ಹೊಳೆ ಬಾಗಿಲ ಹುಡುಗನಿಗೆ ಪ್ರಶಸ್ತಿ

ಸುಶ್ರುತ ದೊಡ್ಡೇರಿ ಅವರ ಲಲಿತ ಪ್ರಬಂಧ ಗಳ ಸಂಕಲನ ‘ಹೊಳೆಬಾಗಿಲು’ ಕನ್ನಡ ಸಾಹಿತ್ಯ ಪರಿಷತ್ ಪುಸ್ತಕ ಬಹುಮಾನವನ್ನು ಗೆದ್ದುಕೊಂಡಿದೆ. ಅರಳು ಪ್ರತಿಭೆಗಳಿಗೆ ನೀಡಲಾಗುವ ಪ್ರಶಸ್ತಿ ಇದು. ಈ ಸಂದರ್ಭದಲ್ಲಿ ನಿಮ್ಮ ಮರು ಓದಿಗಾಗಿ ‘ಹೊಳೆ ಬಾಗಿಲು’ ಲಲಿತ ಪ್ರಬಂಧವನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಹೊಳೆ ಬಾಗಿಲು

ಬಾಗಿಲೆಂದರೆ ಬಾಗಿಲೇ ಆಗಿರಬೇಕೆಂದಿಲ್ಲ. ಅದು ಮರ ಅಥವಾ ಕಬ್ಬಿಣ ಅಥವಾ ತಗಡು ಅಥವಾ ಫೈಬರ್ ಅಥವಾ ಗಾಜಿನಿಂದಲೇ ತಯಾರಾಗಿರಬೇಕೆಂದಿಲ್ಲ. ಅದಕ್ಕೆ ಅಗುಳಿ, ಚಿಲಕ, ಹಿಡಿಕೆ, ಬೀಗ ಇತ್ಯಾದಿಗಳು ಇರಲೇಬೇಕೆಂದಿಲ್ಲ. ಅದನ್ನು ತೆರೆಯಲು – ಮುಚ್ಚಲು ಬರಲೇ ಬೇಕೆಂದಿಲ್ಲ. ಬಾಗಿಲೆಂದರೆ ದ್ವಾರ. ಬಾಗಿಲೆಂದರೆ ಪ್ರವೇಶಸ್ಥಾನ; ಅಷ್ಟೆ. ಉದಾಹರಣೆಗೆ: ಹೊಳೆಬಾಗಿಲು. ಮೊನ್ನೆ ಊರಿಗೆ ಹೋಗಿದ್ದಾಗ ಅತ್ತೆ ಮನೆಗೆ ಹೋಗಿದ್ದೆ. ಅತ್ತೆ ಎಂದರೆ ಅಪ್ಪನ ತಂಗಿ. ಅತ್ತೆ ಮನೆಗೆ ಹೋಗದೆ ಸುಮಾರು ಮೂರು ವರ್ಷಕ್ಕೆ ಬಂದಿತ್ತು. ಅವರಂತೂ ತುಂಬಾ ಬೇಸರ ಮಾಡಿಕೊಂಡಿದ್ದರು. ‘ಒಂದ್ಸಲ ಬಂದುಹೋಗೋ, ದಾರಿ ಮರ್ತುಹೋಗ್ತು ಕೊನಿಗೇ..’ ಅಂತ ಅಜ್ಜ ಹೆದರಿಸಿದ್ದ ಕೂಡ. ಹಾಗಾಗಿ ಈ ಸಲದ ಷೆಡ್ಯೂಲಿನಲ್ಲಿ ತಪ್ಪದೇ ಅತ್ತೆಯ ಮನೆಯ ಪ್ರವಾಸವನ್ನು ಸೇರಿಸಿದ್ದೆ. ಅತ್ತೆಯ ಮನೆ ಇರುವುದು ತುಮರಿ-ಸುಳ್ಳಳ್ಳಿಯ ಹತ್ತಿರ. ಸಾಗರದಿಂದ ಸುಮಾರು ಎಂಭತ್ತು ಕಿಲೋಮೀಟರ್ ಆಗುತ್ತದೆ. ಸಾಗರದಿಂದ ಹೊರಟರೆ ಅಲ್ಲಿಗೆ ಮುಟ್ಟಲಿಕ್ಕೆ ಐದು ಗಂಟೆ ತೆಗೆದುಕೊಳ್ಳುತ್ತದೆ ಬಸ್ಸು. ದಿನಕ್ಕೆ ಕೇವಲ ಎರಡೇ ಬಸ್ಸು ಇರುವುದು. ಅತ್ತೆ ಮನೆಗೆ ಹೋಗಬೇಕಾದರೆ ಹೊಳೆ ದಾಟಿ ಹೋಗಬೇಕು. ಹೊಳೆಯೆಂದರೆ ಶರಾವತಿ ನದಿಯ ಹಿನ್ನೀರು. ಸಾಗರದಿಂದ ಹೊರಟ ಬಸ್ಸು ಒಂದು ಗಂಟೆ ಸಮಯದಲ್ಲಿ ಹೊಳೆಬಾಗಿಲಿಗೆ ಬರುತ್ತದೆ. ಹೊಳೆಬಾಗಿಲು. ಬಾಗಿಲೆಂದರೆ ಇಲ್ಲೇನು ಹೊಳೆಯ ಸುತ್ತ ಗೋಡೆ ಕಟ್ಟಿ ಕದವನ್ನಿಟ್ಟಿಲ್ಲ. ಹಾಗಂತ ಗೋಡೆಗಳಿದ್ದರೆ ಮಾತ್ರ ಬಾಗಿಲು ಇರಬೇಕು ಎಂದೇನಿಲ್ಲವಲ್ಲ? ಹೊಳೆಗೆಂಥಾ ಬಾಗಿಲು? ಇಲ್ಲಿ ಹೊಳೆಗೆ ಹೊಳೆಯೇ ಬಾಗಿಲು. ಅತ್ತೆಯ ಮನೆಗೆ ಹೋಗಬೇಕು ಎಂದರೆ ಹೊಳೆಯನ್ನು ದಾಟಿಯೇ ಹೋಗಬೇಕು. ಎಷ್ಟೇ ವೇಗವಾಗಿ ಬನ್ನಿ ನೀವು, ಇಲ್ಲಿಗೆ ಬಂದಾಕ್ಷಣ ಹೊಳೆ ನಿಮ್ಮನ್ನು ತಡೆದು ನಿಲ್ಲಿಸುತ್ತದೆ. ಅವಸರ ಸಲ್ಲ. ತಾಳ್ಮೆಯೇ ಎಲ್ಲ. ಲಾಂಚು ಇನ್ನೂ ಆಚೆಯ ದಡವನ್ನೇ ಬಿಟ್ಟಿಲ್ಲ. ಅಗೋ, ಹಾಂ, ಅಲ್ಲಿ, ಒಂದು ಬೆಂಕಿಪೊಟ್ಟಣದಂತೆ ಕಾಣಿಸುತ್ತಿದೆಯಲ್ಲ, ಅದೇ ಲಾಂಚು. ಅದು ಅಲ್ಲಿಂದ ಜನ, ವಾಹನಗಳನ್ನೆಲ್ಲಾ ಹತ್ತಿಸಿಕೊಂಡು ನಿಧನಿಧಾನವಾಗಿ ಈಚೆ ದಡಕ್ಕೆ ಬರಬೇಕು. ಅಲ್ಲಿಯವರೆಗೆ ನೀವು ಏನು ಹಾರಾಡಿದರೂ ನಡೆಯುವುದಿಲ್ಲ. ಬೇಕಿದ್ದರೆ ಈ ದಂಡೆಗುಂಟ ಅಡ್ಡಾಡುತ್ತಾ ಕಪ್ಪೆ ಚಿಪ್ಪು, ನುಣ್ಣನೆ ಉರೂಟು ಕಲ್ಲುಗಳನ್ನು ಹೆಕ್ಕಬಹುದು. ಹೆಕ್ಕಿದ ಕಲ್ಲನ್ನು ಹೊಳೆಗೆ ಎಸೆಯಬಹುದು. ಕಲ್ಲು ಬಿದ್ದ ಜಾಗದಲ್ಲಿ ಎದ್ದ ಅಲೆ, ಅಲೆ ಅಲೆಯಾಗಿ ನಿಮ್ಮತ್ತಲೇ ತೇಲಿ ಬರುವುದನ್ನು ನೋಡುತ್ತಾ ಮೈಮರೆಯಬಹುದು. ಹೊಳೆಯಲ್ಲಿ ಸಾಕಷ್ಟು ಮೀನುಗಳಿವೆ. ‘ಗೊಜಮಂಡೆ’ ಎಂದು ಕರೆಯಲಾಗುವ ಕಪ್ಪೆಯ ಪೂರ್ವಜ ಜೀವಿಗಳಿವೆ. ಅವು ಆಗೀಗ ಗುಂಪಾಗಿ ಬಂದು ನೀರಿನ ಮೇಲ್ಗಡೆ ಒಮ್ಮೆ ಕತ್ತು ತೂರಿಸಿ ಮಾಯವಾಗುತ್ತವೆ. ಅತ್ತಿತ್ತ ಒಂದೇ ಸಮನೆ ಈಜಾಡುತ್ತಿರುವ ಮೀನುಗಳಂತೂ ಒಮ್ಮೊಮ್ಮೆ ಪೆದ್ದಣ್ಣಗಳಂತೆ, ಒಮ್ಮೊಮ್ಮೆ ಅತ್ಯಂತ ಕ್ರಿಯಾಶೀಲ ಜೀವಿಗಳಂತೆ, ಒಮ್ಮೊಮ್ಮೆ ಭಯಗ್ರಸ್ತ ಗಂಧರ್ವರಂತೆ ಭಾಸವಾಗುತ್ತವೆ. ನಿಮ್ಮ ಬಳಿ ಏನಾದರೂ ತಿಂಡಿಯಿದ್ದರೆ ಈ ಮೀನುಗಳಿಗೆ ಎಸೆಯಬಹುದು. ನೀವು ಎಸೆದ ತಿಂಡಿ ನೀರಿನೊಳಗೆ ಮುಳುಗುವುದರೊಳಗೆ ಅವು ಗುಂಪಾಗಿ ಬಂದು ಅಷ್ಟನ್ನೂ ಕಬಳಿಸಿಬಿಡುತ್ತವೆ. ಮೀನುಗಳ ಜೊತೆ ಆಟವಾಡುತ್ತಾ ನೀವು ಮತ್ಸ್ಯಲೋಕದಲ್ಲಿ ಒಂದಾಗುತ್ತೀರಿ. ಲಾಂಚು ಈಗ ದಡಕ್ಕೆ ಸನಿಹವಾಗುತ್ತಿದೆ. ಮೊದಲ ಸಲ ಲಾಂಚು ಹತ್ತುವವರ ಸಂಭ್ರಮ, ಕುತೂಹಲಗಳಂತೂ ಹೇಳತೀರದ್ದು. ಅವರು ನೀರಿನ ಸಮೀಪಕ್ಕೆ ಹೋಗಿ ನಿಂತಿದ್ದಾರೆ. ಬಸ್ಸನ್ನೂ ಅದರೊಳಗೆ ಹಾಕುತ್ತಾರಾ? ಅದು ಹೇಗೆ? ಲಾಂಚು ಮಧ್ಯದಲ್ಲಿ ಕೆಟ್ಟುಹೋದರೆ ಗತಿಯೇನು? ಮುಳುಗಿ ಹೋಗುತ್ತಾ? ಅಯ್ಯಯ್ಯೋ! ನಂಗೆ ಈಜು ಬೇರೆ ಬರಲ್ವಲ್ಲಪ್ಪ… ಲಾಂಚಿನ ಡ್ರೈವರ್ ಎಲ್ಲಿ ಕುಳಿತಿರುತ್ತಾನೆ? ಇದೇ ಲಾಂಚನ್ನು ಇದೇ ಇದೇ ರೂಟಿನಲ್ಲಿ ಪ್ರತಿದಿನವೂ ಓಡಿಸಿಕೊಂಡಿರಲಿಕ್ಕೆ ಅವನಿಗೆ ಬೇಸರವಾಗುವುದಿಲ್ಲವಾ? ಪ್ರಶ್ನೆಗಳು ಜೇನ್ನೊಣದಂತೆ ಕಾಡುತ್ತಿರಲು.. ಅಗೋ ಲಾಂಚು ಹತ್ತಿರಾಗುತ್ತಿದೆ.. ದಾರಿ ಬಿಡಿ, ಇಲ್ಲಿಗೇ ಬರುತ್ತದೆ ಲಾಂಚು.. ಲಾಂಚು ಬಂದು ನಿಂತದ್ದೇ ಮೊದಲು ಜನರೆಲ್ಲ ಓಡಿ ಹೋಗಿ ಹತ್ತಿದ್ದಾರೆ. ಆಮೇಲೆ ವಾಹನಗಳೆಲ್ಲ ಒಂದೊಂದೊಂದಾಗಿ ಬರುತ್ತಿವೆ. ಎಲ್ಲಾ ವಾಹನಗಳೂ ಹಿಡಿಸುವುದಿಲ್ಲ. ಒಂದು ಕಾರಿಗೆ ಮಾತ್ರ ಜಾಗ ಸಿಕ್ಕಿಲ್ಲ. ಸಿನಿಮಾಕ್ಕೆ ಟಿಕೇಟು ಸಿಗದಿರುವವನ ಪರಿಸ್ಥಿತಿ ಈ ಕಾರಿನದ್ದು. ಪಾಪ, ಮುಂದಿನ ಟ್ರಿಪ್ಪಿನವರೆಗೂ ಕಾಯಬೇಕು. ಲಾಂಚು ಇನ್ನೇನು ಹೊರಟಿತು ಅನ್ನುವಷ್ಟರಲ್ಲಿ ಒಂದು ಬೈಕು ಹಾರನ್ನು ಮಾಡಿಕೊಂಡು ಬಂದಿದೆ. ಅದನ್ನು ಸಹ ಹತ್ತಿಸಿಕೊಳ್ಳಲಾಗಿದೆ. ಬಂದವನು ಬೈಕಿನಲ್ಲೇ ಬಂದಿದ್ದರೂ ಓಡಿ ಬಂದು ಬಸ್ಸು ಹತ್ತಿದವನಂತೆ ಏದುಸಿರು ಬಿಡುತ್ತಿದ್ದಾನೆ. ಲಾಂಚು ಹೊರಟಿದೆ ಈಗ. ಲಾಂಚಿನ ಸಿಬ್ಭಂದಿಯೊಬ್ಬ ಟಿಕೀಟು ಕೇಳುತ್ತಾ ಬರುತ್ತಿದ್ದಾನೆ. ಲಾಂಚಿನ ಪರಿಚಯವಿದ್ದವರೆಲ್ಲ ಧೀರರಂತೆ ಅಂಚಿಗೆ ಹೋಗಿ ಸರಳಿಗೆ ಒರಗಿ ನಿಂತಿದ್ದಾರೆ. ಮೊದಲ ಬಾರಿ ಲಾಂಚ್ ಪಯಣಕ್ಕೆ ಬಂದವರು ಒಳಗೆ ಹೋಗಿ ಕುಳಿತಿದ್ದಾರೆ. ಅವರಿಗೆ ಲಾಂಚು ಚಲಿಸುತ್ತಿದ್ದರೂ ನಿಂತಿದ್ದಂತೆ ಭಾಸವಾಗುತ್ತಿದೆ. ಅಜ್ಜಿಯೊಂದು ಕೈಮುಗಿದು ಕಣ್ಮುಚ್ಚಿ ಕುಳಿತಿದೆ: ‘ದೇವರೇ, ಸುಖವಾಗಿ ಆಚೆ ದಡ ತಲುಪಿಸಪ್ಪಾ..’ ಲಾಂಚು ಸ್ವಲ್ಪ ದೂರ ಹೋಗುತ್ತಿದ್ದಂತೆ ಒಳಗೆ ಕುಳಿತಿದ್ದ ಗಂಡಸರಿಗೆ ಸ್ವಲ್ಪ ಧೈರ್ಯ ಬಂದು, ಅಲ್ಲೇ ಕುಳಿತಿರಲು ಬೇಸರವಾಗಿ ಅವರು ಹೊರಬಂದಿದ್ದಾರೆ. ಕಂಬಿಗಳನ್ನು ಹಿಡಿದುಕೊಳ್ಳುತ್ತಾ ಓಡಾಡುತ್ತಿದ್ದಾರೆ. ಅರೆ! ಲಾಂಚಿನಲ್ಲಿ ‘ಜಂಪ್ಸ್’ ಆಗುವುದೇ ಇಲ್ಲ! ಈಗ ಅವರು ಕೈ ಬಿಟ್ಟು ನಡೆದಿದ್ದಾರೆ. ಅಪ್ಪನೊಂದಿಗೆ ಹೊರಬಂದ ಹುಡುಗನೊಬ್ಬ ಕೇಳುತ್ತಿದ್ದಾನೆ: “ಅಪ್ಪಾ ಇಷ್ಟು ದೊಡ್ಡ ಲಾಂಚನ್ನು ಇಲ್ಲಿಗೆ ಹೇಗೆ ತಂದರು? ಲಾರಿಯಲ್ಲೂ ಹಿಡಿಯುವುದಿಲ್ಲ…” ಅಪ್ಪನಿಗೂ ಈಗ ಯೋಚನೆಯಾಗಿದೆ: ‘ಅರೆ! ಹೌದಲ್ಲಾ ಇಷ್ಟು ದೊಡ್ಡ ಲಾಂಚನ್ನು….’ ಆದರೂ ಆತ ಎಲ್ಲಾ ತಿಳಿದವನಂತೆ “ಇದನ್ನು ದೂರದ ಸಮುದ್ರದಿಂದ ಡ್ರೈವ್ ಮಾಡಿಕೊಂಡು ಬಂದದ್ದು. ಈ ಹೊಳೆ ಹೋಗಿ ಸಮುದ್ರಕ್ಕೆ ಸೇರುತ್ತಲ್ಲ, ಅಲ್ಲಿಂದ ಬಂದದ್ದು ಇದು..” ಎಂದು ಏನೋ ಒಂದು ಸಮಜಾಯಿಷಿ ಕೊಟ್ಟಿದ್ದಾನೆ. ಆದರೂ ಅವನನ್ನು ಆ ಪ್ರಶ್ನೆ ಕಾಡುತ್ತಲೇ ಇದೆ: ಹ್ಯಾಗೆ ತಂದರು ಇದನ್ನು…? ಯಾರನ್ನಾದರೂ ಕೇಳೋಣವೆಂದರೆ, ಮುಜುಗರವಾಗಿ ಸುಮ್ಮನಾಗಿದ್ದಾನೆ. ಪ್ರಶಾಂತ ಸಾಗರದಂತಹ ಹೊಳೆಯಲ್ಲಿ ನಿಧಾನವಾಗಿ ಸಾಗುತ್ತಿದೆ ಲಾಂಚು. ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾ ಅಲೆಗಳ ಮೇಲೆ ತೇಲುತ್ತಾ ಸಾಗುತ್ತಿರಲು ಅಯಾಚಿತವಾಗಿ ನಿಮ್ಮ ನೆನಪಿನ ಕೋಶದಿಂದ ಹೊರಬರುತ್ತದೆ ಆ ಹಾಡು: ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ಬೀಸು ಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ || ಹೊಳೆಬಾಗಿಲಿನಲ್ಲಿ ನಿಮ್ಮ ಮನದ ಬಾಗಿಲು ತೆರೆದುಕೊಳ್ಳುತ್ತದೆ. ಈ ಹೊಳೆಯ ಆಚೆ ದಡದಲ್ಲಿ ಒಂದು ಹೋಟೆಲ್ಲಿದೆ. ‘ಹೋಟೆಲ್ ಶರಾವತಿ’ ಅಂತ. ಸಾಗರಕ್ಕೆ ಹೋಗುವಾಗ-ಬರುವಾಗ ಪ್ರತಿ ಬಸ್ಸೂ ಇಲ್ಲಿ ಹತ್ತು ನಿಮಿಷ ನಿಲ್ಲುತ್ತದೆ. ಉಪ್ಪಿಟ್ಟು, ಚಿತ್ರಾನ್ನ, ಮೊಸರನ್ನ, ಭಜ್ಜಿ, ಬಿಸ್ಸಿಬಿಸಿ ಕಾಫಿ-ಟೀ-ಕಷಾಯ… ಎಲ್ಲಾ ಸಿಗುತ್ತದೆ. ಸುಮಾರು ಹದಿನೈದು ವರ್ಷಗಳಿಂದಲೂ ಇದೆ ಈ ಹೋಟೆಲ್ಲು. ಇದರ ಮಾಲೀಕರ ನಿಜವಾದ ಹೆಸರೇನೆಂಬುದು ಯಾರಿಗೂ ನೆನಪಿಲ್ಲ. ಎಲ್ಲರೂ ಅವರನ್ನು ‘ಹೊಳೆ ಭಟ್ರು’ ಅಂತಲೇ ಕರೆಯುವುದು. ಈ ಹೊಳೆಭಟ್ರು ಸುಮಾರು ಅರವತ್ತರ ಪ್ರಾಯದ ಬಲು ಗಟ್ಟಿ ಮನುಷ್ಯ. ಹತ್ತಿರದ ಯಾವುದೇ ಊರಿನಲ್ಲಿ ಕಾರ್ಯವಿದ್ದರೂ ಇವರಿಗೆ ಕರೆ ಬರುತ್ತದೆ. ಭಟ್ರು ತಪ್ಪದೇ ಹೋಗುತ್ತಾರೆ. ಊಟದ ನಂತರದ ಇಸ್ಪೀಟು ಕಂಬಳದಲ್ಲಿ ಹೊಳೆಭಟ್ರು ಇರಲೇಬೇಕು. ಯಾರ ಮನೆಯಲ್ಲಾದರೂ ತಿಥಿಯಿದ್ದರೆ ಇವರನ್ನು ವೈದಿಕರನ್ನಾಗಿ ಕರೆಯುತ್ತಾರೆ. ಹೆಚ್ಚಿಗೆ ಮಾತಾಡದ, ಮಿತಭಾಷಿ ಎಂದೇ ಜನಜನಿತರಾಗಿರುವ ಹೊಳೆಭಟ್ರು ಹಾಗಾಗುವುದಕ್ಕೆ ಕಾರಣ ಅವರ ಬಾಯಲ್ಲಿ ಸದಾ ಇರುವ ಕವಳವೇ ಹೌದಾ ಎಂಬುದು ಕೆಲವರ ಅನುಮಾನ. ದಡ ಈಗ ಸಮೀಪಿಸುತ್ತಿದೆ. ಹೊಳೆಯ ಅಂಚು ದಡದ ಅಂಚಿಗೆ ಸೇರಿದ ಜಾಗ ಅಗೋ ಕಾಣುತ್ತಿದೆ. ಪಯಣ ಮುಗಿದಿದೆ. ಲಾಂಚು ತನ್ನ ಬಾಹುಗಳನ್ನು ದಡದತ್ತ ಹೊರಳಿಸುತ್ತಿದೆ. ದಡದಲ್ಲಿ ಲಾಂಚಿಗಾಗಿ ಕಾಯುತ್ತಾ ನಿಂತಿರುವ ಜೀವಿಗಳ ಮೊಗದಲ್ಲಿ ಹೊಮ್ಮಿದ ಮುಗುಳ್ನಗೆ ಇಲ್ಲಿಂದಲೇ ಕಾಣುತ್ತಿದೆ. ಬೈಕು, ಕಾರುಗಳು ಸ್ಟಾರ್ಟ್ ಆಗುತ್ತಿವೆ. ಲಾಂಚು ನಿಂತಿದ್ದೇ ಎಲ್ಲಾ ಆಚೆ ದಡಕ್ಕೆ ಜಿಗಿದಿದ್ದಾರೆ. ಬಸ್ಸು, ಕಾರು, ಬೈಕುಗಳು ಬುರಬುರನೆ ದಡ ಸೇರಿವೆ. ಎಲ್ಲರೂ ಹೋಟೆಲ್ಲಿಗೆ ನುಗ್ಗಿದ್ದಾರೆ. ‘ಮಾಣಿ, ಇವತ್ತು ಏನು ವಿಶೇಷ ಮಾಡಿದ್ರಾ?’ ಕೇಳುತ್ತಿದ್ದಾರೆ ಭಟ್ಟರ ಮಗನ ಬಳಿ. ತಿಂಡಿ ತಿಂದು ಕಾಫಿ ಕುಡಿದು ಎಲ್ಲರೂ ಮತ್ತೆ ಬಸ್ಸು ಹತ್ತಿದ್ದಾರೆ. ಕಂಡಕ್ಟರ್ ಬಳಿ ‘ಉಚ್ಚೆ ಹೊಯ್ದು ಬರ್ತೀನಿ’ ಎಂದು ಹೇಳಿ ಹೋದ ಕಳಸವಳ್ಳಿ ಮಾಬ್ಲಣ್ಣ ಇನ್ನೂ ಬಂದಿಲ್ಲ. ಅಗೋ ಪಂಚೆ ಸುತ್ತಿಕೊಳ್ಳುತ್ತಾ ಓಡಿ ಬರುತ್ತಿದ್ದಾರೆ ಮಾಬ್ಲಣ್ಣ.. ಬಸ್ಸು ಹೊರಟಿದೆ.. ಹೊಳೆ ದಾಟಿದ ಖುಷಿಯಲ್ಲಿ ಓಡತೊಡಗಿದೆ ನಾಗಾಲೋಟದಲ್ಲಿ]]>

‍ಲೇಖಕರು avadhi

October 21, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

29 ಪ್ರತಿಕ್ರಿಯೆಗಳು

 1. ವಸುಧೇಂದ್ರ

  ಸುಶ್ರುತ,
  ಅಭಿನಂದನೆಗಳು. ಈ ಪ್ರಶಸ್ತಿ ನಿನ್ನ ಬರವಣಿಗೆಯನ್ನು ಮತ್ತುಷ್ಟು ’ಹೊಳೆ’ಯಿಸಲಿ!
  ವಸುಧೇಂದ್ರ

  ಪ್ರತಿಕ್ರಿಯೆ
 2. azad

  ಸುಶೃತ್..ನಮಗೆಲ್ಲಾ ಹೆಮ್ಮೆಯ ವಿಷಯ ನಿಮ್ಮ ಬರವಣಿಗೆಯ ಕಂಪು ಇನ್ನೂ ಹೆಚ್ಚಲಿ ಹತ್ತಾರು ಪ್ರಶಸ್ತಿ ಪುರಸ್ಕಾರ ನಿಮ್ಮ ಲೇಖನಗಳನ್ನು ಹಿಂಬಾಲಿಸಲಿ…

  ಪ್ರತಿಕ್ರಿಯೆ
 3. ಶ್ರೀವತ್ಸ ಜೋಶಿ

  ಸುಶ್ರುತ ಮಹಾರಾಜರಿಗೆ ಹಾರ್ದಿಕ ಅಭಿನಂದನೆಗಳು!
  ಹೊಳೆಬಾಗಿಲು ತೆರೆದು ಇನ್ನಷ್ಟು ಪ್ರಶಸ್ತಿ-ಪುರಸ್ಕಾರ-ಪ್ರೋತ್ಸಾಹಗಳ ಮಹಾಪೂರ ಹರಿದುಬರಲಿ, ಅದಕ್ಕೆ ತಕ್ಕಂತೆ ಪ್ರತಿಭೆಯಲ್ಲದ್ದಿದ ಬರಹಪ್ರಭೆಯೂ ‘ಹೊಳೆ’ಯಲಿ!

  ಪ್ರತಿಕ್ರಿಯೆ
 4. kavya

  ಪುಸ್ತಕ ಚೊಲೊ ಇದ್ದು.ಮತ್ತೊಮ್ಮೆ ಅಭಿನಂದನೆಗಳು….
  ನಿನ್ನ ಬರವಣಿಗೆ ಹೀಗೇ ಸಾಗಲಿ,ಪ್ರಶಸ್ತಿಗಳು ಅರಸಿ ಬರಲಿ…………

  ಪ್ರತಿಕ್ರಿಯೆ
 5. sritri

  ತುಂಬಾ ಖುಷಿ ಆಯ್ತು, ಸುಶ್ರುತ. ಅಭಿನಂದನೆಗಳು.

  ಪ್ರತಿಕ್ರಿಯೆ
 6. Sushrutha

  ಥ್ಯಾಂಕ್ಸ್ ಅವಧಿ.. ಎಲ್ಲರಿಗೂ ತುಂಬಾ ತುಂಬಾ ಥ್ಯಾಂಕ್ಸ್..

  ಪ್ರತಿಕ್ರಿಯೆ
 7. Manjunatha HT

  ಸುಶ್ರುತ ದೊಡ್ಡೇರಿಯವರ “ಹೊಳೆಬಾಗಿಲು” ಲೇಖನ ಓದಿದ ನ೦ತರ ನನಗನ್ನಿಸಿದ್ದು, ಆ ಪ್ರಶಸ್ತಿಯ ಗೌರವವೇ ಇದರಿ೦ದ ಹೆಚ್ಚಾಗಿದೆ!

  ಪ್ರತಿಕ್ರಿಯೆ
 8. shashi

  a must see place , preferably at the end of may….. when our mansson is about to start. Narration is so beautiful it reminded our degree day visits to holebaglu from sundara sagara.

  ಪ್ರತಿಕ್ರಿಯೆ
 9. ಸಿರಿರಮಣ

  ಅಭಿನಂದನೆಗಳು ಸುಶ್ರುತ
  ಇನ್ನೂ ದೊಡ್ಡ ದೊಡ್ಡ ಏರಿ
  ಬುಶ್ರುತ ವಿಶ್ರುತನಾಗು
  ಶಿವಾಶಯಗಳು
  – ಶ್ರೀಕಾಂತಣ್ಣ

  ಪ್ರತಿಕ್ರಿಯೆ
 10. ವೇಣು

  ಹೊಳೆಬಾಗಿಲು ತೆರೆದಿದೆ, ಇನ್ನು ಸಾಲು ಸಾಲು ಪುಸ್ತಕಗಳು, ಅಷ್ಟೇ ಬಹುಮಾನಗಳು ಪ್ರವಹಿಸಲಿ

  ಪ್ರತಿಕ್ರಿಯೆ
 11. anupama prasad

  abhinandanegalu. varshagala hinde lanchalli prayanisida nenapu hasiyaytu sushruta.

  ಪ್ರತಿಕ್ರಿಯೆ
 12. ananthmudagandur

  ನಿಮ್ಮ ಲಲಿತ ಪ್ರಬಂಧಕ್ಕೆ ಕನ್ನಡ ಸಾಹಿತ್ಯ ಪರಿಷತ್ತ ನೀಡಿರುವ ಪ್ರಶಸ್ತಿಗೆ ಅಭಿನಂದನೆಗಳು.
  ಅನಂತಮುದಗಂದೂರು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: