ಹ್ಯಾರಿ ಪೀಟರ್ ಮತ್ತು ಜಾಕೆಲಿನ್

ಹೈವೇ 7

——–

ಮೇರಿ ಜಾಕೆಲಿನ್ ಎಂಬ ಶ್ರೀಪೆರಂಬೂರಿನ ಹೆಣ್ಣಿನ ಜೊತೆ ಹ್ಯಾರಿ ಪೀಟರ್ ಮದುವೆ ಮದ್ರಾಸಿನಲ್ಲಿ ನಿಶ್ಚಯವಾಯಿತು. ನಮ್ಮ ಮನೆಯಲ್ಲಿ ಅಪ್ಪ, ದೊಡ್ಡಣ್ಣನನ್ನು ಬಿಟ್ಟು, ನಾನು, ಅಕ್ಕ, ಚಿಕ್ಕಣ್ಣ, ಅಮ್ಮ ಇಷ್ಟು ಜನರು ಪೀಟರ್ ಜೊತೆ ಮದ್ರಾಸಿಗೆ ಹೋದೆವು. ಅಲ್ಲೇ ಒಂದು ಚರ್ಚಿನಲ್ಲಿ ವಿವಾಹ ಸರಳವಾಗಿ ಜರುಗಿತು. ಎಲ್ಲವೂ ಸರಿಯಾಗೇ ಇತ್ತು. ತನ್ನ ಹಿರಿ ಅಕ್ಕನ ಮನೆಯಾದ ಅರಿಟಾಳ ಮನೆಯಲ್ಲಿ ಇಬ್ಬರಿಗೂ ಒಂದೇ ಬಾಳೆ ಎಲೆಯಲ್ಲಿ ಕೋಳಿ ಊಟವನ್ನು ಬಡಿಸಿದ್ದರು. ಬಿಳಿಸೀರೆ ಉಟ್ಟುಕೊಂಡು ಸುಂದರವಾಗಿ ಕಾಣುತ್ತಿದ್ದ ಜಾಕೆಲಿನ್, ಕೈ ಊರಿಕೊಂಡು ಊಟ ಮಾಡುತ್ತಿದ್ದಳು.

hoovu3.jpg

ಭಾಗ: ಎಂಟು

ವಿ ಎಂ ಮಂಜುನಾಥ್

ದ್ರಾಸಿನ ವೇಲೂರಿನವನಾದ ಈ ವ್ಯಕ್ತಿ ನಮ್ಮನ್ನು ತನ್ನ ಸೌಜನ್ಯ, ವಿನಯ, ಪ್ರಕೃತಿಗೆ ಸಂಬಂಧಿಸಿದ ಬಣ್ಣಬಣ್ಣದ ಕಲಾಕೃತಿಗಳನ್ನು ರಚಿಸುವುದು, ಮರಗಳ ಕೆಳಗೆ, ಮನೆ ಸಂದುಗಳಲ್ಲಿ, ಚರ್ಚಿನ ಸಮಾರಂಭಗಳಲ್ಲಿ ಮೌಥ್ ಆರ್ಗನ್ ನುಡಿಸುವುದು, ತಮಿಳು ಸಿನೆಮಾ ಗೀತೆಗಳನ್ನು ಸುಂದರವಾಗಿ ಹಾಡುವುದು, ಹುಡುಗಿಯರನ್ನು ಸೆಳೆಯುವುದರಿಂದ ನಮ್ಮ ಆಕರ್ಷಣೆಗೊಳಗಾಗಿದ್ದ. ನನ್ನ ಮನೆಯ್ ಒಂದು ಮೂಲೆಯಿಂದ ಮತ್ತೊಂದು ಮೂಲೆಯವರೆಗೂ ಹಸಿರು ಬಣ್ಣದ ಕಾಂಡಗಳಿರುವ, ಕೆಂಪು ಬಣ್ಣದ ಗುಲಾಬಿ ಹೂಗಳನ್ನು ಚಿತ್ರಿಸುತ್ತಲೇ ಸಾರಾಯಿ ಮಾರುವ ಸುಂದರಿ ಗುಲಾಬ್ ಳನ್ನು ಮುತ್ತುಗಳಿಂದ ಚುಂಬಿಸಿದವನು.

ಸಣ್ಣ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಈತ, ತನ್ನ ತಂದೆಯೊಂದಿಗೆ ಮದ್ರಾಸು ತೊರೆದು ವೆಂಕಟಾಲ ಸೇರಿಕೊಂಡ. ಮೂವರು ಮಕ್ಕಳಲ್ಲಿ ಈತ ಎರಡನೆಯವನು. ಮೊದಲನೆಯವಳು ಆರಿಟಾ. ಕೊನೆಯವಳು ಶಾಂತ. ಇವಳು ಕೆಲವು ಕಾಲ ನಮ್ಮ ನಡುವೆ ಇದ್ದವಳು. ಗಂಡನಿಲ್ಲದ ಹೊತ್ತಿನಲ್ಲಿ ಗಡಿಭದ್ರತಾ ಪಡೆಯ ಸೈನಿಕನೋರ್ವನನ್ನು ಪ್ರೇಮಿಸಲು ಹೋಗುತ್ತಿದ್ದಳು. ತಂದೆ ಮುನಿಸ್ವಾಮಿ ಜಾಲಹಳ್ಳಿ ಕಡೆಯ ಸಂಬಂಧದಲ್ಲಿ ಜಯಮ್ಮ ಎಂಬ ಹೆಣ್ಣನ್ನು ಮದುವೆ ಮಾಡಿಕೊಂಡ. ಎಂದಿನಂತೆ ಹ್ಯಾರಿ ಪೀಟರ್ ಮಲತಾಯಿಯ ಶೋಷಣೆಯಿಂದ ಬೆಳೆದು ದೊಡ್ಡವನಾದ. ಮುನಿಸ್ವಾಮಿ ಏರ್ ಫೋರ್ಸಿನ ಅಂಗಸಂಸ್ಥೆಯಾದ ಗ್ಯಾರಿಸನ್ ಇಂಜಿನಿಯರ್ ಕ್ಯಾಂಪಿನಲ್ಲಿ ಕೆಲಸ ಮಾಡುತ್ತಿದ್ದ. ರ್‍ಯಾಲಿ ಸೈಕಲ್ಲಿನಲ್ಲಿ ದಿನವೂ ಕ್ಯಾಂಪಿಗೆ ಕೆಲಸಕ್ಕೆ ಹೋಗಿ ಬರುತ್ತಿದ್ದ ಮುನಿಸ್ವಾಮಿ, ತನ್ನ ಎರಡನೇ ಹೆಂಡತಿ ಜಯಮ್ಮನಿಂದ ಅನೇಕ ಕಾರಣಗಳಿಗಾಗಿ ಕಿರುಕುಳಕ್ಕೆ ಒಳಗಾಗಿ, ಕ್ಷಯದಿಂದ ಬಾಡುತ್ತಿದ್ದವನು ಒಂದು ಬೆಳಗ್ಗೆ ಸಾವಿಗೀಡಾದ. ಮದ್ರಾಸಿನಲ್ಲಿ ಬಿಎ, ಎ ಎಲ್ ಬಿ ಓದಿಕೊಂಡಿದ್ದ ಹ್ಯಾರಿ ಪೀಟರ್, ಒಂದು ಕ್ಷಣವೂ ಮಲತಾಯಿಯೊಂದಿಗೆ ಇರಲಿಚ್ಛಿಸದೆ, ಸ್ವತಂತ್ರವಾಗಿ ಬದುಕತೊಡಗಿದ.

ನಮ್ಮ ಮನೆಯಲ್ಲಿ ವಾಸವಿದ್ದಾಗ ಪೀಟರ್ ನಮ್ಮ ಮೇಲೆ ದಟ್ಟವಾದ ಪ್ರಭಾವ ಬೀರಿದ. ವಿಸ್ಡಮ್ ಮತ್ತು ರೀಡರ್‍ಸ್ ಡೈಜೆಸ್ಟ್ ಪತ್ರಿಕೆಗಳಿಗೆ ಚಂದಾದಾರನಾಗಿದ್ದ. ಕಪ್ಪು ಇಂಕಿನಲ್ಲಿ ಇಂಗ್ಲಿಷ್ ಅಕ್ಷರಗಳನ್ನು ಸಾಧ್ಯವಾದಷ್ಟು ಓರೆ ಮಾಡಿ ಬರೆಯುತ್ತಿದ್ದ. ಗ್ರೀಟಿಂಗ್ ಕಾರ್ಡುಗಳಲ್ಲಿರುವಂತೆ ಅವು ಮೋಹಕವಾಗಿ ಕಾಣುತ್ತಿದ್ದವು. ನಾವೆಲ್ಲರೂ ಅದನ್ನು ಅನುಕರಿಸುತ್ತಿದ್ದೆವು. ಈತ ಬಾಡಿಗೆಗೆ ಹಿಡಿದ ಮನೆಗಳ ಗೋಡೆಗಳಲ್ಲಿ ಮನಸೆಳೆಯುವ ಭೂದೃಶ್ಯಗಳನ್ನು ಚಿತ್ರಿಸುತ್ತಿದ್ದ. ಭಾನುವಾರ ಚರ್ಚಿಗೆ ಪ್ರಾರ್ಥನೆಗೆ ಹೋಗುವಾಗ ಹ್ಯಾರಿ ಹೇಗೆ ಸಿದ್ಧನಾಗುತ್ತಿದ್ದನೆಂದರೆ, ನೀಟಾಗಿ ಡ್ರೆಸ್ ಮಾಡಿಕೊಳ್ಳುತ್ತಿದ್ದ. ಸುಗಂಧದ್ರವ್ಯವನ್ನು ಮೈಯೆಲ್ಲಾ ಪೂಸಿಕೊಳ್ಳುತ್ತಿದ್ದ. ಅದು ಯಾವ ಥರದ ಚಪ್ಪಲಿಯೋ ನನಗೆ ಈಗಲೂ ಸ್ಪಷ್ಟವಾಗುತ್ತಿಲ್ಲ. ಅವನು ಆ ಕಪ್ಪುಮಿಶ್ರಿತ ಬೂದುಬಣ್ಣದ ಚಪ್ಪಲಿಯನ್ನು ಧರಿಸುವ ಮುನ್ನ, ಬಿಳಿ ಬಣ್ಣದ ಕಾಲುಚೀಲವನ್ನು ಹಾಕಿಕೊಳ್ಳುತ್ತಿದ್ದ. ನನಗೆ ಸರಿಯಾಗಿ ಜ್ಞಾಪಕದಲ್ಲಿರುವಂತೆ ಅವನು ಕರ್ನಾಟಕ ಬಿಟ್ಟೂ ಮದ್ರಾಸ್ ಸೇರುವವರೆಗೂ ಆ ಚಪ್ಪಲಿಯನ್ನೇ ಹಾಕಿಕೊಳ್ಳುತ್ತಿದ್ದ. ಕಾಸಿನ ಯೋಗ್ಯತೆಯನ್ನು ಸರಿಯಾಗಿ ಅರಿತುಕೊಂಡಿದ್ದ ಆತ, ತನ್ನ ಸೂಟ್ ಕೇಸಿನಲ್ಲಿ ಐದು ಪೈಸೆ, ಹತ್ತು ಪೈಸೆ, ನಾಲ್ಕಾಣೆ, ಎಂಟಾಣೆಗಳನ್ನು ಕೂಡಿಡುತ್ತಿದ್ದ. ತೀರ ಕಷ್ಟದಲ್ಲಿ ಅದನ್ನು ಬಳಸಿಕೊಳ್ಳುತ್ತಿದ್ದ. ನಮ್ಮ ಮನೆಯಲ್ಲಿ ಆತ ಮೊದಲ ಬಾರಿಗೆ ಮ್ಯಾಗಿಯನ್ನು ತನ್ನ ಕೈಯ್ಯಾರೆ ತಯಾರಿಸಿ, ಹಬ್ಬವೊಂದನ್ನು ಉಡುಗೊರೆಯಾಗಿ ನೀಡಿ, ಅಪರೂಪದ ಸಂತಸಕ್ಕೆ ಕಾರಣನಾಗಿದ್ದ. ನನ್ನನ್ನು ಅವನು ಅಷ್ಟಾಗಿ ಪ್ರೀತಿಸುತ್ತಿರಲಿಲ್ಲ. ನನ್ನ ಚಿಕ್ಕ ಅಣ್ಣ ಚಂದ್ರಶೇಖರನನ್ನು ಹಚ್ಚಿಕೊಂಡದ್ದ ಆತ, ಹೋದ ಕಡೆಯಲ್ಲೆಲ್ಲಾ ಅವನನ್ನು ಕರೆದುಕೊಂಡು ಹೋಗುತ್ತಿದ್ದ. ಸಂಜೆಗಳಲ್ಲಿ ಸ್ಕೂಲ್ ಮುಂದೆ ನನ್ನ ಅಣ್ಣನಿಗೆ ಇಂಗ್ಲಿಷ್ ಹೇಳಿಕೊಡುತ್ತಿದ್ದ. ನಾನು ದೂರ ನಿಂತು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದೆ. ಆಮೇಲೆ ಬೇರೆ ಬೇರೆ ಕಾರಣಗಳಿಗಾಗಿ ನಾನು ಅವನ ಜೊತೆ ಆ ವಯಸ್ಸಿನಲ್ಲೇ ಜಗಳವಾಡಿಕೊಂಡಿದ್ದೆ. ಅಷ್ಟಾದರೂ ನಾನು ಅವನ ಚಿತ್ರಗಳು, ಕೈಬರಹ, ಓದು, ಉಡುಪು ಹಾಕಿಕೊಳ್ಳುವ ಬಗೆಯನ್ನು ಅನುಕರಿಸತೊಡಗಿದ್ದೆ.

ಮೂರನೇ ತರಗತಿಯಲ್ಲಿ ಓದುತ್ತಿದ್ದ ನೆನಪು. ಇಂಡಿಯನ್ ಏರ್ ಫೋರ್ಸಿನಲ್ಲಿ ವೈಮಾನಿಕ ಪ್ರದರ್ಶನ ಏರ್ಪಾಡಾಗಿತ್ತು. ನಾನು ಮತ್ತು ನನ್ನ ಅಣ್ಣನನ್ನು ಕರೆದುಕೊಂಡು ಹೋಗಿ ವಿಮಾನ, ಹೆಲಿಕಾಪ್ಟರುಗಳನ್ನು ತೋರಿಸಲು ಹ್ಯಾರಿ ಪೀಟರ್ ಮನೆಗೆ ಬಂದ. ನಮಗೆ ತೊಡಲು ಸರಿಯಾದ ಬಟ್ಟೆಗಳಿರಲಿಲ್ಲ. ಅಮ್ಮ ತೇಪೆ ಹಾಕಿದ ಹಳೆ ಬಟ್ಟೆಗಳನ್ನೇ ಹಾಕಿ, ಪೌಡರ್ ಸವರಿ, ಇಬ್ಬರ ಕೈಗಳಿಗೆ ತಲಾ ನಾಲ್ಕಾಣೆ ಕೊಟ್ಟು ಕಳುಹಿಸಿದ್ದಳು. ನಮ್ಮ ಮನೆಗಳಿಂದ ಸುಮಾರು ಐದಾರು ಮೈಲಿ ದೂರದಲ್ಲಿರುವ ಇಂಡಿಯನ್ ಏರ್ ಫೋರ್ಸ್ ಗೆ ನಾವು ನಡೆದುಕೊಂಡೆ ಹೋದೆವು. ಬೇರೆ ಬೇರೆ ಗ್ರಾಮಗಳಿಂದ ಬಂದ ಹುಡುಗರೆಲ್ಲರೂ ಹೊಸ ಬಟ್ಟೆಗಳನ್ನು ಹಾಕಿಕೊಂಡು ಮಿಂಚುತ್ತಿದ್ದರು. ಹ್ಯಾರಿ ಪೀಟರ್ ಕ್ಯಾಂಪೊಳಗೆ ನಮ್ಮನ್ನು ಕರೆದುಕೊಂಡು ಹೋಗಿ, ಹೆಲಿಕಾಪ್ಟರ್ ಹತ್ತಿಸಿ, ಒಳಗಿರುವ ಸ್ವಿಚ್ಚುಗಳನ್ನೆಲ್ಲಾ ಪರಿಚಯಿಸಿದ. ಏನಾದರೂ ಗೊತ್ತಾಗದೇ ಹೋದರೆ, ಪೈಲಟ್ ನನ್ನು ಕೇಳಲು ನಮಗೆ ಧೈರ್ಯ ತುಂಬಿ ಕಳುಹಿಸಿದ. ಅಮ್ಮ ನಮಗೆ ಕೊಟ್ಟಿದ್ದ ನಾಲ್ಕಾಣೆ ಕಾಸುಗಳನ್ನು ಆತ ಖರ್ಚು ಮಾಡಿಸಲಿಲ್ಲ. ಹಾಗೆ ನಮಗೇನಾದರೂ ಕೊಡಿಸಲು ಅವನ್ ಬಳಿಯೂ ನಯಾಪೈಸೆಯೂ ಇರಲಿಲ್ಲ.

ಮೇರಿ ಜಾಕೆಲಿನ್ ಎಂಬ ಶ್ರೀಪೆರಂಬೂರಿನ ಹೆಣ್ಣಿನ ಜೊತೆ ಹ್ಯಾರಿ ಪೀಟರ್ ಮದುವೆ ಮದ್ರಾಸಿನಲ್ಲಿ ನಿಶ್ಚಯವಾಯಿತು. ನಮ್ಮ ಮನೆಯಲ್ಲಿ ಅಪ್ಪ, ದೊಡ್ಡಣ್ಣನನ್ನು ಬಿಟ್ಟು, ನಾನು, ಅಕ್ಕ, ಚಿಕ್ಕಣ್ಣ, ಅಮ್ಮ ಇಷ್ಟು ಜನರು ಪೀಟರ್ ಜೊತೆ ಮದ್ರಾಸಿಗೆ ಹೋದೆವು. ಅಲ್ಲೇ ಒಂದು ಚರ್ಚಿನಲ್ಲಿ ವಿವಾಹ ಸರಳವಾಗಿ ಜರುಗಿತು. ಎಲ್ಲವೂ ಸರಿಯಾಗೇ ಇತ್ತು. ತನ್ನ ಹಿರಿ ಅಕ್ಕನ ಮನೆಯಾದ ಅರಿಟಾಳ ಮನೆಯಲ್ಲಿ ಇಬ್ಬರಿಗೂ ಒಂದೇ ಬಾಳೆ ಎಲೆಯಲ್ಲಿ ಕೋಳಿ ಊಟವನ್ನು ಬಡಿಸಿದ್ದರು. ಬಿಳಿಸೀರೆ ಉಟ್ಟುಕೊಂಡು ಸುಂದರವಾಗಿ ಕಾಣುತ್ತಿದ್ದ ಜಾಕೆಲಿನ್, ಕೈ ಊರಿಕೊಂಡು ಊಟ ಮಾಡುತ್ತಿದ್ದಳು. ಯಾಕೋ ಆ ಮನೆಯವರು ನಮಗೆ ಅಂಥ ಊಟ ಹಾಕಿದ ನೆನಪಾಗುತ್ತಿಲ್ಲ. ನಾವು ಮೂವರು ಅವರ ಮನೆಯ ಹಿಂದೆ ಇದ್ದ ನೆಲ್ಲಿಕಾಯಿ ಮರದ ಕೆಳಗೆ ಆಟವಾಡುತ್ತಿದ್ದು ಸರಿಯಾಗಿ ಗೊತ್ತಿದೆ. ನಾವು ಮತ್ತೆ ಬೆಂಗಳೂರಿಗೆ ಹಿಂದಿರುಗಲು ಸಾಕಷ್ಟು ಕಷ್ಟಪಡಬೇಕಾಯಿತು. ಪೀಟರ್ ಕೌಟುಂಬಿಕ ಸಂಕಷ್ಟಕ್ಕೆ ಒಳಗಾಗಿ ನಮ್ಮನ್ನು ನೋಡಿಕೊಳ್ಳಲಾರದೆ ಅಸಹಾಯಕನಾದ. ಎಷ್ಟೋ ರಾತ್ರೆಗಳಲ್ಲಿ ಚರ್ಚ್ ಮುಂದಿನ ಮರಳಿನಲ್ಲಿ ಆಟವಾಡುತ್ತಾ ನಿದ್ರೆ ಹೋಗಿದ್ದೆವು. ಒಂದು ಹೊತ್ತು ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ ಉಂಟಾಯಿತು. ಅಮ್ಮ ತನ್ನ ಬಳಿ ಇಟ್ಟುಕೊಂಡಿದ್ದ ಕಾಸಿನಲ್ಲಿ ನಾವು ಮೂವರಿಗೂ ಮಸಾಲೆ ದೋಸೆ, ಟೀ ಕೊಡಿಸಿದಳು. ಅತ್ತ ಪೀಟರ್ ನಮ್ಮನ್ನು ಬೆಂಗಳೂರಿಗೆ ಕಳುಹಿಸಲು ಹರಸಾಹಸ ಪಡುತ್ತಿದ್ದ. ಕೆಲವು ಸಲ ನಮ್ಮನ್ನೆಲ್ಲ ಮದ್ರಾಸಿನ ಸೆಂಟ್ರಲ್ ರೈಲ್ವೆ ಸ್ಟೇಷನ್ನಿನಲ್ಲಿ ಬಿಟ್ಟು, ಟಿಕೇಟಿಗೆ ಹಣ ತರುತ್ತೇನೆಂದು ಹೋಗುತ್ತಿದ್ದ ಪೀಟರ್ ಯಾವಾಗಲೋ ಬರುತ್ತಿದ್ದ. ಅಲ್ಲಿಯವರೆಗೂ ನಾವು ರೈಲ್ವೆ ಸ್ಟೇಷನ್ನಿನಲ್ಲಿ ಘೋರ ಭಿಕ್ಷುಕರನ್ನು ನೋಡಿ ಕಂಗಾಲಾಗುತ್ತಿದ್ದೆವು. ನಟ್ಟನಡು ರಾತ್ರೆಗಳಲ್ಲಿ ಹೃದಯವೇ ಇಲ್ಲದ, ಪೈಪುಗಳನ್ನು ಅಳವಡಿಸಿಕೊಂಡು ನೀರು ಕುಡಿಯುವ, ಅನ್ನ ತಿನ್ನುವ ರೋಗಿಗಳು ನಮ್ಮ ಕಣ್ಣೆದುರಿಗೆ ಬಂದು ನಿಂತು ಭಿಕ್ಷೆ ಬೇಡುತ್ತಿದ್ದರು. ಎಷ್ಟೋ ಸಲ ನಾನು ಅವರ ಕಣ್ಣು ತಪ್ಪಿಸಿ ಓಡಿಹೋಗಲು ಯತ್ನಿಸುತ್ತಿದ್ದೆ. ಸೈನಿಕರ ಲಗೇಜುಗಳಿಗೆ ಒರಗಿಕೊಂಡು ದಿನ ಕಳೆದೆವು.

ಅರಿಟಾಳ ಎರಡನೆಯ ಗಂಡನ ಮಗನಾದ ಡೇವಿಡ್ ಅವೊತ್ತು ಸಾಕ್ಷಾತ್ ದೇವರಂತೆ ಕಂಡಿದ್ದ. ಸಾಲ್ ಸೋಲ ಮಾಡಿ ಬೆಂಗಳೂರಿಗೆ ಟಿಕೆಟ್ ಬುಕ್ ಮಾಡಿಸಿಯೇ ಬಿಟ್ಟ. ಜೋರುಮಳೆಯಾಗುತ್ತಿತ್ತು. ಕಣ್ಣು ತಿವಿಯುವ ಅಂಥ ಮಳೆಯಲ್ಲೇ ನಾವೆಲ್ಲರೂ ರೈಲ್ವೆ ಸ್ಟೇಷನ್ನಿನ ಕಡೆ ದಿಕ್ಕೆಟ್ಟ ಕುದುರೆಗಳಂತೆ ಓಡತೊಡಗಿದೆವು. ನಮಗೆಲ್ಲರಿಗೂ ಮುಂದೆ ಓಡುತ್ತಿದ್ದ ಡೇವಿಡ್, ಕಡೆಗೂ ನಮ್ಮನ್ನು ಬೆಂಗಳೂರು ರೈಲು ಹತ್ತಿಸಿಯೇಬಿಟ್ಟ. ತಿರುಗಿಯೂ ಕೂಡ ನಾವು ಆತನನ್ನು ನೋಡಲಾಗಲಿಲ್ಲ.

ಮನೆಗೆ ಬಂದು ಅಪ್ಪನನ್ನು ನೋಡಿದಾಗ ಆದ ಸಂತೋಷ ಹೇಳತೀರದು. ಆದರೂ ಒಂದು ನೋವು ಬಾಧಿಸತೊಡಗಿತು. ಅಪ್ಪ ಬಡ್ಡಿಗೆ ಸಾಲ್ ಇಸಕೋಂದು ಹಬ್ಬಕ್ಕೆ ಕೊಡಿಸಿದ್ದ ಅಂಗಿ ಮ್ದ್ರಾಸಿನಲ್ಲಿ ಕಳೆದುಹೋಗಿತ್ತು. ಮತ್ತೆ ಅಂಥದ್ದೊಂದು ಅಂಗಿ ಮೈಮೇಲೆ ಬರಲು ಎಷ್ಟು ವರ್ಷಗಳು ಬೇಕಾದವೊ…

ಆರೇಳು ತಿಂಗಳುಗಳ್ ನಂತರ ಹ್ಯಾರಿ ಪೀಟರ್, ತನ್ನ ಹೆಂಡತಿ ಜಾಕೆಲಿನ್ ಜೊತೆ ನಮ್ಮೂರಿಗೆ ಬಂದ. ಅವಳ ದಾಸ್ಯಕ್ಕೆ ಒಳಗಾಗಿದ್ದ ಆತ, ಮೊದಲಿನಂತೆ ನಲಿಯುವ ಹಕ್ಕಿಯಂತಿರಲಿಲ್ಲ. ಅವನ್ ಕೋಣೆಯಿಂದ ಮೌಥ್ ಆರ್ಗನ್ ಆಲಿಸಲು ಗೋಡೆಗೆ ಕಿವಿ ಒತ್ತಿ ನಿಂತರೆ ಬೈಗುಳ, ಹೊಡೆದಾಟ ಮಾತ್ರ ಕೇಳುತ್ತಿತ್ತು.

ಅವನು ದೇವರಲ್ಲಿ ಬೇಡಿ ಪಡೆದುಕೊಂಡ ಸುಂದರಿಯೊಬ್ಬಳು ಹ್ಯಾರಿ ಪೀಟರ್ ನ ಕಲೆ, ಮೋಹಕ ಕೈಬರಹ, ಸೌಜನ್ಯ, ವಿನಯ, ಓದು, ಮರದ ಹಿಂದೆ ನಿಂತು ಹೆಣ್ಣುಗಳನ್ನು ಸೆಳೆಯುತ್ತಿದ್ದ ಮುಗುಳ್ನಗೆಗಳನ್ನು ನಾಶ ಮಾಡಿ, ತಿರುಪೆಯವನಂತೆ ಹೌದು, ಹರಕಲು ಬಟ್ಟೆಗಳಲ್ಲಿ ಸವೆಯುವಂತೆ ಸರ್ವನಾಶಗೊಳಿಸಿದ್ದಳು.     

‍ಲೇಖಕರು avadhi

February 23, 2008

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This