ಹೇಮರೆಡ್ಡಿ ಮಲ್ಲಮ್ಮ ಬರುತ್ತಿದ್ದಾಳೆ!

ನಾಳೆ ಬಿಡುಗಡೆಯಾಗುತ್ತಿರುವ ಕು೦ ವೀರಭದ್ರಪ್ಪ ಅವರ ’ಹೇಮರೆಡ್ಡಿ ಮಲ್ಲಮ್ಮ’ ಪುಸ್ತಕದ ಕೆಲವು ಪುಟಗಳು ನಿಮಗಾಗಿ : ಆತ ಯುವಕ ಮಾತ್ರವಲ್ಲ, ವರ್ಚಸ್ವಿ ಸಹ. ಅದಕ್ಕೆ ನಿದರ್ಶವೆಂದರೆ ಅವರೆಲ್ಲ ತನಗೆ ದಾರಿ ಮಾಡಿಕೊಟ್ಟದ್ದು, ರೆಪ್ಪೆಯಾರಿಸದಂತೆ ನೋಡಿದ್ದು. ಆದರೂ ತಾನು ವಿನಯಪೂರ್ವಕವಾಗಿದ್ದ, ಒಂದು ಹೆಜ್ಜೆಗೆ ರಾಜಾವಿಕ್ರಮಾರ್ಕದ ಭೋಜರಾಜನನ್ನೂ, ಇನ್ನೊಂದು ಹೆಜ್ಜೆಗೆ ದ್ರೌಪದಿ ವಸ್ತ್ರಾಪಹರಣ ನಾಟಕದ ದುಶ್ಯಾಸನನನ್ನೂ, ಮತ್ತೊಂದು ಹೆಜ್ಜೆಗೆ ರಾಣಿ ಚೆನ್ನಮ್ಮ ನಾಟಕದ ಮಲ್ಲಸರ್ಜನನ್ನೂ, ಮಗುದೊಂದು ಹೆಜ್ಜೆಗೆ ಟಿಪ್ಪುಸುಲ್ತಾನ್ ನಾಟಕದ ಹೈದರಾಲಿಯನ್ನೂ ತನ್ನ ದೇಹದಿಂದ ವಿಸಜರ್ಿಸುತ್ತ ಒಳಗೆ ಪ್ರವೇಶಿಸಿ ಒಂದು ಮೂಲೆಯಲ್ಲಿ ಮೈದುಡಿ ಕುಳಿತುಕೊಂಡನು. ಸಹವಂದಿಗರನ್ನು ಅಪ್ಪ, ಅಣ್ಣ, ಧಣಿ, ಸಾಹುಕಾರ, ಅನ್ನದಾತ ಎಂಬ ಗೌರವಪೂರ್ವಕ ಸಂಬೋಧವಾಚಕಗಳನ್ನು ಉಪಯೋಗಿಸಿ ಅಲ್ಲಿದ್ದವರನ್ನು ಮಾತಾಡಿಸಿ ಪುಳಕಗೊಳಿಸಿದನು. ಸಾಹೇಬರೆ, ಸರಸ್ವತಿವರಪುತ್ರರೇ ಎಂದು ನನ್ನನ್ನೂ ಸಹ. ಪರವಾಯಿಲ್ಲ, ಬದುಕುವ ಕಲೆ ರಕ್ತಗತವಾಗಿರುವುದೆಂದುಕೊಳ್ಳುತ್ತ ದಿಟ್ಟಿಸುವ ಪ್ರಯತ್ನ ನಡೆಸಿದೆ, ಸಾಧ್ಯವಾಗಲಿಲ್ಲ. ಎಲ್ಲರೂ ಆತನತ್ತ ರೆಪ್ಪೆಯಾರಿಸದಂತೆ ನೋಡುತ್ತ ಉಗುಳು ನುಂಗುತ್ತಿರುವವರೆ! ಪಪ್ಪಾಯಿವರ್ಣ, ದುಂಡುಮುಖ, ಹರವಾದ ನೊಸಲು, ನೀಳನಾಸಿಕ, ಹೊಳೆವ ಕಣ್ಣುಗಳು, ಕಾಮನಬಿಲ್ಲಿನೋಪಾದಿಯಲ್ಲಿ ಹುಬ್ಬುಗಳು, ತುಂಬುಗಲ್ಲ, ಕಪ್ಪನೆಯ ನೀಳಕೇಶರಾಶಿ, ಓಲೆಗಳಲಂಕರಿಸಿರುವ ಕಿವಿಗಳು, ಪರಶಿವನ ಕೊರಳನ್ನು ನೆನಪಿಸುವಂತಿರುವ ಕುತ್ತಿಗೆ, ಹರವಾದ ಎದೆ, ತುಂಬುದೋಳುಗಳು, ಒಟ್ಟಾರೆ ಹೇಳುವುದಾದರೆ ಭಸ್ಮಾಸುರನನ್ನು ಕೊಲ್ಲುವ ಸಂದರ್ಭದಲ್ಲಿ ವಿಷ್ಣು ತಾಳಿದ ಮೋಹಿನಿಯ ಅಪರಾವತಾರವೇ ತಾನೆನಿಸಿದ. ಜಲಂಧರ ಎಂಬ ಹೆಸರು ಸೂಕ್ತವೆನ್ನಿಸಲಿಲ್ಲದಿದ್ದರೂ ಶಿವನು ಇಂದ್ರನ ವಿರುದ್ಧ ಪ್ರಯೋಗಿಸಬೇಕೆಂದುಕೊಂಡಿದ್ದ ಕ್ರೋಧಾಗ್ನಿಯನ್ನು ಬೃಹಸ್ಪತಿಯ ಸಲಹೆ ಮೇರೆಗೆ ಲವಣ ಸಮುದ್ರದಲ್ಲಿ ವಿಸಜರ್ಿಸಿದ ಪೌರಾಣಿಕ ಜಲಂಧರನನ್ನು ಜ್ಞಾಪಿಸಿಕೊಂಡೆ. ಪಾರ್ವತಿಯನ್ನು ಬಯಸುವುದರ ಮೂಲಕ ಶಿವನಿಂದ ಕೊಲೆಯಾದ ಜಲಂಧರ ಎಂಬ ರಾಕ್ಷಸನೂ ನೆನಪಾದನು. ಪೌರಾಣಿಕ ಕಾಲದ ಆ ಜಲಂಧರನೆಲ್ಲಿ! ವರ್ತಮಾನ ಕಾಲದ ಈ ಜಲಂಧರನೆಲ್ಲಿ! ಎಲ್ಲರೂ ಎಷ್ಟು ಹೊತ್ತು ಮೌನದಿಂದಿರಲಾದೀತು! ಎಂದಿನಂತೆ ನನ್ನ ಮನದಿಂಗಿತವನ್ನರಿತ ಶೇಷಣ್ಣನು.. ಜಲಂಧರ ಎರಡು ಮೂರು ದಿವಸದಿಂದ ನೋಡಬೇಕೆಂದು ಕನವರಿಸುತ್ತಿದ್ದೆಯಲ್ಲವೆ! ಅಗೋ ಅವರೆ ನೋಡು, ನಿನ್ನ ಮನಸ್ಸಿನಲ್ಲಿರುವ ಸಾರ್ಗಿಂತ ನಿನ್ನೆದುರಿಗಿರುವ ಸಾರ್ ಒಳ್ಳೆಯವರು. ಅದೇನು ನಿನ್ನ ಮನಸ್ಸಿನಲ್ಲಿರುವುದೋ ಅದೆಲ್ಲವನ್ನೂ ಮಾತಾಡಿಬಿಡು, ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗಬೇಡ. ಸುಮ್ಮನೆ ಯಾಕೆ ಕುಳಿತಿರುವಿ! ಎಂದು ಮಾತಿಗೆ ಚಾಲನೆ ನೀಡಿದ. ಅದಕ್ಕೆ ತಾನು ಎಲ್ಲರ ಕಡೆ ಮತ್ತು ನನ್ನ ಕಡೆ ವಿಶೇಷವಾಗಿ ನೋಡುತ್ತ.. ವಾಗಿಲಿ ಎಂದಾಕ್ಷಣ ನೀವು ನೆನಪಾದಿರಿ ಸಾರ್, ನಿಮ್ಮಂಥ ಸರಸ್ವತಿ ವರಪುತ್ರರು ಶಾಲಾ ಮಾಸ್ತರರಾಗಿರುವುದು ಈ ಊರಿನ ಪುಣ್ಯ ಸಾರ್ ಎಂದು ವಿಶೇಷಣಗಳೊಂದಿಗೆ ಮಾತು ಆರಂಭಿಸಿದ, ನನಗೆ ಮಜುಗರವಾಯಿತು. ತಾನು ಕಲಾವಿದನೋ! ಹೊಗಳುಭಟ್ಟನೋ! ಇಲ್ಲವೆ ಕಲಾವಿದನೋ! ನೇರವಾಗಿ ಹೇಳಿದರಾಗುತ್ತಿತ್ತಲ್ಲವೆ! ಅದೆಲ್ಲ ಬಿಟ್ಟು ಹೊಗಳಿಕೆಯ ಮಾತುಗಳ ಅಗತ್ಯವೇನಿತ್ತು! ಅದನ್ನು ಗ್ರಹಿಸಿದ ಶೇಷಣ್ಣ ಆತನಿಗೆ ಮಾತ್ರ ಕೇಳಿಸುವಂತೆ ಕಿವಿಯಲ್ಲಿ ಏನೋ ಹೇಳಿದ, ಅದಕ್ಕೆ ಪುರಾವೆಯಾಗಿ ತಾನು ತನ್ನ ಜೇಬಿನಿಂದ ಮೆಲ್ಲಗೆ ವಾತರ್ಾಪತ್ರಿಕೆಯ ವಾರದ ಪುರವಣಿಯನ್ನು ತೆಗೆದು ಸಾದರಪಡಿಸುತ್ತ.. ಈ ಕಥೆಯನ್ನು ಓದಿದಂದಿನಿಂದ ನಾನು ನಿಮ್ಮ ಅಭಿಮಾನಿಯಾಗಿರುವೆ ಸಾರ್ ಎಂದು ಹೇಳಿದ. ಯಾವ ಕಥೆ! ಕಥೆಗಾರ ಯಾರು! ಕುತೂಹಲ ಇಮ್ಮಡಿಗೊಂಡಿತು. ಸಂಭ್ರಮದಿಂದ ಅದನ್ನು ಕೈಗೆತ್ತಿಕೊಂಡು ನೋಡಿದೆ. ಅರೆ ಅದನ್ನು ಬರೆದಿರುವ ಕಥೆಗಾರ ನಾನೆ! ಕೆಲವು ವಾರಗಳ ಹಿಂದೆ ಹೀಗೆ ಬರೆದು ಹಾಗೆ ಪ್ರಕಟಣೆ ಸಲುವಾಗಿ ರವಾನಿಸಿದ್ದೆ, ಮರೆತೂ ಬಿಟ್ಟಿದ್ದೆ, ಅದನ್ನು ಸಂಪಾದಕರು ಪ್ರಕಟಿಸಬಹದೆಂದು ಭಾವಿಸಿರಲಿಲ್ಲ. ಸಂಪಾದಕರು ಗೌರವಪ್ರತಿಯನ್ನು ನನಗೆ ಕಳಿಸಿರಬಹುದು, ಅದು ಪ್ರಯಾಣದ ನಡುವೆ ಎಲ್ಲೋ ಅಂತಧರ್ಾನಗೊಂಡಿರಲೂಬಹುದೆಂದು ಊಹಿಸಿದೆ. ಓಹ್! ಅದರಲ್ಲಿರುವುದು ವಾಗಿಲಿಯ ದೈನಂದಿನ ಕಥೆ, ಊರಲ್ಲಿನ ಯಾರಾದರು ಅದನ್ನು ಓದಿದ್ದರೆ! ಭಯವಾಯಿತು. ಓದಿರಲಿಕ್ಕಿಲ್ಲ, ಓದಿದ್ದರೆ ಸುದ್ದಿಯಾಗದೆ ಇರುತ್ತಿರಲಿಲ್ಲ. ಓದಿದ್ದರೂ ಅದು ಕಥೆ ಎಂದಾಗಲೀ ಅದರ ಕತೃ ನಾನೇ ಎಂದಾಗಲೀ, ಅದರಲ್ಲಿರುವ ವಸ್ತು ತಮ್ಮ ಊರಿನದ್ದೇ ಎಂದಾಗಲೀ ಅರ್ಥ ಮಾಡಿಕೊಂಡಿರಲಾರರು, ಇದು ನನ್ನಂಥ ಯಾವುದೇ ಕಥೆಗಾರನ ಸೌಭಾಗ್ಯವಲ್ಲದೆ ಇನ್ನೇನು! ಉಳಿದವರು ನನ್ನ ಕೈಯಿಂದ ಇಸಿದುಕೊಂಡು ಒಬ್ಬೊಬ್ಬರಾಗಿ ಕಣ್ಣಾಡಿಸಿದರು. ಓದಲರಿಯದ, ಬರೆಯಲರಿಯದ, ಕಥೆ ಎಂದರೇನೆಂದರಿಯದ ಅವರೆಲ್ಲ ಅದನ್ನು ನೋಡಿ ಓಹ್ಹೋ, ಹ್ಹಾ ಹ್ಹಾ ಎಂದು ಉದ್ಗರಿಸುತ್ತ ಅದನ್ನು ಪುನಃ ಜಲಂಧರನಿಗೆ ಮರಳಿಸಿದರು. ಅದನ್ನು ತಾನು ಗೌರವಪೂರ್ವಕವಾಗಿ ಮಡಚಿ ತನ್ನ ಜೇಬಿನಲ್ಲಿರಿಸಿಕೊಂಡು ಮಾತು ಆರಂಭಿಸಿದನು. ದ್ವಾಪರ ಕಾಲದಲ್ಲಿ ರತ್ನಗಳನ್ನು ಮಾತ್ರ ತಿಂದು ಜೀವಿಸುತ್ತಿದ್ದ ಪಕ್ಷಿಗಳಿದ್ದವು, ಅವುಗಳಿಗೆ ಜೀವಿಸಲು ಕಲಿಯುಗದಲ್ಲಿ ಎಂಜಲೆಲೆ ಸಹ ಸಿಗುತ್ತಿಲ್ಲ, ಅವುಗಳಂತಾಗಿರುವುದು ನಮ್ಮಂಥ ಕಲಾವಿದರ ಪರಿಸ್ಥಿತಿ ಸಾರ್! ಎಂದು ಹೇಳುತ್ತ ಹೇಳುತ್ತ ತನ್ನ ಕಣ್ಣುಗಳನ್ನು ತೇವ ಮಾಡಿಕೊಂಡನು. ತಮ್ಮ ಕಂಪನಿಯ ದುರಂತ ಕಥೆಯನ್ನು ಅಪಾತ್ರರೆದುರು ವಿವರಿಸಬಾರದೆಂದೋ ಏನೋ! ಹೇಳುತ್ತಿದ್ದಂತೆ ಉಪಾಯಾಂತರದಿಂದ ಹಾಗೆ ಉಪಸಂಹರಿಸಿಕೊಂಡನು. ಅವರೆಲ್ಲರು ಅಲ್ಲಿಂದ ನಿರ್ಗಮಿಸಿದ ಬಳಿಕ ಹೇಳಿದರೊಳಿತೆಂದು ಭಾವಿಸಿ ಸಮಯ ಪ್ರಜ್ಞೆ ಮೆರೆದದ್ದು ನನಗೆ ಇಷ್ಟವೆನಿಸಿತು. ಅವರೆಲ್ಲ ಅಲ್ಲಿಂದ ಹೊರಡುವ ಸನ್ನಾಹದಲ್ಲಿರುವಾಗಲೇ.. ನಮ್ಮಂಥ ರಾಜರ ಪಾತ್ರವಹಿಸುವ ಗಂಡಸರು ಎಲ್ಲೋ ಒಂದು ಕಡೆ ಇರುವೆವು, ಆದರೆ ರಾಣಿ ಪಾತ್ರವಹಿಸುವ ಹೆಂಗಸರು ಎಲ್ಲಂದರಲ್ಲಿ ಇರಲಾಗುವುದೆ! ಅದರಲ್ಲೂ ನನ್ನ ಒಡಹುಟ್ಟಿದ ತಂಗಿಯ ಖಾಸಗಿ ಕೆಲಸಗಳಿಗೆ ಮುಚ್ಚುಮರೆ ಬೇಕಲ್ಲವೆ! ಪರಸ್ಥಳ ಪ್ರಾಣಸಂಕಟ! ನಿಮ್ಮೆದರು ಕೈಮುಗಿದು ಕೇಳಿಕೊಳ್ಳವೆ, ಊರಿನ ಪುಣ್ಯಾತ್ಮರಾದ ತಾವು ಎಂಥದಾದರೊಂದು ಮನೆಯನ್ನು ನಮಗೆ ಬಾಡಿಗೆ ಕೊಟ್ಟರೆ ಸಂತೋಷ, ಫ್ರೀಯಾಗಿ ಕೊಟ್ಟಲ್ಲಿ ಇನ್ನೂ ಸಂತೋಷ, ನಮ್ಮಂಥ ಬಡಕಲಾವಿದರಿಗೆ ತಂದೆ ಅಂದರೂ ನೀವೆ ತಾಯಿ ಎಂದರೂ ನೀವೆ ಅನ್ನದಾತರೆಂದರೂ ನೀವೆ ಎಂದು ಸಮಕ್ಷಮ ಎದ್ದು ನಿಂತು ಕಲಾತ್ಮಕವಾಗಿ ಬಾಗಿ ಕೈಜೋಡಿಸಿ ನಮಸ್ಕರಿಸಿದನು, ಕಣ್ಣುಗಳಿಂದ ಅಂಗಲಾಚಿದನು. ಇನ್ನೇನು ಹೊರಡುವ ಸನ್ನಾಹದಲ್ಲಿದ್ದ ಅವರೆಲ್ಲ ಅವನ ಕಣ್ಣುಗಳಲ್ಲಿದ್ದ ನೀರನ್ನು ಗ್ರಹಿಸಿದರು. ಅಭಿನಯದ ಮೂಲಕ ಹತ್ತಾರು ರಾಜಮಹಾರಾಜರುಗಳನ್ನು ಆವಹಿಸಿಕೊಳ್ಳುವ ಕಲಾವಿದ ತಮ್ಮಂಥ ಮಾಮೂಲು ಪ್ರಜೆಗಳಿಗೆ ನಮಸ್ಕರಿಸುವುದೆಂದರೆ! ಅಂಗಲಾಚುವುದೆಂದರೆ! ಕಣ್ಣಲ್ಲಿ ನೀರು ತಂದುಕೊಳ್ಳುವುದೆಂದರೆ! ಸಾಮಾನ್ಯ ಸಂಗತಿಯೆ! ನಿಂತವರು ಯೋಚಿಸಿ ಪುನಃ ಕುಳಿತರು. ಪರಸ್ಪರ ಮುಖಗಳನ್ನು ನೋಡಿಕೊಂಡರು. ಅಲ್ಲಿದ್ದರವು ಮೊದಲೇ ಹಿಂದೆಮುಂದೆ ನೋಡದೆ ಸಹಾಯ ಹಸ್ತ ಚಾಚುವ ಕೈಗಳು. ರಾಜರುಗಳ ಪಾತ್ರ ನಿರ್ವಹಿಸುವವನೂ, ಕಂಪನಿಯ ಮಾಲಕನೂ ಸುಂದರ ಸಹೋದರಿಯ ಅಣ್ಣನೂ ಆದಂಥ ಜಲಂಧರ ತನ್ನ ಕಣ್ಣುಗಳನ್ನು ಒದ್ದೆಮಾಡಿಕೊಂಡು, ತಮ್ಮನ್ನು ಗೌರವಪೂರ್ವಕವಾಗಿ ಸಂಬೋಧಿಸಿದನೆಂದ ಮೇಲೆ ತಮ್ಮೆಲ್ಲರ ಮನಸ್ಸುಗಳು ಕರಗದಿರಲು ಸಾಧ್ಯವೆ! ಅದೂ ಅಲ್ಲದೆ ಅವರೆಲ್ಲ ತಮ್ಮೆದರು ದೇಹಿ ಎಂದು ನಿಂತವರನ್ನು ಎಂದು ಬರಿಗೈಲಿ ಕಳಿಸುವವರಂತೂ ಮೊದಲೇ ಅಲ್ಲ. ಹುಂಬತನಕ್ಕೆ ಉತ್ಸಾಹಕ್ಕೆ ಹೆಸರಾಗಿದ್ದ ಲಚುಮಿರೆಡ್ಡಿ ಎಂಬ ನಾಮವಾಚಕದಲ್ಲಿ ಅಮೃತಾಂಜನ ಎಂಬ ಉಪಾಧಿ ಅಂಟಿರುವುದಕ್ಕೆ ಕಾರಣವುಂಟು, ಅದೆಂದರೆ ತಾನು ಹೆಬ್ಬಟಂ ರೆಡ್ಡಿಯವರ ಸಾರೋಟಿನ ಖಾಯಂ ಸಾರಥಿಯು. ವಾಗಿಲಿ ಸ್ವಾಸ್ಥಿಯಾದರೂ ಬಳ್ಳಾರಿಯ ಪ್ರತಿಷ್ಠಿತ ಬಡಾವಣೆಯಲ್ಲಿ ವಾಸಿಸುತ್ತಿರುವ ಜಮೀನ್ದಾರ ರೆಡ್ಡಿಯವರು ಸದರಿ ಗ್ರಾಮಕ್ಕೆ ಆಗಮಿಸಿ ನಿರ್ಗಮಿಸುವುದು ವರ್ಷಕ್ಕೊಂದೆರಡು ಸಲ ಮಾತ್ರ. ಅದೂ ತಮಗೆ ಪಿತ್ರಾಜರ್ಿತವಾಗಿ ಬಂದಿರುವ ಸಾರೋಟಿನಲ್ಲಿ! ಉಳಿದಂತೆ ಅದಕ್ಕೆ ಕೆಲಸವಿರುವುದಿಲ್ಲ, ಲಚುಮಿರೆಡ್ಡಿಯ ದೈನಂದಿನ ಕಾಯಕವೆಂದರೆ ಆ ವಾಹನವನ್ನು ದಿನಕ್ಕೆರಡು ಸಲ ತೊಳೆದು ಶುಭ್ರಗೊಳಿಸುವುದು, ಅದರೆರಡು ಅಚ್ಚ ಬಿಳಿವರ್ಣದ ಕುದುರೆಗಳಿಗೆ ಜಳಕ ಸಂಧ್ಯವಂದನೆಗಳನ್ನು ಮಾಡಿಸುತ್ತ ಮಕ್ಕಳ ಹಾಗೆ ನೋಡಿಕೊಳ್ಳುವುದು, ಅವರಿವರೆದುರು ಆ ಮೂಕಪ್ರಾಣಿಗಳ ಗುಣಗಾನ ಮಾಡುವುದು. ಅಷ್ಟೇ ಅಲ್ಲದೆ ಪರರಿಗೆ ಸಹಾಯ ಮಾಡಲು ತುದಿಗಾಲಲ್ಲಿ ನಿಂತು ಓಡಾಡುವುದು, ತನ್ನ ಧಣಿಗೆ ಹೇಳಿ ಅವರಿವರಿಗೆ ಸಹಾಯ ಮಾಡಿಸುವುದು. ಹೀಗಾಗಿ ವಾಗಿಲಿಯ ಪ್ರತಿಯೊಂದು ಮನೆಗೆ ತಾನು ಅನಿವಾರ್ಯ. ತಾನು ಯಾರ ಮನೆಗೇ ಹೋಗಲಿ, ಅನ್ನ ಕೇಳುವುದಿಲ್ಲ ಒಡವೆ ವಸ್ತ್ರ ಬಯಸುವುದಿಲ್ಲ, ತಾನು ತನ್ನ ಸುಕ್ಕುಗಟ್ಟಿದ ನೊಸಲನ್ನು ಮುಂದಕ್ಕೆ ಚಾಚಿ ಬಯಸುವುದು ಅಮೃತಾಂಜನವನ್ನು ಮಾತ್ರ. ಅವರು ತ್ರಿಕರಣಪೂರ್ವಕವಾಗಿ ನೀಡುವ ಅಮೃತಾಂಜನ ಡಬ್ಬಿಯ ಅರ್ಧಭಾಗವನ್ನು ತೋರುಬೆರಳಿಂದ ತೆಗೆದುಕೊಂಡು ತನ್ನ ನೊಸಲ ವಿಸ್ತೀರ್ಣದ ತುಂಬೆಲ್ಲ ಲೇಪಿಸಿಕೊಂಡನೆಂದರೆ ತಾನು ಉತ್ಸಾಹದ ಚಿಲುಮೆಯೇ ಆಗಿಬಿಡುವನು. ಆದ್ದರಿಂದಾಗಿ ಊರಲ್ಲಿ ಹತ್ತಾರು ಆ ಹೆಸರಿನವರಿರುವುದರಿಂದ ಆತನನ್ನು ಸಾಮಾಜಿಕವಾಗಿ ಗುರುತಿಸುವುದು ಅಮೃತಾಂಜನ ಲಚುಮಿರೆಡ್ಡಿ ಎಂದು. ಅಗತ್ಯವಿರದಿದ್ದರೂ ನಾನು ಆತನ ಸಲುವಾಗಿ ಪ್ರತಿ ತಿಂಗಳೂ ಅಮೃತಾಂಜನ ಡಬ್ಬಿಯನ್ನು ಖರೀದಿಸಿ ಆತನ ಕೈಗೆ ಎಟಕುವ ರೀತಿಯಲ್ಲಿ ಪ್ರದರ್ಶಕವಾಗಿ ಇಟ್ಟಿರುವುದು ಮಾಮೂಲು. ಆ ದಿವಸವೂ ಆತ ಬಂದವನೆ ಟೇಬಲ್ ಮೇಲಿದ್ದ ಅಮೃತಾಂಜನ ಸೀಸೆಯನ್ನು ಅಭಿಮಾನಪೂರ್ವಕವಾಗಿ ಕೈಗೆತ್ತಿಕೊಂಡ. ಬಾಮನ್ನು ತನ್ನ ನೊಸಲಿನಾದ್ಯಂತ ಲೇಪಿಸಿಕೊಂಡ, ಕಣ್ಣುಗಳಿಂದಲೂ ಮೂಗಿನಿಂದಲೂ ಧಾರಾಕಾರವಾಗಿ ಕೃತಕ ನೀರು ಸುರಿಸತೊಡಗಿದ, ವಿಜೃಂಭಿಸುತ್ತ ಪ್ರವರ ಆರಂಭಿಸಿದನು.

 

]]>

‍ಲೇಖಕರು G

May 11, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. surekha

    ನಮ್ಮ ಅಂಗಡಿಯಲ್ಲಿ ನಾಳೆ ಬಿಡುಗಡೆಯಾಗುವ ಪುಸ್ತಕಕ್ಕೆ ಇಂದೇ ಬೇಡಿಕೆ ಬಂದಿತ್ತು. ಅವಧಿಯಲ್ಲಿ ನೋಡಿದ ಜಾಹೀರಾತಿನಿಂದ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: