ಹೆಣ್ಣು ಜೀವವ ಕೊಲ್ಲುವ ಕೈಗಳಿಗೆ ಒಂದು ಮನವಿ…

gali.gif“ಗಾಳಿ ಬೆಳಕು” ಕಾಲಂ

ನಟರಾಜ್ ಹುಳಿಯಾರ್

ಭಾರತದಲ್ಲಿ ಕಳೆದ ಎರಡು ದಶಕಗಳಲ್ಲಿ ಮಧ್ಯಮ ವರ್ಗದ ತಂದೆತಾಯಿಗಳು ಸುಮಾರು ಒಂದು ಕೋಟಿ ಹೆಣ್ಣು ಮಕ್ಕಳನ್ನು ಭ್ರೂಣದ ಹಂತದಲ್ಲೇ ಗರ್ಭಪಾತದ ಮೂಲಕ ಕೊಂದು ಹಾಕಿದ್ದಾರೆ. ಗಂಡು ಮಕ್ಕಳೇ ಬೇಕೆಂಬ ಗೀಳಿನಿಂದ ಮಧ್ಯಮ ವರ್ಗದ ತಂದೆತಾಯಿಗಳು ಮಾಡಿರುವ ಈ ಘೋರ ಪಾತಕದ ಬಗ್ಗೆ ಭಾರತ ತಲೆಕೆಡಿಸಿಕೊಂಡೇ ಇಲ್ಲ. ಕೆನಡಾದ “ಯೂನಿವರ್ಸಿಟಿ ಆಫ್ ಟೊರಾಂಟೋ” ಹಾಗೂ ಛತ್ತೀಸ್ ಘಡದ “ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್” ನಡೆಸಿದ ಸಮೀಕ್ಷೆಯಲ್ಲಿ ದೊರೆತ ಅಂಕಿ ಅಂಶ ಇದು. ಈ ಸಮೀಕ್ಷೆ ಮಾಡಿರುವ ಈ ತಂಡಗಳು ಸುಮಾರು ಹನ್ನೊಂದು ಲಕ್ಷ ಕುಟುಂಬಗಳ ೬೦ ಲಕ್ಷ ಸ್ತ್ರೀ ಪುರುಷರನ್ನು ಸಂಪರ್ಕಿಸಿದ ಆಧಾರದ ಮೇಲೆ ಈ ಅಂಕಿ-ಅಂಶ ನೀಡಿವೆ. “ಏಷ್ಯನ್ ಏಜ್” ದಿನಪತ್ರಿಕೆ ಲ್ಯಾನ್ಸೆಟ್ ಎಂಬ ಗೌರವಾನ್ವಿತ ಮೆಡಿಕಲ್ ಜರ್ನಲ್ ನಲ್ಲಿ ಬಂದ ಈ ಅಂಕಿ ಅಂಶಗಳನ್ನು ಕಳೆದ ವರ್ಷದ ಜನವರಿಯಲ್ಲಿ ಉಲ್ಲೇಖಿಸಿ, ೨೦೦೬ರ ಜನವರಿ ತಿಂಗಳಲ್ಲಿ ಒಂದು ಸಂಪಾದಕೀಯ ಬರೆದಿತ್ತು. ಪ್ರತಿ ವರ್ಷ, ಭಾರತದಲ್ಲಿ ಹುಟ್ಟಲಿರುವ ಕೊನೆಯ ಪಕ್ಷ ೫ ಲಕ್ಷ ಹೆಣ್ಣು ಮಕ್ಕಳನ್ನು ಭ್ರೂಣಹತ್ಯೆಯ ಮೂಲಕ ಕೊನೆಗಾಣಿಸಲಾಗುತ್ತಿದೆ ಎಂಬ ದಿಗ್ಭ್ರಮೆ ಹುಟ್ಟಿಸುವ ಸತ್ಯವನ್ನೂ ಲ್ಯಾನ್ಸೆಟ್ ಜರ್ನಲ್ ಆಗ ಹೇಳಿತ್ತು. ಆದರೆ ಕಳೆದ ವರ್ಷ ಚರಿತ್ರಕಾರ ಅಖಿಲೇಶ್ ಮಿತ್ತಲ್, ಪ್ರತಿ ವರ್ಷ ಮೂವತ್ತು ಲಕ್ಷ ಮೇಲು ಜಾತಿಯ ಹಿಂದೂ ಮಹಿಳೆಯರು ಸ್ತ್ರೀ ಭ್ರೂಣ ಹತ್ಯೆ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಭಯಾನಕ ವಿಷಯ ಹೇಳಿದ್ದರು.

ಇಂಥ ಭೀಕರ ಸತ್ಯಗಳು ದಿನನಿತ್ಯ ಸೆನ್ಸೇಷನಲ್ ವರದಿ ಮಾಡುವ ಟೆಲಿವಿಷನ್ ಚಾನಲ್ ಗಳಲ್ಲಾಗಲೀ ಉಳಿದ ಅನೇಕ ಪತ್ರಿಕೆಗಳಲ್ಲಾಗಲೀ ಹೆಚ್ಚು ಕಂಡು ಬಂದಂತಿಲ್ಲ. ಗಂಭೀರವಾದ, ವಾಸ್ತವಿಕ ಅಂಕಿ-ಅಂಶಗಳಾನ್ನಧರಿಸಿದ ಸಂಶೋಧನೆಗಳನ್ನು, ಅದರಲ್ಲೂ ಭಾರತದಲ್ಲಿ ನಡೆಯುವ ವ್ಯವಸ್ಥಿತ ಸ್ತ್ರೀ ಹತ್ಯೆಯನ್ನು ಕುರಿತ ಸಂಶೋಧನೆಯನ್ನು ಎಲ್ಲರಿಗೂ ತಲುಪಿಸುವುದು ತಮ್ಮ ಜವಾಬ್ದಾರಿ ಎಂದು ನಮ್ಮ ಪತ್ರಿಕೆಗಳಿಗೆ ಅನ್ನಿಸಲಿಲ್ಲ. ಅದರಲ್ಲೂ ಒಬ್ಬ ಕಾಲ್ ಸೆಂಟರ್ ಮಹಿಳೆಯ ಅಥವಾ ಮಾಡೆಲ್ ನ ಹತ್ಯೆಯನ್ನು ಪದೇ ಪದೇ ಏರುದನಿಯಲ್ಲಿ ಪ್ರಸಾರ ಮಾಡುತ್ತಾ, ಆ ಪ್ರಸಾರದ ನಡುವೆ ಪ್ರತಿ ಮೂರು ನಿಮಿಷಗಳಿಗೆ ಒಮ್ಮೆ ಬರುವ ಕಮರ್ಷಿಯಲ್ ಬ್ರೇಕಿನಲ್ಲಿ ಮಹಿಳೆಯ ದೇಹವನ್ನೇ ಪ್ರಧಾನವಾಗಿರಿಸಿಕೊಂಡ ಜಾಹೀರಾತುಗಳನ್ನೇ ಚೆಲ್ಲುವ ಟೆಲಿವಿಷನ್ ಚಾನಲ್ ಗಳು ಇಂಥ ಸತ್ಯಗಳನ್ನು ಮತ್ತೆ ಮತ್ತೆ ಪ್ರಸಾರ ಮಾಡಿ ಯಾಕೆ ಜನರಿಗೆ ತಲುಪಿಸುವುದಿಲ್ಲ? ಇಲ್ಲಿ ಪ್ರಾಸಂಗಿಕವಾಗಿ ಟೆಲಿವಿಷನ್ ಚಾನಲ್ ಗಳ ಬಗೆಗೇ ಒತ್ತಿ ಹೇಳುತ್ತಿರುವೆ. ಕಾರಣ, ಇಡೀ ಟೆಲಿವಿಷನ್ ಮನೋರಂಜನಾ ಉದ್ಯಮ ಅರ್ಧಕ್ಕಿಂತಲೂ ಹೆಚ್ಚಾಗಿ ಸ್ತ್ರೀಲೋಕದ ಮೇಲೆ ಹಾಗೂ ಸ್ತ್ರೀ ದೇಹದ ಮೇಲೆ ಅವಲಂಬಿಸಿದೆ. ಇದನ್ನು ಇನ್ನಷ್ಟು ವಿವರವಾಗಿ ನೋಡಬಹುದು: ನಮ್ಮ ಟೆಲಿವಿಷನ್ ಗ್ರಾಹಕರಲ್ಲಿ ಮುಕ್ಕಾಲು ಭಾಗ ಮಹಿಳೆಯರೇ ಇದ್ದಾರೆ. ಈ ಟೆಲಿವಿಷನ್ ಸೀರಿಯಲ್ ಗಳಿಗೆ ಹೆಣ್ಣು, ಹೆಣ್ಣಿನ ಕಷ್ಟ ಹಾಗೂ ಹೆಣ್ಣಿನ ಕಣ್ಣೀರೇ ಮುಖ್ಯ ಆಧಾರ. ಇವರ ಸುದ್ದಿ ಮಂಡನೆಯ ಯಶಸ್ಸಿನಲ್ಲಿ ಆಕರ್ಷಕ ಸ್ತ್ರೀಯರ ಪಾಲು ಹೆಚ್ಚು ಇದೆ. ಇನ್ನು ಇಡೀ ಜಾಹೀರಾತು ಲೋಕದ ಶೇ. ೯೦ರಷ್ಟು ಭಾಗ ಸ್ತ್ರೀಯ ದೇಹದ ಮೇಲೆ ನಿಂತಿದೆ. ಮನೋರಂಜನೆಯ ಸಿನಿಮಾಗಳಿಗೂ ಈ ಮಾತು ಅನ್ವಯಿಸುತ್ತದೆ. ಹಾಡುಗಳ ದೃಶ್ಯಗಳಂತೂ ಶೇ. ೯೫ರಷ್ಟು ಭಾಗ ಮಹಿಳೆಯ ದೇಹವನ್ನೇ ಅವಲಂಬಿಸಿವೆ. ಮಹಿಳೆಯ ನಟನಾ ಸಾಮರ್ಥ್ಯ, ಆಕೆಯ ವೈಚಾರಿಕ ಶಕ್ತಿ, ಅಭಿಪ್ರಾಯ ಹಾಗೂ ದೃಷ್ಟಿಕೋನಗಳಿಗಿಂತ ಮಹಿಳೆಯ ದೇಹವನ್ನೇ ಮನರಂಜನಾ ಉದ್ಯಮವಾದ ಟೆಲಿವಿಷನ್ ಹೆಚ್ಚು ಅವಲಂಬಿಸಿದೆ.

ಈ ಅಂಶಗಳನ್ನು ಒಂದು ಸಣ್ಣ ಕಣ್ಣೋಟದ ಮೂಲಕ ಹೇಳಿದ್ದರೂ ಇದರಲ್ಲಿ ಹೆಚ್ಚು ಅಸತ್ಯವಿರಲಾರದು ಎಂದುಕೊಂಡಿರುವೆ. ಹೀಗೆ ಇಡೀ ಮನರಂಜನಾ ಉದ್ಯಮ ಕೊನೆಯ ಪಕ್ಷ ಶೇ. ೭೦ರಷ್ಟು ಭಾಗಕ್ಕಿಂತ ಹೆಚ್ಚಾಗಿ ಮಹಿಳೆಯರನ್ನು ಅವಲಂಬಿಸಿದ್ದರೂ, ಹೆಣ್ಣಿನ ಒಡೆತನದಲ್ಲಿರುವ ಟೆಲಿವಿಷನ್ ಸಂಸ್ಥೆ ಜಯಲಲಿತಾ ಅವರ ಜಯಾ ಟಿ.ವಿ. ಒಂದೇ ಇರಬೇಕು. ಈಗ ಅನಿತಾ ಕುಮಾರಸ್ವಾಮಿ ಅವರ ಒಡೆತನದ ಕಸ್ತೂರಿ ಚಾನಲ್ ಈ ಸಾಲಿಗೆ ಸೇರಬಹುದು. ಆದರೆ ಹೆಣ್ಣಿನ ಒಡೆತನದಲ್ಲಿರುವ ಟೆಲಿವಿಷನ್ ಸಂಸ್ಥೆಗಳು ಹೆಣ್ಣಿನ ಪರವಾಗಿರುತ್ತವೆ ಎಂದು ಗ್ಯಾರಂಟಿಯಾಗಿ ಹೇಳುವುದು ಕಷ್ಟ. ಮೇಲೆ ಹೇಳಿದ, ಒಂದು ಕೋಟಿ ಸ್ತ್ರೀ ಭ್ರೂಣ ಹತ್ಯೆಯ ವಿವರಗಳನ್ನು ಜಯಾ ಟಿ.ವಿ. ಕೂಡ ವಿಸ್ತೃತವಾಗಿ ಪ್ರಸಾರ ಮಾಡಿರಲಾರದು. ಇನ್ನು ಅನಿತಾಕುಮಾರಸ್ವಾಮಿಯವರ ಕಸ್ತೂರಿ ಚಾನಲ್ ನಿಂದ ಕೂಡ ಅದನ್ನು ನಿರೀಕ್ಷಿಸುವುದು ಕಷ್ಟವೇನೋ.

ಹೆಣ್ಣಿನ ಸ್ಥಾನಮಾನ, ಸ್ತ್ರೀಭ್ರೂಣ ಹತ್ಯೆ, ಸ್ತ್ರೀದಮನ ಕುರಿತಂತೆ ಸ್ತ್ರೀ ಹೋರಾಟಗಾರರು, ಸಂಶೋಧನಾ ಸಂಸ್ಥೆಗಳು ಕೊಡುವ ಅಂಕಿ-ಅಂಶಗಳು ಯಾಕೆ ನಮ್ಮ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿಲ್ಲ ಎಂಬುದಕ್ಕೆ ಪುರುಷ ಹಿತಾಸಕ್ತಿಗಳು ಮುಖ್ಯ ಕಾರಣವೆಂಬುದು ಎಲ್ಲರಿಗೂ ಗೊತ್ತಿದೆ. ಆದರೂ ನಮ್ಮ ಮಾಧ್ಯಮಗಳಲ್ಲಿ ಸೇರಿಕೊಂಡಿರುವ ಹೊಸ ಕಾಲದ ಮಹಿಳೆಯರು ಈ ಬಗ್ಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ ಎಂಬುದು ಅತ್ಯಂತ ಸಮಾಧಾನದ ವಿಷಯ. ಆದರೂ ಮಹಿಳೆಯರ ನಿಜವಾದ ಪ್ರಶ್ನೆಗಳ ವಿಚಾರ ಬಂದಾಗಲೆಲ್ಲ ಅವುಗಳನ್ನು ಹಿನ್ನೆಲೆಗೆ ಸರಿಸಿ, ಮಾರ್ಕೆಟ್ಟಿನಲ್ಲಿ ಮಾರಾಟವಾಗಬಲ್ಲ ಸ್ತ್ರೀ ಸಂಬಂಧಿ ವಿಚಾರಗಳನ್ನು, ಚಿತ್ರಗಳನ್ನೇ ಮಾಧ್ಯಮಗಳು ಅತಿಯಾಗಿ ಮಂಡಿಸುತ್ತಿರುವುದರಿಂದ ಸ್ತ್ರೀಲೋಕಕ್ಕೆ ಸಂಬಂಧಿಸಿದ ಭೀಕರ ವಾಸ್ತವದ ಅಂಕಿ-ಅಂಶಗಳು, ವರದಿಗಳು ನಮ್ಮ ಮಾಧ್ಯಮಗಳಲ್ಲಿ ಹಿನ್ನೆಲೆಗೆ ಸರಿಯುತ್ತಿವೆ. ಅಂಥ ವಾಸ್ತವಿಕ ಅಂಕಿ-ಅಂಶಗಳು, ವಿವಿಧ ಸಂಸ್ಥೆಗಳ ವರದಿಗಳಲ್ಲಿ ಅಥವಾ ಸರ್ಕಾರಿ ವರದಿಗಳಲ್ಲಿ ಹುದುಗಿ, ಕೊಳೆತು ಕಣ್ಮರೆಯಾಗುತ್ತಿವೆ.

“ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ”ದ ವರದಿಗಳಲ್ಲಿ ಹುದುಗಿದ್ದ ಮತ್ತೊಂದು ಬರ್ಬರ ಸಂಗತಿಯನ್ನು ಎರಡು ವರ್ಷಗಳ ಕೆಳಗೆ ಪೂರ್ಣಿಮಾ ಜೋಷಿಯವರು ಕೊಟ್ಟಿದ್ದರು. ಈ ವರದಿಯ ಪ್ರಕಾರ, ಭಾರತದಲ್ಲಿ ಪ್ರತಿ ಹದಿನಾಲ್ಕು ನಿಮಿಷಕ್ಕೆ ಒಮ್ಮೆ ಒಬ್ಬ ಹೆಣ್ಣನ್ನು ಗಂಡ ಅಥವಾ ಸಂಬಂಧಿಕರು ಕ್ರೂರವಾಗಿ ನಡೆಸಿಕೊಳ್ಳುತ್ತಾರೆ. ಅದರ ಜೊತೆಗೇ ಪೂರ್ಣಿಮಾ ಕೊಡುವ ಇನ್ನೊಂದು ವಿವರ ಇನ್ನಷ್ಟು ಕರುಣಾಜನಕವಾಗಿದೆ: “ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೆ”ಯ ಪ್ರಕಾರ, ಶೇ.೬೦ರಷ್ಟು ಗ್ರಾಮೀಣ ಸ್ತ್ರೀಯರು ತಮ್ಮ ಗಂಡಂದಿರು ತಮ್ಮನ್ನು ಹೊಡೆಯುವುದರಲ್ಲಿ ತಪ್ಪೇನೂ ಇಲ್ಲ ಎನ್ನುತ್ತಾರಂತೆ. ಅಷ್ಟೇ ಯಾಕೆ, ಶೇ.೨೦ರಷ್ಟು ನಗರದ ಸ್ತ್ರೀಯರು ಕೂಡ ಇದೇ ಅಭಿಪ್ರಾಯ ನೀಡಿದ್ದಾರೆ.

ಈ ಭೀಕರ ಅಜ್ಞಾನದಿಂದ ಮಹಿಳೆಯರನ್ನು ಹೊರತರುವ ಕೆಲಸವನ್ನು ಯಾರು ಮಾಡಬೇಕು ಎಂಬುದನ್ನು ಯೋಚಿಸುವವರಿಗೆ ಗಾಢ ನಿರಾಶೆ ಆವರಿಸತೊಡಗಿದರೆ ಆಶ್ಚರ್ಯವಲ್ಲ. ಯಾಕೆಂದರೆ ಸ್ತ್ರೀ ವಿಮೋಚನೆಯ ಶಿಕ್ಷಣಕ್ಕೆ ನಮ್ಮ ಪಠ್ಯಕ್ರಮಗಳಲ್ಲಿ ಜಾಗವೇ ಇಲ್ಲ. ತಮ್ಮ ಹೆಸರಿನಲ್ಲಿ ಆಸ್ತಿ ಇಲ್ಲದಿರುವುದು ತಮ್ಮ ಅಧೀನ ಸ್ಥಿತಿಗೆ ಮುಖ್ಯ ಕಾರಣ ಎಂಬ ಸರಳ ಸತ್ಯ ನಾನು ಮಾತಾಡಿಸಿದ ಸುಮಾರು ನೂರು ಜನ ಎಂ.ಎ. ಪದವಿ ಪಡೆದ ಮಹಿಳೆಯರಿಗೂ ಗೊತ್ತಿರಲಿಲ್ಲ. ಜಗತ್ತಿನಲ್ಲಿ ಹೆಣ್ಣಿನ ಆಸ್ತಿಯ ಪ್ರಮಾಣ ಎಷ್ಟೆಂಬುದು ಅತ್ಯಂತ ವಿದ್ಯಾವಂತ ಮಹಿಳೆಯರಿಗೆ ಕೂಡ ಗೊತ್ತಿರಲಿಕ್ಕಿಲ್ಲ. ಇಡೀ ಜಗತ್ತಿನ ಶೇಕಡಾ ಒಂದರಷ್ಟು ಆಸ್ತಿ ಮಾತ್ರ ಹೆಣ್ಣಿನ ಕೈಯಲ್ಲಿದೆ ಎಂಬ ಅಂಕಿ-ಅಂಶವನ್ನು ಪ್ರೊ.ಬಸವರಾಜ ಅರಸು ಮೊನ್ನೆ ಕೊಟ್ಟರು. ಈ ಒಂದು ಪರ್ಸೆಂಟ್ ಕೂಡ ಅಮೆರಿಕಾದ ಆಧುನಿಕ ಮಹಿಳೆಯರ ಆಸ್ತಿ ಹೆಚ್ಚಿರುವುದರಿಂದ ಬಂದಿರಬಹುದೇನೋ ಎಂಬ ಅನುಮಾನ ನನ್ನದು.

ಐವತ್ತು ವರ್ಷಗಳ ಕೆಳಗೆ ಬಾಬಾ ಸಾಹೇಬ ಅಂಬೇಡ್ಕರ್ ಅವರು ಲೋಕಸಭೆಯಲ್ಲಿ “ಹಿಂದೂ ಕೋಡ್ ಬಿಲ್” ಮಂಡಿಸಲೆತ್ನಿಸಿದರು. ಭಾರತದಲ್ಲಿ ಹೆಣ್ಣಿಗೆ ಆಸ್ತಿ ಇಲ್ಲದಿರುವುದಕ್ಕೂ ಆಕೆಯ ಅಧೀನ ಸ್ಥಿತಿಗೂ ಇರುವ ಸಂಬಂಧವನ್ನು ಅಂಬೇಡ್ಕರ್ ಸರಿಯಾಗಿ ಅರಿತಿದ್ದರು. ಅವತ್ತು ಹಿಂದೂ ಪಟ್ಟಭದ್ರ ಪುರುಷರು ಲೋಕಸಭೆಯಲ್ಲಿ ಈ ಮಸೂದೆ ಮಂಡನೆಯಾಗಲು ಬಿಡಲಿಲ್ಲ. ಆದರೆ ತಡವಾಗಿಯಾದರೂ ಮಹಿಳೆಯರು ಜಾಗೃತವಾಗತೊಡಗಿದ ಭಾರತದಲ್ಲಿ ಆಸ್ತಿಯ ಹಕ್ಕಿನ ಪ್ರಶ್ನೆಯನ್ನು ಬಹುಕಾಲ ಮುಂದೂಡುವುದು ಸಾಧ್ಯವಿರಲಿಲ್ಲ. ಈಗ ಕೊನೆಯ ಪಕ್ಷ ಕಾನೂನಿನ ಪ್ರಕಾರವಾದರೂ ಗಂಡು ಹಾಗೂ ಹೆಣ್ಣು ಮಕ್ಕಳಿಬ್ಬರಿಗೂ ಕುಟುಂಬದ ಆಸ್ತಿಯಲ್ಲಿ ಸಮಾನ ಹಕ್ಕಿದೆ. ಹುಡುಗಿಯರು ಖಚಿತವಾದ ದುಡಿಯುವ ವರ್ಗವಾಗಿ ಮನೆಯ ಒಳಗೂ ಹೊರಗೂ ಸಮಾನವಾಗಿ ಕಾಣಿಸಿಕೊಳ್ಳತೊಡಗಿದ್ದಾರೆ. ಖಾಸಗಿ ಶಾಲೆಗಳ ಇಡೀ ಪ್ರೈಮರಿ ಶಿಕ್ಷಣದ ಶೇಕಡಾ ತೊಂಬತ್ತು ಭಾಗ ಮಹಿಳಾ ಟೀಚರುಗಳಿಂದಲೇ ನಡೆಯುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಈ ಪ್ರಮಾಣ ಹತ್ತಿರ ಹತ್ತಿರ ಮೂವತ್ತು ಭಾಗವಾದರೂ ಇದೆ. ಗಾರ್ಮೆಂಟುಗಳಿಂದ ಕಾಲ್ ಸೆಂಟರ್ ಗಳವರೆಗೆ ಕೆಲಸದಲ್ಲಿರುವ ತರುಣಿಯರು ಮನೆಮಂದಿಯನ್ನು ಸಾಕುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ಸಾರಾಯಿ, ಮಟ್ಕಾಗಳ ದೈನೇಸಿ ಗ್ರಾಮಗಳಲ್ಲಿ ಮಹಿಳೆಯರು ದುಡಿದು ತರದಿದ್ದರೆ ಅರ್ಧಕ್ಕಿಂತ ಹೆಚ್ಚು ಗಂಡಸರು ಕಳ್ಳತನದಲ್ಲಿ ತೊಡಗಬೇಕಾಗುತ್ತಿತ್ತು. ಇವೆಲ್ಲಕ್ಕಿಂತ ಹೆಚ್ಚಾಗಿ ಗಂಡಿಗೆ ಸ್ತ್ರೀ ಕೊಡುವ ಮುದ, ಆಸರೆ, ಕಾಮ, ಉತ್ಸಾಹ, ಕರುಣೆ ಹಾಗೂ ನೆಮ್ಮದಿಗೆ ಇನ್ಯಾವುದೂ ಸಾಟಿ ಇರಲಾರದು.

ಇದೆಲ್ಲದರ ಬಗೆಗೆ ಕೃತಜ್ಞತೆಯ ಲವಲೇಶವೂ ಇಲ್ಲದೆ, ವರ್ಷಕ್ಕೆ ಮೂವತ್ತು ಲಕ್ಷ ಹೆಣ್ಣು ಮಕ್ಕಳನ್ನು ಹುಟ್ಟುವ ಮುನ್ನವೇ ಕೊಲ್ಲುವ ಈ “ಪುಣ್ಯಭೂಮಿ” ಭಾರತದ ಈ ಅಮಾನುಷತೆಯ ವಿರುದ್ಧ ದೊಡ್ಡ ಚಳುವಳಿಗಳೇ ಇಲ್ಲಿ ಆರಂಭವಾಗಬೇಕಾಗಿದೆ. ಜೊತೆಗೆ, ಸ್ತ್ರೀಭ್ರೂಣ ಹತ್ಯೆಗೆ ನೀಡಲಾಗುವ ಕಾನೂನಿನ ದಂಡನೆಗಳು ಇನ್ನಷ್ಟು ಬಿಗಿಯಾಗಬೇಕಾಗಿದೆ. ಇದೀಗ ಎಲ್ಲ ರಂಗಗಳಲ್ಲೂ ಅತ್ಯಂತ ಆತ್ಮವಿಶ್ವಾಸದಿಂದ ಹೊಮ್ಮುತ್ತಿರುವ ಹೊಸ ತಲೆಮಾರಿನ ತರುಣಿಯರು ಎಲ್ಲರನ್ನೂ ಈ ಬಗ್ಗೆ ನಿರಂತರವಾಗಿ ಎಚ್ಚರಿಸುವಂತಾಗಲಿ. ಈ ಎಚ್ಚರವನ್ನು ಹಬ್ಬಿಸುವ ಕರ್ತವ್ಯ ತಮ್ಮದು ಕೂಡ ಎಂಬುದನ್ನು ಪುರುಷರು ಮೊದಲು ಅರಿಯುವಂತಾಗಲಿ.

‍ಲೇಖಕರು avadhi

July 31, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

3 ಪ್ರತಿಕ್ರಿಯೆಗಳು

 1. Dr. Sathyanarayana Bhat

  Nataraj, Hats off for your expressins. I being a medical doctor witnessed many silent female feotalcide.I also appreciate a bold expert in a sacanning centre who outrightly reject to inform the sex of the feotus. At the same time I am quite ashamed to say that our own mwedical fraternity is involved in this whole scandal just out of sheer greed for grabbing money in the guise of helping the gullible middle class parents who are in the hurry to get rid of another female baby in the family. At the same time doctors also very wise to tell big lies like the female foetus is deformed and some times the vertebral bone is not formed well. So the fight should begin in various levels.Legally such nursing homes (slaughter houses) are liable to get severe penalty and doctors can get punished and even their registrations can get cancelled.

  ಪ್ರತಿಕ್ರಿಯೆ
 2. Malathi S

  Sir,
  Greetings from Malathi S. Once i had gone for a routine gynaec check-up(Mumbai). I found the nurses saying ‘jai mata-di’ and jai SriKrishna’. so it got me wondering about the sudden religiosity in that clinic. I befreinded a nurse and i was shocked when she said that was the way to convey whether the foetus was a male of female, since there was a huge placard advising ‘foetal gender will not be disclosed after scan.’So it was jai mata di for a female foetus…

  ಪ್ರತಿಕ್ರಿಯೆ
 3. Sree

  very good write up… i had chance to attend few health department meetings on the subject. what i learned from the interactions that i had with health officials was indeed shocking. Determining the foetus it seemed very easy . More easy was the methods used to convey the foetus sex status to the familly.
  One method adopted by the doctors was to write the priscriptions in red ink if it is a female child and in green if it is male.
  Another if the foetus is female then the mother will be asked to meet the doctor on Sunday verbaly. else it will be monday.
  so simple it looks.
  this clearly indicates that problem cannot be solved with laws or rules .

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: