೫೦ ಜನರಿಗೆ ಮಾತ್ರ ಪ್ರವೇಶ…

header-banner
‘ಟೂರಿಂಗ್ ಟಾಕೀಸ್’ : ಒಂದೇ ಸಿನಿಮಾ ಸುತ್ತ…!
ಮೂರು ದಿನಗಳ ಸಿನಿಮಾ ಗ್ರಹಿಕಾ ಶಿಬಿರ

ಕ್ರೆಡಿಟ್ ಕಾರ್ಡ್ ಅಥವಾ ನಗದಿನ ಮೂಲಕ ಟಿಕೆಟ್ ಖರೀದಿಸುತ್ತೇವೆ.
ಸಿನೆಮಾ ನೋಡಿ ಹೊರಬರುತ್ತೇವೆ.
ನೋಡಿದ ಸಿನೆಮಾ ಬಗ್ಗೆ ಎರಡು ಮಾತನಾಡಿ ಒಂದು ಕಡೆ ಸರಾಸರಿ ಪ್ರೇಕ್ಷಕನಾಗಿ ಉಳಿದು, ನಾವು ಆಡಿದ ಮಾತುಗಳೆಲ್ಲ ಆಳವಾದ ವಿಮ ರ್ಶೆ ಎಂದೇ ಭಾವಿಸಿ ಬಿಡುತ್ತೇವೆ. – ಇದು ಅಹಂಕಾರ ಎಂದು ಕೂಡ ನಮ್ಮ ಅರಿವಿಗಿರುವುದಿಲ್ಲ. ಇದು ನಮ್ಮಲ್ಲಿ ಅನೇಕರ, ಬಹುಸಂಖ್ಯಾತರ ಸತ್ಯ. ಹೆಚ್ಚಿನ ಮಟ್ಟಿಗೆ ಯುವ ಪ್ರೇಕ್ಷಕನನ್ನು ವ್ಯಾಖ್ಯಾನಿಸಲು ಬಳಸಬಹುದಾದ ಸಾರ್ವತ್ರಿಕಗೊಂಡಿರುವ ಸತ್ಯ.

ಸಿನೆಮಾ ನೋಡಲು ಬೇಕಾಗಿರುವ ನಮ್ರ ತೆ, ವಿನಯ, ಸಿನೆಮಾ ನಿಶ್ಯಬ್ದವಾಗಿ, ಉಳಿದು ಹೇಳುತ್ತಾ ಹೋಗುವುದನ್ನು ಗ್ರಹಿಸಲು ಬೇಕಾಗಿರುವ ಶಿಸ್ತು ಇಲ್ಲವಾಗಿವೆ ಎಂಬ ಕೊರತೆ ನಮ್ಮಲ್ಲಿ ಬಹಳಷ್ಟು ಜನರನ್ನ ಕಾಡುತ್ತಿದೆ. ಆ ಕೊರತೆ ನೀಗಿಸಲು, ಸಿನೆಮಾ ವ್ಯಾಕರಣದ ಅಕ್ಷರಾಭ್ಯಾಸಕ್ಕಾಗಿ- ಒಂದು ಪಠ್ಯಕ್ರಮವನ್ನು ಸಂವಾದ ಡಾಟ್ ಕಾಂ ಆಯೋಜಿಸಿದೆ.
ಯಾವ ಸಿನೆಮಾ?
ಯಾವುದಾದರೂ ಆಗಬಹುದು, ಇನ್ನೂ ನಿರ್ಧಾರವಾಗಿಲ್ಲದಿರುವುದರಿಂದ, ಸದ್ಯದ ಮಟ್ಟಿಗೆ ಅದು ಸಸ್ಪೆನ್ಸ್.
ಯಾರು ಮಾತನಾಡುತ್ತಾರೆ?
ಸಂಪನ್ಮೂಲ ವ್ಯಕ್ತಿಗಳು:
೧. ಸಾಮಾನ್ಯ ಪ್ರೇಕ್ಷಕರು/ಶಿಬಿರಾರ್ಥಿಗಳು. ಸಿನಿಮಾ ಗ್ರಹಿಕೆಯ ಬಗೆಗೆ ಕಾಳಜಿ ಆರಂಭಗೊಂಡಿರುವವರು.
೨. ಸಿನಿಮಾ ಕುರಿತಂತೆ ಪ್ರಜ್ಞಾಪೂರ್ವಕವಾಗಿ ಅಲೋಚಿಸಬಲ್ಲವರು:
ಅ) ರಘುನಾಥ ಚ ಹ (ಪತ್ರಕರ್ತರು)
ಆ) ವಿಶಾಖ (ಪತ್ರಕರ್ತರು)
ಇ) ತಾರಕೇಶ್ವರ್ (ಪ್ರಾಧ್ಯಾಪಕರು- ಕನ್ನಡ ವಿಶ್ವವಿದ್ಯಾನಿಲಯ-ಹಂಪಿ)
ಈ) ಡೇವಿಡ್ ಬಾಂಡ್ (ಫ್ರೆಂಚ್ ಭಾಷಾ ಉಪನ್ಯಾಸಕ/ಭಾರತೀಯ ಸಿನಿಮಾಸಕ್ತ)
೩. ಬಿ ಸುರೇಶ್ (ನಟ-ನಿರ್ದೇಶಕ, ಸಿನಿಮಾ ಪ್ರೇಕ್ಷಕ)
ಎಂದು:
ಮೇ ೧ , ಮೇ ೨ ಮತ್ತು ಮೇ ೩., ೨೦೦೯ ರಜಾದಿನಗಳು.
ಎಲ್ಲಿ?
ಓದೇಕಾರ್ ಫಾರಂ, ನಂದಿ ಹಳ್ಳಿ (ತೋವಿನಕೆರೆ ಬಳಿ) ತುಮಕೂರಿನಿಂದ ಸುಮಾರು ೨೦ ಕಿಲೋಮೀಟರ್ ದೂರದಲ್ಲಿ (ಓದೇಕಾರ್ ಎಸ್ಟೇಟಿನ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ)
ಶುಲ್ಕ?
ಕಾಫಿ, ತಿಂಡಿ, ಎರಡು ಊಟ ವಸತಿ ಸೇರಿ ದಿನವೊಂದಕ್ಕೆ ರೂ ೧೫೦ ಎಂದು ಅಂದಾಜಿಸಲಾಗಿದೆ. ಮೂರು ದಿನವಾದ್ದರಿಂದ ರೂ ೪೫೦ ಆದರೆ, ಉಳಿದ ಖರ್ಚಿಗೆ ರೂ ೫೦ ಅನ್ನು ಸೇರಿಸಿ ರೂ ಒಟ್ಟು ೫೦೦ ಅನ್ನೂ ನಿಗದಿ ಪಡಿಸಲಾಗಿದೆ.
ಇಲ್ಲಿ ನೋಂದಾಯಿಸಿ : http://samvaada.com/events/register.html
ಹೆಚ್ಚಿನ ವಿವರ: http://samvaada.com/events/odekar_film.html

-ಅರೇಹಳ್ಳಿ ರವೀ..
ಈ ವಿಶಿಷ್ಠ , ವಿನೂತನ ಕಾರ್ಯಕ್ರಮಕ್ಕೆ ಭಾಗವಹಿಸುವ ಆಸಕ್ತಿ ಇದ್ದರೆ ಈ ಕೆಳಗಿನ ಸಂವಾದ ಡಾಟ್ ಕಾಂ ಸದಸ್ಯರನ್ನ ಸಂಪರ್ಕಿಸಿ. ೫೦ ಜನರಿಗೆ ಮಾತ್ರ ಪ್ರವೇಶ.
ಸಂಪರ್ಕಿಸ ಬೇಕಾದ ಸಂಖ್ಯೆ:
ಕಿರಣ್ ಎಮ್ – ೯೭೪೨೦ ೫೫೯೬೬ (ಪದ್ಮನಾಭನಗರ)
ರಾಘವ ಕೋಟೆಕರ್ – ೯೯೦೧೩ ೯೯೬೭೧ (ಜೆ ಪಿ ನಗರ, ಜಯನಗರ, ಬನಶಂಕರಿ)
ಅರೆಹಳ್ಳಿ ರವಿ ೯೯೦೦೪ ೩೯೯೩೦ (ಬಿ ಟಿ ಎಂ ಲೇ‌ಔಟ್, ಹೊಸೂರು ರಸ್ತೆ)
ರುದ್ರಮೂರ್ತಿ: ೯೪೮೦೪ ೯೪೧೩೫(ಮಲ್ಲೇಶ್ವರ, ಯಶವಂತಪುರ, ರಾಜಾಜಿನಗರ, ನೆಲಮಂಗಲ)
ಪ್ರಮೋದ್: ೯೪೪೮೭ ೦೧೪೭೦ (ಬಸವನಗುಡಿ)
ರಾಜಕುಮಾರ್ (ಸಮಾಜ ಸೇವಕರ ಸಮಿತಿ) – ೯೪೪೮೧ ೭೧೦೬೯
ತುಮಕೂರಿನ ಆಸಕ್ತರಿಗೆ:
ಕೋಟೆ ನಾಗಭೂಷಣ್, ಪ್ರಜಾಪ್ರಗತಿ ದಿನಪತ್ರಿಕೆ – ೯೮೮೦೦ ೧೮೩೮೧
ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಆಸಕ್ತರಿಗೆ:
ಅವಿನಾಶ್ – ೯೪೮೦೧ ೩೮೦೩೪
ಹಾಸನದ ಆಸಕ್ತರಿಗೆ:
ಪ್ರಭಾಕರ್- – ೯೪೪೮೩ ೬೫೮೧೬
ಸಿನೆಮಾಕ್ಕೂ ಸಿಲಬಸ್ಸೆ/ಪಠ್ಯಕ್ರಮವೆ? (Syllabus?)
ಸಿನೆಮಾಕ್ಕೂ ಒಂದು ವ್ಯಾಕರಣವಿದೆ; ಶಿಸ್ತಿದೆ. ಸಿನೆಮಾ ಗ್ರಹಿಸಲು ಬೇಕಾಗುವ ಶಿಸ್ತನ್ನು ರೂಢಿಸಿಕೊಳ್ಳಲು ವಾಚ್ಯ ಅವಾಚ್ಯಗಳ ನಡುವೆ ಬೇರೆಯದೇ ಅರ್ಥ ಲೋಕವನ್ನು ಬಗೆದಿಡುವ ವ್ಯಾಕರಣದ ಅರಿವು ಇರಬೇಕಾಗುತ್ತದೆ. ಉದಾಹರಣೆಗೆ ಜನಪ್ರಿಯ ಸಿನೆಮಾ ‘ಮುಂಗಾರುಮಳೆ’ಯ ವಾಚ್ಯಾರ್ಥವೇ ಬೇರೆ, ಗೂಡಾರ್ಥವೇ ಬೇರೆ. ಒಂದು ವ್ಯಾಖ್ಯಾನದಂತೆ “ಕುರುಡರು ನಡೆಸಿದ ದರ್ಬಾರು” – ಇನ್ನೊಂದು ರೀತಿಯಲ್ಲಿ ಬರಗಾಲದ ನಡುವೆ ಹೊಯ್ದ ತುಂತುರು ಹನಿ.
ಏನಿರುತ್ತೆ?:
ಮೂರು ದಿನವೂ ಯಾವುದಾದರೂ ‘ಒಂದೇ ಸಿನಿಮಾವನ್ನು’ ಪಠ್ಯಕ್ರಮವೆಂದು ಭಾವಿಸಲಾಗುವುದು. ಸಿನೆಮಾದ ಬಗ್ಗೆ ಚರ್ಚಿಸಲಾಗುತ್ತದೆ. ಸಿನೆಮಾದ ಎಲ್ಲಾ ಮುಖಗಳನ್ನು, ಅದರ ಎಲ್ಲಾ ಆಯಾಮಗಳನ್ನು , ಸಿನೆಮಾ ಮಾಧ್ಯಮದ ಕುರಿತು ಆಳವಾದ ಜ್ಞಾನವುಳ್ಳ ಸಂಪನ್ಮೂಲ ವ್ಯಕ್ತಿಗಳು ಶಿಬಿರಾರ್ಥಿಗಳ ಮುಂದಿಡುತ್ತಾರೆ.
ಮೂರೂ ದಿನ ಒಂದೇ ಸಿನೆಮಾ ತೋರಿಸುವ ಕಾರಣ?
ಒಂದಲ್ಲದಿದ್ದರೆ ಮೂರು ಸಿನಿಮಾ ತೋರಿಸಬಹುದು. ಆದರೆ, ಮೂರು ಚಿತ್ರಗಳನ್ನು ತೋರಿಸಿದರೆ, ಗ್ರಹಿಕೆ, ಮಾತು, ಚರ್ಚೆ ಚಟುವಟಿಕೆಗಳೆಲ್ಲ ಹರಿದು ಚದುರಿಹೋಗಿಬಿಡುವ ಅಪಾಯವಿದೆ. ಬದಲಿಗೆ ಒಂದೇ ಸಿನಿಮಾವನ್ನು ಅನೇಕ ತುಲನಾತ್ಮಕ ಗ್ರಹಿಕೆಯೊಂದಿಗೆ ನೋಡುತ್ತಾ ಹೋದಾಗ ಒಳಗಿನ ಪ್ರೇಕ್ಷಕ ಪ್ರೌಢಿಮೆಯುಳ್ಳ ವಿಮರ್ಶಕನೂ ಆಗಬಹುದು. ಕನಿಷ್ಠ ಆ ದಾರಿಯಾದರೂ ಗೋಚರಿಸಬಹುದು. ಅದಕ್ಕೆ ಬೇಕಾಗಿರುವ ವ್ಯಾಕರಣಕ್ಕೆ ‘ಸಿನಿಮಾ ಗ್ರಹಿಕೆ’ಯೆಂಬ ಅಕ್ಷರಭ್ಯಾಸವೇ ಶಿಬಿರದ ಉದ್ದೇಶ. ಶಿಬಿರ ಮುಗಿಸಿ ಆಚೆ ನಡೆದಾಗ ಎಲ್ಲರ ಗ್ರಹಿಕೆಯ ಕ್ರಮಗಳು ಅನನ್ಯವಾಗಿ ವಿಸ್ತರಿಸಿಕೊಳ್ಳುವುದರ ಅವಕಾಶವನ್ನು ತಪ್ಪಿಸುವುದಾದರೂ ಏಕೆ…?
ಚಟುವಟಿಕೆಗಳು ಏನೇನು?
ಮೇ ೧, ೨೦೦೯ : ಶಿಬಿರಕ್ಕೆ ಬಂದವರನ್ನು ಗುಂಪುಗಳಾಗಿ ವಿಂಗಡಿಸುವುದು. ಗುಂಪುಗಳ ಮಧ್ಯೆ ಹುರುಪು ಇಮ್ಮಡಿಸುವಂತಿನ ಹರಟೆ, ಮಾತುಕತೆ, ಆಟ ಇತ್ಯಾದಿ. ಕತ್ತಲಾದೊಡನೆ, ಸಿನಿಮಾ ಟೂರಿಂಗ್ ಟಾಕೀಸ್ ರೀತಿಯ ಪರಿಸರದಲ್ಲಿ, ಅಂದರೆ ಮುಕ್ತವಾದ ವಾತಾವರಣದಲ್ಲಿ (ಓಪನ್ ಗ್ರೌಂಡ್) ಸಿನಿಮಾ ಪ್ರದರ್ಶನ. ನಂತರ ಊಟಕ್ಕೆ ಮಧ್ಯಂತರ. ಅಂದರೆ, ವೇಳೆ ಸುಮಾರು ೯.೩೦ ಎಂದು ಅಂದಾಜಿಸಬಹುದು. ನಂತರ: ಗೋಷ್ಠಿ ಪ್ರಾರಂಭ: ನೋಡಿದ ಸಿನಿಮಾಕ್ಕೆ ಯಾರು ಬೇಕಾದರೂ, ಯಾವ ರೀತಿ ಬೇಕಾದರೂ ಪ್ರತಿಕ್ರಿಯಿಸಬಹುದು: ಉದಾಹರಣೆಗೆ: “ಬೊಂಬಾಟ್ ಸಿನಿಮಾ” ಇಲ್ಲದಿದ್ದರೆ, “ತಿಪ್ಪೆ ಸಿನಿಮಾ”. ಇದಕ್ಕಿಂತಲೂ ಪ್ರೌಢವಾದ ಅಭಿಪ್ರಾಯಗಳು ಬರುತ್ತದೆ ಎಂದೆನ್ನುವ ನಿರೀಕ್ಷೆ ಇದೆ. ಸಾಧ್ಯವಿದ್ದಷ್ಟೂ, ಸಾಕಾಷ್ಟು ಮಾತನಾಡುವುದು ಒಳ್ಳೆಯದು. ಸಾಧ್ಯವಾದರೆ, ಕಾಗದದ ಮೇಲೆ ಸಂಕ್ಷಿಪ್ತವಾಗಿ ಬರೆದಿಟ್ಟಿರುವುದು ಸೂಕ್ತ. ಮೊದಲನೆ ದಿನ ಹಾಜರಿರಬಹುದಾದ ಸಂಪನ್ಮೂಲ ಟಿಪ್ಪಣಿಗಳನ್ನು ತೆಗೆದುಕೊಳ್ಳುವುದರ ಹೊರತಾಗಿ, ಶಿಬಿರಾರ್ಥಿಗಳ ಮಾತು/ಚರ್ಚೆಗೆ ಯಾವುದೇ ರೀತಿಯ ಭಂಗ ಉಂಟು ಮಾಡುವುದಿಲ್ಲ. ನಂತರ ವಿಶ್ರಾಂತಿ.
ಶಿಬಿರಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸುವುದೇಕೆ?
ಯಾವ ಗುಂಪು ಹೆಚ್ಚು ಗಹನವಾದ ಪ್ರೌಢಿಮವಾದ ಅಭಿಪ್ರಾಯಗಳನ್ನ್ಯ್ ವ್ಯಕ್ತ ಪಡಿಸುತ್ತದೋ ಆ ಗುಂಪಿಗೆ ಸಣ್ಣ ಪಾರಿತೋಷಕ ಹಾಗು ಸಂವಾದ.ಕಾಂನಿಂದ ನೀಡಲಾಗುವುದು. ಅದು ಗುಂಪಿಗೆ ಒಟ್ಟಾರೆಯಾಗಿರಬಹುದು ಅಥವಾ ವ್ಯಕ್ತಿಗೂ ಇರಬಹುದು. ಬಹುಮಾನ ಹೇಗೆ ಎಂದೆನ್ನುವುದನ್ನು ಸ್ಥಳದಲ್ಲೇ ತೀರ್ಮಾನಿಸಲಾಗುವುದು. ಮತ್ತು ಸಣ್ಣ ಗುಂಪುಗಳ ಮಧ್ಯೆ ಚರ್ಚೆಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಈ ಕಾರಣಗಳಿಗಾಗಿ ಗುಂಪುಗಳನ್ನಾಗಿ ವಿಂಗಡಿಸಲಾಗುವುದು.
ಮೇ ೨, ೨೦೦೯: ಬೆಳಿಗ್ಗೆ ಕಾಫಿ ತಿಂಡಿಯನಂತರ (ಸುಮಾರು ೯.೩೦ ಕ್ಕೆ) ಸಂಪನ್ಮೂಲ ವ್ಯಕ್ತಿಗಳ ಹೊಣೆಗಾರಿಕೆ ಸ್ಥಾನ ಅಂಗೀಕರಿಸುವವರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ತೆರೆದಿಡುತ್ತಾರೆ. ಶಿಬಿರಾರ್ಥಿಗಳು, ತಮ್ಮ ಸಂಶಯಗಳ ನಿವಾರಣೆಗಾಗಿ ಮೂರು ಪ್ರಶ್ನೆಗಳನ್ನು ಕೇಳಬಹುದು. ಸಮಯ ನಿರ್ವಹಣೆಗಾಗಿ ಯಾರಾದರೊಬ್ಬರು ಗೋಷ್ಠಿಯನ್ನು ನಿರ್ವಹಿಸುತ್ತಾರೆ. ಪ್ರಶ್ನೋತ್ತರದ ವೇದಿಕೆಯನ್ನು ಚರ್ಚಾ ವೇದಿಕೆಯಾಗಿ ಪರಿವರ್ತನೆಯಾಗುವುದನ್ನು ತಡೆಯುವುದು ನಿರ್ವಾಹಕರ ಹೊಣೆಯಾಗಿರುತ್ತದೆ. ಅಲ್ಲಿ ಅವರ ತೀರ್ಮಾನವೇ ಅಂತಿಮ, ಏಕೆಂದರೆ ವಾದ-ವಿವಾದಗಳಿಗೆ ಅಂತಿಮ ಹಂತವೆನ್ನುದು ಸಾಮೂಹಿಕ ಚಟುವಟಿಕೆಯಲ್ಲಿ ಅಸಾಧ್ಯದ ಮಾತು. ಶಿಬಿರಾರ್ಥಿಗಳು, ಈ ಶಿಸ್ತನ್ನು ಪಾಲಿಸುತ್ತಾರೆಂಬ ನಿರೀಕ್ಷೆ ಆಯೋಜಕರದು.
ಅದೇ ದಿನ ಸಂಜೆ, ಹಿಂದಿನ ದಿನ ನೋಡಿದ ಚಿತ್ರ ಪುನರ್ ಪ್ರದರ್ಶಗೊಳ್ಳುತ್ತದೆ. ಹಿಂದಿನ ದಿನ ತಾವು ಅಭಿವ್ಯಕ್ತಿಸಿದ ಅಭಿಪ್ರಾಯಗಳು, ಸಂಪನ್ಮೂಲ ವ್ಯಕ್ತಿಗಳು ತೆರೆದಿಡುವ ಅಭಿಪ್ರಾಯಗಳು ಜೊತೆಜೊತೆಯಾಗೇ ಇರುವುದರಿಂದ, ಚಿತ್ರ ಬೇರೆಯದೇ ಅರ್ಥವಿಸ್ತಾರದೊಂದಿಗೆ ಗ್ರಹಿಕೆಗೆಟುಕುತ್ತಾ ಹೋಗುತ್ತದೆ. ಊಟದನಂತರ ಸಮಯವಿದ್ದರೆ, ಒಂದಷ್ಟು ಹರಟೆ, ಆಟಗಳು.
ಮೇ ೩, ೨೦೦೯ ರ ಬೆಳಿಗ್ಗೆ: ಹಿಂದಿನ ಎರಡು ದಿನಗಳ ಸಂಕ್ಷಿಪ್ತ ವರದಿ. ನಂತರ ಸಿನಿಮಾ ಉದ್ಯಮದವರಿಂದ ಚಿತ್ರದ ಕುರಿತಂತೆ “ಪ್ರತಿಕ್ರಿಯೆ-ವಿಮರ್ಶೆ”. ನಂತರ ಮೂರು ರೀತಿಯ (ಸಾಮ್ಯಗಳೂ ಇರಬಹುದು….) ಒಳನೋಟಗಳು ಶಿಬಿರಾರ್ಥಿಗೆ ದಕ್ಕಿರುತ್ತದೆ. ಇವುಗಳನ್ನೆಲ್ಲ ಇಟ್ಟುಕೊಂಡು, ಎರಡು ದಿನಗಳ ಪ್ರದರ್ಶನ, ಅನೇಕ ಬಗೆಯ ಒಳನೋಟಗಳುಳ್ಳ ಮಾತುಗಳು/ವಿಮರ್ಶೆ ಎಲ್ಲವನ್ನು ಮುಂದಿಟ್ಟುಕೊಂಡು “ಮುಕ್ತವಾದ ಚರ್ಚೆ”.
ಸಂಜೆ ಸಮಾರೋಪ, ಬಹುಮಾನ ವಿತರಣೆ.
ತಲುಪಬೇಕಾದ ಮಾರ್ಗಸೂಚಿ:
ಬಸ್ಸಿನಲ್ಲಿ ಬರುವವರಿಗೆ: ತುಮಕೂರು ತಲುಪಿದ ನಂತರ ಪ್ರತಿ ಅರ್ಧಗಂಟೆಗೊಮ್ಮೆ ಇರುವ ಖಾಸಗಿ ಬಸ್ಸು ಹಿಡಿದು ತೋವಿನಕೆರೆ ತಲುಪಬೇಕು. ಅಲ್ಲಿಂದ ಓದೇಕಾರ್ ಎಸ್ಟೇಟ್ ಐದು ಕಿ ಮೀ ದೂರದಲ್ಲಿದೆ. ದೊಡ್ಡ ಆಟೋದಲ್ಲಿ ಎಂಟು ಜನರನ್ನು ಕೂಡಿಸುತ್ತಾರೆ. ಒಬ್ಬರಿಗೆ ಹತ್ತು ರೂ. ಅಥವಾ ಒಬ್ಬರೇ ತಲುಪಲು ಆಟೋಕ್ಕೆ ೫೦ ರಿಂದ ೬೦ ರೂಪಾಯಿ.
ಬೆಂಗಳೂರಿನಿಂದ ತುಮಕೂರಿಗೆ ಖಾಸಗಿ ಬಸ್ಸುಗಳಾದರೆ ೩೦ ರೂಪಾಯಿಗಳು ದರ. ಕೆ ಎಸ್ ಆರ್ ಟಿ ಸಿ ಯಾದರೆ ೩೬ ರೂಪಾಯಿಗಳು. ತುಮಕೂರಿನಿಂದ ತೋವಿನಕೆರೆಗೆ ೧೫ ರೂಪಾಯಿಗಳು.
ಸ್ವಂತ ವಾಹನದಲ್ಲಿ ಬರುವವರು ತುಮಕೂರಿನ ಬಟವಾಡೆ ಬೈಪಾಸ್‍ನಿಂದ ಶಿರಾ ರಸ್ತೆಯಲ್ಲಿ ಹೋಗುತ್ತಾ ‘ನೆಲಹಾಳ್’ ಗೇಟ್ ಬಳಿ ರಸ್ತೆಯ ಬಲಕ್ಕೆ ಹೊರಳಬಹುದಾದ ನಂದಿಹಳ್ಳಿ-ತೋವಿನಕೆರೆ ಮಾರ್ಗ ಹಿಡಿಯಬೇಕು. ಸ್ಥಳೀಯರನ್ನು ವಿಚಾರಿಸುತ್ತಾ ಬರಬೇಕು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.
ಮೊಬೈಲ್ ಸಿಗ್ನಲ್ ಅಲ್ಲಿ ವಿಪರೀತ ದುರ್ಬಲ. ಆದುದರಿಂದ, ಓದೇಕಾರ್ ಎಸ್ಟೇಟ್‌ನ ಸಂಪರ್ಕಕ್ಕೆ ಈ ದೂರವಾಣಿ ಸಂಖ್ಯೆ ನಿಮ್ಮ ಬಳಿ ಇರಲಿ:
೦೮೧೬ ೨೦೧೮೪೮೦
ಓದೇಕಾರ್ ಫಾರಂನಲ್ಲಿ ಕನ್ನಡಸಾಹಿತ್ಯಕಾಂ ನಡೆಸಿದ ಶಿಬಿರವೊಂದರ ಚಿತ್ರಗಳು ಇಲ್ಲಿವೆ:
IMG_0176
ಶಿಬಿರದ ವರದಿ ಇಲ್ಲಿದೆ:
http://manasu-hakki.blogspot.com/2008/08/odekar-farm-tumkur-koratagere-kannada.html
ವ್ಯವಸ್ಥೆ:
ಎಸ್ಟೇಟಿನಲ್ಲಿ ಇರುವ ವ್ಯವಸ್ಥೆ ಕೆಳಕಂಡಂತಿದೆ
೨ ಡಾರ್ಮೆಟರಿ (ಮಲಗಲು ಜಮಖಾನ ದಿಂಬು ಪೂರೈಸಲಾಗುತ್ತದೆ. ಹಾಸಿಗೆ ಇಲ್ಲ.)
೪ ಶೌಚ/ಸ್ನಾನ ಗೃಹಗಳಿವೆ.
ನಿಮ್ಮೊಂದಿಗಿರಲಿ:
ಸಾಧ್ಯವಿದ್ದರೆ ನಿಮ್ಮೊಂದಿಗೆ ತರಬೇಕಾದದ್ದು:
ಸಣ್ಣದೊಂದು ಟಾರ್ಚು, ಕೊಡೆ, ಬೆಡ್‍ಶೀಟು, ಸೋಪು, ಟವೆಲ್ಲು, ನಿಮ್ಮ ಬಟ್ಟೆ.
ಮದ್ಯ ಸೇವನೆ ಇಲ್ಲ.
ಶಿಬಿರಾರ್ಥಿಗಳಿಂದ ನಿರೀಕ್ಷಿಸುವುದೇನು?
ಕಲಿಯುವ ಇಚ್ಚೆಯುಳ್ಳ ವಿದ್ಯಾರ್ಥಿಗಿರಬೇಕಾದ ಶಿಸ್ತು, ಹಂಬಲ. ಚರ್ಚೆ; ಹರಟೆ, ಮೊಂಡುವಾದ ದೂರವಿದ್ದರೆ ಶಿಬಿರದ ಉದ್ದೇಶ ಹೆಚ್ಚು ಸಾರ್ಥಕ. ಹರಟೆ, ಆಟಕ್ಕೆ ಸಮಯವನ್ನು ನಿಗದಿ ಪಡಿಸಲಾಗಿದೆ.
ಸಂಪನ್ಮೂಲ ವ್ಯಕ್ತಿಗಳ ಕಿರು ಪರಿಚಯ:
ವಿ ಬಿ ತಾರಕೇಶ್ವರ್
ಎಂಎ, ಎಂಫಿಲ್, ಪಿ‌ಎಚ್‌ಡಿ ಮುಗಿಸಿರುವ ತಾರಕೇಶ್ವರ್ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಪಕಾರಾಗಿದ್ದಾರೆ. ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಸುಪರಿಚಿತವಾಗಿರುವ ತಾರಕೇಶ್ವರ್‌ರ ಹೆಸರು ಹೇಗೆ ಪ್ರಮುಖವಾಗಿದೆಯೋ, ಅದೇ ರೀತಿ ಸಂಶೋಧನ ಬರವಣಿಗೆ, ಅನುವಾದದಲ್ಲಿಯೂ ದುಡಿದಿದ್ದಾರೆ. ಅತ್ಯಂತ ನಿಷ್ಠುರವಾದ ನಿಲುವುಗಳಿಗೆ ತಾರಕೇಶ್ವರ್ ತಮ್ಮ ಆಪ್ತವಲಯದಲ್ಲಿ ಹೆಸರಾಂತರೂ ಆಗಿರುವುದರಿಂದ ಗಂಭೀರ ಹಾಗೆಯೇ ನಿಷ್ಠುರವಾದ ನಿಲುವುಗಳನ್ನು ತಾರಕೇಶ್ವರ್‌ರಿಂದ ನಿರೀಕ್ಷಿಸಬಹುದು.
ರಘುನಾಥ ಚ ಹ
ಸಾಹಿತ್ಯದ ಸಂವೇದನೆಯ ಮೂಲಕ ಚಿತ್ರವನ್ನು ಗ್ರಹಿಸುವ ರಘುನಾಥ್ ಪತ್ರಿಕೆಗಳಲ್ಲಿ ಬರುವ, ಆ ಕ್ಷಣದ ವಿಮರ್ಶಕರಲ್ಲಿ ಪ್ರತ್ಯೇಕವಾಗಿ ನಿಲ್ಲುವ ಹೆಸರು, ಇವರೊಂದಿಗೆ ವಿಶಾಖ ಹಾಗು ಸಂದೀಪ ನಾಯಕರೂ ಇದ್ದಾರೆ. ಹೊಸ ಪೀಳಿಗೆಯ ನಿರ್ದಾಕ್ಷಿಣ್ಯವಾದ ನಿಲುವುಗಳು, ಗುಣಮಟ್ಟಕ್ಕೆ ಮಾನ್ಯತೆ ಮುಂತಾದ ಸಂದರ್ಭೋಚಿತವಾದ ನಿಲುವುಗಳು ಶ್ಲಾಘನೀಯ/ಈ ಕ್ಷಣದ ಅಗತ್ಯ ಕೂಡ. ರಘುನಾಥ್ ಬರಿಯ ಸಿನಿ ವಿಮರ್ಶಕರು ಮಾತ್ರವಲ್ಲ, ಒಳ್ಳೆಯ ಸೃಜನಶೀಲ ಲೇಖಕ ಕೂಡ. ಇವರ ಸಣ್ಣಕತೆಯ ಸಂಕಲನವೊಂದು ಪ್ರಕಟವಾಗಿದೆ.
ಡೇವಿಡ್ ಬಾಂಡ್
ಮೂಲತ ಫ್ರಾನ್ಸಿನವರು. ಸದ್ಯಕ್ಕೆ ಕರ್ನಾಟಕದಲ್ಲಿ ನೆಲೆ ಕಂಡುಕೊಂಡು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಫ್ರೆಂಚ್ ಕಲಿಸಿಕೊಡುತ್ತಿದ್ದಾರೆ. ಏಳು ವರ್ಷಗಳಿಂದ ಕನ್ನಡ ಚಿತ್ರಗಳನ್ನು ಸತತವಾಗಿ ಅಧ್ಯಯನ ಪೂರ್ವಕವಾಗಿ ನೋಡಿಕೊಂಡು ಬರುತ್ತಿರುವ ದೇವಿಡ್ ಬಾಂಡ್ ಕನ್ನಡ ಚಿತ್ರಗಳನ್ನು ತೌಲನಿಕವಾಗಿ ಮಾತನಾಡಬಲ್ಲರು. ಇಲ್ಲೂ ಸಹ ಅವರು ಇದನ್ನೇ ಮಾಡಲಿದ್ದಾರೆ.
ವಿಶಾಖ: ಐದು ವರ್ಷಗಳಿಂದ ಪ್ರಜಾವಾಣಿಯಲ್ಲಿ ಉಪಸಂಪಾದಕ/ವರದಿಗಾರರಾಗಿ ಅಗಾಗ್ಯೆ ಸಿನಿಮಾ ವಿಮರ್ಶೆಯ ಅಂಕಣದಲ್ಲಿ ಸಂದೀಪ್ ನಾಯಕ್, ರಘುನಾಥ್‌ರವರೊಂದಿಗೆ ಎದ್ದುಕಾಣುವ ಮತ್ತೊಂದು ಹೆಸರು ವಿಶಾಖರರದ್ದು. ಸಂಕೋಚವಿಲ್ಲದ ಬರವಣಿಗೆ. ಏಷಿಯನ್ ಸ್ಕೂಲ್ ಆಫ್ ಜರ್ನಲಿಸಂನಲ್ಲಿ ಜರ್ನಲಿಸಂ ಡಿಪ್ಲೊಮ . ವರ್ಷದ ಅತ್ಯುತ್ತಮ ವಿದ್ಯಾರ್ಥಿ ಎಂಬ ಹೆಗ್ಗಳಿಕೆಯೂ ಇರುವ ವಿಶಾಖ ಸಣ್ಣಕತೆಗಳ ಸಾಲಿನಲ್ಲೂ ಕಾಣಿಸಿಕೊಂಡಿರುವ ಹೆಸರು. ಪ್ರಾರಂಭದ ದಿನಗಳನ್ನು ಕನ್ನಡಪ್ರಭ ಹಾಗು ದಟ್ಸ್‍ಕನ್ನಡದಲ್ಲಿ (http://thatskannada.com)ಕೆಲವು ದಿನಗಳನ್ನು ಕಳೆದಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಮೃತ ಮಹೋತ್ಸವದ ಸಂದರ್ಭದಲ್ಲಿ ಹೊರತಂದ ೭೫ ಹೊತ್ತಿಗಳ ಪೈಕಿ ಪ್ರಭಾಕರ ಶಾಸ್ತ್ರಿಯ ಬಗೆಗಿನ ಸಂಚಿಕೆಯ ಸಂಪಾದನೆ ಇವರದ್ದೇ.
ಬಿ. ಸುರೇಶ: ೧೯೬೨ರಲ್ಲಿ ದಾವಣಗೆರೆಯಲ್ಲಿ ಜನಿಸಿದ ಬಿ.ಸುರೇಶ ಓದಿದ್ದು ಕುಂಭಕಲೆ. ೧೯೭೨ರಿಂದಲೇ ಬಾಲನಟನಾಗಿ ಹವ್ಯಾಸೀ ರಂಗಭೂಮಿಯಲ್ಲಿ ಕಾಣಿಸಿಕೊಂಡ ಇವರು ಈವರೆವಿಗೂ ಸಕ್ರಿಯ ರಂಗಕರ್ಮಿಯಾಗಿದ್ದಾರೆ. ಹದಿನೈದು ನಾಟಕಗಳನ್ನು ಈವರೆಗೆ ಬರೆದಿದ್ದಾರೆ. ಷೇಕ್ಸ್ಪಿಯರ್ ನ ಮ್ಯಾಕ್ಬೆತ್, ಕಿಂಗ್ ಲಿಯರ್ ನಂತಹ ನಾಟಕಗಳನ್ನೂ ಒಳಗೊಂಡಂತೆ ೨೫ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬಿ.ಸುರೇಶ ಅವರು ಬರೆದ ‘ಷಾಪುರದ ಸೀನಿಂಗಿ-ಸತ್ಯ’ ನಾಟಕವು ೧೯೯೭ರಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.


‍ಲೇಖಕರು avadhi

April 24, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This