“ಹ್ಯಾರಿ ಪಾಟರ್” ಯಾಕಿಷ್ಟು ಜನಪ್ರಿಯವಾಯಿತು?

ಹ್ಯಾರಿ ಪಾಟರ್ ಏಳನೇ ಪುಸ್ತಕದಲ್ಲಿ ಸಾಯುತ್ತಾನಾ? ಸತ್ತರೆ ಮುಂದೇನು? – ಈ ಪ್ರಶ್ನೆ ಕಳೆದ ಹಲವು ತಿಂಗಳುಗಳಿಂದ ಜಗತ್ತಿನ ಕೋಟ್ಯಂತರ ಮಕ್ಕಳನ್ನು (ಹಲವು ವಯಸ್ಕರನ್ನೂ ಸೇರಿದಂತೆ) ಕಾಡಿದ ಪ್ರಶ್ನೆ. ಬೇರೆ ಯಾವುದೇ ಒಂದು ಪ್ರಶ್ನೆ ಬಹುಶಃ ಇಷ್ಟು ಜನರನ್ನು ಒಟ್ಟಿಗೆ ನಿದ್ರೆಗೆಡಿಸಿರಲಿಕ್ಕಿಲ್ಲ. ಇಂಗ್ಲಿಷ್ ಮಕ್ಕಳ ಸರಣಿ ಪುಸ್ತಕಗಳ “ನಾಯಕ” ಪಾತ್ರವಾದ “ಹ್ಯಾರಿ ಪಾಟರ್”ನ ನೋವು-ನಲಿವು ಕಳೆದ ಏಳು ವರ್ಷಗಳಿಂದ ಇಂಗ್ಲಿಷ್ ಓದುವ ದೇಶಗಳಲ್ಲಿ ಮಾತ್ರವಲ್ಲ, ಇದು ಭಾಷಾಂತರವಾದ ೬೮ ಭಾಷೆ ಓದುವ ದೇಶಗಳಲ್ಲೂ ಮನೆಮಾತಾಗಿತ್ತು. “ಹ್ಯಾರಿ ಪಾಟರ್” ಸರಣಿ ಪುಸ್ತಕಗಳ ಮಾರಾಟ (ಅವುಗಳ ೫ ಫಿಲಂ ರೂಪ ಸೇರಿದಂತೆ) ಸಾರ್ವಕಾಲಿಕ ವಿಕ್ರಮ ಸಾಧಿಸಿದೆ. ಕಳೆದ ವಾರ ಬಿಡುಗಡೆಯಾದ ಈ ಸರಣಿಯ ಏಳನೇ ಪುಸ್ತಕದ ೧.೧ ಕೋಟಿ ಪ್ರತಿಗಳು ಮೊದಲ ೨೪ ಗಂಟೆಗಳಲ್ಲೇ ಮಾರಾಟವಾಗಿ ವಿಕ್ರಮ ಸಾಧಿಸಿತು. ಇಲ್ಲಿಯವರೆಗೆ ಮೊದಲ ಆರು ಪುಸ್ತಕಗಳ ೩೨.೫ ಕೋಟಿ ಪ್ರತಿಗಳು ಮಾರಾಟವಾಗಿವೆಯಂತೆ. ಟಿವಿ-ವಿಡಿಯೋ ಗೇಮ್ಸ್ ಭರಾಟೆಯಲ್ಲಿ ಪುಸ್ತಕ ಓದುವ ಸಂಸ್ಕೃತಿ ಸಶಿಸಿ (ಮಕ್ಕಳಲ್ಲಿ ಮಾತ್ರವಲ್ಲ ದೊಡ್ಡವರಲ್ಲೂ) ಹೋಗುತ್ತಿರುವ ಈಗಿನ ಸನ್ನಿವೇಶದಲ್ಲಿ, “ಹ್ಯಾರಿ ಪಾಟರ್”ನ ಈ ಅಗಾಧ ಜನಪ್ರಿಯತೆ ಒಂದು ಮಹತ್ವದ ಸಾಂಸ್ಕೃತಿಕ ಘಟನೆ ಎನ್ನಬೇಕು. ಒಟ್ಟಾರೆಯಾಗಿ ಇದೊಂದು ಸಕಾರಾತ್ಮಕ ಬೆಳವಣಿಗೆ ಎನ್ನಬೇಕು. “ಹ್ಯಾರಿ ಪಾಟರ್” ಸರಣಿಯ ಈ ಚಾರಿತ್ರಿಕ ಜನಪ್ರಿಯತೆಯ ಹಿಂದಿರುವ ಕಾರಣಗಳ ಬಗ್ಗೆ ಅಧ್ಯಯನ ಮತ್ತು ವಿಶ್ಲೇಷಣೆ ಅಗತ್ಯ. ಕಾರಣಗಳು ಗೊತ್ತಾದರೆ ಪುಸ್ತಕ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಬಗ್ಗೆ ಸುಳಿವು ಸಿಕ್ಕೀತೇನೊ?

hp.jpg“ಹ್ಯಾರಿ ಪಾಟರ್”ನ ಜನಪ್ರಿಯತೆಯನ್ನು ಸರಳ ಕಾರಣಗಳನ್ನು ಕೊಟ್ಟು “ವಿವರಿಸುವರು” ಮತ್ತು “ತಳ್ಳಿ ಹಾಕುವವರು” ಇದ್ದಾರೆ. ಇದು ಪುಸ್ತಕ ಪ್ರಕಾಶನ “ಕೈಗಾರಿಕೆ” – ಆಧುನಿಕ ಬಂಡವಾಳಶಾಹಿ “ಪರಿಪೂರ್ಣಗೊಳಿಸಿರುವ” “ಹೈ-ವೋಲ್ಟೇಜ್” ಮಾರುಕಟ್ಟೆ ತಂತ್ರವನ್ನು – ಅತ್ಯಂತ ಸಮರ್ಥವಾಗಿ ಅಳವಡಿಸಿದ ಪ್ರಕರಣ ಅಷ್ಟೇ. ಅದಕ್ಕಿಂತ ಹೆಚ್ಚಿನದೇನೂ ಇದರಲ್ಲಿ ನೋಡಬೇಕಾಗಿಲ್ಲ ಎನ್ನುತ್ತಾರೆ ಇವರು. ಮಾರುಕಟ್ಟೆ ತಂತ್ರ ಮಹತ್ವದ ಪಾತ್ರ ವಹಿಸಿದೆ ಎಂದು ಒಪ್ಪಿಕೊಂಡರೂ, ಯಾವುದೇ ಮಾರುಕಟ್ಟೆ ತಂತ್ರ ಏಳು ವರ್ಷಗಳ ಕಾಲ ವಿವಿಧ ಹಿನ್ನೆಲೆಯ ಕೋಟ್ಯಂತರ ಮಕ್ಕಳನ್ನು ಸರಾಸರಿ ೭೦೦ ಪುಟಗಳ ಪುಸ್ತಕವನ್ನು ಉಸಿರು ಕಟ್ಟಿಸುವ ವೇಗದಲ್ಲಿ ಓದಿಸಬಲ್ಲುದು ಎಂಬುದಕ್ಕೆ ಪೂರ್ಣ ವಿವರಣೆ ಕೊಡುವುದಿಲ್ಲ. ಕೆಲವು ಅಧ್ಯಯನಗಳು “ಹ್ಯಾರಿ ಪಾಟರ್” ಮಕ್ಕಳಲ್ಲಿ ಪುಸ್ತಕ ಓದುವ ಸಂಸ್ಕೃತಿ ಪುನಃ ಬಿತ್ತಿದೆ ಎಂಬುದು ನಿಜವಲ್ಲ ಎಂದಿವೆ. ಈ ಅಧ್ಯಯನಗಳ ಪ್ರಕಾರ ಮಕ್ಕಳು “ಹ್ಯಾರಿ ಪಾಟರ್” ಬಿಟ್ಟರೆ ಬೇರೆ ಪುಸ್ತಕ ಓದುವುದಿಲ್ಲ ಎಂದಿವೆ. ಇವೆಲ್ಲಾ ಈ ಅಗಾಧ ಜನಪ್ರಿಯತೆ ಒಂದು ಮಹತ್ವದ ವಿಶಿಷ್ಟ ಬೆಳವಣಿಗೆ ಎಂಬುದನ್ನು ಇನ್ನಷ್ಟು ದೃಢಪಡಿಸುತ್ತವೆ.

ಸ್ಥೂಲ ವಿಶ್ಲೇಷಣೆಯಿಂದ ಕೆಲವು ಪ್ರಮುಖ ಕಾರಣಗಳನ್ನಂತೂ ಕಾಣಬಹುದು. “ಹ್ಯಾರಿ ಪಾಟರ್” ಬರಿಯ ಮಕ್ಕಳ ಕುತೂಹಲ ಕೆರಳಿಸುವ ಯಕ್ಷಿಣಿ ಕಥೆ ಪುಸ್ತಕ ಮಾತ್ರ ಆಗಿರಲಿಲ್ಲ. ಅದು ಫ್ಯಾಂಟಸಿ, ಸಾಮಾಜಿಕ ಅಣಕ, ಸಾಹಿತ್ಯಿಕ ಅಣಕ, ಸಾಹಸಗಾಥೆ, ರಹಸ್ಯಶೋಧ, ಮನೋವೈಜ್ಞಾನಿಕ – ಮುಂತಾದ ಹಲವು ಸಾಹಿತ್ಯಿಕ ಪ್ರಕಾರಗಳ ಗಡಿ ದಾಟಿತ್ತು. ಆ ಪ್ರತಿಯೊಂದು ಸಾಹಿತ್ಯಿಕ ಪ್ರಕಾರಗಳಲ್ಲಿ ಅತ್ಯಂತ ಉತ್ಕೃಷ್ಟ ಮಟ್ಟದ ಬರವಣಿಗೆಯೂ ಆಗಿತ್ತು. ಈ ಎಲ್ಲಾ ಪ್ರಕಾರಗಳು ಇಂದಿನ ಅತ್ಯಂತ ಜನಪ್ರಿಯ ಪ್ರಕಾರಗಳು ಎಂದು ಗಮನಿಸಬೇಕು. ಈ ಎಲ್ಲ ಪ್ರಕಾರಗಳನ್ನು ಒಂದೇ ಪುಸ್ತಕ ಸರಣಿಯಲ್ಲಿ ಅತ್ಯಂತ ಉತ್ಕೃಷ್ಟ ರೀತಿಯಲ್ಲಿ ಹಿಡಿದಿಟ್ಟದ್ದು ಈ ಅಗಾಧ ಜನಪ್ರಿಯತೆಯ ಹಿಂದಿನ ಪ್ರಧಾನ ಕಾರಣ ಎನ್ನಬಹುದು. ಏನು ಬೇಕಾದರೂ ಮಾಡಲು ಅನುವು ಮಾಡುವ ಮಾಂತ್ರಿಕ ಶಕ್ತಿ, ಕಾಲ್ಪನಿಕ ಬದಲಿ ಜೀವನ ಎಲ್ಲಾ ಕಾಲದಲ್ಲೂ ಜನಪ್ರಿಯವೇ. ಬೇರೆ ಬೇರೆ ಕಾಲ-ದೇಶಗಳ, ಸಂಸ್ಕೃತಿಗಳಲ್ಲಿ ಜನಪ್ರಿಯವಾಗಿದ್ದ ಫ್ಯಾಂಟಸಿ ಪಾತ್ರ, ಸನ್ನಿವೇಶ(ಉದಾ; ಫೀನಿಕ್ಸ್, ಕನ್ನಡಿಯೊಳಗೆ ಭೂತ ಕಾಲದ ವ್ಯಕ್ತಿಯೊಂದು ಕೆಲವರ ಜತೆ ಮಾತ್ರ ಮಾತನಾಡುವುದು)ಗಳನ್ನು ಒಂದೇ ಕಾಲ-ಸ್ಥಳದಲ್ಲಿ ಹಿಡಿದಿಟ್ಟದ್ದು “ಹ್ಯಾರಿ ಪಾಟರ್”ನ ಇನ್ನೊಂದು ವಿಶಿಷ್ಟತೆ. ಇದು ಪ್ರತಿಯೊಬ್ಬರಿಗೆ ಇಷ್ಟವಾದ ಫ್ಯಾಂಟಸಿ, ಕಾಲ್ಪನಿಕತೆಗೆ ಕಚಗುಳಿ ಇಟ್ಟಿತ್ತು. ಗೊತ್ತಿಲ್ಲದ ಹೊಸ ಫ್ಯಾಂಟಸಿ, ಕಾಲ್ಪನಿಕತೆಗೆ ಬಾಗಿಲು ತೆರೆದಿತ್ತು. ಅದೂ ಇವೆಲ್ಲಾ ಓದುಗರಿಗೆ ಗೊತ್ತಿರುವ ಈಗಿನ ದೇಶ-ಕಾಲದಲ್ಲೇ ನಡೆಯುವುದು. ಆದರೂ ತೀರಾ ಹೊಸತು ಅನ್ನಿಸುವುದು. ಇದು “ಹ್ಯಾರಿ ಪಾಟರ್” ಮಾಂತ್ರಿಕ ಶಕ್ತಿಯ ಗುಟ್ಟುಗಳಲ್ಲೊಂದು.

ಕೊನೆಯದಾಗಿ ಇವೆಲ್ಲದರ ಜತೆ ಅದರ ಸಾಮಾಜಿಕ ಪ್ರಸ್ತುತತೆ ವಿಶೇಷ ಮೆರುಗು ನೀಡಿದೆ. ಅನ್ಯಾಯ-ಕಿರುಕುಳಕ್ಕೆ ಒಳಗಾಗುವ ಹ್ಯಾರಿ ಪಾಟರ್, ಆತ ಈ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಬಗೆ, ಆತನ ಈ ಸಾಹಸಗಾಥೆಯಲ್ಲಿ ಅವನ ಜತೆ ನಿಲ್ಲುವವರು, ಆತನ ಸಾಮಾಜಿಕ ಸಂಬಂಧಗಳಲ್ಲಿ ಬರುವ ವೈವಿಧ್ಯಮಯ ಪಾತ್ರಗಳು ನಮ್ಮ ಪ್ರಸ್ತುತ ಸಮಾಜಕ್ಕೆ ಹಿಡಿದ ಕನ್ನಡಿ. ಅದರ ಸಶಕ್ತ ವಿಮರ್ಶೆ ಸಹ – ಹಲವು ಕಡೆ. ನಮ್ಮ ಕಾಲದ, ನಾವೆಲ್ಲರೂ ವೈಯಕ್ತಿಕ ಮತ್ತು ಸಾಮಾಜಿಕ ನೆಲೆಯಲ್ಲಿ ಎದುರಿಸುತ್ತಿರುವ ಹಲವು ನೈತಿಕ, ಸಾಂಸ್ಕೃತಿಕ ಸವಾಲುಗಳು, ತಳಮಳಗಳೂ, ಅದನ್ನು ಎದುರಿಸುವ ಬಗೆ – ಜೆ.ಕೆ.ರಾಲಿಂಗ್ ಸೃಷ್ಟಿಸಿದ ಕಾಲ್ಪನಿಕ ಲೋಕದಲ್ಲೂ ಕಾಡುತ್ತವೆ. ರಾಲಿಂಗ್ ಸೃಷ್ಟಿಸಿದ ಕಾಲ್ಪನಿಕ ಲೋಕ ನಮ್ಮನ್ನು ತಾತ್ಕಾಲಿಕವಾಗಿ ನಮ್ಮ ದೈನಂದಿನ ಜಂಜಾಟದ ಲೋಕದಿಂದ ಬಿಡುಗಡೆ ಮಾಡುವ, ಅದೇ ಸಮಯದಲ್ಲಿ ನಮ್ಮ ಕಾಲಕ್ಕೆ ಸ್ಪಂದಿಸುವ ಮಹಾಗಾಥೆ.

ಇದು ಹ್ಯಾರಿ ಪಾಟರ್ ನ ಅಗಾಧ ಜನಪ್ರಿಯತೆಯ ಸ್ಥೂಲ ಕಾರಣಗಳು. ಆದರೆ ಈ ವಿಶಿಷ್ಟ ಸಾಂಸ್ಕೃತಿಕ ಘಟನೆ ಸುತ್ತ ಎಲ್ಲವೂ ಸಕಾರಾತ್ಮಕ ಎಂದುಕೊಳ್ಳಬೇಕಾಗಿಲ್ಲ. ಹ್ಯಾರಿ ಪಾಟರ್ ನ ಕೋಟ್ಯಂತರ “ಫ್ಯಾನ್”ಗಳ ಮುಂದಿರುವ ಯಕ್ಷ ಪ್ರಶ್ನೆ – ಹ್ಯಾರಿ ಸತ್ತಿಲ್ಲ, ಆದರೆ ಅವನು ವಾಪಸು ಬರುವುದಿಲ್ಲ. ಹ್ಯಾರಿ ಇಲ್ಲದ ಜಗದಲ್ಲಿ ನಾವು ಬದುಕುವುದು ಹೇಗೆ? ಇದೇ ತರಹದ ಪ್ರಶ್ನೆಗಳು “ಹ್ಯಾರಿ ಪಾಟರ್” ಎಂಬ ಸಾಂಸ್ಕೃತಿಕ ಘಟನೆಯ “ಫ್ಯಾನ್”ಗಳ ಮುಂದೆಯೂ ಇವೆ – ಹ್ಯಾರಿ ಪಾಟರ್ ನಂತರವೂ ಆರೋಗ್ಯಕರ ಮೌಲ್ಯಗಳನ್ನು ಬಿತ್ತುವ ಪುಸ್ತಕ ಓದುವ ಸಂಸ್ಕೃತಿ ಮುಂದುವರಿಸುವುದು ಹೇಗೆ? ರಾಲಿಂಗ್ ಇನ್ನೊಂದು ಮೇರು ಕೃತಿ ಯಾವಾಗ ಕೊಡುತ್ತಾರೆ ಎಂದು ಬಾಯಿ ಬಿಟ್ಟುಕೊಂಡು ಕಾಯುವುದೇ? ಹ್ಯಾರಿ ಪಾಟರ್ ನ್ನು ಖಂಡಿತವಾಗಿ ಕಮರ್ಶಿಯಲ್ ಆಗಿ (ಫಿಲಂ, ಥೀಮ್ ಪಾರ್ಕ ಇತ್ಯಾದಿಯಾಗಿ) ಪೂರ್ತಿಯಾಗಿ ಹಿಂಡಿ ಹಿಪ್ಪೆ ಮಾಡುವುದನ್ನು ಕೈ ಕಟ್ಟಿಕೊಂಡು ನೋಡಿಕೊಂಡಿರುವುದೇ? ಅದರ ಅನಾರೋಗ್ಯಕರ ಕಮರ್ಶಿಯಲ್ ಹಿಡಿತ ಇತರ ಇಂತಹ ಪುಸ್ತಕ ಸದ್ಯಕ್ಕೆ ಬರದಂತೆ ಮಾಡುವ ಅಪಾಯ ತಡೆಯುವುದು ಹೇಗೆ?

ಹ್ಯಾರಿ ಪಾಟರ್! ನಿನ್ನ ಮಾಂತ್ರಿಕ ಶಕ್ತಿಯಿಂದ ಇದಕ್ಕೂ ಏನಾದರೂ ಮಾಡು ಮಾರಾಯ! (ಜನಶಕ್ತಿ)

‍ಲೇಖಕರು avadhi

July 31, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This