ಹೊಸ ಪ್ರತಿಭೆಗಳ ಕೈಹಿಡಿವ ಚನ್ನಬಸವಣ್ಣ

channa.jpg

 

ಲಿಗಣನಾಥ ಗುಡದೂರು, ರಾಜಶೇಖರ ಹತಗುಂದಿ, ಚಿತ್ರಶೇಖರ ಕಂಠಿ, ವಿಕ್ರಮ ವಿಸಾಜಿ, ಶಿವಕುಮಾರ ನಾಗವಾರ, ಬೂದಗುಪ್ಪ ಪ್ರಹ್ಲಾದರೆಡ್ಡಿ, ಪ್ರಮೋದ್ ತೂರ್ವಿಹಾಳ, ಬಿ.ಪೀರ್ ಬಾಷಾ, ದಸ್ತ್ಗೀರ್ ಸಾಬ್ ದಿನ್ನಿ -ಈ ಎಲ್ಲರಲ್ಲೂ ಇರುವ ಸಾಮಾನ್ಯ ಎಳೆ ಯಾವುದು ಎಂದರೆ ಒಂದೇ ಉತ್ತರ: ಅದು, ಸಿ.ಚನ್ನಬಸವಣ್ಣ.

ಸದಾ ತುಂಬು ನಗೆಯ ಸಿ.ಚನ್ನಬಸವಣ್ಣ ಸಿಕ್ಕಾಪಟ್ಟೆ ಹಣ ಕೂಡಿಹಾಕಿದವರಲ್ಲ. ಆದರೂ ಹಲವಾರು ಬ್ಯಾಂಕುಗಳಲ್ಲಿ, ಗೆಳೆಯರ ಬಳಿ ಸಾಲ ಎತ್ತಿ ಪುಸ್ತಕಗಳನ್ನು ಪ್ರಕಟಿಸುತ್ತಾರೆ. ಸಿ.ಚನ್ನಬಸವಣ್ಣ ಎಂದರೆ ಸಾಕು, ಹೈದ್ರಾಬಾದ್ ಕರ್ನಾಟಕದ ಹೊಸ ಪ್ರತಿಭೆಗಳಿಗೆ ತಾಯಿಪ್ರೀತಿಯಿದ್ದಂತೆ.

ಬಹುಶಃ ಇಂದು ಕನ್ನಡ ಸಾಹಿತ್ಯ ಭೂಪಟದಲ್ಲಿ ಇಷ್ಟೊಂದು ಮಂದಿ ಬರಹಗಾರರು ಎದ್ದು ನಿಂತಿದ್ದರೆ ಅವರ ಬೆನ್ನ ಹಿಂದಿನ ಬೆಳಕು ಚನ್ನಬಸವಣ್ಣ ಒಬ್ಬರೇ. ಅವರಿಗೆ ಯಾವ ಹುಡುಗರ ಗುರುತು, ಪರಿಚಯ ಇರಬೇಕಾಗಿಲ್ಲ. ಸ್ಕ್ರಿಪ್ಟ್ ಕಳಿಸಿದರೆ ಸಾಕು, ನಿಜಕ್ಕೂ ಗಟ್ಟಿ ಇದೆ ಅನಿಸಿದರೆ ಖಂಡಿತ ಪ್ರಕಟವಾಗುತ್ತದೆ. ವಿಕ್ರಮ ವಿಸಾಜಿಯನ್ನ್ ಏನೋ ಬರೀತಾನೆ ಅಂತ ಕಲ್ಬುರ್ಗಿಯ ಸಾಹಿತ್ಯ ಲೋಕ ಮೂಗು ಮುರಿದು ನೋಡುತ್ತಿದ್ದಾಗ ಆತನನ್ನು ಎತ್ತಿಕೊಂಡವರು ಚನ್ನಬಸವಣ್ಣ. ಜಿ. ಎಸ್. ಶಿವರುದ್ರಪ್ಪನವರಿಂದ ಮುನ್ನುಡಿ ಬರೆಸಿ ದೊಡ್ಡದಾಗಿಯೇ ಕವಿಯನ್ನು ಲಾಂಚ್ ಮಾಡಿದರು. ಇಂದು ಬೀದರ್, ಗುಲ್ಬರ್ಗಾ, ರಾಯಚೂರು, ಬಳ್ಳಾರಿ, ಬಿಜಾಪುರ, ಕೊಪ್ಪಳ, ಬಾಗಲಕೋಟೆಯಂತಹ ನೀರಿಲ್ಲದ ಊರಲ್ಲೂ ಸಾಹಿತ್ಯದ ಬುಗ್ಗೆ ಇರುವಂತೆ ಚನ್ನಬಸವಣ್ಣ ನೋಡಿಕೊಂಡಿದ್ದಾರೆ.

ಬರೀ ಪುಸ್ತಕ ಪ್ರಕಟಿಸುವುದಲ್ಲ. ಆ ಹುಡುಗರನ್ನು ಪ್ರತಿಯೊಬ್ಬರ ಮುಂದೆ ಸಮರ್ಪಕವಾಗಿ ಮಂಡಿಸುವುದು, ಸಂಕಿರಣಗಳಿಗೆ ಕರೆಸುವುದು, ವಿಮರ್ಶಕರ ಮುಂದೆ ಇಡುವುದು -ಎಲ್ಲವೂ ಇವರಿಗೆ ಪ್ರೀತಿ. ಚನ್ನಬಸವಣ್ಣನವರಿಗೆ ಪ್ರತಿಯೊಬ್ಬರನ್ನೂ “ಇವ ನಮ್ಮವ, ಇವ ನಮ್ಮವ” ಎಂದು ಹತ್ತಿರವಾಗಿಸಿಕೊಳ್ಳುವ ಬಯಕೆ.

ಬೀದರಿನ ಶಿವಕುಮಾರ ನಾಗವಾರ “ಹಣದಿ” ಅನ್ನುವ ಸಂಕಲನ ತಂದಿದ್ದಾರೆ. ಹಣದಿ ಅಂದರೆ ಅದು ಮುಖ್ಯ ರಸ್ತೆಯಲ್ಲದ ಕಚ್ಚಾ ದಾರಿ. ಎತ್ತಿನ ಬಂಡಿ ಓಡಾಡುತ್ತಲೇ ಉಂಟಾದ ಕಾಲುದಾರಿ. ಚನ್ನಬಸವಣ್ಣನವರೂ ಅಷ್ಟೆ. ಇಂತಹ ಹಣದಿ ದಾರಿಯಲ್ಲಿ ನಡೆಯಬಯಸುವವರು. ಹೆದ್ದಾರಿಗಳ ಲೇಖಕರು ಬೆಂಗಳೂರಿಗೆ ಜೋತುಬಿದ್ದಿರುವಾಗ, ಕಾಲುದಾರಿಯ ಮಿಣಿ ಮಿಣಿ ಪ್ರತಿಭೆಗಳನ್ನು ಹುಡುಕುತ್ತಾ ಓಡಾಡುತ್ತಿರುವ ಒಂದು ಪ್ರೀತಿಯ ಹೆಸರೇ ಚನ್ನಬಸವಣ್ಣ. ಜನರೇಶನ್ ನೆಕ್ಸ್ಟ್ ನ ನಿಜವಾದ ಅರ್ಥದ ಕಾವಲುಗಾರ.

‍ಲೇಖಕರು avadhi

February 26, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

 1. G N Mohan

  ಚನ್ನಬಸವಣ್ಣ ಅವರ ಆತ್ಮೀಯತೆಯ ರುಚಿ ಉಂಡವರಲ್ಲಿ ನಾನೂ ಒಬ್ಬ. ನನಗೆ ಅವರ ಪರಿಚಯ ಇರಲಿಲ್ಲ. ಅವರಿಗೂ. ನವಕರ್ನಾಟಕ ಆಗ ತಾನೆ ನಾನು ಮಾಧ್ಯಮವನ್ನು ದಂಕೆಲ್ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ನೋಡಿದ ೨ ಪುಸ್ತಕಗಳನ್ನು ಪ್ರಕಟಿಸಿತ್ತು. ಚನ್ನಬಸವಣ್ಣ ಅವರಿಗೆ ಇಷ್ಟೇ ಸಾಕು. ಅವರು ಕೃತಿ ಓದಿ ಲೇಖಕರ ಬೆನ್ನತ್ತುವವರೇ ಹೊರತು ಲೇಖಕರ ಮುಖ ನೋಡಿ ಕೃತಿ ಪ್ರಕಟಿಸುವವರು ಅಲ್ಲ . ಅವರು ಇಂದು ಪ್ರಕಟಿಸಿರುವ ಅಷ್ಟೊಂದು ಪುಸ್ತಕಗಳಲ್ಲಿ ಶೇಕಡಾ ೮೦ ಕ್ಕೂ ಹೆಚ್ಚು ಲೇಖಕರು ಅವರಿಗೆ ಪುಸ್ತಕ ಪ್ರಕಟಿಸಲು ಕೈಗೆತ್ತಿಕೊಳ್ಳುವ ಮುನ್ನ ಅವರಿಗೆ ಗೊತ್ತಿರಲಿಲ್ಲ ಮತ್ತು ಪ್ರಕಟಿಸಿದ ನಂತರ ಆ ಲೇಖಕರು ಯಾರೂ ಅಣ್ಣನಿಂದ ಕಳಚಿಕೊಂಡಿಲ್ಲ ಎಂದು ವಿಶ್ವಾಸದಿಂದ ಹೇಳಬಲ್ಲೆ.
  ನನ್ನ ಒಂದು ಪುಸ್ತಕ ಪ್ರಕಟಿಸಲೇಬೇಕು ಎಂದು ಅವರು ನನ್ನ ಬೆನ್ನ ಹಿಂದೆ ಬಿದ್ದ ರೀತಿ ಬಹುಶಃ ನನ್ನ ಬದುಕಿನಲ್ಲಿ ಮರೆಯಲಾಗದ ಘಟನೆ. ಪುಸ್ತಕ ಪ್ರಕಟಿಸುತ್ತೇವೆ ಕೊಡಿ ಎಂದು ಯಾರಾದರೂ ಗಂಟು ಬೀಳಲು ಸಾದ್ಯವೇ. ಅದು ಸಾಧ್ಯವಾಗುವುದು ಚೆನ್ನಬಸವಣ್ಣ ಅವರಿಗೆ ಮಾತ್ರ.
  ನನ್ನ ಬಳಿ ಯಾವುದೂ ಪುಸ್ತಕ ಇಲ್ಲ. ನೀವು ರಾಜಶೇಕರ ಹತಗುಂದಿಯ ಪುಸ್ತಕ ಪ್ರಕಟಿಸಬಹುದೇನೋ ಎಂದೆ. ಅದಕ್ಕೇನಂತೆ ಕಳಿಸ್ರಿ ಎಂದರು. ಅಷ್ಟೇ ಬರೀ ಹತಗುಂಡಿ ಮಾತ್ರವಲ್ಲ, ಇಡೀ ಹೈದರಾಬಾದ್ ಕರ್ನಾಟಕದ ಸಾಲು ಸಾಲು ಹುಡುಗರು ನೋಡು ನೋಡುತ್ತಿದ್ದಂತೆಯೇ ಬರಹಗಾರರಾಗಿ ಬೆಳೆದು ಬಿಟ್ಟರು. ಅಣ್ಣ ತುಂಬುವ ವಿಶ್ವಾಸವೇ ಅಂತಹದ್ದು.
  ನಾನು ಕ್ಯೂಬಾ ಪ್ರವಾಸ ಕಥನ ಬರೆದಾಗ ಅದು ಲೋಹಿಯಾದಿಂದಲೇ ಪ್ರಕಟವಾಗಬೇಕು ಎಂದು ಅಲಿಖಿತ ಒಪ್ಪಂದ ಆಗಿಹೋಗಿತ್ತು . ಆ ಪುಸ್ತಕ ಪ್ರಕಟಿಸುವಾಗ ಅಪ್ಪನ ಬೆರಳು ಹಿಡಿದು ಕಾಣದ ರೋಡ್ ಗಳನ್ನೂ ಬೆರಗು ಕಣ್ಣಿಂದ, ಆತಂಕದಿಂದ ಮಕ್ಕಳು ದಾಟುತ್ತಾವಲ್ಲಾ ಹಾಗೆ ಅವರ ಹಿಂದೆ ತಿರುಗಿಬಿಟ್ಟೆ.
  ಆಮೇಲೆ ಚೆನ್ನಬಸವನ್ನನವರ ಹಣಕಾಸಿನ ಕಷ್ಟ ಗೊತ್ತಾಗತೊಡಗಿತು. ಅವರೂ ಆಗೀಗ ನನ್ನ ಬಳಿ ಪುಸ್ತಕ ಉದ್ಯಮದ ನಿಟ್ಟುಸಿರುಗಳ ಬಗ್ಗೆ ಮಾತಾಡುತ್ತಿದ್ದರು. ಹಾಗಾಗಿ ನನಗೆ ಯಾಕೋ ಅದರ ಎರಡನೆ ಆವೃತ್ತಿ ತನ್ನಿ ಎನ್ನಲು ದೈರ್ಯವಾಗಲಿಲ್ಲ. ಅಥವಾ ಒಳೊಗೊಳಗೆ ದುರಾಸೆ ಇತ್ತೇನೋ. ನವಕರ್ನಾಟಕದ ರಾಜಾರಾಂ ಅವರನ್ನು ಪ್ರಕಟಿಸಿ ಎಂದು ಕೇಳಿದೆ. ಅವರಿಗೂ ಅಷ್ಟೇ ಚೆನ್ನಬಸವಣ್ಣನವರ ಬಗ್ಗೆ ಅಪಾರ ಗೌರವ. ಒಂದು ಮಾತು ಅವರ ಕಿವಿಗೆ ಹಾಕುವುದು ಒಳ್ಳೆಯದೇನೋ ಎಂದರು. ನಾನು ಅಣ್ಣನಿಗೆ ಫೋನ್ ಮಾಡಿದೆ. ಚೆನ್ನಬಸವಣ್ಣನವರು ಹೇಗೆ ನೊಂದುಕೊಂಡು ಬಿಟ್ಟರೂ ಎಂದರೆ ಅದು ನನ್ನ ಕಿವಿಯಲ್ಲಿ ಇನ್ನೂ ಗುಂಯ್ ಗುಡುತ್ತಲೇ ಇದೆ. ಕ್ಯೂಬಾ ನಮ್ಮ ಪ್ರಕಾಶನದ ಕೂಸು ಎಂದರು. ಪಶ್ಚಾತ್ತಾಪವಾಯಿತು. ಮೌನದ ಮೊರೆ ಹೋದೆ. ನಂತರ ಮತ್ತೆ ಅವರು ಕ್ಯೂಬಾ ಪುಸ್ತಕಕ್ಕಾಗಿ ಓಡಾಡಿದ ಪರಿ, ಆ ಸಂಭ್ರಮ ನಿಜಕ್ಕೂ ನನ್ನ ಮನಸ್ಸು ತಟ್ಟಿದೆ.
  ಪುಸ್ತಕ ಮಾತ್ರ ಅಲ್ಲ, ಅಣ್ಣ ಕೊಟ್ಟ ದೈರ್ಯ ದೊಡ್ಡದು. ಅದಕ್ಕೇ ನಾನು ಅವರನ್ನು ‘ನೆಲ ಹಸಿರು ಮುಕ್ಕಳಿಸಲು ಕಾರಣವಾಗುವ ಸೋನೆ ಹನಿ’ ಎಂದು ನನ್ನ ಪುಸ್ತಕದಲ್ಲಿ ಬನ್ನಿಸಿದ್ದೇನೆ.
  ಚೆನ್ನಬಸವಣ್ಣ ಎಂದರೆ ಪುಸ್ತಕ, ಚೆನ್ನಬಸವಣ್ಣ ಎಂದರೆ ಪ್ರೀತಿ, ಚೆನ್ನಬಸವಣ್ಣ ಎಂದರೆ ಹುಗ್ಗಿ, ಚೆನ್ನಬಸವಣ್ಣ ಎಂದರೆ ತುಂಬು ನಗೆ. ಚೆನ್ನಬಸವಣ್ಣ ಎಂದರೆ ….
  -ಜಿ ಎನ್ ಮೋಹನ್

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: