೩೬೦ ಡಿಗ್ರಿ ಸ೦ಪಾದಕ ಇ ರಾಘವನ್

ರಾಘವನ್ ಇನ್ನಿಂಗ್ಸ್

-ಕೆ. ವೆಂಕಟೇಶ್

  ರಾಘವನ್ ಇನ್ನಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟ. ಸಾವು ವಿವೇಕವಿಲ್ಲದ ಕೇಡಿ, ಖಿಲಾಡಿ. ಈಗ ಕಣ್ಣ ಮುಂದೆ ಇದ್ದವರು ಮತ್ತೊಂದು ಕ್ಷಣದಲ್ಲಿ ಇಲ್ಲವಾಗುತ್ತಾರೆ. ಅವರ ನೋಟ, ಮಾತು, ಸ್ಪರ್ಶ- ಇಂತಹ ಸ್ಪಂದನಗಳು ಇನ್ನೆಂದೂ ಸಿಗುವುದಿಲ್ಲ ಎಂಬ ಖಾಲಿತನ ನರನಾಡಿಗಳಿಗೆ ಏರುತ್ತದೆ. ಯಾವ ಮಂತ್ರವಾದಿಯಿಂದಲೂ ಈ ಭಾವವನ್ನು ಓಡಿಸಲು ಆಗುವುದಿಲ್ಲ. ಈ ಕಾರಣಕ್ಕೆ ಸಾವಿನ ನೋವನ್ನು ಇಲ್ಲವಾಗಿಸುವುದಕ್ಕೆ ಯಾವ ಬದಲಿಗಳೂ ಇಲ್ಲ. ಆಡಿಯೋ, ವಿಡಿಯೋ, ಆಲ್ಬಮ್, ಪುಸ್ತಕಗಳು ಯಾವುದೂ ಜೀವಗೊಂಡ ವ್ಯಕ್ತಿಗೆ ಪರ್ಯಾಯಗಳಲ್ಲ.   ಹೇಳಿ ಕೇಳಿ ಇದು ಒಪ್ಪಿತ ಮತ್ತು ಸಹಮತಕ್ಕೆ ತುಡಿಯುವ ಕಾಲ. ನಮ್ಮ ಗೆಳೆಯರ ಬಳಗವನ್ನು ಇದಕ್ಕೆ ತಕ್ಕಂತೆ ರೂಪಿಸಿಕೊಂಡಿರುತ್ತೇವೆ. ಪರಸ್ಪರ ಅಹಂ ಪೋಷಣೆಯೇ ಅಲ್ಲಿ ದೊಡ್ಡ ಆದ್ಯತೆಯಾಗಿರುತ್ತದೆ. ಭಿನ್ನಾಭಿಪ್ರಾಯ ಮತ್ತು ಟೀಕೆಯನ್ನು ಸಹಿಸುವ ಶಕ್ತಿ ನಾವು ನಮ್ಮ ಬಗೆ ಅಂದುಕೊಂಡಷ್ಟು ನಮಗೇ ಇರೋದಿಲ್ಲ. ಪರಸ್ಪರ ವಿರುದ್ಧ ಅಭಿಪ್ರಾಯಗಳಿದ್ದೂ ಶುದ್ಧಾಂಗ ಸ್ನೇಹ, ವಿಶ್ವಾಸ ಸಾಧ್ಯ ಎಂಬುದು ಅನೇಕರಿಗೆ ಗೊತ್ತೇ ಆಗುವುದಿಲ್ಲ.   ಭಿನ್ನವಿದ್ದೂ ಬೆರೆಯಬಹುದು ೨ ವರ್ಷಗಳ ಅವಧಿಯಲ್ಲಿ ರಾಘವನ್ ಅವರಲ್ಲಿ ನಾವು ಕೆಲವರು ಅವರಲ್ಲಿ ಕಂಡುಕೊಂಡ ಮುಖ್ಯ ಗುಣ. ಭಿನ್ನಾಭಿಪ್ರಾಯವನ್ನು ಸಹಿಸುವ ಶಕ್ತಿ. ಭಿನ್ನವಿದ್ದೂ ಬೆರೆಯಬಹುದು ಎಂಬ ತತ್ವವನ್ನು ಅವರು ಸಾಧಿಸಿದ್ದರು. ದಕ್ಷಿಣ ಭಾರತದಲ್ಲಿ ನಾಲ್ಕು ಪ್ರಮುಖ ಪತ್ರಿಕೆಗಳ ಸಂಪಾದಕ ತಾನು ಎಂಬ ಪ್ರಭಾವಳಿಯನ್ನು ಅವರೆಂದೂ ತಮ್ಮ ತಲೆಯ ಮೇಲಾಗಲಿ, ಹಿಂದೆಯಾಗಲಿ ಇಟ್ಟುಕೊಳ್ಳಲಿಲ್ಲ. ಅಧಿಕಾರಸ್ಥರ ನಿಕಟ ಸಂಪರ್ಕವಿದ್ದರೂ ಅದನ್ನು ದೊಡ್ಡ ಹಿರಿಮೆಯೆಂದು ಭಾವಿಸಲಿಲ್ಲ. ನಾಲ್ಕು ದಶಕಗಳ ಪತ್ರಿಕಾ ವ್ಯವಸಾಯದ ಅನುಭವವನ್ನು ದೊಡ್ಡ ನಿಧಿಯೆಂದು ಅವರು ತೋರಿಸಿಕೊಳ್ಳಲಿಲ್ಲ.   ಪತ್ರಕರ್ತನಿಗೆ ಇಂಟಿಗ್ರಿಟಿ ಮುಖ್ಯ ಎನ್ನುತ್ತಿದ್ದ ಅವರು ಇದನ್ನು ಎಲ್ಲರಲ್ಲೂ ಆಳವಾಗಿ ಹುಡುಕುತ್ತಿದ್ದರು. ತಮ್ಮದೇ ಆದ ರೀತಿಯಲ್ಲಿ ಪರೀಕ್ಷೆಗಳನ್ನಿಡುತ್ತಿದ್ದರು. ಗೆದ್ದವರಿಗೆ ನೀನು ಗೆದ್ದಿದ್ದೀಯ ಎಂದೂ ಯಾವತ್ತೂ ಹೇಳುತ್ತಿರಲಿಲ್ಲ. ಸೋತವರಿಗೂ ಹೇಳುತ್ತಿರಲಿಲ್ಲ. ತನಗೆ ಕೊಟ್ಟ ಸ್ವಾತಂತ್ರ್ಯದ ಮೂಲಕ ಗೆದ್ದವನು ತನ್ನ ಸಾಚಾತನದ ಆಳವನ್ನು ಅಂದಾಜು ಮಾಡಿಕೊಳ್ಳಬಹುದಾಗಿತ್ತು. ಯಾವುದೇ ಒಂದು ವ್ಯವಸ್ಥೆಯ ನೈತಿಕ ಒಳಬಲ ಇ ರಾಘವನ್.   ನಗುವ ಹೂವುಗಳು ನೂರಕ್ಕೆ ನೂರು ಅವರು ಟೈಮ್ಸ್ ಮನುಷ್ಯರಾಗಿದ್ದರು. ಕಾಲದ ಓಟಕ್ಕೆ ತಕ್ಕಂತೆ ಹೆಜ್ಜೆಗಳನ್ನಾಕುವ, ಎಷ್ಟೋ ವೇಳೆ ಹೆಜ್ಜೆಗೆ ತಕ್ಕಂತೆ ದಾರಿಯನ್ನು ಬದಲಿಸುವ, ಮಾರ್ಪಡಿಸುವ ಕಾರ್ಯವನ್ನು ಅವರು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಕೆಲಸಗಾರರ ಮಿದುಳೆಂಬ ಸಾಫ್ಟ್‌ವೇರ್‌ಅನ್ನು ಅವರಿಗೆ ಗೊತ್ತಿಲ್ಲದಂತೆ ಬದಲಿಸಿಬಿಡುವ ಮೋಡಿಕಾರರಾಗಿದ್ದರು. ಕಚೇರಿಯೊಂದರಲ್ಲಿ ರಾಘವನ್ ಇದ್ದರೆ ಅವರ ಪ್ರತಿರೂಪಿ ರೋಬೋಗಳಿಗೇನೂ ಕೊರತೆ ಇರುತ್ತಿರಲಿಲ್ಲ. ಇವರು ಸೂರ್ಯಕಾಂತಿಗಳು. ಸೂರ್ಯನಿದ್ದಾಗ ಮಾತ್ರ ನಗುವ ಹೂವುಗಳು.   ೩೬೦ ಡಿಗ್ರಿ ಏನನ್ನೇ ಬರೆಯಿರಿ. ಅದು ಸಂಪೂರ್ಣವಾಗಿರಬೇಕು. ಯಾವುದೇ ಪ್ರಶ್ನೆಗಳನ್ನು ಉಳಿಸಬಾರದು. ೩೬೦ ಡಿಗ್ರಿ ಸ್ಟೋರಿ ಬರೀರಿ. ಬರೆವಣಿಗೆ ಇರ್ರರವರೆನ್ಷಿಯಲ್ ಆಗಿರಬೇಕು ಎನ್ನುತ್ತಿದ್ದರು ರಾಘವನ್. ಈ ತತ್ವದೆಡೆಗೆ ಚಾಚಿದ ಕೈಗಳು ಕಡಿಮೆ. ಗುರಿ ಮುಟ್ಟಿದ್ದೂ ಇನ್ನೂ ಕಡಿಮೆ. ಒಂದು ಜಾಡು, ಒಂದು ಸ್ಪೀಡಿಗೆ ಸರ್ವಾಂಗಗಳನ್ನು ಫಿಕ್ಸ್ ಮಾಡಿಕೊಂಡವರ ಗಾಡಿಗಳಿಗೆ ಗೇರುಗಳು ತುಕ್ಕು ಹಿಡಿದಿದ್ದವು. ಈ ಸತ್ಯ ಅವರಿಗೂ ಗೊತ್ತಿತ್ತು.   ಬಲು ಹಗುರ ಬಲು ಭಾರ ರಾಘವನ್ ಅವರದು ಕುಮಾರವ್ಯಾಸನ ಗರಡಿಯಲ್ಲ; ಪಂಪನ ಗರಡಿ. ಏನನ್ನೇ ಬರೆದರೂ ೩೦೦ ಪದ ಇರಬೇಕು ಎನ್ನುತ್ತಿದ್ದರು. ಇದನ್ನು ತಾವೇ ’ಪಾಲಿಸಿ’ ಬೇರೆಯವರಿಗೆ ಅದನ್ನು ಕೈಮರದಂತೆ ತೋರಿಸುತ್ತಿದ್ದರು. ಆದರೆ ಅವರ ಬ್ರಾಡನಿಂಗ್ ಅಂಡ್ ಡೀಪನಿಂಗ್ ಡೆಮಾಕ್ರಸಿ ಮಾತ್ರ ಹರಿಹರನ ಪುಷ್ಪರಗಳೆ. ಕನ್ನಡಿಗರಲ್ಲದ ಓದುಗರತ್ತಲೂ ದೃಷ್ಟಿ ಇಟ್ಟಿದ್ದರಿಂದ ಪ್ರತಿಯೊಂದೂ ದೊಡ್ಡ ವಿವರಣೆಗೆ ಒಳಗಾಗಿದೆ. ಅಲ್ಲಿ.   ಪತ್ರಿಕಾ ರಂಗದಲ್ಲಿ ಸುಮಾರು ೪೦ ವರ್ಷ ಸುದೀರ್ಘ ಇನ್ನಿಂಗ್ಸ್ ಆಡಿದ ರಾಘವನ್ ತಮ್ಮನ್ನು ತಾವು ಹಲವು ಬಾರಿ ಪರಿಷ್ಕರಿಸಿಕೊಂಡಿದ್ದರು. ತಮ್ಮ ಆಟದ ವಿಧಾನವನ್ನು ದ್ರಾವಿಡ್‌ನಂತೆ ಬದಲಿಸಿಕೊಂಡಿದ್ದರು. ಆದರೆ ನಿಯಮಗಳ ಪಾಲನೆಯಲ್ಲಿ ಮಾತ್ರ ಅವರು ಕಟ್ಟಾ ಸಂಪ್ರದಾಯವಾದಿ. ನೀತಿಯೆಂಬ ಲಘು ಗುರು ಪ್ಲುತಗಳನ್ನು ಕೊಂಚವೂ ಏರಿಳಿತ ಮಾಡಲಿಲ್ಲ. ಮಾಡಿಕೊಂಡಿದ್ದನ್ನು ಸಹಿಸಲಿಲ್ಲ. ನೇರವಾದಿ ಬ್ರಾಡನಿಂಗ್ ಅಂಡ್ ಡೀಪನಿಂಗ್ ಡೆಮಾಕ್ರಸಿಯಲ್ಲಿ ಕಾಣುವ ರಾಘವನ್ನೇ ಬೇರೆ. ವಿಜಯ ಕರ್ನಾಟಕ, ವಿಜಯ ನೆಕ್ಸ್ಟ್ ಸಂಪಾದಕ ರಾಘವನ್ನೇ ಬೇರೆ. ಇಂಟರ್ ಟೆಕ್ಸ್ಟುಯಾಲಿಟಿ, ಓರಲ್ ಹಿಸ್ಟರಿಯ ದೊಡ್ಡ ವಕ್ತಾರರಂತೆ ಕೃತಿಯಲ್ಲಿ ಕಂಡರೆ ಸುದ್ದಿ, ಲೇಖನಗಳ ವಿಷಯದಲ್ಲಿ ತುಂಬ ’ನೇರ’ವಾಗಿರುತ್ತಿದ್ದರು. ಸಾಹಿತ್ಯ, ಇತಿಹಾಸ, ಸಮಾಜ, ಸಂಸ್ಕೃತಿ, ಜನಜೀವನ, ಆರ್ಥಿಕ ನೀತಿ, ಪ್ರಭುತ್ವವೆಂಬ ಎಳೆಗಳು ಒಂದಕ್ಕೊಂದು ಕೂಡಿಕೊಂಡಿರುತ್ತವೆ. ೨೧ ನೇ ಶತಮಾನದಲ್ಲಿ ಯಾವುದೂ ವಿವಿಕ್ತವಾಗಿರೋದಿಲ್ಲ ಎನ್ನುವುದರ ಬಗ್ಗೆ ಅವರಲ್ಲಿ ವಾಗ್ವಾದ ಸಾಧ್ಯವಿತ್ತು. ಆದರೆ ಪತ್ರಿಕಾ ಕಾರ್ಯದಲ್ಲಿ ಅದರ ಅನುಸಂಧಾನ ಬಿಲ್‌ಕುಲ್ ಆಗೋದಿಲ್ಲ ಎಂಬುದು ಅವರ ಆಳದ ನಂಬಿಕೆಯಾಗಿತ್ತು.   ಕಾಸ್ಮೋಪಾಲಿಟನ್ ಇಂಗ್ಲಿಷ್ ಪತ್ರಿಕೆಗಳಲ್ಲಿ ಬಹುಕಾಲದ ದುಡಿದ ರಾಘವನ್ ಧುತ್ತೆಂದು ಕನ್ನಡದ ನಂಬರ್ ಒನ್ ಪತ್ರಿಕೆಗೆ ಸಂಪಾದಕರಾದಾಗ ಅನೇಕ ಮಂದಿಗೆ ಈ ರಾಘವನ್ ತಮಿಳು ತಲೆ. ಕನ್ನಡ ಬರೋದಿಲ್ಲ ಎಂದು ತಿಳಿದಿದ್ದರು. ಆದರೆ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಯಲಹಂಕ ವಾಸಿಯಾಗಿದ್ದ ಅವರು ಅಚ್ಚುಕಟ್ಟಾಗಿ ಕನ್ನಡ ಓದುತ್ತಿದ್ದರು. ಬರೆಯುತ್ತಿದ್ದರು. ಇವತ್ತಿನ ಒಬ್ಬ ಸಾಮಾನ್ಯ ಕನ್ನಡ ಎಂಎ ಪದವೀಧರನಿಗಿಂತ ಹೆಚ್ಚಾಗಿ ಕನ್ನಡ ಸಾಹಿತ್ಯವನ್ನು ಓದಿಕೊಂಡಿದ್ದರು. ಇ ಬುಕ್ ರೀಡರ್ ಇಟ್ಟುಕೊಂಡಿದ್ದರೂ ಕನ್ನಡದ ವಿಷಯಕ್ಕೆ ಬಂದಾಗ ಇನ್ನೂ ’ಲೇಖನಿ ಹಿಡಿದು ಬರೆಯುವುದೊಂದಗ್ಗಳಿಕೆ’ ಎನ್ನುವ ಕಾಲಕ್ಕೆ ಸೇರಿದ್ದರು.   ಕಾಸ್ಮೋಪಾಲಿಟನ್ ಕಲ್ಚರ್ ಮತ್ತು ಹಳ್ಳಿ ರೈತನ ಗುಣಗಳೆರಡೂ ಅವರಲ್ಲಿ ಕಾಣುತ್ತಿತ್ತು. ಎದುರು ಬದುರಾಗುವ ಈ ಗುಣಗಳನ್ನು ಅವರು ಅದ್ಭುತವಾಗಿ ಜೊತೆಗೂಡಿಸಿಟ್ಟುಕೊಂಡಿದ್ದರು. ಪ್ರಾಯಶಃ ಇದಕ್ಕೆ ದೇವರಾಜ ಅರಸು, ರಾಮಕೃಷ್ಣ ಹೆಗಡೆ ಹಾಗೂ ಅಬ್ದುಲ್ ನಜೀರ್ ಸಾಬ್ ಅವರ ನಿಕಟ ಒಡೆನಾಟ ಕಾರಣವಿರಬಹುದು. ನಜೀರ್‌ಸಾಬ್ ಜೊತೆಗೆ ತುಂಬ ಆತ್ಮೀಯಗಿದ್ದ ರಾಘವನ್, ಪಂಚಾಯತ್ ರಾಜ್ ಕಾಯ್ದೆ ಕರಡು ನಿರೂಪಣೆಯಲ್ಲಿ ಗುರುತರ ಪಾತ್ರ ವಹಿಸಿದ್ದರು. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಆಳ, ಅಗಲಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ಎಲ್ಲವೂ ಗೊತ್ತಿದ್ದೂ ಗೊತ್ತಿಲ್ಲದವರಂತೆ ಆಟ ಆಡಿಸುವುದರಲ್ಲಿ ನಿಸ್ಸೀಮರಾಗಿದ್ದರು. ದೆಹಲಿ ವಾಸ, ವಿದೇಶಿ ಪ್ರವಾಸ, ಇಂಗ್ಲಿಷ್ ಪತ್ರಿಕೆಗಳಲ್ಲಿ ಕೆಲಸದಿಂದ ಅವರಲ್ಲಿ ಕಾಸ್ಮೋಪಾಲಿಟನ್ ಗುಣಗಳು ಬಂದಿರಬೇಕು.   ನಾಚುವ ಶಕ್ತಿ ಅಧಿಕಾರಸ್ಥರ ಸಾಮೀಪ್ಯ ಪತ್ರಕರ್ತರಲ್ಲಿ ಒಂದು ಭ್ರಮಾತ್ಮಕ ವ್ಯಕ್ತಿತ್ವವನ್ನು ಬೆಳೆಸುತ್ತದೆ. ನೆಲದಿಂದ ಮೇಲೆ ನಡೆದಾಡುವುದನ್ನು ಕಲಿಸುತ್ತದೆ. ಇದು ನಿಜದ ವ್ಯಕ್ತಿತ್ವವನ್ನೇ ತಿಂದು ಹಾಕುತ್ತದೆ. ಇಂತಹ ಗಾಳಿಮೂಟೆಗಳಿಗೆ ನಿಜದ ಸೂಜಿಮೊನೆಯಂತಿದ್ದರು ರಾಘವನ್. ಸದಾ ತಮ್ಮನ್ನು ಎಲೆ ಮರೆಗೆ ದೂಡಿಕೊಳ್ಳುತ್ತಿದ್ದರು. ಸಂಕೋಚವನ್ನು ಒಂದು ಮೌಲ್ಯದ ಮಟ್ಟಕ್ಕೆ ತೆಗೆದುಕೊಂಡು ಹೋದರು. ಇದು ಪತ್ರಕರ್ತರೆಲ್ಲರೂ ಯಾವಾಗಲೂ ಕಲಿಯಬೇಕಾದ ಪಾಠ.   