’ಹೋಗು ದಕ್ಷನ ಮಗಳೇ'

ಈಕೆ ‘ಸುರಗಿ’- ಮಳೆ, ನದಿ, ಕಾಡು, ಬೆಟ್ಟಗುಡ್ಡ, ಸಮುದ್ರ, ನೀಲಾಕಾಶದ ಬಗ್ಗೆ ಹಿಮಾಲಯದಷ್ಟೇ ವಿಸ್ಮಯ. ನನ್ನ ಹಳ್ಳಿ ನನ್ನ ಸ್ಥಾಯಿ ಭಾವ. ಚಿತ್ತಭಿತ್ತಿಯಲ್ಲಿ ಹರಡಿರುವ ಲ್ಯಾಂಡ್ ಸ್ಕೇಪ್- ಎಂದು ತನ್ನನ್ನು ಪರಿಚಯಿಸಿಕೊಳ್ಳುವ ಇವರ ಬ್ಲಾಗ್ ‘ಮೌನ ಕಣಿವೆ’. ಫ್ರೆಶ್ ಫ್ರೆಶ್ ಬರಹಗಳ ಮೊತ್ತ. ಕಡಲ ಕಿನಾರೆಯ ರುದ್ರಪಾದೆಯಲ್ಲಿ ಮಂಡಿಗೆ ಗಲ್ಲ ಹಚ್ಚಿ ಏನನ್ನೂ ಮನಸ್ಸಿನೊಳಗೆ ಕಟ್ಟಿಕೊಳ್ಳಬಲ್ಲೆ. ಹಾಗೆ ಕಟ್ಟಿಕೊಂಡದ್ದನ್ನು ಬ್ಲಾಗ್ ಗೆ ಇಳಿಸಬಲ್ಲೆ ಎಂಬ ಉತ್ಸಾಹ ಇರುವವರು. ಅವರ ಬರಹದ ರುಚಿ ನೋಡಲೆಂದು ಇಲ್ಲಿದೆ- ಹೋಗು ದಕ್ಷನ ಮಗಳೇ…

ಅವಳ ಹೆಸರು ದಾಕ್ಷಾಯಿಣಿ.ತನ್ನ ಹೆಸರಿನ ಬಗ್ಗೆ ಅವಳಿಗೆ ವಿಪರಿತ ಮೋಹ ತನ್ನನು ಪರಿಚಯಿಸಿಕೊಳ್ಳುವಾಗಲೆಲ್ಲ ಹೆಚ್.ಎಸ್.ಶಿವಪ್ರಕಾಶ್ ಅವರ ’ಹೋಗು ದಕ್ಷನ ಮಗಳೇನೀನು ತಿರುಗಿ ಬರುವೆ ಅಂತ ಕರಗದೆ ಕಾಯುತ್ತವೆ ಈ ನೂರು ಮಂಜಿನ ಬೆಟ್ಟ ಅಲ್ಲಿ ಕೊರೆವ ಗವಿ ಕತ್ತಲಿನಲ್ಲಿ ಅರಳುತ್ತಲೇ ಇರುತ್ತವೆ ನೀಲಿ ಮಂಜು ತಾವರೆಹೋಗು ದಕ್ಷನ ಮಗಳೆಕೈಯ ಕೊಳ್ಳಿ ಮಾದಿಜೀವದೆಣ್ಣೆ ಬತ್ತಿ ದೀಪಗಳಉರಿಸುತ್ತ ಕಣ್ಣಲ್ಲಿ ಸುತ್ತ ನಿನ್ನ ಬರವಿನ ಹಗಲು ಇರುಳಿನ ಗೆಜ್ಜೆಯುಲಿವಿಗೆ ಹೆಜ್ಜೆಗಳನಿಕ್ಕುತ್ತ……’ಎಂದು ಏರು ಧ್ವನಿಯಲ್ಲಿ ಅಭಿನಯಿಸಿ ಹೇಳುತ್ತಿದ್ದಳು. ಎದುರಿಗಿದ್ದವರು ಒಂಥರ ಖುಶಿಯಾಗಿ ಬಹುಬೇಗನೆ ಆಪ್ತರಾಗಿಬಿಡುತ್ತಿದ್ದರು.
ಸದಾ ಜೀವಂತಿಕೆಯ ಖನಿ ಅವಳು.ರಾತ್ರಿ ಎಷ್ಟೇ ಹೊತ್ತಿಗೆ ಮಲಗಿದರೂ ಬೆಳಿಗ್ಗೆ ಕರಾರುವಕ್ಕಾಗಿ ಐದು ಗಂಟೆಗೆ ಎದ್ದುಬಿಡುತ್ತಾಳೆ. ಐದೂವರೆಗೆ ಶೂ ಹಾಕಿ ಬ್ರಿಕ್ ವಾಕ್ ಹೊದ್ರೆ ಐದುಮುಕ್ಕಲಿಗೆ ಯೋಗ ಕ್ಲಾಸ್ ಬಾಗಿಲಲ್ಲಿ ಹಾಜರು. ಮುಕ್ಕಾಲು ಘಂಟೆ ಪ್ರಾಣಾಯಾಮ, ಸೂರ್ಯನಮಸ್ಕಾರ, ಗುರುವಂದನೆ. ಇನ್ನು ಮುಕ್ಕಾಲು
ಘಂಟೆ ಯೋಗ. ಏಳುಮುಕ್ಕಾಲು ಘಂಟೆಗೆ ಹಾಲು ತರಕಾರಿ ಹಿಡಿದು ಮನೆ ಮೆಟ್ಟಿಲು ಹತ್ತಿ ಸೀದಾ ಅಡುಗೆ ಮನೆಗೆ.
೮ ಘಂಟೆಗೆ ಬಲಗೈಯಲೊಂದು ಶುಗರ್ ಲೆಸ್ ಟೀ ಕಪ್, ಎಡಗೈಯಲೊಂದು ವಿದ್ ಶುಗರ್ ಟೀ ಕಪ್ ಹಿಡಿದು ಹಾಲ್ ಪ್ರವೇಶ. ಶುಗರ್ ಲೆಸ್ ಅವನಿಗೆ ದಾಟಿಸಿ ಐದು ನಿಮಿಶದಲ್ಲಿ ಪೇಪರ್ ಗಳ ಮೇಲೆ ಕಣ್ಣಾಡಿಸಿ ಅಡುಗೆಮನೆಗೆ ರೀ ಎಂಟ್ರಿ.ಮೂರು ಒಲೆಯ ಗ್ಯಾಸ್ ಸ್ಟೌನಲ್ಲಿ ಕೊತ ಕೊತ ಕುದಿತ. ತರಕಾರಿಗಳ ಮಾರಣ ಹೋಮ. ಕಾಲಲ್ಲಿ ಚಕ್ರ. ಮಗನ ಹಾಸುಗೆಯೆಡೆಗೊಮ್ಮೆ; ’ಪುಟ್ಟಾ ಏಳು’ ಉಲಿತ. ಬಾತ್ ರೂಮಿಗೆ ಚುಕ್ ಬುಕ್ ರೈಲ್. ಯುನಿಫಾರ್ಮ್ ಗೆ ಇಸ್ತ್ರಿ ಪೆಟ್ಟಿಗೆಯ ಜಾರುಗುಪ್ಪೆ. ಬ್ಯಾಗ್ ಹುಡುಕಾಟ. ಡಬ್ಬ ತಯಾರಿ. ಗದರಿಕೆಯ ಕೈತುತ್ತು.ಒಂಬತ್ತಕ್ಕೆ ಸ್ಕೂಲ್ ವ್ಯಾನ್ ಗೆ ಟಾಟಾ ಹೇಳಿ ಸೋಫಾದಲ್ಲೊಮ್ಮೆ ಕುಕ್ಕುರು ಬಡಿದು ಇನ್ನೊಮ್ಮೆ ಪೇಪರಿನೆಡೆಗೆ ಸ್ಥೂಲ ನೋಟ.ರಿಂಗುಣಿಸುವ ಪೋನುಗಳಿಗೆ ಚುಟುಕು ಉತ್ತರ.
ಅವನಾಗ ವಾಕ್ ಮುಗಿಸಿ ಬಂದ. ’ಮಗ ಭೂಪ ಶಾಲೆಗೆ ಹೋದ್ನಾ’ ಟವಲ್ ಹೆಗಲ ಮೇಲೆ ಹಾಕ್ಕೊಂಡು ಬಚ್ಹಲು ಮನೆಗೆ ನಡೆದ.’ಆಮೇಲೆ ’ಈ ಲೇಖನ ಓದಬೇಕು’ ಎನ್ನುತ್ತಲೆತಿಂಡಿ ರೆಡಿ ಮಾಡಿ ಇಡು’ ಆಜ್ನಾಪಿಸುತ್ತಲೇ ದೇವರ ಕೋಣೆ ಹೊಕ್ಕ. ಮೆಡಿಟೇಷನ್ ಆರಂಭ. ಇನ್ನು ಅರ್ದ ಘಂಟೆ ಜೀವಚ್ಛವ. ಮತ್ತೆ ಕಾಲಿಗೆ ಚಕ್ರ.ತಿಂಡಿ ಟೀ ಚಡ್ಡಿ,ಬನೀನು ಕರ್ಚಿಫ್ ಶರ್ಟ್ ಪ್ಯಾಂಟ್.ಹೊರಗಿನಿಂದಲೇ ಸ್ವರ ತೂರಿ ಬಂತು ’ಚೆಕ್ಕ್ ಗೆ ಸಹಿ ಹಾಕಿದ್ದೇನೆ ದುಡ್ಡು ಬೇಕಿದ್ರೆ ತಗೋ’ ಆರ್ಥಿಕ ಸುಭದ್ರತೆಗೆ ಇದಕ್ಕಿಂತಹ ಉದಾಹರಣೆ ಬೇಕೆ?!ಒಂಬತ್ತುವರೆಯಾಯ್ತು; ಆತ ಭುರ್ರನೆ ಹಾರಿ ಹೋದ.
ಮನೆ ಗೊಬ್ಬರದ ಗುಂಡಿ ಯಾರಾದ್ರು ಬಂದ್ರೆ…ಯಾರೂ ಬರುವುದಿಲ್ಲ ಆದ್ರೂ…ಬಂದ್ರೆ ಏನಾದ್ರು ಅಂದ್ಕೊಂಡ್ರೆ..ಅಂತ ಒಂಚೂರು ಆಚೀಚೆ ಸರಿಸಿ ಜೋಡಿಸಿಡುವುದರಲ್ಲಿ ಮಗ್ನ. ಕೆಲಸದಾಕೆ ಬಂದ ಸದ್ದು ಅಡುಗೆ ಮನೆಯ ಸಪ್ಪಳದಿಂದಲೇ ಕೇಳಿಬರುತ್ತಿತ್ತು. ಸಧ್ಯ ಬಂದ್ಲಲ್ಲ ಎನ್ನುತ್ತ ಹರಿಪ್ರಸಾದ್ ಚೌರಸಿಯ ಸಿದಿ ಹಾಕಿ ಟೀಪಾಯಿ ಮೇಲೆ ಕಾಲಿಟ್ಟು ಸೋಫಾಕ್ಕೆ ಒರಗಿ ಮೋಹನಮುರಳಿಯಲ್ಲಿ ಕರಗಿ ಹೋದಳು. ಹನ್ನೊಂದಕ್ಕೆ ನ್ಯೂಸ್ ಚಾನಲ್ ಅನ್ ಮಾಡಿದಳು…ಸ್ವಲ್ಪ ಹೊತ್ತದ ಮೇಲೆ ಚಾನಲ್ ಬದಲಾಯಿಸ್ತಾ ಹೋಗಿ ಮತ್ತೆ ತನ್ನ ಸುತ್ತ ಪೇಪರು ಹರವಿಕೊಂಡು ಅದರಲ್ಲೆ ಲೀನವಾದಳು.
ಹನ್ನೆರಡು ಕಳೆಯುತ್ತಿದ್ದಂತೆ ಅದೆಂತಹದೋ ಚಡಪಡಿಕೆ.ಜಗತ್ತಿಗೂ ತನಗೂ ಕೊಂಡಿ ತಪ್ಪಿದಂತೆ. ತನ್ನದಲ್ಲದ ಯಾರದೋ ಬದುಕನ್ನು ತಾನು ಬದುಕಿದಂತೆ. ನಿನ್ನೆಯ ಅನ್ನ ಸಾರು ತಿಂದು ಮತ್ತೆ ಚಾನಲ್ ಬದಲಾಯಿಸಿದಂತೆಲ್ಲ, ಬದುಕು ಇಷ್ಟಕ್ಕೇ ಮುಗಿದು ಹೋಗುತ್ತಿದೆಯೇನೋ ಎಂಬ ಭಾವ. ಕಣ್ಣಂಚಿನಲ್ಲಿ ನೀರಿನ ಕಟ್ಟೆ.
ನಾಲ್ಕೂವರೆಗೆ ಸ್ಕೂಲ್ ವ್ಯಾನ್ ಮನೆಯೆದುರು ನಿಂತಾಗ ಜೀವ ಚೈತನ್ಯವೇ ಉಕ್ಕಿ ಹರಿದ ಭಾವ.ತಲೆ ಮುಟ್ಟಿ ಕೆನ್ನೆ ತಟ್ಟಿ ’ಸ್ಕೂಲಲ್ಲಿ ಏನೇನ್ ಮಾಡಿದ್ಯೋ’. ಮತ್ತೆ ಮಗುತನ. ಕಾಲಿಗೆ ಚಕ್ರ. ಹಗಲು ರಾತ್ರಿ ಸಂಗಮಿಸುವ ಹೊತ್ತು. ಮಸುಕು ಕತ್ತಲೆ. ಜಗತ್ತೆಲ್ಲ ಅಳುತ್ತಿದೆ; ತಾನು ಒಂಟಿ ಎನ್ನುವ ಭಾವ. ಕೈ ರಿಮೋಟ್ ಒತ್ತುತ್ತಲೇ ಹೋಗುತ್ತದೆ. ಒಂಬತ್ತಕ್ಕೆ ಮತ್ತೆ ಕಾಲಿಗೆ ಚಕ್ರ.ಜೀವದುಸಿರಿನ ತಲೆ ಮೊಟಕಿ, ಕೆನ್ನೆ ತಟ್ಟಿ, ಸುಮ್ ಸುಮ್ನೆ ತಬ್ಬಿ, ಕಚಗುಳಿ ಇಟ್ಟು ’ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು…ನಿದ್ದೆ ಬರುವಳು ಹೊದ್ದು ಮಲಗು ಮಗುವೆ…ಜೋ..ಜೋ…’ಹನ್ನೊಂದಕ್ಕೆ ಪುಸ್ತಕದ ರ್‍ಯಾಕಿನಲ್ಲಿ ಕವಿತೆ, ವಿಮರ್ಶೆ, ಪ್ರಬಂದಸಂಕಲನ,ಜೀವನಚರಿತ್ರೆಗಳ ಹುದುಕಾಟ ರೀಡಿಯೋದಲ್ಲಿ ಅರ್ ಜೆಗಳ ಮಾತಿನಬ್ಬರದ ನಡುವೆ ಕಿಶೋರಕುಮಾರನ ವಿಷಾಧಗೀತೆ. ಮೆಲ್ಲನೆ ಅವಳಾಳಕ್ಕೂ ಪ್ರಸರಣ.
ಹನ್ನೆರಡಕ್ಕೆ ಆತನ ಆಗಮನ. ಕಾಲಿಗೆ ಚಕ್ರವಿಲ್ಲ.ತಳ್ಳುಗಾಡಿಯ ಭಾವ. ಮಾಡಿದ್ದನ್ನು ಬಡಿಸುವಾಗ ಆತ ಆಪೀಸಿನ ಬಗ್ಗೆ ಏನೇನೊ ಹೇಳುತ್ತಿದ್ದಾನೆ;ಇವಳು ಹಾಸಿಗೆಗೆ ಬಂದು ಮೈ ಚೆಲ್ಲುತ್ತಾಳೆ. ಇನ್ನೊಂದು ದಿನ ಕಳೆಯಿತು.ಇನ್ನೆಷ್ಟು ನಾಳೆಗಳು ಉಳಿದಿವೆಯೋ ಎಂಬ ಚಿಂತೆಯಲ್ಲಿ ಅವಳ ಕಣ್ಣುಗಳು ಮತ್ತೆ ಜೋಡಿ ಕೊಳ. ದಿಂಬಿಗೆ ಕೆನ್ನೆಯೊತ್ತಿ ಸದ್ದಿಲ್ಲದ ಬಿಕ್ಕಳಿಕೆ. ಕೌಟುಂಬಿಕ ಸಹಚರ್‍ಯ ಇಲ್ಲ.ಭಾವನಾತ್ಮಕ ಒಡನಾಟವಿಲ್ಲ. ದೈಹಿಕ ಸಾಂಗತ್ಯವಿಲ್ಲ. ಭಾವಸ್ಪಂದನವಿಲ್ಲ. ಮನುಸ್ಯ ಸಂಬಂಧಗಳ ಬಿಸುಪು ಇಲ್ಲ.ಇನ್ಯಾವ ಸಂಬಂಧ ಇವರನ್ನು ಒಟ್ಟಿಗೆ ಬಂಧಿಸಿದೆ? ಮಗುವಾ…? ಆರ್ಥಿಕ ಅವಲಂಬನೆಯಾ…?
ಈಗ ನನ್ನೆದುರು ಕುಳಿತಿದ್ದಾಳೆ. ಅವಳದು ಒಂದೇ ಪ್ರಶ್ನೆ- ’ನನಗೆ ಅವನು ಬೇಕಾ…?’ ನನಗೆ ಗೊತ್ತಿಲ್ಲ. ಗೊತ್ತಿದ್ದ ಸಮಚಾರವೆಂದರೆ;ಅವರಿಬ್ಬರು ಗಂಡ ಹೆಂಡತಿ,ಪ್ರೀತಿಸಿ ಮದುವೆಯಾದವರು,ಜಗತ್ತನ್ನೆ ಗೆದ್ದಂತೆ ಹತ್ತು ವರ್ಷ ಜೊತೆಯಾಗಿ ಬದುಕಿದವರು. ಈಗ ಹೀಗೆ….ಯಾಕೆ ಹೀಗಾಯ್ತು?…. ಗೊತ್ತಿಲ್ಲ. ನಿಮಗೆ ಗೊತ್ತಿದ್ದರೆ ತಿಳಿಸಿ
ಅವಳೆಡೆಗೆಗೊಮ್ಮೆ ನೋಡಿ ಅವಳ ಇಷ್ಟದ ಕವನದ ಮುಂದಿನ ಸಾಲುಗಳನ್ನು ನಾನು ಮುಂದುವರಿಸಿದೆ ’ಹೋಗು ದಕ್ಷನ ಮಗಳೇ ದೇವಪುತ್ರಿಗೂ ಆಜೀವ ತಿರುಕನಿಗೂ ಯಾವ ಯಾತರ ನಂಟು? ಹೊತ್ತಾಯಿತು ಹೊರಡು ಕಟ್ಟಿಕೋ ನೆನಪಿನ ಗಂಟು ಮುತ್ತುಗಳ ಸರನತ್ತು ಬೆಂಡೋಲೆ ಅಪ್ಪುಗೆ ಸೋಕುಗಳ ಜರತಾರಿ ಸೀರೆ ಕಟ್ಟಿಕೋ ಕಟ್ಟಿಕೋ ನೆನಪಿನ ಗಂಟು……’ ಆ ದಾಕ್ಷಾಯಣಿ ಯಜ್ನಕುಂಡದಲ್ಲಿ ದುಮುಕಿ ಪಾರ್ವತಿಯಾಗಿ ಮರುಹುಟ್ಟು ಪಡೆದು ಅದೇ ಶಿವನನ್ನು ಮದುವೆಯಾದಳು.ಈಕೆ ಶಿವೆಯಾಗಬೇಕೆ..? ಅವನು ಶಿವನಾಗದಿದ್ದರೂ………ಹೇ.. ಅರ್ಧನಾರೀಶ್ವರ !

‍ಲೇಖಕರು avadhi

September 10, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: