ಹುಷಾರು! ಮೀಸಲಾತಿ ಹೆಸರಲ್ಲಿ ಮೀಸಲಾತಿ ವಿರುದ್ಧ..

ಮೇಲ್ಜಾತಿಗಳ ಮೀಸಲಾತಿ ಬೇಡುವ ಚಳುವಳಿಗಳ ಹಿಂದೆ 

ಮೀಸಲಾತಿಯನ್ನೇ ಇಲ್ಲವಾಗಿಸುವ ಗುಪ್ತಕಾರ್ಯಸೂಚಿ!

ku-sa_madhusudhanಕು ಸ ಮಧುಸೂದನ ನಾಯರ್

ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಸರಕಾರ  ಮೀಸಲಾತಿಯ ಹೆಸರಿನಲ್ಲಿ ನೀಡಿರುವ ಪ್ರಾತಿನಿದ್ಯ ಇವತ್ತು ಮೇಲ್ಜಾತಿಗಳ ಕಣ್ಣು ಕೆಂಪಗಾಗಿಸಿದೆ. ಅದರಲ್ಲೂ ಉತ್ತರ ಮತ್ತು ಪಶ್ಚಿಮ ಭಾರತದ ಕೆಲವು ರಾಜ್ಯಗಳಲ್ಲೀ ಈ ಮೀಸಲಾತಿಯ ಹೋರಾಟ ಬೇರೆ ಬೇರೆ ಹೆಸರಿನಲ್ಲಿ ದಿನಕ್ಕೊಂದು ತಿರುವು ಪಡೆಯುತ್ತ ಹಿಂಸಾಚಾರದ ರೂಪವನ್ನೂ ತಳೆಯುತ್ತಿದೆ. ಮೊಟ್ಟ ಮೊದಲಿಗೆ ಗುಜರಾತಿನ ಪಟೇಲ್ (ಪಾಟಿದಾರ್) ಸಮುದಾಯ, ನಂತರದಲ್ಲಿ ಉತ್ತರ ಭಾರತದ (ಮುಖ್ಯವಾಗಿ ಹರಿಯಾಣ ರಾಜ್ಯದಲ್ಲಿ) ಜಾಟ್ ಸಮುದಾಯ, ಇದೀಗ ಪಶ್ಚಿಮ ಭಾರತದ ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯ ಮೀಸಲಾತಿ ವಿರುದ್ದದ ಚಳುವಳಿಗಳನ್ನು ಪ್ರಾರಂಭಿಸಿವೆ.

ಮೊದಲ ನೋಟಕ್ಕೆ ಇವೇನು ಮೀಸಲಾತಿ ವಿರೋಧಿ ಚಳುವಳಿಗಳೆಂದು ಅನಿಸುವುದಿಲ್ಲ. ಬದಲಿಗೆ ತಮ್ಮನ್ನೂ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿ ತಮಗೂ ಮೀಸಲಾತಿ ನೀಡಿ ಎನ್ನುವ ಬೇಡಿಕೆಯನ್ನುಳ್ಳ  ಚಳುವಳಿಗಳು ಎನಿಸುವಂತೆ ಇವನ್ನು ಸಂಘಟಿಸಲಾಗುತ್ತಿದೆ.

reservation2ಆದರೆ ಇವುಗಳ ಮೂಲಕ್ಕೆ ಹೋಗಿ ಈ ಚಳುವಳಿಗಳ ಹಿಂದಿರುವ ಹಿತಾಸಕ್ತಿಗಳನ್ನು ಸೂಕ್ಷ್ಮವಾಗಿ ಅದ್ಯಯನ ಮಾಡಿದರೆ  ಮೀಸಲಾತಿಯನ್ನೇ ಇಲ್ಲವಾಗಿಸುವ ಒಂದು ಹುನ್ನಾರ ಇರುವುದು ವೇದ್ಯವಾಗುತ್ತದೆ. ಹಾಗಾಗಿ ಈ ಎಲ್ಲ ಚಳುವಳಿಗಳ ಬಗ್ಗೆ ಒಂದು ವಿಸ್ತಾರವಾದ ಚರ್ಚೆಯನ್ನು ಮಾಡುವುದು ಅಗತ್ಯವೆಂದು ನನ್ನ ಭಾವನೆ.

ಯಾಕೆಂದರೆ ಇಂತಹ ಚಳುವಳಿಗಳಿಗೆ ಉದ್ದನೆಯ ಕೈಕಾಲುಗಳಿದ್ದು ಅವು ಯಾವಾಗ ಬೇಕಾದರು ದಕ್ಷಿಣದತ್ತ ಮುಖ ಮಾಡಿ ಕರ್ನಾಟಕಕ್ಕೂ ಹಬ್ಬಬಲ್ಲ ಸಾದ್ಯತೆ ಇದೆ. ಯಾಕೆಂದರೆ ಕರ್ನಾಟಕದಲ್ಲಿಯೂ ಈ ಹಿಂದೆ ಹಿಂದುಳಿದ ವರ್ಗಗಳ ಆಯೋಗಗಳ ವಿರುದ್ದವೇ ಮೇಲ್ಜಾತಿಗಳು ಹೋರಾಡಿದ ಇತಿಹಾಸವಿದೆ. ಹಾಗಾಗಿ ಇಲ್ಲಿನ ದಲಿತರು, ಹಿಂದುಳಿದ ವರ್ಗಗಳು ಇಂತಹ ಚಳುವಳಿಗಳ ಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅವುಗಳನ್ನು ಎದುರಿಸಲು ಸಿದ್ದವಾಗಿರಬೇಕಾಗುತ್ತದೆ.

ಯಾಕೆ  ಈ ಎಲ್ಲ ಮೇಲ್ಜಾತಿಗಳೂ  ತಮಗೂ ಮೀಸಲಾತಿ ಬೇಕೆಂದು ಹಟ ಹಿಡಿದು ಕೂತಿವೆ ಎಂಬುದನ್ನು ನೋಡಿದರೆ ನಮಗೆ ಸಿಗುವ ಮೊದಲ ಕಾರಣ ಹಿಂದುಳಿದ ವರ್ಗಗಳ  ಏಳಿಗೆಯ ಬಗ್ಗೆ ಅವುಗಳಿಗಿರುವ ತೀವ್ರ ಅಸಹನೆ! 1989ರಲ್ಲಿ ಮಂಡಲ್ ಆಯೋಗದ ವಿರುದ್ದ ಪ್ರಾರಂಭವಾದ ಮೇಲ್ಜಾತಿಗಳ ಮೀಸಲಾತಿ ವಿರೋಧಿ ಚಳುವಳಿ ನಂತರದಲ್ಲಿ  ಸ್ವಲ್ಪ ಕಾವು ಕಳೆದುಕೊಂಡಿತು. ಅಂದು ಉದ್ಯೋಗಗಳಿಗಿಂತ ಹೆಚ್ಚಾಗಿ ಶಿಕ್ಷಣದಲ್ಲಿ ಮೀಸಲಾತಿ ಬೇಡವೆನ್ನುವ ಆಗ್ರಹವೇ ಹೆಚ್ಚಾಗಿತ್ತು. ಯಾಕೆಂದರೆ ಅದಾಗಲೇ ರಾಷ್ಟ್ರ ಮಟ್ಟದಲ್ಲಿ ಬಹಳಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗಿದ್ದು, ಅವುಗಳಲ್ಲಿ ಮೀಸಲಾತಿ ದೊರೆತ ಫಲವಾಗಿ ಲಕ್ಷಾಂತರ ಹಿಂದುಳಿದ ವರ್ಗಗಳ ಯುವಕರು ಉನ್ನತ ಶಿಕ್ಷಣ ಪಡೆಯುವಂತಾಯಿತು.

ಈ ಸಮಯದಲ್ಲಿಯೇ ಮೇಲ್ಜಾತಿಯ ಯುವಜನತೆ  ಅದೇ ಶಿಕ್ಷಣವನ್ನು ಪಡೆಯಲು ಲಕ್ಷಾಂತರ ರೂಪಾಯಿ ಕೊಟ್ಟು ಮ್ಯಾನೇಜ್ ಮೆಂಟ್ ಕೋಟಾದಲ್ಲಿ ಸೀಟು ಗಿಟ್ಟಿಸಿ ಓದುವಂತಹ ಸ್ಥಿತಿ ನಿರ್ಮಾಣವಾಯಿತು. ಅದುವರೆಗೂ ಹಿಂದುಳಿದ ವರ್ಗಗಳವರ ಸ್ಪರ್ಧೆಯೇ ಇಲ್ಲದೆ ಸುಲಭವಾಗಿ ಸೀಟುಗಳಿಸಿ ಉನ್ನತ ಶಿಕ್ಷಣ ಪಡೆದು ಬಹುಮುಖ್ಯವಾದ ಆಯಕಟ್ಟಿನ ಸರಕಾರಿ ಹುದ್ದೆಗಳನ್ನು ಅಲಂಕರಿಸುತ್ತಿದ್ದ ಮೇಲ್ಜಾತಿಗಳಿಗೆ ಇದು ಅಪಥ್ಯವಾಯಿತು.

ರಾಷ್ಟ್ರದಾದ್ಯಂತ ನಡೆದ ಮಂಡಲ್ ಆಯೋಗದ ಅನುಷ್ಠಾನ ಕುರಿತಾಗಿನ ಹೋರಾಟಕ್ಕೆ ಆಗಿನ ಯಾವ ರಾಜಕೀಯ ಪಕ್ಷಗಳೂ ಬಹಿರಂಗವಾಗಿ ಬೆಂಬಲಿಸಲಿಲ್ಲ. ಬದಲಿಗೆ ಎಲ್ಲ ಪಕ್ಷಗಳಲ್ಲಿದ್ದ ಮೇಲ್ಜಾತಿಗಳ ಪಟ್ಟಭದ್ರ ಹಿತಾಸಕ್ತಿಗಳು ಗುಪ್ತವಾಗಿ ಈ ಚಳುವಳಿಯನ್ನು ಬೆಂಬಲಿಸಿದರೂ ರಾಜಕೀಯ ಅನಿವಾರ್ಯತೆಯ ಕಾರಣದಿಂದಾಗಿ ಸದರಿ ಚಳುವಳಿ ತಣ್ಣಗಾಯಿತು. ಇದಕ್ಕಿದ್ದ ಮುಖ್ಯ ಕಾರಣವೆಂದರೆ ಹಿಂದುಳಿದ ವರ್ಗಗಳ ಬೆಂಬಲವಿರದೆ  ರಾಜಕಾರಣ ಮಾಡಿ ಅಧಿಕಾರಕ್ಕೆ ಏರುವುದು ಕಷ್ಟವೆಂಬ ಸತ್ಯ ಅಲ್ಲಿಗಾಗಲೇ ಎಲ್ಲ ಪಕ್ಷಗಳಿಗು ಅರ್ಥವಾಗಿತ್ತು. ಹೀಗಾಗಿ ಅನಿವಾರ್ಯವಾಗಿ ಹಿಂದುಳಿದ ವರ್ಗಗಳ ಮೀಸಲಾತಿ ನಿರಾತಂಕವಾಗಿ ಮುಂದುವರೆಯಿತು.

ತೊಂಭತ್ತರ ದಶಕದಲ್ಲಿ ಬದಲಾದ ನಮ್ಮ ಆರ್ಥಿಕ ನೀತಿ ಖಾಸಗಿ ಕ್ಷೇತ್ರಗಳಲ್ಲಿ ಹಲವು ರೀತಿಯ ಉದ್ಯೋಗಾವಕಾಶಗಳನ್ನು ತೆರೆಯಿತು. ಇದರಿಂದಾಗಿ ಮೇಲ್ಜಾತಿಗಳ ಹಣವಂತ ವಿದ್ಯಾವಂತ ವರ್ಗ ಖಾಸಗಿ ಕ್ಷೇತ್ರದ ಕಡೆ ಗಮನ ಹರಿಸುತ್ತ ಮೀಸಲಾತಿಯ ಬಗ್ಗೆ ಹೆಚ್ಚೇನು ತಲೆ ಕೆಡಿಸಿಕೊಳ್ಳದೆ ಸುಮ್ಮನಾಯಿತು. ಆದರೆ ಮೇಲ್ಜಾತಿಗಳಲ್ಲಿನ ಆರ್ಥಿಕವಾಗಿ ಹಿಂದುಳಿದ ಮತ್ತು ಉನ್ನತ ಶಿಕ್ಷಣ ಪಡೆಯದ ಒಂದು ವರ್ಗ ಅತ್ತ ಸರಕಾರಿ ಉದ್ಯೋಗದ ಅವಕಾಶಗಳಾಗಲಿ ಇತ್ತ ಖಾಸಗಿ ಕ್ಷೇತ್ರದ ಉದ್ಯೋಗಗಳಾಗಲಿ ದೊರಕಿಸಿಕೊಳ್ಳಲಾಗದೆ ಹೋಯಿತು.

ಈ ಅವಧಿಯಲ್ಲಿ ಮೀಸಲಾತಿಯ ಕೃಪೆಯಿಂದ  ಸರಕಾರದ ಮತ್ತು ರಾಜಕೀಯದ ವಲಯಗಳಲ್ಲಿ ಹಿಂದುಳಿದ ವರ್ಗಗಳ ಒಂದು ಅಧಿಕಾರದ ವಲಯವೇ ಸೃಷ್ಠಿಯಾಗಿಬಿಟ್ಟಿತು.  ರಾಷ್ಟ್ರದ ಹಲವು ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳು ರಾಜಕೀಯ ಅಧಿಕಾರ ಮಾತ್ರವಲ್ಲದೆ ಆಯಕಟ್ಟಿನ ಸರಕಾರಿ ಉದ್ಯೋಗಗಳಲ್ಲಿ ವಿರಾಜಮಾನರಾಗಿ ಅಧಿಕಾರ ಚಲಾಯಿಸುತ್ತಿದ್ದುದನ್ನು ಅಸಹನೆಯಿಂದಲೇ ಗಮನಿಸುತ್ತಿದ್ದ ಮೇಲ್ಜಾತಿಗಳು ಕ್ರಮೇಣ ಸಂಘಟಿತವಾಗ ಹತ್ತಿದವು. 1990ರಿಂದ 2008ರವರೆಗೂ ಈ ಪ್ರಕ್ರಿಯೆ ವೇಗವಾಗಿ ನಡೆಯುತ್ತ ಬಂತು. ನಂತರದಲ್ಲಿ ವಿಶ್ವದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಖಾಸಗಿ ಕ್ಷೇತ್ರಗಳಲ್ಲಿಯೂ ಉದ್ಯೋಗಾವಕಾಶಗಳು ಕಡಿಮೆಯಾಗ ತೊಡಗಿದವು.

ಇದೆಲ್ಲದರ ಜೊತೆಗೆ ಖಾಸಗಿ ಕ್ಷೇತ್ರದಲ್ಲಿಯೂ ತಮಗೆ ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆಯನ್ನು ದಲಿತ ಮತ್ತು ಹಿಂದುಳಿದ ವರ್ಗಗಳು ಸರಕಾರಗಳ ಮುಂದಿಟ್ಟು ಒತ್ತಾಯಿಸತೊಡಗಿದವು. ಹಾಗೇನಾದರು ಖಾಸಗಿ ಕ್ಷೇತ್ರದಲ್ಲಿಯೂ ಹಿಂದುಳಿದವರಿಗೆ ಮೀಸಲಾತಿ ನಿಗದಿಯಾಗಿಬಿಟ್ಟರೆ ತಮಗಿನ್ಯಾವ ಅವಕಾಶವೂ ಸಿಗುವುದಿಲ್ಲ ಎಂಬುದನ್ನು ಅರಿತ ಮೇಲ್ಜಾತಿಗಳು ಇದೀಗ, ಮೀಸಲಾತಿಯ ವ್ಯವಸ್ಥೆಯನ್ನೇ ಇಲ್ಲವಾಗಿಸುವ ಒಂದು ಹುನ್ನಾರದ ಭಾಗವಾಗಿ ತಮ್ಮನ್ನೂ ಹಿಂದುಳಿದ ಜಾತಿಗಳ ಪಟ್ಟಿಗೆ ಸೇರಿಸಿ, ಮೀಸಲಾತಿಯನ್ನು ಕೊಡಬೇಕೆಂಬ ಚಳುವಳಿಯನ್ನು ಪ್ರಾರಂಭಿಸಿವೆ.

ಈ ದಿಸೆಯಲ್ಲಿಯೇ 2015ರ ಅಗಸ್ಟ್ ತಿಂಗಳಲ್ಲಿ ಗುಜರಾತಿನ ಪಟೇಲ್ (ಪಾಟಿದಾರ್) ಸಮುದಾಯ ತನಗೆ ಮೀಸಲಾತಿ ನೀಡಬೇಕೆಂದು ಸರಕಾರವನ್ನು ಒತ್ತಾಯಿಸುವ ಚಳುವಳಿಯೊಂದನ್ನು ಯುವ ನಾಯಕ ಹಾರ್ದಿಕ್ ಪಟೇಲರ ನೇತೃತ್ವದಲ್ಲಿ ಪ್ರಾರಂಭಿಸಿತು. ತಮ್ಮ ಚಳುವಳಿಗೆ ಯಾವುದೇ ರಾಜಕೀಯ ಪಕ್ಷಗಳ ಜೊತೆಗೆ ಸಂಬಂಧವಿಲ್ಲವೆಂದು ಹಾರ್ದಿಕ್ ಪಟೇಲ್ ಹೇಳಿದರೂ ಗುಜರಾತಿನಲ್ಲಿದ್ದ ಭಾಜಪದ ಸರಕಾರವನ್ನು ದುರ್ಬಲಗೊಳಿಸಲು ಕಾಂಗ್ರೆಸ್ ಈ ಚಳುವಳಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದು ನಿಜ. ಇದರ ಜೊತೆಗೆ ಸ್ವಾತಂತ್ರ ಬಂದಾಗಿನಿಂದಲೂ ಗುಜರಾತನ್ನು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಹಿಡಿತದಲ್ಲಿಟ್ಟುಕೊಂಡಿದ್ದ ಪಟೇಲ್ ಸಮುದಾಯ ಕೇಶುಬಾಯಿ ಪಟೇಲ್ ಪತನದ ನಂತರ ಹಿಂದೆ ಸರಿದು ಹಿಂದುಳಿದ ವರ್ಗಗಳ ಕೈಗೆ ಅಧಿಕಾರ ಬಿಟ್ಟುಕೊಡಬೇಕಾಯಿತು.

ನಂತರ ಪಾಟಿದಾರರು ಭಾಜಪವನ್ನು ಬೆಂಬಲಿಸಿದರೂ ಅಲ್ಲಿಯ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದವರು ಹಿಂದುಳಿದ ವರ್ಗಗಳ ನರೇಂದ್ರ ಮೋದಿಯವರೆ! ಇದೂ ಸಹ ಪಾಟೀದಾರರ ಅಸಹನೆಗಿದ್ದ ಇನ್ನೊಂದು ಕಾರಣ. ಪಾಟೀದಾರ್ ಸಮುದಾಯದ ಒತ್ತಡಕ್ಕೆ ಮಣಿದ ರಾಜ್ಯ ಸರಕಾರ ಪಾಟೀದಾರ್ ಸೇರಿದಂತೆ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳಿಗೆ ಶೇಕಡಾ ಹತ್ತರಷ್ಟು ಮೀಸಲಾತಿಯನ್ನು ನಿಗದಿಪಡಿಸಿ ಸುಗ್ರೀವಾಜ್ಞೆ ಹೊರಡಿಸಿತು. ಆದರೆ ನಂತರದಲ್ಲಿ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಈ ಸುಗ್ರೀವಾಜ್ಞೆಯನ್ನು ಅನೂರ್ಜಿತಗೊಳಿಸಿತು. ಇದಾದ ನಂತರವೂ ಗುಪ್ತಗಾಮಿನಿಯಾಗಿ ಪಾಟೀದಾರರ ಮೀಸಲಾತಿಯ ಬಗೆಗಿನ ಒತ್ತಡ ತಂತ್ರ ಮುಂದುವರೆದಿದೆ.

ಬಹುಶ: ಪಾಟೀದಾರರ ಈ ಚಳುವಳಿಯಿಂದ ಪ್ರೇರಿತವಾದಂತೆ ಕಾಣುವ ಉತ್ತರ ಭಾರತದ ಜಾಟ್ ಸಮುದಾಯ ಫೆಬ್ರುವರಿ 2016ರಲ್ಲಿ ತನಗೂ ಮೀಸಲಾತಿ ಬೇಕೆಂಬ ಬೇಡಿಕೆಯನ್ನಿಟ್ಟು ಚಳುವಳಿಯೊಂದನ್ನು ಪ್ರಾರಂಭಿಸಿತು. ಮೊದಲಿಗೆ ಹರಿಯಾಣ ರಾಜ್ಯದಲ್ಲಿ ಆರಂಭಗೊಂಡ ಈ ಚಳುವಳಿ ಕ್ರಮೇಣ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಹರಿಯಾಣದ ಜಾಟ್ ಪ್ರಾಬಲ್ಯವಿರುವ reservation1ಪ್ರದೇಶಗಳಿಗೂ ಹಬ್ಬುತ್ತಾ ಹೋಯಿತು. ಶಾಂತಿಯುತವಾಗಿ ಪ್ರಾರಂಭಗೊಂಡ ಚಳುವಳಿ ಹಿಂಸೆಗೆ ಇಳಿಯುತ್ತಿದ್ದಂತೆ ಜಾಟ್ ಸಮುದಾಯದ ಈ ಚಳುವಳಿಯನ್ನೇ ವಿರೋಧಿಸುವ ಜಾಟ್ ಜನಾಂಗದವರಲ್ಲದವರ ಚಳುವಳಿಯೂ ಶುರುವಾಯಿತು. ತಕ್ಷಣ ಎಚ್ಚೆತ್ತ ಹರಿಯಾಣ ಸರಕಾರವು ಗುಜರಾತ್ ಸರಕಾರ ಮಾಡಿದಂತೆ  ಶೇಕಡಾ ಹತ್ತರಷ್ಟು ಮೀಸಲಾತಿ ನೀಡುವ ಆದೇಶವೊಂದನ್ನು ಜಾರಿಗೆ ತಂದಿತು. ಆದರೆ ನೀಡಲಾಗುವ ಒಟ್ಟು ಮೀಸಲಾತಿಯ ಪ್ರಮಾಣ ಶೇಕಡಾ ಹತ್ತಕ್ಕಿಂತ ಹೆಚ್ಚಿರಬಾರದೆಂಬುದನ್ನು ಪುನರುಚ್ಚರಿಸಿದ ನ್ಯಾಯಾಲಯ  ಈ ಆದೇಶವನ್ನು ಅನೂರ್ಜಿತಗೊಳಿಸಿತು.

ಇದಾದ ನಂತರ ಮಹಾರಾಷ್ಟ್ರದಲ್ಲಿ ಮರಾಠ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ದಲಿತ ಯುವಕರು ಅತ್ಯಾಚಾರ ಮಾಡಿದರೆನ್ನಲಾದ ವಿಷಯನ್ನಿಟ್ಟುಕೊಂಡು ಸದರಿ ಯುವಕರಿಗೆ ಆದಷ್ಟು ಬೇಗ ಗಲ್ಲು ಶಿಕ್ಷೆ ವಿಧಿಸಬೇಕೆಂದು ಹಾಗು ಮರಾಠರ  ಆತ್ಮಾಭಿಮಾನದ ರಕ್ಷಣೆಗೆಂದು  ಪ್ರಾರಂಭಗೊಂಡ ಮರಾಠರ ಮೌನ ಚಳುವಳಿ ಇದೀಗ ಅಗಾಧವಾಗಿ ಬೆಳೆದು ನಿಂತಿದೆ. ದಲಿತರ ಈ ವರ್ತನೆಗೆ ಅವರು ಪಡೆಯುತ್ತಿರುವ ಮೀಸಲಾತಿಯೇ ಕಾರಣವೆಂದು ಹೇಳುವ ಈ ಚಳುವಳಿಯ ವಿಶೇಷವೇನೆಂದರೆ ಈ ಚಳುವಳಿಗೆ ನಿರ್ಧಿಷ್ಟ ನಾಯಕರುಗಳಾಗಲಿ, ಘೋಷಣೆಗಳಾಗಲಿ ಇಲ್ಲದೇ ಇರುವುದು. ಜೊತೆಗೆ ನಡೆಯುತ್ತಿರುವ ಸಮಾವೇಶಗಳಲ್ಲಿ ಭಾಗವಹಿಸುವವರು ಯಾವುದೇ ಘೋಷಣೆಗಳನ್ನೂ ಕೂಗದೆ ಅಹಿಂಸಾತ್ಮಕವಾಗಿ ನಡೆದುಕೊಳ್ಳುತ್ತಿರುವುದು ಸರಕಾರ ಮತ್ತು ಜನರ  ಮೆಚ್ಚುಗೆಗೆ ಪಾತ್ರವಾಗಿ. ಇದೀಗ ನಿಧಾನವಾಗಿ ಈ ಚಳುವಳಿಯು ತನಗೂ ಹಿಂದುಳಿದವರಿಗೆ ನೀಡುವ ಮೀಸಲಾತಿಯನ್ನು ನೀಡಬೇಕೆಂದು ಒತ್ತಾಯಿಸತೊಡಗಿದೆ.

ಬಹುಶ: ಬಾಳಾಠಾಕ್ರೆಯವರ ನಂತರದಲ್ಲಿ ಮರಾಠ ಸಮುದಾಯದ ಪರವಾಗಿ ಗಟ್ಟಿಯಾಗಿ ನಿಲ್ಲುವ ನಾಯಕನೊಬ್ಬ ಸೃಷ್ಠಿಯಾಗದೆ ಇರುವುದು ಆ ಸಮುದಾಯದ ಅಸಮಾದಾನಕ್ಕೆ ಇನ್ನೊಂದು ಕಾರಣವಾಗಿದೆ. ಈ ಹಿಂದಿನ ಕಾಂಗ್ರೆಸ್ ಮತ್ತು ಎನ್.ಸಿ.ಪಿ. ಸರಕಾರಗಳು ಹೊರಡಿಸಿದ್ದ ಮರಾಠ ಸಮುದಾಯಕ್ಕೆ ಮೀಸಲಾತಿಯ ಆದೇಶವನ್ನು ನ್ಯಾಯಾಲಯ ವಜಾಗೊಳಿಸಿದ ಹಿನ್ನೆಲೆಯಲ್ಲಿ ಈಗಿನ ಭಾಜಪ ಸರಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ.  ಎನ್.ಸಿ.ಪಿ.ಯ. ಶರದ್ ಪವಾರ್ ಮತ್ತು ಕಾಂಗ್ರೆಸ್ ಈ ಚಳುವಳಿಗೆ ಬೆಂಬಲ ನೀಡುತ್ತಿದ್ದಾರೆಂದು ಆರೋಪಿಸುವ  ಭಾಜಪ ಇದನ್ನು ತನ್ನ ಪರವಾದ ಚಳುವಳಿಯನ್ನಾಗಿ ಪರಿವರ್ತಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ತಮಗೂ ಮೀಸಲಾತಿ ಬೇಕೆಂದು ಈ ಮೂರೂ ಸಮುದಾಯಗಳು ಪ್ರಾರಂಭಿಸಿರುವ ಚಳುವಳಿಗಳ ಹಿಂದೆ ತಮಗೆ ಮೀಸಲಾತಿ ಬೇಕೆಂಬುದಕ್ಕಿಂತಲೂ ಹೆಚ್ಚಾಗಿ ಮೀಸಲಾತಿಯ ಪ್ರಕ್ರಿಯೆಯನ್ನೇ ಇಲ್ಲವಾಗಿಸುವ ದೂರಗಾಮಿ ಉದ್ದೇಶವಿರುವುದನ್ನು ನಾವು ಅರಿತುಕೊಳ್ಳಬೇಕಿದೆ. ಯಾಕೆಂದರೆ ಸಂವಿಧಾನದ ಪ್ರಕಾರ ಯಾವುದೇ ಮೀಸಲಾತಿಯ ಪ್ರಮಾಣ ಶೇಕಡಾ ಐವತ್ತಕ್ಕಿಂತ ಜಾಸ್ತಿ ಇರಲಾಗುವುದಿಲ್ಲ ಎಂಬ ಸತ್ಯ ಈ ಸಮುದಾಯಗಳಿಗೆ ಗೊತ್ತಿರದ ವಿಚಾರವೇನಲ್ಲ. ಆದರೆ ಇಂತಹ ಚಳುವಳಿಗಳ ಮೂಲಕ ಸಮಾಜದಲ್ಲಿ ಗೊಂದಲ ಮೂಡಿಸಿ, ಅಶಾಂತಿ ಸೃಷ್ಠಿಸಿ, ಮುಂದಿನ ದಿನಗಳಲ್ಲಿ ಮೀಸಲಾತಿ ವ್ಯವಸ್ಥೆಯನ್ನೇ ರದ್ದು ಪಡಿಸುವಂತೆ ಮಾಡುವುದು ಈ  ಎಲ್ಲ ಚಳುವಳಿಗಳ ಮುಖ್ಯ ಗುರಿಯಾಗಿದೆ.

ಅದ್ದರಿಂದ ಕರ್ನಾಟಕದ ಹಿಂದುಳಿದ ವರ್ಗಗಳು ಈಗಿನಿಂದಲೇ ಎಚ್ಚರದಿಂದಿರಬೇಕಾದ ಅನಿವಾರ್ಯತೆಯಿದೆ. ಯಾಕೆಂದರೆ ವೆಂಕಟಸ್ವಾಮಿಯವರ  ಹಿಂದುಳಿದ ಅಯೋಗವನ್ನು ವಿರೋಧಿಸಿದ ಶಕ್ತಿಗಳಿನ್ನೂ ನಮ್ಮ ನಡುವೆಯೇ ಇವೆ. ಉತ್ತರ ಭಾರತದ ಮೇಲ್ಜಾತಿಯ ಸಮುದಾಯಗಳಂತೆ  ಇಲ್ಲಿನ ಮೇಲ್ಜಾತಿಗಳು ನಮಗೂ ಮೀಸಲಾತಿ ಬೇಕೆಂಬ ಬೇಡಿಕೆಯನ್ನಿಟ್ಟು ಚಳುವಳಿಗಳನ್ನು ಪ್ರಾರಂಭಿಸಲಾರವು ಎಂಬುದಕ್ಕೆ ಯಾವ ಭರವಸೆಯೂ ಇಲ್ಲ.

‍ಲೇಖಕರು Admin

October 29, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್  ಕಿ  ಬಾರ್  ಡೆಮೊಕ್ರಟಿಕ್  ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This