ಕಸಿ-ಕುಶಲ ಒಂದು ಸುದೀರ್ಘ ಇನ್ನಿಂಗ್ಸ್ ಮುಗಿಸಿ ಟ್ವೆಂಟಿ ೨೦ ಆಡಲು ಬರುವ ಸಂಪಾದಕರು ಸಾಮಾನ್ಯವಾಗಿ ಟೆಸ್ಟ್ ಆಡುವುದು ಹೆಚ್ಚು. ಅದರಲ್ಲೂ ಗವಾಸ್ಕರ್‌ನಂತೆ ರನ್ ಹೊಡೆಯದೆ, ಔಟೂ ಆಗದೆ ನಿಂತುಬಿಡುತ್ತಾರೆ ಗೋಡೆಯಂತೆ. ಆದರೆ ರಾಘವನ್ ೨ ವರ್ಷ ವಿಜಯ ಕರ್ನಾಟಕ ಮತ್ತು ವಿಜಯ ನೆಕ್ಸ್ಟ್‌ನಲ್ಲಿ ಆಡಿದ್ದು ಟ್ವೆಂಟಿ೨೦. ಹಲವು ರೂಪಾಂತರಗಳಿಗೆ ಈ ಪತ್ರಿಕೆಗಳು ತಮ್ಮನ್ನು ಒಡ್ಡಿಕೊಂಡವು. ಇವುಗಳ ಜೊತೆಗೆ ಬೋಧಿವೃಕ್ಷ, ವಿಜಯ ಕರ್ನಾಟಕ ವಿದ್ಯಾರ್ಥಿ ಸಂಚಿಕೆಗಳೂ ಹೊರಬಂದವು. ಅವರ ಪ್ರಯೋಗಗಳು ವಿಶಿಷ್ಟವಾಗಿದ್ದವು. ಸೀಬೆ ಮರದಲ್ಲಿ ಎಮು ಹಣ್ಣು. ಕಲರ್ ಚಿತ್ರಗಳನ್ನು ಬ್ಲಾಕ್ ಅಂಟ್ ವೈಡ್ ಮಾಡಿ ನೋಡಿದರು. ಬ್ಲಾಕ್ ಅಂಡ್ ವೈಟ್ ಚಿತ್ರಗಳಿಗೆ ಈಸ್ಟ್‌ಮನ್ ಕಲರ್ ಮೆತ್ತಿದರು. ರೈನ್ ಬೋ ಕೋಹಲೈಶೆನ್ ಅನ್ನು ಪತ್ರಿಕೆಯ ಸಾಮಾಜಿಕ ಸಿದ್ಧಾಂತವಾಗಿಸುವುದಕ್ಕೆ ಯತ್ನಿಸಿದರು.   ಬೇರೆ ಬೇರೆ ಪಂಥದ ಸಾಹಿತಿಗಳನ್ನು ಒಂದೆಡೆ ತಂದರು. ಸಾಮಾಜಿಕ ಸಂಗತಿಗಳಿಗೆ ಪತ್ರಿಕೆಯನ್ನು ವೇದಿಕೆಯಾಗಿಸಿದರು. ವರ್ಷದಲ್ಲಿ ಮೂರು ನಾಲ್ಕು ಸಂಗ್ರಹ ಸಂಚಿಕೆಗಳನ್ನು ಮಾಡುವ ಸಾಹಸ ಮಾಡಿದರು. ಕಚೇರಿಗೆ ಬರುವುದಕ್ಕಿಂತ ಕೆಲಸ ಮಾಡುವುದು ಮುಖ್ಯ ಎನ್ನುತ್ತಿದ್ದರು. ವರ್ಕ್ ಅಟ್ ಹೋಮ್ ಪರಿಕಲ್ಪನೆಯನ್ನು ಸಾಧ್ಯವಾಗಿಸಿದ್ದರು. ನಿಜವಾದ ನಾಯಕನಾದವನು ಕೆಲಸಗಾರರ ಮುಂದೆ ಇರುವುದಿಲ್ಲ. ಹಿಂದೆ ಇರುತ್ತಾನೆ ಎನ್ನುವಂತಿತ್ತು ಅವರ ನಡೆ.   ಸರದಿ ಕಾಯೋದು,,, ಇಂತಹ ಕೆಲಸಗಳಲ್ಲಿ ಕುಂದು, ಕೊರತೆ, ಕೊರಗು ಇದ್ದೇ ಇರುತ್ತೆ. ಸಚಿನ್ ಥರ ಆಡುವವರಿಗೂ ಎಷ್ಟೋ ವೇಳೆ ಬ್ಯಾಟಿಂಗ್ ಸಿಗೋದಿಲ್ಲ. (ಸೂಳ್‌ಪಡೆಯಲ್ಪದು ಕಾಣಾ ಮಹಾಜಿರಂಗದೊಳ್- ನೀನೂ ಆಡುವ ಸರದಿ ಬರುತ್ತೆ ಇರಯ್ಯ ಎನ್ನವಂತಿತ್ತು ಅವರ ಮುಖಭಾವ). ಸಮಯ, ಕೆಲಸ, ವ್ಯಕ್ತಿ, ನಿರ್ಣಯ- ನಾಲ್ಕು ರೇಖೆಗಳು ಹೇಗೇಗೋ ಕೂಡಿ ಕೊಂಡಿರುತ್ತೆ. ಅಕಾರ-ನಿರಾಕಾರ-ನಿರಾಕರಣೆ- ಇಂತಹ ಸಿಕ್ಕು ಸಿಕ್ಕು ಪ್ರಶ್ನೆಗಳಿಗಿಂತ ರಿಸಲ್ಟ್ ಮುಖ್ಯವಾಗಿರುತ್ತೆ. ಮಾರುಕಟ್ಟೆ ಸ್ಟ್ರಾಟರ್ಜಿಗಳ ಕೊನೆ-ಮೊದಲುಗಳನ್ನು ಬಲ್ಲವರ‍್ಯಾರು? ಇಂತಹ ವಿಷಯಗಳನ್ನು ಗಂಟೆಗಟ್ಟಲೆ ಮುಳುಗಿ ನೋಡಬಲ್ಲವರಾಗಿದ್ದ ರಾಘವನ್, ತತ್ವವಾದಿ, ಸಿದ್ಧಾಂತವಾದಿ ಕೆಲಸಗಾರರ ಮಾತನ್ನು ಕೇಳಿಸಿಕೊಳ್ಳುವವರಾಗಿದ್ದರು. ಆದರೆ ದಡ ಮುಟ್ಟಿಸುವ ಹಡಗು ಅವರಿಗೆ ಮುಖ್ಯವಾಗಿತ್ತು. ವೇಗ ಮುಖ್ಯವಾಗಿತ್ತು. ಇದು ಸಿಗ್ನಲ್ ಜಂಪ್ ಮಾಡಿ ಓಡುವ ವೇಗವಲ್ಲ.( ಅವರು ಕಾರು ಚಾಲನೆ ಮಾಡೋದನ್ನು ಒಳಗೆ ಕುಳಿತು ನೋಡಿದವರಿಗೆ ಈ ಮಾತನ್ನು ವಿವರಿಸುವ ಅಗತ್ಯವಿಲ್ಲ)   ಹಲವು ಸಾಧ್ಯತೆಗಳಿದ್ದ, ಮಾನಸಿಕ ಸಮತೋಲನವನ್ನು ಎಂದೂ ಕಳೆದುಕೊಳ್ಳದ, ಕ್ಷುದ್ರತೆಯನ್ನು ನಿರ್ಲಕ್ಷ್ಯ ಮತ್ತು ಮೌನದ ಮೂಲಕ ಗೆಲ್ಲುತ್ತಿದ್ದ, ಸಂಕೋಚದ ಶಕ್ತಿ ಮತ್ತು ಘನತೆಯನ್ನು ತೋರಿಸಿದ ರಾಘವನ್, ಯುವಕರಿಗೆ ಸವಾಲು ಹಾಕುವಂತೆ ಬದುಕಿದ್ದರು. ಹೀಗೆ ಇದ್ದಕ್ಕಿದ್ದಂತೆ ಕೈ ಕೊಡವಿಕೊಂಡು ಸರಸರ ಹೊರಟುಬಿಟ್ಟರು. ಅವರು ಆರೋಗ್ಯದ ಬಗ್ಗೆ ಇನ್ನಷ್ಟು ಜೋಪಾನ, ಜಾಗ್ರತೆಯಾಗಿದ್ದರೆ ಯಮನನ್ನು ಸೋಮಾರಿಯಾಗಿಸಬಹುದಿತ್ತು.]]>

‍ಲೇಖಕರು G

March 28, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಹಾರಾಜಾ ಕಾಲೇಜು: ಒಂದು ನಾಸ್ಟಾಲ್ಜಿಯಾ

ಮಹಾರಾಜಾ ಕಾಲೇಜು: ಒಂದು ನಾಸ್ಟಾಲ್ಜಿಯಾ

ಹೆಚ್ ಎಸ್ ಈಶ್ವರ್ ಯಾವೊಬ್ಬ ವ್ಯಕ್ತಿಯ ಶಾಲಾಕಾಲೇಜು ದಿನಗಳು ಬಹುಪಾಲು ಸ್ಮರಣೀಯವಾಗಿರುತ್ತವೆ ಮತ್ತು ನಂತರದ ಬದುಕಿಗೆ ಅವಶ್ಯಕ ಬುನಾದಿಯನ್ನು...

5 ಪ್ರತಿಕ್ರಿಯೆಗಳು

 1. ahobalapathy M N

  ಇಂತಹ ಪತ್ರಕರ್ತರು ಎಷ್ಟು ಮಂದಿ ಸಿಗುತ್ತಾರೆ?

  ಪ್ರತಿಕ್ರಿಯೆ
 2. D.RAVI VARMA

  ಹಲವು ಸಾಧ್ಯತೆಗಳಿದ್ದ, ಮಾನಸಿಕ ಸಮತೋಲನವನ್ನು ಎಂದೂ ಕಳೆದುಕೊಳ್ಳದ, ಕ್ಷುದ್ರತೆಯನ್ನು ನಿರ್ಲಕ್ಷ್ಯ ಮತ್ತು ಮೌನದ ಮೂಲಕ ಗೆಲ್ಲುತ್ತಿದ್ದ, ಸಂಕೋಚದ ಶಕ್ತಿ ಮತ್ತು ಘನತೆಯನ್ನು ತೋರಿಸಿದ ರಾಘವನ್, ಯುವಕರಿಗೆ ಸವಾಲು ಹಾಕುವಂತೆ ಬದುಕಿದ್ದರು. ಹೀಗೆ ಇದ್ದಕ್ಕಿದ್ದಂತೆ ಕೈ ಕೊಡವಿಕೊಂಡು ಸರಸರ ಹೊರಟುಬಿಟ್ಟರು. ಅವರು ಆರೋಗ್ಯದ ಬಗ್ಗೆ ಇನ್ನಷ್ಟು ಜೋಪಾನ, ಜಾಗ್ರತೆಯಾಗಿದ್ದರೆ ಯಮನನ್ನು ಸೋಮಾರಿಯಾಗಿಸಬಹುದಿತ್ತು.excellent raghavan avarigu,avara badukina preetigu,baddategu nanna vinamra namaskaara .
  D.RAVI VARMA HOSPET
  S

  ಪ್ರತಿಕ್ರಿಯೆ
 3. karuna s

  k. venkatesh estu olleya lekhaka endu thilidukollalu raghavan saavina thanaka kayabekayithalla, che

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: