ಕಿರಣ್ ಕುಮಾರ್ ಕೆ
ಹೊಸದೊಂದು ಕಂಪನಿ ಹುಟ್ಟುಹಾಕುವಾಗ ಅಥವಾ ಹುಟ್ಟಿದ ಮಗುವಿಗೆ ಹೆಸರಿಡುವಾಗ ಹೆಸರುಗಳನ್ನು ಹುಡುಕುವವರ ಗೋಜು ನಿಮಗೆಲ್ಲಾ ಗೊತ್ತಿದ್ದೇ ಇರುತ್ತದೆ. ಅಷ್ಟರ ನಡುವೆಯೂ ಒಂದು ಹೆಸರನ್ನಂತೂ ಇಡಲೇ ಬೇಕಲ್ಲವೆ? ಈಗಾಗಲೇ ಜಗತ್ತಿನಲ್ಲಿ ಶ್ರೀಮಂತವಾಗಿರುವ ಕೆಲವೊಂದು ಕಂಪನಿಗಳ ಹೆಸರುಗಳು ಹುಟ್ಟಿದ ಕತೆಗಳೂ ರೋಚಕವಾಗಿಯೇ ಇವೆ. ಇವನ್ನೆಲ್ಲ ಓದಿದ ಮೇಲೆ, ಹೆಸರಿನಲ್ಲೇನಿದೆ ಬಿಡಿ ಸ್ವಾಮಿ ಅಂತ ನಿಮಗನ್ನಿಸಿದರೆ ಆಶ್ಚರ್ಯವಿಲ್ಲ.
ಆಪಲ್ ಕಂಪ್ಯೂಟರ್ಸ್: ಜಗತ್ತಿನಲ್ಲಿ ಮೈಕ್ರೋಸಾಫ್ಟ್ ಕಂಪನಿಗೆ ಬಹುದೊಡ್ಡ ಪೈಪೋಟಿ ನೀಡುತ್ತಿರುವ ಕಂಪನಿ ಆಪಲ್. ಆಪಲ್ ನ ಸ್ಥಾಪಕ ಸ್ಟೀವ್ ಜಾಬ್ಸ್ ಗೆ ಆಪಲ್ (ಸೇಬು) ಅಂದ್ರೆ ಬಹಳಾ ಪ್ರೀತಿ. ಕಂಪನಿ ಪ್ರಾರಂಭಿಸಿ ಮೂರು ತಿಂಗಳಾದರೂ ಅದಕ್ಕೊಂದು ಹೆಸರು ದೊರಕಿರಲಿಲ್ಲ ಸ್ಟೀವ್ ಜಾಬ್ಸ್ ಗೆ. ಹೆಸರನ್ನು ನೊಂದಾಯಿಸಲೇಬೇಕಾಗಿ ಬಂದಾಗ, ವಿಚಲಿತನಾದ ಸ್ಟೀವ್ ಜಾಬ್ಸ್ ತನ್ನ ಕಂಪನಿಯ ಇತರೆ ಸದಸ್ಯರಿಗೆ “ಇಂದು ಸಂಜೆಯೊಳಗಾಗಿ ಯಾವುದಾದರೂ ಒಳ್ಳೆಯ ಹೆಸರನ್ನು ಸೂಚಿಸದಿದ್ದರೆ, ಆಪಲ್ ಅಂತಲೇ ಕರೆದುಬಿಡುತ್ತೇನೆ” ಅಂತ ಹೆದರಿಸುತ್ತಾನೆ. ಆದರೆ ಅವತ್ತು ಸಂಜೆಯವರೆಗೆ ಕಾದರೂ ಯಾರೂ ಯಾವ ಹೆಸರನ್ನೂ ಸೂಚಿಸಲೇ ಇಲ್ಲ. ಬೇಸತ್ತ ಸ್ಟೀವ್ ಜಾಬ್ಸ್ “ಆಪಲ್” ಅಂತಲೇ ಕಂಪನಿಯ ಹೆಸರನ್ನು ನೊಂದಾಯಿಸಿ ಬಿಟ್ಟ. ನಂತರ ಆಪಲ್ ಜಗತ್ತಿನ ದೊಡ್ಡ ಕಂಪನಿಗಳಲ್ಲಿ ಒಂದಾಗಿ ಬೆಳೆದರೂ ಅದರ ಹೆಸರು ಬದಲಾಯಿಸಲು ಯಾರೂ ಯೋಚಿಸಲೇ ಇಲ್ಲ.
ಎಚ್ ಪಿ: ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿಗಳು ಕನಸು ಕಾಣುವ ಕಂಪನಿಗಳಲ್ಲಿ ಒಂದಾದ ಎಚ್ ಪಿ ಹುಟ್ಟಿದ್ದು ಅಮೆರಿಕಾದಲ್ಲಿ. ಬಿಲ್ ಹ್ಯೂಲೆಟ್ ಮತ್ತು ಡೇವ್ ಪಕಾರ್ಡ್ ಎನ್ನುವ ಇಬ್ಬರು ಸ್ನೇಹಿತರು ಸೇರಿಕೊಂಡು ಕಂಪನಿಯೊಂದನ್ನು ಪ್ರಾರಂಭಿಸಿದಾಗ ಅದಕ್ಕೆ ಯಾವ ಹೆಸರಿಡಬೇಕು ಎನ್ನುವ ಚಿಂತೆ ಅವರನ್ನೂ ಕಾಡಿತ್ತು. ಕೊನೆಗೆ ತಮ್ಮಿಬ್ಬರ ಹೆಸರುಗಳನ್ನು ಸೇರಿಸಿ ಕಂಪನಿಯ ಹೆಸರನ್ನು ಮಾಡಿಬಿಡೋಣ ಅನ್ನುವ ತೀರ್ಮಾನಕ್ಕೆ ಇಬ್ಬರೂ ಬರುತ್ತಾರೆ. ಆಗಲೂ ಒಂದು ಸಮಸ್ಯೆ ಎದುರಾಗುತ್ತದೆ. ಯಾರ ಹೆಸರನ್ನು ಮೊದಲು ಹಾಕಬೇಕು? ಆಗ ಇಬ್ಬರೂ ಸೇರಿ ಕಾಯಿನ್ ಟಾಸ್ ಮಾಡಿ ಯಾರು ಗೆಲ್ಲುತ್ತಾರೊ ಅವರ ಹೆಸರನ್ನು ಮೊದಲು ಹಾಕಬೇಕು ಎನ್ನುವ ತೀರ್ಮಾನ ಮಾಡುತ್ತಾರೆ. ಆಗ ಬಿಲ್ ಹ್ಯೂಲೆಟ್ ಟಾಸ್ ಗೆಲ್ಲುತ್ತಾರೆ. ಹಾಗಾಗಿ ಆ ಕಂಪನಿಗೆ ಹ್ಯೂಲೆಟ್ ಪಕಾರ್ಡ್ ಎಂದು ಹೆಸರಿಸಲಾಯಿತು. ಹಾಗೇನಾದರೂ ಟಾಸ್ ಪಕಾರ್ಡ್ ಪರವಾಗಿ ಬಂದಿದ್ದರೆ “ಪಿ ಎಚ್” ಅಂತ ಆಗಿರುತ್ತಿತ್ತು!
ರೆಡ್ ಹ್ಯಾಟ್: ಈ ಕಂಪನಿಯ ಸ್ಥಾಪಕನಾದ ಮಾರ್ಕ ಇವಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಗ ಅವನ ಅಜ್ಜ ಕೆಂಪು ಪಟ್ಟಿಗಳಿದ್ದ ಒಂದು ಹ್ಯಾಟನ್ನು ಉಡುಗೊರೆಯಾಗಿ ಕೊಟ್ಟಿದ್ದನಂತೆ. ಆ ಟೊಪ್ಪಿ ಎಂದರೆ ಮಾರ್ಕಗೆ ಅತೀವ ವ್ಯಾಮೋಹ. ಆದರೆ ಆ ಟೊಪ್ಪಿ ಕಳೆದು ಹೋಯಿತು. ಆಗಿನಿಂದಲೂ ಮಾರ್ಕ ಆ ಟೊಪ್ಪಿಗೆಗಾಗಿ ಅವಿರತವಾದ ಹುಡುಕಾಟ ನಡೆಸಿದರೂ ಅದು ಸಿಕ್ಕಲಿಲ್ಲವಂತೆ. ನಂತರ ತನ್ನದೇ ಕಂಪನಿ ತೆರೆದಾಗ ಆ ಹೆಸರನ್ನೇ ಇಟ್ಟು ಯಾರಿಗಾದರೂ ಆ ಹ್ಯಾಟ್ ಸಿಕ್ಕಿದರೆ ಅದನ್ನು ನನಗೆ ಕೊಡಿ ಎಂದು ಬೇಡಿಕೊಂಡನಂತೆ!
ಯಾಹೂ: ಎಲ್ಲರೂ ಕೇಳಿರಬಹುದಾದ ಹೆಸರಿದು. ತನ್ನ ನೌಕರರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುವ ಕಂಪನಿ ಎಂದೇ ಹೆಸರಾಗಿರುವ ಯಾಹೂ ಕಂಪನಿಯ ಕ್ಯಾಂಟೀನಿನಲ್ಲಿ ಯಾವಾಗಲೂ ಸೇಬು ಹಣ್ಣುಗಳನ್ನು ಇಟ್ಟಿರುತ್ತಾರೆ. ಎಷ್ಟು ಬೇಕಾದರೂ ತಿನ್ನಬಹುದು ಅದಕ್ಕೇನೂ ಛಾರ್ಜ್ ಇಲ್ಲ. “ಯಾಹೂ” ಎನ್ನುವ ಪದ ಮೊದಲು ಕಾಣಿಸಿಕೊಂಡಿದ್ದು ಜೊನಾಥನ್ ಸ್ವಿಫ್ಟ್ ನ “ಗಲಿವರ್ಸ್ ಟ್ರಾವೆಲ್ಸ್” ಕೃತಿಯಲ್ಲಿ. ಆ ಕೃತಿಯಲ್ಲಿ ಆಕಾರದಲ್ಲಿ ಮತ್ತು ನಡೆಯಲ್ಲಿ ವಿಚಿತ್ರವಾಗಿರುವವರನ್ನು ಬಣ್ಣಿಸಲು ಸ್ವಿಫ್ಟ್ “ಯಾಹೂ” ಎನ್ನುವ ಪದ ಬಳಸುತ್ತಾನೆ. ಯಾಹೂನ ಸ್ಥಾಪಕರಾದ ಜೆರ್ರಿ ಯಂಗ್ ಮತ್ತು ಡೆವಿಡ್ ಫಿಲೊ ತಮ್ಮನ್ನು ತಾವು ಅಂಥ ಜನಗಳು ಅಂದುಕೊಂಡಿದ್ದರಿಂದ ತಮ್ಮ ಕಂಪನಿಗೆ ಯಾಹೂ ಅಂತಲೇ ಹೆಸರಿಟ್ಟರು.
ಆರೆಕಲ್: ಬೆಂಗಳೂರಿನ ಬಹುದೊಡ್ಡ ಕಾಲ್ ಸೆಂಟರ್ ಎನಿಸಿಕೊಂಡಿರುವ ಆರೆಕಲ್ ಚು ಇನ್ನೊಂದು ವಿಚಿತ್ರ ಕತೆ. ಅದರ ಸ್ಥಾಪಕ ಲಾರ್ರಿ ಎಲಿಸನ್ ಈ ಕಂಪನಿ ಪ್ರಾರಂಭಿಸುವುದಕ್ಕೂ ಮುನ್ನ ಅಮೆರಿಕಾದ ಸಿಐಎ (ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ)ಗೆ ಕೆಲಸ ಮಾಡುತ್ತಿದ್ದ. ಆಗ ತಾನು ಮಾಡುತ್ತಿದ್ದ ಒಂದು ಪ್ರಾಜೆಕ್ಟ್ ನ ಕೋಡ್ ಹೀಗಿತ್ತು: One Real Asshole Called Larry Ellison. ಅದನ್ನೇ ಶಾರ್ಟ್ ಆಗಿ ಆರೆಕಲ್ (ORACLE) ಅಂತ ಕರೆಯಲಾಯಿತು.
ಮೋಟರೋಲ: ಇಂದು ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮೋಟರೋಲ ಮೊದಲು ತಯಾರಿಸ ಹೊರಟಿದ್ದು ಕಾರ್ ರೇಡಿಯೋಗಳನ್ನು. ಆಗ ರೇಡಿಯೋ ಕ್ಷೇತ್ರದಲ್ಲಿ ದೊಡ್ಡ ಹೆಸರಿದ್ದಿದ್ದು “ವಿಕ್ಟೋರೋಲ” ಎನ್ನುವ ಕಂಪನಿ. ಇವರು ಮೋಟಾರಿಗೆ ರೇಡಿಯೋ ಮಾಡುತ್ತಿದ್ದುದರಿಂದ ಅದಕ್ಕೆ ಮೋಟರೋಲ ಎಂದು ಹೆಸರಿಟ್ಟರು.
ಅಪಾಚೆ: ಇದರ ಸ್ಥಾಪಕ ಮೊದಲು ಪ್ರಾರಂಭಿಸಿದ್ದು ಎನ್ ಸಿಎಸ್ ಎ ಎನ್ನುವ ಸಾಫ್ಟ್ ವೇರ್ ನ ಕೋಡ್ ಗಳನ್ನು ಪ್ಯಾಚ್ ಮಾಡುವ ಕೆಲಸವನ್ನು. ಅದರ ಪರಿಣಾಮ ಒಂದು ಹರಕಲು ಮುರುಕಲು ಸರ್ವರ್ ತಯಾರಾಗಿದ್ದು. ಅದನ್ನು ನೋಡಿದವರೆಲ್ಲ “A PAtCHy” server ಎಂದರು. ಕೊನೆಗೆ ಅದನ್ನೇ ಕಂಪನಿಯ ಹೆಸರಾಗಿಸಲಾಯಿತು.
ಕ್ರೇನ್ಸ್ ಸಾಫ್ಟ್ ವೇರ್: ಕ್ರೇನ್ಸ್ ಅಪ್ಪಟ ಭಾರತೀಯ ಕಂಪನಿಗಳಲ್ಲೊಂದು. ಅಮೆರಿಕಾದಿಂದ ಒಳ್ಳೆಯ ವ್ಯಾಪಾರ ಆಫರ್ ಸಿಗುವ ತನಕ ಕ್ರೇನ್ಸ್ ಗೆ ತನ್ನದೇ ಆದ ಲೋಗೋ ಕೂಡ ಇರಲಿಲ್ಲ. ಯಾವಾಗ ಕಂಪನಿಯ ಮುಖ್ಯಸ್ಥರು ವ್ಯಾಪಾರ ಕುದುರಿಸಲು ಅಮೆರಿಕಾಕ್ಕೆ ಹೊರಟರೋ ಆಗ ಲೋಗೋ ಒಂದರ ಅವಶ್ಯಕತೆ ಎದುರಾಯಿತು. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಮೆರಿಕಾಕ್ಕೆ ವಿಮಾನ ಹತ್ತುವ ಮುನ್ನ ಒಬ್ಬ ಕಲಾವಿದ ಕ್ರೇನ್ಸ್ ಗೆ ಪೆಲಿಕನ್ ಪಕ್ಷಿಯ ಚಿತ್ರ ಹಾಕಿ ಒಂದು ಲೋಗೋ ಮಾಡಿ ಕೊಡುತ್ತಾನೆ. ಅದು ಆಗಿನಿಂದ ಈಗಿನ ತನಕ ಹಾಗೇ ಉಳಿದುಬಿಟ್ಟಿದೆ. ಕ್ರೇನ್ಸ್ ಹೆಸರಿನಲ್ಲಿ ಕ್ರೇನ್ಸ್ ಪಕ್ಷಿಯ ಬದಲಾಗಿ ಪೆಲಿಕನ್ ಪಕ್ಷಿ ಲೋಗೋ!
ಹೀಗೆ ದೊಡ್ಡ ಕಂಪನಿಗಳ ಹೆಸರುಗಳು ನೋಡಿದರೆ ಹೆಸರಿನಲ್ಲಿ ಏನೂ ಇಲ್ಲ ಅನ್ನಿಸುವುದು ಸಹಜ. ವೃತ್ತಿಪರತೆಯಿಂದ ಕೆಲಸ ಮಾಡಿದರೆ ಹೆಸರುಗಳನ್ನು ಮೀರಿ ಕಂಪನಿಗಳು ಬೆಳೆಯುತ್ತವೆ.
ತಮಾಷೆಯಾಗಿದೆ!
ನಾನು ಆಪಲ್ ಕಂಪನಿಯಲ್ಲಿ ಎಷ್ಟು ಬೇಕಾದರೂ ಸೇಬನ್ನು ಸವಿಯಬಹುದು ಎಂದುಕೊಂಡಿದ್ದೆ! 🙂