ಮಕ್ಕಳನ್ನು ಸೆಳೆಯುವ ʼಬಾವಲಿ ಗುಹೆʼ

ಪ್ರೊ. ಮಾಲತಿ ಪಟ್ಟಣಶೆಟ್ಟಿ

“A childrens classic is not just love for child, it is simultaniously a story for child, an acknowledgment and welcoming of the  child” ಎಂಬ ಅಭಿಪ್ರಾಯದಂತೆ ‘ಬಾವಲಿ ಗುಹೆ’ ಕಾದಂಬರಿಯು ಮಕ್ಕಳಿಗಾಗಿಯೇ ಬರೆಯಲಾಗಿದ್ದು ಅವರ ಮನೋಧರ್ಮವನ್ನು ಉನ್ನತಿಯತ್ತ ಕೊಂಡೊಯ್ಯಲೋಸ್ಕರ ರಚಿಸಿದ್ದು ಮತ್ತು ಮಕ್ಕಳು ಏನನ್ನಾದರೂ ಸಾಧಿಸಬಲ್ಲರು ಎಂದು ತೋರಿಸುತ್ತ ಓದುಗರ ಮೆಚ್ಚುಗೆಗೆ ಪಾತ್ರವಾಗುವ ಕಥಾನಕವಾದ್ದರಿಂದ ಇದೊಂದು ಉತ್ತಮ ಕಾದಂಬರಿ ಎಂದು ನಾನು ಅಭಿಪ್ರಾಯ ಪಡುತ್ತೇನೆ.

ಪ್ರಸ್ತುತ ಕಾಲ ಸಂದರ್ಭದಲ್ಲಿ ಕೊರೋನಾದಂತಹ ಸಾಂಸರ್ಗಿಕ ಮಹಾಮಾರಿಯು ವಿಶ್ವವ್ಯಾಪಿಯಾಗಿ ಹಬ್ಬಿಕೊಂಡು ತಂದ ಸಾವು ನೋವುಗಳಿಗೆ ಮನುಷ್ಯನೇ ಕಾರಣವೆಂಬುದು ಸ್ಪಷ್ಟವಾಗಿ ತೋರುವಂತಹ ಸತ್ಯ ಸಂಗತಿ. ಜಗತ್ತಿನ ಜೀವ ಕುಲಕೋಟಿಯನ್ನು ಸಂರಕ್ಷಿಸುವ ಪ್ರಕೃತಿ ಪರಿಸರಗಳನ್ನು ಕಡೆಗಾಣಿಸಿ ತನ್ನ ಸ್ವಾರ್ಥ, ಧನದಾಹ, ಮತ್ಸರ, ಸ್ಪರ್ಧಾ ಮನೋಭಾವಗಳಿಂದ ತನಗೆ ತಾನೇ ತಂದುಕೊಂಡ ಅನಾಹುತಗಳಿವು! ಇಂತಹ ಪ್ರಮಾದಗಳನ್ನು ಖಂಡಿಸಲು ರಚಿಸಿದ ಕಾದಂಬರಿಯು ತನ್ನ ಎಚ್ಚರಿಕೆಯ ಬೆರಳನ್ನೆತ್ತಿದ್ದು ಕಾಕತಾಳೀಯವೆಂಬಂತೆ ಪ್ರಕೃತಿಯ ರಚನೆಗಳನ್ನು ನಾಶಗೊಳಿಸಲು ಬಂದ ಕಲ್ಲು ಗಣಿಗಾರಿಕೆಯೂ ಸಹ ಒಂದು ಘನವಾದ ಅಪರಾಧವೇ ಎಂದು ಕಾದಂಬರಿಕಾರರು ತೋರಿದ್ದಾರೆ ಎಂದು ನನಗೆನ್ನಿಸುತ್ತದೆ.

