ಹಿ೦ದೆ ಯಾವ ಜನ್ಮದಲ್ಲೋ…

ಮಿಂಚಿಹೋದ ಕಾಲಗಳು ಅದೆಷ್ಟೋ…….. 

ಜಯಶ್ರೀ ಕಾಸರವಳ್ಳಿ

ಚೆನ್ನೈಯಲ್ಲಿ ಎಲ್ಲೋ ಕಳೆದುಹೋಗಿದ್ದ ನನಗೆ ಬೆಂಗಳೂರಿಗೆ ಬಂದ ಪ್ರಾರಂಭದ ದಿನಗಳಲ್ಲಿ ಏನೋ ಉತ್ಸಾಹ, ಸಂಭ್ರಮ, ಸಡಗರ. ನನ್ನ ಜನಗಳ ನಡುವೆ ಮತ್ತೆ ನಾನು ಬಂದು ಸೇರಿಕೊಂಡೆನೆಂದು ಮನಸ್ಸಿಗೆ ಇನ್ನಿಲ್ಲದಷ್ಟು ನಿರಾಳವೆನ್ನಿಸಿದ ಕ್ಷಣವದು. ಕಳೆದುಹೋದ ಬದುಕು ಸಿಕ್ಕೇಬಿಟ್ಟಿತೇನೋ ಎಂಬ ಮಹತ್ವಾಕಾಂಕ್ಷೆಯಲ್ಲಿ ನನ್ನ ನೆಲದ ಮೇಲೆ ಕಾಲಿಟ್ಟ ನೆನಪು ನನ್ನ ಮನದಲ್ಲಿನ್ನೂ ಹಸಿರಾಗಿಯೇ ಉಳಿದಿದೆ. ಆದರೆ ಭ್ರಮೆಯೆಂಬುದು ಹೇಗೆ ನಮ್ಮ ಸುತ್ತ ಸುತ್ತುತಿರುತ್ತದೆ ಎಂಬುದನ್ನು ಈಗ ನೆನೆದರೂ ನನಗೆ ಆಶ್ಚರ್ಯ. ನಮ್ಮ ಊರು, ಪರ ಊರು, ಆ ಊರು, ಈ ಊರು ಇವ್ಯಾವುದೂ ಪ್ರಮುಖವಾಗದೇ ಮತ್ಯಾವುದಕ್ಕೋ ಮನಸ್ಸು ಹಾತೊರೆಯುತ್ತಿರುತ್ತೆ. ಅಲ್ಲಿ ಇರದ ನೆಮ್ಮದಿ ಇಲ್ಲಿರಬಹುದೆಂದು, ಇಲ್ಲಿ ಇರದ ನೆಮ್ಮದಿ ಅಲ್ಲಿ ಇತ್ತೆಂದು ಭಾವಿಸಿ, ಭ್ರಮಿಸುತ್ತಾ ಬದುಕು ದೂಡುತ್ತಿರುತ್ತೇವೆ. ಹಾಗೆ ದೂಡುವುದರೊಂದಿಗೆ ಸರಿದುಹೋಗುವ ಕಾಲದೊಳಗೆಲ್ಲೋ ನಾವು ನಿರಾಯಾಸವಾಗಿ ಕಳೆದುಹೋಗುತ್ತಿರುತ್ತೇವೆ. ಕಾಲಗರ್ಭದಲ್ಲಿ ಸಿಲುಕಿಕೊಂಡ ನಮಗೆ ಎಚ್ಚೆತ್ತುಕೊಳ್ಳುವ ವ್ಯವಧಾನವಿಲ್ಲವೋ, ಎಚ್ಚೆತ್ತುಕೊಳ್ಳುವ ಅನಿವಾರ್ಯ ಸ್ಥಿತಿಯ ಅರಿವೂ ಮೂಡದಷ್ಟು ನಮ್ಮನ್ನ ನಾವು ಕಳೆದುಕೊಂಡು ಸಾಗಿದ್ದೇವೋ ಇಂದಿಗೂ ನನಗೆ ತಿಳಿಯದ ವಿಷಯ. ಕೆಲಸದ ನಿಮಿತ್ತ ಊರು ಬಿಟ್ಟು ಹೊರ ರಾಜ್ಯ, ಹೊರ ದೇಶ ಸುತ್ತುವವರ ಬಗ್ಗೆ ಅನೇಕರಲ್ಲಿ ತಪ್ಪು ಅಭಿಪ್ರಾಯವಿದೆ. ಯಾವುದೋ ಅವಕಾಶಗಳನ್ನು ಹುಡುಕಿಕೊಂಡು ಎಲ್ಲೆಲ್ಲೋ ಸಾಗುತ್ತಿರುವ ಅಂಥವರ ಬದುಕು ಬಹಳ ಸುಂದರವಾಗಿರಬಹುದೆನ್ನುವ ಭ್ರಮೆ. ಅದಕ್ಕೆ ಭೂಷಣವಾಗಿ ಇಣುಕುವ ಹಲವಾರು ಆಪ್ತೇಷ್ಟರ ಮಾನವಸಹಜ ಅಸೂಯೆ ನಮ್ಮನ್ನ ಉಳಿದವರಿಂದ ಬೇರೆಯಾಗಿಸಿ, ಪ್ರತ್ಯೇಕಿಸುವುದಲ್ಲದೇ ಅದುವರೆಗೂ ನಮ್ಮ ಅನುಭವಕ್ಕೆ ಬಂದಿರದ ಒಂದು ಕಸಿವಿಸಿ ನಮ್ಮ ಅಂತರಂಗಕ್ಕೆ ಅಂಟಿಕೊಂಡು ಮತ್ತಷ್ಟು ನಾವು ಕಳೆದುಹೋಗುವಂತೆ ನಮ್ಮ ಸುತ್ತ ಹೊಸ ಪರಿಸರ ನಿರ್ಮಿತಗೊಂಡುಬಿಡುತ್ತೆ. ಅದಕ್ಕೆ ಕಳಸವಿಟ್ಟಂತೆ ಹೊರಗಿದ್ದು ಬಂದವರೂ ಸ್ವರ್ಗಕ್ಕೇ ದಾಳಿ ಇಟ್ಟು ಬಂದವರಂತೆ ವರ್ತಿಸುತ್ತಿರುತ್ತಾರೆ. ಆದರೆ ಬಹಿರಂಗಕ್ಕೆ ಕಂಡದ್ದೇ ವಾಸ್ತವ ಆಗಿರುವುದಿಲ್ಲ. ಆಡು ಭಾಷೆ, ನಿಕಟ ಸಂಪರ್ಕಗಳೊಂದೂ ಇರದ ಪರ ಊರು, ಪರ ದೇಶಗಳಲ್ಲಿ ಕಾರ್ಯನಿಮಿತ್ತ ಅನಿವಾರ್ಯವಾಗಿ ವರುಷಗಟ್ಟಲೆ ಇದ್ದರೂ ನಮ್ಮಲ್ಲಿರುವಷ್ಟು ಒಂಟಿತನ, ಪರಕೀಯ ಪ್ರಜ್ಞೆ ಬೇರೆ ಯಾರಲ್ಲೂ ಇರಲು ಸಾದ್ಯವಿಲ್ಲದಷ್ಟು ನಮ್ಮನ್ನು ಅವು ಪೀಡಿಸುತ್ತಿರುತ್ತೆ. ಯಾವುದೋ ರಾಜ್ಯದಲ್ಲಿ, ಮತ್ತಾವುದೋ ದೇಶದಲ್ಲಿ ಅಲೆಮಾರಿಗಳಂತೆ ನಾವು ಅಲೆಯುತ್ತಿರುತ್ತೇವೆ. ನಮ್ಮ ಅಂತರಂಗ ತನ್ನ ದ್ವನಿಗಾಗಿ ಹಂಬಲಿಸುತಿರುತ್ತೆ. ನಮ್ಮವರನ್ನು ಹುಡುಕುವ ನೆಪದಲ್ಲಿ ಕಂಡ ಕಂಡ ಕನ್ನಡ ಸಂಘಗಳಿಗೆಲ್ಲಾ ಸುತ್ತಿ ಬರುತ್ತಾ, ನಮ್ಮತನವನ್ನು ಉಳಿಸಿಕೊಳ್ಳುವ ಶತಪ್ರಯತ್ನದಲ್ಲಿ, ಸಾಹಿತ್ಯವಿರಲಿ ಕನ್ನಡದ ಗಂಧವೂ ಸುಳಿಯದ ಜನರ ನಡುವೆ ಜಗ್ಗಾಡುತ್ತಾ, ನಡೆಸುವ ಕಳಪೆ ಕಾರ್ಯಕ್ರಮವನ್ನೇ ಘನಂದಾರಿ ಕಾರ್ಯವೆಂದು ನಂಬಿ, ಬೀಗುತ್ತಾ ಬದುಕು ತೇಯುತ್ತಿರುವಾಗಲೇ ಮತ್ತಷ್ಟು ಬದುಕನ್ನ ಕಳೆದುಕೊಳ್ಳುತ್ತಿರುತ್ತೇವೆ; ನಮ್ಮತನವನ್ನು ಉಳಿಸಿಕೊಳ್ಳುವ ಮಾರ್ಗ ತಿಳಿಯದೇ ಅರ್ಥವಾಗದ ಕಸಿವಿಸಿಯಲ್ಲಿ ಚಡಪಡಿಸುತ್ತಾ ಇನ್ನೂ ಒಂದಷ್ಟು ನಾವು ಕಳೆದುಹೋಗುತ್ತಿರುತ್ತೇವೆ. ನೆನಪಾಗುವ ನನ್ನೂರು, ಬಾಲ್ಯದ ಯಾವಯಾವುದೋ ಘಟನೆಗಳು ಎಂದಿನಂತೆ ಮನಕ್ಕೆ ಮುದಕೊಡದೇ ಕೈಗೆಟಕದ ಕನಸಿನಂತೆ ಪೀಡಿಸಿ ನಮ್ಮ ಸುತ್ತ ಗಿರಿಕಿ ಹೊಡೆಯುವುದನ್ನು ಅಸಹಾಯಕರಾಗಿ ಕಾಣುತ್ತಾ ಹಾಗೆಲ್ಲಾ ಬದುಕುವ ನಮಗೆ ನಾವು ಏನನ್ನ, ಯಾರನ್ನ, ಎಷ್ಟನ್ನ ಕಳೆದುಕೊಳ್ಳುತ್ತಿರುತ್ತೇವೆ ಎಂಬುದು ಲೆಕ್ಕಕ್ಕೆ ಸಿಗದಿದ್ದರೂ, ಕಳೆದುಕೊಂಡಂತಹ ಹಪಾಹಪಿ ನಮ್ಮ ಬದುಕಿನ ಉದ್ದಕ್ಕೂ ಅನುಭವಿಸುತ್ತಿರುತ್ತೇವೆ…. ವಯಸ್ಸಾದ ಹಾಗೆ ಯಾವುದೋ ಹಳೆಯದರ ನೆನಪು. ಅದಕ್ಕಾಗಿ ಹಂಬಲಿಸಿ ಗತಿಸಿದ ಯಾವಯಾವುದಕ್ಕೊ ಹಾತೊರೆಯುತ್ತಾ ಮತ್ತೆ ಮತ್ತೆ ಹಳೆಯದನ್ನೇ ಹುಡುಕುತ್ತಿರುತ್ತೇವೆ; ಹಳತಾಗಿ ಎಂದೋ ಗುಜರಿ ಸೇರಿದ್ದ ನೆನಪುಗಳನ್ನ ಮತ್ತೆ ಹೊಸದಾಗಿ ಉದ್ದೀಪಿಸಿ ಆಹ್ವಾನಿಸುತ್ತಾ, ಒಣಗಿದ ಗಾಯವನ್ನು ಮತ್ತೆ ಕೆರೆದುಕೊಂಡು ಅದು ಕೀವು ಸುರಿದು ವ್ರಣವಾಗುವುದನ್ನೇ ಮತ್ತೊಮ್ಮೆ ಸಂತೋಷದಿಂದ ಅನುಭಸುವವರಂತೆ ಏನೇನನ್ನೋ ಕೆದಕಿ ಕೆದಕಿ ಹಳೆಯದ್ದನ್ನೇ ಪುನಃ ಪುನಃ ತಡಕಾಡುತ್ತಿರುತ್ತೇವೆ. ಬೆಂಗಳೂರಿಗೆ ಬಂದ ನಂತರ ಜಿಛಯಲ್ಲಿ ನನ್ನ ಶಿವಮೊಗ್ಗದ ಗೆಳೆಯರ್ಯಾರಾದರೂ ಸಿಗಬಹುದೆಂದು ಜಾಲಾಡಿದ ನೆನಪು… ಮೈಸೂರಿನ ಯಾರಾದರೂ ನನ್ನ ಕ್ಲಾಸ್ಮೇಟ್ ಅಲ್ಲಿರಬಹುದೆಂದು ತಿಳಿದ, ನೆನಪಿನಲ್ಲಿದ್ದ ಹೆಸರನ್ನೆಲ್ಲಾ ತಡಕಾಡಿ ತಲೆ ಕೆಡಿಸಿಕೊಂಡಿದ್ದು ನೆನಪು… ಯಾರು ಯಾವುದೂ ಸಿಗದಾಗ ನಿರಾಶೆಗೊಂಡ ನೆನಪು… ಯಾಕೆ ಗೊತ್ತಿಲ್ಲ, ಎಲ್ಲೋ, ಯಾವುದೋ ಅಪೂರ್ಣಗೊಂಡ ಬದುಕಿನ ತುಣುಕು ಅಲ್ಲಿರಬಹುದೆಂದು ಪುಟಗಳನ್ನು ಮಗುಚಿದ ಹಾಗೆ ಬದುಕನ್ನ ಮಗುಚಿ ಮತ್ತೆ ಆರಂಭದಿಂದ ಓದುವ ಪ್ರಯತ್ನ ನನ್ನದಿರಬೇಕು. ಎಂದೋ ಯಾರೊಡನೆಯೋ ಕ್ಷುಲ್ಲಕ ವಿಷಯಕ್ಕೆ ಆಡಿದ್ದ ಜಗಳ, ಯಾರದ್ದೋ ಶ್ರೀಮಂತ ಮಕ್ಕಳ ಸುಖ ಕಂಡು, ಅಂತಹ ಶ್ರೀಮಂತ ಮನೆಗಳಲ್ಲಿ ಹುಟ್ಟಿಯೂ ನಾವು ಅನುಭವಿಸಲಾಗದ ಆ ಸುಖಕ್ಕಾಗಿ ಕರುಬಿದ್ದು, ನಮ್ಮ ಸಣ್ಣತನ, ಹಳ್ಳಿಯ ಮಕ್ಕಳ ಸಹಜ ಕೀಳರಿಮೆ _ ಇಂತಹ ಅದೆಷ್ಟೋ ಮೈಲಿಗಲ್ಲನ್ನ ದಾಟಿ, ಇಂದು ನಾವು ಬೆಳೆದು ಬಂದೆವೆಲ್ಲಾ ಎಂಬ ವಿಸ್ಮಯ ಒಂದು ಕಡೆ; ಹಾಗೆ ದಾಟುವಾಗ ನಮ್ಮ ನೆನಪಿನಲ್ಲಿ ಶಾಶ್ವತವಾಗಿ ಉಳಿವ ಅದೆಷ್ಟೋ ತಂಪೆರೆದ ಆಪ್ತ ಮನಗಳನ್ನ ಕಳೆದುಕೊಳ್ಳುತ್ತಾ ಬಂದೆವಲ್ಲಾ ಎಂಬುದು ಎಂದೂ ಅಳಿಯದ ಗಾಯದಂತೆ ಒಳಗೇ ಶಾಶ್ವತವಾಗಿ ಉಳಿದು ಪೀಡಿಸುತ್ತಿರುವುದು ಇನ್ನೊಂದು ಕಡೆ… ಕಾಲೇಜ್ ದಿನಗಳಲ್ಲಿ ಅದೆಷ್ಟು ಹೃದಯಗಳಿಗೆ ಲಗ್ಗೆ ಇಟ್ಟೆವೋ, ಯಾವ ಯಾವ ಹೃದಯಕ್ಕೆ ಎಷ್ಟೆಷ್ಟು ದಂಗೆಗಳಾದವೋ, ನಮ್ಮ ಪವಿತ್ರ ಹೃದಯವನ್ನು ಕದ್ದವರೆಷ್ಟೋ… .ಕದ್ದಿರಬಹುುದೆಂದು ಭ್ರಮಿಸಿದೆಷ್ಟೋ… ಕಡೆಗೆ ಅಪ್ಪ, ಅಮ್ಮ ತೋರಿದ ಗಂಡಿಗೆ ಚೂಪಾಗಿ ಕೊರಳು ಬಾಗಿ, ಬಾಗಿದ ಕೊರಳು ಇನ್ನೂ ಎತ್ತಲಾಗದೇ ನರಳಿದವರು ಎಷ್ಟು, ನರಳುತ್ತಿರುವುದು ಎಷ್ಟು… ಎಲ್ಲವೂ ನಾವೇ. ನಾನು ಉಳಿದ್ದಿದ್ದೇನೆಯೇ ಎಂಬ ಪ್ರಶ್ನೆಯೇ ಅಪ್ರಸ್ತುತ ಆಗ ಮತ್ತು ಈಗ… ಹೀಗೆ ನೆನಪುಗಳೂ ವಾಸ್ತವಗಳೂ ಕಲಸುಮೇಲೋಗರವಾಗಿ, ಕನಸುಗಳೂ ಭ್ರಮೆಗಳೂ ಕಳೆದುಕೊಂಡ ಒಂದು ಬಟಾಬಯಲೆಂಬ ಬದುಕಿನ ಜಾಲದಲ್ಲಿ ಸಿಕ್ಕಿಕೊಂಡಾಗ – ನಮ್ಮದು ಎಂಬ ಜಂಜಾಟದಲ್ಲಿ ಮತ್ತುಳಿದದ್ದೆಲ್ಲಾ ಅಮುಖ್ಯವಾಗುತ್ತಾ ಹೋಗುತ್ತಿದ್ದಂತೆ ಒಂದು ಕಾಲದ ಆಪ್ತ ಗೆಳೆಯರೂ ಅವರ ನೆನಪೂ ಯಾವುದೂ ಅವಶ್ಯವಾದ ಸಂಗಾತಿಯಾಗದೇ ಮತ್ತೆ ನಮ್ಮ ಸುತ್ತುವರಿದ ಜನರ ನಡುವೆ ಬದುಕುತ್ತಲೇ ನಾವು ಕಳೆದುಹೋಗುತ್ತಿರುತ್ತೇವೆ… ಬದುಕಿನ ಹಲವು ನಿಮಿತ್ತಗಳಿಂದ ನಮ್ಮವರಿಂದ, ನಮ್ಮೂರಿನಿಂದ, ಅಲ್ಲಿಂದ, ಇಲ್ಲಿಂದ, ಎಲ್ಲೆಲ್ಲಿಂದಲೋ ಗುಳೆ ಎದ್ದು ಹೊರಟವರ ಸ್ಥಿತಿಯಂತೂ ಅಧೋಗತಿ. ಇಲ್ಲಿಗೆ ಸಲ್ಲಬೇಕಾದವರೆ, ಅಲ್ಲಿಗೆ ಸಲ್ಲಬೇಕಾದವರೆ ತೀರ್ಮಾನಿಸಲಾಗದ ಸಂದ್ಧಿಗ್ಧ ಪರಿಸ್ಥಿತಿಯಲ್ಲಿ ಡೋಲಾಯಮಾನವಾಗುವ ಮನಸ್ಸು, ಒಂದು ಇತ್ಯರ್ಥವನ್ನು ತಲುಪದೇ ಸದಾ ಪರಿತಪಿಸುತ್ತಿರುತ್ತದೆ. ಹಾಗೆ ಪರಿತಪಿಸುವ ಕ್ರಿಯೆಯಲ್ಲೇ ನಾವೇನೆಂದು ನಮಗೇ ಅರ್ಥವಾಗದೇ ಹರಿದು ಚಿಂದಿಯಾಗಿ, ಮತ್ತೆ ಸೋರಿ ನನ್ನೊಳಗಿನ ನನ್ನನ್ನೇ ಕಳೆದುಕೊಳ್ಳುತ್ತಿರುತ್ತೇವೆ…. ಹೀಗೆ ಕಳೆದುಕೊಳ್ಳುವ ನಿರಂತರ ಕ್ರಿಯೆಯಲ್ಲಿ ಕಡೆಯದಾಗಿ ನಾನು ನಾನಾಗಿ ಎಷ್ಟು ಉಳಿದಿರುತ್ತೇನೆ ಸ್ವತಃ ನನಗೇ ತಿಳಿದಿರುವುದಿಲ್ಲ…. ಅದೇಕೋ ಕಳೆದುಕೊಳ್ಳುವ ಪ್ರಕ್ರಿಯೆಯಲ್ಲಿ ನಿರಾಯಾಸವಾಗಿ ಕಳೆದುಹೋಗುವ ಅದೆಷ್ಟೋ ಅಮೂಲ್ಯ ವಸ್ತುಗಳ, ಜೀವಗಳ ತಪಾಸಣೆಯಾಗಲಿ, ಸಂಗ್ರಹವಾಗಲಿ ಗಮನಕ್ಕೆ ಬರುವುದೇ ಇಲ್ಲ. ಕೆ. ಎಸ್. ಪೂರ್ಣಿಮಾ ಇನ್ನಿಲ್ಲಾ- ಎಂದು ಅಕ್ಷತಾ ಬರೆದಿದ್ದಾರೆ…. ಕಾಲೇಜ್ ದಿನಗಳ ನಂತರ ಪೂರ್ಣಿಮಾಳನ್ನು ಮತ್ತೆ ನಾನು ಭೇಟಿಯಾಗಿದ್ದು ಇಪ್ಪತ್ತು ವರುಷದ ನಂತರ – ಹೆಗ್ಗೋಡಿನಲ್ಲಿ. ಸದಾ ಲವಲವಿಕೆಯ, ಹುಣ್ಣಿಮೆ ಚಂದಿರದಂತೆ ತಂಪು ಸೌಂದರ್ಯದ ಪೂರ್ಣಿಮಾಳ ಪ್ರತಿಮೆ ನನ್ನ ಮನದಲ್ಲಿ ಹಾಗೇ ಅಚ್ಚಳಿಯದೇ ಉಳಿದಿತ್ತು. ಎಷ್ಟು ವರುಷಗಳ ಅಂತರ…. ನಾ ನೋಡುವ ಹೊತ್ತಿಗೆ ಕಾಯಿಲೆಯಿಂದ ಆಗಲೇ ಜರ್ಜರಿತಳಾಗಿದ್ದರೂ ತುಟಿಯಂಚಿನ ಅವಳ ಆ ಸುಂದರ ನಗು ಇನ್ನೂ ಮಾಸಿರಲಿಲ್ಲ. ಹೆಚ್ಚು ಮಾತಿಗೆ ಸಮಯಾವಕಾಶ ಸಿಕ್ಕಿರಲಿಲ್ಲ. ಆನಂತರ ಬೆಂಗಳೂರಿಗೆ ಬಂದಾಗ ಅಶೋಕ್ರೊಡನೆ ಮನೆಗೆ ಬಂದಳು. ಇಪ್ಪತ್ತು ವರುಷದ ಅಂತರದಲ್ಲಿ ಯಾರೂ ತುಂಬಲಾರದನ್ನ ವಿಧಿಯಾಗಲೇ ತುಂಬುತ್ತಾ ಬಂದಿತ್ತು. ಅವರನ್ನು ಊಟಕ್ಕೆ ಇರಿಸಿಕೊಳ್ಳಬೇಕೆಂದು ನನ್ನಾಸೆ. ಅಷ್ಟು ವರುಷಗಳ ಅಂತರ ಮತ್ತೆ ಅಡ್ಡಿ ಬಂತು. ಪೂರ್ಣಿಮಾಳ ಖಾಯಿಲೆಯ ಸಂಪೂರ್ಣ ಪರಿಸ್ಥಿತಿಯ ಪರಿಚಯ ನನಗಿರಲಿಲ್ಲವಾದ್ದರಿಂದ ಹೆಚ್ಚು ಒತ್ತಾಯಿಸುವ ಸ್ಥಿತಿ ಅದಲ್ಲ. ವರುಷಗಳ ಗ್ಯಾಪ್ ಆ ಸ್ವಾತಂತ್ರವನ್ನೂ ನನ್ನಿಂದ ಕಸಿದುಕೊಂಡಿತ್ತು. ಆದರೆ ಮಾತು ಉರುಳದ ವಿಷಾದ ಮೌನದಲ್ಲಿ ಉಳಿದಿರುವುದೀಗ – ಅದು ಬಿಡಿಸಲಾಗದೇ ಅಪೂರ್ಣಗೊಳಿಸಿದ ಚಿತ್ರ ಮಾತ್ರ……. ಮತ್ತು ಅಪೂರ್ಣಗೊಂಡ ಅದೆಷ್ಟು ಚಿತ್ರಗಳಿವೆ ಇಲ್ಲಿ ಎಂಬ ನೆನಪೂ ಕೂಡ… ಕಳೆದುಕೊಳ್ಳುತ್ತಲೇ ಸಾಗುವ ಬದುಕಿನ ಅನಿವಾರ್ಯ ಸ್ಥಿತಿಯಲ್ಲೂ ತೀವ್ರ ಹಂಬಲದಿಂದ ಮತ್ತೆ ಮತ್ತೆ ಬದುಕಿಗೆ ನಮ್ಮನ್ನು ನಾವೇ ತೊಡಗಿಸಿಕೊಳ್ಳುತ್ತಾ ಕಳೆದುಕೊಳ್ಳುತ್ತಲೇ ಬದುಕಿನೊಳಗೆ ಒಂದಾಗುವ ಈ ನಿರಂತರ ಪರಿಯ ಕ್ರಮವೇ ಎಂತಹ ವಿಚಿತ್ರ…]]>

‍ಲೇಖಕರು G

July 31, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

5 ಪ್ರತಿಕ್ರಿಯೆಗಳು

  1. D.RAVI VARMA

    ಮೇಡಂ, ಪೂರ್ಣಿಮಾ ನೀನಾಸಂ ಸಂಸ್ಕೃತಿ ಶಿಭಿರದ ಸಮಯದಲ್ಲಿ ಅವರ ಒಳಗೊಳ್ಳುವಿಕೆ. ಆತಿತ್ಯ . ಎಲ್ಲರೊಡನೆ ಸಂವಾದಿಸುವ ಮುಕ್ತ, ಹಾಗು ಅಸ್ತೆ ಮುಗ್ಧ ಮನಸು ಎಲ್ಲವು ಮತ್ತೆ ಮತ್ತೆ ಕಾಡುತ್ತಿವೆ, ನಿಮ್ಮ ಬರಹಗಳು ನನ್ನನ್ನು ಕ್ಷಣಕಾಲ ಮುಖನನ್ನಗಿಸಿದವು .ಪೂರ್ಣಿಮ ಇಲ್ಲದ ಅಶೋಕ್ ಅಬ್ಬ ನೆನಸಿಕೊಂಡರೆ ಭಯ ಆಗುತ್ತೆ .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: