂಬ ‘ಗಾನಾ ಜೋಯ್ಸ್

ಚೇತನಾ ಎಂಬ ‘ಗಾನಾ ಜೋಯ್ಸ್

' ಕನಸುಗಾರ ವೆಂಕಟ್ರಮಣ ಗೌಡರು 'ಹಂಗಾಮ' ಆರಂಭಿಸಿದಾಗ ಮೂಡಿ ಬಂದ ವಿಶಿಷ್ಟ ಲೇಖಕಿ ಗಾನಾ ಜೋಯ್ಸ್. ಈಗ ಈಕೆ ಚೇತನಾ ತೀರ್ಥಹಳ್ಳಿ. ಈಗಾಗಲೇ...

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ ಈಗ ಅದೆಲ್ಲ ಮಜಾ ಅನಿಸತ್ತೆ. ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ...

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

-ನಟರಾಜ್ ಹುಳಿಯಾರ್ 'ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ'ನ ಸ್ಥಿತಿಯನ್ನು ನಿಷ್ಠುರ ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: