ಲಲಿತಾ ಸಿದ್ಧಬಸವಯ್ಯ
ಅಕ್ಕಾ ಕೇಳೇ
ನಾನೂ ಒಂದು ಕನಸ ಕಂಡೆ
ಕನಸಿನ ತುಂಬ ಗಂಡರ ಕಂಡೆ
ಒಬ್ಬರಾದ ಮೇಲೊಬ್ಬರ ಪಾಳಿ
ತಾಳಿಯ ಮೇಲೆ ತಾಳಿ ತಾಳಿ
ಕೊರಳೊಳಗಿದ್ದೇ ಹಳೇನೂಲು
ಒಂದರ ಮೇಲೊಂದು ಜೋಲು
ಮುಂಡೆಯ ಪಟ್ಟ ಬಾರದೆ ಎನಗೆ
ಹೊಸಹೊಸ ಗಂಡರ ನಿತ್ಯ ಒಸಗೆ
ಲಜ್ಜೆಯ ತೊರೆದು ಸಜ್ಜೆಯನೇರಿ
ವರ್ಷವರ್ಷವು ಮಕ್ಕಳು ಹುಟ್ಟಿ
ಮಕ್ಕಳೆ ಮತ್ತೆ ಗಂಡರು ಎನಗೆ
ನಿತ್ಯಯೌವನದ ಪಥ್ಯದ ಮರ್ಮ
ಈ ಪೃಥುವಿಗೆ ಬಂದ ಬಿಟ್ಟೀ ವರವು
ಬಂದವರೆಲ್ಲ ತಿಂದೇ ಹೋದರೂ
ಒಲೆಯ ಕೊಳ್ಳಿ ಆರದು ನೋಡು

-೨-
ಒಬ್ಬನೆ ಗಂಡಗೆ ಹೆದರಿದೆ ನೀನು
ಮಂಡೆಯ ಕೆದರಿ ಊರೇ ತೊರೆದೆ
ಇಲ್ಲದ ನಲ್ಲನ ಕರೆಯುತ ಹೋದೆ
ಹೊರದೆ ಹೆರದೆ ನೀ ಅಕ್ಕ ಮಾತ್ರವೆ
ಅಮ್ಮನೂ ಆಗಿ ನಾ ಅಕ್ಕನೂ ಆಗೀ
ಹೆಂಡಿರೂ ಆಗಿ ಅತ್ತೆಯೂ ಆಗಿ
ನನ್ನ ಮಗಳೇ ನನ ಸವತೀ ಕಾಣೆ
ಕುಗ್ಗದೆ ಸಿಗ್ಗದೆ ದಿನ ಪ್ರಸ್ತದ ಕೋಣೆ
ವ್ಯಾಜ್ಯದ ಮೇಲೆ ವ್ಯಾಜ್ಯಗಳಾಡಿ
ಹಳೆಯ ಗಂಡರ ಹೊಸಬರು ಕೊಂದು
ಹೊಂದುವರೀ ನವವಧುವ ನೋಡೇ
ಮೈಯಿಗೆ ಮೈಯ್ಯಿ ಬೆಸೆಯುವಾಗಲೇ
ಕೊರಳು ಸೀಳಿಸುವ ತಂತ್ರವು ಸಿದ್ಧ
ಗದ್ದುಗೆಯೊಳಗಂಥದ್ದೇನಿದೆ ಹೇಳೇ
ಅಳಲೂ ಕೂಡಾ ಪುರಸೊತ್ತಿಲ್ಲವೇ
ಇಂದಿನ ಗಂಡನ ಸಾವಿನ ವಾರ್ತೆ
ಜೊತೆಗೇ ಬರುವುದು ಲಗ್ನಪತ್ರಿಕೆ

-೩-
ಅಕ್ಕಾ ಕೇಳೇ ನಾ ಕಂಡುದೆಲ್ಲವೂ
ಕನಸಲ್ಲಕ್ಕ, ನಾನೊರೆದುದೆಲ್ಲವೂ
ಕಥೆಯಲ್ಲಕ್ಕ, ಕದಳಿಯ ಕದಲಿಸಿ
ಹೊರಗಡೆ ಬಾರೇ ಚೆನ್ನಯ್ಯನ ನೀರೇ
ನಾ ಧರಣೀದೇವಿ ಕರೆವನು ಬಾರೇ
ಇದುವೆ ಇಲ್ಲಿನ ಸಚ್ಚನಿಚ್ಚದ ನಿಜವೇ
ಗದ್ದುಗೆ ಗುಣಿ ತಳಗರಚುವ ಪಿಶಾಚಕೆ
ತೊಟ್ಟಿಲ ಹಬ್ಬ ತೂಗಲು ಬಾ ಬಾರೇ
ಹ್ಲುಹ್ಳುಹ್ಳುಆಯೀ ಪಾಚ್ಚಳ್ಳೊ ಪಿಶಾಚೀ
ಹ್ಲುಹ್ಳುಹ್ಳುಆಯೀ ಪಾಚ್ಚಳ್ಳೊ ಪಿಶಾಚೀ
ಹ್ಲುಹ್ಳುಹ್ಳುಆಯೀ ಪಾಚ್ಚಳ್ಳೊ ಪಿಶಾಚೀ
ಹಾಡೋಣಾ ಬಾರೆ ಪಿಶಾಚಜೋಗುಳ
ಹ್ಲುಹ್ಳುಹ್ಳುಆಯೀ ಪಾಚ್ಚಳ್ಳೊ ಪಿಶಾಚೀ
ಈ ಮರಿಪಿಶಾಚಿಯೇ ನಾಳೆಯ ವರನು
ಒಟ್ಟಿಗೆ ಲಗ್ನದ ಊಟವನುಂಡು ಹೋಗೇ
-೪-
ಅಕ್ಕಾ ಕೇಳೇ
ಕನಸಲು ಕೂಡಾ ಒಬ್ಬನೆ ಚೆನ್ನನ ಪುಣ್ಯಸ್ತ್ರೀಯೆ
ನೀ ಹೊರಡುವ ಮೊದಲು ನಿಜವ ಹೇಳುವೆ
ನನಗೆ ಕನಸೇ ಬೀಳುವುದಿಲ್ಲವೇ
0 ಪ್ರತಿಕ್ರಿಯೆಗಳು