ಹೂಮಾತು ಮೀಟಿ ಹೋಗುವ ಚಿಟ್ಟೆ ಕವಿತೆಗಳು

ನಾಗರಾಜ್ ಹರಪನಹಳ್ಳಿ

‘ಮಾತು ಮೀಟಿ ಹೋಗುವ ಹೊತ್ತು’ ಕವನ ಸಂಕಲನದ ಕವಿತೆಗಳು ನಾ‌ ಮೊದಲೇ ಓದಿದವು. ಮಯೂರ, ಉದಯವಾಣಿ, ಅವಧಿ, ಸಂಗಾತಿ ವೆಬ್ ಮುಂತಾದೆಡೆ ಸ್ಮಿತಾ ಅವರ ಕವಿತೆಗಳನ್ನು ಗಮನಿಸಿದ್ದೆ. ಸ್ಮಿತಾ ಅಮೃತರಾಜ್ ಅವರ ಕವಿತೆ ತಣ್ಣಗೆ ಹರಿವ ನದಿಯಂತೆ. ಬೆಳುದಿಂಗಳಂತೆ. ಹೂವು ಅರಳಿದಂತೆ, ಸಣ್ಣಗೆ ಮಳೆ ಬಂದಂತೆ.

ಬಸಲೆ ಬಳ್ಳಿಯೊ ಭೂಮಿಯಿಂದ‌ ಮಿಸುಕಾಡಿ  ಮೊಳಕೆಯೊಡೆದು, ಸಣ್ಣ ಕೋಲಿನ ಬೆನ್ನು ಹತ್ತಿ ಬೆಳೆದು ಚಪ್ಪರ ಆವರಿಸಿದಂತೆ. ಹಾಗೆ ಅವರ ಕವಿತೆ ಅರಳುವ ಪರಿ. ಚಿಟ್ಟೆಯೊಂದು ಮನೆ ಅಂಗಳದ ಹೂ ಬಳ್ಳಿಯ ಸುತ್ತಿ, ಹೂ ಮಕರಂದ ಹೀರಿ, ಹಾರಿ ಹೋದಂತೆ… ಮನೆ ಎದುರಿನ ಬಯಲು, ಕಟ್ಟುವ ಮನೆ, ಅಲ್ಲಿ ಬಂದು‌ ಹೋಗುವವರು, ಮನೆಯ ಕಿಟಕಿ, ಚಿಟ್ಟೆ, ಹಕ್ಕಿ, ಮಳೆ, ಮಳೆಯ ಹನಿಗಳು, ಬಟ್ಟೆ ಒಣ‌ ಹಾಕಲು ಕಟ್ಟಿದ ಹಗ್ಗದ ಮೇಲೆ‌ ಸಾಲಾಗಿ‌ ಕುಳಿತು ಭೂಮಿಗೆ ಇಳಿವ ಮಳೆ ‌ಹನಿ ಸಾಲು, ನಲ್ಲಿ ನೀರು, ಹಳ್ಳದಿಂದ ಬಿಂದಿಗೆಯಲ್ಲಿ ನೀರು ಹೊತ್ತು ತರುವುದು, ಅಡಿಗೆ ಮನೆ, ಬಾವಿ ಕಟ್ಟೆ, ಕುಕ್ಕರ್, ಉಟ್ಟು ಬಿಟ್ಟ ಹಳೆಯ ಸೀರೆ, ಮಗಳ ಜೀನ್ಸ ತೊಟ್ಟ‌ ಸಂಭ್ರಮ…

ಹೀಗೆ ತನ್ನ ಸುತ್ತಣ ಜಗತ್ತನ್ನು ಕಾವ್ಯದ ವಸ್ತುವಾಗಿಸಿ, ಅದರಲ್ಲಿ ಧ್ವನಿ ಹೊರಡಿಸುವ ಶಕ್ತಿ,‌ ಕೌಶಲ್ಯ ಸ್ಮಿತಾ ಅವರಿಗಿದೆ. ಅವರಲ್ಲಿ ಅಕ್ಕ ಮಹಾದೇವಿಯೂ ಇದ್ದಾಳೆ, ನ್ಯೂಜಿಲೆಂಡ್ ಕವಯಿತ್ರಿ ಲ್ಯಾನ್ಗ್ ಲೀವ್ಹ ಸಹ ಇದ್ದಾಳೆ. ಸರಳ ಭಾಷೆಯಲ್ಲಿ ಚೆಂದ ರೂಪಕಗಳ ಮೂಲಕ ಕಾವ್ಯಕ್ಕೆ ಒಳದನಿ ಸೇರಿಸುವ ಸೊಗಸುಗಾರಿಕೆ‌ ಸ್ಮಿತಾ ಅವರಿಗೆ ಸಿದ್ಧಿಸಿದೆ. ಹೆಣ್ಣಿನ ಮನದ ಹಂಬಲ, ಹತಾಶೆ, ಕನಸು, ಆಶಾವಾದ, ಬಿಡುಗಡೆಯ ಹಂಬಲ, ಬಂಧನವನ್ನು ನಗುತ್ತಲೇ ದಾಟಿಸಿ ಬಿಡುವ ಹಾಗೂ ಸಾಧ್ಯತೆಗಳನ್ನು ಕನಸು ಅಶಯಗಳ ಬೆರಸಿ ತಮಗೆ ತಾವೇ ಸಮಾಧಾನ ಮಾಡಿಕೊಳ್ಳುವ ಇವರ ಕಾವ್ಯ ಮಾತೃಹೃದಯಕ್ಕೆ ತಟ್ಟುತ್ತದೆ. ಕಲ್ಲು ಹೃದಯಗಳ ಕರಗಿಸುವ ಕಸುವು ಸ್ಮಿತಾ ಅವರ ಭಾಷೆಗೆ, ಅವರ ಕವಿತೆಗಳಿಗೆ ಇದೆ.

ಸ್ಮಿತಾ ಅವರ ಈ ಕವಿತೆ ಗಮನಿಸಿ;

ಮೇಲಕ್ಕೊಮ್ಮೆ ಕೆಳಕ್ಕೊಮ್ಮೆ
ತೂಗಿದಷ್ಟೂ ತೂಗಿದಷ್ಟೂ
ಮೇಲಕ್ಕೂ ಏರುವುದಿಲ್ಲ; ಕೆಳಕ್ಕೂ ಇಳಿಯುವುದಿಲ್ಲ.
ಸಮತೋಲನದ ಸಮಭಾರವಂತೂ ಸದ್ಯಕ್ಕೆ ಸಾಧ್ಯವೇ ಇಲ್ಲವಾ…?
ಅತ್ತೊಮ್ಮೆ ಇತ್ತಮ್ಮೊ
ಮುಗಿಯದ ಶತಪಥ
(ಭೂಮಿ ತೂಗುವ ಹಕ್ಕಿ)

ಹೆಣ್ಣಿನ ಸ್ಥಿತಿಯನ್ನು ಎಷ್ಟೊಂದು ಅದ್ಭುತ ಸಾಲುಗಳಲ್ಲಿ ಹೇಳಿದ್ದಾಳೆ ಕವಯಿತ್ರಿ. ಉತ್ತರ ಕನ್ನಡ, ಕೊಡಗಿನ ಕಾಡಿನ‌ ಪಕ್ಕದ ಮನೆಗಳ ಹತ್ತಿರ ಕಾಣ ಸಿಗುವ ಭೂಮಿ ತೂಗುವ ಹಕ್ಕಿಯ ಕುರಿತು ಈ ಕವಿತೆ ಬರೆಯಲಾಗಿದೆ ಎಂಬುದು ಮೇಲ್ನೋಟ. ಆದರೆ ಧ್ವನಿ ಮತ್ತು ಹೋಲಿಕೆ ಹಾಗೂ ಅಂತರಂಗದ ದನಿ ನಮ್ಮ ಸಮಾಜದ ಹೆಣ್ಣಿನ ಪರಿಸ್ಥಿತಿ ಹೇಳುವುದೇ ಆಗಿದೆ.‌

ಅತ್ತ ಇತ್ತ ನಲಿಯುತ್ತಾ
ಪರ‍್ರೆನೆ ಹಾರಿದೆ ಹಕ್ಕಿ
ತೂಗಿ ಕೊಳುವ ಕಾತರತೆಯಲ್ಲಿ
ಮತ್ತೆ ರಚ್ಚೆ ಹಿಡಿದಿದೆ ಭೂಮಿ
(ಭೂಮಿ ತೂಗುವ ಹಕ್ಕಿ)

ಬದುಕಿನ ಪಯಣದಲ್ಲಿ ಕುಟುಂಬ ಎಂಬ ವ್ಯವಸ್ಥೆ ರಚ್ಚೆ ಹಿಡಿದು ; ಹಕ್ಕಿಯನ್ನು ಹಿಡಿದಿಟ್ಟಿದೆ ಎಂಬ ಧ್ವನಿ ಸಹ ಇಲ್ಲಿದೆ.

ಕಣ್ಣೆದುರು ಕಂಡಿದ್ದನ್ನು ರೂಪಕವಾಗಿಸಿ, ಚೆಂದ ಚಿತ್ರಗಳನ್ನು ಅಕ್ಷರಗಳಲ್ಲಿ ಬಿಡಿಸಿಡುವ, ಸೊಗಸುಗಾರಿಕೆ ಸ್ಮಿತಾ ಅವರ ಕವಿತೆಗಳಲ್ಲಿದೆ.

‘ಎದೆಯ ಕಾವು ಹೆಚ್ಚಾಗಿ
ತಕತಕನೆ ಕುಣಿದು
ಕೊತ ಕೊತನೆ ಕುದಿದು
ಪ್ರತಿಭಟನೆಯ ಕೂಗು ಓಣಿ ತಿರುವಿನವರೆಗೂ’

ಯೋಚಿಸುತ್ತಿದ್ದೇನೆ…
ಒಂದು ಬಾರಿ ರಿಪೇರಿ ಮಾಡಿಸಿ
ನೋಡಲೇ?
ಇಲ್ಲವೇ ಬದಲಾಯಿಸಿ ಬಿಡಲೇ?
( ಕುಕ್ಕರು ಈಗ‌ ಮೊದಲಿನಂತಿಲ್ಲ…)

ಈ ಕವಿತೆಯಲ್ಲಿ ಬಂಡಾಯವನ್ನಲ್ಲದೆ ಇನ್ನೇನು ಹುಡುಕಲು ಸಾಧ್ಯ. ಹೆಣ್ಣನ ಎದೆ ಕುಲುಮೆಯೂ ಹೌದು, ಕುಕ್ಕರೂ ಹೌದು ಎನ್ನುವುದು ಸೂಕ್ಷ್ಮಗ್ರಾಹಿಯಾಗಿ ಹೇಳಲಾಗಿದೆ.‌

‘ಕಿಟಕಿ – ಬಾಗಿಲು’ ಎಂಬ ಕವಿತೆಯಲ್ಲಿ…
ಮುಂಬಾಗಿಲು ಸದಾ
ದಿಡ್ಡಿಯಾಗಿ ತೆರೆದೇ
ಇರುತ್ತದೆ.
ಬೆಳಕು ಕಂದಿದ ಮೇಲಷ್ಟೇ
ಮುಚ್ಚಿಕೊಳ್ಳುತ್ತದೆ.

ಪುಣ್ಯಕ್ಕೆ ಪ್ರತೀ ಕೋಣೆಗಳಿಗೂ
ಪುಟ್ಟ ಪುಟ್ಟ ಕಿಟಕಿಗಳಿವೆ.
ಹೊರಕ್ಕೆ ನೋಡಲು ಹಾತೊರೆಯುವವರು
ಏನನ್ನೋ ನೋಡದೇ ಸಾಯುತ್ತಿದ್ದೇವೆ ಅಂತ
ಹಲುಬುತ್ತಾ ಶಾಪ ಹಾಕುವಂತಿಲ್ಲ.

ಗಾಳಿಯಷ್ಟೇ ಅಲ್ಲಿ ಒಳನುಗ್ಗುತ್ತಿದೆ…
ಅಗತ್ಯಕ್ಕಿಂತ ಜಾಸ್ತಿಯೇ ಸರಳುಗಳು ಬಿಗಿಯಲ್ಪಟ್ಟಿವೆ…

ಅಡ್ಡಕ್ಕೆ ಜೋಡಿಸಿದ ಪುಟ್ಟ ಕಟ್ಟಳೆ ಕಾವಲಂತೆ ಕಾಯುತ್ತಿದೆ… ಎಂಬ ಸಾಲುಗಳಲ್ಲಿ ಮನೆಯ ಕಿಟಕಿ ಬಾಗಿಲು ಮೂಲಕ ಹೆಣ್ಣಿನ ಆಸೆ ಹಂಬಲಗಳು, ಅದಕ್ಕಿರುವ ಬಂಧನಗಳನ್ನು ಧ್ವನಿಪರ‍್ಣವಾಗಿ ಹೇಳಲಾಗಿದೆ.

‘ನದಿ ದಿಕ್ಕು ಬದಲಿಸಿದೆ’ ಎಂಬ
ಕವಿತೆಯಲ್ಲಿ ನದಿ ಹೆಣ್ಣಿನ ಶಾಂತ‌ ಸ್ವಭಾವವೂ ಹೌದು. ಒಮ್ಮೊಮ್ಮೆ ಉಗ್ರರೂಪ ತಾಳಿ ಬದುಕನ್ನು ನಾಶ ಮಾಡಬಲ್ಲದು.‌ಅಂತಹ ಮುಖವಾಡ, ಒಳ ಬಂಡಾಯ ಹೆಣ್ಣಿನಲ್ಲಿಯೂ ಇದೆ ಎನ್ನುವ ಸಂದೇಶವನ್ನು ಕವಯಿತ್ರಿ ಸಮಾಜಕ್ಕೆ ರವಾನಿಸಿ ಬಿಡುತ್ತಾಳೆ. ಇದೇ ಸ್ಮಿತಾ ಅವರ ಕವಿತೆಯ ವೈಶಿಷ್ಟ್ಯವೂ ಆಗಿದೆ.

‘ತಪ್ಪನ್ನೆಲ್ಲಾ ಒಪ್ಪಿಕೊಂಡಂತೆ
ತೆಪ್ಪಗೆ ಹರಿಯುತ್ತಿದ್ದ ನದಿ…

ನನ್ನೂರಿನ ತಿಳಿ ನೀರಿನ‌
ನದಿ, ಈಗ ಕೆನ್ನೀರ ಕಡಲು

ದಿಕ್ಕಾಗಿದ್ದ ನದಿ ತಾನೇ ದಿಕ್ಕು ಬದಲಿಸಿ, ಕೆಂಪಗೆ ಹರಿವಾಗ
ದಿಕ್ಕು ಕಾಣದೆ ದಿಕ್ಕೆಟ್ಟ ‌ನಾನು

ಹರಿಯುವ ದಿಕ್ಕಿಗೆ ಮುಖ ಮಾಡವುದ ನಿಲ್ಲಿಸಿದ್ದೇನೆ.’

ಕೊಡಗಿನ ಪ್ರವಾಹವನ್ನು ಕವಯಿತ್ರಿ ಹೇಳುತ್ತಿದ್ದರೂ, ಪ್ರಕೃತಿ ಮೇಲಿನ‌ ಅತ್ಯಾಚಾರದಿಂದ, ಭಾರೀ ಮಳೆ ಸುರಿದು ಪ್ರವಾಹ ಬಂದು,‌ ಭೂ ಕುಸಿತದ ಚಿತ್ರಣ ಕವಿತೆಯಲ್ಲಿ ಇದ್ದರೂ, ನದಿ ಹೆಣ್ಣಿನ ಪ್ರತಿಮೆಯಾಗಿ ಬಂದಿರುವುದೇ ಕಾವ್ಯದ ಉದ್ದೇಶ. ಕವಯಿತ್ರಿ ಅಲ್ಲಿ ಹೇಳುವ ಧ್ವನಿ ಸಹೃದಯನಿಗೆ, ಕಾವ್ಯ ಓದುಗನಿಗೆ ದಕ್ಕುವ ಪರಿಯೇ ಭಿನ್ನ. ‘ಒಂದು ಖಾಲಿ ಜಾಗ’ ಕವಿತೆ ಸಹ ಹೆಣ್ಣನ್ನು ಸಂಕೇತವಾಗಿಟ್ಟೇ ಕವಯಿತ್ರಿ ಶಬ್ದದ ಆಳಕ್ಕೆ ಇಳಿಯುತ್ತಾಳೆ.‌ ಶಬ್ದಗಳಿಗೆ ಹೊಸ ಧ್ವ‌ನಿ, ಚಿತ್ರರೂಪಕ ಒದಗಿಸುವ, ‘ಏನನ್ನೋ ಹೇಳುತ್ತಾ ಇನ್ನೇನನ್ನೋ‌ ಧ್ವನಿಸುವಲ್ಲಿ ‘ಸ್ಮಿತಾ ಅವರ ಕವಿತೆಗಳು ಗೆಲುವು ಸಾಧಿಸುತ್ತವೆ. ಕವಿತೆ ಬರೆಯುವ ಹೆಣ್ಣುಮಕ್ಕಳಿಗೆ ಅಸೂಯೆ ಹುಟ್ಟಿಸುವ ಧ್ವನಿ‌ಶಕ್ತಿ ಈ ಕವಯಿತ್ರಿಗೆ ದಕ್ಕಿದೆ.

ಚಿತ್ರಕೃಪೆ: ಗೂಗಲ್

‘ತಿರುವು’ ಎಂಬ ಕವಿತೆ ಅಮ್ಮ ಮಗಳ ಬಟ್ಟೆ ಆಯ್ಕೆಯ ಜೊತೆಗೆ ಅದನ್ನು ಉಡುವಾಗ, ತೊಡುವಾಗ ನಡೆದ ಮಾತುಕತೆ ಕವಿತೆಯಾಗುವ ಪರಿಯಲ್ಲಿ ಗಮನಿಸಿ. ಹಾಗೂ ಸಮಾಜದ ಚಲನೆ ಹಾಗೂ ಬದಲಾವಣೆಯನ್ನು ಹೆಣ್ಣಿನ ಬಯಕೆಗಳ ಅಂತರಂಗವನ್ನು ಚೆಂದದಿ ಹೆಣೆಯಲಾಗಿದೆ. ಅಲ್ಲಿ ಹೊರಡುವ ಧ್ವನಿಯೂ ಹೆಣ್ಣಿನ ಕನಸು ಆಶಯಗಳನ್ನು ಹೇಳುವುದೇ ಆಗಿದೆ.

‘ಪ್ರಾಕಿನಿಂದ‌ ಮಿಡಿಗೆ, ಚೂಡಿದಾರದಿಂದ ಸೀರೆಗೆ
ಭಡ್ತಿ ಹೊಂದಲಿಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿರಲಿಲ್ಲವಲ್ಲ ನಮಗೆ?

ಸಿಕ್ಕಿದಷ್ಟು ಕೈ ಮತ್ತಷ್ಟು ಪಿನ್ನುಗಳಿಗೆ ತಡಕಾಡುವಾಗಲೇ ಎಲ್ಲಾ ಶುರುಗೊಂಡದ್ದು.

ಒಪ್ಪವಾಗಿ ಕರ‍್ತಾ ಧರಿಸಿ ಹೊಸ ಹವೆಗೆ ಒಡ್ಡಿಕೊಂಡಾಗಿನಿಂದ…
ಕಾಲ ತುಸು ಬಿಗು ಸಡಿಲಿಸಿದೆ ಅನ್ನುತ್ತಾರೆ ಹಾದಿ ಕೊನೆಯಲ್ಲಿ ನಿಂತವರು’

‘ಮಗಳು ಎದೆಯೆತ್ತರಕ್ಕೆ ಬೆಳೆದು ಅಪ್ಪನ ಕಿಸೆಯಿಂದಲೇ ನೋಟು ಎಣಿಸಿ, ಲೆಗಿನ್ ಟಾಪೊಂದು ಅಮ್ಮನ ಕೈಯೊಳಗಿತ್ತು ತೊಟ್ಟುಕೋ! ಅಂತ ಫರ‍್ಮಾನು ಹೊರಡಿಸಿದ್ದು ತೀರಾ ಇತ್ತೀಚಿನ ಬೆಳವಣಿಗೆ.

ಯಾವ ಕಮೆಂಟುಗಳೇ ಇಲ್ಲದೆ ನಾನೊಂದು ಜೀನ್ಸ್‌ ತೊಡುವಂತಾದರೇ…? ಮಹಿಳಾ ದಿನದಂದೇ ಒಳಗೊಳಗೆ ಹಲುಬುತ್ತಾ ಸೀರೆ ಸುತ್ತುತ್ತಾಳೆ ಆಕೆ…’

ಹೀಗೆ ಸ್ಮಿತಾ ಅವರ ಕವಿತೆಗಳು ತಣ್ಣನೆಯ ಬಂಡಾಯವನ್ನು ಮೆಲುದನಿಯಲ್ಲಿ ತನ್ನೊಳಗೆ ದಾಖಲಿಸುತ್ತವೆ.

‘ಬೇಲಿ’ ಎಂಬ ಕವಿತೆಯಲ್ಲಿ
ಹಬ್ಬುವ ಬಳ್ಳಿಗೆ ಯಾವ ಬೇಲಿ?
ಹಬ್ಬುತ್ತಲೇ ಇತ್ತು
ಹಬ್ಬುತ್ತಲೇ ಹೋಯಿತು
ಆಚೆ ಈಚೆ ಎಲ್ಲ ಬದಿಯ
ಬೇಲಿಗಳನ್ನು ದಾಟಿ ಅಚಾನಕ್
ಹೆಸರಿಲ್ಲದ ಹೂವೊಂದು ಇಣುಕಿತು…

ಹೀಗೆ ಕವಿತೆಗಳು ಸಹೃಯದನನ್ನು ತಟ್ಟನೆ ಸೆಳೆಯುತ್ತವೆ. ಕವಿತೆ ಚಿಟ್ಟೆಯಾಗಿ ಧ್ಯಾನವಿಟ್ಟು ಪದ ಹೊಸೆವ ಕಲೆ ಕವಯಿತ್ರಿಗೆ ಸಿದ್ಧಿಸಿದೆ. ಮಿಣುಕು ಹುಳುಗಳು ಬೆಳಕ ಹುಂಡಿ ಕಟ್ಟಿಕೊಂಡು ಹಾರುವುದು, ಬೆಳಕಿನ ಕೌದಿ ನೇಯುವುದು, ಕತ್ತಲ ಹಾದಿ ವಿಸ್ತರಿಸುವುದು, ಎವೆಯಿಕ್ಕದೆ ನೋಡುತ್ತಾ ಕುಳಿತ ಕವಿತೆಯ ರೆಪ್ಪೆ ಸೋಲುತ್ತಿದೆ ,ಮುಚ್ಚಿಕೊಂಡ ಕಣ್ಣ ಪಾಪೆಯೊಳಗೆ ಬೆಳಕಿನ ಬೀಜಗಳು ತುಂಬಿಕೊಳ್ಳುತ್ತವೆ ಎನ್ನುವ ಕವಯಿತ್ರಿ ಕನ್ನಡ ಕಾವ್ಯ ಪರಂಪರೆಗೆ ಹೊಸ ದಾರಿಯೊಂದನ್ನು ತೆರೆದಿಡುತ್ತಾಳೆ.

ಪುಟ್ಟ ಹಳ್ಳಿಯಲ್ಲಿ ಕುಳಿತು, ತನ್ನ ಸುತ್ತಣ ಜಗತ್ತು ನಿರುಕಿಸುತ್ತಾ, ಸೂಕ್ಷ್ಮ ಕಣ್ಣಿನಿಂದ, ಮಗುವಿನ ಬೆರಗಿನಿಂದ,‌ ಬುದ್ಧನ ಅಂತಃಕರಣದಿಂದ ಕಾವ್ಯ ಹೊಸೆಯುವ‌ ಸ್ಮಿತಾ ಅಮೃತರಾಜ್ ಮಾತು ಮೀಟಿ ಹೋಗುವ ಹೊತ್ತಿನಲ್ಲಿ ಮರವಾಗುವುದು ಹೀಗೆಂದು ಹೆಣ್ಣುಮಕ್ಕಳಿಗೆ ಕಿವಿಯಲ್ಲುಸಿರಿದ್ದಾರೆ‌. ಪುರುಷಾಹಂಕಾರವನ್ನು ಸಣ್ಣಗೆ ಚಿವುಟಿದ್ದಾರೆ‌. ಹೊಸ ತಿರುವುನಲ್ಲಿ ನಿಂತು ಹೊಸ ದಿಕ್ಕಿನಲ್ಲಿ ಸಾಗುವ ಸುಳಿವು ನೀಡಿದ್ದಾರೆ.

‍ಲೇಖಕರು Avadhi

February 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಒಂದು ಅಪೂರ್ವ ಆತ್ಮಕಥೆ – ‘ಬೊಪ್ಪ ನನ್ನನ್ನು ಕ್ಷಮಿಸು’

ಒಂದು ಅಪೂರ್ವ ಆತ್ಮಕಥೆ – ‘ಬೊಪ್ಪ ನನ್ನನ್ನು ಕ್ಷಮಿಸು’

ನಾ ದಿವಾಕರ‌ ಒಬ್ಬ ವ್ಯಕ್ತಿಯ ಬದುಕು ರೂಪಿಸುವಲ್ಲಿ ಬಾಲ್ಯ ಮತ್ತು ಯೌವ್ವನ ಮಹತ್ತರ ಪಾತ್ರ ವಹಿಸುತ್ತವೆ. ನಾವು ಬೆಳೆದ ಪರಿಸರ, ನಮ್ಮ ಸುತ್ತಲೂ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This