ಹ್ಯಾಪ್ಪಿ ಬರ್ತ್ ಡೆ ಗೌರಿ…

ಗುರುವಾದ ಮಗಳಿಗೆ ಈಗ ಹತ್ತು ವರ್ಷ

– ಚಾಮರಾಜ ಸವಡಿ

  ಮನೆ ಎದುರಿನ ರಸ್ತೆಯಲ್ಲಿ ಮಕ್ಕಳ ಗುಂಪು, ಗದ್ದಲ. ಈಗ ತಾನೇ ನಡೆಯಲು ಕಲಿತ ಮಗುವಿನಿಂದ ಹಿಡಿದು ಹೈಸ್ಕೂಲು ಮೆಟ್ಟಿಲು ಹತ್ತಲಿರುವ ವಯಸ್ಸಿನವರೆಗಿನ ಮಕ್ಕಳು ಅಲ್ಲಿದ್ದಾರೆ. ಅವರು ಆಡಿದ್ದೇ ಆಟ. ಹಾಕಿದ್ದೇ ನಿಯಮ. ಪರೀಕ್ಷೆ ಮುಗಿದ ಸಂತಸದಲ್ಲಿ ಕೂಗಾಡುತ್ತ ಆಡುತ್ತಿದ್ದಾರೆ. ಅವರ ಗುಂಪಿನಿಂದ ದೂರ, ಮನೆ ಎದುರಿಗೆ ಹಾಸಿದ ಪುಟ್ಟ ಕಟ್ಟೆಯಂತಿರುವ ಜಾಗದಲ್ಲಿ ಆಯಾ ಮನೆಗಳ ತಾಯಂದಿರು, ಅಜ್ಜಿಯರು ಕೂತಿದ್ದಾರೆ. ಅವರ ಮಧ್ಯೆ ಮಗುವೊಂದು ಕೂತಿದೆ. ಅದಕ್ಕೆ ಆಡುವ ಮಕ್ಕಳ ಕೇಕೆಯ ಕಡೆ ಗಮನವಿಲ್ಲ. ಅದರ ಲೋಕವೇ ಬೇರೆ. ಆಕೆ ಗೌರಿ. ಹತ್ತು ವರ್ಷಗಳ ಹಿಂದೆ, ಇದೇ ದಿನ (ಏಪ್ರಿಲ್ ೧೯) ಗೌರಿ ಜನಿಸಿದಾಗ ನಾನು ಕೊಪ್ಪಳದಲ್ಲಿದ್ದೆ. ಬದುಕು ಕಟ್ಟಿಕೊಳ್ಳುವ ಹೆಣಗಾಟದ ದಿನಗಳವು. ಅನಿವಾರ್ಯವಾಗಿ ಶುರು ಮಾಡಿದ್ದ ವಾರಪತ್ರಿಕೆಯೊಂದಕ್ಕೆ ಬರೆಯುತ್ತ ಕೂತವನನ್ನು ಫೋನ್ ಮಾಡಿ ಕರೆಸಿದ್ದರು ಮಾವ. ನೀವು ಬಿಜಿ ಇರ್ತೀರಂತ ಹೇಳಿರಲಿಲ್ಲ. ರೇಖಾಳನ್ನು ನಿನ್ನೆ ರಾತ್ರಿಯೇ ಆಸ್ಪತ್ರೆಗೆ ಸೇರಿಸಿದ್ವಿ. ಬೇಗ ಬನ್ನಿ ಎಂದಿದ್ದರು. ರಾತ್ರಿಯಿಡೀ ನಿದ್ದೆಗೆಟ್ಟವನು ಹಾಗೇ ಪೆನ್ನು ಮುಚ್ಚಿಟ್ಟು ಅವಸರದಲ್ಲಿ ಆಸ್ಪತ್ರೆಗೆ ಬಂದಿದ್ದೆ. ನನ್ನನ್ನೇ ಕಾಯುತ್ತಿದ್ದ ಡಾಕ್ಟರ್, ಸಿಸೇರಿಯನ್ ಆಗ್ಬೇಕು, ನೀವಿಲ್ಲಿ ಸೈನ್ ಮಾಡಿ ಎಂದು ಮುಂದೆ ಹಿಡಿದ ಹಾಳೆಯಲ್ಲಿ ಸಹಿ ಮಾಡಿ ಅರ್ಧ ಗಂಟೆ ಸುಮ್ಮನೇ ಕೂತಿದ್ದೆ. ವರ್ಷದ ಹಿಂದೆ ಡಿಗ್ರಿ ಕೊನೆಯ ವರ್ಷದ ಪರೀಕ್ಷೆ ಬರೆದು, ರಜೆಯಲ್ಲಿ ಮದುವೆಯಾಗಿದ್ದ ರೇಖಾ ಒಳಗೆ ಲೇಬರ್ ರೂಮಿನಲ್ಲಿ ತಾಯಾಗಲಿದ್ದಳು. ಏನಿದ್ದವು ನನ್ನ ಭಾವನೆಗಳಾಗ? ಇದ್ದ ಇಬ್ಬರೇ ಬಲು ಸಾಧಾರಣ ಜೀವನ ಸಾಗಿಸಲೂ ಕಷ್ಟಪಡಬೇಕಿತ್ತು. ಈಗ ನಮ್ಮ ಮಧ್ಯೆ ಇನ್ನೊಂದು ಜೀವ ಬರಲಿದೆ. ಅದಕ್ಕಾಗಿ ಹರ್ಷ ಪಡಬೇಕೋ, ಚಿಂತೆ ಮಾಡಬೇಕೋ ಎಂಬ ಗೊಂದಲ. ಸುಮ್ಮನೇ ಕೂತವನೆದುರು ಬಂದು ನರ್ಸ್ ಹೇಳಿದ್ದಳು: ಹೆಣ್ಣುಮಗು! ಗೌರಿ ಹುಟ್ಟಿದ್ದು ಹಾಗೆ. ***** ಬಲು ಕೆಂಪಗಿತ್ತು ಮಗು. ಆಕೆಯನ್ನು ಮೊದಲ ಬಾರಿ ನೋಡಿದಾಗಿನ ಕ್ಷಣಗಳು ಇವತ್ತಿಗೂ ನೆನಪಿನಲ್ಲಿ ಹಚ್ಚಹಸಿರು. ಹೆರಿಗೆ ನೋವು, ಸಿಸೇರಿಯನ್ ರಗಳೆಯಲ್ಲಿ ಬಾಡಿದಂತಿದ್ದ ರೇಖಾಳ ಮೊಗದಲ್ಲಿ ಬೆಳದಿಂಗಳು. ಪಕ್ಕದಲ್ಲೇ ಮಲಗಿತ್ತು ಪುಟ್ಟ ಗೌರಿ- ಕೆಂಪಗೆ, ದಪ್ಪಗೆ, ಮುಷ್ಠಿ ಬಿಗಿದುಕೊಂಡು. ಆ ಕ್ಷಣದಲ್ಲಿ, ಈಕೆ ಮುಂದೆ ನನಗೆ ಗುರುವಾಗುತ್ತಾಳೆಂದು ಖಂಡಿತ ಅಂದುಕೊಂಡಿರಲಿಲ್ಲ. ***** ಮೂರು ತಿಂಗಳಾದರೂ ಗೌರಿಯ ಕತ್ತು ಸ್ಥಿರವಾಗಲಿಲ್ಲ. ದೃಷ್ಟಿ ಎತ್ತಲೋ. ಮಗು ಗೆಲುವಾಗಿತ್ತು. ಊಟ, ನಿದ್ದೆ, ತನ್ನ ಪಾಡಿಗೆ ತಾನು ಆಟವಾಡುವುದು ಎಲ್ಲಾ ಇದ್ದರೂ, ಸುತ್ತಲಿನ ಜಗತ್ತಿನೊಂದಿಗೆ ಸಂಬಂಧ ಇಲ್ಲದಂತಿತ್ತು. ತೊಟ್ಟಿಲ ಮೇಲೆ ಬಾಗಿ, ಲಟಿಕೆ ಹೊಡೆದು, ಗಿಲಿಗಿಲಿ ಆಡಿಸಿದರೂ ನಮ್ಮತ್ತ ದೃಷ್ಟಿ ಕೊಟ್ಟು ನೋಡುತ್ತಿರಲಿಲ್ಲ. ಶಬ್ದಕ್ಕೆ ಮುಖವರಳಿಸುತ್ತಿದ್ದುದನ್ನು ಬಿಟ್ಟರೆ, ಬಾಹ್ಯ ಜಗತ್ತಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ. ‘ಕೆಲ ಮಕ್ಕಳು ಹಾಗೇ. ಅದರಲ್ಲೂ ಮೊದಲ ಮಗು ಕೊಂಚ ನಿಧಾನ’ ಅಂದರು ಹಿರಿಯರು. ಆರು ತಿಂಗಳುಗಳಾದವು. ಕತ್ತು ಕೊಂಚ ಸ್ಥಿರವಾಗಿದ್ದರೂ, ಉಳಿದೆಲ್ಲ ವಿಷಯಗಳಲ್ಲಿ ಅದಿನ್ನೂ ಹಸುಗೂಸೇ. ‘ಕೆಲ ಮಕ್ಕಳು ಹಾಗೇ. ನಿಧಾನವಾಗಿ ಪ್ರತಿಕ್ರಿಯಿಸುತ್ತವೆ’ ಅಂದರು ಕೊಪ್ಪಳದ ಮಕ್ಕಳ ಡಾಕ್ಟರು. ಎಂಟು ತಿಂಗಳಾದರೂ ಗೌರಿ ಅದೇ ಸ್ಥಿತಿಯಲ್ಲಿ ಉಳಿದಾಗ ಪಕ್ಕದ ಹೊಸಪೇಟೆಗೆ ಹೋಗಿ ಬೇರೊಬ್ಬ ಮಕ್ಕಳ ತಜ್ಞರಿಗೆ ತೋರಿಸಿದೆವು. ಕೆಲ ಪರೀಕ್ಷೆಗಳನ್ನು ಮಾಡಿ, ಗೌರಿಯ ತಲೆಯ ಗಾತ್ರವನ್ನು ಟೇಪ್‌ನಲ್ಲಿ ಅಳೆದ ಆ ವೈದ್ಯರು ಹೇಳಿದರು: ಈಕೆಯ ಮೆದುಳಿನ ಬೆಳವಣಿಗೆ ಸಹಜವಾಗಿಲ್ಲ. ಬುದ್ಧಿಮಾಂದ್ಯತೆಯ ಲಕ್ಷಣಗಳು ಕಾಣಿಸ್ತಿವೆ. ನೀವೊಮ್ಮೆ ಸ್ಕ್ಯಾನ್ ಮಾಡಿಸೋದು ಉತ್ತಮ. ಹುಬ್ಬಳ್ಳಿ ಅಥವಾ ಬೆಂಗಳೂರಿಗೆ ಹೋಗಿ ಎಂದರು. ಮಗುವನ್ನು ಕರೆದುಕೊಂಡು ಹತ್ತಿರದ ಒಣಗಿದ ಪಾರ್ಕ್‌ನಲ್ಲಿ ಮೌನವಾಗಿ ಕೂತೆವು. ರೇಖಾ ನಿರಂತರವಾಗಿ ಅಳುತ್ತಿದ್ದರೆ, ನಾನು ಒಳಗೊಳಗೇ ಅಳುತ್ತ ಮಂಕಾಗಿ ಕೂತಿದ್ದೆ. ಗೌರಿಯೊಬ್ಬಳೇ ತನ್ನ ಪಾಡಿಗೆ ತಾನು ನಗುತ್ತಿದ್ದಿದ್ದು. ***** ಧಾರವಾಡದ ಮಕ್ಕಳ ವೈದ್ಯರು ಆಕೆಯ ಮೆದುಳಿನ ಬೆಳವಣಿಗೆ ಅಸಮರ್ಪಕವಾಗಿದ್ದನ್ನು ಸ್ಕ್ಯಾನಿಂಗ್ ಮಾಡಿ ತೋರಿಸಿದರು. ಅಲ್ಲಿಗೆ ಚಿತ್ರಣ ಸ್ಪಷ್ಟವಾಗಿತ್ತು. ನಡೆಸುತ್ತಿದ್ದ ಪತ್ರಿಕೆ ಮುಚ್ಚಿ ರೇಖಾ ಮತ್ತು ಗೌರಿಯನ್ನು ಕರೆದುಕೊಂಡು ಬೆಂಗಳೂರಿಗೆ ಬಂದೆ. ಓ ಮನಸೇ ಪತ್ರಿಕೆಯಲ್ಲಿ ಕೆಲಸ ಮಾಡುತ್ತ ನಿಮ್ಹಾನ್ಸ್‌ನಲ್ಲಿ ಗೌರಿಯನ್ನು ತೋರಿಸಿದೆವು. ಅವರ ಚಿತ್ರಣ ಇನ್ನೂ ನಿಖರವಾಗಿತ್ತು. ಗೌರಿಯ ಮೆದುಳಿನ ಶೇ.೪೦ರಿಂದ ೪೫ ಭಾಗದಲ್ಲಿ ಚಟುವಟಿಕೆಯೇ ಇರಲಿಲ್ಲ. ‘ಸಾಮಾನ್ಯ ಮಗುವಿನೊಂದಿಗೆ ಮಾತಾಡುವಂತೆ ಆಕೆಯ ಜೊತೆ ಮಾತಾಡಿ. ಆಟ ಆಡಿಸಿ. ಫಿಸಿಯೋಥೆರಪಿ ಮಾಡಿಸಿ. ಆಕೆ ಸಾಮಾನ್ಯ ಸ್ಥಿತಿಗೆ ಬರುತ್ತಾಳೆಂದು ಹೇಳಲಾರೆವು. ಆದರೆ, ಆ ಸ್ಥಿತಿಗೆ ಹತ್ತಿರವಾಗಿಸಲು ಪ್ರಯತ್ನಿಸಿ. ಒಳ್ಳೆಯದಾಗಲಿ’ ಎಂದರು ನಿಮ್ಹಾನ್ಸ್‌ನ ಕರುಣಾಮಯಿ ವೈದ್ಯರು. ಅವತ್ತು ಮತ್ತೆ ಅತ್ತಿದ್ದೆವು ಇಬ್ಬರೂ. ***** ಈಕೆ ದೇವರಿಗೆ ಹರಕೆ ಹೊತ್ತಳು. ನಾನು ತಜ್ಞರ ಶೋಧದಲ್ಲಿ ತೊಡಗಿದೆ. ಭರವಸೆ ಹುಟ್ಟಿಸಿದ ಪ್ರತಿಯೊಬ್ಬ ವೈದ್ಯರಲ್ಲೂ ತೋರಿಸಿದೆವು. ಅವರ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿದೆವು. ನಿಮ್ಹಾನ್ಸ್‌ನಲ್ಲೇ ಇದ್ದ ಆಯುರ್ವೇದ ವಿಭಾಗದಲ್ಲಿ ವಾರಪೂರ್ತಿ ಚಿಕಿತ್ಸೆ ಆಯಿತು. ಅವನ್ನೇ ಮನೆಯಲ್ಲೂ ಮಾಡುತ್ತ ಹೋದೆವು. ಊಹೂಂ. ಅವ್ಯಾವೂ ತಕ್ಷಣದ ಭರವಸೆ ಮೂಡಿಸಲಿಲ್ಲ. ಹೋಮಿಯೋಪತಿ ಚಿಕಿತ್ಸೆಯ ಬೆನ್ನು ಹಿಡಿದು ಹುಬ್ಬಳ್ಳಿ, ಪುಣೆ ಎಂದೆಲ್ಲಾ ಓಡಾಡಿದೆವು. ಯಾವುದೂ ಕೈ ಹಿಡಿಯಲಿಲ್ಲ. ಅಷ್ಟೊತ್ತಿಗೆ ಪ್ರಜಾವಾಣಿ ಸೇರಿಕೊಂಡಿದ್ದ ನಾನು ಧಾರವಾಡಕ್ಕೆ ವರ್ಗ ಕೇಳಿ ಪಡೆದೆ. ಹೋದಲ್ಲೆಲ್ಲ ದೇವರು, ಶಾಸ್ತ್ರದವರು, ತಜ್ಞರು ಎಂದೆಲ್ಲಾ ಅಲೆದೆವು. ಇವೆಲ್ಲ ಪ್ರಯೋಗಗಳು ಫಲ ನೀಡದೇ ಹೋದಾಗ ನಿಮ್ಹಾನ್ಸ್‌ನ ವೈದ್ಯರ ಮಾತು ನೆನಪಾದವು. ಸಾಮಾನ್ಯ ಮಗುವಿನೊಂದಿಗೆ ಮಾತಾಡುವಂತೆ ಗೌರಿಯೊಂದಿಗೆ ಮಾತಾಡುವುದು ಶುರುವಾಯ್ತು. ಫಿಜಿಯೋಥೆರಪಿ ಪ್ರಾರಂಭಿಸಿದೆವು. ವಿಶೇಷ ಶಾಲೆಗೂ ಗೌರಿಯನ್ನು ಸೇರಿಸಿದೆವು. ಬದುಕು ನಿಧಾನವಾಗಿ ತಿರುಗಲು ಶುರುವಾಯ್ತು. ***** ಗೌರಿ ಕೂಡಲು ಕಲಿತಿದ್ದು ಎರಡು ವರ್ಷಗಳ ನಂತರ. ಅಂಬೆಗಾಲಿಟ್ಟಿದ್ದು ನಾಲ್ಕು ವರ್ಷಗಳಿಗೆ. ತಡವರಿಸುತ್ತ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟಿದ್ದು ಆರು ವರ್ಷಗಳ ನಂತರ. ಇವತ್ತಿಗೂ ಆಕೆ ನಮ್ಮ ಕಣ್ಣನ್ನು ೨-೩ ಸೆಕೆಂಡ್‌ಗಳಿಗಿಂತ ಹೆಚ್ಚು ನೋಡುವುದಿಲ್ಲ. ಕೆಲವು ಶಬ್ದಗಳನ್ನು ಬಿಟ್ಟರೆ ಬೇರೆ ಶಬ್ದಗಳನ್ನು ಆಡಿಲ್ಲ. ಇವತ್ತಿಗೂ ನಡಿಗೆ ಅಸಹಜ. ತಂಗಿಯೊಂದಿಗೆ ಬೆರೆಯುವುದು ತೀರಾ ಕಡಿಮೆ. ಆಟಿಸಂ ಮತ್ತು ಬುದ್ಧಿ ಮಾಂದ್ಯತೆಗಳೆರಡರ ಲಕ್ಷಣಗಳನ್ನೂ ಆಕೆಯಲ್ಲಿ ಗುರುತಿಸಿದ್ದಾರೆ ತಜ್ಞರು. ಈಗ ವಿಶೇಷ ಶಾಲೆಗೆ ಹೋಗುತ್ತಿದ್ದಾಳೆ. ಫಿಜಿಯೋಥೆರಪಿ, ಸ್ಪೀಚ್ ಥೆರಪಿ ಮುಂತಾದವೆಲ್ಲ ನಡೆದಿವೆ. ಈಗ ಆಕೆಗೆ ತಿಳಿವಳಿಕೆ ನಿಧಾನವಾಗಿ, ಬಲು ನಿಧಾನವಾಗಿ ಬೆಳೆಯುತ್ತಿದೆ. ಕೆಲವೊಂದು ಸರಳ ಮಾತುಗಳು ಅರ್ಥವಾಗುತ್ತವೆ. ಕೆಲವು ಸರಳ ಕೆಲಸಗಳನ್ನು ಮಾಡುತ್ತಾಳೆ. ಇವತ್ತಿಗೆ ಹತ್ತು ತುಂಬಿದ್ದರೂ ಗೌರಿ ನಮ್ಮ ಪಾಲಿಗೆ ಒಂದು ವರ್ಷದ ಮಗು. ***** ಎಷ್ಟೋ ಸಾರಿ ಯೋಚಿಸುತ್ತೇನೆ: ಮಾತೇ ಆಡದ ಈಕೆ ನಮಗೆ ಎಷ್ಟೊಂದು ಕಲಿಸಿದಳಲ್ಲ ಎಂದು. ಆಕೆ ಬದುಕಿನ ರೀತಿ ನೀತಿಗಳ ಬಗ್ಗೆ ನನಗಿದ್ದ ಎಷ್ಟೊಂದು ಭ್ರಮೆಗಳನ್ನು ಹೋಗಲಾಡಿಸಿದಳು! ವಾಸ್ತವ ಪ್ರಪಂಚದ ಮಗ್ಗುಲಗಳನ್ನು ಪರಿಚಯಿಸಿದಳು. ನನಗೇ ಗೊತ್ತಿರದ ನನ್ನ ಮಿತಿ ಮತ್ತು ಸಾಮರ್ಥ್ಯವನ್ನು ತಿಳಿಸಿದಳು. ಕಿರಾಣಿ ಅಂಗಡಿಗೆ ಹೋಗಿ ರೇಶನ್ ತರಲು ಹಿಂಜರಿಯುತ್ತಿದ್ದ ರೇಖಾಳಿಗೆ ಇಡೀ ಬೆಂಗಳೂರನ್ನು ಕಾರಲ್ಲಿ ಸುತ್ತಿಬರುವಂತೆ ಮಾಡಿದಳು. ನಾನು ಕೆಲಸದ ಮೇಲೆ ಕೆಲಸಕ್ಕೆ ರಾಜೀನಾಮೆ ಬೀಸಾಡಿ ಬಂದು ಕೂತಾಗ, ಹೊಸ ಭರವಸೆ ಇನ್ನೂ ಇದೆ ಎಂಬುದನ್ನು ತೋರಿಸಿದಳು. ಮಂಕಾಗಿ ಕೂತವನಲ್ಲಿ ಹೊಸ ಕನಸು, ಸೋತ ಭಾವದ ಜಾಗದಲ್ಲಿ ಗೆಲುವಿನ ದಾರಿ ಮೂಡಿಸಿದಳು. ಅವಳು ಮೂಡಿಸಿದ ಸ್ಫೂರ್ತಿಯಿಂದ ರೇಖಾ ಮತ್ತೆ ಸಂಗೀತ ಕಲಿಯಲು, ದಿನಾ ಜಿಮ್‌ಗೆ ಹೋಗಲು, ನಾನು ವೃತ್ತಿಯ ಹೊಸ ಸಾಧ್ಯತೆಗಳತ್ತ ಮುಖ ಮಾಡಲು ಸಾಧ್ಯವಾಯಿತು. ಗೌರಿಯಂಥ ಮಗುವನ್ನು ನಾವೇ ನೋಡಿಕೊಳ್ಳಬೇಕೆಂಬ ಅನಿವಾರ್ಯತೆ ನಮ್ಮನ್ನು ನಿತ್ಯ ಚುರುಕಾಗಿರಿಸಿದೆ. ನಿತ್ಯ ಗೆಲುವಾಗಿರಿಸಿದೆ. ಅಪರಿಚಿತರಲ್ಲಿ ಆತ್ಮೀಯರನ್ನು ಹುಟ್ಟುಹಾಕಿದೆ. ಸವಾಲಿನ ಜಾಗದಲ್ಲಿ ಅವಕಾಶ, ಸೋಲಿನ ಜಾಗದಲ್ಲಿ ಹೊಸ ಯತ್ನವನ್ನು ಮೂಡಿಸಿದೆ. ಮಾತೇ ಆಡದ ಗೌರಿ ನಮಗೆ ಬದುಕಲು ಕಲಿಸಿದ್ದಾಳೆ. ಭರವಸೆ ಮೂಡಿಸಿದ್ದಾಳೆ. ನಿತ್ಯ ಹೊಸದೊಂದನ್ನು ಕಲಿಸುತ್ತ, ಹೊಸ ಭರವಸೆ ಮೂಡಿಸುತ್ತ, ತನ್ನ ಪಾಡಿಗೆ ತಾನು ನಗುತ್ತಲೇ ಇದ್ದಾಳೆ. ***** ಥ್ಯಾಂಕ್ಸ್ ಗೌರಿ, ನೀನು ನಮ್ಮ ಮಗಳಾಗಿದ್ದಕ್ಕೆ. ನಮ್ಮ ಗುರುವಾಗಿದ್ದಕ್ಕೆ. ಹ್ಯಾಪಿ ಬರ್ತ್‌ಡೇ ನಿನಗೆ.]]>

‍ಲೇಖಕರು G

April 22, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

9 ಪ್ರತಿಕ್ರಿಯೆಗಳು

 1. nagamani

  ಸಾಮಾನ್ಯರು ಕಡೆಗಣಿಸುವಂತಹ ಮಗುವನ್ನು ಗುರುವೆಂದು ಮನ್ನಿಸಿ ಪೂಜಿಸುತ್ತಿದ್ದೀರಲ್ಲಾ ,ನಿಮ್ಮ ಬಗ್ಗೆ ಗೌರವ ಮೂಡಿತು.ಗೌರಿಗೆ ನಮ್ಮ ಕಡೆಯಿಂದಲೂ ಹುಟ್ಟುಹಬ್ಬದ ಶುಭಾಶಯಗಳು ಮತ್ತು ನಿಮ್ಮೆಲ್ಲರ ಬದುಕು ಸಹ್ಯವಾಗಲೆಂದು ಶುಭ ಹಾರೈಕೆಗಳು.
  ಇಂತಹ ಮಕ್ಕಳಿಗೆ ಸಂಗೀತದ ಕಡೆ ಒಲವಿರುತ್ತದೆ.ಅವಳಿಗೆ ಸಾಧ್ಯವಾದಷ್ಟು ಹಾಡು ಕೇಳಲು ಬಿಡಿ.

  ಪ್ರತಿಕ್ರಿಯೆ
 2. dr. b.y.renuka prasad

  that is the spirit.keep it up. when every thing is fine we neglect what ever god has given us &our children. happy birthday gowri.all the best to you chamraj pavadi

  ಪ್ರತಿಕ್ರಿಯೆ
 3. venkatesh

  heart touching story.. wish her all the best for her future. “ಎಷ್ಟೋ ಸಾರಿ ಯೋಚಿಸುತ್ತೇನೆ: ಮಾತೇ ಆಡದ ಈಕೆ ನಮಗೆ ಎಷ್ಟೊಂದು ಕಲಿಸಿದಳಲ್ಲ ಎಂದು. ಆಕೆ ಬದುಕಿನ ರೀತಿ ನೀತಿಗಳ ಬಗ್ಗೆ ನನಗಿದ್ದ ಎಷ್ಟೊಂದು ಭ್ರಮೆಗಳನ್ನು ಹೋಗಲಾಡಿಸಿದಳು! ವಾಸ್ತವ ಪ್ರಪಂಚದ ಮಗ್ಗುಲಗಳನ್ನು ಪರಿಚಯಿಸಿದಳು. ನನಗೇ ಗೊತ್ತಿರದ ನನ್ನ ಮಿತಿ ಮತ್ತು ಸಾಮರ್ಥ್ಯವನ್ನು ತಿಳಿಸಿದಳು” , such things can happen only when we face such encounters and come with flying colour.. And Chamaraj , you came with all flying colours in your life and be continue in the same way. And I request you to post her small(but most amazing)adventures like , how she reading , what she learning in school here for every 15-30 days , it will feel better for me and to all readers. Hope you will accept my request..

  ಪ್ರತಿಕ್ರಿಯೆ
 4. Jyothi

  nanna kannalli neeru.. odutta odutta.. jothege… nimma spirit gondu dodda salaam.. god bless the child.. belated wishes. this reminded me of my cousin’s mentally-challenged son who is 13 years..

  ಪ್ರತಿಕ್ರಿಯೆ
 5. armanikanth

  ಪ್ರಿಯ ಚಾಮರಾಜ,
  ಬರಹ ಓದಿ ಮನಸ್ಸು ಭಾರವಾಯಿತು.ಇಲ್ಲಿಯವರೆಗಿನ ಮಾತು ಬಿಡು,ಮುಂದಿನ ದಿನಗಳಲ್ಲಿ ಗೌರಿಯ ಬದುಕು ಬಂಗಾರವಾಗಲಿ.ಅದು ಪ್ರಾರ್ಥನೆ ಮತ್ತು ಹಾರೈಕೆ.
  ಮಣಿಕಾಂತ್

  ಪ್ರತಿಕ್ರಿಯೆ
 6. D.RAVI VARMA

  ಪ್ರಿಯ ಚಾಮರಾಜ್ ಸವಡಿ ,ನಮಸ್ಕಾರ. ನಿಮ್ಮ ಲೇಖನ ಮನಮುಟ್ಟಿ, ಎದೆತಟ್ಟಿ ನನ್ನನ್ನು ಒಂದು ಕಸನ ಮುಕನನ್ನಗಿಸಿತು .ನನಗೆ ಗೊತ್ತಿಲ್ಲದೇ ನನ್ನ ಕಣ್ಣು ತುಂಬಿ ಬಂತು . ನಿಮ್ಮಗೌರಿ ಗೊಂದು ಪ್ರೀತಿಪೂರ್ವಕ ಶುಭಾಶಯಗಳು .ಇಲ್ಲಿ ಹೊಸಪೇಟೆಯಲ್ಲಿ ದ್ರ ಅಜಯ್ಕುಮಾರ್ ಅಂತಾ ಮಕ್ಕಳಿಗೊಂದು ವಿಶೇಷ ಶಾಲೆ ನಡೆಸುತ್ತಿದ್ದಾರೆ. ನಾನು ಒಂದೆರಡು ಸಾರಿ ಹೊಗಿಬಂದಿದ್ದೇನೆ. ನೀವು ನಿಮ್ಮ ಮಗಳು ಗೌರಿ ಕಳಿಸಿಕೊಟ್ಟ ತಾಳ್ಮೆ,ಪಾಠ ಈ ನಿಟ್ಟಿನಲ್ಲಿ ನಿಮ್ಮ ಮನೆಯವರು ಅನುಭವಿಸಿರಬಹುದಾದ ನೋವು,ಯಾತನೆ, ಎಲ್ಲವು ಉಉಹೆಗೆ ಮೀರಿದ್ದು . ಬದುಕೇ ಹಾಗೆ ಏನೋ ಗೊತ್ತಿಲ್ಲ. ಹಲವೊಮ್ಮೆ ಒಂದು ಸಣ್ಣ ಘಟನೆ ಕೂಡ ಬದುಕಿನ ದಿಕ್ಕನ್ನೇ ಬದಲಿಸಿಬಿಡುತ್ತದೆ. ನಿಮಗೂ, ನಿಮ್ಮ ಪ್ರೀತಿಯ ಗೌರಿಗೂ ನನ್ನ ಶುಭಾಶಯಗಳು
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: