ಹೆಣ್ಣಿನ ಮೇಲೆ ’ಭಯೋತ್ಪಾದನೆ’ ಹೆಚ್ಚಾಗುತ್ತಿದೆ – ವೈದೇಹಿ Counters

ಹೆಣ್ಣಿನ ಮೇಲೆ ’ಭಯೋತ್ಪಾದನೆ’ ಹೆಚ್ಚಾಗುತ್ತಿದೆ

ದ ಸ೦ಡೆ ಇ೦ಡಿಯನ್ ಗಾಗಿ ಎನ್.ಕೆ. ಸುಪ್ರಭಾ ನಡೆಸಿದ ಸಂದರ್ಶನ

  ಮಹಿಳೆಯರು ಬರೆದ ಸಾಹಿತ್ಯಕ್ಕಿಂತ ನನ್ನ ಸಾಹಿತ್ಯ ಶ್ರೇಷ್ಠವಾಗಿದೆ ಎಂದು ವಿ.ಎಸ್. ನೈಪಾಲ್ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಮಹಿಳಾ ಸಾಹಿತಿಯಾಗಿ ಮತ್ತು ಒಬ್ಬ ಮಹಿಳೆಯಾಗಿ ನೀವು ಏನು ಹೇಳುವಿರಿ? ಮುದುಕರಾದಾಗ ಅಂತಹ ದೊಡ್ಡ ಲೇಖಕರ ಯೋಚನಾಕೋಶಗಳೂ ನಶಿಸುತ್ತವಲ್ಲ. ಆಶ್ಚರ್ಯ ಅನಿಸುತ್ತಿದೆ. ಅವರ ಈ ತರಹದ ಮಾತುಗಳಿಗೆ ಹೆಚ್ಚು ಗಮನ ಕೊಡದಿರುವುದೂ ವಿರೋಧದ ಒಂದು ವಿಧಾನವಷ್ಟೆ. ಆದರೆ ವಯಸ್ಸಾದ ಎಲ್ಲರೂ ಹೀಗೆ ಇರೊಲ್ಲ; ಉದಾ: ನೋಡಿ, ನಮ್ಮ ಮಾಸ್ತಿಯವರು, ನೂರಕ್ಕೆ ಹತ್ತಿರವಾದಾಗಲೂ ಒಂದೇ ಒಂದು ಐಲು ಮಾತು ಆಡಿದ್ದಿಲ್ಲ. ಅವರ ಚಿಂತನಾ ಶಕ್ತಿ ಕುಂದಿರಲಿಲ್ಲ. ಹೇಗೆ ಸ್ಪಷ್ಟವಾಗಿ ಸಂವೇದನಾಪೂರ್ವಕವಾಗಿ ಡಿಗ್ನಿಟಿಯಿಂದ ಮಾತನಾಡುತ್ತಿದ್ದರು ಅವರು! ಮಹಿಳಾ ಸಾಹಿತ್ಯ ಅಥವಾ ಮಹಿಳೆಯರಿಗಾಗಿ ಸಾಹಿತ್ಯ ಎಂದ ಕೂಡಲೇ ಅಡುಗೆ, ಫ್ಯಾಷನ್ ಎಂದೇ ಪರಿಗಣಿಸುತ್ತಿರುವ ಪತ್ರಿಕೆಗಳ ಬಗ್ಗೆ? ಊಹುಂ ಕೇವಲ ಅಷ್ಟಕ್ಕೇ ಆದರೆ ಅದಕ್ಕೆ ನನ್ನ ಓಟಿಲ್ಲ. ಮಹಿಳಾ ಸಾಹಿತ್ಯ ಎಂದರೆ ಕೇವಲ ಅವಷ್ಟೇ ಅಲ್ಲವೇ ಅಲ್ಲ. ಆದರೆ ಅವೂ ಕೂಡ ಸೇರಿವೆ ಎಂದು ಗರ್ವದಿಂದಲೂ ಗೌರವದಿಂದಲೂ ಹೇಳಬಯಸುತ್ತೇನೆ. ಕಾಲಾಂತರದ ಬದಲಾವಣೆಗಳ ಪರಿಣಾಮವಾಗಿ ಪುರುಷರಲ್ಲಿಯೂ ಪಾಕನೇತ್ರ ತೆರೆದುಕೊಳ್ಳುತ್ತಿದೆ. ಆ ಪುಟವನ್ನು ಹಳೆಯ ವಿನ್ಯಾಸದಲ್ಲೇ ರೂಪಿಸುವ ಬದಲು ವಿವಿಧ ದೇಶ, ರಾಜ್ಯ, ಸಮುದಾಯ, ಬುಡಕಟ್ಟುಗಳ ಅಡುಗೆ, ಊಟ, ಬಡಿಸುವ ರೀತಿ, ಉಣ್ಣುವ ಕ್ರಮ ಇನ್ನಿತರ ನಾನಾ ವಿವರಗಳ ಸಹಿತ, ಸಮಗ್ರ ಮಾಹಿತಿಪೂರ್ವಕ ರೂಪಿಸಿದರೆ ಅದು ನಿಶ್ಚಯವಾಗಿಯೂ ಆಸಕ್ತಿಯುಳ್ಳ ಸ್ರ್ತೀಪುರುಷರೆಲ್ಲರ ಪುಟವಾಗುತ್ತದೆ. ನಮ್ಮ ರಾಜವಾಡೆಯವರು ’ಸುಪ್ರಭಾತ’ ಪತ್ರಿಕೆಯಲ್ಲಿ ಒಂದು ವರ್ಷ ನಡೆಸಿದ ಅಡುಗೆ ಪುಟದಲ್ಲಿ ಅಂದಿನ ಹೊಸ ಶೋಧನೆಗೆ ಹಾಗೂ ನಿಲುಕಿಗೆ ತಕ್ಕಂತೆ ಪ್ರಯೋಗ ನಡೆಸಿದ್ದರಂತೆ. (ಸರಸ್ವತೀ ಬಾಯಿ ರಾಜವಾಡೆ ಅವರ ’ಮುಂತಾದ ಕೆಲ ಪುಟಗಳು’, ಪುಟ ೫೩) ಅದಕ್ಕೆ ಓದುಗರ ಪ್ರಶ್ನೆಗಳೂ ಬರುತಿದ್ದವಂತೆ. ಫ್ಯಾಶನ್ ಅನ್ನು ನಾವು ನಿರಾಕರಿಸುವಂತಿಲ್ಲ. ತಪ್ಪು ಎಲ್ಲಿರುವುದು ಎಂದರೆ- ಇದೇ ನಮ್ಮ ಪ್ರಪಂಚ, ಅದನ್ನು ಬಿಟ್ಟು ಬೇರೆ ಇಲ್ಲ ಅಂತ ಗಣಿಸುವಲ್ಲಿ. ಆಯಾ ಕಾಲ ತನಗೆ ಹೊಂದುವ ಫ್ಯಾಶನ್‌ಗೆ ಯಾರೂ ಹೇಳದೆಯೂ ಆದೇಶಿಸದೆಯೂ ಒಂದು ಪರೋಕ್ಷ ಗೆರೆಮಿತಿ ಹಾಕಿ ಬಿಡುತ್ತದೆ. ಆ ಗೆರೆಯ ಮಿತಿಯನ್ನು ಮಿತಿಯಿಲ್ಲದೆ ಅತಿಮೀರುವ ಮಹಿಳಾಪತ್ರಿಕೆಗಳು ಮಹಿಳೆಯರನ್ನು ಛೇಡಿಸಿದಂತೆ, ಅವಮಾನಿಸಿದಂತೆ. ಒಮ್ಮೊಮ್ಮೆ ಅವು ಇದೆಲ್ಲ ಪುರುಷ ಓದುಗರಿಗಾಗಿಯೇ ರಚಿತವಾಗಿಯೋ ಎಂದು ಗುಮಾನಿ ಬರುವಷ್ಟು ಎರ್ರಾಬಿರ್ರಿ ಇರುತ್ತವೆ. ಆಗ ಕಡುಬೇಸರವಾಗುತ್ತದೆ. ಮಹಿಳಾ ಪತ್ರಿಕೆಗಳೇ ಎಚ್ಚರವನ್ನು ಕೊಂದುಕೊಂಡರೆ ಹೇಗೆ? ಮಹಿಳಾ ಸಾಹಿತ್ಯವೆಂದರೆ ಹೇಗಿರಬೇಕು? ಹೇಗಿರಬೇಕು ಎನ್ನುವ ಪ್ರಶ್ನೆಯೇ ಇಲ್ಲ. ಇದಕ್ಕೆದುರಾಗಿ ’ಪುರುಷ ಸಾಹಿತ್ಯ’ ಹೇಗಿರಬೇಕು ಎಂದು ಪ್ರಶ್ನಿಸಿದರೆ, ಉತ್ತರವಿದೆಯೆ? ಹಾಗೆ. ಬೇಕಾದರೆ ಮಕ್ಕಳ ಸಾಹಿತ್ಯ ಹೇಗಿರಬೇಕು ಎಂದು ಕೇಳಬಹುದು ಮತ್ತು ಹೇಳಬಹುದು, ವಿವರಿಸಬಹುದು. ಕಲೆಯ ಮಾತು ಬಂದಾಗ ನಿಸ್ಸಂಶಯವಾಗಿಯೂ ಕಲಾಕಾರರ ’ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ’. ಬರೆವ ಹೊತ್ತಲ್ಲಿ ನಾನು ಹೆಣ್ಣೂ ಅಲ್ಲ, ಗಂಡೂ ಅಲ್ಲ. ಆದರೂ ಭೌತಿಕವಾಗಿ ಈ ದೇಹದಲ್ಲಿ ಇರುವುದರಿಂದ ನನ್ನದೇ ಆದ, ಜೈವಿಕವಾಗಿ ಅಯಾಚಿತವಾಗಿ ಲಭ್ಯವಾದ, ಕೆಲವು ಭಿನ್ನ ಸಂವೇದನೆಗಳಿವೆ. ಆದ್ದರಿಂದ ಅಭಿವ್ಯಕ್ತಿ ಸ್ವರೂಪವೂ ಭಿನ್ನವಾಗುತ್ತದೆ. ನಮಗೆ ನಮ್ಮ ನಮ್ಮ ಬದುಕು ದಕ್ಕಿಸಿಕೊಟ್ಟ ಭಾಗವನ್ನಷ್ಟೆ ನಾವು ಅನುಭವಿಸುತ್ತೇವಲ್ಲವೆ? ಅವರವರು ನಿಲ್ಲುವ ಜಾಗಕ್ಕನುಸರಿಸಿ ಅನುಭವಕ್ಕನುಸರಿಸಿ ಅವರವರ ಸಾಹಿತ್ಯ. ಹಾಗಿದ್ದರೆ ಇಂದಿನ ಮಹಿಳಾ ಸಾಹಿತಿಗಳ ಮುಂದಿರುವ ಸವಾಲುಗಳೇನು? ಆಕೆ ಬರೆಯುವುದೇ ಒಂದು ಸವಾಲು. ಬರೆಯುವುದೆಂದರೇನು? ಮನಸ್ಸುಗಳೊಂದಿಗೆ ನಡೆಸುವ ಸಂವಾದವಷ್ಟೆ? ಅದು ಬರಹಗಾರರು ಸ್ವತಃ ತಮ್ಮೊಂದಿಗೆ ನಡೆಸುವ ಸಂವಾದವೂ, ಸ್ವಗತವೂ. ಎಂತಲೇ ಪ್ರಾಮಾಣಿಕವಾಗಿ, ಸತ್ಯವಾಗಿ ಬರೆಯವುದು. ತನ್ನಷ್ಟಕ್ಕೇ ತನ್ನೊಳಗೆ ನಡೆಯುವ ಸೆನ್ಸಾರನ್ನು ಗಮನಿಸಿಕೊಂಡು, ಅದರೊಂದಿಗೆ ಮುಖಾಮುಖಿಯಾಗಿ ಸಾಮಾಜಿಕ ಜವಾಬ್ದಾರಿಯನ್ನು ಮರೆಯದೆ, ನಿರ್ಭಿಡೆಯೊಂದಿಗೆ ಬರೆದುಕೊಂಡು ಹೋಗುವುದು ಇನ್ನೊಂದು ಸವಾಲು. ಹೀಗೆ ಸವಾಲುಗಳು ಏಕವಲ್ಲ, ಅನೇಕ. ಇಂದಿನ ಮಹಿಳಾ ಸಾಹಿತಿಗಳ ಚಿಂತನೆಯ ಮೇಲೆ ಪರಿಣಾಮ ಬೀರುವ ಅಂಶಗಳೇನು? ಎಂದಿನಿಂದಲೂ ಇದೇ; ಸಮಾಜ ತನ್ನನ್ನು ನೋಡುವ ದೃಷ್ಟಿಕೋನವೇ ಆಕೆಯನ್ನು ನಿರಂತರ ಯೋಚನೆಗೆ ಹಚ್ಚುತ್ತಿದೆ. ತಾನಿನ್ನೂ ಎರಡನೆಯ ದರ್ಜೆ ಪ್ರಜೆಯೇ ಸೈಯೆ? ’ಪೊಣ್‌ಜೋಕುಲು’ ಎಂಬ ಶಬ್ದದಲ್ಲಿನ ಸದರದ ’ಸೌಂಡ್’ ಕಂತುವುದು ಎಂದಿಗೆ? ಈಗೀಗಂತೂ ಹೆಣ್ಣಿನ ದೇಹವೇ ಅವಳಿಗೆ ಶತ್ರುವಾಯಿತೆ ಎಂದು ಚಿಂತಿಸುವಷ್ಟು ಒಂದು ಬಗೆಯ ’ಭಯೋತ್ಪಾದನೆ’ ವಿಪರೀತ ಹೆಚ್ಚುತ್ತಿದೆ. ಈ ರೀತಿಯ ಭಯದ ನಿವಾರಣೆ ಹೇಗೆ? ತಲ್ಲಣಕ್ಕೆ ದಿನನಿತ್ಯ ಕೇಳುವ ಓದುವ ನೋಡುವ ನಾನಾ ವಿಕೃತಿಗಳೇ ಸಾಕಲ್ಲವೆ. ಆಕೆಯ ಬದುಕಿನ ಬಾಗಿಲು ಒಂದೆಡೆ ತೆರೆದಂತೆ ಕಾಣುವುದು, ಕಾಣುವುದು ಮಾತ್ರ. ಇನ್ನೊಂದೆಡೆ ಅದು ಅಗೋಚರವಾಗಿ ಮುಚ್ಚಿಕೊಳ್ಳುತ್ತಲೂ ಇದೆ. ಆಧುನಿಕ ಎನಿಸಿಕೊಂಡ ಪ್ರಪಂಚ, ಬಾಹ್ಯ ಉಡುಗೆ ತೊಡುಗೆ ಮಾತ್ರ ಬದಲಾಯಿಸಿಕೊಂಡು, ಆದಿಮ ಸ್ಥಿತಿಯಲ್ಲೇ ಇದೆ. ಇದಕ್ಕೆಲ್ಲ ಮುಕ್ತಾಯ ಎಂದು? ಇದು ಅಂದಿನಿಂದ ಇಂದಿಗೂ ಅವಳನ್ನು ಕಾಡುವ ಹಲವು ಅಂಶಗಳಲ್ಲಿ ಮುಂದುವರಿದುಕೊಂಡೇ ಬಂದ ಒಂದಂಶ ಅಷ್ಟೆ.   ಪ್ರತ್ಯೇಕ ಮಹಿಳಾ ಸಮ್ಮೇಳನ ಅಥವಾ ಗೋಷ್ಠಿಗಳು ನಡೆಯಬೇಕೆ ಬೇಡವೇ ಎಂಬ ಚರ್ಚೆ ಹಲವಾರು ಕಡೆ ಕೇಳಿ ಬಂದಿದೆ. ನಿಮ್ಮ ಅಭಿಪ್ರಾಯವೇನು? ಪ್ರತ್ಯೇಕ ಗೋಷ್ಠಿಯೇ ಮಾಡುವುದಾದರೆ ಅಲ್ಲಿ ಪುರುಷ ಸಾಹಿತ್ಯ ಗೋಷ್ಠಿ ಅಂತಲೂ ಇರಲಿ. ಇಲ್ಲವಾದರೆ ಮುಖ್ಯ ಸಾಹಿತ್ಯವೆಂದರೆ ಪುರುಷರದು ಮಾತ್ರ, ಉಳಿದೆಲ್ಲವೂ ಉಪ ಎಂದಂತಲ್ಲವೆ? ಅದೆಷ್ಟು ಮೂರ್ಖ ಅಭಿಮತ! ಒಂದು ಕಾಲಘಟ್ಟದಲ್ಲಿ ಆ ರೀತಿಯ ಪ್ರತ್ಯೇಕ ವೇದಿಕೆ ಬೇಕಿತ್ತು ನಿಜ. ಅದುವರೆಗಿನ ಅಶ್ರುತ ವಲಯದಿಂದ ಧ್ವನಿಗಳು ನಿಧಾನವಾಗಿ ಮೂಲೆಮೂಲೆಯಿಂದ ಎದ್ದು ಕೇಳಿಬರುತ್ತಿದ್ದ ಹಂತವದು. ಪ್ರತ್ಯೇಕ ಸಮ್ಮೇಳನ, ಗೋಷ್ಠಿಗಳು ಬೇಕು ಅಂತ ಪ್ರಬಲವಾಗಿ ಮತ್ತು ಅಂದಿನ ಅಗತ್ಯಕ್ಕೆ ತಕ್ಕಂತೆ ಅನಿಸಿದ ಕಾಲ. ಆದರೆ ಅದೀಗ ಬದಲಾಗಿದೆ. ಮಹಿಳಾ ಸಾಹಿತ್ಯ, ದಲಿತ ಸಾಹಿತ್ಯ ಇನ್ನು ಏನೇನು ಸಾಹಿತ್ಯ ವಿಭಾಗಗಳಾಗಿವೆಯೋ ಆ ವಿಂಗಡಣೆ ಈಗ ಬೇಕಿರುವುದು ಅಧ್ಯಯನಕ್ಕೆ. ಸಂಶೋಧನಾ ಉದ್ದೇಶಕ್ಕಷ್ಟೇ. ಅದರೊಂದಿಗೆ ಪುರುಷ ಸಾಹಿತ್ಯ ಎಂಬ ವಿಭಾಗ ತೆರೆದು ಅಲ್ಲಿನ (ವಿಶೇಷತಃ ಮಹಿಳೆಯರ ಕುರಿತಾದ) ಸೂಕ್ಷ್ಮತೆ ಅಸೂಕ್ಷ್ಮತೆಯ, ಘನತೆ ಮತ್ತು ಅ-ಸಹ್ಯಗಳ ಕುರಿತು ಈಗ ಇರುವುದಕ್ಕಿಂತಲೂ ಸುದೀರ್ಘ ಚರ್ಚೆ ಆಗಬೇಕಿದೆ. ಇಂದು ಕನ್ನಡದಲ್ಲಿ ಬರುತ್ತಿರುವ ಅನುವಾದ ಸಾಹಿತ್ಯದಲ್ಲಿ ಬಹುಪಾಲು ಜೊಳ್ಳು ಎನ್ನಲಾಗುತ್ತಿದೆ? ಅನುವಾದ ಸುಲಭವಲ್ಲರೀ. ಒಂದು ಭಾಷೆಯ ವ್ಯಕ್ತಿತ್ವವನ್ನು ಇನ್ನೊಂದು ಭಾಷೆಯ ಮೂಸೆಯೊಳಗೆ ತಂದು ಮೂಲ ಭಾಷಾ ಹೊಳಪು ಕಳೆಯದೆಯೂ ಇಲ್ಲಿನದೇ ಅನಿಸುವ ಹಾಗೆ ಮರುಸೃಜಿಸುವ ಕಲೆ ಅದು. ಹಾಗೆ ಆಗದಿದ್ದಲ್ಲಿ ಅನುವಾದಿತ ಕೃತಿ ಓದಿಸಿಕೊಳ್ಳುವ ಗುಣ ಕಳೆದುಕೊಳ್ಳುತ್ತದೆ. ಅನುವಾದ ಚೆನ್ನಾಗಿಲ್ಲ ಎಂದರೆ ಎರಡು ಪುಟ ಓದಲಾಗದು. ಅನೇಕ ಇಂತಹ ಅನುವಾದಗಳಿವೆ, ನಿಜ. ಆದರೆ ಒಳ್ಳೆಯ ಅನುವಾದಗಳೂ ಇವೆ. ಅನುವಾದಕರೂ ಇದ್ದಾರೆ. ಒಂದು ಉದಾಹರಣೆ ಕೊಡಬೇಕೆಂದರೆ ಮಲೆಯಾಳಂನಿಂದ ಕನ್ನಡಕ್ಕೆ ಅನುವಾದಿಸುವ ನಮ್ಮ ಕೆ. ಕೆ. ನಾಯರ್. ಅಶೋಕ ಕುಮಾರ್, ಡಾ | ಪಾರ್ವತಿ ಐತಾಳ್ ಮುಂತಾದವರು. ಕಂಬಾರರಿಗೆ ಜ್ಞಾನಪೀಠ ಪುರಸ್ಕಾರ ಬಂತು. ಈ ಬಾರಿ ಸರಕಾರ ಕೂಡ ಅದನ್ನು ಗುರುತಿಸಿ ಸಮ್ಮಾನಿಸಿತು. ಏನನ್ನಿಸುತ್ತದೆ. ಭಾರೀ ಸಂತೋಷ ಅನ್ನಿಸುತ್ತಿದೆ. ಕಂಬಾರರು ಈ ನೆಲದ ಅಪ್ಪಟ ಸಾರವನ್ನೇ ಸಾಹಿತ್ಯದಲ್ಲಿ ಸೃಜನಾತ್ಮಕವಾಗಿ ಅತ್ಯಪೂರ್ವ ರೀತಿಯಲ್ಲಿ ದುಡಿಸಿದವರು. ದೇಸೀತನದಲ್ಲೇ ವಿಶಿಷ್ಟತೆ ಮೆರೆದ ಸಾಹಿತಿ. ಅವರಿಗೆ ಜ್ಞಾನಪೀಠ ಪುರಸ್ಕಾರ ಎಂದರೆ ಕನ್ನಡದ ದೇಸೀ ಸತ್ವಕ್ಕೇ ರಾಷ್ಟ್ರಮಟ್ಟದ ಗೌರವ ಸಂದಂತೆ. ಸರಕಾರ ಅದನ್ನು ಗುರುತಿಸಿದ್ದು ಕನ್ನಡಿಗರೆಲ್ಲರಿಗೆ ಬಹಳ ಹರ್ಷದ ಸಂಗತಿ. ಜೊತೆಗೆ ಒಂದು ಆಶ್ಚರ್ಯ, ಏನೆಂದರೆ ಈ ವರ್ಷ ಏಷ್ಯಾದ ನೊಬೆಲ್ ಪಾರಿತೋಷಕ ಎನಿಸಿದ ಮ್ಯಾಗ್ಸೇಸೇ ಪುರಸ್ಕೃತ ಹರೀಶ ಹಂದೆಯವರು ನಮ್ಮ ರಾಜ್ಯದವರು. ಅಪ್ಪಟ ಕನ್ನಡಿಗರು. ಈ ನಾಡಿಗೆ ಅವರು ತಂದ ಇಷ್ಟು ದೊಡ್ಡ ಮಟ್ಟದ ಗೌರವ, ಅವರ ಸಾಧನೆ, ಸರಕಾರದ ಗಮನಕ್ಕೇ ಬರಲಿಲ್ಲವೇಕೆ? ಅಷ್ಟೇ ಅಲ್ಲ, ಈ ವರ್ಷ ವಿಜ್ಞಾನ ಕ್ಷೇತ್ರದಲ್ಲಿ ರಾಷ್ಟ್ರೀಯಮಟ್ಟದ ಅತ್ಯುನ್ನತ ಪ್ರಶಸ್ತಿಯಾದ ’ಶಾಂತಿಸ್ವರೂಪ ಭಟ್ನಾಗರ್’ ಪ್ರಶಸ್ತಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಯು. ರಾಮಮೂರ್ತಿ, ಕೆ. ನಾರಾಯಣ ಸ್ವಾಮಿ ಬಾಲಾಜಿ, ಮತ್ತು ಜವಾಹರ್ ಅಡ್ವಾನ್ಸ್ಡ್ ಸೈನ್ಸ್ ಸೆಂಟರ್‌ನ ಬಾಲಸುಬ್ರಮಣ್ಯಂ ಸುಂದರಂ ಅವರಿಗೆ ಸಂದಿದೆ. ಕನ್ನಡದ ಈ ಅಪ್ರತಿಮ ಸಾಧಕರೆಲ್ಲರನ್ನೂ ಸರಕಾರ ಗೌರವಿಸಬೇಕಲ್ಲವೆ? ಯಾಕೆ ಗಮನಿಸದಂತಿದೆ? ಯಾಕೆ ಕಡೆಗಣಿಸಿದೆ? ಅಚ್ಚರಿಯಾಗುತ್ತಿದೆ. ಇದು ನಾಡಿನ ಸಾಧಕ ಮಕ್ಕಳಿಗೆ ಸರಕಾರವೇ ಪಕ್ಷಪಾತ ಮಾಡಿದಂತಲ್ಲವೆ? ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಅಣ್ಣಾ ಹಜಾರೆ ಚಳವಳಿ ಬಗ್ಗೆ ಪರ-ವಿರೋಧ ವಾದಗಳಿವೆ. ನೀವು ಈ ಚಳವಳಿಯನ್ನು ಹೇಗೆ ನೋಡುವಿರಿ? ಅಣ್ಣಾ ಹಜಾರೆಯ ಚಳವಳಿಯಲ್ಲಿ ಇನ್ನೂ ಅನೇಕ ವಿಚಾರಗಳು ಸೇರಬೇಕಿತ್ತು, ಅವರೊಂದಿಗೆ ಸೇರಿದವರಲ್ಲಿ ಭ್ರಷ್ಟರಿದ್ದಾರೆ ಅಂತೆಲ್ಲಾ ಕೇಳುತ್ತೇವೆ. ಆದರೆ ಇಂಡಿಯ ಅಂದೊಡನೆ ಯಾವ ಜನರು ಕಣ್ಮುಂದೆ ಬರುತ್ತಾರೋ ಆ ಜನರ ಅದರಲ್ಲಿಯೂ ಅಸಂಖ್ಯ ಯುವಜನರ ದೊಡ್ಡ ಸಮೂಹವೇ, ಅವರ ಚಳವಳಿಯಲ್ಲಿತ್ತು. ಅಂದರೆ ದೇಶ ಭ್ರಷ್ಟಾಚಾರ ವಿರುದ್ಧದ ಅಂಥದೊಂದು ದೊಡ್ಡ ಧ್ವನಿಗಾಗಿ ಎಷ್ಟು ಆರ್ತವಾಗಿ ಕಾದಿತ್ತು ಎಂಬುದು ಸೂಚಿತವಾಯ್ತಲ್ಲವೆ? ಅಲ್ಲದೆ ಅಣ್ಣಾ ಜತೆ ನಮ್ಮೆಲ್ಲರ ಅಚ್ಚುಮೆಚ್ಚಿನ ಹೋರಾಟಗಾರ್ತಿ ಮೇಧಾ ಪಾಟ್ಕರ್ ಇದ್ದರು, ನಮ್ಮ ಸಂತೋಷ ಹೆಗ್ಡೆ ಇದ್ದರು. ಇದನ್ನೂ ಗಣಿಸಬೇಕು. ಲೋಪದೋಷ ಹುಡುಕುವುದರಲ್ಲಿಯೇ ಕಾಲಕಳೆದು ಮಾತಿನ ದುಂದುವೆಚ್ಚದಲ್ಲಿ ನಾವು ಚಳವಳಿಯ ಉದ್ದೇಶದ ಈಡೇರಿಕೆಗೆ ಧಕ್ಕೆ ತರಕೂಡದು ಅಲ್ಲವೆ? ಏನೇ ಇರಲಿ, ಅಣ್ಣಾ ಹಜಾರೆಯ ಚಳವಳಿಯಿಂದಾಗಿ ಇಂದು ಭ್ರಷ್ಟರು ಮತ್ತು ಭ್ರಷ್ಟರಾಗಿಸುವವರು, ಸರಳವಾಗಿ ಹೇಳಬೇಕೆಂದರೆ ಕೊಡುವವನು ಮತ್ತು ತೆಗೆದುಕೊಳ್ಳುವವನು, ನೈತಿಕತೆ ಬಗ್ಗೆ ಆಲೋಚಿಸುವಷ್ಟು, ಕೆಟ್ಟುಹೋಗಲು ತುಸು ತಡವರಿಸುವಷ್ಟು, ಒಳಗೊಳಗೇ ಭಯಪಡುವಷ್ಟು ಎಚ್ಚರವಾದರೂ ಬಂದಿದೆ. ಒಬ್ಬ ಸಚಿವ ಅವರ ಪುತ್ರ ಜೈಲು ಸೇರಿದ್ದಾರೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮೇಲೆ ಎಫ್‌ಐಆರ್ ಕೂಡ ದಾಖಲಾಗಿದೆ. ಆಡಳಿತ ನಡೆಸುವವರ ಕಡೆಯಿಂದ ಇಂಥ ನಡವಳಿಕೆಗಳನ್ನು ನೋಡಿ ನಿಮಗೆ ಏನನ್ನಿಸುತ್ತದೆ? ನಮ್ಮಲ್ಲಿ ’ಲಜ್ಜಭಂಡರು’ ಎಂಬ ಮಾತಿದೆ. ಅದು ಬಹಳ ನೆನಪಾಗುತ್ತಿದೆ. ಅಚ್ಚರಿಯಂತೂ ಆಗಿಲ್ಲ ಬಿಡಿ. ಬದಲು ನ್ಯಾಯಾಂಗದ ಮೇಲೆ ಭರವಸೆ ಬಂದಿದೆ. ನ್ಯಾಯಾಂಗ ದೃಢವಾಗಿ ನಿಂತಾಗ ಭವಿಷ್ಯದ ನಿರೀಕ್ಷೆಗಳು ಜೀವ ತಳೆಯುತ್ತವೆ. ಪ್ರಜಾಪ್ರಭುತ್ವದ ಗೆಲುವು ಅತ್ಯಂತಿಕವಾಗಿ ನ್ಯಾಯಾಂಗದ ಮೇಲೆಯೇ ಹೆಚ್ಚು ಆಧರಿಸಿದೆಯಲ್ಲವೆ? ಅಲ್ಲೇ ಕಲುಷಿತ ಚರ್ಯೆ ಕಂಡಾಗ ಮಾತ್ರ ತೀವ್ರ ಹತಾಶೆಯಾಗುತ್ತದೆ. ಒಬ್ಬ ಸಾಹಿತಿಯಾಗಿ ಆಧುನಿಕತೆ, ತಂತ್ರಜ್ಞಾನದ ಬಗ್ಗೆ ನಿಮ್ಮ ವಿಶ್ಲೇಷಣೆ ಏನು? ತಂತ್ರಜ್ಞಾನವೇ ಏಕೈಕ ಎನಿಸಿಕೊಂಡಾಗ ಗಾಬರಿಯಾಗುತ್ತದೆ. ಅದು ಅಭಿವೃದ್ಧಿಯ ಕಲ್ಪನೆಯನ್ನೇ ಅಡಿಮೇಲು ಮಾಡಿದೆ. ಭೂಮಿಯೊಡಲನ್ನು ಸಿಗಿ, ಕರುಳು ಬಗಿ, ಎಳೆದು ತೆಗಿ, ಅಣು ಸಿಡಿಸು, ಕೊಲ್ಲು, ಗೆಲ್ಲು, ದುಡ್ಡು ಬಾಚು, ತಂತ್ರಜ್ಞಾನದ ಚಾಚು ಈ ನಿಟ್ಟಿನಲ್ಲಿಯೇ ಮುಂದರಿಯುತ್ತದೆಯಲ್ಲ, ಅದು ಭಯಾನಕ. ದುಡ್ಡಿನ ಹಿಂದೆ ಓಡುವ ’ಮಿಡಾಸ್’ ಸಂಸ್ಕೃತಿಯನ್ನು ಅದು ಹುಟ್ಟುಹಾಕುವುದು ನೋಡಿ ಬೆಚ್ಚುವಂತಾಗುತ್ತದೆ. ಶಾಂತ ಬದುಕಿಗೆ ನಿಜವಾಗಿಯೂ ಇಷ್ಟೆಲ್ಲ ಅಗತ್ಯವಿಲ್ಲ. ಆದರೆ ಒಂದು; ದುಷ್ಟ ಪುರುಷರಿಂದ ಮಹಿಳೆಯರ ಮೇಲೆ ಲೈಂಗಿಕ ದಬ್ಬಾಳಿಕೆ ನಡೆವ ಸಂದರ್ಭದಲ್ಲಿ ಅವರನ್ನು ರಕ್ಷಿಸುವ ತಂತ್ರಜ್ಞಾನ ಬಂತೆಂದರೆ ಅದನ್ನು ನಾನು ಸ್ವಾಗತಿಸುವೆ. ಮೆಚ್ಚಿಕೊಳ್ಳುವೆ. ಒಬ್ಬ ವ್ಯಕ್ತಿ ಮಹಿಳೆಯ ಶೀಲ ಹರಣಕ್ಕೆ ತೊಡಗಿದರೆ ಆಗ ತಂತ್ರಜ್ಞಾನ ಆಕೆಯನ್ನು ಕಾಪಾಡುತ್ತದೆ, ಕೃಷಿ ಭೂಮಿ ಕಬಳಿಕೆಯನ್ನು ಅಸಾಧ್ಯ ಮಾಡುತ್ತದೆ ಎಂದಾದಲ್ಲಿ ಅದು ನಮಗೆ ಬೇಕೇಬೇಕು. ಎಲ್ಲ ಶೋಷಿತರ ರಕ್ಷಣೆಗೆ ಅದು ಒದಗಿ ಬರಲಿ. ಆದರೆ, ಎಲ್ಲಿಯೂ, ದುರುಪಯೋಗ ಆಗದಿರಲಿ. ನಮ್ಮ ಕರಾವಳಿಯವರೇ ಈಗ ಮುಖ್ಯಮಂತ್ರಿ ಆಗಿದ್ದಾರೆ. ಇವರಿಂದ ನಾವು ಏನು ನಿರೀಕ್ಷೆ ಮಾಡಬಹುದು? ನಮ್ಮ ತೀರಾ ಅಲಕ್ಷಿತ ಕೊರಗ ಸಮುದಾಯದ ಕಡೆಗೆ ಅತಿವಿಶೇಷ ಗಮನ ಕೊಡುವರು, ಅವರಿಗಾಗಿ ಇರುವ ಅನೇಕ ಯೋಜನೆಗಳೂ ಸವಲತ್ತುಗಳೂ ಅವರಿಗೆ ತಲುಪಿದೆಯೇ ಎಂದು ಪರಿಶೀಲಿಸುವುದರ ಜೊತೆಗೆ, ಇನ್ನಷ್ಟು ವೇಗವಾಗಿ ಅವರ ಬದುಕು ’ಇವತ್ತಿಗೆ’ ಬಂದು ಮುಟ್ಟಿಕೊಳ್ಳುವ ಕಡೆಗೆ ಹೆಚ್ಚು ಧ್ಯಾನಿಸುವರು, ಘೋರವಾದ ಎಂಡೋಸಲ್ಫಾನ್ ಸಮಸ್ಯೆ ಕಡೆಗೆ ರಚನಾತ್ಮಕ ಹಾಗೂ ಶಾಶ್ವತ ಪರಿಹಾರ ಚಿಂತಿಸುವುದಷ್ಟೇ ಅಲ್ಲ, ಅದನ್ನು ಕಾರ್ಯಗತಗೊಳಿಸುವರು, ಈ ನೆಲದ ಯಾವುದೇ ಜೀವಜಾಲದ ಹಕ್ಕಿಗೆ, ರೈತರ ನೆಲದ ಹಕ್ಕಿಗೆ ಚ್ಯುತಿ ಬಾರದ ಹಾಗೆ ನಿರಂತರ ಕಾವಲಿಡುವರು, ಒಂದರಿಂದ ಹತ್ತನೇ ಕ್ಲಾಸಿನವರೆಗೆ ಕನ್ನಡ ಮಾಧ್ಯಮವನ್ನೇ ಜಾರಿಗೆ ತರುವರು ಅಂತೆಲ್ಲ ಆಶಾದಾಯಕ ನಿರೀಕ್ಷೆ. ಉಳಿದೆಲ್ಲ ವಿಚಾರಗಳು ಹಿಂದಿನಿಂದ ಇದ್ದೇ ಇರುತ್ತವೆ. ಏನಿದ್ದರೂ ದೈವ ಕರೆದುಕೊಟ್ಟಂತೆ ಅವರಿಗೆ ಲಭಿಸಿದ ರಾಜ್ಯದ ಯಜಮಾನಿಕೆಯ ಬಲದಲ್ಲಿ ನಾಡಿನ ಸಕಲ ಸಮುದಾಯಗಳ ಒಗ್ಗಟ್ಟನ್ನು ಮಾದರಿ ರೂಪದಲ್ಲಿ ಕಟ್ಟಿ ಇತರರಿಗೆ ಆದರ್ಶವಾಗಬೇಕು. ಯಾವುದೇ ಪಕ್ಷ ಜನಪರ ಕೆಲಸಗಳಿಂದಲೇ ಬಾಳುತ್ತದೆ, ಇಲ್ಲವಾದರೆ ಮಣ್ಣುಮುಕ್ಕುತ್ತದೆ ಎಂಬ ಸತ್ಯ ಅವರಿಗೆ ತಿಳಿದಿದೆ ಅಂದುಕೊಳ್ಳುವೆ.

ಕೃಪೆ : ದ ಸ೦ಡೆ ಇ೦ಡಿಯನ್

]]>

‍ಲೇಖಕರು G

April 17, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

3 ಪ್ರತಿಕ್ರಿಯೆಗಳು

 1. lalitha siddabasavaiah

  ಹೆಣ್ಣಿನ ದೇಹವೇ ಅವಳಿಗೆ ಶತ್ರುವಾಗಿದೆ ಎನ್ನುವ ಮಾತನ್ನಂತೂ ಮತ್ತೆ ಮತ್ತೆ ಯೋಚಿಸಬೇಕಾಗಿದೆ. ಯಾವುದು ಸರಿ ಯಾವುದಲ್ಲ ಒಂದೂ ಗೊತ್ತಾಗದ ಸ್ಥಿತಿಯಲ್ಲಿದೆ ನಮ್ಮ ಭಾರತೀಯ ಯುವತೀ ಸಮೂಹ. ಅವರಿಗೆ ಏನನ್ನಾದರೂ ಹೇಳಲು ನಮಗೂ ಏನೂ ಗೊತ್ತಾಗುತ್ತಿಲ್ಲ. ಇದೇ ಪ್ರಗತಿಯೋ , ನೈತಿಕ ಅನೈತಿಕವೆಲ್ಲ ಸುಳ್ಳೋ ??? ಒಂದು ತೆರನಾದ ಭ್ರಾಂತಿ ಆವರಿಸಿಕೊಂಡಿರುವ ಈ ಪರ್ವಕಾಲದಲ್ಲಿ ವೈದೇಹಿಯವರು ಹೇಳಿರುವ ಈ ಮಾತು ನನ್ನ ಅಥವಾ ನಮ್ಮ ಮಾತೂ ಆಗಿದೆಯೆಂದು ಹೇಳಬೇಕೆನ್ನಿಸಿದೆ .

  ಪ್ರತಿಕ್ರಿಯೆ
 2. Geetha b u

  Mahila saahitya antha bereyaagi nodidhare, adhakke bere ghoshti, sangha, charche bekendhare adhu upa saahithya vaayithu. Saahithya andhare purusha saahithya. Yeno bareyuthiruva mahileyarige prothsaaha kodabeku, haagaagi avarige bere ondhu ghosti annuva, koduva, maaduva vichaaradha bagge nanna virodhavithu, edhe. Vaidehi yavara sandarshana odhi khushi aithu. Ondhu vedhike andharu ashte, praathinidhikavaagi obha mahile alli. Edhella besara tharisuva vishaya. Equality yendu horaaduthiruvaaga special treatment, concession beda namage. Thanks vydehi. Thanks suprabha.

  ಪ್ರತಿಕ್ರಿಯೆ
 3. Tejaswini Hegde

  ವೈದೇಹಿಯವರ ಮಾತೊಳಡಗಿರುವ ಸತ್ಯ, ಸಂಯಮ, ತೂಕ ಎಲ್ಲವೂ ಮನಸನ್ನು ತಟ್ಟಿತು. ಪ್ರಾಮಾಣಿಕವಾಗಿ ಉತ್ತರಿಸಿದ ವೈದೇಹಿಯವರ ವಿಚಾರಧಾರೆಗಳು ಬಲು ಪ್ರಿಯವಾದವು. ಪ್ರಕಟಿಸಿದ್ದಕ್ಕೆ ಧನ್ಯವಾದಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: