೮೦ರ ಸಂಭ್ರಮದಲ್ಲಿ ಡಾ. ವ್ಯಾಸರಾವ್ ನಿಂಜೂರು

ಡಾ. ಜಿ. ಎನ್. ಉಪಾಧ್ಯ

ವಿಜ್ಞಾನದ ಮುಖ ಸಾಹಿತ್ಯದ ನೊಗ – ಡಾ. ನಿಂಜೂರು ಸಾಧನೆ

‘ಜ್ಞಾನಂ ವಿಜ್ಞಾನ ಸಹಿತಂ’ ಎಂಬುದು ನಮ್ಮಲ್ಲಿ ಚಾಲ್ತಿಯಲ್ಲಿದ್ದ ಪ್ರಾಚೀನ ಹೇಳಿಕೆ. ಈ ದಿಸೆಯಲ್ಲಿ ಮುಂದುವರಿದು ವಿಜ್ಞಾನ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಕೃಷಿ ಮಾಡಿ ವಿಪುಲ ಬೆಳೆ ತೆಗೆದವರು ಡಾ. ವ್ಯಾಸರಾವ್ ನಿಂಜೂರ್. ಮುಂಬೈಯಲ್ಲಿ ನೆಲೆಸಿ ವಿಜ್ಞಾನಿಯಾಗಿ ಹೆಸರು ಮಾಡಿ ಕನ್ನಡದ ತೇರ ನೆಳೆದ ಡಾ. ನಿಂಜೂರರದು ಬಹುಮುಖ ಪ್ರತಿಭೆ.

ಯಕ್ಷಗಾನ ಕಲಾವಿದನಾಗಿ, ವಿಜ್ಞಾನಿಯಾಗಿ, ಸಂಶೋಧಕನಾಗಿ, ಪ್ರಾಧ್ಯಾಪಕನಾಗಿ, ಕಥೆಗಾರನಾಗಿ, ಕಾದಂಬರಿಕಾರನಾಗಿ, ಅನುವಾದಕನಾಗಿ, ಪತ್ರಿಕೋದ್ಯಮಿಯಾಗಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.

ಜೀವ ವಿಜ್ಞಾನಿಯಾದ ಡಾ. ವ್ಯಾಸರಾವ್ ನಿಂಜೂರ್ ಅವರು ತಮ್ಮೆಲ್ಲ ಬರವಣಿಗೆಯಲ್ಲೂ ಮಾನವ ಜೀವಿಯನ್ನು ತೂಗಿ ನೋಡುವ, ಪರೀಕ್ಷಿಸುವ, ಸಂಶೋಧಿಸುವ, ಸಾಮೂಹಿಕವಾಗಿ ತಾಳೆ ಹಾಕಿ ವಿಶ್ಲೇಷಿಸುವ ಪ್ರವೃತ್ತಿಯಿಂದಾಗಿ ಅವರು ನಮ್ಮ ಸಮಕಾಲೀನ ಲೇಖಕರ ನಡುವೆ ಭಿನ್ನ ಧ್ವನಿಯಾಗಿ ಹೆಸರು ಮಾಡಿದ್ದಾರೆ. 

ಮುಂಬೈನ ಬಾಬಾ ಪರಮಾಣು ಸಂಶೋಧನ ಕೇಂದ್ರದಲ್ಲಿ ಜೀವ ರಸಾಯನ ಶಾಸ್ತ್ರದ ವಿಜ್ಞಾನಿಯಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದರೂ ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿಯ ಪರಿಚಾರಿಕೆಯಿಂದ ಅವರು ದೂರವಾದವರಲ್ಲ. ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ `ಫೆಲೋ’ ಆಗಿ ಕೆಲಸ ಮಾಡಿದ ಅವರು ವಿಜ್ಞಾನ ಲೋಕದ ವಿಸ್ಮಯಗಳ ಕುರಿತು ಆಂಗ್ಲ ಹಾಗೂ ಕನ್ನಡ ಭಾಷೆಗಳಲ್ಲಿ ಒಳ್ಳೊಳ್ಳೆಯ ಬರಹಗಳನ್ನು ಪ್ರಕಟಿಸಿದ್ದಾರೆ.

ಡಾ. ನಿಂಜೂರ್ ಅವರ ಸಾಹಿತ್ಯ ಸಾಧನೆ ನಾಡಿಗೆ ಮಾದರಿಯಾಗಿದೆ. ಈಗ ಅವರಿಗೆ ೮೦ರ ಸಂಭ್ರಮ. ಅವರ ಯಶೋಗಾಥೆಯ ಕಿರು ಅವಲೋಕನ, ವಿವರಣೆ ಇಲ್ಲಿದೆ.

ಮುಂಬಯಿಯಲ್ಲಿ ನೆಲೆನಿಂತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದ ಬಹುಮುಖ್ಯ ಲೇಖಕರಲ್ಲಿ ಡಾ. ವ್ಯಾಸರಾವ್ ನಿಂಜೂರ್ ಅವರೂ ಒಬ್ಬರು. ಹೊರನಾಡಿನಲ್ಲಿದ್ದುಕೊಂಡು ಸತ್ವಪೂರ್ಣವಾದ ಕೃತಿಗಳನ್ನು ಕನ್ನಡ ವಾಙ್ಮಯಕ್ಕೆ ನೀಡಿದ ಡಾ. ನಿಂಜೂರರ ಜೀವನ ಸಾಧನೆ ಅನೇಕ ದೃಷ್ಟಿಯಿಂದ ನಮ್ಮ ಗಮನಸೆಳೆಯುತ್ತದೆ. ಸಾಹಿತ್ಯ ಹಾಗೂ ವಿಜ್ಞಾನ ಇವೆರಡನ್ನೂ ಸಮ ಸಮವಾಗಿ ನಡೆಸಿಕೊಂಡು ಬಂದ ಅವರು ಈ ಉಭಯ ಕ್ಷೇತ್ರಗಳಲ್ಲಿಯೂ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.

ಜೀವ ವಿಜ್ಞಾನಿಯಾದ ಡಾ. ವ್ಯಾಸರಾವ್ ನಿಂಜೂರ್ ಅವರು ತಮ್ಮೆಲ್ಲ ಬರವಣಿಗೆಯಲ್ಲೂ ಮಾನವ ಜೀವಿಯನ್ನು ತೂಗಿ ನೋಡುವ,  ಪರೀಕ್ಷಿಸುವ, ಸಂಶೋಧಿಸುವ, ಸಾಮೂಹಿಕವಾಗಿ ತಾಳೆ ಹಾಕುವ ಪ್ರವೃತ್ತಿಗಳಿಂದಾಗಿ ನಮ್ಮ ಸಮಕಾಲೀನ ಲೇಖಕರ ನಡುವೆ ಭಿನ್ನ ಧ್ವನಿಯಾಗಿ ಹೆಸರು ಮಾಡಿದ್ದಾರೆ. ವಿಜ್ಞಾನಿಯಾಗಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಓಡಾಡಿದರೂ ತಮ್ಮ ಬಹುಮುಖ ಸಾಧನೆಯ ನಡುವೆ ಸಾಹಿತ್ಯ ರಚನೆಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.

೧೯೪೦ನೇ ಇಸವಿ ಅಕ್ಟೋಬರ್ ೬ರಂದು ಉಡುಪಿ ಸಮೀಪದ ತೆಂಕನಿಡಿಯೂರಿನಲ್ಲಿ ಜನಿಸಿದ ವ್ಯಾಸರಾವ್ ಬಾಲ್ಯದ ಶಿಕ್ಷಣವನ್ನು ಕೊಡವೂರು, ಕಲ್ಯಾಣಪುರದಲ್ಲಿ ಪೂರೈಸಿದರು. ಬಾಲ್ಯದ ಶಿಕ್ಷಣವೆಲ್ಲ ಕನ್ನಡ ಮಾಧ್ಯಮದಲ್ಲೇ. ಅಷ್ಟೇ ಅಲ್ಲ, ಆಗಿನ ಮದ್ರಾಸ್ ಪ್ರಾಂತದಲ್ಲಿ ಕನ್ನಡ ವಿಷಯದಲ್ಲಿ ಎಸ್. ಎಸ್. ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ತಮ್ಮ ಜಾಣ್ಮೆಯನ್ನು  ತೋರಿಸಿಕೊಟ್ಟರು.

ಅನಂತರ ಉಡುಪಿಯ ಎಂ. ಜಿ. ಎಂ.  ಮಹಾವಿದ್ಯಾಲಯದಿಂದ ಸ್ನಾತಕ ಪದವಿ ಪಡೆದರು. ಕಾಲೇಜು ದಿನಗಳಲ್ಲಿ ಪಠ್ಯೇತರ ಚಟುವಟಿಕೆಯಲ್ಲಿಯೂ ಈ ವಿಜ್ಞಾನದ ವಿದ್ಯಾರ್ಥಿ ಮೇಲುಗೈ ಸಾಧಿಸಿದರು. ಲೇಖಕ ಈಶ್ವರಯ್ಯ ಅವರೊಂದಿಗೆ ಸೇರಿಕೊಂಡು `ವ್ಯಾಸೇಶ್ವರ’ ಎಂಬ ಅಂಕಿತ ನಾಮದಿಂದ ಟೀಕೆ ಟಿಪ್ಪಣಿ ಬರೆದು ಆ ಕಾಲದ ಹಿರಿಯ ಸಾಹಿತಿಗಳ ಕೋಪಕ್ಕೆ ಗುರಿಯಾದುದೂ ಉಂಟು.

ಒಮ್ಮೆ ಉಡುಪಿ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಬಂದಿದ್ದ ಅಂದಿನ ಹೆಸರಾಂತ ಸಾಹಿತಿ ಅ. ನ. ಕೃಷ್ಣರಾಯರು `ಬರೇ ಕೆಡುಕನ್ನು ಬೊಟ್ಟು ಮಾಡಿ ತೋರಿಸಿದರೆ ಅದು ಒಳ್ಳೆಯ ವಿಮರ್ಶೆಯಾಗದು ಕಣಯ್ಯ’ ಎಂದು ಬುದ್ಧಿಮಾತು ಹೇಳಿದರಂತೆ.

ಪದವೀಧರರಾದ ಮೇಲೆ ನಿಂಜೂರರು ಮಣಿಪಾಲದ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನ ಬಯೊಕೆಮಿಸ್ಟ್ರಿ ವಿಭಾಗದಲ್ಲಿ ಸೇವೆ ಸಲ್ಲಿಸಿದರು. ನೌಕರಿ ಹಾಗೂ ಹೆಚ್ಚಿನ ಅಧ್ಯಯನಕ್ಕೆಂದು ೧೯೬೫ರಲ್ಲಿ ಅವರು ಮುಂಬಯಿಗೆ ಬಂದರು. ಮುಂದೆ ಮುಂಬಯಿ ವಿಶ್ವವಿದ್ಯಾಲಯದಿಂದ `ಬಯೊಕೆಮಿಸ್ಟ್ರಿ’ ವಿಷಯದಲ್ಲಿ ಉನ್ನತ ಅಧ್ಯಯನ ನಡೆಸಿ ಎಂ. ಎಸ್ಸಿ ಹಾಗೂ ಡಾಕ್ಟರೇಟ್ ಪದವಿ ಪಡೆದುಕೊಂಡರು.

ಬಾಬಾ ಪರಮಾಣು ಸಂಶೋಧನ ಕೇಂದ್ರದಲ್ಲಿ ಜೀವ ರಸಾಯನ ಶಾಸ್ತ್ರದ ವಿಜ್ಞಾನಿಯಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದರೂ ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯ ಪರಿಚಾರಿಕೆಯಿಂದ ದೂರವಾದವರಲ್ಲ. ಮುಂದೆ ಬಿ. ಎ. ಆರ್. ಸಿ.ಯಲ್ಲಿ ಆಹಾರ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ, ವಿಜ್ಞಾನ ಲೇಖಕರಾಗಿ, ಸಂಶೋಧಕರಾಗಿ ಒಳ್ಳೆಯ ಬರಹಗಳನ್ನು ಪ್ರಕಟಿಸಿದ್ದಾರೆ. ಆ ಮೂಲಕ ಸಹೃದಯರ ಅರಿವಿನ ಕಣಜವನ್ನು ವಿಸ್ತರಿಸಿದ್ದಾರೆ.

ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ `ಫೆಲೋ’ ಆಗಿ ಅಮೇರಿಕಾದ ಮಿಚಿಗನ್, ಕೆಲಿಫೋರ್ನಿಯಾ ರಾಕೆ ಫೆಲರ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಅಧ್ಯಯನವನ್ನು ಕೈಗೊಂಡು ಬಂದವರು. ಅವರ ನೂರಾರು ಸಂಶೋಧನ ಪ್ರಬಂಧಗಳು ಜಗತ್ತಿನೆಲ್ಲೆಡೆ ಪ್ರಕಟವಾಗಿವೆ. ಅಮೇರಿಕಾದ ಕೆಲವು ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿ ಅವರು ಸೇವೆ ಸಲ್ಲಿಸಿದರು. ೧೯೯೧ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡರು.

ಡಾ. ವ್ಯಾಸರಾವ್ ನಿಂಜೂರ್ ಅವರು ಬರಿ ಶುಷ್ಕ ವಿಜ್ಞಾನಿಯಲ್ಲ. ಒಳ್ಳೆಯ ಸಹೃದಯಿ, ಅಷ್ಟೇ ರಸಿಕರು ಎಂತಲೇ ಅವರು ಎಲ್ಲವನ್ನು ಕವಿಯ ಕಣ್ಣಿಂದ ನೋಡಬಲ್ಲರು, ವಿಜ್ಞಾನಿಯ ಶೋಧ ಪ್ರವೃತ್ತಿಯನ್ನು ಎತ್ತಿ ಹಿಡಿಯಬಲ್ಲರು.  ಈ ವಿಜ್ಞಾನಿಯ ಬದುಕೇ ಒಂದು ದೊಡ್ಡ ಕಾದಂಬರಿ. ಅವರ ಕಾದಂಬರಿ ಕತೆಗಳಲ್ಲೂ ಇದು ಪಡಿಮೂಡಿದೆ. ಕತೆಗಳನ್ನು ಬರೆಯುವುದರ ಮೂಲಕ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ ಅವರು ಅಲ್ಲಿಂದ ಕಾದಂಬರಿ ಲೋಕಕ್ಕೆ ಕಾಲಿಟ್ಟರು.

ನಿಂಜೂರರು ಸುಮಾರು ಎಪ್ಪತ್ತರಷ್ಟು ಕತೆಗಳನ್ನು ಬರೆದಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಬೆಳಕು ಕಂಡು ಸಹೃದಯರ, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಎಲ್ಲ ಕತೆಗಳು ಒಂದೆಡೆ ಬಂದರೆ ಕನ್ನಡ ಸಾಹಿತ್ಯಕ್ಕೆ ಅದರಿಂದ ಮುನಾಫೆಯಾಗುತ್ತದೆ. ಡಾ. ವ್ಯಾಸರಾವ್ ನಿಂಜೂರ ಅವರು ಕಥೆಗಾರರಾಗಿಯೂ ಮಿಂಚಿದ್ದಾರೆ. ಕುಂಕುಮ (೧೯೬೩),`ಮಂಚ (೨೦೦೫)’, ದೂಜ ಮಾಸ್ತರರ ಮಗಳು ಬಸಿರಾದುದು (೨೦೧೧) ಅವರ  ಪ್ರಕಟಿತ ಕಥಾ ಸಂಕಲನಗಳು.

ಕನ್ನಡದ ಅತ್ಯುತ್ತಮ ಕಥೆಗಾರರಲ್ಲಿ ಡಾ. ನಿಂಜೂರ ಅವರೂ ಒಬ್ಬರು. ನಮ್ಮ ಸಾಮಯಿಕ ಪತನಮುಖಿ ಸಮಾಜ ವ್ಯವಸ್ಥೆ, ಮೌಲ್ಯಗಳ ಅಧಃಪತನ, ವ್ಯಕ್ತಿಯ ಅಂತರಂಗ ಮತ್ತು ಬಹಿರಂಗಗಳ ವೈದೃಶ್ಯಗಳನ್ನು ಅವರು ತಮ್ಮ ಕಥೆಯೊಳಗೆ ಚಿತ್ರಿಸಿರುವ ಪರಿ ಅನನ್ಯ. ನಿರಾಕರಣೆ, ಮಂಚ, ಗರಡಿ ಮಜಲಿನ ಗಾಂಧಿ, ಸಣ್ಣಮ್ಮ, ದೂಜ ಮಾಸ್ತರರ ಮಗಳು ಬಸಿರಾದುದು, ಪುತ್ರಕಾಮೇಷ್ಠಿ, ಆಗಮನ ಮೊದಲಾದ ಕಥೆಗಳನ್ನು ಬರೆದ ಡಾ. ನಿಂಜೂರರ ಪ್ರತಿಭೆ ಅಸಾಧಾರಣವಾದುದು.

`ವ್ಯಾಸರಾವ್ ನಿಂಜೂರ್ ಅವರು ನವ್ಯದ ಶಿಸ್ತಿನಲ್ಲಿ ಬರೆಯತೊಡಗಿದವರು. ವ್ಯಕ್ತಿಯ ಆಂತರಂಗಿಕ ಬದುಕನ್ನು ಪ್ರಜ್ಞೆಯ ಕೇಂದ್ರದಲ್ಲಿ ನಿಲ್ಲಿಸುವ ನವ್ಯಕ್ಕಿಂತ ಭಿನ್ನವಾಗಿ ದಟ್ಟ ಪ್ರಾದೇಶಿಕತೆಯನ್ನು ಅವರು ತಮ್ಮ ಕಥೆಗಳಲ್ಲಿ ತರುತ್ತಾರೆ. ಹಾಗಾಗಿ ಅವರ ಕತೆಗಾರಿಕೆಗೆ ಒಂದು ಪ್ರತ್ಯೇಕತೆ ಬಂದಿದೆ. ಹಳ್ಳಿಯ ಬದುಕಿನ ಚಿತ್ರಗಳನ್ನೂ ಅವರು ನವ್ಯದ ಒಳನೋಟದೊಂದಿಗೆ ಕೊಡಬಲ್ಲರು’ ಎಂಬುದಾಗಿ ಹಿರಿಯ ವಿಮರ್ಶಕ ಡಾ. ಜನಾರ್ದನ ಭಟ್ ಅವರು ನಿಂಜೂರರ ಕಥೆಗಳ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ.

ಇಂದು ಡಾ. ವ್ಯಾಸರಾವ್ ಅವರು ಕನ್ನಡ ಸಾಹಿತ್ಯದಲ್ಲಿ ನಾಮಾಂಕಿತರಾಗಿರುವುದು ಕಾದಂಬರಿಕಾರರಾಗಿಯೇ. `ಉಸಿರು’ ಅವರ ಮೊದಲ ಕಾದಂಬರಿ. ಇದು ೧೯೬೫ರಲ್ಲಿ ಕೃತಿರೂಪದಲ್ಲಿ ಬಂದಿತು. ಕತೆಗಾರರಾಗಿ ಹೆಸರು ಮಾಡಿದ ಡಾ. ನಿಂಜೂರರ ಮೊದಲ ಕಾದಂಬರಿಯನ್ನು ಮನೋಹರ ಗ್ರಂಥಮಾಲೆ ಪ್ರಕಟಿಸಿ ಅವರ ಪ್ರತಿಭೆಯನ್ನು ಲೋಕಮುಖಕ್ಕೆ ಪರಿಚಯಿಸಿವೆ.

ಹದಿಹರೆಯದ ತವಕ ತಲ್ಲಣಗಳನ್ನು ಉಸಿರು ಕಾದಂಬರಿ ಸಮರ್ಥವಾಗಿ ಸೆರೆಹಿಡಿದಿದೆ. ಸಮಾಜದ ಸ್ಥಿತ್ಯಂತರವನ್ನು ಸಶಕ್ತವಾಗಿ ಗುರುತಿಸಿ ದಾಖಲಿಸುವ ಕೆಲಸವನ್ನು ಡಾ. ನಿಂಜೂರರು ತಮ್ಮ ಕಾದಂಬರಿಗಳಲ್ಲಿ ಮಾಡಿದ್ದಾರೆ.

‘ಶ್ರೀ ಚಾಮುಂಡೇಶ್ವರಿ ಭವನ’ ಅವರ ಇನ್ನೊಂದು ಮಹತ್ವದ ಕಾದಂಬರಿ. ಸಾಹಿತ್ಯ ಅಕಾಡೆಮಿಯ ಬಹುಮಾನವೂ ಈ ಕೃತಿಗೆ ದೊರಕಿದೆ. ಕನ್ನಡದ ಅತ್ಯುತ್ತಮ ಪ್ರಾದೇಶಿಕ ಕಾದಂಬರಿಗಳಲ್ಲಿ ಶ್ರೀ ಚಾಮುಂಡೇಶ್ವರಿ ಭವನವೂ ಒಂದು. ಪ್ರಾದೇಶಿಕತೆಯನ್ನು ಚಿತ್ರಿಸುವುದರಲ್ಲಿ ಡಾ. ನಿಂಜೂರರು ಕನ್ನಡದ ಖ್ಯಾತ ಕಾದಂಬರಿಕಾರ ಶಿವರಾಮ ಕಾರಂತರನ್ನೂ ಮೀರಿಸಿದ್ದಾರೆ ಎಂದು ನಾಡಿನ ವಿಮರ್ಶಕರು ಅವರ ಈ ಕೃತಿಯನ್ನು ಕೊಂಡಾಟ ಮಾಡಿದ್ದುಂಟು.

ಕನ್ನಡದ ವಿರಳ ಪ್ರಾದೇಶಿಕ ಕಾದಂಬರಿಗಳಲ್ಲಿ ಪ್ರಸ್ತುತ ಕೃತಿಯೂ ಒಂದು. ಒಬ್ಬ ವಿಜ್ಞಾನಿಯಾಗಿ ನಮ್ಮ ಸಾಮಾಜಿಕ ವ್ಯವಸ್ಥೆಯ ಇತಿಮಿತಿಗಳಿಗೆ ಕನ್ನಡಿ ಹಿಡಿಯುವ ಕೆಲಸವನ್ನು ಲೇಖಕರು ಮಾಡಿದ್ದಾರೆ. `ನಗರ ಸಂಸ್ಕೃತಿ ಹಳ್ಳಿ ಹಳ್ಳಿಗಳಿಗೆ ಹರಡುವ ರೀತಿಯಲ್ಲಿ ನಿಂತ ನೀರಿನಂತಿರುವ ಹಳ್ಳಿಯ ಸಾಮಾಜಿಕ ವ್ಯವಸ್ಥೆಯು ಕುಸಿಯುತ್ತಲೇ ಬದಲಾಗುವ ರೀತಿಯನ್ನು ತುಂಬ ಮಾರ್ಮಿಕವಾಗಿ ಬಿಂಬಿಸುವ ಈ ಕೃತಿ ಒಂದು ಅನನ್ಯ ಕಾದಂಬರಿ’ ಎಂದು ಖ್ಯಾತ ಸಾಹಿತಿ ವ್ಯಾಸರಾಯ ಬಲ್ಲಾಳ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸಾಹಿತ್ಯ ಸೃಷ್ಟಿ ಎಂದರೆ ಜೀವನ ಸೃಷ್ಟಿಯೇ ಎಂಬ ನಿಲುವು ಡಾ. ನಿಂಜೂರರ ಕೃತಿಗಳಲ್ಲಿ ಕಾಣಸಿಗುತ್ತದೆ. ನಾಟಕ ರಂಗದಲ್ಲೂ ಡಾ. ನಿಂಜೂರರು ಕೈಯಾಡಿಸಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಬಣ್ಣ ಹಚ್ಚಿ  ರಂಗಮಂಚದಲ್ಲಿ ಮಿಂಚಿದ ಅವರು ಒಳ್ಳೆಯ ನಾಟಕಗಳನ್ನೂ ಬರೆದಿದ್ದಾರೆ. ಈ ವಿಜ್ಞಾನಿ ಒಂದು ಕಾಲದಲ್ಲಿ ಪ್ರಸಿದ್ಧ ಯಕ್ಷಗಾನ ವೇಷಧಾರಿ, ಅಷ್ಟೇ ಅಲ್ಲ, ಯಕ್ಷಗಾನ ಭಾಗವತಿಕೆಯ ಮಟ್ಟು ಹಾಗೂ ಹೆಜ್ಜೆಗಳನ್ನು ಶಾಸ್ತ್ರೋಕ್ತವಾಗಿ ಕಲಿತವರು.

ಹೀಗಾಗಿ ಅವರ ನಾಟಕ ಕೃತಿಗಳಲ್ಲಿ ರಂಗಭೂಮಿಯ ಎಲ್ಲ ಸಾಧ್ಯತೆಗಳು ಚೆನ್ನಾಗಿ ಅಭಿವ್ಯಕ್ತಗೊಂಡಿವೆ. `ನಲ್ವತ್ತರ ನಲುಗು’ ಇದು ಅವರ ಪ್ರಕಟಿತ ನಾಟಕ. ಈ ನಾಟಕ ಹತ್ತಾರು ಪ್ರದರ್ಶನಗಳನ್ನು ಕಂಡು ಜನಮೆಚ್ಚುಗೆಗೆ ಪಾತ್ರವಾಗಿದೆ. ಈ ನಾಟಕವನ್ನು ನಿರ್ದೇಶಿಸಿ ರಂಗದ ಮೇಲೆ ತಂದ ಪ್ರಖ್ಯಾತ ಕಲಾವಿದ ರಂಗ ನಿರ್ದೇಶಕ ಸದಾನಂದ ಸುವರ್ಣ ಅವರೇ ಈ ಕೃತಿಯನ್ನು ಪ್ರಕಟಿಸಿ ಗೌರವಿಸಿದ್ದಾರೆ. ಡಾ. ನಿಂಜೂರರ ಕತೆಗಳಂತೆ ಹೆಚ್ಚಿನ ನಾಟಕಗಳೂ ಬೆಳಕು ಕಂಡಿಲ್ಲ ಎಂಬುದು ದುರದೃಷ್ಟಕರ ಸಂಗತಿ.

`ಗೋಕುಲವಾಣಿ’ಯಲ್ಲಿ  ಧಾರವಾಹಿಯಾಗಿ ಪ್ರಕಟಗೊಂಡ ಅವರ ಇನ್ನೊಂದು ಕಾದಂಬರಿ `ತೆಂಕ ನಿಡಿಯೂರಿನ ಕುಳವಾರಿಗಳು’ ಪ್ರಕಟವಾಗಿ ಸಾಕಷ್ಟು  ಜನಪ್ರಿಯವಾಗಿದೆ. ಡಾ. ನಿಂಜೂರ್ ಅವರದು ತುಸು ಸಂಕೋಚ ಪ್ರವೃತ್ತಿ. ಪ್ರಚಾರ, ಪ್ರಶಸ್ತಿ, ಪುರಸ್ಕಾರಗಳಿಂದ ಅವರು ಬಲುದೂರ. ತಮ್ಮ ಬೇಳೆ ಬೇಯಿಸಿಕೊಳ್ಳಲು ಇತರರನ್ನು ಬಳಸಿಕೊಳ್ಳುವ ಪ್ರವೃತ್ತಿಯೂ ಅವರದ್ದಲ್ಲ. ಬರೆದುದೆಲ್ಲ ಪ್ರಕಟವಾಗಲೇಬೇಕೆಂಬ ಹಠವೂ ಅವರಿಗಿಲ್ಲ.

ಯಾವ ಸಾಹಿತ್ಯ ಚಳುವಳಿಯ ನೊಗಕ್ಕೂ ಅವರು ಹೆಗಲು ಕೊಟ್ಟವರಲ್ಲ. ಅವರೊಬ್ಬ ಸೂಕ್ಷ್ಮಮತಿಯ ಸ್ವೋಪಜ್ಞ ಲೇಖಕ ಡಾ. ನಿಂಜೂರರ ಶ್ರೀ ಚಾಮುಂಡೇಶ್ವರಿ ಭವನ ಕೃತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಮರು ಮುದ್ರಿಸಿದೆ. ಇದು ಹೊರನಾಡ ಲೇಖಕನಿಗೆ, ಹೊರನಾಡ ಕನ್ನಡಿಗರಿಗೆ ಸಂದ ಗೌರವವೆಂದೇ ಹೇಳಬೇಕು. ಬಿ. ಎ. ಆರ್. ಸಿ. ಕನ್ನಡ ಸಂಘ, ಕರ್ನಾಟಕ ಸಂಘ, ಬಿ. ಎಸ್. ಕೆ. ಬಿ. ಅಸೋಸಿಯೇಶನ್ ಮೊದಲಾದ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಅಕಾಡೆಮಿ, ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿಗೂ ಅವರು ಪಾತ್ರರಾಗಿದ್ದಾರೆ.

ನಿಂಜೂರರ ಶೈಲಿ ಬಹುಹೃದ್ಯ. ತಮ್ಮ ಕತೆಗಳಲ್ಲಿ ಅವರು ಬಳಸುವ ಕಥಾತಂತ್ರ, ಭಾಷಾ ಶೈಲಿ, ಪ್ರಾದೇಶಿಕತೆ ಮೊದಲಾದ ಅಂಶಗಳು ಅವರನ್ನು ನಮ್ಮ ನಡುವಿನ ಮಹತ್ವದ ಕಥೆಗಾರನೆಂದು ಗುರುತಿಸಲು ಕಾರಣಗಳಾಗಿವೆ. ತಮ್ಮ ಕಥೆ, ಕಾದಂಬರಿಗಳಲ್ಲಿ ಅವರು ಬಿಟ್ಟು ಬಂದ ಬೀಡನ್ನು ಹಾಗೂ ಅನ್ನ ಕೊಟ್ಟ ನಾಡನ್ನು (ಮುಂಬಯಿ ನಗರ) ಅಷ್ಟೇ ಸೊಗಸಾಗಿ ಚಿತ್ರಿಸಿದ್ದಾರೆ.

ಕರಾವಳಿ ಕರ್ನಾಟಕದ ಗ್ರಾಮೀಣ ಪರಿಸರದ ನಂಬಿಕೆ, ಸಂಪ್ರದಾಯ, ಶೋಷಣೆ, ಪುರುಷ ಪ್ರಧಾನ ವ್ಯವಸ್ಥೆ, ಸ್ತ್ರೀ ಪುರುಷರ ನಡುವಿನ ಸರಸ ವಿರಸಗಳನ್ನೆಲ್ಲ ಲಲಿತ ಮನೋಹರವಾಗಿ ಕಥೆಯೊಳಗೆ ತಂದಿರುವ ಪರಿಗೆ ಯಾರೂ ಬೆರಗಾಗಬೇಕು. ನಿತ್ಯದ ಬದುಕಿನಲ್ಲಿ ಕಥೆ ಹೇಗೆ ಹುಟ್ಟಬಲ್ಲದು, ಅದನ್ನು ಹೇಗೆ ಅಭಿವ್ಯಕ್ತಪಡಿಸಬೇಕು ಎಂಬ ಕಲೆಗಾರಿಕೆಯಲ್ಲಿ ಅವರು ಸೈ ಎನಿಸಿಕೊಂಡಿದ್ದಾರೆ. ಸಾಮಾನ್ಯ ಘಟನೆಯನ್ನು ಕಲಾತ್ಮಕವಾಗಿ ಕಾವ್ಯಾತ್ಮಕವಾಗಿ ಹೇಳಬಲ್ಲ ಡಾ. ನಿಂಜೂರರು ಯಶಸ್ವಿ ಕಥೆಗಾರರಾಗಿ ಇಲ್ಲಿ ಮಿಂಚಿದ್ದಾರೆ.

ನಗರ ಜೀವನದ ಸಂಕೀರ್ಣತೆಯನ್ನು ಸಮರ್ಥವಾಗಿ ಸೆರೆಹಿಡಿದ ಕೆಲವೇ ಕೆಲವು ಲೇಖಕರಲ್ಲಿ ಅವರ ಹೆಸರು ಮುಂಚೂಣಿಯಲ್ಲಿ ನಿಲ್ಲಬಲ್ಲದು ಎಂಬುದಕ್ಕೆ ಅವರ ಕತೆಗಳೇ ಸಾಕ್ಷಿ. “ಗರಡಿ ಮಜಲಿನ ಗಾಂಧಿ, ಲಗೋರಿ ಫಸ್ಕು, ಕಲೀಮುಲ್ಲ, ಸಣ್ಣಮ್ಮ, ದಬ್ಬೆಟ್ಟು ದಾಮೋದರ ಇಂಥ ಹತ್ತು ಹಲವು ಅಪ್ಪಟ ಜೀವಿಗಳನ್ನು ತನ್ಮಯತೆಯಿಂದ ಮಣ್ಣಿನ ಬೆರಳುಗಳಿಂದ ರೂಪಿಸಿರುವ ನಿಂಜೂರರ ಕಥೆಗಾರಿಕೆ ಕಳೆದ ನಾಲ್ಕು ದಶಕದಲ್ಲಿ ಬಂದು ಹೋದ ಕನ್ನಡದ ವಿವಿಧ ಸಾಹಿತ್ಯಕ ಚಟುವಟಿಕೆಗಳ ಮೇಲುಸ್ತರದ ಪ್ರಭಾವಗಳಿಗೆ, ಆಮಿಷಗಳಿಗೆ ಕಿಂಚಿತ್ತೂ ಬಲಿಯಾಗದೇ, ತನ್ನದೇ ಆದ ಗಟ್ಟಿ ನೋಟಕ್ಕೆ ಮುಕ್ತ ಜೀವನದರ್ಶನಕ್ಕೆ ಪಕ್ಕಾಗುತ್ತ ಬಂದ  ರೀತಿ ಹೃದ್ಯವಾಗಿದೆ” ಎಂದು ಜಯಂತ ಕಾಯ್ಕಿಣಿಯವರು  ಹಿನ್ನುಡಿಯಲ್ಲಿ ಹೇಳಿರುವ ಮಾತುಗಳಲ್ಲಿ ತಥ್ಯವಿದೆ.

ಡಾ. ನಿಂಜೂರ್ ಅವರು ನಿಜ ಅರ್ಥದಲ್ಲಿ ಮಾನವತಾವಾದಿ ಹಾಗೂ ಪ್ರಗತಿಗಾಮಿ ಚಿಂತಕ. `ಆಗಾಗ ಅನಿಸಿದ್ದು’

ಡಾ. ನಿಂಜೂರರ ಇತ್ತೀಚಿನ ಕೃತಿ. `ಗೋಕುಲವಾಣಿ’ ಮಾಸಿಕದಲ್ಲಿ ಅವರು ಬರೆದ ಸಂಪಾದಕೀಯ ಬರೆಹಗಳಿಂದ ಆಯ್ದವುಗಳು. ಅನಿಸಿದ್ದವುಗಳ ಅನಾವರಣ, ಸಂದರ್ಭಗಳಿಗೆ ಸ್ಪಂದನ, ನೆನಪುಗಳ ದಿಬ್ಬಣ ಎಂಬ ಮೂರು ತೆನೆಗಳು ಹಾಗೂ ೮೯ ಲೇಖನಗಳಿರುವ ಈ ಕೃತಿಯಲ್ಲಿ ಡಾ. ನಿಂಜೂರರ ಸ್ವೋಪಜ್ಞತೆ ಹಾಗೂ ಲೇಖನಶಕ್ತಿ ಬಹು ಸಮರ್ಥವಾಗಿ ಪಡಿಮೂಡಿದೆ. ಭಾರತೀಯ ಸಂಸ್ಕೃತಿ, ಜೀವನಾನುಭವ, ಪರಿಸರದ ಬಗೆಗಿನ ಕಾಳಜಿ, ಅಸ್ಮಿತೆಯ ಬಗೆಗಿನ ಎಚ್ಚರ, ಉದಾತ್ತ ಲೋಕದೃಷ್ಟಿ, ದೇಸಿ ಚಿಂತನೆ, ವೈಜ್ಞಾನಿಕ, ಮನೋವೈಜ್ಞಾನಿಕ ನಿಲುವುಗಳಿಂದ  ಕೂಡಿರುವ ಇಲ್ಲಿನ ಲೇಖನಗಳು ಅನೇಕ ದೃಷ್ಟಿಯಿಂದ ಮೌಲಿಕವಾಗಿವೆ.

ರಜನಿಕಾಂತ್ ಭೇಟಿ!!

ಯು.ಎಸ್., ಬ್ರಿಟನ್, ಫ್ರಾನ್ಸ್ ಅಲ್ಲದೆ ಶ್ರೀಲಂಕಾದ ಕೊಲಂಬೊಗೂ ಭೇಟಿ ನೀಡಿದ್ದೆ. ಇಲ್ಲಿ ನಾನು ತಂಗಿದ್ದ `ಹಾಲಿಡೇ ಇನ್’ ಹೊಟೇಲಿನಲ್ಲಿ ಯಾವುದೋ ತಮಿಳು ಸಿನೆಮಾದ ಶೂಟಿಂಗ್ ನಡೆಯುತ್ತಿತ್ತು. ರಜನಿಕಾಂತ್ ಶೂಟಿಂಗ್ ನಿರತರಾಗಿದ್ದರು. ಶಾಟ್‌ನ ನಡುವಿನ ಅವಧಿಯಲ್ಲಿ ಲಾಬ್ಬಿಯಲ್ಲಿ ನಾನು ಕುಳಿತ ಸೋಫಾದಲ್ಲೇ ಬಂದು ಕುಳಿತರು. ಸ್ವಲ್ಪ ಸಮಯದಲ್ಲಿ `ಇಂಡಿಯಾ?’- ಎಂದು ನನ್ನನ್ನು ಪ್ರಶ್ನಿಸಿದರು.

ಹೌದು ಎಂದು ಕನ್ನಡದಲ್ಲಿ ಉತ್ತರಿಸಿದ್ದೇ ತಡ ಕನ್ನಡದಲ್ಲಿ ಮಾತನಾಡಲಾರಂಭಿಸಿದರು. ಲಂಕೇಶರು ತಮ್ಮ ಪತ್ರಿಕೆಯಲ್ಲಿ ಏನೋ ಬರೆದುದಕ್ಕೆ ಬೇಸರಿಸಿಕೊಂಡರು. `ಶಾಟ್ ರೆಡಿ’ ಎಂದು ಅತ್ಯಂತ ಗೌರವದಿಂದ ಬಂದು ಹೇಳಿದವರಿಗೆ `ನನ್ನ ಊರಿನವರು ಇಲ್ಲಿದ್ದಾರಯ್ಯ- ಸ್ವಲ್ಪ ಮಾತಾಡಿ ಬರುತ್ತೇನೆ’ ಎಂದು ಮತ್ತಷ್ಟು ಮಾತನಾಡಿದರು.

ಅಣ್ಣಾವ್ರು, ಪಂಡರಿಬಾಯಿ ಹಾಗೂ ನನ್ನ  ಬಂಧುವಾದ ಖ್ಯಾತ ಕನ್ನಡ ಸಿನಿಮಾ ನಿರ್ದೇಶಕ ಆರೂರು ಪಟ್ಟಾಭಿಯವರ ಜೊತೆ ತಮಗಿರುವ ಪರಸ್ಪರ ಅನ್ಯೋನ್ಯತೆ ಸಂಬಂಧಗಳ ಕುರಿತೂ ಪ್ರಸ್ತಾಪಿಸಿದರು. ನಾನು ವಿಜ್ಞಾನಿ ಎಂದು ತಿಳಿದು, `ನಿಮ್ಮೊಂದಿಗೆ ಮಾತಾಡಿದ್ದು ನನ್ನ ಭಾಗ್ಯ’ ಎಂದರು. ತಮಿಳರ ಆರಾಧ್ಯ ದೈವವಾಗಿರುವ ರಜನೀಕಾಂತ್, ಕನ್ನಡದ ಬಗ್ಗೆ ತಾತ್ಸಾರ ಮನೋಭಾವ ಬೆಳೆಸಿಕೊಂಡವರು ಎಂದು ಆ ತನಕ ನಾನಿರಿಸಿಕೊಂಡಿದ್ದ ಕಲ್ಪನೆಯೆಲ್ಲ ಈ ಘಟನೆಯಿಂದ ಬುಡಮೇಲಾಯಿತು.

ಡಾ.ಜಿ.ಎನ್ ಉಪಾಧ್ಯ ಅವರು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥರಾಗಿ (2007 ರಿಂದ ) ಸೇವೆ ಸಲ್ಲಿಸುತ್ತಿದ್ದಾರೆ.ಮಹಾರಾಷ್ಟ್ರದ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಇವರ ಪಿಎಚ್ ಡಿ ಮಹಾಪ್ರಬಂಧ. ತಮ್ಮದೇ ಆದ ಅಭಿಜಿತ್ ಪ್ರಕಾಶನದ ಮೂಲಕ ಮುಂಬಯಿ ಪುಣೆಯ ನೂರಾರು ಲೇಖಕರ ಕೃತಿಗಳನ್ನು ಬೆಳಕಿಗೆ ತಂದವರು. ಹಲವು ಪ್ರಶಸ್ತಿ ಪುರಸ್ಕಾರಗಳು ಸಂದಿವೆ.

‍ಲೇಖಕರು Avadhi

October 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಗಳೆಗಳು ಬೇಕು..

ರಗಳೆಗಳು ಬೇಕು..

ಅನುಷ್ ಶೆಟ್ಟಿ ಯಾರೂ ಇರದ, ಯಾವ ಕೆಲಸವೂ ಇರದ, ಯಾವ ಜಂಜಾಟಗಳು, ರಗಳೆಗಳು, ಒತ್ತಡವೂ ಇರದ, ಸದ್ದಿರದ, ಏನೂ ಮಾಡದೆ ಎಲ್ಲರಿಂದ ದೂರವಿರುವ...

2 ಪ್ರತಿಕ್ರಿಯೆಗಳು

  1. ಕಲಾ ಭಾಗ್ವತ್

    ನಿಂಜೂರ ಅವರ ಕುರಿತಾದ ಅರ್ಥಪೂರ್ಣ ಲೇಖನ ಖುಷಿ ಕೊಟ್ಟಿತು.

    ಪ್ರತಿಕ್ರಿಯೆ
  2. ಲಲಿತಾ ಸಿದ್ಧಬಸವಯ್ಯ

    “ಕನ್ನಡ ಮುಂಬೈಕರ” ರ ಈ ಸಂಚಿಕೆ ಅದ್ಭುತವಾಗಿದೆ. ಡಾ.ನಿಂಜೂರರ ಬದುಕು ಮತ್ತು ಸಾಹಿತ್ಯದ ಬಗ್ಗೆ ನನಗೆ ತಿಳಿದಿದ್ದುದು ಅಲ್ಪ ಮಾತ್ರ. ಈ ಸಂದರ್ಶನದಿಂದ ಹೆಚ್ಚು ತಿಳಿದಂತಾಯ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: