ಹೊನಗ್ಯಾನ ಹಳ್ಳದ ದಂಡೀಗುಂಟ..

ಡಾ.ಎಸ್.ಬಿ.ಜೋಗುರ

ದುಗ್ಗಪ್ಪನ ಗುಡಸಲ ಅನ್ನೂದು ಬೇಕಾಬಿಟ್ಟಿ ತೂತು ಬಿದ್ದ ಛತ್ರಿ ಆದಂಗ ಆಗಿತ್ತು. ಹ್ಯಾಂಗ ಮಾಡದರೂ ಸೋರೂದು ನಿಂದರತಿರಲಿಲ್ಲ. ನೀರ ಅನ್ನೂದು ಮೊಳಕಾಲ ಮಟ ತುಂಬಕೊಂಡಿತ್ತು. ಬರೀ ಸೋರಿದ್ದು ಅಟ್ಟೇ ಅಲ್ಲ, ಮನಿ ಹೊರಗ ಆಜೂ ಬಾಜೂ ನಿಂತ ನೀರ ಸೈತ ಒತಗೊಂಡು ದುಗ್ಗಪ್ಪನ ಮನಿಯೊಳಗೇ ಬರತಿತ್ತು. ಇರೋ ಒಂದು ಹೊರಸಿನ ಮ್ಯಾಲ ಹೆಂಡತಿ ಎಲ್ಲವ್ವ ಮಗಳು ಮಾದೇವಿ ಮಗ ಭೀಮಪ್ಪನ ಕರಕೊಂಡು ಒಂದು ಪ್ಲಾಸ್ಟಿಕ್ ಹೊದಗೊಂಡು ಕುಂತಿದ್ದ.

ಮಳಿಗಾಲ ಇನ್ನೂ ತಿಂಗಳ ಐತಿ ಅನ್ನೂದರೊಳಗೇ ಎಲ್ಲವ್ವ ಗಂಡಗ ಗಿಣಿಗಿ ಹೇಳಿದಂಗ ಹೇಳಿದ್ದಳು. ‘ಈ ಸಾರಿ ಗುಡಿಸಲ ಬಾಳ ಲಡ್ಡ ಆದಂಗ ಆಗೈತಿ, ಮ್ಯಾಲ ನಿರಕೀಯೊಳಗ ಇಲಿ ಒಡ್ಯಾಡಾವ, ಈ ಸಾರಿ ಬಾಳ ಸೋರತೈತಿ ಈಗೇ ಹಳ್ಳದ ಕಡಿ ಹೋಗಿ ತುಸು ಆಪ ಸಿಕ್ಕರ ಕೊಯ್ಕೊಂಡು ಬಾ, ಮುಂದ ಆಗೂವಂಗಿಲ್ಲ’ ಅಂತ ಚ್ಯಾರಿ ವರದರೂ ದುಗ್ಗಪ್ಪ ಕಿವ್ಯಾಗ ಹಾಕೊಂಡಿರಲಿಲ್ಲ. ‘ಒಟ್ಟ ಏನರೇ ಒಂದು ಹೇಳುವಕ್ಕಿ’ ಅನ್ಕೊಂತ ಬೀಡಿ ಸೇದತಾ ತಲಿ ಕೆರಕ್ಕೊಂತ ನಡದುಬಿಟ್ಟಿದ್ದ. ಹೊನಗ್ಯಾನ ಹಳ್ಳ ಬ್ಯಾಸಗಿಯೊಳಗ ಎಟ್ಟು ಶಾಂತ ಇರತಿತ್ತು. ಮಳಿಗಾಲದಾಗ ಅಟ್ಟೇ ರಾವ್ ಇರತಿತ್ತು. ಸೊಕ್ಕು ತುಂಬಿ ಉಕ್ಕಿ ಬರುವಂಗ ಕಾಣತಿತ್ತು.

crowsಕೃಷ್ಣಾ ಮತ್ತು ಭೀಮಾ ನದಿ ಎರಡೂ ಸೇರೋ ಜಾಗದೊಳಗ ಇರೋ ಈ ಹೊನಗ್ಯಾನ ಹಳ್ಳದೊಳಗ ಅಪಾಟ ಹುದುಲ ಇರತಿತ್ತು. ಹೀಂಗಾಗೇ ದರಾವರ್ಷ ಮಳಿಗಾಲದೊಳಗ ಕಮ್ಮೀತಕಮ್ಮಿ ಒಂದೆರಡು ಹೆಣಾ ಬೀಳೂವೇ. ಹಿಂದಿನ ವರ್ಷ ದುಗ್ಗಪ್ಪನ ಅಣ್ಣ ಕರೆಪ್ಪನ ಮಗಳು ಅಂಬವ್ವ ವಗೇಣ ಒಗ್ಯಾಕ ಹೋಗಿ, ಕಾಲ ಕೆಳಗಿನ ಕಲ್ಲ ಪಿಸಕಿ, ಒಳಗ ಹೋದಾಕಿ ಹೆಣಾ ಆಗೇ ಹೊರಗ ಬಂದಿದ್ದಳು. ಆವಾಗಿನಿಂದ ಕೆಳಗಿನ ಕೇರಿ ಹೆಂಗಸರಾರೂ ವಗೇಣ ಒಗ್ಯಾಕ ಸಂಜೀ ಮುಂದ ಹೋಗೂದು ಬ್ಯಾಡ ಅಂತಿದ್ದರು. ಹಂಗ ಅಂದ ಮ್ಯಾಲೂ ಹೋಗವರನ್ನ ಕಂಡು ಅಂಬವ್ವ ದೆವ್ವ ಆಗಾಳ್ಯಾಂತ ಅನ್ನೋ ಸುದ್ದಿನ್ನ ಹರಿಬಿಟ್ಟ ಮ್ಯಾಲ ಬಿಲ್ಕುಲ್ ಕಡಮಿ ಆಗಿತ್ತು. ಇಂಥಾ ಹೊನಗ್ಯಾನಹಳ್ಳದ ಸುತ್ತಾಲಕೂ ಮೊದಲ ಬಾಳ ಗಬಾಡ ಇತ್ತು. ಹೊಳಿ ದಂಡಿ ಮ್ಯಾಲ ಲಟ್ಟಾ ಲಟ್ಟಾ ದೆವ್ವಿನಂಥಾ ಬೇವಿನ ಗಿಡ ಇದ್ವು. ಹಿಂಗಾಗಿ ಕರೀ ಮುಸುಡಿ ಮಂಗ್ಯಾಗೋಳು ಇಲ್ಲಿ ಹಿಂಡಿಂಡಾಗಿ ಖಾಯಂ ಟಿಕಾಣಿ ಹೂಡಿರತಿದ್ವು ಅದಕ್ಕಂತೇ ಈ ಹಳ್ಳಕ್ಕ ಹೊನಗ್ಯಾನ ಹಳ್ಳಂತ ಹೆಸರು ಬಂದಿತ್ತು.

ಆ ಹಳ್ಳಿಗೆ ಗೋಡೂರು ಅಂತ ಹೆಸರ ಯಾಕ ಬಂತು ಅಂತ ಕೇಳದರ ಅದಕ್ಕೂ ಎರಡು ಮೂರು ತುಂಡು ತುಂಡ ಕತಿ ಇದ್ವು. ಇಲ್ಲಿ ನೂರಾರು ವರ್ಷಗಳಿಂದ ಮ್ಯಾಲಿನಕೇರಿ ಮತ್ತು ಕೆಳಗಿನಕೇರಿ ಎರಡೂ ಗ್ವಾಡಿ ಕಟ್ಟಿದಂಗೇ ಇದ್ವು. ಅಲ್ಲಿ ಮಂದಿ ಅಲ್ಲೇ. ಇಲ್ಲಿ ಮಂದಿ ಇಲ್ಲೇ ಅವರ ಕೇರಿಯೊಳಗ ಇವರು ಹೋಗುವಂಗಿಲ್ಲ. ಇವರ ಕೇರಿಯೊಳಗ ಅವರು ಬರುವಂಗಿಲ್ಲ ಅನ್ನೋ ಕರಾರು ಎಲ್ಲರೂ ಒಪ್ಪಿಕೊಂಡು ನಡಕೊಳುವಂಗ ಇತ್ತು. ಹಂಗಾಗೇ ಆ ಹೆಸರು ಬಂತು ಅಂತ ಒಂದು ಕತಿಯಾದರ, ಈ ಊರಾಗ ಇರೋ ಎರಡು ನೂರು ಮನಿ ಪೈಕಿ ನೂರಕ್ಕಿಂತಾ ಹೆಚ್ಚು ಗೌಡರ ಮನಿಗಳೇ ಇದ್ವು ಹಿಂಗಾಗಿ ಇದು ಮೊದಲು ಗೌಡೂರು, ಆಮ್ಯಾಲ ಬರ್ತಾ ಬರ್ತಾ ಗೋಡೂರು ಐತು ಅನ್ನೋದು ಇನ್ನೊಂದು ಕತಿ. ಈ ಎರಡೂ ಕತೆಗಳು ಈ ಊರಿಗೆ ಹೊಂದಂಗೇ ಇದ್ವು. ಹೇಳವರಿಗಿ ಮತ್ತ ಕೇಳವರಿಗಿ ಇವೆರಡೂ ಕತಿ ಖರೆನೇ ಅನಸುವಂಗಿತ್ತು.

ಹೊನಗ್ಯಾನ ಹಳ್ಳದ ಉತ್ತರ ದಿಕ್ಕಿಗಿ ಒಂದು ಗುಡ್ಡಿತ್ತು. ಅದರ ಹೆಸರು ಬರ್ಲಗುಡ್ಡ. ಅಲ್ಲಿದ್ದ ನೆಲ ಬಾಳ ಗಟ್ಟಿ, ಬರೀ ಕಲ್ಲು. ಸಣ್ಣ ಸಣ್ಣ ಜಾಲೀ ಕಂಟಿ ಬಿಟ್ಟರ, ಅಲ್ಲಿ ಏನೂ ಬೆಳಿ ಬೆಳೆಯೂವಂಗಿರಲಿಲ್ಲ. ಅಲ್ಲಿಗಿ ಹೋಗಬೇಕಾದರ ಹೊಳಿ ದಾಟೇ ಹೋಗಬೇಕಿತ್ತು. ಬರೀ ರಣ ರಣ ಅಂತಿತ್ತು. ಕಲ್ಲ ಮತ್ತ ಮುಳ್ಳ ಕಂಟಿ ಬಿಟ್ಟರ ಮತ್ತೇನೂ ಅಲ್ಲಿ ಇರಲಿಲ್ಲ. ಹಿಂಗಾಗಿ ಅಲ್ಲಿ ಯಾರೂ ಕಾಲಿಟ್ಟರಲಿಲ್ಲ. ಆ ಬರ್ಲಗುಡ್ಡ ಒಂದು ನಡುಗಡ್ಡೆ ಆದಂಗ ಆಗಿತ್ತು. ಮೊದಲಿನ ಕಾಲದಲ್ಲಂತೂ ಮಳೆಗಾಲ ಮುಗಿಯೂಮಟ ಧೋ..ಧೋ.. ಅಂತ ಮಳಿ ಹೊಡದೇ ಹೊಡಿಯೂದು ಹಿಂಗಾಗಿ ತಿಂಗಳಾನುಗಟ್ಟಲೇ ಈ ಹೊನಗ್ಯಾನ ಹಳ್ಳಕ ಪ್ರವಾಹ ಬರತಿತ್ತು. ತೆಪ್ಪದೊಳಗ ಸೈತ ಹಳ್ಳ ದಾಟಲಿಕ್ಕ ಆಗತಿರಲಿಲ್ಲ.

ಇಕಾಡಿದಿಕಾಡಿ ಮಳಿ ಕಡಿಮಿ ಆಗಿಂದ, ಹಳ್ಳಕ್ಕ ಪ್ರವಾಹ ಬರೂದು ತುಸು ತಗ್ಗಿಂದ ಬರ್ಲಗುಡ್ಡದ ಮ್ಯಾಲ ಕೆಳಗಿನ ಕೇರಿ ಜನ ಒಲಿಗಿ ಉರವಲಾಕ ಕಟಗಿ ತರಾಕಂತ ಹೋಗತಿದ್ದರು. ದೀಪಾವಳಿ ಮುಂದ ಬ್ಯಾಟಿ ಆಡಾಕ ಕೆಳಗಿನ ಕೇರಿ ಮಂದಿ ಗಂಟ ಬಡಗಿ ತಗೊಂಡು ಬರ್ಲಗುಡ್ಡ ಸುತ್ತವರು. ಇಡೀ ಊರಿಗೇ ಶ್ರೀಮಂತ ಅಂದ್ರ ಶಂಕರಗೌಡ. ಅವನ ಅಣ್ಣ ತಮ್ಮದೇರೆಲ್ಲಾ ಗೌಡಕಿ ಮಾಡವರೇ. ಊರಾಗ ಯಾವದರೇ ಜಾತ್ರಿ, ಹಬ್ಬ ಹರಿದಿನ ಇತ್ತಂದರ ಈ ಶಂಕರಗೌಡನೇ ಮುಂದ ನಿಂತು ನಡಿಸಿಕೊಡತಿದ್ದ. ಈ ಗೌಡರ ಮನೆತನದೊಳಗ ಜನಾನಾದ್ರೂ ಸಾಯಲಿ, ಇಲ್ಲಾ ದನಾನಾದ್ರೂ ಸಾಯಲಿ ಅವನ್ನ ದಫನ್ ಮಾಡೊ ಕೆಲಸಾ ಈ ದುಗ್ಗಪ್ಪನ ಕುಟುಂಬಕ್ಕ ಬಂದಿತ್ತು. ಅವರ ಮನಿ ಮಂದಿಗಿ ಚಪ್ಪಲಿ ಮಾಡಿ ಕೊಟ್ಟು, ಕುಣಿ ತೋಡೂದು, ಸತ್ತ ದನಕರ ಎಳಕೊಂಡು ಹೋಗಿ ಸುಲಿಯೋದು ದುಗ್ಗಪ್ಪ ಮತ್ತವನ ಸಂಬಂಧಿಗಳ ಚಾಜ ಆಗಿತ್ತು. ಅದನ್ನ ಅವರಿಗಿ ಬಿಟ್ಟರ ಮತ್ಯಾರಿಗೋ ಒಪ್ಪಿಸುವಂಗಿರಲಿಲ್ಲ.

ಈ ದುಗ್ಗಪ್ಪನ ಖರೆ ಹೆಸರು ದುರ್ಗಪ್ಪ. ಮಂದಿ ಬಾಯಾಗ ಸಿಕ್ಕು ಅಂವಾ ದುಗ್ಯಾ… ದುಗ್ಗ… ದುಗ್ಗಪ್ಪ ಆಗಿದ್ದ. ದುಗ್ಗಪ್ಪನ ಅಪ್ಪ ಲಕಮಣ್ಣ ಶಂಕರಗೌಡನ ಅಪ್ಪ ಸಾತಪ್ಪಗೌಡನ ಕಾಲಕ್ಕ ಈಗ ದುಗ್ಗಪ್ಪ ಮಾಡೋ ಕೆಲಸಾನೇ ಮಾಡಕೊಂಡು ಬಂದಿದ್ದ. ಆಯಗಾರ ಪದ್ಧತಿ ಲೆಕ್ಕದೊಳಗ ಆ ಸಾತಪ್ಪಗೌಡ ಲಕಮಣ್ಣಗ ಈ ಬರ್ಲಗುಡ್ಡದೊಳಗ ಎರಡೆಕರೆ ಜಮೀನು ದಾನಾ ಕೊಟ್ಟಿದ್ದ. ಬಾರೀಕಾಲ ಬರೀ ಹೆಣಾ ಹೂಳೂದು… ದನ ಸುಲಿಯೂದು ಬಿಟ್ಟರ ಬ್ಯಾರೇ ಕೆಲಸಾನೇ ಮಾಡಿಲ್ಲದ ಲಕಮಣ್ಣ ಸಾಯೂದರೊಳಗ ತಾನೂ ಒಕ್ಕಲುತನ ಮಾಡಿ, ಒಂದು ಚೀಲರೇ ಜ್ವಾಳಾ ಬೆಳದು ತೋರಸಬೇಕು ಅಂತ ಹೇಳಿ ದಿನ್ನಾ ಹಳ್ಳದೊಳಗ ಈಜಾಡತಾ ಹೋಗಿ, ಬರ್ಲ ಗುಡ್ಡದೊಳಗ ಕಸರತ್ ಮಾಡವನು. ಸಾಯೂಮಟ ಅಲ್ಲಿ ಕಲ್ಲ ಗುಡ್ಡೆ ಹಾಕಿ, ನೆಲಾ ಹಡ್ಡಿ, ಸಣ್ಣ ಸಣ್ಣ ಮುಳ್ಳ ಕಂಟಿ ಕಡದು ಅದನ್ನ ಸಪಾಟ ಮಾಡೂದರೊಳಗ ಲಕಮಣ್ಣ ಹಣ್ಣಾಗಿ ಹೋಗಿದ್ದ.

ಕಲ್ಲ ಗುಡ್ಡ ಇದ್ದದ್ದು ಕಡದು ಸಮ ಮಾಡಿ ಸಾತಪ್ಪಗೌಡಗ ಕರಕೋಂಡು ಹೋಗಿ ತಾ ಮಾಡಿದ್ದ ಕೆಲಸಾ ತೋರಿಸಿ ಭೇಷ! ಅನಸಕೊಂಡಿದ್ದ. ಅವನ ಉಮೇದಿ ನೋಡಿ ಸಾತಪ್ಪಗೌಡ ಅವನಿಗಿ ಒಂದು ಹಳೆ ಎತ್ತು ಕೊಡ್ತೀನಿ ಅಂತ ಮಾತು ಕೊಟ್ಟಿದ್ದ. ಈಗಂತೂ ಲಕಮಣ್ಣಗ ಆನಿ ಬಲ ಬಂದಂಗ ಆಗಿತ್ತು. ಇಡೀ ಗೋಡೂರಾಗ, ಕೆಳಗಿನ ಕೇರಿಯೊಳಗ ಯಾರ ಮನಿಯೊಳಗರೇ ಜೀವಂತ ಎತ್ತು ಐತಿ ಅಂದರ ಅದು ಲಕಮಣ್ಣನ ಮನಿಯೋಳಗ ಮಾತ್ರ ಅಂತ ಮೀಸಿ ತಿರುವತಾ ತಿರಗಾಕ ಸುರು ಮಾಡದ. ತನ್ನ ಕೇರಿಯೊಳಗಿನ ಯಾರರೇ ಎದುರು ಬಂದರ ಅವರು ಕೇಳಲಾರದೇ ತಾನೇ ಮುಂದಾಗಿ ‘ಎತ್ತಿಗಿ ಮೇವು ಮಾಡಕೊಂಡು ಬರಾಕ ಹೊಂಟೀನಿ’ ಅನ್ನವನು.

ಯಾರೇ ಮಾತಾಡಲಿ, ಏನೇ ಕೇಳಲಿ ಕಡಿಗಿ ಅಂವಾ ಬಂದು ನಿಲ್ಲೂದು ಎತ್ತಿನ ವಿಷಯಕ್ಕೇ. ಆ ಎತ್ತಿಗಿ ಬಾಳ ವಯಸ್ಸಾಗಿತ್ತು. ನೀವು ಎಂಥದೇ ಮೇವು ಹಾಕದರೂ ಕತ್ತರಿಸಿ ತಿನ್ನುವಂಗಿರಲಿಲ್ಲ. ಬಾಳ ಸೊಗಡೆತನಕ್ಕ ಬಂದು ಮುಟ್ಟಿತ್ತು. ಹಂಗಂತ ಹೇಳಿ ಲಕಮಣ್ಣ ಸುಮ್ಮ ಬಿಡೂ ಪೈಕಿ ಅಲ್ಲ. ಅದಕ್ಕ ನಸುಕಿನೊಳಗೇ ಎದ್ದು ಮೈ ತಿಕ್ಕಿ, ನೀರ ಕುಡಿಸಿ, ಮೇವು ಹಾಕವನು. ಅಲ್ಲಿ ಇಲ್ಲಿ ಬೇಡಿ ತುಸು ತೊಗರಿ ಹೊಟ್ಟು ತಂದಿದ್ದ. ಅದನ್ನೂ ತಿನ್ನಿಸಿ ಅದನ್ನ ಮತ್ತ ತುಸು ಗಾಂವ್ ಮಾಡಿದ್ದ. ಅದಕ್ಕ ಗೌಡ ಇಟ್ಟ ರಾಮಾ ಅನ್ನೋ ಹೆಸರ ಮುರದು ತಾನೇ ಖುದ್ದಾಗಿ ಕಾಳಿಂಗ ಅಂತ ಹೆಸರಿಟ್ಟಿದ್ದ. ಇನ್ನೊಂದು ಇದರ ಜೋಡಿ ಎತ್ತ ಆದರ ಬಾಳ ಚಲೊ ಆಗತೈತಿ ಅಂತ ಕನಸು ಕಾಣಾಕ ಸುರು ಮಾಡಿದ. ತಾನು ಗೆಳೆ ಹೊಡೆಯೋದು, ಸೊಸಿ, ಮಗಾ ಕಸಾ ತಗಿಯೂದು.

ಮುಂಗಾರು ಮಳಿ ವ್ಯಾಳೆಕ ಬಂದರ ಏನರೇ ಕಾಳು ಕಡಿ ಬಿತ್ತೂದು ಅಂತ ಸೊಸಿ ಎಲ್ಲವ್ವನ ಮುಂದ ಹೇಳಿದ್ದ. ಲಕಮಣ್ಣನ ಹೆಂಡತಿ ಸತ್ತು ನಾಕೈದು ವರ್ಷ ಆಗಿತ್ತು. ಹಿಂಗಾಗಿ ಮನಿ ದೇಖರೇಕಿ ಎಲ್ಲಾ ಸೊಸಿ ಎಲ್ಲವ್ವನ ಮ್ಯಾಲೇ ಬಿದ್ದಿತ್ತು. ಇಲ್ಲೀಮಟ ಬರೀ ಗೌಡರ ಕಣದೊಳಗ ಕಡೆಗಾಣ ಮಾಡ್ಕೊಂಡು ನಾಕು ಕಾಳು ಕಂಡ ಎಲ್ಲವ್ವಗ ಈಗ ಸ್ವಂತ ಭೂಮಿ, ಎತ್ತು, ಒಕ್ಕಲುತನದ ಕನಸು ಬಿತ್ತಿದ ಮಾವನ ಬಗ್ಗೆ ಬಾಳ ಕಳ್ಳಿತ್ತು. ಮಗ ದುಗ್ಗಪ್ಪನೂ ಈಗ ಕನಸು ಕಾಣಾಕ ಸುರು ಮಾಡಿದ್ದ. ಲಕಮಣ್ಣ ಊಟಕ್ಕ ಕುಂತಾಗೊಮ್ಮ ಇನ್ನೊಂದು ಎತ್ತು ಆದರ ಚಲೋ ಆಗತಿತ್ತು ಅಂದಾಗೆಲ್ಲಾ ದುಗ್ಗಪ್ಪ ‘ಯಪ್ಪಾ, ನೀ ಏನೂ ಚಿಂತಿ ಮಾಡಬ್ಯಾಡ, ಮಾತಿಗೊಮ್ಮ ನೀನು ನನಗ ದನಾ ಇದ್ದಂಗ ಇದಿ ಅಲ್ಲಲೇ ಅಂತಿದ್ದಿ.

ಈ ಸಾರಿ ಮುಂಗಾರು ಮಳಿ ಬೀಳಲಿ ನಾ ದನಾ ಆಗೇ ನೊಗಕ್ಕ ಹೆಗಲ ಕೊಡ್ತೀನಿ. ಕಾಳಿಂಗಗ ನನಗ ಜೋಡಿ ಮಾಡಿ ಹೂಡಿ ಬಿಡು ನೋಡೇ ಬಿಡಮ್ಮು ಗೌಡರ ಎತ್ತು ಬಲಾನೋ… ನಿನ್ನ ಮಗಾ ದುಗ್ಗಪ್ಪ ಅನ್ನೋ ಈ ಎತ್ತು ಬಲಾನೋ’ ಅಂದಾಗ ಲಕಮಣ್ಣ ನಕ್ಕಿದ್ದ. ಮಳಿ ಬಂತು. ಹ್ಯಾಂಗ ಬಂತಂದ್ರ ಬಯಲಕಡಿಗಿ ಹೋಗಾಕೂ ವಜ್ಜಿ ಆಗಿತ್ತು. ಈ ಮಳಿ ಹೊಡತಕ್ಕೇ ಲಕಮಣ್ಣ ಜಡ್ಡ ಬಿದ್ದು ಹಾಸಗಿ ಹಿಡದಿದ್ದ. ಜ್ವರಾ ಅನ್ನೂದು ಆ ಮಳಿಗಿಂತಲೂ ಜೋರು ಹಿಡದು, ಅವನ್ನ ನುಂಗೇ ಬಿಟ್ಟಿತ್ತು. ಅವನ್ನ ನೆಟ್ಟಗ ಮಣ್ಣ ಮಾಡಾಕ ಸೈತ ಮಳಿ ವರಪ ಕೊಟ್ಟಿರಲಿಲ್ಲ. ಲಕಮಣ್ಣ ಸತ್ತ ವಾರದ ಮ್ಯಾಲ ಅನಗಾಡ ಜೋರ ಹೊಡೆಯಾಕತ್ತತು. ಗುಡಸಲ ದಬ ದಬ ಅಂತ ಸೋರಾಕತ್ತತು. ಹೊರಗ ಹೋಗಿ ಗಿಡದ ಕೆಳಗ ಕಟ್ಟಿರೋ ಕಾಳಿಂಗನ ನೋಡಿ ಬಂದ. ಅದು ಕೆಳಗ ಮುಖಾ ಹಾಕೊಂಡು ನಿಂತಿತ್ತು. ಅದರ ಬೆನ್ನ ಮ್ಯಾಲ ಒಂದೆರಡು ಗೋಣಿ ಚೀಲ ಹಾಕಿ ಬಂದ. ನೋಡೂ ಮಟ ನೋಡಿ ಇದು ಬಿಡೂದಿಲ್ಲಂತ ಗೊತ್ತಾಗಿ ಪ್ಲಾಸ್ಟಿಕ್ ಹೊದಕೊಂಡು ಹೊರಸಾ ಬಿಟ್ಟು ಕೆಳಗ ಇಳದು ಹೆಂಡತಿ ಮಕ್ಕಳನ್ನ ಕರಕೋಂಡು ಅಲ್ಲೇ ಮನಿ ಹಿಂದಿರೋ ಮರಗಮ್ಮನ ಗುಡಿಯೊಳಗ ಹೋಗಿ ಕುಂತ.

ಅಪ್ಪನ ಮಾತು ನೆನಪಾಯಿತು. ‘ಬರೀ ಹೆಣಾ ಹೂಳೂದು, ದನಾ ಸುಲಿಯೂದು ಇದೇ ಆಯ್ತು. ನಾವೂ ಒಕ್ಕಲುತನ ಮಾಡೂದು ಯಾವಾಗ..? ನಿನ್ನ ಮಗನ್ನ ಮಾತ್ರ ಈ ಕೆಲಸಕ್ಕ ದಬ್ಬಬ್ಯಾಡ ಅಂವಗ ಓದಸು. ಬ್ಯಾರೆಯವರ ಮನ್ಯಾಗ ಜೀತಾ ಮಾಡಿಯಾದ್ರೂ ಅವನಿಗಿ ಓದಸು’ ದುಗ್ಗಪ್ಪ ಮಗನ ಕಡಿ ನೋಡದ. ಭೀಮಪ್ಪ ಅವ್ವನ ಮಗ್ಗಲಾಗ ಬೆಚ್ಚಗ ಪಿಳಿ ಪಿಳಿ ಕಣ್ಣ ಬಿಟ್ಗೊಂಡು ಕುಂತಿದ್ದ. ಆ ಗುಡಿಯೊಳಗ ಅರ್ಧ ಕೆಳಗಿನ ಕೇರಿನೇ ಇತ್ತು. ಮರಗಮ್ಮನ ಗುಡಿ ಪೂಜಾರಿ ದೇವೆಂದ್ರಪ್ಪನ ಮನಿ ಬಿಟ್ಟರ ಉಳಿದದ್ದೆಲ್ಲಾ ಸೋರುಬಡಕ ಮನಿಗಳೇ ಇದ್ವು. ಆ ದೇವೆಂದ್ರಪ್ಪ ಕೇರಿ ಮಂದಿ ಗುಡಿಯೊಳಗ ಮುಕರತಾರಂತ ಗೊತ್ತಿದ್ದೇ ಗರ್ಭಗುಡಿ ಹೊಸ್ತಿಲ ಮುಂದ ಕುಂಕುಮ, ಅರಿಶಿಣ ಮತ್ತ ಮ್ಯಾಗ ಎಣ್ಣಿ ಸುರದು ಹೊಲಸ ಎಬ್ಬಿಸಿದ್ದ. ಕೇರಿ ಜನ ಕೇಳಬೇಕಲ್ಲ, ದೇವರಿಗಿಂತ ಭಕ್ತ ದೊಡ್ಡವನು ಅನ್ಕೊಂತ ಅಲ್ಲೇ ಆ ಕುಂಕುಮದ ಮ್ಯಾಲೇ ಚಾಪೆ ವಗದು ಠಿಕಾಣಿ ಹೂಡಿದ್ದರು.

ದುಗ್ಗಪ್ಪಗ ಅವನಪ್ಪ ಲಕಮಣ್ಣ ಹೇಳಿದ ಮಾತು ಒಂದೇ ಸವನ ಕಟೀತಿತ್ತು. ಹ್ಯಾಂಗರೆ ಆಗಲಿ ಈ ಸಾರಿ ಬಿತ್ತೂಣಕಿ ಮಾಡೇ ಬಿಡೂದು ಅಂತ ತೀರ್ಮಾನ ಮಾಡಿದ್ದ.ಅದಕ್ಕಂತ ಹೇಳಿ ಅವನ ಹೆಂಡತಿ ಊರಿಗಿ ಹೋಗಿ ಒಂದಿಷ್ಟು ಕಾಳು ಕಡಿ ತಗೋಂಡು ಬಂದಿದ್ದ. ಎಲ್ಲವ್ವ ತಮ್ಮ ಹೊಲದಾಗ ಬೆಳಿಯೋ ಜ್ವಾಳದ ಥಳಿ ಬಾಳ ಚಲೋ ಅಂತ ಹೇಳಕೊಂತೇ ಸಣ್ಣ ಸಣ್ಣ ಗಂಟ ಕಟ್ಟಿ ಮಡಿಕಿಯೊಳಗ ಇಡತಿದ್ದಳು. ‘ತುಸು ಗಂಧಕದ ಪುಡಿ ಹಚ್ಚಿಟ್ಟರ ಬೀಜಕ್ಕ ಹುಳಾ ಹಿಡಿಯುವಂಗಿಲ್ಲಂತ ನಿಮ್ಮಪ್ಪ ಹೇಳ್ಯಾನ.’ ಅನ್ಕೊಂತ ಹೊರಗ ಎತ್ತಿನ ಕಡಿ ಹೊಂಟ. ಅದರ ದವಾಣಿಯೊಳಗ ಇರೋ ಮೇವನ್ನ ಮ್ಯಾಲ ಕೆಳಗ ಮಾಡಿ ಹಾಕದ. ಕಾಳಿಂಗ ಮಾತ್ರ ತಿನ್ನೂದು ಬಾಳ ಕಡಿಮಿ ಆಗಿತ್ತು.

ಬರೀ ಕುಂತಲ್ಲೇ ಮೆಲುಕು ಹಾಕತಿತ್ತು. ಇದನ್ನ ಕಟಗೊಂಡು ಒಕ್ಕಲುತನ ಮಾಡೂದು ಬಾಳ ಕಷ್ಟ ಐತಿ ಅನ್ನೂದು ದುಗ್ಗಪ್ಪಗ ಗೋತ್ತಿತ್ತು. ಅದಕ್ಕೇ ಅಂವಾ ಹೆಂಡತಿ ಮುಂದ ‘ನಾನೂ ನೀನೂ ಜೋಡಿ ಜೀವನ ಎತ್ತಿನ ಗಾಡಿ ಅನ್ನೂವಂಗ ಇಬ್ಬರೂ ಹೆಗಲ ಕೊಡೂದಾಗತೈತಿ’ ಅಂತಿದ್ದ. ಎಲ್ಲವ್ವನೂ ‘ಅದ್ಯಾಕ ಅಗವಲ್ದು’ ಅಂತ ಅದಕ್ಕ ಸಜ್ಜ ಆಗೇ ಕುಂತಿದ್ದಳು. ‘ಅದೆಟ್ಟರ ಹೊಲ, ಹಾಂ ಅನ್ನೂದರೊಳಗ ಬಿತ್ತೂದು ಮುಗಿತೈತಿ. ಮಳಿ ಸ್ವಲ್ಪ ವರುಪ ಕೊಡಲಿ ಮುಗಸಿಬಿಡಮ್ಮು’ ಅಂದಿದ್ದಳು. ಹೊನಗ್ಯಾನ ಹಳ್ಳ ಈಗ ತುಂಬಿ ಹರೀತಿತ್ತು. ಅದನ್ನ ದಾಟಿ ಹೋಗೂದೇ ವಜ್ಜಿ ಇತ್ತು. ಎತ್ತು ನೋಡದರ ಅಂಥದು. ಸುತ್ತ ಹಾಯಿಸಿ ಹೋದರ ಬಾಳ ವ್ಯಾಳೆ ಹಿಡೀತೈತಿ ಅಂತಹೇಳಿ ದುಗ್ಗಪ್ಪ ಈಜಾಡಕೊಂಡೇ ಹೋಗತಿದ್ದ. ತೆಪ್ಪಾದೊಳಗ ಹೋಗಾಕ ರೊಕ್ಕ ಇರತಿರಲಿಲ್ಲ. ಆ ಬರ್ಲಗುಡ್ಡದೊಳಗ ಕೆಳಗಿನ ಕೇರಿಯವರದೇ ನಾಕೈದು ಹೊಲಾ ಇದ್ವು. ಅವರು ಬಿಟ್ಟರ ಮತ್ಯಾರೂ ಅಲ್ಲಿಗಿ ಹೋಗತಿರಲಿಲ್ಲ. ಅದರೊಳಗೂ ಒಕ್ಕಲುತನ ಮಾಡಾಕ ಬರೂವಂಗ ಇದ್ದ ಜಮೀನ ಅಂದ್ರ ದುಗ್ಗಪ್ಪಂದು ಮಾತ್ರ. ಈಗೀಗ ದುಗ್ಗಪ್ಪ ದಿನ್ನಾ ಹೊಲಕ್ಕ ಹೋಗತಿದ್ದ. ಅಲ್ಲಲ್ಲಿ ಎದ್ದಿರೋ ಕಸ ತಗದು, ಸ್ವಚ್ಚ ಮಾಡಿ ಬರತಿದ್ದ. ಅವತ್ತೊಂದು ದಿವಸ ಎತ್ತನ್ನ ಹೊಳಿ ದಾಟಸಾಕ ಪಟ್ಟ ಕಟಿಬಿಟಿ ಅಟ್ಟಿಟ್ಟಲ್ಲ.

ಒಂದು ತಾಸು ಗುದಮುರಗಿ ಹಾಕಿಂದ, ಹಳಗಿನ ಹಗ್ಗ ಅದರ ಕೋಡಿಗಿ ಬಿಗದು, ಮುಂದಾಗಿ ಹಲ್ಲ ಗಟಿಯೂರಿ ಅದನ್ನ ಎಳಕೊಂಡು ಹೋಗೂಮಟ ಅದು ಜಪ್ಪ ಅಂದಿರಲಿಲ್ಲ. ಸಿಟ್ಟೀಲೇ ಅದಕ್ಕ ಒಂದೇ ಒಂದು ಏಟು ಹೊಡಿಯುವಂಗಿರಲಿಲ್ಲ. ಎಟ್ಟೇ ಆಗಲಿ ಅದು ಗೌಡರು ಕೊಟ್ಟಿದ್ದು. ಅಂತೂ ಇಂಥೂ ಕಾಳಿಂಗನ್ನ ಹಳ್ಳ ದಾಟಸಾಕ ಹಾಕಿರೋ ಗುದಮುರಗಿ ಕೆಲಸಾ ಮಾಡಿತ್ತು. ಕಾಳಿಂಗನ್ನ ಅಲ್ಲೇ ಹಳ್ಳದ ದಂಡಿ ಮ್ಯಾಲ ಮೈಯಾಕ ಬಿಟ್ಟು ಹೊಲದೊಳಗ ಸಂಜೀಮಟ ಕೆಲಸಾ ಮಾಡತಿದ್ದ. ಹಂಗೇನರೇ ಊರಾಗ ಯಾವುದರೇ ದನಾ ಗಿನಾ ಸತ್ತರ ಅವತ್ತ ಮಾತ್ರ ಹೊಲಕ್ಕ ಹೋಗತಿರಲಿಲ್ಲ. ದುಗ್ಗಪ್ಪ ಇನ್ನೊಂದು ಅಂಥದೇ ಎತ್ತು ಯಾರರೇ ಮೇಲಿನ ಕೇರಿಯೊಳಗ ಕೊಟ್ಟರ ತನ್ನ ನಸೀಬೇ ಹಿಂಗದಂಗ ಆಗತೈತಿ ಅಂತ ಮತ್ತ ಮತ್ತ ಶಂಕರಗೌಡರು ತನಗೊಂದು ಎತ್ತು ಕೊಟ್ಟಾರ ಅದರ ಜೋಡಿ ತಗೋಳಾಕ ತನ್ನಂತ ಬಡವಗ ಅದ್ಯಾಂಗ ಆಗತೈತಿ, ಮತ್ಯಾರರೇ ಕೊಟ್ಟರ ಪುಣ್ಯ ಬರತೈತಿ ಅನ್ಕೊಂತ ತಿರಗಿದ ಮ್ಯಾಲೂ ಯಾರೂ ಅವನ ಮಾತ ಕಿವ್ಯಾಗ ಹಾಕೊಂಡಿರಲಿಲ್ಲ. ಹಂಗಂತ ಹೇಳಿ ಅಂವಾ ಈ ಸಾರಿ ಬಿತ್ತೂದು ಮಾತ್ರ ಬಿಡುವಂಗಿಲ್ಲ. ದಿನ್ನಾ ಕಾಳಿಂಗನ ಹೊಲಕ್ಕ ಕರಕೊಂಡು ಹೋಗಿ ಅದಕ್ಕ ಹಳ್ಳ ದಾಟೋ ರೂಢಿ ಮಾಡದ. ಆ ಎತ್ತು ಒಂದು ಕಾಲಕ್ಕ ಮೂವತ್ತು ಚೀಲ ಜ್ವಾಳಾ ಹೇರಕೊಂಡು ಕುಣಕೊಂತ ಹೋಗಿದೈತಿ. ಕೂರಗಿಗಟ್ಟಲೆ ಹೊಲಾ ನೇಗಿಲು ಹೊಡದಿದೈತಿ. ಈಗನೂ ಹಂಗೇ ದುಡಿ ಅಂದರ ಅದಕ್ಕ ಹ್ಯಾಂಗ ಆಗತೈತಿ. ದುಗ್ಗಪ್ಪನೂ ಅದರ ಬಗ್ಗೆ ಮನಾರ ಕಾಳಜಿ ತಗೊತಿದ್ದ.

ಹೊನಗ್ಯಾನ ಹಳ್ಳದೊಳಗ ತುಸು ನೀರ ಇಳಿದಿಂದ ಬಿತ್ತುಣಕಿ ಮಾಡದರ ಐತು ಅಂತ ಕಾಯ್ಕೊಂಡಿದ್ದ. ಆದರ ಅದರ ರವ್ವ ನೋಡದರ ಅದೇನು ಇಳಿಯುವಂಗ ಕಾಣಲಿಲ್ಲ. ಕುತಗಿಮಟ ನೀರ ಇದ್ದೇ ಇತ್ತು. ಕಾಲ ಇಡಬೇಕಾದರ ಬಾಳ ಹುಷಾರಿತನದಿಂದ ಇಡಬೇಕು. ಅಡೂಡಿ ಮಾಡದರ ನೀರಾಗ ಹರಕೊಂಡು ಹೋಗೂದೇ. ಅದಕ್ಕೇ ಅಂವಾ ಹೆಂಡತಿ ಮಗಳಿಗಿ ಕಾಳಿಂಗನ ಬಾಲಾ ಹಿಡಕೊಂಡು ಜೋತಾಡಕೊಂಡು ಬರಲಿಕ್ಕ ಹೇಳತಿದ್ದ. ಎಲ್ಲವ್ವಗ ನಡಕೊಂಡು ಹೋಗಿ ರೂಡಿ ಇತ್ತು. ಮಗಳು ಮಾದೇವಿ ಮಾತ್ರ ಎತ್ತಿನ ಬಾಲಾ ಹಿಡಕೊಂಡು ತೇಲಕೊಂತ ಬರತಿದ್ದಳು.
ಮಂಗಳವಾರ ಮರಗಮ್ಮನ ವಾರಂತ ಹೇಳಿ ಬಿತ್ತಾಕ ನಿಂತಿದ್ದರು. ಒಂದು ಕಡಿ ಎತ್ತು ಇನ್ನೊಂದು ಕಡಿ ಹೆಂಡತಿ ಎಲ್ಲವ್ವ. ಹಿಂದ ಮಗಳು ಮತ್ತ ಮಗ ಅಕಡಿ ಹಾಕಾಕ ನಿಂತಿದ್ದರು. ಇದ್ದಿದ್ದೇ ಎರಡೆಕರೆ ಜಮೀನು ಅದರೊಳಗ ತುಸು ಚಲೋ ಇದ್ದದ್ದು ಒಂದೇ ಎಕರೆ, ಉಳಿದದ್ದು ಸುಮ್ಮ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೂವಂಗಿತ್ತು. ಅಟ್ಟೂ ಜನ ಮನಿ ಮಂದಿ ಕೂಡಿ ಮಧ್ಯಾನಮಟ ಒಂದು ಎಕರೆ ಬಿತ್ತಿ ತಗದರು. ಮೊದ ಮೊದಲ ಎತ್ತಿಗಿ ಎಲ್ಲವ್ವಳ ಜೋಡಿ ಹೊಂದಕೊಂಡು ಸಾಲ ಹಿಡಿಯೂದು ಕಷ್ಟ ಆಗಿತ್ತು. ತುಸು ಹೊತ್ತ ಆದ ಮ್ಯಾಲ ಎಲ್ಲವ್ವಗ ಅದು ಬರೊಬ್ಬರಿ ಸಾತ್ ನೀಡಿತ್ತು. ಮುಂಗಾರು ಮಳಿ ಚಲೊ ವ್ಯಾಳೆಕ ಸುರದಿತ್ತು. ಹಿಂಗಾಗಿ ಎಟ್ಟೇ ಆಗಲಿ ಕಾಳು ಕಡಿ ಬಂದೇ ಬರ್ತಾವ ಅನ್ನೂದು ದುಗ್ಗಪ್ಪಗ ಖಾತ್ರಿ ಇತ್ತು. ಅವನಪ್ಪನ ಕನಸನ್ನ ದುಗ್ಗಪ್ಪ ನನಸು ಮಾಡಿದ್ದ. ಕೇರಿ ಮಂದಿಗೆ ದುಗ್ಗಪ್ಪನ ಬಗ್ಗೆ ಬಾಳ ಅಭಿಮಾನ ಆಯ್ತು. ಮಗನ್ನ ಶಹರದಾಗ ಕಾಲೇಜಕ ಕಳಿಸಿದ್ದ.

ಭೀಮಪ್ಪ ಓದೂದರೊಳಗ ಬಾಳ ಚಲೋ ಇದ್ದ. ಸ್ಕಾಲರ್ ಶಿಪ್ ಮ್ಯಾಲೇ ಅವನ ಓದು ಮುಂದ ಸಾಗಿತ್ತು. ಮಗಳಿಗಿ ಐದನೆತ್ತೆ ಮಟ ಓದಿಸಿ ಬಿಡಿಸಿದ್ದ. ಆಕಿಗಿ ಸಾಲಿಗಿ ಕಳುಸೂದು ನೋಡಿ ತಂದೇ ಕೇರಿ ಮಂದಿ ಯಾಸಿ ಯಾಸಿ ಮಾತಾಡಾಕ ಸುರು ಮಾಡಿದ್ದರು. ಸುಮ್ಮ ಓದಾಕ ಬರಿಯಾಕ ಬರೂವಟ್ಟರೇ ಇರಲಿ ಅಂಥೇಳಿ ದುಗ್ಗಪ್ಪ ಆಕಿನ್ನ ಐದನೆತ್ತೆ ಮಟ ಓದಿಸಿದ್ದ. ಈ ಸಾರಿ ಬೆಳಿ ಬಂದ ಮ್ಯಾಲ ಇನ್ನೊಂದು ಇಂಥದೇ ತುಸು ಕಡಿಮಿ ರೊಕ್ಕದಾಗ ಸಿಗುವಂಥ ಎತ್ತು ತಗೊಂಡು ಹೆಂಡರು ಮಕ್ಕಳು ಎಲ್ಲರೂ ಸೇರಿ ದುಡದು ಹೊಸ ಬದುಕು ಕಟಕೊಬೇಕು ಅಂತ ಕನಸ ಕಂಡಿದ್ದ. ಅವನ ಕೇರಿಯೊಳಗಿನ ಬಾಳ ಮಂದಿ ಅವನ ಅಣ್ಣತ್ಮಮದೇರ ಪೈಕಿನೇ ‘ ದುಗ್ಗಪ್ಪ ನೀ ಎಟ್ಟು ಮಾಡದರೂ ಅದು ಕೆಲಸಕ್ಕ ಬರಲ್ಲ ಗುಡ್ಡಕ್ಕ ಕಲ್ಲ ಹೊತ್ತಂಗ ಆಗತೈತಿ. ಆಗೋದಲ್ಲ… ಹೋಗೋದಲ್ಲ… ನಮ್ಮದೇನಿದ್ದರೂ ಐತೆಲ್ಲ ಎಳಕೊಂಡು ಹೋಗೂದು… ಸುಲಿಯೋದು… ಅದೊಂದೇ ನಮಗ ಒಗ್ಗೂದು. ಅದು ಬಿಟ್ಟು ಬ್ಯಾರೆ ಮಾಡದರ ಮಾರಮ್ಮನೇ ನಮ್ಮನ್ನ ಸೇರಂಗಿಲ್ಲ’ ಅಂತಿದ್ದರು. ದುಗ್ಗಪ್ಪ ಮಾತ್ರ ‘ದುಡದರ ಯಾವತ್ತೂ ಮೋಸ ಆಗಲ್ಲ. ಬಾಳ ಅಲ್ಲದಿದ್ದರೂ ತಟಕರೇ ಕೈಗಿ ಸಿಕ್ಕೇ ಸಿಗತೈತಿ…’ ಅಂತಿದ್ದ.

crow2ದುಗ್ಗಪ್ಪನ ಶ್ರಮ ವ್ಯರ್ಥ ಆಗಲಿಲ್ಲ. ಅಂಥಾ ಕರ್ಲ ನೆಳದೊಳಗೂ ಜ್ವಾಳದ ಬೆಳಿ ನೇಟಾಗಿ ಕಾಣಾಕತ್ತತು. ಆ ಗುಡ್ಡದೊಳಗ ಅವಂದೊಂದೇ ಪೀಕ್, ಅದು ಬಿಟ್ಟರ ಮತ್ಯಾರೂ ನೆಲಾ ಹಸನ ಮಾಡಿ, ಸಮ ಮಾಡಿ ಬಿತ್ತೂ ಗೋಜಿಗಿ ಹೋಗಿರಲಿಲ್ಲ. ಮುಂದ ತಿಂಗಳದೊಳಗ ಹಳ್ಳದ ಆ ಬದಿ ನಿಂತು ನೋಡದರೂ ಜ್ವಾಳ ಹಚ್ಚಗ ಕಾಣತಿತ್ತು. ಶಂಕರಗೌಡಗೂ ವಿಚಿತ್ರ ಅನಿಸಿತ್ತು. ಅಲ್ಲಿ ಸರಿ ಮಾಡಿ ನಡದಾಡಲಿಕ್ಕೂ ಬರುವಂಗಿರಲಿಲ್ಲ. ಅಂಥಾ ಭೂಮಿಯೊಳಗ ಈ ಪರಿ ಜ್ವಾಳಾ ಬೆಳದಾನಂದರ ಬಾಳ ತ್ರಾಸ್ ಪಟ್ಟಾರ ಅನ್ನೂದು ಗೊತ್ತಾಗಿ ತನ್ನ ರಿಕಾಮಿ ಮಗ ಚಂದ್ರಶೇಖರ ಮುಂದ ‘ನೋಡಲ್ಲಿ ಕಲ್ಲು ಮಡ್ಡಿಯೊಳಗ ಇರೋ ಒಂದು ಮುದಿ ಎತ್ತು ತಗೊಂಡು ಹ್ಯಾಂಗ ಮಾಡ್ಯಾರ ನೋಡಿ ಬಾ. ಮನಿಯೊಳಗ ಎಂಟೆತ್ತು, ಟ್ರ್ಯಾಕ್ಟರ್, ಬಂಗಾರದಂತ ಜಮೀನು ಎಲ್ಲಾ ಇದ್ದೂ ನಿನಗ ಏನೂ ಮಾಡಾಕ ಆಗೂವಲ್ದು ಅದೇನು ಓದದಿಯೋ… ಏನೋ… ನಯ್ಯೆಪೈಸಾ ಕೆಲಸಕ್ಕಿಲ್ಲ.’ ಅಂತ ಬೈತಿದ್ದ. ಚಂದ್ರಶೇಖರ ಪಿ.ಯು.ಸಿ.ಸೈನ್ಸ್ ಫೇಲ್ ಆಗಿ ಮನ್ಯಾಗ ಕುಂತೇ ಐದು ವರ್ಷ ಆಗಿತ್ತು. ಸಾಲದ್ದಕ್ಕ ಸೇದೂದು… ಕುಡಿಯೋದು… ಆಡೋದು ಚಟಾ ಬ್ಯಾರೆ ಸೇರಕೊಂಡಿದ್ವು. ಇನ್ನೊಬ್ಬ ಮಗ ಮೆಟ್ರಿಕ್ ಮಟ ಓದಿ, ಮುಂದ ನೀಗಲಾರದಕ್ಕ ಒಕ್ಕಲುತನಕ್ಕ ನಿಂತಿದ್ದ.

ಚಂದ್ರಶೇಖರ ‘ನನ್ನನ್ನ ಸುಳ್ಳೇ ರಿಕಾಮಿ ಅನಬ್ಯಾಡ ಐದು ಲಕ್ಷ ರೂಪಾಯಿ ಕೊಡು, ಅವನ್ನೂ ಕರಕೊಂಡು ವಿಜಯಪುರದೊಳಗ ಏನಾರೆ ಒಂದು ವ್ಯಾಪಾರ ಮಾಡ್ತೀನಿ’ ಅಂತಿದ್ದ. ಶಂಕರಗೌಡ ‘ಇರೋ ಹೊಲ ಮನಿ ನೋಡಕೊಂಡು ಹೋದರ ಸಾಕು ನೀ ಎಟ್ಟರ ಮಟ್ಟಿಗಿ ವ್ಯಾಪಾರ ಮಾಡ್ತಿ ಅಂತ ನನಗ ಗೊತೈತಿ’ ಅಂತ ಸಿಟ್ಟೀಲೇ ಹೇಳಿದ್ದ. ಶಂಕರಗೌಡನ ಅಣ್ಣ ತಮ್ಮದೇರು ದುಗ್ಗಪ್ಪ ಒಕ್ಕಲುತನ ಮಾಡಿದ್ದು ನೋಡಿ ‘ನೀನೇ ಮಾಡಿದ್ದು ಅಂವಗ ಜಮೀನು ಯಾಕ ಕೊಟ್ಟಿ…? ಅದು ಹೋಗಲಿ ಆ ಎತ್ತು ಯಾಕ ಕೊಡಬೇಕಿತ್ತು…? ಯಾವತ್ತೂ ಕಡಿಗಾಣ ಮಾಡಕೊಂಡು ಅವನು ಮತ್ತವನ ಹೆಂಡತಿ ನಮ್ಮ ಹೊಲದಾಗೇ ಬಿದ್ದಿರತಿದ್ದರು. ಈಗವನು ಸ್ವಂತ ರಾಶಿ ಮಾಡೂವಂಗಾಯ್ತು.

ಹಿಂಗೇ ಆದರ ಅವರು ಮುಂದ ಅಟಾಪ ಆಗೂವಂಗಿಲ್ಲ. ಸರಕಾರನೂ ಅವರ ಜೋಡಿನೇ ಇರತೈತಿ. ಯಾರು ಏನು ಮಾಡಬೇಕು ಅದನ್ನೇ ಮಾಡಬೇಕು. ಅವನ್ನ ಮಗಾ ಇಡೀ ಕಾಲೇಜಿಗೇ ನಂಬರ್ ಒನ್. ಮುಂದ ಅಂವಾ ದೊಡ್ಡ ಆಫೀಸರ್ ಆಗಿ ಅವರ ಮನಿಯೊಳಗ ಯಾರೂ ಸತ್ತ ದನಕರ ಸುಲಿಯೂದಿಲ್ಲ, ಕುಣಿ ಹಡ್ದೂದಿಲ್ಲ ಅಂದ್ರ ನಮಗ ಆ ಕೆಲಸಾ ನೀಗತೈತಾ?’ ಅಂತೆಲ್ಲಾ ಕೇಳದ ಮ್ಯಾಲ ಶಂಕರಗೌಡಗೂ ತುಸು ಎಲ್ಲೋ ತಟ್ಟದಂಗ ಆಯ್ತು… ‘ ಅದು ಹಾಳು ಬಿದ್ದ ಭೂಮಿ ಅಲ್ಲಿ ಒಕ್ಕಲತನ ಮಾಡಾಕ ಯಾವನಿಂದಲೂ ಆಗೂವಂಗಿಲ್ಲ ಅನ್ನೂದು ನನಗ ಗೊತ್ತಿತ್ತು ಅದಕ್ಕೇ ಅಲ್ಲಿ ಎರಡೆಕರೆ ಕೊಟ್ಟಿದ್ದೆ. ಲಕಮಣ್ಣ ಅದನ್ನ ಆ ಪರಿ ಸ್ವಚ್ಚ ಮಾಡಿ, ಸಮ ಮಾಡಿ ಬಿತ್ತೂವಂಗ ಮಾಡ್ತಾನಂತ ಅನಿಸಿರಲಿಲ್ಲ. ಇರಲಿ… ಇರಲಿ ನೊಡಮ್ಮ ಅವರು ಏನೇ ಮಾಡದರೂ ಇಲ್ಲೇ ಇರಬೇಕಲ್ಲ…’ ಅನ್ಕೊಂತ ಎದ್ದು ದೇವರ ಕೋಣಿಗೆ ನಡದ.

ದುಗ್ಗಪ್ಪನ ಜ್ವಾಳ ಹೊಡಿ ಹಾಕಾಕ ಸುರು ಮಾಡಿಂದ ಅಂವಾ ಹೊಲದಾಗೇ ಮಲಗೂದು ಅಂತ ಯೋಚನೆ ಮಾಡಿ ಅಲ್ಲೇ ಒಂದು ಸಣ್ಣ ಅಂಟಾ ಹಾಕಿದ್ದ. ಅದರ ಮ್ಯಾಲೇ ಮಲಗತಿದ್ದ. ಹೊಡಿ ವಡದು, ತೆನಿ ಹೊರಗ ಬಂದಿಂದ ನಸುಕಿನೊಳಗ ಎದ್ದು ಕವಣಿ ಹೊಡೆಯೂದು… ಹಕ್ಕಿ ಓಡಸೂದು ಮಾಡತಿದ್ದ. ಅಂವಾ ಕವಣಿಯೊಳಗ ಕಲ್ಲಿಟ್ಟು ಎರಡು ಮೂರು ಸಾರಿ ತಿರುವಿ ಚಟ್ ಚಟಾರ್…! ಅಂತ ಬಿಟ್ಟು ‘ಅಲೆಲಲೆ ಹೋಯ್ …’ ಅಂತ ಚೀರೂದು ಹಳ್ಳದ ಈ ಬದಿ ಇರೋ ಕೆಳಗಿನ ಕೇರಿಮಟ ಕೇಳಸತಿತ್ತು. ಮರಗಮ್ಮನ ಗುಡಿ ಪೂಜಾರಿ ದೇವಸ್ಥಾನದ ಮೆಟ್ಟಿಲಕ ನೀರು ಹಾಕೋ ಮುಂದ ಗುಡಿಗಿ ಬರವರಗಿ ‘ಅಲ್ನೋಡ್ರಿ ದುಗ್ಗಪ್ಪ ಹಕ್ಕಿ ಹೊಡಿಯೂದು ಹ್ಯಾಂಗ ಕೇಳತೈತಿ ‘ ಅಂತಿದ್ದ.

ಭೇಷಿ ಸೂರ್ಯ ಮ್ಯಾಲ ಏರೂಮಟ ಹಕ್ಕಿ ಹೊಡದು ತೆನಿ ಕಾಯತಿದ್ದ. ಆ ಮುದಿ ಎತ್ತಿಗಿ ಬಾಟಿ ಹಚ್ಚಿದ್ದ. ಹಿಂಗಾಗಿ ಎತ್ತು ಈಗ ತುಸು ನೇಟಾಗಿತ್ತು. ಜ್ವಾಳ ಈ ಮಟ್ಟಕ್ಕ ಬರಬೇಕಾದರ ಅದರದೇ ಪುಣ್ಯ ಮತ್ತ ಶಂಕರಗೌಡರ ಪುಣ್ಯ ಅಂತ ದಿನಕ್ಕ ಒಮ್ಮೆರೆ ಹೇಳೇ ಹೇಳವನು. ಈಗ ಹೊನಗ್ಯಾನ ಹಳ್ಳದೊಳಗ ನೀರು ಅರ್ಧಕ್ಕರ್ಧ ಇಳದಿತ್ತು. ಎಲ್ಲವ್ವ ವಗೇಣ ತಗೋಂಡು ಅಲ್ಲೇ ಹೊಲದ ಕಡಿ ಹೋಗತಿದ್ದಳು. ಕುತಗಿ ಮಟ ನೀರ ಇದ್ದಾಗೇ ಹುರಪಲೇ ಹೋಗಾಕ್ಕಿ ಈಗ ಸೊಂಟಮಟ ಇರೋ ನೀರೊಳಗ ಆಕಿ ಕುಣಕೊಂಡು ಹೋಗುವಂಗ ಇರತಿತ್ತು. ದುಡದರ ಯಾವದೇ ಆಗಲಿ ಮೋಸ ಆಗೂವಂಗಿಲ್ಲ. ಲಕಮಣ್ಣನ ಜೋಡಿನೇ ತಮಗೂ ಜಮೀನ ಕೊಟ್ಟರು. ತಾವಾರೂ ಮಾಡಲಿಲ್ಲ. ಮುಗ್ಗಲಗೇಡಿಗಳಾಗಿ ಅಲ್ಲೇನಾಗತೈತಿ ಅಂತ ಮನ್ಯಾಗ ಕುಂತವಿ. ಲಕಮಣ್ಣ, ದುಗ್ಗಪ್ಪ, ಎಲ್ಲವ್ವ ದೆವ್ವ ದುಡದಂಗ ದುಡದರು. ಈಗ ಆ ಭೂಮಿ ಅವರ ಕೈ ಹಿಡಿತು. ಅನ್ಕೊಂತ ಅವರೂ ಹಳ್ಳದೊಳಗ ಇಳದು ತಮ್ಮ ತಮ್ಮ ಜಮೀನು ನೋಡಾಕ ಹೊಂಟರು. ಅಲ್ಲಿರೋ ಕಲ್ಲು.. ಕಂಟಿ ಕಂಡು ಇಲ್ಲಿ ಲಕಮಣ್ಣ ಅದು ಹ್ಯಾಂಗ ನೆಲಾ ಸಮ ಮಾಡದ ಅನ್ನೂದೇ ಅವರಿಗಿ ತಿಳಿದಂಗ ಆಯ್ತು. ದುಗ್ಗಪ್ಪನ ಜೋಳ ನೋಡಿ ‘ಈ ವರ್ಷ ಅವನ ಮನಿ ತುಂಬ ಕಾಳು ಕಡಿ. ಅಂವಾ ಮೈ ಮುರದಿದ್ದಕೂ ಮೋಸ ಆಗಲಿಲ್ಲ.’ ಅನ್ಕೊಂತ ನೀಗಲಾರದವರಂಗ ತಿರುಗಿ ಮತ್ತ ಹಳ್ಳದ ನೀರಿಗಿ ಇಳಿದು ಕೇರಿ ಕಡಿ ನಡದರು.

ಅವತ್ತೊಂದಿನ ಶಂಕರಗೌಡ ಮತ್ತವನ ಸೋದರಳಿಯ ಬಾಬಾಗೌಡ ಸಂಜೀಮುಂದ ತೆಪ್ಪದೊಳಗ ಕುಂತು ದುಗ್ಗಪ್ಪನ ಹೊಲದಕಡಿ ಬಂದರು. ಅವರು ಬರೋದನ್ನ ದೂರದಿಂದಲೇ ನೋಡಿ ದುಗ್ಗಪ್ಪ ಓಡಿ ಬಂದು ಹಳ್ಳದ ದಂಡಿ ಮ್ಯಾಲ, ತಲಿಗಿ ಬಿಗಿದ ಟವಲ್ ಬಿಚ್ಚಿ, ಕೈ ಕಟಗೊಂಡು ನಿಂತ. ಗೌಡ ಗತ್ತೀಲೇ ಇಳೀತಾ ‘ಏನಲೇ ದುಗ್ಗ ಹ್ಯಾಂಗ ನಡದೈತಿ..?’
‘ಗೌಡರ, ಎಲ್ಲಾ ನಿಮ್ಮ ಆಶಿರ್ವಾದ’
‘ ಹುಂ ಹುಂ.. ಎತ್ತು ನೋಡಬೇಕನಸತು ಬಂದೆ’
‘ ಏ ಬರ್ರಿ ಗೌಡ್ರ ಅದು ನಿಮ್ಮೆತ್ತು ನೀವು ಯಾವಾಗ ಬೇಕಾದಾಗ ಬರ್ರಿ’ ಗೌಡ ಒಂದೆರಡು ಜೋಳದ ತೆನಿ ಬಾಗಿಸಿ ನೋಡದ ‘ಕಾಳು ಭರ್ಚಕ್ ಹಿಡದೈತೆಲ್ಲಲೇ..’ ಅಂದ.
‘ಯಪ್ಪಾ ಎಲ್ಲಾ ನಿಮ್ಮ ಪುಣ್ಯರೀ..’ ಎತ್ತಿನ ಸನ್ಯಾಕ ಬಂದು ಅದರ ಹೆಗಲ ಮ್ಯಾಲ ಕೈಯಾಡಿಸಿ
‘ ಮತ್ತ ಗಾಂವ್ ಆಗೈತೆಲ್ಲೋ ದುಗ್ಯಾ’
‘ಗೌಡರ ಬಾಟೀ ಹಚ್ಚೀನಿರಿ..’
‘ನಿನ್ನ ಬಿಟ್ಟರ ಮತ್ಯಾರೂ ಇಲ್ಲಿ ಒಕ್ಕಲುತನ ಮಾಡಿಲ್ಲನೂ..’
‘ಮೊನ್ನೆ ನಮ್ಮ ತಮ್ಮ ಮತ್ತವನ ಮಕ್ಕಳು ಬಂದಿದ್ದರು ಕಲ್ಲ ಆರಸೂದರೊಳಗ ಹೈರಾಣಾಗಿ ಹೋದರು.’
‘ಆಯ್ತು ನಾ ಇನ್ನ ಬರ್ತೆನಿ. ಸುಮ್ಮ ಹಿಂಗೇ ನೋಡಿ ಹೋಗಮ್ಮು ಅಂತ ಬಂದಿದ್ದೆ. ಎತ್ತಿನ ನೆನಪಾಯ್ತು’ ಅಂದ. ದುಗ್ಗಪ್ಪ ಬಾಗಿ ಅವರ ಪಾದಾ ಮುಟ್ಟಿ ನಮಸ್ಕಾರ ಮಾಡದ. ‘ ಗೌಡ್ರ, ಏನರೆ ಕೆಲಸ ಇದ್ದರ ಹೇಳಿ ಕಳಸರಿ’ ಅಂದ. ಗೌಡ ‘ಆಯ್ತು… ಆಯ್ತು…’ ಅನ್ಕೊಂತ ಮತ್ತೆ ತೆಪ್ಪ ಏರಿ ಹೊಂಟ. ದಾರಿಯೊಳಗ ಅಂವಗ ದುಗ್ಗಪ್ಪನ ಜೋಳ, ಆ ಎತ್ತು, ಅವನ ಅಣ್ಣತಮ್ಮದೇರು ಬಂದು ಕಲ್ಲು ಆಯ್ದು ಗುಡ್ಡೆ ಹಾಕಿದ್ದು ಎಲ್ಲಾ ನೆನಪಾಗಿ ತುಸು ಮನಸಿಗಿ ಕಸಿವಿಸಿ ಅನಸದಂಗ ಆಯ್ತು. ಅದನ್ನ ಅಳ್ಯಾನ ಮುಂದ ತೋರಗೊಟ್ಟಿರಲಿಲ್ಲ.

ಬಾಳ ಹುರುಪೀಲೇ ದುಗ್ಗಪ್ಪ ನಸುಕಿನೊಳಗೇ ಎದ್ದು ಕಣ ಮಾಡಿದ್ದ. ಹೆಂಡತಿ ಮಕ್ಕಳು ಎಲ್ಲರೂ ಕೂಡಿ ತೆನಿ ಮುರದು ಕಣಕ್ಕ ಹಾಕಿದ್ದರು. ನಡುವ ಒಂದು ಮೇಟಿ ಕಟಿಗಿ ನೆಟ್ಟು, ಅದಕ್ಕ ಎತ್ತು ಕಟ್ಟಿ ಅದರ ಹಿಂದಿಂದ ಬೆಳ್ಳ ಬೆಳತನಕ ದುಗ್ಗಪ್ಪ, ಮಗ, ಮಗಳು, ಹೆಂಡತಿ ಎಲ್ಲರೂ ಸುತ್ತಿದ್ದರು. ಬೆಳಕ ಹರದಿದ್ದೇ ತಡ ಗಾಳಿ ರವ್ವ ನೋಡಿ ತೂರಿದ್ದರು. ಕಡಿಗಾಣದ್ದು ಎಲ್ಲಾ ಸೇರಿ ನಾಲ್ಕು ಚೀಲ ಜ್ವಾಳ ಆಗಿತ್ತು. ಅರ್ಧ ಚೀಲ ಅಕಡೀ ಹಾಕಿದ್ದು ಕಾಳು ಕಡಿ ಆಗಿತ್ತು. ದುಗ್ಗಪ್ಪ ನಾಕು ಚೀಲ ಜ್ವಾಳಾ ಬೆಳದ ಅನ್ನೂ ಸುದ್ಧಿ ಇಡೀ ಕೇರಿ ತುಂಬಾ ಡಂಗುರ ಬಾರಿಸಿದಂಗ ಆಗಿತ್ತು. ತೆಪ್ಪದೊಳಗ ಒಂದೊಂದು ಚೀಲ ಇಟಗೊಂಡು ಬಂದು ಮನಿ ಮುಟಸಿದ್ದ. ಕೇರಿಯೊಳಗಿನ ಎಲ್ಲಾ ಮಂದಿ ಅವನ ಮನಿಮಟ ಬಂದು ಅವನು ಬೆಳದಿರೋ ಮಾಲು ನೋಡಿ ಹೋಗವರು. ಈಗ ಇಡೀ ಕೆಳಗಿನ ಕೇರಿಯೊಳಗ ತುಸು ಗಾಂವ್ ಇದ್ದಂವ ಅಂದರ ದುಗ್ಗಪ್ಪ. ಏನರೇ ಕೇರಿಯೊಳಗ ಹಬ್ಬ ಹುಣ್ಣವಿ ಮಾಡೂದಿದ್ದರ ಅವನ್ನ ಮುಂದ ಮಾಡೇ ಮಾಡತಿದ್ದರು.

ದುಗ್ಗಪ್ಪ ‘ನಾವು ಸಾಯೂ ಮಟ ಬರೀ ಹಂಡ ಹಮಾಲಿ ಮಾಡೂದೇ ಆಯ್ತು ಇನ್ನ ಮುಂದರೇ ನಾವೂ ಮನುಶ್ಯಾರು ಆಗೋದು ಬ್ಯಾಡಾ…? ಬರೀ ಗೋರಿ ತೋಡೂದು… ಚಪ್ಪಲಿ ಮಾಡೊದು… ಹೆಣಾ ಹೂಳೂದು… ಸತ್ತ ಸುದ್ದಿ ಮುಟ್ಟಸೋದು ಇದೇ ಐತು. ಹ್ಯಾಂಗೂ ಗೌಡರು ಎಲ್ಲರಿಗೂ ಜಮೀನು ಕೊಟ್ಟಾರ ದುಡದರ ನೀವೂ ಉಜ್ಜಳ ಆಗಾಕ ಆಕೈತಿ’ ಅಂದದ್ದು ಕೇಳಿ ಅಲ್ಲಿದ್ದವರೆಲ್ಲಾ ಒಬ್ಬರ ಮುಖಾ ಒಬ್ಬರು ನೋಡಕೊಂಡರು. ಕುಂಟ ಯಮನಪ್ಪ ಮುಂದ ಬಂದು ‘ಅದ್ಯಾಂಗ ಆಗತೈತಿ, ತಾತ ಮುತ್ತಾತನ ಕಾಲದಿಂದೂ ನಾವು ಮಾಡಕೊಂಡು ಬಂದ ಕುಲಕಸುಬು ಬಿಡಾಕ ಅಗತೈತಾ…?’ ‘ಬಿಡಬ್ಯಾಡ ನಿನಗ ಯಾರು ಬಿಡು ಅಂತಾರ… ಅದರ ಜೋಡಿ ಇದನೂ ಮಾಡ್ರಿ ಅಂದರ ಉದ್ದಾರ ಆಗ್ತೀರಿ. ಒಂದು ಹೆಣಾ ಹೂಳದರ ಬಾಳಂದ್ರ ಎಟ್ಟು ಸಿಗತೈತಿ…? ಎರಡು ತೆಂಗ ವಮ್ಮನ ಜ್ವಾಳ. ನೀವೇ ಕಷ್ಟ ಪಟ್ಟು ಬೆಳದರ ನಾಕೈದು ಚೀಲ ಯಾವದು ಪಾಡಂತ ನೀವೇ ಯೋಚನೆ ಮಾಡರಿ’ ಅಂತ ದುಗ್ಗಪ್ಪ ಗುಡಿ ಕಡಿ ಹೊಂಟ. ದೂರದಿಂದೇ ಇವನ್ನ ನೋಡಿ ಪೂಜಾರಿ ದೇವೆಂದ್ರ ‘ಬಾರೋ ದುಗ್ಗಪ್ಪ ತಾಯಿ ಮಾರಮ್ಮನ್ನ ನಂಬದರ ಯಾರನ್ನೂ ಕೈ ಬಿಡುವಂಗಿಲ್ಲ.

ನಿನ್ನೆ ಕನಸಿನೊಳಗ ನಿನ್ನ ಹೊಸ ಪೀಕು ತಾಯಿ ತನ್ನ ಉಡಿ ಸೇರಲಿ ಅಂತ ಹಂಬಲಸಿದ್ದಳು. ತಡ ಮಾಡಬ್ಯಾಡ ನಾಳೆ ಮಂಗಳವಾರ ತಾಯಿ ಉಡಿ ತುಂಬು’ ದುಗ್ಗಪ್ಪ ಮಾರಮ್ಮಗ ಬಾಗಿ ನಮಸ್ಕರಿಸಿ ‘ಆಯ್ತು ಪೂಜಾರಪ್ಪ ನೀವಂದಂಗೇ ಆಗಲಿ’ ಅಂತ ಹಣಿ ಮ್ಯಾಲ ಕುಂಕುಮ ಇಟ್ಗೊಂಡು ಬರಬರ ನಡದ. ದೇವೆಂದ್ರಪ್ಪ ಜೋರಾಗಿ ‘ಏ ದುಗ್ಗ ಮರಿಬ್ಯಾಡ ಅವ್ವ ಕೋಪ ಮಾಡ್ಕೊಂತಾಳ’ ‘ಐನೋರ, ನೀವು ಮತ್ತ ನೆನಪ ಮಾಡೂದೇ ಬ್ಯಾಡ, ನಾನು ನನ್ನ ಹೆಂಡ್ತಿ ಇಬ್ಬರೂ ಕೂಡೇ ಬಂದು ಉಡಿ ತುಂಬತೀವಿ’ ಅನ್ಕೊಂತ ಮತ್ತೊಮ್ಮ ಮಾರೆಮ್ಮಗ ನಮಸ್ಕಾರ ಮಾಡಿ ನಡದಿದ್ದ. ದುಗ್ಗಪ್ಪನ ಮಗ ಇಡೀ ಕಾಲೇಜಿಗೆ ಫಸ್ಟ್ ಬಂದಿದ್ದಕ ಅಂವಗ ಬಾಳ ಖುಷಿ ಆಗಿತ್ತು. ‘ಹೋ ಬರಮಣ್ಣ ನಮ್ಮ ಭೀಮ ಇಡೀ ಕಾಲೇಜಿಗೆ ನಂಬರ ಒನ್ ಬಂದಾನ’ ‘ನಿಂದು ಬರೀ ಮಾತಲ್ಲೇ ಐತು ನಾಕು ಚೀಲ ಜ್ವಾಳ ಬಂತು, ಮಗ ಪಾಸಾದ ಬರೀ ಒಣ ಒಣ ಹೇಳದರ ಹ್ಯಾಂಗ… ಒಂದೆರಡು ಬಾಟಲ್ ಸೇಂದಿ ಹೊಡಿಸಿ ಹೇಳಬೇಕು.’ ಅಂದಾಗ ದುಗ್ಗಪ್ಪ ನಕ್ಕೊಂತ ‘ ಮಾಡಮ್ಮು ಎಲ್ಲಿ ಹೊಕೈತಿ ನಿನಗ ಬಿಟೈತಾ…?’ ಅಂದ. ಮಗ ಭೀಮಪ್ಪ ಮತ್ತೂ ಓದಬೇಕು ಅಂತ ಪಟ್ಟು ಹಿಡಿದಿದ್ದ. ಅವನಜ್ಜ ಲಕಮಣ್ಣ ಹೇಳದಂಗ ಜೀತಾ ಮಾಡಿಯಾದರೂ ಓದಿಸೇ ತೀರಸ್ತೀನಿ ಅಂತ ದುಗ್ಗಪ್ಪನೂ ಮಗನಿಗಿ ಹೇಳಿದ್ದ.

ಭೀಮಪ್ಪ ಓದೂದರೊಳಗ ಬಾಳ ಚುರಕಿದ್ದ. ಅವರಪ್ಪನ ಜೋಡಿ ಹೊಲದ ಕೆಲಸಾ ಮಾಡ್ಕೊಂಡು ಓದಿದರೂ ಈ ಪರಿ ಪಾಸಾಗಿದ್ದು ಇಡೀ ಗೋಡೂರಿಗೇ ಸುದ್ಧಿ ಆಗಿತ್ತು. ಶಂಕರಗೌಡಂತೂ ‘ಆ ದುಗ್ಗಪ್ಪನ ಮಗನ ನೋಡ್ರಿ, ಓದದರ ಹಂಗ ಓದಬೇಕು. ಅಂವಾ ಗ್ಯಾರಂಟಿ ಆಫೀಸರೇ ಆಗ್ತಾನ ನೋಡೂವಂತ್ರಿ’ ಅಂತ ತನ್ನ ಅಣ್ಣತಮ್ಮದೇರ ಮಕ್ಕಳ ಮುಂದ ಹೇಳತಿದ್ದ. ಚಂದ್ರಶೇಖರ ಅವರಪ್ಪನ ಮಾತು ಕೇಳೀ ಕೇಳದಂಗ ನಿಂತಿದ್ದ. ಅಂವಗೂ ಭೀಮ ಮುಂದೊಂದು ದಿನ ಏನರೇ ಆಗೇ ಆಗ್ತಾನ ಅನ್ನೂದು ಗೊತ್ತಿತ್ತು. ದುಗ್ಗಪ್ಪನ ಒಕ್ಕಲತನ, ಕಲ್ಲಿನ ಭೂಮ್ಯಾಗ ನಾಕು ಚೀಲ ಜ್ವಾಳಾ ಬೆಳೆದಿದ್ದು ತನ್ನ ಮಂದಿ ಮಕ್ಕಳ ಜೋಡಿ ಮಾತಾಡೂ ವ್ಯಾಳೆದೊಳಗ ಬರಬರ ದೇವೇಂದ್ರಪ್ಪ ಮೈ ಮ್ಯಾಲ ಒಂದು ಕೆಂಪು ಶಾಲು ಹೊದಕೊಂಡು ಬಾಗಿಲದೊಳಗ ನಿಂತು ‘ ದೊಡ್ಡಗೌಡರು ಅದಾರೇನ್ರಿ’ ಅಂತ ಕೇಳಿದ್ದೇ ಅವನ ಆವಾಜ್ ಮ್ಯಾಲೇ ಶಂಕರಗೌಡ ‘ದೇವೆಂದ್ರಪ್ಪ ಪೂಜಾರಿ ಬಂದಗೈತಿ ಒಳಗ ಬಾ ಅಂತ ಹೇಳು’ ಮಗ ಚಂದ್ರಶೇಖರ ಹೋಗಿ ಕರಕೋಂಡು ಬಂದ.

ಒಳಗ ಬಂದವನೇ ಗೌಡರು ಜೇಜಿಯೊಳಗ ಮಂಚದ ಮ್ಯಾಲ ಕುಂತಿದ್ದು ನೋಡಿ ನಮಸ್ಕಾರ ಮಾಡದ. ‘ಏನೋ ದೇವೆಂದ್ರ ಮಟ ಮಟ ಮಧ್ಯಾಹ್ನದೊಳಗ ಬಂದೀಯಲ್ಲ.?’ ಅಂದದ್ದೇ ದೇವೇಂದ್ರಪ್ಪ ಅಲ್ಲಿರೋ ಎಲ್ಲಾ ಜನರನ್ನ ನೋಡಿ ಗಲಿಬಿಲಿಗೊಂಡ. ಅದರ ಮ್ಯಾಲಿಂದೇ ಗೌಡ ಲೆಕ್ಕಾ ಹಾಕಿ ‘ನೀವೇಲ್ಲಾ ನಡೀರಿ ಬ್ಯಾರೇ ಏನೋ ವಿಷಯ ಇರಬೇಕು’ ಅಂದಾಗ ಅಲ್ಲಿದ್ದವರೆಲ್ಲಾ ಎದ್ದು ಹೊರಗ ನಡದರು. ‘ಹೇಳು ಪೂಜಾರಿ ಏನು ಬಂದಿದ್ದು.’
‘ಏನು ಹೇಳೂದರಿ ಗೌಡರ.. .ನಿಮ್ಮದೇ ತಿಂದು ನಿಮಗೇ ತಿರಗಿ ಮಾತಾಡ್ತಾನ’
‘ನೀ ಏನು ಹೇಳಾಕತ್ತೀದಿ…?’
‘ಖರೆನೆರಿ ಗೌಡ್ರ… ಅದು ಸರಕಾರಿ ಜಮೀನ, ನಮ್ಮವರಿಗೇ ಕೊಡಬೇಕಂತ ಇತ್ತು ಕೊಟ್ಟಾರ, ಏನು ಉಪಗಾರಕ್ಕ ಕೊಟ್ಟಾರಾ…? ಅಂತಾನ. ಕೆಳಗಿನ ಕೇರಿ ಮಂದಿನ್ನ ಎತ್ತಿ ಕಟ್ಟಿ ನಿಮ್ಮ ವಿರುದ್ಧ ಮಾತಾಡಾಕತ್ತಿದ್ದ. ಸೊಕ್ಕ ಬರೂದು ತಡಾನೇ ಇಲ್ಲ. ನಾಕು ಚೀಲ ಜ್ವಾಳಾ ಬೆಳದು ಮಾರಮ್ಮನ ಉಡಿಯೊಳಗ ಎರಡು ಸೊಲಿಗಿ ಹಾಕ್ಯಾನೋಡ್ರಿ ಬದ್ಮಾಶ್’ ಅಂದಾಗಲೇ ಗೌಡಗ ದೇವೆಂದ್ರ ಯಾರ ಬಗ್ಗೆ ಮಾತಾಡಾಕತ್ತಾನಂತ ಗೊತ್ತಾಗಿತ್ತು. ‘ಅದೆಲ್ಲಾ ಹೋಗಲಿ ನೀವು ಕೊಟ್ಟಿರೋ ಎತ್ತು ಇವತ್ತೋ ನಾಳೆನೋ ಸಾಯುವಂಗಿತ್ತು ತಾನೇ ಚಲೋತನೆಗೆ ಜೋಪಾನ ಮಾಡಿದ್ದಕ ಮತ್ತ ಗಾಂವ್ ಆಯ್ತು ಅಂತಾನಂದ್ರ ಸೊಕ್ಕಲ್ಲೇನ್ರಿ. ನೀವು ಅವನಿಗಿ ಜಮೀನ ಕೊಟ್ಟು ತಪ್ಪ ಮಾಡೀರಿ ಸುಮ್ಮ ದನ ಸುಲಕೊಂಡು ಬಿದ್ದಿರತಿದ್ದ.’ ಅನ್ಕೊಂತ ಗೌಡನ ಮುಖ ನೋಡದ.

ಏನೋ ಗೇನಿಸುವಂಗ ಕಾಣತಿತ್ತು. ಗೌಡಗೂ ದುಗ್ಗಪ್ಪನ ಬಗ್ಗೆ ಒಳಗೊಳಗೇ ಒಂಥರಾ ಇರುಸುಮುರುಸು ಸುರು ಆಗಿತ್ತು. ‘ಏ ಪೂಜಾರಿ, ಜಮೀನು ಕೊಡಾಕ ಅವರಿಗೇನು ಕಾಗದ ಪತ್ರ ಕೊಟ್ಟ್ತಿದ್ದೈತೆನೂ.? ಸುಮ್ಮ ಮಾತಿಗಿ ಬಂದಾಗ ಹೇಳಿದ್ದಷ್ಟೆ. ಇವತ್ತೇ ಅವರನ್ನ ಅಲ್ಲಿಂದ ಎಬ್ಬಿಸಾಕ ಬರತೈತಿ. ನೀ ಹೇಳದಂಗ ಅಂವಾ ನನ್ನ ಮ್ಯಾಲೇ ನಿಗರಾಕತ್ತದ ಅಂದ್ರ ಜಮೀನಲ್ಲ, ಊರೇ ಬಿಡಸ್ತೀನಿ’ ಅಂದಾಗ ದೇವೆಂದ್ರಪ್ಪ ‘ ನಾನೂ ಇದೇ ಮಾತ ಹೇಳೀನಿ ನೀವು ಯಾರ ಬಗ್ಗೆನರೆ ಮಾತಾಡ್ರಿ ಶಂಕರಗೌಡರ ಬಗ್ಗೆ ಮಾತಾಡದರ ಅದು ಬಾಳ ವಜ್ಜಿ ಆಗತೈತಿ ಅಂತ. ನಾ ಇದೆಲ್ಲಾ ನಿಮ್ಮ ಮುಂದ ಹೇಳಬಾರದಂತ ಮಾಡಿದ್ದೆ. ಎಟ್ಟೆ ಆಗಲಿ ನಿಮ್ಮ ಉಪ್ಪ ತಿಂದೀನಿ ಇಟ್ಟೂ ಮಾಡಲಿಲ್ಲ ಅಂದರ ನನಗ ಅಂವಗ ಏನೂ ಫರಕ್ ಇರಲ್ಲ. ಆಯ್ತು ಗೌಡರ ನಾ ಇನ್ನ ಬರ್ತೆನಿ’ ಅಂತ ಹೊಂಟು ನಿಂತಿದ್ದ. ‘ಏ ಚಂದ್ರು ದೇವೆಂದ್ರಗ ನಾಕು ಸೊಲಗಿ ಕಡ್ಲಿ ತಂದು ಹಾಕು’ ಅಂದದ್ದೇ ಪೂಜಾರಿ ಶಾಲ್ ತಗದು ಕೆಳಗ ಹಾಸಿದ್ದ. ಅವನ ಮುಖಾನೂ ಆ ಶಾಲಿನಂಗೇ ಅಗಲ ಆಗಿತ್ತು.

ಬ್ಯಾಸಗಿ ಸನ್ಯಾಕ ಬಂದಿಂದ ಹೊನಗ್ಯಾನ ಹಳ್ಳ ಇಳೀತಾ ಬಂತು. ಈಗ ಬರೀ ಮೊಣಕಾಲಮಟ ನೀರು. ನೀರು ಮಾತ್ರ ಬಾಳ ತಿಳಿ ಇತ್ತು. ಬ್ಯಾಸಗಿಯೊಳಗಂತೂ ಈ ಹಳ್ಳದ ನೀರು ಬಾಳ ಆಸರ ಆಗತಿತ್ತು. ಸುತ್ತಮುತ್ತಲಿನ ಮಂದಿ ಇಲ್ಲಿ ಬಂದು ನೀರ ತುಂಬಕೊಂಡು ಹೋಗತಿದ್ದರು. ದುಗ್ಗಪ್ಪಗ ಕೇರಿ ಮಂದಿ ಮಾತು, ನಡಾವಳಿ ಬಗ್ಗೆ ತುಸು ಬ್ಯಾಸರಾಗಿತ್ತು. ಖಾಸ್ ಆಗಿ ಗುಡಿ ಪೂಜಾರಿ ದೇವೆಂದ್ರಪ್ಪಂದು. ‘ಏ ದುಗ್ಗಪ್ಪ ನಾಕು ಚೀಲ ಬೆಳದು ಎರಡು ಸೊಲಗಿ ಹಾಕ್ತಿಯಲ್ಲೋ, ಅವ್ವಗ ಅರ್ಧ ಚೀಲರೇ ಬಾಳನೂ..?’ ಅಂದಿದ್ದ. ‘ಮಾರಮ್ಮಗ ನಾ ಎಷ್ಟು ಕಷ್ಟ ಪಟ್ಟೀನಿ ಅನ್ನೂದು ಗೊತೈತಿ, ನಮ್ಮವ್ವಗ ಎಲ್ಲಾ ತಿಳದೈತಿ, ಆಕಿ ಅಟ್ಟೂ ಬ್ಯಾಡಂತಾಳ’ ಅಂದಾಗ ದೇವೆಂದ್ರನ ಮುಖ ಸೊಟ್ಟಾದಂಗಿತ್ತು. ದುಗ್ಗಪ್ಪಗ ಬ್ಯಾಸಗಿಯೊಳಗ ಏನರೇ ತರಕಾರಿ ಬೆಳಿಬೇಕಂತ ಆಸೆ ಇತ್ತು. ಹಿಂಗಾಗಿ ಹೊಲ ರಾಬ್ ಮಾಡತಿದ್ದ. ಬೆಡಗಾ ತಗೊಂಡು ಕೊಯಲಿ ಹಡ್ಡ್ದತಿದ್ದ. ಸಗಣಿ ಗೊಬ್ಬರ ಹಾಕತಿದ್ದ. ಬರೋ ಸೋಮವಾರ ಮಟಗಿ ಸಂತಿಯೊಳಗ ಇನ್ನೊಂದು ಎತ್ತು ತರಾಕ ಕಸರತ್ತು ಮಾಡಿದ್ದ. ಎರಡು ಚೀಲ ಜ್ವಾಳಾ ಮಾರಿ, ಆ ಮುದಿ ಎತ್ತಿಗಿ ಸಾತ್ ಕೊಡುವಂಥಾ ಇನ್ನೊಂದು ಎತ್ತು ತರಾಕ ನಿರ್ಧಾರ ಮಾಡಿದ್ದ.

ಬರಮಪ್ಪಗ ಕರಕೊಂಡು ಸಂತಿಗಿ ಹೋಗಿ, ಇಡೀ ಬಜಾರ ತುಂಬಾ ಹುಡಕದರೂ ಅವನ ರೇಟಿಗಿ ಹೊಂದುವಂತಾ ಒಂದೂ ಎತ್ತು ಕಣ್ಣಿಗಿ ಬೀಳಲಿಲ್ಲ. ತುಸು ದೂರ ಹುಣಸೀ ಗಿಡದ ಬುಡಕ ಒಂದು ಎತ್ತಿತ್ತು. ಅದು ಎಕ್ಕಾ ಗಾಡಿ ಹೂಡೊ ಎತ್ತು. ಅದರ ಮಾಲಕ ಅಡಚಣಿಗಾಗಿ ಅದನ್ನ ಮಾರಾಕತ್ತಿದ್ದ. ಕೋಡು ತುಸು ದೊಡ್ಡ ಇದ್ವು. ಹಿಂದಿನ ಕಾಲೊಂದು ಎಳದು ಹಾಕತಿತ್ತು. ಜೀವದೊಳಗ ಮಾತ್ರ ಇನ್ನೂ ಗಟ್ಟಿತ್ತು. ಅದು ದುಗ್ಗಪ್ಪನ ರೇಟಿನೊಳಗೇ ಬರುವಂಗಿತ್ತು. ಬರಮಪ್ಪ ‘ಯಣ್ಣಾ ಇದನ್ನ ಸುಮ್ಮ ತಗೊಂಡು ಬಿಡು. ಅದನ್ನ ತಗೊಂಡು ನೀನಂತೂ ಓಲಿಗಾಡಿ ಒಡಸಾಕಂತೂ ಹೋಗುವಂಗಿಲ್ಲ’ ಅಂದಾಗ ದುಗ್ಗಪ್ಪಗ ಅಂವಾ ಹೇಳೂದೂ ಖರೆ ಅನಿಸಿ ‘ಆಯ್ತು ತುಸು ಹಲ್ಲು, ಸುಳಿ ನೋಡು’ ಅಂದ. ಎಲ್ಲಾ ನೋಡಿದ ಮ್ಯಾಲ ಒಂದು ರೇಟ್ ಹೊಂದಿಸಿ ತಗೋಂಡು ಬಂದರು. ಕೆಳಗಿನ ಕೇರಿ ಮಂದಿ ಆ ಎತ್ತು ನೋಡಿ ‘ನಮ್ಮ ದುಗ್ಗಪ್ಪನ ಒಕ್ಕಲುತನ ಇನ್ನ ಮುಂದ ಮತ್ತೂ ಬಿರಸಿಗಿ ಬೀಳತೈತಿ’ ಅಂತಿದ್ದರು. ಪೂಜಾರಿ ದೇವೆಂದ್ರಪ್ಪ ದೂರ ನಿಂತು ದುಗ್ಗಪ್ಪ ತಂದಿರೋ ಎತ್ತು ನೋಡತಿದ್ದ. ದುಗ್ಗಪ್ಪ ಮಾತ್ರ ಅವನ್ನ ನೋಡೀ ನೋಡದಂಗಿದ್ದ. ಅವತ್ತೇ ಸಂಜಿ ಮುಂದ ಅದನ್ನ ಹೊಡಕೊಂಡು ಹೊಲಕ್ಕ ಹೋಗಿದ್ದ. ಮೊದ ಮೊದಲ ಈ ಎಕ್ಕಾ ಗಾಡಿ ಎತ್ತು ಕಾಳಿಂಗನ ನೋಡಿ ಮುಸ್… ಮುಸ್… ಅಂದಂಗ ಮಾಡಿ, ಕಾಲ ಕೆದರಿದ್ದೇನೋ ಹೌದು. ಆಮ್ಯಾಗ ಅದಕ್ಕ ಹೊಂದಕೊಂಡಿತ್ತು. ಎರಡೂ ಕೂಡೇ ಜೋಡಿ ಮ್ಯಾಲ ಮೇಯತಿದ್ವು.

ಎಲ್ಲವ್ವ, ದುಗ್ಗಪ್ಪ ಇಬ್ಬರೂ ಕೂಡಿ ಹೆಂಟಿ ಒಡೀತಿದ್ದರು. ಅರ್ಧ ಎಕರೆ ಆ ನಳ್ಳಿನೊಳಗ ಸೌತೆಕಾಯಿ ಹಾಕೂದರ ಬಗ್ಗೆ ಅಂವಾ ಕೈ ಮಾಡಿ ಹೆಂಡತಿಗಿ ತೋರಸತಿದ್ದ. ಅಟ್ಟರೊಳಗ ಹಳ್ಳದ ದಂಡಿ ಮ್ಯಾಲ ಜೋರಾಗಿ ಅಂಬಾ…! ಅಂಬಾ…! ಅಂತ ವದರೋ ಆವಾಜ ಕೇಳಸತು. ಹೊಳ್ಳಿ ನೋಡೂದರೊಳಗ ಹೊಸದಾಗಿ ತಂದ ಎತ್ತು ನೀರಾಗ ದಪ್ಪಂತ ಬಿತ್ತು. ಓಡಿ ಹೋಗೂದರೊಳಗ ಮೊಸಳಿ ಅದರ ಕುತಗಿಗಿ ಬಾಯಿ ಹಾಕಿ ಅದನ್ನ ವಡ್ಡ ಮುರದು ನೀರಾಗ ಎಳಕೊಂಡು ಹೋಗಿತ್ತು. ಓಡಿ ಹೋಗಿ ಕೊಡ್ಲಿ, ಬಡಗಿ ತರೂದರೊಳಗ ಮೊಸಳಿ ಎಳಕೊಂಡು ದೂರ ಹೋಗಿತ್ತು. ಅಟ್ಟು ದೊಡ್ಡ ಮೊಸಳಿ ಈ ಹಳ್ಳದೊಳಗ ಎಲ್ಲಿಂದ ಬಂತು ಅನ್ನೂದೇ ದುಗ್ಗಪ್ಪಗ ತಿಳೀದಂಗ ಆಯ್ತು. ಗಂಡ ಹೆಂಡತಿ ಇಬ್ಬರೂ ಚೀರಾಡೂದು ಕೇಳಿ ಕೆಳಗಿನ ಕೇರಿ ಮಂದಿ ಓಡಿ ಬಂದರು. ಅಟ್ಟರೊಳಗ ಒಂದು ಎತ್ತು ಖಾಲಿಯಾಗಿತ್ತು.

ದುಗ್ಗಪ್ಪಗ ಬಾಳ ಬ್ಯಾನಿ ಆಯ್ತು ತಂದ ದಿನಾನೇ ಹಿಂಗ ಆಗಿದ್ದಕ ಅಂವಗ ಬಾಳ ಬಿರಿ ಬಂದಿತ್ತು. ದಿಕ್ಕು ತೋಚದಂಗ ಆಗಿತ್ತು. ದೇವೆಂದ್ರಪ್ಪ ಜೋರಾಗಿ ಕೇರಿ ಮಂದಿಗಿ ಕೇಳೂವಂಗ ‘ ಮರಗಮ್ಮಗ ಎಲ್ಲಾ ಗೊತೈತಿ. ಆಕಿ ತನಗ ಅನ್ಯಾಯ ಆದ್ರ ಸುಮ್ಮ ಕೂಡೂವಂಗಿಲ್ಲ. ಎರಡು ಸೊಲಗಿ ಕೊಟ್ಟು ಅವತ್ತೇ ಅಮ್ಮಗ ಅಸಹ್ಯ ಮಾಡಿದ್ದ. ಇವತ್ತ ಎತ್ತು ತಂದು ಅಮ್ಮಗ ತೋರಸಲಿಲ್ಲ. ಆಕಿ ಬಿಡ್ತಾಳಾ… ಮೊಸಳಿ ರೂಪದೊಳಗ ಬಂದು ನುಂಗಿಬಿಟ್ಟಳು’ ಅಂತ ಚೀರಿ ಚೀರಿ ಹೇಳತಿದ್ದ. ಬರಮ ಅವನ ಕಡಿ ಅಸಹ್ಯವಾಗಿ ಹೊಳ್ಳಿ ನೋಡಿ ಮನಸಿನೊಳಗೆ ‘ಇವಂದು ಬರೀ ಇದೇ ಆಯ್ತು , ಊರಿಗೇ ಬೆಂಕಿ ಬಿದ್ದರೂ ತನ್ನ ಹೊಟ್ಟಿ ತಣ್ಣಗ ಇರಬೇಕು ಅನ್ನವನು ಚೋದಿಮಗ’ ಅನ್ಕೊಂತ ಗುಡಸಲ ಕಡಿ ನಡದ. ಶಂಕರಗೌಡಗ ದೇವೇಂದ್ರಪ್ಪ ಈ ಸುದ್ಧಿ ಮುಟ್ಟಿಸಿದ್ದೇ ತಡ ಗೌಡ ‘ಚಲೊ ಐತು ತಗೊ ಬಾಳ ಜಿಗದಾಡತಿದ್ದ. ಮೊದಲ ದಿನಕ್ಕ ಒಮ್ಮೆರೆ ಮನಿಕಡಿ ಬಂದು ಏನರೇ ಕೆಲಸ ಐತೇನ್ರಿ ಅಂತ ಕೇಳಂವ, ಈಗ ಈಕಾಡಿ ತಲಿನೂ ಹಾಕಂಗಿಲ್ಲ. ಇನ್ನೊಂದು ವಾರ ತಡಿ ಅವನಿಗಿ ಪಾಠ ಕಲಸ್ತೀನಿ’ ಅಂದಿದ್ದ.

ದುಗ್ಗಪ್ಪಗ ಖರೀದಿ ಮಾಡಕೊಂಡು ಬಂದಿದ್ದ ಎತ್ತು ಹೋಗಿದ್ದು ಬಾಳ ಬ್ಯಾಸರ ಆಗಿತ್ತು. ಹಂಗಂತ ಮನಿ ಮೂಲ್ಯಾಗ ಸೇಂದಿ ಕುಡಕೊಂತ ಕುಂತರ ಯಾರೂ ಕೊಡೋದಿಲ್ಲ, ಇರೋ ಇನ್ನೊಂದು ಎತ್ತು ಸೈತ ಕೈ ಬಿಡತೈತಿ ಅಂತ ಗೊತ್ತಿದ್ದೇ ಅದನ್ನ ಮತ್ತ ಮನಿ ಮುಂದಿನ ಗಿಡಕ್ಕ ಕಟ್ಟಾಕ ಸುರು ಮಾಡಿದ್ದ. ಆ ಮೊಸಳಿಗಿ ಸಂಯಿ ಬಿತ್ತು ಮತ್ತೊಮ್ಮ ಅದು ರುಚಿಗಿ ಬರೂದೇ… ಏನರೇ ಘಾತ ಮಾಡೂದೇ ಅಂದವನೇ ಸೀದಾ ಹೊಲದ ಕಡಿ ನಡದ. ಆ ಬರ್ಲಗುಡ್ಡದ ಮ್ಯಾಲ ಹತಗೊಂಡು ಕೈಯಾಗೊಂದು ಗಂಟ ಬಡಗಿ ಹಿಡಕೊಂಡು ಕಂಟಿ ಬಡಕೊಂತ ತಿರಗಾಕತ್ತದ. ಗುಡ್ಡದ ಮ್ಯಾಲ ಕಂಟೀ ಕೆಳಗ ಕಲ್ಲಿನ ಪಡಕಿನೊಳಗ ಬಡಗೀ ಒತ್ತದ. ಒಳಗಿರೋ ನರಿಯೊಂದು ಬುದುಂಗನೇ ಜಿಗದು ಓಡಾಕ ಸುರು ಮಾಡತು. ಕೈಯಾಗಿನ ಗಂಟ ಬಡಗಿ ತಗೊಂಡು ತಲಿಕಡಿ ಒಂದೇಟು ಬಿಟ್ಟ. ಅದು ಅಲ್ಲೇ ಕುಸದು ಬಿತ್ತು. ಅದನ್ನ ಎತಗೋಂಡು ಬಂದ.

ಒಂದು ಕಡಿ ಕುಂತು ಅದರ ಹೊಟ್ಟೀ ಹರದು ಒಳಗ ಮಗನ ಕಡಿಂದ ತರಿಸಿದ್ದ ಪಾಲಿಡಾಲ್ ಸುರುವಿ, ಮತ್ತ ಹೊಟ್ಟಿ ಹೊಲದು ಎತ್ತ ಎಳಕೊಂಡು ಹೋಗಿರೋ ಜಾಗದೊಳಗ ಆ ನರಿನ್ನ ತಂದಿಟ್ಟ. ಮಧ್ಯಾಹ್ನದೊಳಗ ಎಲ್ಲಾ ಸ್ತಭ್ದ ಆಗಿರೋ ವ್ಯಾಳೆದೊಳಗ ಹಳ್ಳದ ದಂಡೀ ಮ್ಯಾಲ ಜುಳಕ್… ಜುಳಕ್… ಅಂತ ನೀರ ಸದ್ದಾಯ್ತು. ಆ ಮೊಸಳಿ ಪುಸಂಗನೇ ಬಂದು ನರಿನ್ನ ಎಳಕೊಂಡು ಹೋಯ್ತು. ದುಗ್ಗಪ್ಪ ದೂರ ಕುಂತು ಬೀಡಿ ಸೇದಕೊಂತ ನೋಡತಿದ್ದ. ಅಂದಕೊಂಡಂಗ ಎಲ್ಲಾ ಮಾಡಿ ಮುಗಸಿ, ಮನಿಕಡಿ ನಡದ. ಮಗ ಭೀಮಪ್ಪ ಮತ್ತ ಎಲ್ಲವ್ವನ ಮುಂದ ಎಲ್ಲಾ ಕತಿ ಮಾಡಿ ಹೇಳಿದ್ದ. ಮರುದಿನ ಮುಂಜಾನೆ ಕೊರವರ ರಂಗಪ್ಪ ಓಡಿ ಬಂದು ‘ದುಗ್ಗಪ್ಪ ಕಾಕಾ, ನಾ ಮುಂಜಾನೆ ಬಯಲು ಕಡಿಗೆ ಹೋಗಿದ್ದೆ ಹಳ್ಳದ ದಂಡಿ ಮ್ಯಾಲ ಒಗಿಯೂ ಕಲ್ಲ ಮ್ಯಾಲ ದೊಡ್ದದೊಂದು ಮೊಸಳಿ ಅಂಗಾತ ಚಿತ್ತ ಬಿದ್ದೈತಿ. ದೂರ ನಿಂತು ಕಲ್ಲ ಒಗದೆ…ಉಶ್..! ಅಂದೆ ಮಿಸಕಾಡಲಿಲ್ಲ. ಆವಾಗ ನನಗ ಅದು ಸತೈತಿ ಅಂತ ಗೊತ್ತಾಯ್ತು. ನಿನ್ನ ಎತ್ತು ನುಂಗಿದ್ದಕ್ಕ ಸರಿ ಆಯ್ತು ನೋಡು ಶಿಕ್ಷಾ’ ಅಂತ ಬೇವಿನ ಕಡ್ಡಿಯಿಂದ ಹಲ್ಲ ತಿಕ್ಕೊಂತ ಸುದ್ಧಿ ಮುಟ್ಟಸಕೊಂತ ಹೊಂಟ. ದುಗ್ಗಪ್ಪ ಮತ್ತವನ ಹೆಂಡತಿ , ಮಕ್ಕಳು ಎಲ್ಲರೂ ಹೋಗಿ ನೋಡಿ ಬಂದರು. ಬೆಳ್ಳಗ ಒಗಿಯೊ ಕಲ್ಲ ಮ್ಯಾಲ ಅಂಗಾತ ಬಿದ್ದಕೊಂಡಿತ್ತು.

ಮನಸಿನೊಳಗೇ ದುಗ್ಗಪ್ಪ ಬರೊಬ್ಬರಿ ಆಯ್ತು ಬಸ್ತಾನಿ ಬೋಳಿಮಗಂದಕ್ಕೆ ಅಂದಕೊಂಡು ತಿರುಗಿ ಬಂದ. ಕೇರಿ ಮಂದಿ ಬಾಯಾಗ ಆ ಮೊಸಳಿದೇ ಸುದ್ಧಿ. ಅಷ್ಟರೊಳಗ ಪೋಸ್ಟಮನ್ ದುಗ್ಗಪ್ಪನ ಮನಿಗಿ ಬಂದು ಭೀಮಪ್ಪನ ಹೆಸರಲೆ ಒಂದು ಪತ್ರಾ ಐತಿ ಅಂದವನೇ ಭೀಮಪ್ಪನ ಸಹಿ ತಗೊಂಡು ಕೊಟ್ಟ. ಅದು ಎಲ್ಲಿಂದ ಬಂತು ಏನು ಅಂತ ಎಲ್ಲಾ ಭೀಮಗ ಗೊತ್ತಿತ್ತು. ಬರೋ ಸೋಮವಾರ ಬೆಂಗಳೂರಲ್ಲಿ ಅಂವಂದು ಸಂದರ್ಶನ ಇತ್ತು. ಅಂವಾ ಕೆ.ಎ.ಎಸ್. ಪರೀಕ್ಷೆ ಪಾಸಾಗಿದ್ದ. ದುಗ್ಗಪ್ಪಗ ಬಿಟ್ಟರ ಮತ್ಯಾರಿಗೂ ಅಂವಾ ಹೇಳಿರಲಿಲ್ಲ. ಕೇರಿ ಮಂದಿ ಅದ್ಯಾಕೋ ಮೊದಲಿನಂಗಿಲ್ಲ ಯಾರ ಮುಂದೂ ಸದ್ಯಕ್ಕ ಹೇಳೂದು ಬ್ಯಾಡ ಅಂತ ಅವರಪ್ಪನ ಮುಂದೂ ಅಂದಿದ್ದ. ಈಗ ಅವರಪ್ಪನ ಕಡಿ ನೋಡಿ, ಬಾಜೂಕ ಕರದು ಕಿವ್ಯಾಗ ಹೇಳದ. ಅವರಪ್ಪಗ ಖುಷಿ ತಡಿಯಾಕ ಆಗಲಿಲ್ಲ. ಜೋರಾಗಿ ‘ನನ್ನ ಮಗ ಸೈಬ ಆದ’ಅಂದುಬಿಟ್ಟ. ಇದು ಅಲ್ಲೇ ಗುಡಿಯೊಳಗ ಕುಂತಿರೋ ದೇವೇಂದ್ರಪ್ಪನ ಕಿವಿಗಿ ಬಿದ್ದದ್ದೇ ಒಡಲೊಳಗ ಬೆಂಕಿ ಬಿದ್ದಂಗಾಯ್ತು. ಆದರ ಅದನ್ನ ಬಯಲ ಮಾಡದೇ ‘ಭೀಮ, ಹೋಗೂ ಮುಂದ ತಾಯಿ ಆಶೀರ್ವಾದ ತಗೊಂಡು ಹೋಗು. ಎಲ್ಲಾ ಚಲೊ ಆಗತೈತಿ’ ಅಂದ. ಭೀಮ ನಗುತ್ತಾ ‘ಆಕಿಗಿಂತಲೂ ದೊಡ್ಡ ತಾಯಿ ಇಲ್ಲೇ ಅದಾಳಲ್ಲ ಪೂಜಾರಪ್ಪ’ ಅಂತ ತನ್ನವ್ವ ಎಲ್ಲವ್ವನ ಪಾದ ಮುಟ್ಟಿ ನಮಸ್ಕಾರ ಮಾಡಿದ್ದ. ದೇವೇಂದ್ರಪ್ಪಗ ಅಲ್ಲಿದ್ದ ಮಂದಿ ಮುಂದ ಮುಖಾ ಉಳಿಲಿಲ್ಲ. ಸಿಟ್ಟಿಂದ ಶಾಲು ಝಾಡಿಸಿ, ಹೆಗಲಿಗೇರಸಿ ಮ್ಯಾಲಿನಕೇರಿ ಕಡಿ ಹೊಂಟ. ಅಂವಾ ಎಲ್ಲಿಗಿ ಹೊಂಟಾನ ಅನ್ನೂದು ಅಲ್ಲಿರೋ ಎಲ್ಲರಿಗೂ ಗೊತ್ತಿತ್ತು.

ಅಂತೂ ಇಂತೂ ದುಗ್ಗಪ್ಪನ ಕಷ್ಟ ಹಿಂಗದಂಗ ಆಗಿತ್ತು. ಮಗ ಭೀಮಪ್ಪ ಪಕ್ಕದ ತಾಲೂಕಿನ ತಹಶೀಲ್ದಾರ ಆಗಿ ನೇಮಕ ಆಗಿದ್ದ. ಗೋಡೂರಿನ ಶಂಕರಗೌಡ ಹೃದಯಾಘಾತದಿಂದ ಸತ್ತು ಆರು ತಿಂಗಳಾಗಿತ್ತು. ಈಗ ಕಾರಬಾರ ಎಲ್ಲಾ ಅವನ ಹಿರಿ ಮಗ ಚಂದ್ರಶೇಖರದು. ಶಂಕರಗೌಡ ಮಗನ ಮಾತ ಕೇಳಿ ದುಗ್ಗಪ್ಪನ ಜಮೀನ ಕಸಗೊಂಡಿದ್ದ. ಅಂವಾ ಕಾಲು ಹಿಡದು ಬೇಡಿಕೊಂಡರೂ ಅದೇ ಜಾಗಾನೇ ಬೇಕು ಅಂದಿದ್ದ. ಅಲ್ಲಿ ತನ್ನ ಮಗ ನೀರ ಬಾಟಲ್ ತುಂಬೋ ಫ್ಯಾಕ್ಟರಿ ಮಾಡ್ತಾನಂತ ಹೇಳಿ ಅಲ್ಲೊಂದು ಶೆಡ್ ಕಟ್ಟಿಸಿ ವ್ಯವಹಾರ ಸುರು ಮಾಡಿದ್ದ. ಮಗ ಚಂದ್ರಶೇಖರ ಅವರಪ್ಪನ ಜೋಡಿ ಜಗಳಾಡಿ ಸಾಲಾ ಮಾಡಿ ಆ ಫ್ಯಾಕ್ಟರಿ ಸುರು ಮಾಡಿದ್ದ.

ಅದನ್ನ ಸುರು ಮಾಡಿ ಮೂರು ತಿಂಗಳಾಗಿರಲಿಲ್ಲ. ಸರ್ಕಾರದಿಂದ ಒಂದು ನೋಟಿಸ್ ಬಂತು. ಅಲ್ಲಿ ಯಾವುದೇ ರೀತಿಯ ಫೀಲ್ಟರ್ ಮಾಡಿ ನೀರ ತುಂಬದೇ ಸುಮ್ಮನೇ ಅದೇ ನೀರನ್ನ ಬಾಟಲ್ ಗೆ ತುಂಬಿ ಕಳಸತಿದ್ದರು. ಅದು ಟಿ.ವಿ.ಯೊಳಗೂ ಬಂತು. ಅದೂ ಅಲ್ದೆ ಅದು ಸರಕಾರಿ ಜಾಗ. ಯಾವುದೇ ಅನುಮತಿ ಸೈತಾ ಪಡೆದಿರಲಿಲ್ಲ. ಹಿಂಗಾಗಿ ಆ ಫ್ಯಾಕ್ಟರಿನ್ನ ಸೀಜ್ ಮಾಡಿ, ಚಂದ್ರಶೇಖರನ್ನ ಅರೆಸ್ಟ್ ಮಾಡದರು. ಅದೇ ಗಜ್ಜೊನೊಳಗ ಗೌಡಗ ಹಾರ್ಟ್ ಅಟ್ಯಾಕ್ ಆಯ್ತು. ಅಟೊತ್ತಿಗಾಗಲೇ ದುಗ್ಗಪ್ಪ ಹಳ್ಳದ ದಂಡಿ ಮ್ಯಾಲಿರೋ ಒಂದು ಚಲೋ ಜಮೀನ ಕೊಂಡಿದ್ದ. ಎರಡು ಎತ್ತು ಇಟಗೊಂಡು ಹೊಸ ಒಕ್ಕಲುತನ ಸುರು ಮಾಡಿದ್ದ. ಗೌಡ ಕೊಟ್ಟ ಎತ್ತು ಈಗಿಲ್ಲ. ದುಗ್ಗಪ್ಪ ಈಗ ಪಕ್ಕಾ ರೈತ. ಅವನ ಮಗ ಆಫೀಸರ್ ಆಗಿಂದ ತನ್ನ ಕೇರಿ ಜನರಿಗಿ ಸರಕಾರದ ನೆರವಿನಿಂದ ಎರಡೆರಡು ಎಕರೆ ಜಮೀನು ಕೊಡಿಸಿದ್ದ. ಅವರೂ ಈಗ ಒಕ್ಕಲುತನ ಮಾಡತಿದ್ದರು. ಮ್ಯಾಲಿನ ಕೇರಿ ಗೌಡರ ಮನಿತನಗಳ ಒಕ್ಕಲುತನ ಮುರದು ಬಿದ್ದು, ಹಾಳು ಸುರೀತಿದ್ದವು.

ಆ ಗೌಡರ ಮಕ್ಕಳು ಆಡೂದು… ಕುಡಿಯೂದು, ರಂಡಬಾಜಿ ಅಂತಾ ನೂರೆಂಟು ಚಟಾ ಮಾಡತಾ ಅಪ್ಪದೇರ ಆಸ್ತಿ ಗೊತ್ತಗಿ ಹಚ್ಚಿದ್ದರು. ಗುಡಿ ಪೂಜಾರಿ ದೇವೆಂದ್ರಪ್ಪ ಇದ್ದಕ್ಕಿದ್ದಂಗ ನಾಪತ್ತೆಯಾಗಿದ್ದ. ಎಲ್ಲಿ ಹೋದ, ಏನಾದ ಅಂತ ಯರಿಗೂ ಗೋತ್ತಿರಲಿಲ್ಲ. ಮಾರಮ್ಮ ಮತ್ತು ಕೇರಿ ಮಂದಿ ನಡುವ ಈಗಲ್ಲಿ ಯಾರೂ ದಲ್ಲಾಳಿಗಳಿರಲಿಲ್ಲ. ಸಂಜೀ ಮುಂದ ಡಂಗುರ ಹೊಡಿಯೋ ಹೂಗಾರ ಸಿದ್ದಪ್ಪ ಗುಡಿ ಮುಂದ ನಿಂತು ಜೋರಾಗಿ ತಾಳ ಬಾರಿಸಿ ‘ಹೇಳಿಲ್ಲಂದೀರಿ, ಕೇಳಿಲ್ಲಂದೀರಿ ಶಂಕರಗೌಡರ ತೆಂಗಿನ ತ್ವಾಟ ನಾಳೆ ಮುಂಜಾನೆ ಹರಾಜೈತಿ. ಹರಾಜಿನೊಳಗ ಭಾಗವಹಿಸವರು ಚಾವಡಿ ಕಟ್ಟಿಗೆ ಬರಬೇಕರಪೋ’ ಅಂತ ಹೇಳಿ ಕೈಯಾಗಿನ ತಾಳ ಚಣ್… ಚಣ್… ಅಂತ ಎರಡು ಸಾರಿ ಭಾರಿಸಿ ಡಂಗುರ ಹೊಡದು ಮುಂದ ಹೋಗಿದ್ದ. ಕೆಳಗಿನ ಕೇರಿ ಮಂದಿಗಿ ಇದನ್ನ ನಂಬಾಕ ಆಗಲಿಲ್ಲ. ಗೌಡನ ಹಿರಿ ಮಗ ಮಾಡಿದ ಸಾಲದ ಹೊಡತಕ್ಕ, ಅದನ್ನ ಕಟ್ಟಲಾರದಕ್ಕ ಬ್ಯಾಂಕಿನವರು ಹರಾಜು ಇಟ್ಟಿದ್ದರು.

ಚವಡಿ ಕಟ್ಟಿಗಿ ಜನರೆಲ್ಲಾ ಬರಾಕ ಸುರು ಮಾಡದರು. ಎಲ್ಲಾರ ಬಾಯಾಗೂ ಒಂದೇ ಮಾತು. ಅದೆಂಥಾ ಮನಿತನ ಹ್ಯಾಂಗ ಐತು ನೋಡ್ರಿ. ಮಕ್ಕಳು ಇದಿ ಹುಟ್ಟದಂಗ ಹುಟ್ಟದರ ಇನ್ನೇನಾಗತೈತಿ.? ಗೌಡನ ಆಸ್ತಿನೆಲ್ಲಾ ಗೊತ್ತಿಗಿ ಹಚ್ಚದರು ಅಂತೆಲ್ಲಾ ಮಾತಾಡತಿದ್ದರು. ಶಂಕರಗೌಡ ಒಬ್ಬನೇ ಅಲ್ಲ, ಅವನ ಅಣ್ಣ ತಮ್ಮದೇರದೂ ಅದೇ ಕತಿ ಇತ್ತು. ಹೆಸರಿಗಿ ಗೌಡಕಿ ಅನ್ನೂವಂಗಾಗಿತ್ತು. ಹರಾಜು ಮಾಡವರು ಬಂದರು. ಐವತ್ತು ಸಾವಿರದಿಂದ ಸುರು ಆದ ಹರಾಜು, ಮೂರು ಲಕ್ಷದ ಮಟ ಬಂದು ನಿಂತತು. ಆಸ್ತಿ ತಮ್ಮೊಳಗೇ ಉಳೀಲಿ ಅಂತ ಗೌಡನ ತಮ್ಮ ಶರಣಗೌಡ ಮೂರು ಲಕ್ಷಕ್ಕ ಕೇಳಿದ್ದ. ಮೂರು ಲಕ್ಷ ಒಂದು ಸಾರಿ… ಮೂರು ಲಕ್ಷ ಎರಡು ಸಾರಿ ಅನ್ನೂದರೊಳಗ ದುಗ್ಗಪ್ಪ ಎದ್ದು ನಿಂತು ‘ಮೂರೂವರೆ ಲಕ್ಷ’ ಅಂದ. ಅಲ್ಲಿದ್ದವರೆಲ್ಲಾ ದುಗ್ಗಪ್ಪನ ಕಡಿ ಹೊಳ್ಳಿ ಗಾಭರಿಯಾಗಿ ನೋಡತಿದ್ದರು. ಅವರವರಲ್ಲೇ ಗುಸು ಗುಸು ಅಂತಿದ್ದರು. ಮೂರೂವರೆ ಒಂದು ಸಾರಿ… ಎರಡು ಸಾರಿ… ಮೂರು ಸಾರಿ ಅಂತ ಹರಾಜು ಮುಗದಿತ್ತು.

ಗೌಡನ ತ್ವಾಟ ಈಗ ದುಗ್ಗಪ್ಪ ನ ಹೆಸರಿಗಿ ಬಂದಿತ್ತು. ತನ್ನ ಕೇರಿ ಜನರನ್ನ ಕರಕೊಂಡು ಇಡೀ ತೋಟದ ತುಂಬಾ ದಾಳಿಂಬರ ಹಚ್ಚದ. ಸುತ್ತ ಮುತ್ತ ಎಲ್ಲೂ ಇರಲಿಲ್ಲ ಆ ಪರಿ ಬೆಳಿ ಬಂತು. ಹಗಲು ರಾತ್ರಿ ಕಷ್ಟ ಪಟ್ಟು ದುಗ್ಗಪ್ಪ ಮತ್ತ ಅವನ ಕೇರಿ ಜನ ಕೂಡಿ ಬಂಗಾರದಂತ ಬೆಳಿ ಬೆಳದರು. ಗೋಡೂರಿನ ದಾಳಿಂಬರ ಈಗ ಹೊರಗೂ ಹೋಗಾಕತ್ತತು. ಗೌಡನ ಮಗ ಚಂದ್ರಶೇಖರ ಜಾಮೀನು ಮ್ಯಾಲ ಹೊರಗ ಬಂದ. ಅಂವಗ ತೋಟ ಹರಾಜಾಗಿದ್ದು ಗೊತ್ತಿತ್ತು. ಅಂವಾ ಹೊರಗ ಬರಾಕೂ ದುಗ್ಗಪ್ಪನೇ ಕಾರಣ ಆಗಿದ್ದ. ಚಂದ್ರಶೇಖರಗೆ ಈಗ ಊರಲ್ಲಿ ಮುಖಾ ಉಳದಿರಲಿಲ್ಲ. ಮಾಡಾಕ ಏನೂ ಕೆಲಸಾನೂ ಇರಲಿಲ್ಲ. ಇನ್ನೊಂದು ಎರಡೆಕರೆ ಎರಿ ಜಮೀನಿತ್ತು. ಅದು ಮಳಿ ಬಂದ್ರ ಮಾತ್ರ ಬೆಳಿಯೂದು ಇಲ್ಲಾಂದ್ರ ಬೀಳು ಬೀಳತಿತ್ತು. ಸಾಲಕ್ಕ ಚಲೊ ತ್ವಾಟಾನೇ ಹೋಯ್ತು. ಜೈಲಿಗಿ ಹೋಗಿ ಬಂದ ಮ್ಯಾಲ ಊರಾಗ ಯಾರೂ ಸೇರೂದಿಲ್ಲ. ಮುಖಾನೂ ಉಳದಿಲ್ಲ ಅಂತೆಲ್ಲಾ ಯೋಚನೆ ಮಾಡಿ ಬೇವಿನಗಿಡದ ಟೊಂಗೆ ಮ್ಯಾಲ ಹಗ್ಗಾ ಒಗದು, ಅದರ ಉರುಳಿಗೆ ಕುತಗಿ ಕೊಡುವದರೊಳಗ ದುಗ್ಗಪ್ಪ, ಬಾಬು, ಬರಮಪ್ಪ ಓಡಿ ಬಂದರು ದುಗ್ಗಪ್ಪ ‘ ಹುಚ್ಚಪ್ಪ ಹಳಾ ಹುಚ್ಚಪ್ಪ… ನಾವು ಆಡಿಸಿದ್ದ ಕೂಸು ನೀನು… ಸಾಯಾಕ ಬಿಡ್ತಿವಾ…? ಜೀವ ಬಾಳ ದೊಡ್ಡದು ನೀ ಹಿಂಗ ಮಾಡ್ಕೊಂತಿ ಅಂತ ಗೊತ್ತಾಗೇ ನಾವು ಓಡಿ ಬಂದದ್ದು.

ಊರೊಳಗ ಇನ್ನೂ ಚಲೊ ಮಂದಿ ಅದಾರ ಎಲ್ಲಾ ಮುಗೀಲಿಲ್ಲ. ಬಾ ನನ್ನ ಜೋಡಿ’ ಅಂತ ಸೀದಾ ಅವನ್ನ ತೋಟಕ್ಕ ಕರಕೊಂಡು ಹೋದ. ದಾಳಿಂಬರ ಬೆಳಿ ತೋರಸದ. ಚಂದ್ರಶೇಖರಗ ಬಾಳ ಖುಷಿ ಆಯ್ತು. ಈ ಮಟ್ಟಕ್ಕ ಬೆಳಿಸಿದ್ದು ನೋಡಿ ಗಾಬರಿಯಾದ. ದುಗ್ಗಪ್ಪ ಅವನಿಗಿ ತೋಟ ತೋರಿಸಿ ‘ನೋಡು ಚಂದ್ರು ನಾವು ಒಂದು ಕೋ ಆಪರೇಟಿವ್ ಸೊಸೈಟಿ ಮಾಡೀವಿ. ಇಲ್ಲಿ ದುಡಿಯೋ ಎಲ್ಲರೂ ಅದರೊಳಗ ಪಾಲುದಾರರು. ನೀ ಹುಂ ಅಂದ್ರ ನಿನಗೂ ಅದರೊಳಗ ಪಾಲ ಐತಿ’ ಅಂದ. ಬಹಳ ಹೊತ್ತು ಯೋಚನೆ ಮಾಡಿದ… ಕುಂತ… ನಿಂತ… ಆ ಬದಿ ಹೋದ … ಈ ಬದಿ ಹೋದ… ಬಂದ… ಅವನ ಚಿಕ್ಕಪ್ಪನ ಮಗ ನಾಗರಾಜ ಅಲ್ಲೇ ಕೆಲಸ ಮಾಡತಿದ್ದ.

ಮನಸಿನೊಳಗ ಅದೇನು ಕೆಲ್ಸಾ ಕೊಡ್ತಾನೋ ಏನೋ… ಅಂತ ಯೋಚನೆ ಮಾಡುವದರೊಳಗ ನಾಗರಾಜ ಅವನ ಬಳಿ ಬಂದು ‘ ಅಣ್ಣಾ ನೀನು ಇವತ್ತಿನಿಂದ ಈ ಫಾರ್ಮ್ ಮ್ಯಾನೇಜರ್’ ಅಂದದ್ದೇ ಅವನು ಹೊರಳಿ ದುಗ್ಗಪ್ಪನ ಕಡೆ ನೋಡಿದ್ದ. ‘ಹೌದು ಅಂವಾ ಹೇಳೂದು ಖರೆ. ಚಂದ್ರು, ಇನ್ನು ಮುಂದ ನೀನು ಈ ‘ಸಮತಾ ಫಾರ್ಮ್’ ನ ಹೊಸ ಮ್ಯಾನೇಜರ್, ಈ ಜಮೀನು ಈಗಲೂ ನಿಂದೇ ಅಂತ ತಿಳ್ಕೊಂಡು ಕೆಲಸ ಮಾಡು. ನಾವೆಲ್ಲಾ ನಿನ್ನ ಫಾರ್ಮಲ್ಲಿ ದುಡೆವರು ಅಂದ್ಕೊ’ ಅಂದಾಗ ಚಂದ್ರಶೇಖರನ ಕಣ್ಣೀರು ಟಪ್… ಟಪ್ ಅಂತ ಉದುರಿದವು. ಅಲ್ಲಿದ್ದವರೆಲ್ಲಾ ಬಾಕ್ಸ್ ತುಂಬೋದು, ಗಾಡಿಗೆ ಹೇರೋದು, ಹಣ್ಣು ಎಣಿಸೋದು, ಒಳ್ಳೆಯದು ಮತ್ತು ಸಾಧಾರಣ ಗುಣಮಟ್ಟದ್ದನ್ನು ಬೇರ್ಪಡಿಸೋದು ಮಾಡತಿದ್ದರು. ಈಗ ಆ ಫರ್ಮಲ್ಲಿ ಕೇಳಗಿನ ಕೇರಿ, ಮೇಲಿನ ಕೇರಿ ಮುಖಗಳೆಲ್ಲಾ ಮಿಕ್ಸ್ ಆಗಿದ್ವು. ದುಗ್ಗಪ್ಪನ ಕನಸಿನ ‘ಸಮತಾ ಫರ್ಮ್’ ಇಡೀ ದೇಶಕ್ಕೇ ಒಂದು ಮಾದರಿಯಾಗಿತ್ತು.

‍ಲೇಖಕರು Admin

September 2, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆರನೇ ಬೆರಳು

ಆರನೇ ಬೆರಳು

ಬಸವಣ್ಣೆಪ್ಪ ಕಂಬಾರ ಸುಂಕದ ಕಟ್ಟೇಲಿ ಚಿನ್ನವ್ವ ತುಂಬ ಅದೃಷ್ಟದ ಹೆಂಗಸು ಎಂದು ಮನೆಮಾತಾಗಿದ್ದಳು. ಮನೆ ಗುದ್ದಲಿ ಪೂಜೆ, ಬಾಣಂತನಕ್ಕೆ, ಮಗಳನ್ನು...

ಹಬ್ಬಿದಾ ಬಲೆ ಮಧ್ಯದೊಳಗೆ…

ಹಬ್ಬಿದಾ ಬಲೆ ಮಧ್ಯದೊಳಗೆ…

ರಾಜು ಎಂ ಎಸ್ ಸಾಲಿಗುಡಿ ಬಿಟ್ ಕೂಡ್ಲೇ ನಿಂಗಿ, ಗುಡ್ಲು ಕಡಿಕ್ ಹೊಂಟವ್ಳು... ತಾರ್ಸಿ ಮನೆ ಗುರ್ಲಿಂಗಪ್ಪನ್  ಮಗ್ಳು ಪರಿಮಳ ತನ್...

ಮಳೆ, ಸಾಲ ಮತ್ತು ವಿನೋದ…

ಮಳೆ, ಸಾಲ ಮತ್ತು ವಿನೋದ…

ಬೇಲೂರು ರಾಮಮೂರ್ತಿ ಸೋಮು ಹೆಚ್ಚು ಸಾಲ ಮಾಡಿದವನಲ್ಲ. ಏನೋ ಆಗಾಗ ಸ್ನೇಹಿತರ ಬಳಿ ಕೈ ಸಾಲ ಅಂತ ಮಾಡ್ತಿದ್ದ. ಅದನ್ನು ಸಂಬಳ ಬಂದಾಗ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This