ಹೊಸ ಭಾವ – ಸುಶ್ರುತಾ ದೊಡ್ಡೇರಿ

   

– ಸುಶ್ರುತಾ ದೊಡ್ಡೇರಿ

  ಮೌನ ಗಾಳ

  ‘ನಿನ್ನ ಜೀವನದಲ್ಲಿ ಅತಿ ಹೆಚ್ಚು ಉಪ್ಪಿಟ್ಟು ತಿಂದ ದಿನಗಳು ಯಾವುದು?’ ಅಂತ ಯಾರಾದರೂ ಕೇಳಿದರೆ, ನಾನು ಸುಲಭವಾಗಿ ‘ಅದು ನನ್ನ ಅಕ್ಕನಿಗೆ ಗಂಡು ಹುಡುಕುವ ದಿನಗಳಲ್ಲಿ’ ಅಂತ ಉತ್ತರಿಸುತ್ತೇನೆ. ಅಕ್ಕ ಡಿಗ್ರಿಯಲ್ಲಿ ಡುಮ್ಕಿ ಹೊಡೆದದ್ದೇ ಮದುವೆಯಾಗಲಿಕ್ಕೆ ಅರ್ಹತೆ ಪಡೆದುಬಿಟ್ಟಳು. ‘ಶೇಷಭಟ್ರ ಮನೆ ಕೂಸಿಗೆ ಮದುವೆ ಮಾಡ್ತಾರಂತೆ. ಜಾತಕ ಹೊರಡಿಸಿದ್ದಾರಂತೆ’ ಎಂಬ ಸುದ್ದಿ ಊರಿನ ಬಾಯ್ಬಡುಕರ ಮುಂದಿನ ನೋಟೀಸ್ ಬೋರ್ಡಿನಲ್ಲಿ ತೂಗಾಡಿತು. ಆಮೇಲೆ ಆ ಸುದ್ದಿ ಹರಡಲಿಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಗಣಪತಣ್ಣನನ್ನು ಮೊದಲ್ಗೊಂಡು ಕೊನೇಮನೆ ಸೌಭದ್ರಕ್ಕನವರೆಗೆ ಎಲ್ಲರೂ ದೂರ್ವೆ ಕೊಯ್ಯುವ ನೆಪದಲ್ಲೋ, ಹೆಪ್ಪಿಗೆ ಮಜ್ಜಿಗೆ ಕೇಳುವ ನೆಪದಲ್ಲೋ, ಕುಡಗೋಲು ಮಸೆಯುವ ನೆಪದಲ್ಲೋ ನಮ್ಮನೆಗೆ ಬಂದು, ‘ಕೂಸಿನ ಜಾತಕ ಹೊಂಡ್ಸಿದ್ರಡ ಹೌದನೇ?’ ಅಂತ ಕೇಳಿಕೊಂಡು, ತಮ್ಮ ನೆಂಟರಿಷ್ಟರ ಪೈಕಿ ಮದುವೆಗೆ ಇರುವ ಗಂಡಿನ ಬಗ್ಗೆ ಒಂದು ಮಾತು ನಮ್ಮ ಕಿವಿಗೆ ಹಾಕಿ, ‘ನಿಮ್ಮನೆ ಕೂಸು ಬಿಡು, ಹೈಕ್ಲಾಸ್ ಇದ್ದು. ಅಲ್ದೇ ಮೊದಲೇ ಹುಡುಗಿಯರಿಗೆ ಬರ ಈಗ, ಯಾರರು ಫಾರಿನ್ನಗಿಪ್ಪವೇ ಹಾರ್‌ಸ್ಕ್ಯಂಡ್ ಹೋಗ್ತ ತಗ’ ಅಂತ ಹೊಗಳಿ ಹೋಗುತ್ತಿದ್ದರು. ಒಂದೇ ಇದ್ದ ಅಕ್ಕನ ಜಾತಕ ಜೆರಾಕ್ಸ್ ಮಷೀನಿನ ಗಾಜುಗಳ ನಡುವೆ ಕೂತು ಮೂವತ್ತು ಕಾಪಿಯಾಯಿತು. ಯಶವಂತ್ ಸ್ಟುಡಿಯೋದ ಹಸಿರು ಉದ್ಯಾನದ ಪೋಸ್ಟರಿನ ಮುನ್ನೆಲೆಯಲ್ಲಿ ನಿಂತ ಸೀರೆಯುಟ್ಟ ಅಕ್ಕ ಕೆಮೆರಾದ ಫ್ಲಾಶಿನಲ್ಲಿ ಬೆಳಗಿದಳು. ಒಂದು ವಾರದೊಳಗೆ ಅಕ್ಕನನ್ನು ನೋಡುವುದಕ್ಕೆ ಗಂಡಿನ ಕಡೆಯವರು ಧಾಳಿ ಇಡಲು ಶುರು ಮಾಡಿದರು. ಹುಡುಗಿಯರಿಗಿರುವ ಬೇಡಿಕೆಯ ಸಂಪೂರ್ಣ ಲಾಭ ಪಡೆದುಕೊಂಡ ಪೀಯೂಸಿ ಪಾಸಾಗಿದ್ದ ಅಕ್ಕ, ಹಳ್ಳಿಯಲ್ಲಿರುವ ಹುಡುಗ ಬೇಡವೇ ಬೇಡ ಅಂತ ಸಾರಾಸಗಟಾಗಿ ನಿರಾಕರಿಸಿಬಿಟ್ಟಿದ್ದಳು. ಆದರೆ ಆ ಕಂಡೀಶನ್ನು, ಜಾತಕ ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ವರ್ಗಾವಣೆಯಾಗುವ ನಡುವೆ ಎಲ್ಲೋ ತಪ್ಪಿಹೋಗಿಬಿಟ್ಟಿರುತ್ತಿತ್ತು. ಹೀಗಾಗಿ ಮೊದಮೊದಲು ಅಕ್ಕನನ್ನು ನೋಡಲು ಬಂದವರು ಹಳ್ಳೀಹುಡುಗರ ಪೋಷಕರೇ. ಹಳ್ಳಿಯವರಾದರೇನು ದಿಲ್ಲಿಯವರಾದರೇನು, ಹುಡುಗಿ ನೋಡಲು ಬಂದವರನ್ನು ಹಾಗೇ ಕಳಿಸಲಿಕ್ಕೆ ಬರುತ್ತದೆಯೇ? ದೂರದ ಊರಿನಿಂದ ಬಜಾಜ್ ಎಮ್‌ಎಯ್ಟಿಯಲ್ಲಿ ಧೂಳು ಹಾರಿಸುತ್ತಾ ಬಂದ ಹುಡುಗನ ಕಡೆಯವರಿಗೆ ಉಪ್ಪಿಟ್ಟು-ಕಾಫಿ ಮಾಡುವುದು ಅಮ್ಮನಿಗೆ ಅನಿವಾರ್ಯ ಕರ್ಮವಾಯಿತು. ಹಳ್ಳಿಯವರಾದರೆ, ತನ್ನ ತಂದೆಯ ಜೊತೆಗೋ ಮಾವನ ಜೊತೆಗೋ ಹುಡುಗನೇ ಬಂದುಬಿಟ್ಟಿರುತ್ತಿದ್ದ. ಆದರೆ ಹುಡುಗ ಪರ ಊರಿನಲ್ಲಿರುವವನಾದರೆ, ಮೊದಲ ಭೇಟಿಯಲ್ಲಿ ಹುಡುಗನ ತಂದೆ ಮತ್ತು ಹುಡುಗನ ಮಾವ ಅಥವಾ ಹತ್ತಿರದ ಯಾರೋ ನೆಂಟ -ನೋಡಲು ಬರುತ್ತಿದ್ದುದು. ಜಾಗತೀಕರಣದ ಪರಿಣಾಮವೋ, ಪೇಟೆಯೆಡೆಗಿನ ಆಕರ್ಷಣೆಯೋ, ಟೀವಿ-ಗೀವಿಗಳಲ್ಲಿ ನೋಡಿದ ಸಿಟಿಲೈಫಿನ ಥಳುಕುಬಳುಕಿನ ಮೋಡಿಯೋ ಅಥವಾ ತನ್ನ ಓರಗೆಯ ಹುಡುಗಿಯರ ಗಂಡಂದಿರನ್ನು ನೋಡಿದ್ದ ಪ್ರಭಾವವೋ ಏನೋ, ಈ ಹಳ್ಳಿಯ ಹುಡುಗರೆಲ್ಲ ಅಕ್ಕನಿಗೆ ಬೆಪ್ಪುತಕ್ಕಡಿಗಳಂತೆ ಕಾಣಿಸುತ್ತಿದ್ದರು. ಬೆಂಗಳೂರಿನಲ್ಲಿರುವವ, ಅಮೆರಿಕೆಗೆ ಹೋಗಿಬಂದವ, ಸಾಫ್ಟ್‌ವೇರ್ ಇಂಜಿನಿಯರು, ಓನ್ ಫ್ಲಾಟು, ಸ್ವಿಫ್ಟ್ ಕಾರು -ಇತ್ಯಾದಿ ಶಬ್ದಗಳು ಅಡುಗೆಮನೆಯಲ್ಲೋ ರೂಮಿನಲ್ಲೋ ನಿಂತು ಜಗುಲಿಯಲ್ಲಿನ ಮಾತುಗಳನ್ನು ಕದ್ದು ಕೇಳುತ್ತಿದ್ದ ಅಕ್ಕನಿಗೆ ಖುಶಿ ತರುತ್ತಿದ್ದವು. ವಿಷಯ ಎಂದರೆ- ಬಂದ ಅಭ್ಯಾಗತರೊಂದಿಗೆ ಒಳ್ಳೆಯ ಮಾತಾಡಿ ಸಂಭಾಳಿಸುವ ಸಂಕಷ್ಟಲ್ಲಿರುತ್ತಿದ್ದ ಅಪ್ಪ, ಉಪ್ಪಿಟ್ಟಿನ ರುಚಿ ಸರಿಯಾಗಿದೆಯೋ ಇಲ್ಲವೋ ಎಂಬ ಆತಂಕದಲ್ಲಿರುತ್ತಿದ್ದ ಅಮ್ಮ, ಮತ್ತೊಂದು ಹೊಸ ನಾಟಕ ಪ್ರದರ್ಶನಕ್ಕೆ ಸೀರೆಯಂತಹ ತನ್ನಿಷ್ಟದ್ದಲ್ಲದ ಉಡುಗೆ ತೊಡುತ್ತಿದ್ದ ಅಕ್ಕ -ಇವರೆಲ್ಲರ ನಡುವೆ ಈ ಸನ್ನಿವೇಷದ ನಿಜವಾದ ಮಜಾ ತೆಗೆದುಕೊಳ್ಳುತ್ತಿದ್ದುದು ನಾನು! ಈ ಹುಡುಗಿ ನೋಡಲಿಕ್ಕೆಂದು ಬಂದ ಹುಡುಗರೆಲ್ಲ ಒಂದು ತರಹದ ವಿಚಿತ್ರ ಸೋಗಿನಲ್ಲಿರುತ್ತಿದ್ದರು. ನೀಟಾಗಿ ಇಸ್ತ್ರಿ ಮಾಡಿದ ಪ್ಯಾಂಟು ಧರಿಸಿ, ಇನ್‌ಶರ್ಟ್ ಮಾಡಿಕೊಂಡು, ಫಳಫಳ ಹೊಳೆಯುವ ತೊಳೆದ ಚಪ್ಪಲಿ ಹಾಕಿಕೊಂಡು ಬಂದಿರುತ್ತಿದ್ದ ಇವರು ಟೈ ಒಂದು ಇದ್ದರೆ ಥೇಟ್ ಸೇಲ್ಸ್ ಎಕ್ಸಿಕ್ಯೂಟಿವ್ ಹಾಗೆ ಕಾಣುತ್ತಿದ್ದರು. ಇವರು ಧರಿಸಿದ ಬಿಳಿಯಂಗಿಯ ಮೇಲೆ ನಮ್ಮೂರ ರಸ್ತೆಯ ಧೂಳಿನ ಕಣಗಳು ಬಿಂದಾಸ್ ಕೂತು ರಾರಾಜಿಸುತ್ತಿದ್ದವು. ನಗೆಯೆಂಬುದು ಇವರ ತುಟಿಗಳಿಗೇ ಪೇಟೆಂಟ್ ಆಗಿಹೋಗಿರುತ್ತಿತ್ತು. ‘ನಾನೇ ಹುಡುಗಿ ಅಪ್ಪ, ಇವಳು ನಮ್ಮನೆಯವಳು, ಇಂವ ಹುಡುಗಿ ತಮ್ಮ’ ಅಂತೆಲ್ಲ ಅಪ್ಪ ಪರಿಚಯಿಸಿಕೊಡುವಾಗ ಈ ಬಕರಾ, ಅಪ್ಪ-ಅಮ್ಮರ ಜೊತೆಗೆ ನನಗೂ ‘ಹೆಹೆ, ನಮಸ್ಕಾರ’ ಅಂತ ಕೈ ಮುಗಿಯುತ್ತಿದ್ದ. ಬಹುಶಃ ನನಗಿಂತ ಹಿರಿಯವರಿಂದ ಅನೇಕ ನಮಸ್ಕಾರಗಳನ್ನು ನಾನು ಪಡೆದದ್ದೂ ಆ ದಿನಗಳಲ್ಲೇ ಇರಬೇಕು! ಅಕ್ಕ ಅಡುಗೆಮನೆಯಿಂದ ಉಪ್ಪಿಟ್ಟಿನ ತಟ್ಟೆಗಳನ್ನು ಟ್ರೇಯಲ್ಲಿಟ್ಟುಕೊಂಡು ಬರುವಾಗ ನನ್ನೀ ಭಾವೀ ಭಾವಂದಿರ ಮುಖ ನೋಡುವ ಹಾಗಿರುತ್ತಿತ್ತು. ಸಿಗುತ್ತಿದ್ದ ಆ ಎರಡ್ಮೂರು ನಿಮಿಷಗಳಲ್ಲೇ ಹುಡುಗಿಯನ್ನು ಪೂರ್ತಿಯಾಗಿ ಅಳೆದುಬಿಡುವ ಸಾಮರ್ಥ್ಯವನ್ನು ಈಗಾಗಲೇ ತಮ್ಮ ಅನುಭವದಿಂದ ಸಂಪಾದಿಸಿಕೊಂಡಿರುತ್ತಿದ್ದ ಈ ಭಾವಂದಿರು, ಅಕ್ಕ ಟ್ರೇಯಿಂದ ಉಪ್ಪಿಟ್ಟಿನ ತಟ್ಟೆಗಳನ್ನು ಟೀಪಾಯಿಯ ಮೇಲಿಟ್ಟು, ಅಮ್ಮ ಹೇಳಿದ ‘ತಗಳಿ, ನಮ್ಮನೆ ಕೂಸೇ ಮಾಡಿದ್ದು ಉಪ್ಪಿಟ್ಟು’ ಎಂಬ ಶುದ್ಧ ಸುಳ್ಳಿನ ನುಡಿಗೆ ‘ಓಹೋ?’ ಎಂದು ಮುಗುಳ್ನಕ್ಕು ತಲೆಯಾಡಿಸಿ, ತಟ್ಟೆಗೂ ಸ್ಪೂನಿಗೂ ಕೈ ಹಾಕುವ ಈ ದೃಶ್ಯ, ಎಲ್‌ಬಿಡಬ್ಲೂ ಅಪೀಲನ್ನು ಮತ್ತೆಮತ್ತೆ ತೋರಿಸುವ ಕ್ರಿಕೆಟ್ಟಿನಾಟದ ರಿಪ್ಲೇಯಂತೆ ಪ್ರತಿ ವಧುಪರೀಕ್ಷೆಯಲ್ಲೂ ಸಾಮಾನ್ಯವಾಗಿರುತ್ತಿತ್ತು. ಈ ಹುಡುಗರು ತಮ್ಮ ಮಾವ-ಅತ್ತೆಯರ -ಅದಕ್ಕೂ ಹೆಚ್ಚಾಗಿ ಅಡುಗೆಮನೆಯಲ್ಲಿ ಕೇಳಿಸಿಕೊಳ್ಳುತ್ತಲೇ ಇರಬಹುದಾದ ಹುಡುಗಿಯ- ಮನ ಗೆಲ್ಲಲೆಂದು ಅನೇಕ ಕಸರತ್ತು ನಡೆಸುತ್ತಿದ್ದರು. ತಮ್ಮ ತಂದೆ ‘ಯಮ್ಮನೆ ಮಾಣಿಗೆ ಒಂದೇ ಒಂದು ಚಟ ಇಲ್ಲೆ. ತಪ್ಪಿ ಎಲೆ-ಅಡಿಕೆ ಸಹ ಹಾಕದಿಲ್ಲೆ. ಜಾಬಲ್ಲಿ ಇಲ್ದೇ ಇದ್ರೆ ಎಂತಾತು? ಆರು ಎಕರೆ ತೋಟ ಇದ್ದು. ಮನೇಲಿ ಸಕಲ ಸೌಕರ್ಯವೂ ಇದ್ದು. ಕೈಕಾಲಿಗೆ ಆಳು ಇದ್ದ. ಪ್ಯಾಟೆ ಮನೇಲಿ ಇದ್ದಂಗೇ ಆರಾಮಾಗಿ ಇರ್ಲಕ್ಕು ನಿಮ್ಮನೆ ಕೂಸು’ ಅಂತೆಲ್ಲ ಹೇಳುವಾಗ, ಅದಾಗಲೇ ನನ್ನಕ್ಕನ ಸೌಂದರ್ಯಕ್ಕೆ ಮರುಳಾಗಿರುತ್ತಿದ್ದ ಈ ಭಾವಿ ಭಾವ ಪ್ರತಿಯೊಂದಕ್ಕೂ ತಲೆಯಾಡಿಸುತ್ತಿದ್ದ. ಎಲ್ಲಾ ಮುಗಿದು, ‘ಸರಿ. ಹುಡುಗ-ಹುಡುಗಿ ನೋಡಿ ಆತು. ಇನ್ನು ನಿಂಗ್ಳ ನಿರ್ಧಾರ ಲಘೂ ತಿಳಿಸಿ’ ಅಂತ ಹೇಳಿ, ನಿರ್ಣಯವನ್ನು ಥರ್ಡ್ ಅಂಪೇರಿಗೆ ವರ್ಗಾಯಿಸಿ ಅವರು ಜಾಗ ಖಾಲಿ ಮಾಡುತ್ತಿದ್ದರು. ಅವರಿಗೂ ಗೊತ್ತಿತ್ತು: ಇಲ್ಲಿ ಆಟಗಾರಳೇ ಥರ್ಡ್ ಅಂಪೇರೂ! ಅವಳದೇ ಕೊನೆಯ ನಿರ್ಧಾರ! ಹುಡುಗ ಔಟೋ ನಾಟೌಟೋ ಎಂದು ತೀರ್ಮಾನಿಸುವ ಸಿಗ್ನಲ್ಲಿನ ಸ್ವಿಚ್ಚು ಅಕ್ಕನ ಕೈಯಲ್ಲೇ ಇರುತ್ತಿತ್ತು. ಅವರು ಅತ್ತ ಹೋದಮೇಲೆ ಅಕ್ಕ ಆ ಹುಡುಗ ಹೇಗೆ ಬೆಪ್ಪನಂತಿದ್ದನೆಂದು ನನ್ನ ಮತ್ತು ಅಮ್ಮನ ಬಳಿ ಹೇಳಿಕೊಂಡು ಹೊಟ್ಟೆ ಹಿಡಿದುಕೊಂಡು ನಗುತ್ತಿದ್ದಳು. ಮಿಕ್ಕಿರುತ್ತಿದ್ದ ಉಪ್ಪಿಟ್ಟು ತಿನ್ನುತ್ತಾ ನಾನು, ಈ ಭಾವನೂ ಔಟ್ ಆದುದಕ್ಕೆ, ಆತನ ಪ್ರದರ್ಶನವೆಲ್ಲ ವೇಸ್ಟ್ ಆದುದಕ್ಕೆ ಅಯ್ಯೋ ಪಾಪ ಎಂದುಕೊಳ್ಳುತ್ತಿದ್ದೆ. ಅಮ್ಮ-ಅಪ್ಪಂದಿರು ಮಾತ್ರ, ಅಕ್ಕನಿಗೆ ಅದ್ಯಾವತ್ತು ಬುದ್ಧಿ ಬರುತ್ತದೋ, ಯಾವಾಗ ಗ್ರೀನ್ ಸಿಗ್ನಲ್ಲು ಕೊಡುತ್ತಾಳೋ ಎಂಬ ಚಿಂತೆಯಲ್ಲಿ ಕಾಫಿ ಕುಡಿಯುತ್ತಿದ್ದರು. ಅಕ್ಕ ಕೊನೆಗೂ ಒಪ್ಪಿದ್ದು ಬೆಂಗಳೂರಿನ ಸಾಫ್ಟ್‌ವೇರ್ ಮಾಣಿಯನ್ನೇ. ಅಕ್ಕನನ್ನು ನೋಡಲು ಟೀಶರ್ಟ್ ಧರಿಸಿ ಪ್ಲೇಬಾಯ್ ಥರ ಬಂದಿದ್ದ ಈ ಹೊಸ ಭಾವ ಮೊದಲು ಸಂಪಾದಿಸಿದ್ದು ನನ್ನ ಗೆಳೆತನ! ಇವನ ಅಪ್ಪ ನನ್ನ ಅಪ್ಪನೊಂದಿಗೆ ಹುಡುಗನ ಗುಣಗಾನದಲ್ಲಿ ತೊಡಗಿದ್ದಾಗ ಅಲ್ಲಿಂದ ಮೆಲ್ಲನೆದ್ದುಬಂದ ಇವನು, ನನ್ನನ್ನು ಹೊರಕಟ್ಟೆಗೆ ಕರೆದೊಯ್ದು ‘ಯಾವ ಕಾಲೇಜು, ಏನು ಓದ್ತಿದೀ, ಮುಂದೇನು ಮಾಡಬೇಕು ಅಂತಿದೀಯಾ, ಜೂನಿಯರ್ ಕಾಲೇಜಿನಲ್ಲಿ ಈಗಲೂ ಆ ಲೆಕ್ಚರರ್ ಇದಾರಾ’ ಅಂತೆಲ್ಲ ಕೇಳಿ ಮೊದಲ ವಿಕೆಟ್ಟು ಗಳಿಸಿಬಿಟ್ಟ. ಅಪ್ಪ-ಅಮ್ಮಂದಿರಂತೂ ಇವರು ನೋಡಲು ಬರುತ್ತಿರುವ ಸುದ್ದಿ ಕೇಳಿಯೇ ಆಸ್ಟ್ರೇಲಿಯಾ ಎದುರಿನ ಕೀನ್ಯಾ ಆಟಗಾರರಂತೆ ಮೊದಲೇ ಶರಣಾಗಿಹೋಗಿದ್ದರು. ಇನ್ನು ಥರ್ಡ್ ಅಂಪೇರ್ ಡಿಸಿಷನ್ ಒಂದೇ ಪೆಂಡಿಂಗ್ ಇದ್ದುದು. ಕನ್ನಡಕದ ಭಾವ, ನಾವೆಲ್ಲ ನಿಬ್ಬೆರಗಾಗುವಂತೆ ಅಕ್ಕನನ್ನೂ ಹೊರಕಟ್ಟೆಗೆ ಕರೆದೊಯ್ದು ಅದೇನೇನೋ ಮಾತಾಡಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು, ಆಟ ಮುಗಿಸಿಯೇಬಿಟ್ಟ! ಧಾಮ್‌ಧೂಮ್ ಎಂದು ಮುಗಿದುಹೋದ ಮದುವೆಯ ನಂತರ ಈ ಹೊಸ ಭಾವ ನಮ್ಮ ಮನೆ ಅಳಿಯನಾಗಲು, ಎಲ್ಲರೊಂದಿಗೆ ಹೊಂದಿಕೊಳ್ಳಲು ಸ್ವಲ್ಪ ಕಾಲವೇ ಹಿಡಿಯಿತು. ಮೂಲ ಹಳ್ಳಿಯವನೇ ಆದರೂ ಅದಾಗಲೇ ಬೆಂಗಳೂರಿನ ಗತ್ತುಗಳನ್ನು ಮೈಮೇಲೆ ಹಾಕಿಕೊಂಡಿದ್ದ ಭಾವ, ನಮ್ಮ ಮನೆಯ ಗಾರೆ ನೆಲ, ಕತ್ತಲೆಯ ನಡುಮನೆ, ಬೋಲ್ಟು ಕೂರದ ಬೆಡ್‌ರೂಮಿನ ಬಾಗಿಲು, ಜಾರುವ ಬಚ್ಚಲುಕಲ್ಲು, ಸುಳಿದಾಡುವ ನೆಂಟರ ನಡುವೆ ನುಣುಚಿಕೊಳ್ಳುವ ಹೆಂಡತಿ -ಇವುಗಳೊಂದಿಗೆ ಹೇಳಿಕೊಳ್ಳಲಾಗದ ಅಸಮಾಧಾನ ಅನುಭವಿಸುತ್ತಾ ಕಷ್ಟ ಪಡುತ್ತಿದ್ದುದು ನನಗೆ ಅರ್ಥವಾಗುತ್ತಿತ್ತು. ನಮಗೂ ಈ ಹೊಸ ಅಳಿಯದೇವನನ್ನು, ಬೀಗರನ್ನು, ಅವರ ಕಡೆಯ ನೆಂಟರನ್ನು ಸಂಭಾಳಿಸುವ, ಅವರಿಗೆ ಅಭಾಸವಾಗದಂತೆ ನಡೆದುಕೊಳ್ಳುವ ಕಷ್ಟ ಇತ್ತು. ಮಧ್ಯಾಹ್ನದ ಊಟದ ನಂತರ ‘ಸುಸ್ತಾಗಿದ್ದರೆ ರೂಮಿಗೆ ಹೋಗಿ ಮಲಗಿ’ ಅಂತ ಅಪ್ಪ ಕೇಳಿದರೆ, ಅದೆಷ್ಟೇ ನೇರ ನಡೆಯವನಾದರೂ ಭಾವ ‘ಅಯ್ಯೋ, ಎಂಥಾ ಸುಸ್ತೂ ಇಲ್ಲೆ’ ಅಂತ, ಜಗುಲಿಯ ಕಂಬಳಿಯ ಮೇಲೇ ಕೂತು ತೂಕಡಿಸುತ್ತಿದ್ದ. ಅಂತೂ ಭಾವ ದಿನ ಕಳೆದಂತೆ, ಹಬ್ಬಗಳಿಗೆ ಬಂದು-ಹೋಗಿ ಮಾಡುತ್ತ, ಫೋನಿನಲ್ಲಿ ಮಾತಾಡುತ್ತಾ ಹಳಬನಾದ. ಅವನ ಬೆಂಗಳೂರಿನ ಮನೆಗೆ ಹೋಗಿದ್ದಾಗ ನಮ್ಮ ಮನೆಯಲ್ಲಿ ಆತ ಅನುಭವಿಸಿದ್ದ ಧರ್ಮಸಂಕಟಗಳನ್ನೆಲ್ಲ ನಾವು ಇಲ್ಲಿ ಅನುಭವಿಸಿದೆವು. ಸರಳತೆಗೆ ಹೊಂದಿಕೊಳ್ಳುವುದಕ್ಕಿಂತ ಆಡಂಬರಕ್ಕೆ ಹೊಂದಿಕೊಳ್ಳುವ ಕಷ್ಟ ದೊಡ್ಡದು ಅಂತ ಅರಿತುಕೊಂಡೆವು. ಓದು ಮುಗಿಸುವ, ಕೆಲಸ ಹುಡುಕುವ, ನಗರದಲ್ಲಿ ಸೆಟಲ್ ಆಗುವ ಜರೂರಿನಲ್ಲಿ ಮುಳುಗಿಹೋಗಿದ್ದ ನನಗೆ ಇವೆಲ್ಲ ನೆನಪಾದದ್ದು, ‘ಇಪ್ಪತ್ತೇಳು ವರ್ಷ ಆತು ನಿಂಗೆ. ಮನೆಗೆ ಸುಮಾರೆಲ್ಲ ಜಾತಕ ಬೈಂದು. ನಿನ್ನೆ ಬಂದಿದ್ದೋರು ಹೇಳಿದ, ಕೂಸಿಗೆ ಕಾನಸೂರು ಆತಡ. ಬೆಂಗಳೂರಲ್ಲೇ ಯಾವುದೋ ಕಂಪನೀಲಿ ಕೆಲಸ ಮಾಡ್ತಡ. ಮೊಬೈಲ್ ನಂಬರ್ ಕೊಡಸ್ತಿ. ಮೊದಲು ನಿಂಗನೇ ಎಲ್ಲಾದ್ರೂ ಮೀಟ್ ಆಗಿ ಮಾತಾಡಿ. ನಿಮಗೆ ಪರಸ್ಪರ ಒಪ್ಪಿಗೆ ಆತು ಅಂದ್ರೆ ನಾವು ಮುಂದುವರಿತ್ಯ. ಅಡ್ಡಿಲ್ಯಾ?’ ಅಂತ ಅಪ್ಪ ಫೋನ್ ಮಾಡಿ ಕೇಳಿದಾಗ. ಅಪ್ಪ ಕೊಟ್ಟ ನಂಬರಿಗೆ ಫೋನ್ ಮಾಡಿದೆ. ಕಾಫಿ ಡೇಯ ಕುರ್ಚಿಯಲ್ಲಿ ವಿಕೆಟ್ಟು ಉದುರಿತು. ನಿಶ್ಚಿತಾರ್ಥದ ದಿನ ಅವರ ಮನೆಗೆ ಹೋದಾಗ, ಈಗಾಗಲೇ ಫೇಸ್‌ಬುಕ್ಕಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿ ಪರಿಚಯವಾಗಿಹೋಗಿದ್ದ ಆಕೆಯ ಭೇಷ್ ತಮ್ಮ ಸಂಪತ್, ಬಿಳೀ ಜುಬ್ಬಾ ಧರಿಸಿ ‘ಇವನೇನಾ ಹೊಸ ಭಾವ?’ ಎಂಬಂತೆ ನನ್ನನ್ನು ನೋಡುತ್ತಿದ್ದ. ಇವನಿಗೊಂದು ಡೈರಿಮಿಲ್ಕ್ ಹಿಡಿದುಕೊಂಡು ಬರಬೇಕಿತ್ತು ಅಂತ ಅನಿಸಿತಾದರೂ ಈಗಾಗಲೇ ಬುಟ್ಟಿಗೆ ಬಿದ್ದವನಿಗೆ ಕಾಳು ಹಾಕುವುದ್ಯಾಕೆ ಅಂತ ಸುಮ್ಮನಾದೆ. ಆದರೆ, ಹುಡುಗಿಗೆ ಉಂಗುರ ತೊಡಿಸುವಾಗ ‘ಅವತ್ತು ನೋಡಿದ ಕೂಸು ಇವಳೇ ಸೈಯಾ ಕರೆಕ್ಟಾಗಿ ನೋಡಿಕೊಳ್ಳೋ. ಒಂದೇ ಸಲ ನೋಡಿದ್ದು, ಮರೆತು ಹೋಗಿರ್ತು’ ಅಂತ ಮಾವನ ಕಡೆಯವರ್ಯಾರೋ ಕಿಚಾಯಿಸುವಾಗ, ನಮ್ಮ ಮನೆಗಳಿಗೆ ತಿಳಿಸದಂತೆ ಲಾಲ್‌ಭಾಗ್, ಫೋರಮ್ ಮಾಲ್, ನಂದಿಬೆಟ್ಟ ಅಂತೆಲ್ಲ ಸುತ್ತಿದ್ದ ನಮ್ಮ ಜಂಟಿ ಫೋಟೋಗಳನ್ನು ಅಲ್ಬಮ್ಮಿನಲ್ಲಿ ನೋಡಿಬಿಟ್ಟಿರಬಹುದಾದ ಸಂಪತ್, ಅದನ್ನು ಈಗ ಬಾಯಿಬಿಡದಿರಲಪ್ಪಾ ಅಂತ ನಾನು ಪ್ರಾರ್ಥಿಸುತ್ತಿದ್ದೆ. ಹೊಸ ಭಾವನ ತಳಮಳ ಸಂಪೂರ್ಣ ಅರ್ಥವಾದವನಂತೆ, ಅವನು ಮುಗುಳ್ನಕ್ಕ. ನಾನು ಕಣ್ಣು ಹೊಡೆದೆ. ಸುಳ್ಳೇ ಸಂಕೋಚವನ್ನು ಆವಾಹಿಸಿಕೊಂಡು, ಹೊಸಬನಂತೆ ನಟಿಸುವ ಪ್ರಯತ್ನ ಮಾಡಿದೆ. ಉಪ್ಪಿಟ್ಟಿನ ಘಮ ಅಡುಗೆಮನೆಯಿಂದ ತೇಲಿಬರುತ್ತಿತ್ತು.]]>

‍ಲೇಖಕರು G

February 15, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

7 ಪ್ರತಿಕ್ರಿಯೆಗಳು

 1. anupavanje

  ಸರಳತೆಗೆ ಹೊಂದಿಕೊಳ್ಳುವುದಕ್ಕಿಂತ ಆಡಂಬರಕ್ಕೆ ಹೊಂದಿಕೊಳ್ಳುವ ಕಷ್ಟ ದೊಡ್ಡದು…………ಎಷ್ಟು ಸತ್ಯ..!

  ಪ್ರತಿಕ್ರಿಯೆ
 2. Sathya

  ellarigoo jeevanada aa hantadalli aaguva anubhavavannu tumba sundaravagi niroopisiddeeri. bareetha iri

  ಪ್ರತಿಕ್ರಿಯೆ
 3. lalitha siddabasavaiah

  ಸುಶೃತ , ನಿಜವಾಗ್ಲೂ ಈ ಹೆಣ್ಣು ತೋರಿಸುವ , ಹೆಣ್ಣು ನೋಡುವ
  ದೊಡ್ದ ಸಂಕಷ್ಟದಿಂದ ಪಾರಾದವರು ನಿಮ್ಮಪ್ಪ ಅಮ್ಮ ಕಣ್ರಿ.ಮೊನ್ನೆ ನನ್ನ ಗೆಳತಿ ಹೇಳಿದಳು ” ನೋಡೇ ಇವೊತ್ತಿಗೆ ೫೪ ಕೇಜಿ ಆಯ್ತು
  ನಾನು ರವೆ ಬೇಯಿಸಿದ್ದು, ಇನ್ನೂ ಒಬ್ಬಳದ್ದೂ ಸೆಟ್ಲಾಗಲಿಲ್ಲ !!” ಅವಳಿಗೆ ಮದುವೆಗೆ ಬಂದ ಇಬ್ಬರು ಹುಡುಗಿಯರಿದ್ದಾರೆ. ರವೆಯೇ ಈ ಪಾಟಿ ಬೆಂದಿರಬೇಕಾದರೆ ಮಾರಾಯ್ತಿ ಪಾತ್ರೆ ಉಜ್ಜಿದ್ದು ಇನ್ನು ಎಷ್ಟಾಗಿರಬೇಡ , ಅವಳ ಭುಜದ ಮೂಳೆ ಸವೆಯದೆ ಉಳಿದಿದ್ದರೆ ಅದೇ ಪವಾಡ!! ನಮ್ಮ ಕಾಲದಲ್ಲಿ ಅಂತ ಅಜ್ಜಿಕಥೆ ಶುರು ಮಾಡೊಲ್ಲ… ಒಟ್ಟಿನಲ್ಲಿ ಯಾವ ಕಾಲದಲ್ಲಾದ್ರೂ ಅಥವಾ ದೇಶದಲ್ಲಾದ್ರೂ ಮದುವೆ ಅನ್ನೋದು ಸುಲಭದಲ್ಲಾಗೋದು ಆಕಸ್ಮಿಕವೆ ಇರಬೇಕು. ಈಗ ಮಧ್ಯಮ ವರ್ಗದ ಮನೆಗಳಲ್ಲಿ ನಡೆಯುತ್ತಿರುವ ಪ್ರಹಸನವನ್ನೆ ಚೆನ್ನಾಗಿ ಬರೆದಿದ್ದೀರಿ.ವಿಷಾದದ ಖುಷಿಯಾಯ್ತು.

  ಪ್ರತಿಕ್ರಿಯೆ
 4. apppaaji

  ಅವರೆ ಕಾಳು ಉಪ್ಪಿಟ್ಟಿನಹಾಗೆ ಘಮಘಮಾಡಿಸುತ್ತಿದೆ ನಿಮ್ಮ ಬರಹ. ಅಭಿನಂದನೆಗಳು-ಅಪ್ಪಾಜಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: