ಹುಚ್ಚುಕುದುರೆಯ ಬೆನ್ನನೇರಿ…

 door_number1421.jpg 

ಡೋರ್ ನಂ “142”

ಬಹುರೂಪಿ

“ಆರ್ಕಟ್”ನಲ್ಲಿ ಮೂಗು ತೂರಿಸಿ ಕುಳಿತಿದ್ದೆ. ಯಾಕೋ ನೂರೆಂಟು ಸೈಟ್ ಗಳನ್ನು ಪ್ರತಿ ದಿನಾ ಜಾಲಾಡಿದರೂ ಈ ಆರ್ಕಟ್ ಎನ್ನುವುದು ನನ್ನ ದೈನಂದಿನ ಭಾಗವಾಗಿರಲಿಲ್ಲ. ಎರಡನೇ ಲಿಂಕ್ ಒತ್ತುವ ವೇಳೆಗೆ ಆರ್ಕಟ್ ನ ವಿಶ್ವರೂಪ ಗೋಚರಿಸಲು ಆರಂಭಿಸಿತು. ಇಲ್ಲಿ ಬೆತ್ತಲೆಯೇ ಸರಕು. ಆದರೂ ಯಾಕೋ ಇರಲಾರದು ಎಂದುಕೊಂಡು ಮತ್ತೆ ಮತ್ತೆ ಆರ್ಕಟನ್ನು ವಿವಿಧ ಹೆದ್ದಾರಿಗಳ ಮೂಲಕ ತಡಕಾಡಿದೆ. ಸೋಷಿಯಲ್ ಸೈಟ್ ಅಂತ ಕರೆದುಕೊಂಡ, ಅತ್ಯಂತ ವೇಗವಾಗಿ ಜನಪ್ರಿಯತೆ ಗಳಿಸುತ್ತಿರುವ ಆರ್ಕಟ್ ನ ಹಣೆಬರಹ ಇಷ್ಟೇ ಅನಿಸಿಬಿಟ್ಟಿತು.

ಎಲ್ಲಾ ಮಕ್ಕಳಲ್ಲಿ ಆರ್ಕಟ್ ನ ಅಕೌಂಟ್ ಇದೆ. ಪ್ರತಿದಿನಾ ಅದನ್ನ ಎಡತಾಕಿ ಬರ್ತಾರೆ. ಏನೆಲ್ಲಾ ಆಗಬಹುದು ಅಂದ್ಕೊಂಡೆ. ಎರಡನೇ ಬಾರಿ ಬಟನ್ ಒತ್ತುವ ವೇಳೆಗೆ ವಿಕೃತ ಕಾಮದ ರಾಶಿರಾಶಿಯೇ ನಮ್ಮೆದುರು ಬಂದು ಬೀಳುವುದಾದರೆ, ಮಕ್ಕಳು ಇದನ್ನೇ ಬೇಡ ಎಂದರೂ ಮುಟ್ಟುತ್ತಿರಬೇಕಲ್ಲಾ ಅನಿಸಿತು.

ಒಂದೆರಡು ತಿಂಗಳ ಹಿಂದೆ ಇರ್ಬೇಕು. ನನಗೆ ಗೂಗಲ್ ನವರು ಹೊಸದಾಗಿ ಬಿಟ್ಟಿರುವ “ಪಿಕಾಸಾ” ಪ್ರೋಗ್ರಾಂ ತುಂಬಾ ಇಷ್ಟ. ಒಂದೇ ಕ್ಷಣದಲ್ಲಿ ಕಂಪ್ಯೂಟರ್ ಒಳಹೊರಗನ್ನೆಲ್ಲ ಶೋಧಿಸಿ, ಎಷ್ಟು ಕೋಣೆಗಳಿವೆಯೋ ಅಷ್ಟಕ್ಕೂ ಬಾಗಿಲು ತಟ್ಟಿ ಒಳಗಿರುವ ಎಲ್ಲಾ ಫೋಟೋ, ವಿಡಿಯೋಗಳನ್ನು ಎಳೆದುಕೊಂಡು ಬಂದು ಕೂರಿಸುತ್ತದೆ. ಇದನ್ನ ಮೇಲ್ ಮಾಡುವುದು, ಆಲ್ಬಂನಲ್ಲಿ ಹಾಕಿ ಹಂಚಿಕೊಳ್ಳುವುದೂ ತುಂಬಾ ತುಂಬಾ ಈಸಿ. ಹಾಗಾಗಿಯೇ ಎಲ್ಲರಿಗೂ ನನ್ನ ಪಿಕಾಸಾ ಪಾಠ ನಡೆಯುತ್ತಿತ್ತು. ಒಂದು ದಿನ ನೆಂಟರ ಮನೆಗೆ ಹೋದೆ. ಮ್ಯಾಜಿಕ್ ತೋರಿಸ್ತೀನಿ ನೋಡಿ ಅನ್ನೋ ಹಾಗೆ ಪೋಸ್ ಕೊಟ್ಟು ಪಿಕಾಸಾನ ಡೌನ್ ಲೋಡ್ ಮಾಡಿದೆ. “ಅಬ್ರಕಬ್ರಕಡಾ…” ಅಂತ ಮಣಮಣಿಸಿ ಕಂಪ್ಯೂಟರ್ ನಲ್ಲಿರೋದನ್ನೆಲ್ಲಾ ಎಲ್ಲಾನೂ ಎಳ್ಕೊಂಡು ಬಂತು. ಒಂದೊಂದನ್ನೇ ತೋರಿಸ್ತಾ ಹೋದೆ. ಸಾಕಷ್ಟು ಬ್ಲೂ ಫಿಲಂ ತುಣುಕುಗಳು ಬಂದು ಬಿತ್ತು. ಅದು ಬಂದು ಬೀಳ್ತಾ ಇದ್ದ ಹಾಗೆ ಗುಂಪಿನಲ್ಲಿ ಕೂತೂ ನೋಡ್ತಾ ಇದ್ದವರ ಪೈಕಿ ಒಬ್ಬ ಮೈನಸ್ ಆಗಿ ಹೋಗಿದ್ದ.

huchchu2.jpg

ದೇಹದಲ್ಲಿ ಏನೋ ಬದಲಾವಣೆ ಆಗುತ್ತೆ. ಎಲ್ಲೆಲ್ಲೋ ಕೂದಲು ಮೂಡೋದಿಕ್ಕೆ ಆರಂಭವಾಗುತ್ತೆ. ರಾತ್ರಿ ಇದ್ದಕ್ಕಿದ್ದ ಹಾಗೆ ಮೈ ಜುಂ ಅಂದುಬಿಡುತ್ತೆ. ಕನಸಲ್ಲ ಅದು ಓಹ್! ಸ್ವರ್ಗಕ್ಕೆ ಎಳಕೊಂಡು ಹೋಗೋ ಐರಾವತದ ಥರಾ ಅನಿಸುತ್ತೆ ಕನಸಲ್ಲೇ ಏನೇನೋ ಆಗಿಹೋಗುತ್ತೆ. ಗೊತ್ತಿಲ್ಲ ಏನೋ ಬೇಕು ಏನೋ ಬೇಕು ಅನಿಸ್ತಾ ಇರುತ್ತೆ. ಏನು ಬೇಕು ಅನ್ನೋದು ಗೊತ್ತು ಮಾಡಿಕೊಳ್ಳೋದು ಒಳ್ಳೇದೆ. ಆದ್ರೆ ಯಾವಾಗ ಬೇಕು ಅನ್ನೋದು ತಿಳ್ಕೊಳ್ಳೋದು ಒಳ್ಳೇದೆ ಅಲ್ವಾ?

ಒಂದಿನ ಹಿಂಗಾಗೋಯ್ತು. ಅಣ್ಣ ಊರಿಂದೆಲ್ಲಾದ್ರೂ ಬರ್ತಾರೆ ಅಂದ್ರೆ ಒಂದು ಮಣ ಪುಸ್ತಕ ನಮಗೆ ಬರುತ್ತೆ ಅಂತ ಗ್ಯಾರಂಟಿ. ಅಣ್ಣ ಬರೋದನ್ನೇ ಕಣ್ಣಲ್ಲಿ ಎಣ್ಣೆ ಬಿಟ್ಕೊಂಡು ಕಾಯ್ತಾ ಇದ್ವಿ. ಯಾವಾಗ್ಲೂ ಅಣ್ಣ ಬಂದ ತಕ್ಷಣ ಪುಸ್ತಕಗಳನ್ನ ಬ್ಯಾಗ್ ನಿಂದ ಎತ್ತಿ ಕೊಡ್ತಾ ಇದ್ದ. ಅಣ್ಣ ಈ ಬಾರಿ ಕೈಯಲ್ಲಿರೋ ಪುಸ್ತಕಾನೇ ಮುಟ್ಟಕ್ಕೆ ಬಿಡ್ತಾ ಇಲ್ಲ. ಯಾಕೆ ಯಾಕೆ ಅನ್ಕೊಂಡು ಸುಮ್ಮನಿದ್ ಬಿಟ್ಟಿದ್ರೆ ಆಗಿರೋದು. ಆಮೇಲೆ ಡಿಟೆಕ್ಟಿವ್ ಥರಾ ಬ್ಯಾಗೆಲ್ಲಾ ರಾತ್ರಿ ತಡಕಾಡಿದೆ. ಷಾಕ್ ಅವತ್ತೂ ಆಗಿತ್ತು. ಒಂದು ಮಣ ಪುಸ್ತಕ. ನಾನು ಅವತ್ತಿನವರೆಗೂ ಪುಸ್ತಕ ಅಂದ್ರೆ ನಾಲೆಡ್ಜ್ ಬ್ಯಾಂಕ್ ಅಂತಾನೇ ಅನ್ಕೊಂಡಿದ್ದೆ. ಆದರೆ ಆ ಚಿತ್ರಗಳು, ಆ ಬರಹಗಳು ಶಿವನೇ! ಪುಸ್ತಕ ಅಂದ್ರೆ ಹಿಂಗೂ ಇರುತ್ತಾ ಅನ್ಸಿತ್ತು.

ಏನ್ಮಾಡೋದು ಪಾಪ! ಅಣ್ಣ ಸಹ ಆಗ ತಾನೆ ಟೀನೇಜ್ ಗೆ ಕಾಲಿಟ್ಟಿದ್ದು. ಟೀನೇಜ್ ಗೆ ಏನೋ ಬೇಕು ಅನ್ಸುತ್ತಲ್ಲ ಇಂಥ ಟೈಮ್ ಗೆ ಕಾಯ್ತಾ ಇರುತ್ತೆ ಈ ಥರಾ ಪುಸ್ತಕಗಳು. ಹೊಂಚು ಹಾಕ್ಕೊಂಡಿದ್ದು ಅಟ್ಯಾಕ್ ಮಾಡುತ್ತೆ. ಅಟ್ಯಾಕ್ ಮಾಡುತ್ತೆ ಅಂತ ಯಾಕನ್ಸುತ್ತೆ ಅಂದ್ರೆ ಆ ಅಟ್ಯಾಕ್ ನಿಂದ ಇನ್ನೂ ಒದ್ದಾಡ್ತಾ ಇದೀನಿ. ನೂರೆಂಟು ದಾರಿ ಹುಡುಕಿದೆ, ಬಿಡಿಸ್ಕೊಳ್ಳೋದು ಹೇಗೆ ಅಂತ. ನೂರೆಂಟು ಭ್ರಮೆ ಹುಟ್ಟಿಸುತ್ತೆ. ಸೆಕ್ಸ್ ಅಂದ್ರೆ ಮನಸ್ಸು ಗರಿಗೆದರಿ ಹಾರಬೇಕು. ಒಂದು ಮಿಲನ ಅನ್ನೋದು ನೂರು ಅರ್ಥ ಹುಟ್ಟಿಸ್ಬೇಕು. ಅದು ಮಿಲನ ಮಹೋತ್ಸವ ಆಗಿರಬೇಕು. ಆದ್ರೆ ಈ ಪುಸ್ತಕ ಮನಸ್ಸನ್ನ ಒಂದು ಕೊಳಕು ಹಂಡೆ ಮಾಡಿಡುತ್ತೆ. ಸೆಕ್ಸ್ ಅನ್ನೋದು ಮಿಲನ ಮಾತ್ರ ಅಲ್ಲ, ಅದರಾಚೆ ಇದೆ. ಅದು ಏನೋ ಸಿಗ್ತಾ ಇಲ್ಲ. ಸಿಗ್ತಾ  ಇಲ್ಲ ಅನ್ನೋ ತಹತಹ ಹುಟ್ಟಿಸುತ್ತೆ. ಒಂದು ದೇಹ ಅಂದ್ರೆ ಅಟ್ಯಾಕ್ ಗೆ ಮಾತ್ರ ಇರೋದು ಅನ್ನೋ ಹಾಗೆ ಮಾಡ್ಬಿಡುತ್ತೆ. ವಿಪರೀತ ಭ್ರಮೆ ಹುಟ್ಟಿಸುತ್ತೆ.

ಒಂದು ಪೆಪ್ಪರ್ ಮೆಂಟ್ ಹೊಸದಾಗಿ ಮಾರ್ಕೆಟ್ ಗೆ ಬಿಟ್ಟಿದ್ರು. ಅದರ ಹೆಸರು ಯಸ್! ಪೋಲೋ. ಪೋಲೋ ಪೆಪ್ಪರ್ ಮೆಂಟ್ ತಿನ್ರಪ್ಪಾ ಅಂತ ಅಡ್ವರ್ಟೈಸ್ ಮಾಡಿದ್ರೆ ಆಗಿರ್ತಿತ್ತು. ಆದ್ರೆ ಅವ್ರು ಅದನ್ನ “ಮಿಂಟ್ ವಿತ್ ಎ ಹೋಲ್” ಅಂತ ಡಂಗೂರ ಹೊಡೆದ್ರು. ಎಷ್ಟು ವಿಪರೀತ ಅರ್ಥ ಕೊಟ್ರೂ ಪೆಪ್ಪರ್ ಮೆಂಟ್ ತಿನ್ನೋದೂ ಕೂಡ ಮುಖರತಿ ಆಗೋಯ್ತು. ಟೀನೇಜ್ ಅನ್ನೋದು ಸುಮ್ನೇನಾ? ನರನಾಡಿ ಎಲ್ಲಾದ್ರಲ್ಲೂ ಮಿಂಚು, ಮಿಂಚು ಹರಿಸುತ್ತೆ. ಕನ್ನಂಬಾಡಿ ಕಟ್ಟೇನಲ್ಲಿ ನೀರು ಬೀಳ್ತಾ ಇದ್ದಾಗ ಅಬ್ಬಾ! ಅನಿಸುತ್ತಲ್ಲಾ ಆ ರೀತಿ ಇರುತ್ತೆ ಅನ್ಸುತ್ತೆ ನನಗೆ. ಹುಚ್ಚುಹುಚ್ಚು ಶಕ್ತಿ ಅದು. ಸರಿ ದಾರೀಲಿ ಹೋಗೋ ಥರಾ ಕಾಲುವೆ ಕಟ್ಟಿದ್ವಾ ಬಚಾವ್. ಇಲ್ಲಾಂದ್ರೆ ಸಿಕ್ಕಸಿಕ್ಕ ಕಡೆ ನುಗ್ಗುತ್ತೆ. ಎದುರಿಗೆ ಬಂದಿದ್ದನ್ನೆಲ್ಲ ಕೊಚ್ಚಿ ಬಿಸಾಕುತ್ತೆ. ಕೊನೆಗೆ ಏನಾಯ್ತಪ್ಪಾ ಅಂತ ಹುಡುಕಬೇಕು ಹಂಗೆ ಅದೂ ಹಾಗಾಗಿ ಹೋಗುತ್ತೆ.

ಇರ್ಲಿ, ನೋಡೋಣ “ಆರ್ಕಟ್”ನ ಎಷ್ಟೊಂದು ಟೀನ್ಸ್ ನೋಡ್ತಾರಲ್ವಾ. ನನ್ನ ಮಗಳೂ ಅದರಲ್ಲಿರ್ತಾಳಲ್ಲಾ. ಏನೇನಾಗುತ್ತೆ ಅಂತ ನಾನು ಒಂದು ಅಕೌಂಟ್ ಓಪನ್ ಮಾಡ್ದೆ. ಹುಡುಗಿ ಹೆಸರಲ್ಲಿ. ಕಂಪ್ಯೂಟರ್ ಗೇನು ಗೊತ್ತಾಗುತ್ತೆ. ಹುಡುಗಾನಾ, ಹುಡುಗೀನಾ ಅಂತ. ಇನ್ನೊಂದು ಯಾವುದೋ ಮೂಲೇಲಿರೋರಿಗೇನು ಗೊತ್ತಾಗುತ್ತೆ ಅದು ಮೇಲಾ, ಫೀಮೇಲಾ ಅಂತ. ಒಂದೇ ಸಮ ಮೆಸೇಜ್ ಬರೋಕೆ ಶುರುವಾಯ್ತು. ಏನಿಲ್ಲಾ, ಹಾಸಿಗೆಗೆ ಬಾ ಅನ್ನೋದೆ. ಯಾಕಪ್ಪಾ ಹಿಂಗೆ ಕರೀತಾರೆ ಅಂತ ಅವ್ರ ಆರ್ಕಟ್ ಗೋದ್ವಾ, ಮುಗೀತು ಕತೆ-ಒಂದು ರಾಶೀ ಫೋನ್ ಗಳು.

ನನ್ನ ಫ್ರೆಂಡ್ ಒಬ್ಬ ಇದ್ದ. ಗುಜರಾತಿ. ಬರೀ ಬ್ಯುಸಿನೆಸ್ ಕಂಡ ಮನೆ ಅದು. ನಮ್ಮ ಜೊತೇನೇ ಕುಂಟಾಬಿಲ್ಲೆ ಆಡ್ಕೊಂಡಿದ್ದ. ಇನ್ನೇನು ಡಿಗ್ರಿ ಮುಗಿಸ್ತಾ ಇದಾನೆ ಅನ್ನೋ ಅಷ್ಟೊತ್ತಿಗೆ ಸರಿಯಾಗಿ ಅವನ ಮದುವೆ ಫಿಕ್ಸ್ ಮಾಡ್ಬಿಟ್ರು. ಅವ್ನೂ ಹುಡುಗಿ ಮನೆಗೆ ಹೋಗೀ ಬರೋಕೆ ಶುರು ಮಾಡ್ದ. ಮದ್ವೆ ಇನ್ನೂ ಸ್ವಲ್ಪ ದಿನ ಇತ್ತು. ಆ ಮನೇಲಿ ಇವನ್ನ ಕೂಡಿಸ್ಕೊಂಡು ಒಟ್ಟಿಗೆ ಬ್ಲೂಫಿಲಂ ನೋಡಿದ್ರಂತೆ. ಯಾಕಪ್ಪಾ, ನಾವಂತೂ ಈ ಥರಾ ಕೇಳಿಲ್ವಲ್ಲಾ ಅಂದಿದ್ದಕ್ಕೆ ಅವ್ನು ಹೇಳ್ದ: ನಮ್ಮಲ್ಲಿ ಹಾಗೇನೇ. ಹುಡುಗ ವಯಸ್ಸಿಗೆ ಬಂದಾ ಅಂದ್ರೆ ಕೆಟ್ಟ ಕುತೂಹಲಕ್ಕೆ ಬೀಳ್ತಾನೆ. ಅದರ ಬೆನ್ನತ್ತಿ ಹಾದಿ ತಪ್ತಾನೆ. ಅದರ ಬದಲು ದೇಹ ಜುಂ ಅನ್ನೋಕೆ ಶುರು ಮಾಡ್ದಾಗ್ಲೇ ಅದಕ್ಕೆ ಬೇಕಾದ್ದನ್ನೆಲ್ಲ ಒದಗಿಸಿಬಿಡ್ತಾರೆ. ಹುಡುಗ ಎಲ್ಲಿ ದಾರಿ ತಪ್ತಾನೆ? ತೆಪ್ಪಗೆ ಬ್ಯುಸಿನೆಸ್ ನೋಡ್ಕೊಂಡು ಹಣ ಮಾಡ್ಕೊಂಡು ಕೂತಿರ್ತಾನೆ ಅಂತ. ಹಂಗಾ ಅನಿಸ್ತು.

ನನ್ನ ಅಪಾರ್ಟ್ ಮೆಂಟ್ ನಲ್ಲಿ ಇರೋ ಟೀನ್ ಗಳ ಮನೇನಲ್ಲಿ ಒಂದು ಅಂಶ ಗಮನಿಸಿದ್ದೀನಿ. ಯಾರೂ ಕಂಪ್ಯೂಟರ್ ನ ರೂಂನಲ್ಲಿಟ್ಟಿಲ್ಲ. ಹಾಲ್ ನಲ್ಲಿಟ್ಟಿದ್ದಾರೆ. ವಿಷಯ ಸಿಂಪಲ್. ಮಕ್ಕಳು ದಾರಿ ತಪ್ಪಬಾರದು ಅಂತ. ಅದು ಬೇಕು, ಇದು ಬೇಕು, ಇನ್ನೊಂದು ಬೇಕು, ಮತ್ತೂ ಒಂದು ಬೇಕು ಅಂತ ಕೇಳ್ತಾನೇ ಇರುತ್ತೆ ಮನಸ್ಸು. ಅದಕ್ಕೆ ಗಾಳ ಹಾಕ್ತಾ ಇರುತ್ತೆ ಈ ಹಗಲೂ ರಾತ್ರಿ ನಿದ್ದೆ ಮಾಡೋದಿಕ್ಕೆ ಬಿಡದಿರೋ ಈ ಸೆಕ್ಸ್ ಲೋಕಗಳು.

“ನಿಂದಾ ನೀ ತಿಳ್ಕೋ” ಅಂದ್ರಲ್ಲಾ ಕವಿಗಳು ಅಂತ ನಾನು ಏನು ಅಂತ ಹುಡುಕೋದಿಕ್ಕೆ ಶುರು ಮಾಡ್ದೆ. ನಾನು ಆಗ ತಾನೇ ಏಳನೇ ಕ್ಲಾಸ್ ಮುಗಿಸಿ ಎಂಟು ಶುರು ಮಾಡಿದ್ದೆ. ಆ ವಯಸ್ಸಲ್ಲೇ ಸೆಕ್ಸ್ ಬುಕ್ ಕೈಗೆ ಬಂತು. ವಯಸ್ಸು ಬೆಳೀತಾ ಹೋದ ಹಾಗೆ ಪುಸ್ತಕ ಮಾತ್ರ ಕೈ ಬಿಟ್ಟೋಗ್ಲಿಲ್ಲ. ಒಳ್ಳೆ ಪುಸ್ತಕ ಬೇಕು ಅಂತ ಬಳೇಪೇಟೆಗೆ ನುಗ್ಗಿದ್ರೆ ಅದರ ಜೊತೆ ಬೋನಸ್ಸಾಗಿ ಇದೂ ಕಣ್ಣಿಗೆ ಬೀಳುತ್ತೆ. ಇಷ್ಟೇನಾ ಅಂದ್ರೆ ಇಷ್ಟೇ ಅಲ್ಲ. ಬುಕ್ಸ್ ಮಾತ್ರಾನಾ ಅಂದ್ರೆ ಬುಕ್ಸ್ ಮಾತ್ರ ಅಲ್ಲ. ವರ್ಜಿನಿಟಿ ಅನ್ನೋದು ಫೂಲಿಶ್ ನೆಸ್ ಅನ್ನೋ ಥರಾ ಆಗೋಗುತ್ತೆ.

ಈಗ ಬಳೆಪೇಟೆಗೇ ಹೋಗ್ಬೇಕಾ? ಪುಸ್ತಕಾನೇ ಓದ್ಬೇಕಾ? ಒಂದು ನಿಮಿಷ ಇಂಟರ್ ನೆಟ್ ಗೆ ಅಂಟಿಕೊಂಡ್ರೆ ಒಂದು ಮೆಗಾ ಸೆಕ್ಸ್ ಉಚಿತ ಅನ್ನೋ ಕಾಲ ಇದು. ಆರ್ಕಟ್ ಮಾತ್ರಾನಾ. ಹೆಜ್ಜೆ ಹೆಜ್ಜೆಗೂ ಇರುತ್ತೆ. ಬೇಡಾ ಅಂದ್ರೂ ಕಣ್ಣೆದುರು ಬರುತ್ತೆ. ಇದರ ಜೊತೆಗೆ ಟೀವಿ, ವೀಡಿಯೋ ಸೆಕ್ಸ್ ಅನ್ನೋದು ಧಾರಾಳವಾಗಿ ಕೈಗೆ ಸಿಗುತ್ತೆ.

ಸಿಗಲಿ, ಆದ್ರೆ ಅದಕ್ಕೆ ತಕ್ಕನಾಗಿ ಸೆಕ್ಸ್ ಬಗ್ಗೆ ಮಾತಾಡ್ತಾ ಇದ್ದೀವಿ! ಯಾರು ಹೇಳ್ತಾರೆ ಈ ಎಲ್ಲಾವಕ್ಕೂ ಎಕ್ಸ್ ಪೋಸ್ ಆದ ಮನಸ್ಸನ್ನ ಮತ್ತೆ ನಮ್ಮ ಮಾತು ಕೇಳೋ ಹಾಗೆ ಮಾಡೋದು ಹೇಗೆ ಅಂತ. ಮನಸ್ಸು ಹುಚ್ಚುಕುದುರೆ ಆಗಿರುತ್ತೆ. ದೇಹದಲ್ಲಿ ಬದಲಾವಣೆ ಆಗಿರುತ್ತೆ. ಕೈಗೆ ಕಾಸು ಎಟುಕ್ತಾ ಇರುತ್ತೆ. ಅಂಥಾದ್ರಲ್ಲಿ ಮಡಿವಂತಿಕೆ ಮಾಡಿಬಿಟ್ರೆ ಅವರವರಿಗೆ ಬೇಕಾದ ದಾರಿ ಅವರವರು ಹುಡುಕ್ಕೊಂಡು ಬಿಡ್ತಾರೆ. ಎಷ್ಟೋ ಜನ ರಾಂಗ್ ರೂಟೇ ಹುಡುಕ್ತಾರೆ.

ಉಮಾರಾವ್ ಒಂದು ಕಥೆ ಬರ್ದಿದ್ರು. ಮನೇನಲ್ಲಿ ಮುದಿ ತಂದೆ ಆತ್ಮಹತ್ಯೆ ಮಾಡ್ಕೊಂಡು ಬಿಡ್ತಾರೆ. ಯಾಕೆ? ಅವರ ಕಂಪ್ಯೂಟರ್ ತೆರೆದಿರುತ್ತೆ. ಬೇಡವಾದ್ರೂ ಕಣ್ಣಿಗೆ ಬಿದ್ದಿರುತ್ತೆ. ಅದರಿಂದ ಆಚೆಗೆ ಒದ್ದುಕೊಂಡು ಬರೋ ದಾರಿ ಗೊತ್ತಾಗಲ್ಲ. ಒಂದೇ ಸಲ “ಡಿಲಿಟ್” ಬಟನ್ ಒತ್ಕೊಂಡಿದ್ದಾರೆ. ಈ ಕಥೆ ಬಂದಿದ್ದು ಆಗ ತಾನೇ ಇಂಟರ್ ನೆಟ್ ಬರ್ತಾ ಇದ್ದ ಕಾಲದಲ್ಲಿ. ಆದ್ರೆ ಈಗ ಎಲ್ಲೆಲ್ಲೂ ಇಂಟರ್ ನೆಟ್ಟೇ. “ಮಿಂಟ್ ವಿತ್ ಎ ಹೋಲ್” ಜನಾಂತ ಇದು. “ಡಿಲಿಟ್” ಒಟ್ಕೊಂಡುಬಿಡಬಾರದು. ಹೆಂಗಪ್ಪಾ…?

‍ಲೇಖಕರು avadhi

March 5, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಉದಯಕುಮಾರ್ ಹಬ್ಬು 'ಡೋರ್ ನಂ 142' ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ,...

ಯಾವುದೀ ಪ್ರವಾಹವು…

ಯಾವುದೀ ಪ್ರವಾಹವು…

ಡೋರ್ ನಂ 142 ಬಹುರೂಪಿ   ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಯಾವುದೀ ಪ್ರವಾಹವು... ರೇಡಿಯೋ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This