ತಮ್ಮಣ್ಣ ಬೀಗಾರ ತಮ್ಮ ಕಾದಂಬರಿಯನ್ನು ಅರ್ಪಿಸಿದ್ದು..
‘ಹಸಿರು ಪ್ರೀತಿಗೆ
ಹಸಿರು ನೀತಿಗೆ’

ಈ ಸಾಲುಗಳು ಕಾದಂಬರಿಯ ಅಂತರ್ಯದ ಧ್ವನಿಗೆ ಸಂವಾದಿಯಾಗಿ ಹೊರ ಹೊಮ್ಮಿದ ಲೇಖಕರ ಹೃದಯದ ತುಡಿತಗಳು! ಇಡೀ ಜನಸಂಕುಲಕ್ಕೆ ಉಸಿರು ಕೊಟ್ಟು, ಹಸಿರು ಕೊಟ್ಟು ಪಾಲಿಸುವ, ಪೋಷಿಸುವ ಪ್ರಕೃತಿ ಮಾತೃ ಸ್ವರೂಪಿ. ಅವಳನ್ನು ಪ್ರೀತಿಸುವುದು, ಆರಾಧಿಸುವುದು ಜನಜನೀಯ ಆತ್ಮವಾಂಛೆಯಾಗಬೇಕು. ಹಾಗೆಯೇ ತನ್ನನ್ನು ಕಾಪಾಡುವ ಪ್ರಕೃತಿಯನ್ನು ಸಂರಕ್ಷಿಸುವುದೂ ಸಹ ಮನುಷ್ಯನ ನೀತಿಧರ್ಮವಾಗಬೇಕೆಂಬುದೂ ಸರ್ವಸಮ್ಮತ.

ಪ್ರತಿಯೊಂದು ಕಥೆ ಕಾದಂಬರಿಯೂ ಉಸಿರಾಡುವುದು ಅದರ ಕತೃವು ಕಟ್ಟಿಕೊಡುವ ಪರಿಸರದಲ್ಲಿ. ತಮ್ಮಣ್ಣ ಬೀಗಾರರು ಹುಟ್ಟಿ ಬೆಳೆದದ್ದು, ಸೇವೆ ಸಲ್ಲಿಸಿದ್ದು ಉತ್ತರ ಕನ್ನಡದ ವಾತಾವರಣದಲ್ಲಿ. ಆದ್ದರಿಂದಲೇ ಕಾದಂಬರಿಯುದ್ದಕ್ಕೂ ಏಕತಾರಿಯಂತೆ ಮಿಡಿಯುವ ಗುಡ್ಡ ಪರ್ವತಗಳ ಸಹ್ಯ ಗಿರಿಯ ಕೂಗು… ತೆಂಗು ಕಂಗು ಬಾಳೆಯ ತೋಟಗಳ ಬಳುಕಾಟದ ರಾಗ… ನದಿ ತೊರೆ ಝರಿಗಳ ಜುಳು ಜುಳು ಸ್ವರಗಳು ಮತ್ತು ಇದನ್ನೆಲ್ಲ ಅನುಭವಿಸುತ್ತ ಹೊಮ್ಮಿದಂಥ ಉತ್ತರ ಕನ್ನಡದ ಭಾಷೆ, ಸಂಸ್ಕೃತಿ ಸಂಪ್ರದಾಯಗಳು, ಕಾದಂಬರಿಯಲ್ಲಿ ಹೊರಹೊಮ್ಮುವ ಸಂಭಾಷಣೆ, ಜೀವನ ಕ್ರಮಗಳೆಲ್ಲ ಉತ್ತರ ಕನ್ನಡವೇ.

ಇಲ್ಲಿ ಕಲ್ಲು ಗುಡ್ಡ ಇದ್ದಿದ್ದಕ್ಕೆ ಕಲ್ಲು ಗಣಿಗಾರಿಕೆ ಪ್ರಾರಂಭವಾಯಿತು. ಅದರ ಸುಗಮತೆಗಾಗಿ ಗುಡ್ಡದ ಮೇಲೆ ಹಾಗೂ ಊರಲ್ಲಿಯ ಮರಗಳ ಮಾರಣ ಹೋಮವಾದದ್ದು.. ಉತ್ತರ ಕನ್ನಡ ಕರಾವಳಿ ಮಲೆನಾಡುಗಳಿಂದ ಕೂಡಿದ್ದರಿಂದ ವರ್ಷವಿಡಿ ಆಗೀಗ ಸುರಿಯುವ ಮಳೆ! ಇಂಥ ಸತತ ಸುರಿಯುವ ಮಳೆಯಿಂದಾಗಿ ಗುಡ್ಡಗಳಿಂದ ಕೊಚ್ಚಿ ನಿರಾತಂಕವಾಗಿ ಹರಿಯುತ್ತ ದುಮ್ಮಿಕ್ಕಿದ ನೀರ ಸೆಳೆತವು ಸೋಮಜ್ಜಿಯ ಗುಡಿಸಲನ್ನು ಹೊಕ್ಕಿದ್ದು, ಗುಡ್ಡದಿಂದ ಬರಸೆಳೆದು ಹರಿದದ್ದು ನೀರಿನೊಂದಿಗಿನ ಕಲ್ಲು ಮಣ್ಣುಗಳು!! ಆದ್ದರಿಂದ ಈ ಕಾದಂಬರಿಯನ್ನು ಪರಿಸರ ಪ್ರಧಾನ ಕಾದಂಬರಿ ಎಂದೂ ಹೆಸರಿಸಬಹುದು.

ಪ್ಲೊಟ (Plot) ಅಥವಾ ಕಥಾಹಂದರ ಕೇಂದ್ರದಲ್ಲಿ ಶಾಲಾ ಮಕ್ಕಳ ಸಾಹಸದ ಕಥೆ ಇದೆ. ಮಗು ಸಹಜವಾದ ಕುತೂಹಲವೇ ಇಲ್ಲಿಯ ಶಾಲಾ ಮಕ್ಕಳನ್ನು ಕಾಡಿಗೆ, ಮೇಡಿಗೆ ಮತ್ತು ಹೊಸದಾಗಿ ಬಂದ ಜೆಸಿಬಿ ಯಂತ್ರ ಕಡೆಗೆ ಸೆಳೆಯುತ್ತದೆ. ಕಥೆಯ ಪ್ರಾರಂಭವೇ ಊರ ಜನರನ್ನು ಗಾಬರಿಗೊಳಿಸುವ ಕಲ್ಲು ಒಡೆಯುವಾಗ ಬಂದ ಢಂ ಢಂ ಸಪ್ಪಳದೊಂದಿಗೆ.

ಶಂಕರ, ಜಾನು, ಶಬಾನಾ, ರಿಕ್ಕು, ತೇಜ, ಶ್ವೇತ ಮೊದಲಾದ ಶಾಲಾ ಮಕ್ಕಳು ಶಾಲೆಬಿಟ್ಟು ಮನೆಗೆ ಸೇರಬೇಕಾದವರು ಗುಡ್ಡದ ಮೇಲೆ ಕುಳಿತ ರಾಕ್ಷಸ ಗಾತ್ರದ ಯಂತ್ರವನ್ನು ನೋಡಲು ಗಾಢವಾಗಿದ್ದ ಬೆರಗಿನಿಂದಾಗಿ ಹೋಗುತ್ತಾರೆ. ಗುಡ್ಡದಲ್ಲಿ ಕಲ್ಲು ಒಡೆಯಲು ಸ್ಫೋಟಕ ಬಳಸಿದಾಗ ಕಲ್ಲು ಸಿಡಿದು ದನಕಾಯುವ ಮಂಜನ ಕಾಲಿಗೆ ಗಾಯವಾಗುತ್ತದೆ, ಸೋಮಜ್ಜಿಯ ಗೌರಿ ಆಕಳ ಬೆನ್ನಿಗೂ ಗಾಯವಾಗುತ್ತದೆ.

ಊರ ಮುಂದಿನ ಆಲದ ಮರ ಉರುಳುತ್ತದೆ. ಯಂತ್ರಗಳು ಗುಡ್ಡದ ಮೇಲಿನ ಮರಗಳನ್ನು ತರಿದಾಗ ಪಕ್ಷಿ, ಪ್ರಾಣಿ ಮಂಗಗಳು ಗಾಬರಿಗೊಂಡು ಓಡಿ ಹೋಗುತ್ತವೆ. ಗುಡ್ಡದ ಮೇಲೆ ತಗಡಿನ ಮನೆಗಳಲ್ಲಿರುವ ಕೂಲಿಗಳಿಗಾಗಿ ಶರಾಬಿನ ಅಂಗಡಿ ಬಂದು ಊರ ಜನರನ್ನು ತಪ್ಪು ದಾರಿಗೆಳೆಯುತ್ತದೆ. ಭಾರಿ ಮಳೆಯು ತಂದ ಪ್ರವಾಹವು ಸೋಮಜ್ಜಿಯ ಗುಡಿಸಲನ್ನು ನೀರುಪಾಲು ಮಾಡುತ್ತಿರುವಾಗ ಮನೆಯಲ್ಲಿ ಕುಳಿತ ಅಜ್ಜಿಯನ್ನು ಮಕ್ಕಳು ಹಿರಿಯರ ಸಹಾಯದಿಂದ ಬದುಕಿಸುತ್ತಾರೆ. ಇಷ್ಟು ಅಧ್ವಾನಗಳು ಘಟಿಸಿದಾಗ ಊರ ಹಿರಿಯರಲ್ಲಿ ಪ್ರಸಿದ್ಧರಾದ ಶ್ಯಾಮಣ್ಣ, ನಿವೃತ್ತ ಶಿಕ್ಷಕರಾದ ಖಾಜಿ ಮಾಸ್ತರ ಚಳವಳಿಗಿಳಿಯುತ್ತಾರೆ.

ಊರ ಜನರಿಗೆ ಕರಪತ್ರ ಕೊಟ್ಟು ಪ್ರತಿಭಟನೆಗಾಗಿ ಆಹ್ವಾನಿಸುತ್ತಾರೆ. ಚಳುವಳಿಯ ಜನರ ಕೂಗುಗಳಿಂದಾಗಿ ಕಲ್ಲು ಗಣಿಗಾರಿಕೆ ನಡೆದ ಸ್ಥಳಕ್ಕೆ ಪೊಲೀಸರು ಬರುತ್ತಾರೆ.. ಅಲ್ಲಿ ನೆರೆದ ಮಕ್ಕಳನ್ನು ಹೆಡ್ ಪೋಲೀಸರು ಬೆದರಿಸಿ ಅಟ್ಟುತ್ತಾರೆ. ಮುಂದಾಳುಗಳ ಮನವಿಯನ್ನು ಸ್ವೀಕರಿಸಿದರೂ ಶ್ಯಾಮಣ್ಣ ಖಾಜಿ ಮಾಸ್ತರರಂಥಹ ಚಳುವಳಿಯ ಹಿರಿಯ ನಾಯಕರನ್ನು ಬಂಧಿಸಿ ಶಿಕ್ಷೆ ಕೊಟ್ಟು ಹದಿನೈದು ದಿನ ಕಾರಾಗೃಹದಲ್ಲಿ ಬಂಧಿಸಿಡುತ್ತಾರೆ.

ಅದೆಂಥಾ ಸರಕಾರವೆನ್ನಬೇಕು? ತಪ್ಪಿಸ್ಥರಾದ ಗಣಿಯ ದೊರೆಗಳನ್ನು ಶಿಕ್ಷಿಸದೆ ಊರಲ್ಲಿ ಘಟಿಸುತ್ತಿರುವ ಅನಾಹುತಗಳಿಂದ ರಕ್ಷಣೆ ಕೋರಿಬಂದ ಊರ ಪ್ರಮುಖರನ್ನು ಶಿಕ್ಷಿಸಿದ್ದು ಎಲ್ಲಿಯ ನ್ಯಾಯ? ನಮ್ಮ ಸರಕಾರಗಳು ಬಂಡವಾಳಶಾಹಿಗಳ ಅವ್ಯವಹಾರಗಳನ್ನು ಮಟ್ಟ ಹಾಕದೆ ಅತ್ಯಾಚಾರಕ್ಕೆ ಒಳಗಾದವರನ್ನು ಶಿಕ್ಷಿಸುತ್ತದೆ. ಇಲ್ಲಿ ನಡೆದದ್ದೂ ಅದೇ! ಕಲ್ಲು ಗಣಿಗಾರಿಕೆ ನಿಲ್ಲುವುದಿಲ್ಲ. ಜನರು ನೊಂದು ನಿರಾಶೆ ಹೊಂದುತ್ತಾರೆ.

ಆದರೆ ಮಕ್ಕಳು ಸುಮ್ಮನೆ ಕೂಡ್ರುತ್ತಾರೆಯೇ? ಗುಡ್ಡದ ಗುಹೆಯಲ್ಲಿ ಪುರಾತನ ಮೂರ್ತಿ ಇರಬಹುದೆಂಬ ಸುಳಿವನ್ನು ಹಿಡಿದು ಪತ್ತೆ ಹಚ್ಚಲು ಬ್ಯಾಟರಿ ಹಿಡಿದು ಯಾರೂ ಕಾಲಿಡದ ‘ಬಾವಲಿ ಗುಹೆ’ಯಲ್ಲಿ ತಾವು ತಂದ ಬ್ಯಾಟರಿಯಿಂದ ಲೈಟ್ ಬಿಟ್ಟಾಗ ಕಂಡದ್ದು ಬಾಹುಬಲಿಯ ಕಲ್ಲಿನ ಮೂರ್ತಿ! ಮಕ್ಕಳ ಈ ಶೋಧದಿಂದಾಗಿ ಸರಕಾರವು ಕಲ್ಲುಗಣಿಯ ಮಾಲಿಕರ ಹುನ್ನಾರವನ್ನು ಕೊನೆಗೆ ನಿಷೇಧಿಸಬೇಕಾಗುತ್ತದೆ ಎಂಬ ಆಶಯದೊಂದಿಗೆ ಕಾದಂಬರಿ ಮುಕ್ತಾಯಗೊಳ್ಳುತ್ತದೆ.

ಕಾದಂಬರಿಯ ಇನ್ನೊಂದು ಆಕರ್ಷಣೆ ಅಂದರೆ ಇಲ್ಲಿಯ ಸರಳವಾದ ಸಹಜವಾದ ನಿರೂಪಣಾ ಕ್ರಮ. ಉತ್ತರ ಕನ್ನಡದ ಪರಿಸರದ ಭಾಷೆಯಲ್ಲಿ ರೂಪುಗೊಂಡ ಸಂಭಾಷಣೆ, ವರ್ಣನೆ, ಕಥನ ಶೈಲಿಗಳು ಇಡೀ ಕಾದಂಬರಿಯನ್ನು ನಿರರ್ಗಳವಾಗಿ ಓದಿಸಿಕೊಂಡು ಹೋಗುತ್ತದೆ.

ಶ್ಯಾಮಣ್ಣ, ಖಾಜಿ ಮಾಸ್ತರರ ವ್ಯಕ್ತಿ ಚಿತ್ರಕ್ಕಿಂತಲೂ ಓದುಗರನ್ನು ಆಕರ್ಷಿಸುವ ಪಾತ್ರ ಚಿತ್ರಗಳೆಂದರೆ ಮಕ್ಕಳಾದ ಶಂಕರ ಮತ್ತು ಜಾನುವಿನದು. ಏಕೆಂದರೆ ಬಾಲ ಸಹಜವಾದ ನಡೆ ನುಡಿ, ಕುತೂಹಲ, ಬೆರಗು, ಭಯ ವಿಸ್ಮಯಗಳು ಮಕ್ಕಳ ಪಾತ್ರ ಚಿತ್ರಣದಲ್ಲಿವೆ… ಈ ಮಕ್ಕಳಲ್ಲಿರುವ ಗೆಳೆತನ, ಗೆಳೆತನದಲ್ಲಿರುವ ಭಿನ್ನಾಭಿಪ್ರಾಯಗಳಲ್ಲೂ ಮತ್ತೆ ಬಂಧಿಸುವ ಮುಗ್ಧ ಸ್ನೇಹಗಳು ಓದುಗರಿಗೆ ಮುದ ನೀಡುತ್ತವೆ.

ಇವರಿಗೆ ಸೋಮಜ್ಜಿ ಪ್ರಿಯಳಾಗಿರುವುದು ಏಕೆ? ಆಕೆ ಮತ್ತೆ ಮತ್ತೆ ಕೊಡುವ ತರತರದ ಹಣ್ಣುಗಳು, ಕರೆದು ಕೊಡುವ ಹಾಲು ಇರಬಹುದು.. ಅವರ ಮನೆಗಳಲ್ಲಿಲ್ಲದ ಅಜ್ಜಿಯನ್ನು ಸೋಮಜ್ಜಿಯಲ್ಲಿ ಕಂಡಿರುವುದರಿಂದಲೇ ಗುಡ್ಡದಿಂದಿಳಿದ ಪ್ರವಾಹದಲ್ಲಿ ಅವಳ ಮನೆಗೆ ನೀರು ನುಗ್ಗಿ ಅನಾಹುತವಾದಾಗ ಅಜ್ಜಿಯನ್ನು ರಕ್ಷಿಸಲು ಮಕ್ಕಳು ತಹತಹಿಸಿದ್ದು ಗಮನಾರ್ಹ! ಹಿರಿಯ ಪಾತ್ರ ಚಿತ್ರಣದಲ್ಲಿ ಸೋಮಜ್ಜಿ ಓದುಗರಿಗೆ ಮುದವಾಗುವುದು ಅವಳು ತೋರುವ ಮಕ್ಕಳ ಪ್ರೇಮದಿಂದಾಗಿ!

ಕಾದಂಬರಿಯ ಶೀರ್ಷಿಕೆಯನ್ನು ಗಮನಿಸಿದಾಗ ಇದು ಸಮರ್ಪಕವೆಂದು ತೋರುತ್ತದೆ. ಒಂದು ಕಾಲದ ಬಾಹುಬಲಿಯ ಮೂರ್ತಿ ಇದ್ದ ಗುಹೆ ಕಾಲಾಂತರದಲ್ಲಿ ನಿರ್ಲಕ್ಷಕ್ಕೆ ಒಳಗಾಗಿ ತೊಗಲು ಬಾವಲಿಗಳ ಗುಹೆಯಾಗಿ ಊರ ಜನರಿಗೆ ಅದು ಬಾವಲಿ ಗುಹೆಯಾಗಿರಬೇಕು. ಶಂಕರ ಮತ್ತು ಜಾನುರಂಥ ಸಾಹಸಿ ಮಕ್ಕಳ ಶೋಧದ ನಂತರ ಅದು ಬಾಹುಬಲಿ ಗುಹೆ ಆದದ್ದು ಮನಸ್ಸು ಒಪ್ಪಿಕೊಳ್ಳುವ ಸಂಗತಿ. ಇಡೀ ಕಾದಂಬರಿಯುದ್ದಕ್ಕೂ ನಡೆದ ಸಂಘರ್ಷಕ್ಕೆ ಮಂಗಳಾರತಿ ಹಾಡಿದ್ದು ಗುಹೆಯಲ್ಲಿನ ಬಾಹುಬಲಿ ಮೂರ್ತಿಯ ಶೋಧ. ಮಕ್ಕಳಿಗೆ ಅವರ ಶೋಧನಾ ಕಾರ್ಯಕ್ಕಾಗಿ ಸಿಕ್ಕ ಪ್ರಶಂಸೆಯು ಸಂತ್ರಪ್ತಿಯನ್ನು ತರುತ್ತದೆ. ಒಟ್ಟಾರೆ ಕಾದಂಬರಿ ಶೀರ್ಷಿಕೆ ಸಮರ್ಪಕವಾಗಿದೆ ಎನ್ನಬಹುದು.

ಅರವತ್ತು ಪುಟಗಳಲ್ಲಿ ವಿಸ್ತರಿಸಿಕೊಂಡ ಈ ಕಥೆಯು ದೊಡ್ಡವರಿಗೆ ನೀಳ್ಗತೆಯಾದರೂ ಇಲ್ಲಿ ದಾಖಲಾದ ಘಟನಾವಳಿಗಳಿಂದಾಗಿ ಮಕ್ಕಳಿಗೆ ಇದು ಕಾದಂಬರಿಯೇ. ಮಕ್ಕಳ ಕಾದಂಬರಿಯ ಗಾತ್ರದ ಬಗ್ಗೆ ಯಾವ ನೀತಿಗಳಿಲ್ಲ, ಕಟ್ಟಳೆಗಳೂ ಇಲ್ಲ. ಅದು ಬೀಜ ರೂಪದಲ್ಲಿರುವ ವೃಕ್ಷದಂತೆ ತನ್ನ ಬೆಳವಣಿಗೆಯನ್ನು ಸ್ವತಹ ತಾನೇ ನಿರ್ಧರಿಸುತ್ತದೆ. ಯಾವುದೊಂದು ಕಥೆಯಾಗಲಿ ಕಾದಂಬರಿಯಾಗಲಿ ಅದಕ್ಕೆ ಅದರದೇ ಆದ ಒಂದು ವೈಶಿಷ್ಟ್ಯವಿರುತ್ತದೆ. ಈ ಕಾದಂಬರಿಯ ವೈಶಿಷ್ಟ್ಯವು ನಾನು ಕಂಡುಕೊಂಡಂತೆ ಹಿರಿಯರಿಗೆ ಸಾಧ್ಯವಾಗದ ಪರಿಹಾರವನ್ನು ಮಕ್ಕಳು ಸಾಧಿಸಿದ್ದು! ಇದನ್ನೇ ಸಮರ್ಥಿಸುವ ಆಂಗ್ಲ ಕವಿ ವರ್ಡ್ಸ್ ವರ್ತನ ಜಗತ್ಪ್ರಸಿದ್ಧ ಕವಿತೆಯ ಈ ಸಾಲನ್ನು ನಾನಿಲ್ಲಿ ನೆನಪಿಸುತ್ತಿದ್ದೇನೆ. “Child is Father of a Man”. ಮಗುವೇ ಮಾನವನ ತಂದೆ ಎಂಬ ಉಕ್ತಿ ಮಕ್ಕಳಲ್ಲಿಯ ಹೃದಯವಂತಿಕೆ, ಬುದ್ಧಿವಂತಿಕೆಯನ್ನು ಎತ್ತಿ ಹಿಡಿಯುತ್ತದೆ.

‍ಲೇಖಕರು Avadhi

December 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಯಲು ಸೀಮೆಯ ʼಒಕ್ಕಲ ಒನಪುʼ

ಬಯಲು ಸೀಮೆಯ ʼಒಕ್ಕಲ ಒನಪುʼ

ಮಧುಸೂದನ ವೈ ಎನ್ ಈ ಪುಸ್ತಕ ಕೈಗೆ ಸಿಕ್ಕಿ ಒಂದೋ ಎರಡೋ ತಿಂಗಳಾಗಿರಬಹುದು. ಎರಡು ಹಗಲು ಎರಡು ಇನ್ನಿಂಗ್ಸ್‌ ಗಳಲ್ಲಿ ಖತಂ! ಓದಿದ ಎಷ್ಟೋ...

ಗಾಲಿಬನ ಮೇಲಿನ ಪ್ರೀತಿಗಾಗಿ..

ಗಾಲಿಬನ ಮೇಲಿನ ಪ್ರೀತಿಗಾಗಿ..

ವಿರಹ, ವಿಯೋಗ, ವಿದ್ರೋಹ, ಪ್ರೇಮ, ವ್ಯಾಮೋಹ, ವಿಷಣ್ಣತೆ, ತೀವ್ರ ತೊಳಲಾಟ, ಹೂ ಪುಳಕ, ಬದುಕಿನ ಚೆಲುವುಗಳನ್ನು ಗಜಲುಗಳ ಮೂಲಕ ಕಟ್ಟಿ ಕೊಟ್ಟ...

೧ ಪ್ರತಿಕ್ರಿಯೆ

  1. ತಮ್ಮಣ್ಣ ಬೀಗಾರ

    ಕಾದಂಬರಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ವಿಸೃತವಾಗಿ ಬರೆದಿದ್ದೀರಿ. ಮಕ್ಕಳಿಗಾಗಿ ಮತ್ತಷ್ಟು ತೋಡಗಿಕೊಳ್ಳಲು ಉತ್ತೇಜಿಸುವಂತಿದೆ. ತಮಗೆ ಆತ್ಮೀಯ ವಂದನೆಗಳು ಮೇಡಮ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: