ಹ್ಯಾಪಿ ಮೂರ್ಖರ ದಿನ: ಒಂದು ಊರಿನಲ್ಲಿ 'ಇಟ್ಟು' ಎನ್ನುವವನು ಒಬ್ಬನು ಇದ್ದನು

ಇಂದು ಎಪ್ರಿಲ್ ೧. ಮೂರ್ಖರ ದಿನ. ಏನಂದ್ರಿ..? ಮೂರ್ಖರ ದಿನ ಅಂತಾನಾ..? ಹಾಗಾದ್ರೆ ಪ್ರೊ. ಬಿ ಎ ವಿವೇಕ ರೈ ಅವರು ತುಳುವಿನಿಂದ ಅನುವಾದಿಸಿರುವ ಈ ಕಥೆ ಓದಿ. ಮೂರ್ಖರು ಯಾರು ಜಾಣರು ಯಾರು ಅಂತ ಗೊತ್ತಾಗುತ್ತೆ. ಹ್ಯಾಪಿ ನಿಮ್ಮ ದಿನ..
ಒಂದು ಊರಿನಲ್ಲಿ ‘ಇಟ್ಟು’ ಎನ್ನುವವನು ಒಬ್ಬನು ಇದ್ದನು.ಅನಾಥನಾದ ಅವನು ಜೀವನ ಸಾಗಿಸಲು  ‘ ಸದ್ದು ‘ ಎಂಬ ಸಾಹುಕಾರನಲ್ಲಿ ಒಂದು ಸಾವಿರ ರೂಪಾಯಿ  ಸಾಲ ತೆಗೆದುಕೊಂಡನು. ಆದರೆ ಅವನಿಗೆ ಸಾಲ ತೀರಿಸಲು ಸಾಧ್ಯ ಆಗಲಿಲ್ಲ. ಕೊನೆಗೆ  ‘ಸದ್ದು ‘ ಸಾಹುಕಾರನ ಕಟ್ಟಪ್ಪಣೆಯಂತೆ ‘ಇಟ್ಟು’ ಆ ಊರನ್ನೇ ಬಿಟ್ಟು ಹೊರಟನು.

ಹಾಗೆ ಊರು ಬಿಟ್ಟು ಹೊರಟ.  ‘ಇಟ್ಟು ‘ ಹಗಲಿಡೀ ನಡೆದು , ರಾತ್ರಿ ಒಂದು ಮನೆಗೆ ಹೋದನು. ಆ ಮನೆಯಲ್ಲಿ ಒಬ್ಬಳು ಅಜ್ಜಿ ಮತ್ತು ಅವಳ ಮೊಮ್ಮಗಳು ಇದ್ದರು. ಇಟ್ಟುವು ಅವರಲ್ಲಿ ” ನಾನು ದೂರದ ಊರಿಗೆ ಹೋಗುವವನು. ಇವತ್ತು ಇಲ್ಲೇ ತಂಗಿ , ನಾಳೆ ಬೆಳಗ್ಗೆ ನನ್ನ ಊರಿಗೆ ಹೋಗುತ್ತೇನೆ ” ಎಂದನು. ಇವನ ಮಾತನ್ನು ನಂಬಿದ ಅಜ್ಜಿಯು , ರಾತ್ರಿ ಅಲ್ಲಿಯೇ ತಂಗಲು ಹೇಳಿ , ಅವನಿಗೆ ಬೇಕಾದ ವ್ಯವಸ್ಥೆ ಮಾಡಿದಳು. ಊರು ಬಿಟ್ಟ ಚಿಂತೆಯಲ್ಲಿ ಇಟ್ಟುವಿಗೆ ರಾತ್ರಿ ನಿದ್ರೆಯೇ ಬರಲಿಲ್ಲ .ಮುಂಜಾವಿನ ವೇಳೆ ಅಜ್ಜಿಯು ಮೊಮ್ಮಗಳಲ್ಲಿ ‘ ಅಪ್ಪ’ ತಿಂಡಿ (ಅಕ್ಕಿಯನ್ನು ರುಬ್ಬಿ ,ಕಾವಲಿಯ ಕುಳಿಗಳಲ್ಲಿ ಹೊಯ್ದು ,ಬೇಯಿಸಿ ಮಾಡುವ ತಿಂಡಿ )ಮಾಡಲು ಹೇಳಿ , ತಾನು ಮಲಗಿದಳು. ನಿದ್ರೆ ಬಾರದ ಇಟ್ಟುವೂ ಎದ್ದು , ಅಡಿಗೆ ಮನೆಗೆ ಹೋದನು. ಅಜ್ಜಿಯ ಮೊಮ್ಮಗಳೊಂದಿಗೆ ಊರಿನ ಸಮಾಚಾರ ಮಾತಾಡುತ್ತಿರುವಾಗ ,ಮೊಮ್ಮಗಳು ಇವನ ಹೆಸರೇನೆಂದು ಕೇಳಿದಳು.
ಇಟ್ಟುವು ತನ್ನ ಹೆಸರು ‘ ಸುಮ್ಮನೆ ‘ ಎಂದು ಹೇಳಿದನು. ಮೊಮ್ಮಗಳು ‘ ಅಪ್ಪ’ ಬೇಯಿಸಿ ಸಿದ್ಧಮಾಡಿ ಇಟ್ಟಾಗ , ಇಟ್ಟುವು ‘ ಅಪ್ಪ’ ದ ಬುಟ್ಟಿಯನ್ನೇ ಎತ್ತಿಕೊಂಡು ಓಡಿದನು. ಗಾಬರಿಗೊಂಡ ಮೊಮ್ಮಗಳು ಅಜ್ಜಿಯನ್ನು ಕೂಗಿ , ‘ ಅಪ್ಪ’ ವನ್ನೆಲ್ಲಾ ಕೊಂಡುಹೋದ ” ಎಂದಳು. ಅಜ್ಜಿಯು ” ಯಾರು ಕೊಂಡುಹೋದದ್ದು ?’ ಎಂದು ಕೇಳಿದಾಗ , ಮೊಮ್ಮಗಳು ” ‘ಸುಮ್ಮನೆ’ ” ಎಂದಳು. ‘ ಈ ಮೊಮ್ಮಗಳು ತಮಾಷೆಗೆ ಹೇಳುವುದು’ ಎಂದು ಭಾವಿಸಿ ಅಜ್ಜಿಯು ಮೊಮ್ಮಗಳನ್ನು ಗದರಿಸಿ ಮಲಗಿಸಿದಳು. ಮೊಮ್ಮಗಳಿಗೆ ನಿಜ ಸಂಗತಿಯನ್ನು ಅಜ್ಜಿಗೆ ಮನವರಿಕೆ ಮಾಡಿಕೊಡಲು ಸಾಕು ಸಾಕಾಯಿತು. ಕೊನೆಗೂ ಅಜ್ಜಿಗೆ ವಿಷಯ ಅರ್ಥ ಆದಾಗ , ಕಾಲ ಕೈ ಮೀರಿತ್ತು. ಅಜ್ಜಿಯು ತಲೆಯ ಮೇಲೆ ಕೈ ಇಟ್ಟು ಸುಮ್ಮನಿರಬೇಕಾಯಿತು.
ಅಪ್ಪವನ್ನು ತೆಗೆದುಕೊಂಡುಹೋದ ಇಟ್ಟುವು ದಾರಿಯಲ್ಲಿ ಸ್ವಲ್ಪ ಅಪ್ಪವನ್ನು ಚೆಲ್ಲುತ್ತಾ ,ಸ್ವಲ್ಪ ಬುಟ್ಟಿಯಲ್ಲಿ ಇರಿಸಿ, ಆ ಊರಿನ  ಅರಸನ ಬಟ್ಟೆಗಳನ್ನು ಮಡಿಮಾಡುವ ಮಡಿವಾಳನಲ್ಲಿ  ಹೇಳಿದ : “ಹೌದೋ , ಮಹಾರಾಯ , ನಿನ್ನೆ ನಮ್ಮ ಊರಿನಲ್ಲಿ ‘ ಅಪ್ಪ’ದ ಮಳೆ  ಬಂದದ್ದು ನಿನಗೆ ಗೊತ್ತಿಲ್ಲವೋ ? ಇದೋ , ನನಗೆ ಹೆಕ್ಕಲು ಸಿಕ್ಕಿದ್ದು . ಇನ್ನೂ ಬೇಕಾದಷ್ಟು ಬಿದ್ದುಕೊಂಡು ಇದೆ.” ಇದನ್ನು ಕೇಳಿದ ಮಡಿವಾಳನು ತನಗೂ ಸ್ವಲ್ಪ ಹೆಕ್ಕಿಕೊಳ್ಳಬೇಕು ಎನ್ನುವ ಆಸೆಯಿಂದ ,’ಇಟ್ಟು’ವಿನ ಹೆಸರು ಕೇಳಿದ.ಅದಕ್ಕೆ ಇಟ್ಟು ,ತನ್ನ ಹೆಸರು ‘ ಸುಳಿಗಾಳಿ’ ಎಂದು ಹೇಳಿದ. ಮಡಿವಾಳನು ಅಪ್ಪ ತಿನ್ನುವ ಆಸೆಯಿಂದ , ಇಟ್ಟುವಿನಲ್ಲಿ ಬಟ್ಟೆಗಳನ್ನು ನೋಡಿಕೊಳ್ಳಲು ಹೇಳಿ , ‘ಅಪ್ಪ’ವನ್ನು ಹೆಕ್ಕಲು ಓಡಿದನು. ಅಲ್ಲಿ ಎಲ್ಲೂ ಅಪ್ಪ ಸಿಗಲಿಲ್ಲ. ಮಡಿವಾಳನು ಹಿಂದಕ್ಕೆ ಬಂದು ನೋಡಿದಾಗ , ಅವನ ಒಗೆಯುವ ಬಟ್ಟೆಗಳು ಕಾಣೆಯಾಗಿದ್ದವು. ತಾನು ಮೋಸ ಹೋದೆನೆಂದು ಗೊತ್ತಾಗಿ, ಓಡಿಹೋಗಿ , ಅರಸನಿಗೆ ದೂರು ಕೊಟ್ಟ : “ಅರಸರೆ , ಬಟ್ಟೆಗಳನ್ನೆಲ್ಲಾ ಪೂರ್ತಿ ಕೊಂಡುಹೋದ.” ಅರಸ ಕೇಳಿದ ,” ಯಾರು ಕೊಂಡುಹೋದದ್ದು ?” ಮಡಿವಾಳ ಹೇಳಿದ “ಸುಳಿಗಾಳಿ”. ಅದಕ್ಕೆ ಅರಸನ ಉತ್ತರ , ” ಸುಳಿಗಾಳಿ ಕೊಂಡುಹೋದರೆ ,ಅಲ್ಲಿ ಎಲ್ಲಿಯಾದರೂ ಹಾಕೀತು, ಹೋಗಿ ನೋಡು .” ಆಗ ಮಡಿವಾಳ ನಡೆದ ಕತೆ ಹೇಳಿದ. ಆವೇಳೆ ಗಾಗಲೇ ‘ಇಟ್ಟು’ ಊರು ಬಿಟ್ಟು ತನ್ನ ಊರಿಗೆ ಪರಾರಿ ಆಗಿದ್ದ.
ಊರಿಗೆ ಬಂದ ಇಟ್ಟುವಿಗೆ ಒಂದು ಉಪಾಯ ಹೊಳೆಯಿತು. ಆ ಬಟ್ಟೆಗಳನ್ನೆಲ್ಲಾ ಮಾರಿ , ಎರಡು ಮುಡಿ ಅಕ್ಕಿ ಕೊಂಡುಕೊಂಡ. ಅದರಿಂದ ಕೆಲವು ‘ ಕೊಟ್ಟಿಗೆ’ ಗಳನ್ನು( ಅಕ್ಕಿಯನ್ನು ರುಬ್ಬಿ ,ರುಬ್ಬಿದ ಹಿಟ್ಟನ್ನು  ಎಲೆಗಳಲ್ಲಿ ಸುತ್ತಿ ,ಹಬೆಯಲ್ಲಿ ಬೇಯಿಸಿ ಮಾಡುವ ಅಕ್ಕಿಯ ತಿಂಡಿ)ಮಾಡಿದ.ಅದರಲ್ಲಿ ಕೆಲವು ಬೇಯಿಸಿದ ಮತ್ತು ಕೆಲವು ಹಸಿ ಕೊಟ್ಟಿಗೆಗಳನ್ನು ಕಟ್ಟಿದ.ಅದನ್ನು ತೆಗೆದುಕೊಂಡು ಹೋಗಿ, ಒಂದು ದೊಡ್ಡ ಮರಕ್ಕೆ ಕಟ್ಟಿ , ಅದಕ್ಕೆ ನೀರು ಹೊಯ್ಯಲು ಸುರು ಮಾಡಿದ.ಆ ಮರಕ್ಕೆ ಒಂದು ದೊಡ್ಡ ಕಟ್ಟೆಯನ್ನೂ ಕಟ್ಟಿಸಿದ.ಒಂದು ದಿನ ‘ಸದ್ದು’ ಸಾಹುಕಾರನು ಆ ಕಡೆ ಬರುವಾಗ , ಇಟ್ಟುವು ಮರಕ್ಕೆ ನೀರು ಹೊಯ್ಯುತ್ತಿರುವುದನ್ನು ನೋಡಿ, ಅವನು ಕೊಡಬೇಕಾದ ಸಾಲದ ಹಣಕ್ಕಾಗಿ ಅವನನ್ನು ಹಿಡಿದುಕೊಂಡನು. ಅವನಿಗೆ ಹುಚ್ಚು ಹಿಡಿದಿದೆ ಎಂದು ಗ್ರಹಿಸಿದನು. ಸಾಹುಕಾರ ಕೇಳಿದನು ,”ಹೌದೋ, ಇಟ್ಟು, ಮರಕ್ಕೆ ಯಾಕೆ ನೀರು ಹೊಯ್ಯುತ್ತಿ ?ಅದಕ್ಕೆ ಇಟ್ಟುವು ,’ ಇದು ಕೊಟ್ಟಿಗೆ ಆಗುವ ಮರ. ಇದರಲ್ಲಿ ದಿನಕ್ಕೆ ಐವತ್ತು ಬೇಯಿಸಿದ ಕೊಟ್ಟಿಗೆ ಸಿಕ್ಕುತ್ತದೆ. ಉಳಿದದ್ದು ಹಸಿ ಇರುತ್ತದೆ.” ಎಂದನು.ಇದನ್ನು ನಂಬದ ಸಾಹುಕಾರನು , ಇಟ್ಟುವಿನಲ್ಲಿ  ಒಂದು ಬೇಯಿಸಿದ ಕೊಟ್ಟಿಗೆಯನ್ನು ಕೊಯ್ಯಲು ಹೇಳಿದನು. ಇಟ್ಟುವು ಮರವನ್ನು ಹತ್ತಿ , ಅದರಲ್ಲಿ ನೇತುಹಾಕಿದ್ದ ಕೊಟ್ಟಿಗೆಗಳನ್ನು ಮುಟ್ಟಿ ನೋಡಿ , , ಒಂದು ಬೇಯಿಸಿದ ಕೊಟ್ಟಿಗೆಯನ್ನು ತೆಗೆದುಕೊಂಡು ಬಂದನು.ಅದನ್ನು ತಿಂದ ಸಾಹುಕಾರನು ,” ಮರವನ್ನು ಎಷ್ಟು ಬೆಲೆ ಕೊಟ್ಟಾದರೂ ತೆಗೆದುಕೊಳ್ಳಬೇಕು” ಎಂದು ಯೋಚಿಸಿದನು.ಅದಕ್ಕಾಗಿ ಇಟ್ಟುವಿನಲ್ಲಿ ಆ ಮರಕ್ಕೆ ಎಷ್ಟು ಬೆಲೆ ಎಂದು ವಿಚಾರಿಸಿದನು.ಅದಕ್ಕೆ ಇಟ್ಟುವಿನ ಉತ್ತರ : ” ನಿಮ್ಮ ಇಡೀ ಆಸ್ತಿ ಕೊಟ್ಟರೂ ನಾನು ಈ ಮರವನ್ನು ಕೊಡಲಾರೆ .” .ಸಾಹುಕಾರನ ಒತ್ತಾಯ ಹೆಚ್ಚಾಯಿತು. ಕೊನೆಗೆ ಇಟ್ತು , ಬಹಳ ಉಪಕಾರ ಮಾಡುವವನಂತೆ , ” ಐದು ಸಾವಿರ ರೂಪ್ಪಾಯಿ ಆದರೂ ಕೊಡಬೇಕು ” ಎಂದನು. ಜಿಪುಣ ಸಾಹುಕಾರ ಹಿಂದೂ ಮುಂದು ನೋಡದೆ , ಗಂಟು ಬಿಚ್ಚಿ ಇಟ್ಟುವಿನ ಸಾಲವನ್ನು ತೀರಿಸಿ, ಮತ್ತೆ ಅವನು ಕೇಳಿದಷ್ಟು ಹಣವನ್ನೂ ಕೊಟ್ಟನು. ಆ ಹಣವನ್ನು ಹಿಡಿದುಕೊಂಡು ಬಂದ ಇಟ್ಟು, ಆ ಊರಿನಿಂದ ಬಹಳ ದೂರ ಪಲಾಯನ ಮಾಡಿ, ಇನ್ನೊಂದು ಹೊಸ ಊರಿಗೆ ಬಂದು , ದೊಡ್ಡ ಕುಟುಂಬದ ಹೆಣ್ಣನ್ನು ಮದುವೆ ಆಗಿ ,ದೊಡ್ಡ ಮನೆ ಕಟ್ಟಿಸಿ , ಸುಖವಾಗಿ ಕಾಲ ಕಳೆಯುತ್ತಿದ್ದನು.
ಮರವನ್ನು ತೆಗೆದುಕೊಂಡ ‘ಸದ್ದು’ ಸಾಹುಕಾರನು ತನ್ನ ಎಲ್ಲ ಆಳುಗಳೊಂದಿಗೆ ಆ ಕೊಟ್ಟಿಗೆಯ ಮರಕ್ಕೆ ನೀರು ಹೊಯ್ಯಿಸಿದನು.ಎಷ್ಟು ದಿನಗಳಾದರೂ , ಆ ಮರದಲ್ಲಿದ್ದ ಕೊಟ್ಟಿಗೆ ಹೆಚ್ಚಾಗದೆ ಇರುವುದನ್ನು ನೋಡಿ, ಇಟ್ಟುವಿನ ಮೋಸ ಗೊತ್ತಾಗಿ ,ಊರು ಇಡೀ ಅವನನ್ನು ಹುಡುಕಲು ಕಳುಹಿಸಿದನು. ಆದರೆ ದೂರದ ಊರಿನಲ್ಲಿದ್ದ ಶ್ರೀಮಂತ ‘ಇಟ್ಟಣ್ಣ’ ಅವರಿಗೆ ಹೇಗೆ ತಾನೇ ಸಿಗುತ್ತಾನೆ .
ಇದು ಒಂದು ತುಳು ಜನಪದ ಕತೆ. ಅದರ ಕನ್ನಡ ಅನುವಾದ.ಮೂವತ್ತೈದು ವರ್ಷಗಳ ಹಿಂದೆ ನಾನು ಸಂಗ್ರಹಿಸಿದ್ದು. ಮೂರ್ಖರು ಯಾರು ಜಾಣರು ಯಾರು ಎಂದು ನಿರ್ಧರಿಸುವವವರು ಯಾರು ?

‍ಲೇಖಕರು avadhi

April 1, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ವಿವೇಕ ರೈ ಅವರ ಹೊಸ ಕೃತಿಗಳ ಅನಾವರಣ

ವಿವೇಕ ರೈ ಅವರ ಹೊಸ ಕೃತಿಗಳ ಅನಾವರಣ

ಆಕೃತಿ ಆಶಯ ಪಬ್ಲಿಕೇಷನ್ಸ್ನ ಮೂಲಕ ಡಾ. ಬಿ.ಎ. ವಿವೇಕ ರೈ ಅವರ ಮೂರು ಪುಸ್ತಕಗಳ ಅನಾವರಣ ಕಾರ್ಯಕ್ರಮ ೨೨-೧೦-೨೦೧೭ ರಂದು ಕೆನರಾ ಕಾಲೇಜು,...

6 ಪ್ರತಿಕ್ರಿಯೆಗಳು

 1. Netravathi Abbokkaraka Ubar

  Veru Inderesting and wonderfull story.this kind of story i heard only my childhood from my Grand Mother.Thank You Vivek Rai you send me a few times my childhood.

  ಪ್ರತಿಕ್ರಿಯೆ
 2. ಅಶೋಕವರ್ಧನ ಜಿ.ಎನ್

  ನನ್ನ ಬಾಲ್ಯದಲ್ಲಿ ಕೇಳಿದ ಕಥೆಯಲ್ಲಿ ಭಾರೀ ಜೋಯಿಸನೆಂದು ಬೊಗಳೆ ಹೊಡೆದ ಮಿಣಿಚಂಭಟ್ಟ ಅರಮನೆಯ ಕಳ್ಳರನ್ನು ಕಣಿಯದಾದ. ಮರುದಿನ ಅರಸ ‘ಸೋತಲ್ಲಿ ತಲೆದಂಡ’ ಎಂದದ್ದನ್ನು ಜ್ಯಾರಿಗೆ ತರುತ್ತಾನೆಂದು ಹೆದರಿ ರಾತ್ರಿ ಮನೆಯಲ್ಲಿ ಉದ್ಗರಿಸಿದನಂತೆ “ಕಾಲಿಗೆ ಬಂತು, ಕಣ್ಣಿಗೆ ಬಂತು, (ಮಿಂಚಂಭಟ್ಟನ) ಪ್ರಾಣಕೆ ಬಂತು.” ಹೊರಗೆ ಇವನಷ್ಟೇ ಆತಂಕದಲ್ಲಿ ಇವನ ಭವಿಷ್ಯನುಡಿಯನ್ನು ಕದ್ದು ಕೇಳುತ್ತಿದ್ದ ಅರಮನೆಯ ಕಳ್ಳಿಯಂದಿರು – ಕಾಳಿ ಮತ್ತು ಕಣ್ಣಿ, ಅದನ್ನೇ ತಪ್ಪಾಗಿ ಗ್ರಹಿಸಿ, ತಮ್ಮ ಪ್ರಾಣಕ್ಕೇ ಸಂಚಕಾರ ಬಂತೆಂದು ಹೆದರಿ ಇವನಿಗೆ ಶರಣಾದದ್ದು ಎಲ್ಲಾ ‘ಸುಮ್ಮನೆ,’ ‘ಸುಳಿಗಾಳಿ’ಗಳೊಡನೆ ನೆನಪಿಗೆ ಬಂತು. ಇಟ್ಟು (ವಿಠಲ?), ಸದ್ದು (ಸದಾಶಿವ?)ಗಳಿಗೂ ಅರ್ಥ ಹೇರಿದರೆ ಹೆಚ್ಚಾದೀತೇ? (ನನ್ನ ಜನಪದ ಅಧ್ಯಯನ ಸೊನ್ನೆ)
  ಅಶೋಕವರ್ಧನ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: