ಹೊಸ ನೋಟಗಳಿಗಾಗಿ ಆಸೆಪಡೋಣ…

 hudugi1.jpg

ಅವಧಿಯಲ್ಲಿ ಕೊಟ್ಟಿದ್ದ ಬಿ ಎಸ್ ವೆಂಕಟಲಕ್ಷ್ಮಿ ಅವರ “ಗಂಡಿನ ಸಾಮಿಪ್ಯಕ್ಕಾಗಿ ತೆರೆಮರೆಯಲ್ಲಿನ ಬಯಕೆ” ಎಂಬ ಲೇಖನಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ. ಆದರೆ ಆ ಪ್ರತಿಕ್ರಿಯೆಗಳ ಸ್ವರೂಪವನ್ನು ಗಮನಿಸಿದ ಬಳಿಕ ಇದೊಂದು ಟಿಪ್ಪಣಿ ಬರೆಯಬೇಕೆನ್ನಿಸುತ್ತಿದೆ.

ಮೊದಲನೆಯದಾಗಿ ವೆಂಕಟಲಕ್ಷ್ಮಿಯವರು ಆ ಲೇಖನ ಬರೆದದ್ದು ಸುಮಾರು ಹದಿನೈದು ವರ್ಷಗಳ ಕೆಳಗೆ. ಒಬ್ಬ ಜವಾಬ್ದಾರಿಯುತ ಲೇಖಕಿಯಾಗಿರುವ ಅವರು ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಹೇಗೆಲ್ಲಾ ಹೆಣ್ಣಿನ ಸ್ವಾತಂತ್ರ್ಯವನ್ನು ಕಸಿಯುವ ನಯವಾದ ಹುನ್ನಾರಗಳು ನಡೆಯುತ್ತವೆ ಎಂಬುದನ್ನು ಬಲ್ಲವರು. ಯಾವ್ಯಾವ ಹಂತದಲ್ಲಿ ಗಂಡು ಒಟ್ಟಾರೆ ವ್ಯವಸ್ಥೆಯ ಲಾಭಕ್ಕೆ ಬಾಧ್ಯಸ್ಥನಾಗಿಬಿಡುತ್ತಾನೆ ಎಂಬುದನ್ನು ಒಬ್ಬ ಸರಳ ಮನಸ್ಸಿನ, ಥಿಯರಿಗಳೆಲ್ಲ ಗೊತ್ತಿಲ್ಲದ ಹೆಣ್ಣುಮಗಳೊಬ್ಬಳ ದೃಷ್ಟಿಯಿಂದ ಹೇಳಬಲ್ಲವರು. ಅವರ “ಬದುಕು ಬವಣೆ ಭರವಸೆ” ಕೃತಿಯಲ್ಲಿ ಇಂಥ ವಿಶ್ಲೇಷಣೆಗಳನ್ನು ಕಾಣಬಹುದು. “ಗಂಡಿನ ಸಾಮಿಪ್ಯಕ್ಕಾಗಿ ತೆರೆಮರೆಯಲ್ಲಿನ ಬಯಕೆ” ಲೇಖನ ಕೂಡ ಅಲ್ಲಿಂದ ಆಯ್ದುಕೊಂಡದ್ದು. ಕಾಲ ಬದಲಾಗಿದೆ ಎಂದುಕೊಳ್ಳುವಾಗಲೂ ಆ ಲೇಖನದಲ್ಲಿ ಅವರು ವಿವರಿಸಿರುವ ಸಂಗತಿಗಳೆಲ್ಲ ಈಗ ಇಲ್ಲವಾಗಿವೆ ಎಂದೇನೂ ಅಲ್ಲ. ಅದಕ್ಕೆಂದೇ ಅಂಥದೊಂದು ನೋಟವನ್ನೂ ಮುಂದಿಡೋಣ ಎಂದು ಆ ಬರಹವನ್ನು ಕೊಟ್ಟೆವು.

ಬಹುಶಃ ಈ ಬರಹದ ಧಾಟಿ ಹೊಸ ಕಾಲದವರಿಗೆ ಅಷ್ಟೊಂದು ಇಷ್ಟವಾದಂತಿಲ್ಲ. ಬಂದಿರುವ ಪ್ರತಿಕ್ರಿಯೆಗಳು ಅದನ್ನು ಹೇಳುತ್ತಿವೆ. ಆದರೆ ಹೆಣ್ಣಿನ ಸ್ವಾತಂತ್ರ್ಯ ಹರಣ ಯತ್ನಗಳ ಬಗ್ಗೆ ಎಚ್ಚರದ ಮಾತುಗಳನ್ನು ಆಡುವ, ಸಾಂಸ್ಕೃತಿಕ ಜವಾಬ್ದಾರಿಯಿಂದಲೇ ನಮ್ಮ ಕಾಲದ ವಾಸ್ತವವನ್ನು ವಿವರಿಸುವ ಲೇಖಕಿಯೊಬ್ಬಳ ಆಲೋಚನೆಗಳನ್ನು ಕುರಿತು ಪ್ರತಿಕ್ರಿಯಿಸುವಾಗ ಅದರ ಹಿಂದಿನ ಸೂಕ್ಷ್ಮಗಳನ್ನು ಕಂಡುಕೊಳ್ಳುವ ಯತ್ನವೂ ಅಗತ್ಯವಿದೆ. ನಮ್ಮ ಪುರುಷರ ಲೋಕಕ್ಕೆ ತಸ್ಲಿಮಾ ಬರೆಯಬಾರದು, ಬಾನು ಮುಷ್ತಾಕ್ ಬರೆಯಬಾರದು. ಇಂಥ ಸ್ಥಿತಿಯಲ್ಲಿ ಹೆಣ್ಣುಮಕ್ಕಳು ಯಾರ ಹಿತಾಸಕ್ತಿಗೋಸ್ಕರ ಮತ್ತೊಬ್ಬ ಬರಹಗಾರ್ತಿಯ ಆಲೋಚನೆಗಳನ್ನು ಉಪೇಕ್ಷೆಯಿಂದ ನೋಡಹೊರಡುತ್ತಾರೆ? ಒಂದು ಬರಹವನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ಅದಕ್ಕೆ ಅವರದೇ ಆದ ವಿವಿಧ ಕಾರಣಗಳಿರಲು ಸಾಕು. ಅದು ಸರಿ. ಆದರೆ ತಮಗೆ ಒಪ್ಪಿಕೊಳ್ಳಲು ಆಗದ ಬರಹವನ್ನು ಸಾರಾಸಗಟಾಗಿ ತಿರಸ್ಕರಿಸುವ ಹಕ್ಕು ಯಾರಿಗೂ ಇಲ್ಲ. ಅಷ್ಟಕ್ಕೂ ವೆಂಕಟಲಕ್ಷ್ಮಿಯವರು ವಿವರಿಸಿದ ಸ್ಥಿತಿ ಇವತ್ತಿಗೂ ಎಷ್ಟೋ ಕಡೆ ಜೀವಂತವಾಗಿಯೇ ಇದೆ. ಅದನ್ನು ಒಪ್ಪಿಕೊಳ್ಳಲು ಇಷ್ಟವಿಲ್ಲದಿದ್ದರೆ ಲೇಖನವೇ ಇಷ್ಟವಾಗದೆ ಇರಬೇಕೇ? ಇಷ್ಟವಾಗದ್ದೇನು, ಯಾಕೆ ಈ ಬರಹದ ಧೋರಣೆ ಸರಿಯೆನ್ನಿಸಲಿಲ್ಲ ಎಂಬ ಅಂಶಗಳು ಚರ್ಚೆಗೆ ಬರುವ ಹಾಗೆ ಅಭಿಪ್ರಾಯಗಳಿದ್ದರೆ ಉತ್ತಮ ಎಂಬುದು ನಮ್ಮ ವಿನಯಪೂರ್ವಕ ಭಾವನೆ. ಆಗ ಇನ್ನಷ್ಟು ಹೊಸ ನೋಟಗಳು ದಕ್ಕಿಯಾವು ಎಂದೇ ನಮ್ಮ ಆಸೆ.

‍ಲೇಖಕರು avadhi

January 21, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

3 ಪ್ರತಿಕ್ರಿಯೆಗಳು

 1. ಶ್ರೀ

  ತಡವಾಗಿಯಾದರೂ ಬಂದ ಈ ಟಿಪ್ಪಣಿಗಾಗಿ ಧನ್ಯವಾದಗಳು! ವೆಂಕಟಲಕ್ಷ್ಮಿಯವರು ಹದಿನೈದು ವರ್ಷಗಳ ಹಿಂದೆ ಬರೆದಿದ್ದು ಅನ್ನೋ ಕಾಂಟೆಕ್ಸ್ಟ್ ಕೊಡದೇ ಏಕಾಏಕಿ generalisationಗಳ ಪಟ್ಟಿಯನ್ನ ಕೊಟ್ಟವರಿಗೆ ಹೆಣ್ಣುಮಕ್ಕಳು ಯಾರ ಹಿತಾಸಕ್ತಿಗೋಸ್ಕರ ಮತ್ತೊಬ್ಬ ಬರಹಗಾರ್ತಿಯ ಆಲೋಚನೆಗಳನ್ನ ಉಪೇಕ್ಷೆಯಿಂದ ನೋಡಹೊರಡುತ್ತಾರೆ ಅಂತ ಪ್ರಶ್ನಿಸೋದಕ್ಕೆ ನೈತಿಕ ಹಕ್ಕು ಇದೆಯಾ? ಇಲ್ಲಿ ಆಯ್ದಿರುವ ಭಾಗ ನೀವು ಹೇಳಿದಂತೆ ಸ್ವಾತಂತ್ರ್ಯ ಹರಣದ ಯತ್ನಗಳ ಬಗೆಗೆ, ನಯವಾದ ಹುನ್ನಾರಗಳ ಬಗೆಗೆ ಮಾತಾಡದೇ ಹೆಣ್ಣಿನ ಕೊರತೆಗಳ/ಮಾನಸಿಕ ಅಸ್ವಸ್ಥತೆಯ ಯಾದಿಯಂತೆ ಕಾಣುತ್ತಿರೋದು ವೆಂಕಟಲಕ್ಷ್ಮಿಯವರಿಗೂ ಈಗ ಪ್ರತಿಕ್ರಯಿಸುತ್ತಿರೋ ಹೆಣ್ಣುಮಕ್ಕಳಿಗೂ ಹದಿನೈದು ವರ್ಷ generation gap ಇದೆ ಅಂತಲೋ ಅಥವಾ ಅವರ ಬರಹದಲ್ಲಿ ಯಾವ ತುಣುಕನ್ನ ಹೇಗೆ ಪ್ರಕಟಿಸಬೇಕು ಅನ್ನೋ editorial decissionನ ಫಲವೋ ಗೊತ್ತಾಗ್ತಿಲ್ಲ.
  Given that, ಅವಧಿಯಲ್ಲಿ ಪ್ರಕಟವಾಗಿರೋ ಆ ತುಣುಕು stereotypeಗಳ ಪುನರ್ಪ್ರತಿಪಾದನೆಗಿಂತ ಹೆಚ್ಚಾಗಿ ಇನ್ನೇನೂ ಅನ್ನಿಸೋದಿಲ್ಲ. “ಅಷ್ಟಕ್ಕೂ ವೆಂಕಟಲಕ್ಷ್ಮಿಯವರು ವಿವರಿಸಿದ ಸ್ಥಿತಿ ಇವತ್ತಿಗೂ ಎಷ್ಟೋ ಕಡೆ ಜೀವಂತವಾಗಿಯೇ ಇದೆ”? “ಅವಳು ತನಗಾಗಿಯೇ ಏನನ್ನಾದರೂ ಅಪೇಕ್ಷಿಸುವುದರಿಂದ ಹೆಚ್ಚು ಪ್ರಯೋಜನವಿಲ್ಲವೆಂದು ತಿಳಿಯುವುದಕ್ಕೆ ಕಾರಣ ಅಂತಿಮವಾಗಿ ಅವಳ ಸ್ವಪ್ರಯತ್ನವನ್ನು ಯಾವುದೂ ಅವಲಂಬಿಸದೇ ಇರುವುದು. ತಾನು ಕೀಳೆಂಬ ಭಾವನೆಯನ್ನು ಅವಳು ತಂತಾನೇ ಗುರುತಿಸಿಕೊಂಡು ಅದನ್ನು ಒಪ್ಪಿಕೊಳ್ಳುವ ಮೂಲಕವೇ ಅವನ್ನು ಸತ್ಯವೆಂಬುದಾಗಿ ಸ್ಥಾಪಿಸುತ್ತಾಳೆ. ಆದರೆ ಹದಿಹರೆಯದ ಹುಡುಗನೊಬ್ಬ ಸ್ವಾತಂತ್ರ್ಯ ಹಾಗೂ ಮುಕ್ತತೆಯ ಬಗ್ಗೆ ತನಗಿರುವ ಸ್ವಸಮರ್ಥನೆಯ ಮೂಲಕವೇ ತನ್ನ ಸಾಮಾಜಿಕ ಮೌಲ್ಯ ಹಾಗೂ ಗಂಡಸಾಗಿ ತನ್ನ ಗೌರವವನ್ನು ಗಳಿಸಿಕೊಳ್ಳುತ್ತಾನೆ.” ಅನ್ನೋ generalisationಗಳು ಯಾವ ತಲೆಮಾರಿನ ಬಗೆಗಾದರೂ ಹೇಗೆ valid? ವಸ್ತುಸ್ಥಿತಿಯ ಬಗ್ಗೆ ಮಾತಾಡದೇ ಒಟ್ಟು ಸಾಮಾನ್ಯೀಕರಣದತ್ತಲೇ ಲೇಖನದ ಒಲವು ಅತಿಸ್ಪಷ್ಟವಾಗಿದೆ. ಮೂಲಕೃತಿಯಲ್ಲಿ ಇದಕ್ಕೊಂದು ಸಂದರ್ಭವಿದ್ದಿರಬಹುದು. ಇದ್ದರೆ ಅದನ್ನು ಸೂಚಿಸದೇ ಪ್ರಕಟಿಸಿದ್ದು ಪ್ರಶ್ನಾರ್ಹ. ಮೂಲಕೃತಿಯಲ್ಲಿಯೂ ಸಂದರ್ಭರಹಿತವಾಗಿ ಈ ಮಾತುಗಳು ಬಂದಿದ್ದರೆ ಈ ಲೇಖನವನ್ನ ಇಲ್ಲಿ ಪ್ರಕಟಿಸಿದ್ದರ ಉದ್ದೇಶ ಪ್ರಶ್ನಾರ್ಹ.
  ಚರ್ಚೆಗೆ ಹೊಸನೋಟಗಳಿಗೆ ಎಡೆಮಾಡಿಕೊಡುವುದರಲ್ಲಿ ಸಂಪಾದಕರ ಜವಾಬ್ದಾರಿಯೂ ಇರುತ್ತೆ ಅಲ್ಲ್ವಾ? ಒಂದು ಸಿನಿಮಾ ಬಗ್ಗೆ ಪ್ರಶ್ನೆ ಕೇಳುವಾಗ, ಚರ್ಚೆಗೆ ಆಹ್ವಾನಿಸುವಾಗ ಕೊಡುವಷ್ಟೂ ಗಮನ ಈ ವಿಷಯಕ್ಕೆ ಬೇಕು ಅನಿಸದಿದ್ದದ್ದು ಆಶ್ಚರ್ಯ!

  ಪ್ರತಿಕ್ರಿಯೆ
 2. chetana thirthahalli

  ನಮಸ್ತೇ.

  ಈ ಲೇಖನ ೧೫ ವರ್ಷಗಳ ಹಿಂದಿನದು ಎಂಬುದೇ ನನಗೆ ಅಚ್ಚರಿ. ಅಂದಿನಿಂದ ಇಂದಿಗೆ ಹುಡುಗಿಯರ ಈ ಭಾವನೆಗಳ ವಿಷಯದಲ್ಲಿ ಅಂಥ ಹೆಚ್ಚಿನ ಬದಲಾವಣೆಯೇನಾಗಿಲ್ಲ ಎಂದೇ ನನಗೆ ಅನಿಸುತ್ತದೆ. ಅಲ್ಲದೆ, ಇಲ್ಲಿ ಹೇಳಿರುವುದು ’ಬಹುತೇಕ’ ಹುಡುಗಿಯರ ಬಗ್ಗೆ. ಅಪವಾದಗಳು ಎಲ್ಲೆಡೆಯೂ ಇರುತ್ತವಷ್ಟೆ? ಶುರುವಿನಲ್ಲಿ ಹೇಳಿರುವ ನಿರಾಸಕ್ತಿಗಳು ಆ ’ಬಹುತೇಕ’ರಲ್ಲೂ ಇತ್ತೀಚಿಗೆ ಕಡಿಮೆಯಾಗುತ್ತ ಬಂದಿದೆಯಾದರೂ ಈ ಸುಧಾರಣೆಯ ಮಟ್ಟ ತೀರ ಕಡಿಮೆ. ಕೊನೆಯಲ್ಲಿ ಹೇಳಿರುವ ಹಾಗೆ ಕೋಪ ಪ್ರದರ್ಶನಗಳು ನಡೆಯುತ್ತವಾದರೂ ಅದರ ಅಭಿವ್ಯಕ್ತಿ ಬದಲಾಗಿದೆ. ಪಾಟ್ ಒಡೆದು ಪ್ರತಿಭಟಿಸುವ ಕಾಲ ಈಗ ಇಲ್ಲ. ಆದರೂ ಹೆಣ್ಣಿನ ಪ್ರತಿಭಟನೆ ಗಂಡಿನ ಹಾಗೆ ಸ್ವಾತಂತ್ರ್ಯವನ್ನು ದಕ್ಕಿಸಿಕೊಳ್ಳುವ ಮಾರ್ಗವಾಗದೆ ಕೇವಲ ತನ್ನ ಅಸಹಾಯಕತೆಯ ಪ್ರದರ್ಶನವಾಗಿಬಿಡುವುದು ಸುಳ್ಳಲ್ಲ.

  ಆದರೆ ಲೇಖನದಲ್ಲಿ – “ಹುಡುಗಿ ಅವನ ಬಗ್ಗೆ ತಾನು ಹೊಂದಿರುವ ದ್ವಂದ್ವವನ್ನು ಒಪ್ಪಿಕೊಳ್ಳುತ್ತಲೇ ತನ್ನನ್ನು ಬೆದರಿಸುವ ಅವನಿಂದ ದೂರವಾಗಿ ಅದೇ ಕಾಲಕ್ಕೆ ಅವನಲ್ಲಿ ಇರುವುದೆಂಬುದಾಗಿ ತಾನು ಭಾವಿಸುವ ದೈವಿಕ ಗುಣವನ್ನು ಮನದಲ್ಲೇ ಆರಾಧಿಸುತ್ತಾಳೆ” ಎಂಬಲ್ಲಿಯಾಗಲೀ,
  “ಅರಿವಾಗಿಸಿಕೊಳ್ಳಲೇ ಅಸಾಧ್ಯವಾದಂಥ ಆದರ್ಶವನ್ನು ಜೀವನವಿಡೀ ಹುಡುಕುತ್ತಾರೆ. ಹುಡುಗರನ್ನು ಉದ್ದೀಪನಗೊಳಿಸುವಲ್ಲಿ ಅವರಿಗೆ ಹರ್ಷವಿದೆಯಾದರೂ ಅವರಲ್ಲಿ ಬಯಕೆ ಹುಟ್ಟುವುದನ್ನು ಕಂಡಾಗ ಅವರು ಜಿಗುಪ್ಸೆಯಿಂದ ಮುದುರಿಕೊಳ್ಳುತ್ತಾರೆ. ಇಲ್ಲಿ ಮಾತ್ರ ಮೂಲಭೂತ ಮರ್ಯಾದೆಯ ಆತಂಕ ಎದ್ದು ನಿಲ್ಲುತ್ತದೆ” ಎಂಬ ಸಾಲುಗಳಲ್ಲಾಗಲೀ ಹೆಣ್ಣಿನ ಸಹಜ ಭಾವನೆಗಳೇ ದಾಖಲಾಗಿವೆ. ಅದು ಸರಿಯಲ್ಲವೆಂದಾದರೆ, ಹೆಣ್ಣು ಇಂದಿಗೂ ತನ್ನ ಮೆಚ್ಚಿನ ಹುಡುಗನನ್ನು ನೋಡಲು ಹೋಗುವಾಗ ಇನ್ನಿಲ್ಲದಂತೆ ಸಿಂಗಾರವಾಗೋದು, ಆಮೇಲೆ (ಅಕಸ್ಮಾತ್)ಆತ ಮುಟ್ಟಿದರೆ ಮುನಿಯುವುದು, ಇವೆಲ್ಲ ಯಾಕೆ? ಅವನು ತನ್ನತ್ತ ಆಕರ್ಷಿತನಾಗಬೇಕೆಂಬ ಬಯಕೆ ಸರಿಯೇ. ಆದರೆ ಯಾಕೆ ಆಕರ್ಷಿತನಾಗಬೇಕು? ಆಕರ್ಷಣೆಯ ಮುಂದಿನ ಹೆಜ್ಜೆ ಏನು? ವ್ಯಕ್ತಿ ಮಾತ್ರವಲ್ಲ, ಯಾವುದೇ ವಸ್ತುವಿನಿಂದ ಸೆಳೆಯಲ್ಪಟ್ಟರೆ ಅದನ್ನು ಹೊಂದಲು ಬಯಸೋದು ಸಹಜ ತಾನೆ? ಇದೊಂದು ತೀರ ತೆಳುವಾದ ಉದಾಹರಣೆಯಷ್ಟೆ. ಇದಕ್ಕೆ ಪೂರಕವಾಗಿ
  ಲೇಖನದ – “ಅವರು ತಮ್ಮ ಭವಿಷ್ಯವನ್ನು ಸ್ವಾಧೀನಪಡಿಸಿಕೊಳ್ಳಲು ಉತ್ಸುಕರಾಗುತ್ತಿದ್ದಂತೆಯೇ, ಭೂತಕಾಲದಿಂದ ತಮ್ಮನ್ನು ಬಿಡಿಸಿಕೊಳ್ಳಲು ಭಯಪಡುತ್ತಾರೆ. ಅವರಿಗೆ ಹುಡುಗನೊಬ್ಬನನ್ನು “ಕೂಡಿಕೊಳ್ಳುವುದು” ಬೇಕು. ಆದರೆ ಅವನು ತಮ್ಮನ್ನು ಆಹುತಿಯನ್ನಾಗಿಸಿಕೊಳ್ಳುವುದು ಬೇಡ. ಹೀಗಾಗಿ ಪ್ರತಿ ಬಯಕೆಯ ಹಿಂದೆಯೂ ಭಯವೊಂದು ಅಡಗಿರುತ್ತದೆ” ಎಂಬ ಈ ಸಾಲುಗಳಲ್ಲಿ ಹೆಣ್ಣು ಸೂಕ್ಷ್ಮಗಳ ಹೊಳಹು ಹೊಳೆದಿವೆ.
  ಹೆಣ್ಣು ತಾನು ಗಂಡನ್ನು ದೂರುತ್ತಲೇ ಸದಾ ಅವನ ಸಾಂಗತ್ಯಕ್ಕಾಗಿ, ರಕ್ಷಣೆಗಾಗಿ ಹಾತೊರೆಯೋದು ಸುಳ್ಳೆಂದು ಹೇಳಬಹುದಾದರೂ ಹೇಗೆ?
  ಬಯಲಿಗೆ ಬಿಟ್ಟರೂ ಬೇಲಿ ಕಟ್ಟಿಕೊಳ್ಳುವ ನಾವು ಗಂಡಸರ ಬಗೆಗಿನ ನಮ್ಮ ಭಾವನೆಗಳನ್ನ ನೇರಾನೇರ ಹೇಳಿಕೊಳ್ಳುವುದು ತೀರ ಅಪರೂಪ.
  ಇವತ್ತು ನಾವು ಎಷ್ಟೆಲ್ಲ ಮುಂದುವರೆದಿದ್ದೇವೆಂದಾದರೂ ಆಂತರ್ಯದ ಭಾವನೆಗಳ ಆವರಣವನ್ನು ಹಾಗೇ ಉಳಿಸಿಕೊಂಡಿದ್ದೇವೆ. ಮತ್ತು, ಈ ಆವರಣವೇ ನಮ್ಮನ್ನು ಇನ್ನೂ ’ಹೆಣ್ಣಾಗಿ’ ಇರಿಸಿದೆ ಅನ್ನೋದು ನನ್ನ ಭಾವನೆ. ಮಧ್ಯಮ ವರ್ಗದ ಸ್ಥಿತಿಯಿಂದ, ಹಿರಿಯರ ಒತ್ತಡದಿಂದ, ಸ್ವಾತಂತ್ರ್ಯ ಹರಣಾದಿಂದ ಮಾತ್ರವಲ್ಲದೇ ತಾನೇ ತಾನಾಗಿಯೂ ಹುಡುಗಿಯೊಬ್ಬಳು ಇಂಥ ’ಮುದುಡುವಿಕೆ’ಯನ್ನು ರೂಡಿಸಿಕೊಳ್ಳುವ ಸಾಧ್ಯತೆಗಳೂ ಇರುತ್ತವೆ. ಈ ಮಾತನ್ನು ಎಲ್ಲರೂ ಒಪ್ಪಬೇಕೆಂದೇನೂ ಇಲ್ಲ.

  ಅಂದಹಾಗೆ, ಪ್ರಣಯ ಕೇಳಿಯ ಸಂದರ್ಭಗಳಲ್ಲಿ (ದೃಶ್ಯ ನೋಡುವ ಅಂದುಕೊಳ್ಳುತ್ತೇನೆ) ಹುಡುಗಿ ನಕ್ಕು ಮುಜುಗರದಿಂದ ಪಾರಾಗೋದು ನನಗೆ ಗೊತ್ತಿಲ್ಲ. ಆದರೆ ಹುಡುಗರಷ್ಟು ಸಹಜವಾಗಿ ನಾವು ಅದನ್ನು ಸ್ವೀಕರಿಸಲಾರೆವು ಅನ್ನೋದು ನಿಜ. ಇಂಥ ಸಮಯದಲ್ಲಿ ಮಾತಿನ ದಿಕ್ಕು ತಪ್ಪಿಸಿಯೋ ಇಲ್ಲಾ ಏನೊಂದು ಕೆಲಸದ ನೆವ ತೆಗೆದೋ ನುಣುಚಿಕೊಳ್ಳೋದುಂಟು!

  ಪ್ರತಿಕ್ರಿಯೆ ಕೊಂಚ ಉದ್ದ ಆಯಿತು. ಆದರೆ, ಹೇಳಲೇ ಬೆಕಾದ ಮಾತುಗಳು ಇನ್ನೂ ಮುಗಿದಿಲ್ಲ!

  ವಂದೇ,
  ಚೇತನಾ ತೀರ್ಥಹಳ್ಳಿ

  ಪ್ರತಿಕ್ರಿಯೆ
 3. SHREE

  Well. My dispute is not much about the matter in this article, but more about the spicy title given, and the way whole issue is presented.
  If a girl behaves in the way presented here, the reason is not the girl herself, but the male-dominated society around her. And some of the reasons given for a girl’s attitude towards boys are not relevant anymore, in most of the places. I do agree there is lot lot to be changed in society, but at the same time when we say “society”, we should never forget that we are also part of it.
  At this juncture, I’m more concerned about the way issues are presented, in a personal media like blog, or in mass media like newspaper and TV, and this article just added to my concern. I’m really sorry if my one-word reaction has irritated anyone, but I do stand by what I said… Presentation matters a lot.
  AVADHI, a platform for intellectuals, should never be irresponsible, there should be some amount of decency and sensetiveness. The class of young ladies who read this blog might not belong to the category reflected here… I may be wrong too, ultimately it all lies in our own interpretations.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: