-ಡಾ. ಎಸ್ ಎಂ ನಟರಾಜು, ಸೀಗೆಕೋಟೆ.
ಯುಗಾದಿ ಹಬ್ಬವಾದ ಹದಿನೈದು ದಿನಕ್ಕೆ ನಮ್ಮೂರ ಮಾರಿ ಹಬ್ಬ ನಡೆಯುತ್ತದೆ. ನಮ್ಮೂರ ಮಾರಿ ಹಬ್ಬದ ಮೊದಲ ಪೂಜೆ ಸಲ್ಲುವುದು ಪಟ್ಟಾಲದಮ್ಮ ಎಂಬ ದೇವತೆಗೆ. ಪಟ್ಟಾಲದಮ್ಮನ ಗುಡಿ ನಮ್ಮೂರಿನಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ಕಾಳೇಗೌಡನದೊಡ್ಡಿ ಎಂಬ ಊರಿನಲ್ಲಿದೆ. ದೇವರನು ಹೊತ್ತ ಪೂಜಾರಿ ಬೆಂಕಿಯ ಮೇಲೆ ನಡೆಯುವುದನ್ನು ನಮ್ಮ ಕಡೆ ಕೊಂಡ ಎನ್ನುತ್ತಾರೆ. ಪಟ್ಟಾಲದಮ್ಮನ ಕೊಂಡ ಸೋಮವಾರ ಮುಂಜಾನೆಯೇ ನಡೆಯುತ್ತಾದ್ದರಿಂದ ಸಂಜೆಯೇ ಎಳವಾರದಲ್ಲಿ ತಂದಿತ್ತ ಸೌದೆ ತುಂಡುಗಳು ಕೊಂಡದಲ್ಲಿ ಕೆಂಡವಾಗಲು ರೆಡಿಯಾಗಿತ್ತವೆ. ಮುಂಜಾನೆ ಕೊಂಡವಿರುವ ಕಾರಣ ನಮ್ಮ ಕೇರಿಯ ಹೆಣ್ಣು ಮಕ್ಕಳು ಹೊತ್ತ ತಂಬಿಟ್ಟಿನಾರತಿಗಳು ರಾತ್ರಿ ಎರಡು ಮೂರು ಗಂಟೆಯ ಸಮಯದಲ್ಲಿ ಕಾಳೇಗೌಡನ ದೊಡ್ಡಿಯ ತಲುಪುತ್ತವೆ. ತಂಬಿಟ್ಟಿನಾರತಿಗಳನು ಹೊತ್ತ ಹೆಂಗಸರು ಆ ಸಮಯದಲ್ಲಿ ಪಟ್ಟಾಲದಮ್ಮನ ಗುಡಿಯ ಹತ್ತಿರ ಸೇರುವಂತಿಲ್ಲ. ಕಾಳೇಗೌಡನ ದೊಡ್ಡಿಯ ಊರ ಹೊರಗೆ ಕುಳಿತುಕೊಳ್ಳಬೇಕಾಗುತ್ತದೆ. ಮುಂಜಾನೆ ನಾಲ್ಕಾಗುತ್ತಿದ್ದಂತೆ ಪಕ್ಕದಲ್ಲೇ ಹರಿವ ಸಣ್ಣ ಹೊಳೆಯವರೆಗೂ ದೇವರನ್ನು ಕರೆದುಕೊಂಡು ಹೋಗಿ ಅಲ್ಲಿ ಪೂಜೆ ಪುರಸ್ಕಾರಗಳನ್ನು ಮುಗಿಸಿ ಬರುವುದಕ್ಕೆ ದೇವರನು ಹೊಳೆ ಮೆಟ್ಟಿಸುವುದು ಎನ್ನುತ್ತಾರೆ. ದೇವರನು ಹೊಳೆ ಮೆಟ್ಟಿಸಿಕೊಂಡು ಬರುತ್ತಿದ್ದಂತೆ ದೇವರನು ಹೊತ್ತ ಪೂಜಾರಿಗೆ ಮೈ ಮೇಲೆ ದೇವರು ಬಂದಿರುತ್ತದೆ. ಆಗ ದೇವರು ಕಾಳೇಗೌಡನ ದೊಡ್ಡಿಯ ಕೇರಿಗಳಲ್ಲಿ ಪ್ರತಿ ಮನೆಯ ಮುಂದೆ ಪೂಜೆ ಮುಗಿಸಿಕೊಂಡು ಬರುವಷ್ಟರಲ್ಲಿ ಬೆಳಗಾಗಿರುತ್ತದೆ. ದೇವರ ಹಿಂದೆ ಆ ಊರಿನ ತಂಬಿಟ್ಟಿನಾರತಿಗಳೂ ಸಹ ಬಂದಿರುತ್ತವೆ. ದೇವರು ಪಟ್ಟಾಲದಮ್ಮನ ಗುಡಿ ಸೇರುತ್ತಿದ್ದಂತೆ ಊರ ಹೊರಗೆ ಕುಳಿತಿರುವ ನಮ್ಮ ಕೇರಿಯ ತಂಬಿಟ್ಟಿನಾರತಿಗಳೂ ಸಹ ದೇವರ ಗುಡಿಯ ಪಕ್ಕ ಸೇರುತ್ತವೆ. ಆಮೇಲೆ ಕೊಂಡ ಮುಗಿದು ದೇವರಿಗೆ ಕೈ ಮುಗಿದು, ಪೂಜೆ ಪುರಸ್ಕಾರ ಮುಗಿಸಿ ಜನಗಳು ತಮ್ಮ ತಮ್ಮ ಮನೆಗಳಿಗೆ ಹೊರಡುತ್ತಾರೆ. ಇದು ತುಂಬಾ ವರ್ಷಗಳಿಂದ ನಡೆದು ಬಂದಿರುವ ಸಂಪ್ರದಾಯ.
ನನ್ನ ವೈಯಕ್ತಿಕ ಕಾರಣಗಳಿಗಾಗಿ ಎಷ್ಟೋ ವರ್ಷಗಳಿಂದ ನಮ್ಮೂರ ಹಬ್ಬವನು ನೋಡಲಾಗದಿದ್ದವನು ಈ ಬಾರಿ ನಮ್ಮೂರಿನ ಹಬ್ಬಕ್ಕೆ ಹೋಗಿದ್ದೆ. ಪಟ್ಟಾಲದಮ್ಮನ ಕೊಂಡ ನೋಡಲಾಗದೆ ಇದ್ದರೂ ಮಾರಮ್ಮನ ಕೊಂಡವನ್ನು ನೋಡುವ ಭಾಗ್ಯ ನನಗೆ ದೊರೆತ್ತಿತ್ತು. ಸಂಜೆ ಎಳವಾರವಾಗಿ ಮುಂಜಾನೆಯೇ ದೇವರನು ಹೊಳೆ ಮೆಟ್ಟಿಸಿ ಕರೆ ತಂದಾದ ಮೇಲೆ ನಮ್ಮ ಕೇರಿಗಳನ್ನು ಬಿಟ್ಟು ಊರಿನ ಎಲ್ಲಾ ಕೇರಿಗಳಲ್ಲಿ ತಮಟೆ ನಗಾರಿಗಳ ಸದ್ದಿನೊಂದಿಗೆ ಮಾರಮ್ಮ ದೇವರ ಮೆರವಣಿಗೆ ನಡೆದಿತ್ತು. ಪ್ರತಿ ಮನೆಯ ಮುಂದೆ ದೇವರ ಪೂಜೆಯಾದ ನಂತರ ತಂಬಿಟ್ಟಿನಾರತಿಗಳು ದೇವರ ಹಿಂದೆ ಜೊತೆಯಾಗುತ್ತಿದ್ದವು. ಮಾರಮ್ಮನ ಗುಡಿ ಇರುವ ಮಧ್ಯ ಬೀದಿಗೆ ದೇವರು ನುಗ್ಗುವ ಸಮಯಕ್ಕೆ ನಮ್ಮ ಕೇರಿಯ ಕಡೆಯಿಂದ ವಿಗ್ರಹವೊಂದರ ಹಿಂದೆ ಬಂದ ತಂಬಿಟ್ಟಿನಾರತಿಗಳು ಮಾರಮ್ಮ ದೇವತೆಯ ಮೆರವಣಿಗೆಯ ಜೊತೆ ಬಂದಿದ್ದ ತಂಬಿಟ್ಟಿನಾರತಿಗಳ ಹಿಂದೆ ಸೇರಿಕೊಳ್ಳುತ್ತಿದ್ದವು. ನನಗೆ ಅಚ್ಚರಿಯಾಯಿತು. ಹಿಂದೆಂದೂ ದೇವರ ವಿಗ್ರಹಗಳನ್ನೇ ನೋಡದ ನಮ್ಮ ಕೇರಿಯ ಅಣ್ಣನಂತವನ ತಲೆಯ ಮೇಲೆ ದೇವರ ವಿಗ್ರಹವೊಂದಿತ್ತು. ಅದಕ್ಕೆ ಕಳಸಗಳಿಂದ ಅಲಂಕಾರವಿತ್ತು. ಆ ವಿಗ್ರಹದ ಮತ್ತೊಂದು ಬದಿಯ ಬಟ್ಟೆಯ ಮೇಲೆ ಪಟ್ಟಾಲದಮ್ಮ ದೇವತೆ ಸೀಗೆಕೋಟೆ ಎಂದು ಬರೆದಿತ್ತು. ಮಾರಮ್ಮನ ಕೊಂಡವಾದ ಮೇಲೆ ಪಟ್ಟಾಲದಮ್ಮ ದೇವರ ವಿಗ್ರಹದ ಜೊತೆ ನಮ್ಮ ಕೇರಿಯ ತಂಬಿಟ್ಟಿನಾರತಿಗಳು ಒಂದೆಡೆ ಸೇರಿರುವುದ ನೋಡಿದ್ದೆ. ಮೊದಲ ಬಾರಿಗೆ ದೇವರನು ತಲೆ ಮೇಲೆ ಹೊತ್ತಿದ್ದ ಅಣ್ಣನಂತಹವನ ಮುಖದಲ್ಲಿರುವ ಒಂದು ಸಣ್ಣ ಭಯಮಿಶ್ರಿತ ಭಕ್ತಿ ಎದ್ದು ಕಾಣುತ್ತಿತ್ತು. ಅವನು ಒಂದು ಕೇರಿಯ ಜನರ ಪ್ರತಿನಿಧಿಯಂತೆ ದೇವರನು ಹೊತ್ತು ನಿಂತಿದ್ದ. ಅವನ ಜೊತೆ ನಮ್ಮ ಕೇರಿಯ ತಂಬಿಟ್ಟಿನಾರತಿಗಳ ಗುಂಪುಗಳು ಸಹ ಅವನ ಪ್ರಾತಿನಿದ್ಯತೆಯನ್ನು ಬೆಂಬಲಿಸಿ ಜೊತೆ ನಿಂತಿದ್ದವು. ಹುಡುಗರು ಮತ್ತು ಗಂಡಸರೆಲ್ಲಾ ಒಂದೆಡೆ ದೇವರಿಗೆ ಆಡು ಮೇಕೆಗಳನ್ನು ಬಲಿ ಕೊಡುವುದನ್ನು ನೋಡುವುದರಲ್ಲಿ ತಲ್ಲೀನರಾಗಿದ್ದರು.
ಮಾರಮ್ಮನ ಕೊಂಡ ಮುಗಿದಾದ ಮೇಲೆ ನಮ್ಮ ಬೀದಿಯಲ್ಲೇ ನಡೆಯುವ ಚಾಮುಂಡೇಶ್ವರಿ ದೇವಿಯ ಪೂಜೆ ಮಾಡಲು ಚಪ್ಪರವನ್ನೂ ಹಾಕಲಾಗದ ಸೋಮಾರಿತನಗಳ ನಡುವೆಯೇ ಚಾಮುಂಡೇಶ್ವರಿ ಪೂಜೆ ಶುರುವಾಗಿತ್ತು. ತಂಬಿಟ್ಟಿನಾರತಿಗಳ ಇಟ್ಟು ಜನರೆಲ್ಲಾ ಒಂದೆಡೆ ಸೇರಿದಾಗ ಇದ್ದಕ್ಕಿಂತೆ ಮಧ್ಯ ವಯಸ್ಸಿನ ಅಕ್ಕನಂತಿರುವ ಹೆಂಗಸಿನ ಮೇಲೆ ದೇವರು ಬಂದಿತ್ತು. “ಅದೇನ್ ಹೇಳವ್ವ?” ಎಂದು ಜನ ಆ ದೇವರನ್ನು ಪ್ರಶ್ನಿಸುತ್ತಿರುವಾಗಲೇ ಮತ್ತೊಂದು ಕಾಲೇಜು ಹುಡುಗಿಯ ಮೇಲೂ ದೇವರು ಬಂದಿತ್ತು. ಇತ್ತ ಮೇಕೆ ತಲೆ ಮೇಲೆ ತೀರ್ಥ ಹಾಕಿದ ಮೇಲೆ ಅದು ತಲೆ ಒದರಿದರೆ ಮಾತ್ರ ದೇವರಿಗೆ ಅದನ್ನು ಬಲಿಕೊಡಲು ಸಾಧ್ಯ. ಮೇಕೆಯ ತಲೆ ಮೇಲೆ ಬೇವಿಯ ಸೊಪ್ಪಿನ ಜೊತೆ ತೀರ್ಥ ಹಾಕಿ ಪೂಜೆ ಮಾಡಿದರೆ ಅದು ತಲೆ ಒದರದೆ ಸತಾಯಿಸುತ್ತಿತ್ತು. ಗಂಡಸರ ಮತ್ತು ಹುಡುಗರ ಗುಂಪೆಲ್ಲಾ ಆ ಮೇಕೆಯ ತಲೆ ಒದರಿಸಲು ಹರ ಸಾಹಸ ಮಾಡುತ್ತಿದ್ದರು. ಅದರ ಕಾಲು ಹಿಡಿದುಕೊಂಡವರು ಕಾಲು ಬಿಟ್ಟರೆ ಅದು ತಲೆ ಒದರುತ್ತೆ ಎಂದು ಕಾಲು ಬಿಟ್ಟಾಗ ಆ ಮೇಕೆ ಜನಜಂಗುಳಿಯಿಂದ ಹೊರ ಹೋಗಲಾರದೆ ಜನಗಳ ಕೂಗಿಗೆ ತಲೆ ಒದರಲು ಮೇಕೆ ಸತಾಯಿಸುತ್ತಲೇ ಇತ್ತು. ಆ ಜನರ ಕೇಕೆ ಕಿರುಚಾಟಗಳ ಮಧ್ಯೆ ದೇವರು ಮೈ ಮೇಲೆ ಬಂದಿದ್ದವರು ಏನು ಹೇಳಿದರು ಎಂದು ಯಾರಿಗೂ ಕೇಳಿಸಲೇ ಇಲ್ಲ. ಕೊನೆಗೂ ಮೇಕೆ ತಲೆ ಒದರಿ ಬಲಿಗೆ ತಯಾರಾಗಿ ನಿಂತ ಮೇಲೆ ತನಗೆ ಚಪ್ಪರ ಯಾಕೆ ಹಾಕಿಲ್ಲ ಎಂದು ದೇವರು ಕೇಳಿದಾಗ ತಪ್ಪಾಯ್ತು ಎಂದು ಪೂಜಾರಿಯಂತಿದ್ದ ಅಣ್ಣನಂತವನು ಒಪ್ಪಿಕೊಂಡಾದ ಮೇಲೆ ದೇವರು ಶಾಂತವಾದಂತೆ ಕಂಡಾಗ ಮೇಕೆಯನ್ನು ಬಲಿ ಕೊಟ್ಟು ಚಾಮುಂಡೇಶ್ವರಿಯ ಪೂಜೆಯೂ ಮುಗಿದಿತ್ತು. ಊರಿನಲ್ಲಿದ್ದ ಒಂದು ದಿನದಲ್ಲಿ ಹಬ್ಬದ ದಿನವಷ್ಟೇ ಕರೆಂಟ್ ಇರದ ಊರ ಬೀದಿಗಳು ಮತ್ತು ನೀರು ಬರದ ನಲ್ಲಿಗಳ ದರುಶನದ ಭಾಗ್ಯ ನನಗಾಗಿತ್ತು. ಹಬ್ಬಕ್ಕೆ ನೀರು ಬೇಕೇ ಬೇಕಾದ ಕಾರಣ ನಾನು ಹಿಂದೆಂದೂ ಕಾಣದ ನೀರು ತುಂಬಿದ ಟ್ಯಾಂಕರ್ ಗಳು ನಮ್ಮೂರಿನ ಮನೆಗಳಿಗೆ ನೀರಿನ ಸರಬರಾಜು ಮಾಡುತ್ತಿದ್ದವು. ಟ್ಯಾಂಕರ್ ನಲ್ಲಿ ನೀರು ಮಾರುವ ಜನಗಳಿಗೆ ಒಳ್ಳೆ ಬ್ಯುಸಿನೆಸ್ ಎಂದುಕೊಂಡಿದ್ದೆ. ಅಂದು ಸಂಜೆ ಯಾವುದೋ ಕೆಲಸದ ನಿಮಿತ್ತ ಸಂಜೆ ಬೆಂಗಳೂರಿಗೆ ವಾಪಾಸ್ಸಾಗಿದ್ದೆ.
ಒಂದಷ್ಟು ದಿನಗಳಾದ ಮೇಲೆ ನನಗೆ ತುಂಬಾ ಪರಿಚಯವಿರುವ ತಂಗಿಯಂತಿರೋ ಆ ಕಾಲೇಜು ಹುಡುಗಿಯ ಮೇಲೆ ದೇವರು ಯಾಕೆ ಬಂದಿತ್ತು ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಂಡಿದ್ದೆ. ನಮ್ಮ ಮನೆಯವರ ಜೊತೆ ಮತ್ತು ನನ್ನ ಕೆಲವು ಕಿರಿಯ ಗೆಳೆಯರ ಜೊತೆ ಮಾತನಾಡುವಾಗ ನಮ್ಮೂರಿನ ಹುಡುಗನೊಬ್ಬನ ಮೇಲೆ ಪಟ್ಟಾಲದಮ್ಮನ ದೇವರು ಬರುತ್ತದೆ ಎಂದು ಕೇಳಿ ತಿಳಿದುಕೊಂಡೆ. ನನ್ನ ಗೆಳೆಯನೊಬ್ಬನ ಅಣ್ಣನ ಮಗ ಆ ಹುಡುಗ. ವಯಸ್ಸು ಹದಿನಾರಷ್ಟೇ ಇರಬಹುದು. ನೋಡಲು ಬೆಳ್ಳಗಿದ್ದು ಕೆಂಚಾದ ಕೂದಲು ಹೊಂದಿದ್ದಾನೆ. ಚಿಕ್ಕವನಾಗಿದ್ದಾಗ ತುಂಟನಾಗಿದ್ದ ಹುಡುಗನಾತ. ಆತನ ಮೈಮೇಲೆ ದೇವರು ಬರುತ್ತದೆ ಎಂದಾಗ ನಾನು ನಂಬಲು ಆಗಲೇ ಇಲ್ಲ. ಅವನಿಗೆ ದೇವರೊಮ್ಮೆ ಮೈ ಮೇಲೆ ಬಂದಿದ್ದರಿಂದ ನಮ್ಮ ಕೇರಿಗೆ ಪಟ್ಟಾಲದಮ್ಮ ದೇವರ ವಿಗ್ರಹದ ಆಗಮನವಾಗಲು ಕಾರಣವಾಯಿತು ಎಂದು ಕೇಳಿದಾಗ ನಾನು ಅಚ್ಚರಿಗೊಂಡಿದ್ದೆ. ನೀವು ನಂಬುತ್ತೀರೋ ಬಿಡುತ್ತೀರೋ ನಮ್ಮ ಕೇರಿಗೆ ಎಂದು ನಮ್ಮೂರಿನಲ್ಲಿ ದೇವಸ್ಥಾನವಲ್ಲ ಒಂದು ಪುಟ್ಟ ಅರಳೀಕಟ್ಟೆಯೂ ಸಹ ಇಲ್ಲ. ದೇವರೆಂದರೆ ದೂರದಿಂದ ನೋಡಿದ ಅನುಭವವಿದೆಯೇ ಹೊರತು ದೇವರ ವಿಗ್ರಹಳನ್ನು ಹತ್ತಿರದಿಂದ ನೋಡಿ ನಮಸ್ಕರಿಸಿದ ಜನ ನಮ್ಮ ಕೇರಿಯಲ್ಲಿ ಇಲ್ಲ ಎನ್ನಬಹುದು. ದೇವರುಗಳೆಂದರೆ ಒಬ್ಬರ ಆಚರಣೆಗಳನ್ನು ದೂರದಿಂದಲೇ ನೋಡಿ ಭಯ ಭಕ್ತಿ ತೋರುತ್ತಿದ್ದ ಜನಾಂಗ ಒಂದಕ್ಕೆ ಈ ಹುಡುಗ ದೇವರನು ತನ್ನ ಮೈ ಮೇಲೆ ಬರಿಸಿಕೊಂಡು ನಮ್ಮಿಚ್ಚೆಯಂತೆ ದೇವರನು ಪೂಜಿಸಿಕೊಳ್ಳಬಹುದಾದ ಸ್ವಾತಂತ್ರ್ಯವನ್ನು ತಂದುಕೊಟ್ಟನಾ ಅನಿಸುತ್ತದೆ.
ಆತನ ಮೈ ಮೇಲೆ ದೇವರು ಬಂದರೆ ಅವನು ಏನು ಹೇಳುವನೋ ಅದನ್ನು ಜನ ಚಾಚು ತಪ್ಪದೇ ಪಾಲಿಸುತ್ತಾರೆ. ನಮ್ಮ ಕೇರಿಗೆ ಮೊದಲ ಬಾರಿಗೆ ವಿಗ್ರಹ ಬಂದಾಗ 45 ದಿನ ನಮ್ಮ ಕೇರಿಯಲ್ಲಿ ಯಾರ ಮನೆಯಲ್ಲೂ ಮಾಂಸ ಮಾಡುವಂತಿಲ್ಲ ಎಂಬ ಅವನ ಆಣತಿಯನ್ನು ಎಲ್ಲರೂ ಪಾಲಿಸಿದರಂತೆ. ಹಾಗೆ 45 ದಿನ ಮುಗಿದಾದ ಮೇಲೆ ಬಹಳ ವಿಜೃಂಭಣೆಯಿಂದ ದೇವರ ಆಗಮನವನ್ನು ನಮ್ಮ ಕೇರಿಗಳಲ್ಲಿ ಮೆರವಣಿಗೆಯ ರೀತಿ ಎರಡು ಮೂರು ದಿನ ಆಚರಿಸಿದ್ದರಂತೆ. ತುಳಿತಕ್ಕೊಳಗಾದ ಜನಾಂಗ ಎಂಬ ಹಣೆಪಟ್ಟಿಯನ್ನು ಹೊತ್ತಿರುವ ನಮ್ಮ ಕೇರಿಯ ಜನರಿಗೆ ದೇವರನು ತಮ್ಮಿಷ್ಟ ಬಂದಂತೆ ಪೂಜಿಸುವ ಅಧಿಕಾರ ತಂದುಕೊಟ್ಟ ಆ ಹುಡುಗನಿಗೆ ಒಂದು ನಮನ ಸಲ್ಲಿಸಬೇಕು ಎನಿಸುತ್ತದೆ. ಆತನ ಮೈ ಮೇಲೆ ದೇವರು ಬರುವುದು ನಿಜವೋ ಸುಳ್ಳೋ ಅದು ಜನರ ನಂಬಿಕೆಗೆ ಬಿಟ್ಟಿದ್ದು. ಮೊನ್ನೆ ಮೊನ್ನೆ ಆತನ ಮೇಲೆ ದೇವರು ಬಂದು ಏನನ್ನೋ ಕೇಳಿತಂತೆ. ತನಗೆ ನಮ್ಮ ಊರಿನಲ್ಲೇ ಒಂದು ಗುಡಿ ಬೇಕು. ವರುಷ ವರುಷ ನಡೆಯುವ ಕೊಂಡ ನಮ್ಮ ಊರಿನಲ್ಲಿ ತನ್ನ ಗುಡಿಯ ಮುಂದೆಯೇ ನಡೆಯಬೇಕು ಎಂದೆಲ್ಲಾ ಬೇಡಿಕೆಯ ಮುಂದಿಟ್ಟಿರುವ ದೇವರ ಮಾತಿಗೆ ಬೆಲೆ ಕೊಟ್ಟು ದೇವರ ಆಸೆ ಪೂರೈಸಲು ಜನ ದೇವರ ಗುಡಿ ಕಟ್ಟಲು ಚಂದ ಎತ್ತಲು ಶುರು ಮಾಡುವುದರಲ್ಲಿ ಸಂಶಯವಿಲ್ಲ. ತಲೆ ತಲಾಂತರಗಳಿಂದ ನಡೆದು ಬಂದಿರುವ ಸಂಪ್ರದಾಯಗಳಲ್ಲಿ ಹಠಾತ್ ಬದಲಾವಣೆ ತರುವುದು ಸುಲಭದ ಕೆಲಸವಲ್ಲ. ಮೈ ಮೇಲೆ ದೇವರು ಬಂದು ಈ ರೀತಿಯ ಸಾಮಾಜಿಕ ಕ್ರಾಂತಿಗಳು ಇಂತಹ ವಿದ್ಯಾವಂತ ಹುಡುಗನ ದೆಶೆಯಿಂದ ಆಗುತ್ತಿವೆ ಎಂದರೆ ಇಂತಹ ಬದಲಾವಣೆಗಳು ಸಮಾಜದ ಒಳಿತಿಗೆ ಅವಶ್ಯವಿದೆ ಎನಿಸಿತು.
]]>
ಬರವಣಿಗೆ ಎಂಬ ಭಾವಲಹರಿ
ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...
0 ಪ್ರತಿಕ್ರಿಯೆಗಳು