ಹೊಸ ಹೊತ್ತಗೆಮನೆ ” ಮುನ್ನುಡಿ”

ಹೊಸ ಹೊತ್ತಗೆಮನೆ ” ಮುನ್ನುಡಿ” – ಕನ್ನಡಕ್ಕೊಂದು ಮರು ಪರಿಚಯ!

ಏನ್ ಗುರು… ಕಾಫ಼ೀ ಆಯ್ತಾ?

 

ಬೆಂಗಳೂರಿನ ಬಸವನಗುಡಿಗೆ ಖಳೆ ತರೋಕೆ ಅಂತಾನೆ ಇಲ್ಲೊಂದು ಹೊಸ ಅಂಗಡಿ ಶುರುವಾಗಿದೆ. ಇಡೀ ಕನ್ನಡನಾಡಿನಲ್ಲೇ ಮೊಟ್ಟಮೊದಲ ಬಾರಿಗೆ ಒಂದು ಕನ್ನಡದ ಹೈಟೆಕ್ ಹೊತ್ತಗೆಮನೆಯನ್ನು ಶುರುಮಾಡಿದಾರೆ! ಸಂಪೂರ್ಣ ಹವಾನಿಯಂತ್ರಿತ ಕಟ್ಟಡದಲ್ಲಿ ಅಚ್ಚುಕಟ್ಟಾಗಿ ಜೋಡಿಸಿರುವ ಹೊತ್ತಗೆಗಳನ್ನು ಕಂಡಾಗ ಯಾವುದೋ ಅಂತರರಾಷ್ಟ್ರೀಯ ಲೈಬ್ರರಿಯನ್ನು ಹೊಕ್ಕಂತಾಗುತ್ತದೆ… “ಮುನ್ನುಡಿ” ಎಂಬ ಹೆಸರಿನ ಈ ಹೊತ್ತಗೆಮನೆಯ ಹೆಸರಿನ ಮುಂದೆ “ಕನ್ನಡಕ್ಕೊಂದು ಮರು-ಪರಿಚಯ” ಎಂದು ಬರೆಯಲಾಗಿದೆ. ಎಲ್ಲಿದೆ ಈ ಮಳಿಗೆ? ಏನಿದೆ ಇದರಲ್ಲಿ? ಇದರಲ್ಲಿ ಏನೇನು ಸವಲತ್ತುಗಳಿವೆ? ನೋಡೋಣ… ಬನ್ನಿ!

ಹೊಸಬಗೆಯ ಗ್ರಂಥಾಲಯ ಏರ್ಪಾಟಿಗಿದು ಮುನ್ನುಡಿ!

ಈ ಮಳಿಗೆಯಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರ ಅಭಿರುಚಿಗೆ ತಕ್ಕಂತ ನೂರಾರು ಹೊತ್ತಗೆಗಳಿವೆ. ಚಂದನೆಯ ಕಟ್ಟು ಹಾಕಲ್ಪಟ್ಟ ಈ ಹೊತ್ತಗೆಗಳನ್ನು ಕೈಯ್ಯಲ್ಲಿ ಹಿಡಿಯಲೇ ಖುಶಿಯಾಗುವಂತೆ ಇಟ್ಟುಕೊಂಡಿದ್ದಾರೆ. ನೂರುರೂಪಾಯಿ ಮರುಪಾವತಿಸಬಹುದಾದ ಠೇವಣಿಯ ಜೊತೆ, ನೋಂದಣಿ ಶುಲ್ಕ ನೂರು ರೂಪಾಯಿ ಮತ್ತು ಆರಿಸಿಕೊಂಡ ಯೋಜನೆಯ ಶುಲ್ಕವನ್ನು ಕಟ್ಟಿ ಚಂದಾದಾರರಾಗಿಬಿಟ್ಟರೆ ಸಾಕು… ಈ ಎಲ್ಲಾ ಹೊತ್ತಗೆಗಳೂ ನಮ್ಮ ಬೆರಳತುದಿಗೇ ಸೋಕಿಬಿಡುತ್ತವೆ! ತಿಂಗಳ, ಅರ್ಧವರ್ಶದ, ಒಂದುವರ್ಶದ ಶುಲ್ಕವನ್ನು ಕಟ್ಟಬೇಕು. ನಮಗೆ ಒಟ್ಟಿಗೆ ಎಷ್ಟು ಹೊತ್ತಗೆಗಳು ಬೇಕು ಎನ್ನುವುದರ ಮೇಲೆ ಬೇರೆ ಬೇರೆ ಯೋಜನೆಗಳನ್ನು ಆರಿಸಿಕೊಳ್ಳಬಹುದು.

ಬೇಕಿರೋ ಹೊತ್ತಗೆ ಮನೆಬಾಗಿಲಿಗೇ!

ನೋಂದಣಿ ಅರ್ಜಿಯನ್ನು ಕನ್ನಡದಲ್ಲೇ ಮಾಡ್ಸಿದಾರೆ. ಇಲ್ಲಿ ಒಮ್ಮೆ ನೋಂದಣಿ ಪಡೆದುಕೊಂಡಮೇಲೆ ಬೇಕಾದ ಹೊತ್ತಗೆಯನ್ನು ಆರಿಸಿಕೊಂಡು ಮನೆಗೆ ತರಬಹುದು. ಅದೂ ನಾವಾಗೆ ಅಲ್ಲಿರುವ ಕಂಪ್ಯುಟರ್‌‍ನ ಮುಂದೆ ನಮ್ಮ ನೋಂದಣಿ ಚೀಟಿ ಮತ್ತು ಆರಿಸಿಕೊಂಡಿರುವ ಹೊತ್ತಗೆಯನ್ನು ಹಿಡಿದರೆ ಆಯ್ತು. ತಾನೇ ತಾನಾಗಿ ವಿವರಗಳನ್ನು ಬರೆದುಕೊಂಡುಬಿಡುತ್ತೆ. ಅಷ್ಟಾದರೆ ಮುಗೀತು. ಪುಸ್ತಕ ತೊಗೊಂಡು ಮನೆಗೆ ಬಂದುಬಿಡ್ಬೋದು! ಇನ್ನು ವಾರ್ಶಿಕ ಚಂದಾದಾರರಾದರಂತೂ ಬೇಕಾದ ಹೊತ್ತಗೆಯನ್ನು ಮನೇಲಿ ಕುಳಿತೇ ಆರಿಸಿಕೊಳ್ಳಬಹುದು! ಹಾಗೆ ಆರಿಸಿಕೊಂಡ ಹೊತ್ತಗೆಯನ್ನು ಮನೆಬಾಗಿಲಿಗೇ ತಲುಪಿಸುತ್ತಾರೆ. ನೀವು ಹೊತ್ತಗೆಯನ್ನು ಓದಿ ಮುಗಿಸೋ ತನಕ ನಿಮ್ಮ ಬಳಿಯಲ್ಲೇ ಇಟ್ಟುಕೊಂಡಿರಬಹುದು. ತಡವಾಗಿ ಹಿಂತಿರುಗಿಸಿದ್ದಕ್ಕೆ ದಂಡ ಗಿಂಡಾ ಏನಿರಲ್ಲಾ!! ಹಾಳು ಮಾಡಿದರೆ ಮಾತ್ರಾ ನಷ್ಟ ತುಂಬಿಕೊಡಬೇಕಾಗುತ್ತೆ!

ಈ ಹೊತ್ತಗೆಮನೆಯು ಸ್ಟ್ರಾಟಾ ರೀಟೇಲ್ ಎನ್ನುವ ಸಂಸ್ಥೆಯ ಒಂದು ಮುಂದಾಳ್ತನದಲ್ಲಿ ಆರಂಭವಾಗಿರುವ ಯೋಜನೆ. ಇಂಥದ್ದೇ ಇಂಗ್ಲೀಶ್ ಹೊತ್ತಗೆಗಳ ೬೨ ಮಳಿಗೆಗಳನ್ನು ಭಾರತದಾದ್ಯಂತ ಹೊಂದಿರುವ ಇವರು ಬೆಂಗಳೂರೊಂದರಲ್ಲೇ ೩೨ ಮಳಿಗೆಗಳನ್ನು ಹೊಂದಿದ್ದಾರೆ. ಕನ್ನಡದ ಹೊತ್ತಗೆಮನೆಗೆ ಇರುವ ಬೇಡಿಕೆಯನ್ನು ಗಮನಿಸಿ ಕನ್ನಡದ್ದೇ ಹೊತ್ತಗೆಗಳನ್ನು ಪೂರೈಸುವ “ಮುನ್ನುಡಿ”ಯನ್ನು ಆರಂಭಿಸಿ ಹೊಸದೊಂದು ಆರಂಭಕ್ಕೆ ಮುನ್ನುಡಿ ಬರೆದಿದ್ದಾರೆ. ಬಸವನಗುಡಿಯಲ್ಲಿ ಮೊದಲನೇ ಮಳಿಗೆಯನ್ನು ತೆರೆದಿರುವ ಇವರಿಗೆ ಬೆಂಗಳೂರಿನ ಎಲ್ಲಾ ಬಡಾವಣೆಗಳಲ್ಲೂ ಶಾಖೆಗಳನ್ನು ಆರಂಭಿಸುವ ಉದ್ದೇಶವಿದೆ. ಸದ್ಯದಲ್ಲೇ ವಿಜಯನಗರದಲ್ಲೂ ಶುರು ಮಾಡ್ತಾರಂತೆ! ತಿಂಗಳೊಪ್ಪತ್ತಿನಲ್ಲಿ ಇದರ ಮಿಂಬಲೆತಾಣವೂ ಶುರುವಾಗಲಿದೆಯಂತೆ…

ಎಲ್ಲಿದೆ ಮುನ್ನುಡಿ?

ಬಸವನಗುಡಿಯಲ್ಲಿ ಕೃಷ್ಣರಾವ್ ಉದ್ಯಾನವನವಿದೆಯಲ್ಲಾ, ಅದರ ದಕ್ಷಿಣದ ಗೇಟಿನ ಎದುರು ಯಡಿಯೂರು ಕೆರೆ ಕಡೆಗೆ ಹೋಗುವ ಒಂದು ರಸ್ತೆ ಇದೆ. ಈ ರಸ್ತೆಗೆ ದಿವಾನ್ ಮಾಧವರಾವ್ ರಸ್ತೆ ಅಂತಾರೆ. ಇಲ್ಲಿ ಎಡಕ್ಕೆ ಎರಡನೇದೋ ಮೂರನೇದೋ ಕಟ್ಟಡದಲ್ಲಿ ಮುನ್ನುಡಿ ಇದೆ.

ಇದರ ವಿಳಾಸ ಹೀಗಿದೆ:

ಮುನ್ನುಡಿ ಗ್ರಂಥಾಲಯ,

ನೆಲಮಹಡಿ, ನಂ ೩/೩-೧, ದಿವಾನ್ ಮಾಧವರಾವ್ ರಸ್ತೆ,

ಸೌತ್ ಕ್ರಾಸ್ ರಸ್ತೆ, ಬಸವನಗುಡಿ,

ಬೆಂಗಳೂರು – ೫೬೦ ೦೦೪ ದೂರವಾಣಿ :೦೮೦ – ೪೦೯೩೭೭೯೩.

ಕನ್ನಡ ಹೊತ್ತಗೆಮನೆಯ ಕ್ಷೇತ್ರಕ್ಕೆ ಹೊಸತನದ ತಂಗಾಳಿಯಂತಿರುವ ಮುನ್ನುಡಿಗೆ ನಮ್ಮ ಅಭಿನಂದನೆಗಳು. ಇನ್ನೂ ಏನ್ ಯೋಚುಸ್ತಿದೀರಾ ಗುರೂ? ಬೇಗ ಹೋಗಿ ಸದಸ್ಯತ್ವ ಪಡೆದುಕೊಳ್ಳಿ (ಸೋಮವಾರ ರಜೆ). ಹೊಸಪ್ರಯತ್ನಾನ ಮೆಚ್ಚಿ ಪ್ರೋತ್ಸಾಹಿಸೋದ್ರು ಜೊತೆಗೆ ಹೈಟೆಕ್ ಕನ್ನಡದ ಹೊತ್ತಗೆಮನೆಯ ಮಜಾ ಸವಿಯಿರಿ!

‍ಲೇಖಕರು G

April 8, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

 1. Gopal Wajapeyi

  ಅಬ್ಬಾ…! ನಿಜಕ್ಕೂ ರೋಮಾಂಚನಗೊಳಿಸುವ ಹೆಸರು… ಅಭಿರುಚಿಯ ವರ್ಧನೆಗೆ, ಪೋಷಣೆಗೆ, ನಮ್ಮೆಲ್ಲ ‘ಮುನ್ನಡೆ’ಗೆ ಇದು ನಿಜವಾದ ‘ಮುನ್ನುಡಿ’ಯಾಗಲಿ.

  ಪ್ರತಿಕ್ರಿಯೆ
 2. D.RAVI VARMA

  ತುಂಬಾ ಅರ್ಥಪೂರ್ಣವಾದ ಕೆಲಸ,ಒಮ್ಮೊಮ್ಮೆ ಬೇಕಾದ ಕೆಲವು ಪುಸ್ತಿಕೆಗಳಿಗಾಗಿ ಪರದಾಟ ಕಡಿಮೆಯಾದಿತು,ಇದು ಕುಶಿಕೊಡುವ ಕೆಲಸ. ಶುಭಾಶಯಗಳು .
  Ravi varma hosapete

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: