‌ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು

ಪ್ರಸನ್ನ ಸಂತೇಕಡೂರು

ನಟರಾಜ್ ಹುಳಿಯಾರ್ ಎಂಬ ಲೇಖಕರ ಹೆಸರನ್ನು ನಾನು ಮೊದಲು ಕೇಳಿದ್ದು ೧೯೯೬ರಲ್ಲಿ ಲಂಕೇಶ್ ಪತ್ರಿಕೆ ಓದುವಾಗ ಎಂದು ಹೇಳಬಹುದು. ಈ ಹಿಂದೆ ನಾನು ಹೇಳಿದ ಹಾಗೆ ಶೂದ್ರ ಶ್ರೀನಿವಾಸ್, ಅಗ್ರಹಾರ ಕೃಷ್ಣಮೂರ್ತಿ, ನಟರಾಜ್ ಹುಳಿಯಾರ್, ರಹಮತ್ ತರೀಕೆರೆ, ಮೊಗಳ್ಳಿ ಗಣೇಶ್ ಎಂಬ ಹೆಸರುಗಳು ನನಗೆ ಪರಿಚಯವಾಗಿದ್ದು ಲಂಕೇಶ್ ಪತ್ರಿಕೆಯ ಮೂಲಕವೇ. ಲಂಕೇಶರ ಸಾವಿನ ನಂತರ ಬಹಳಷ್ಟು ಲೇಖಕರ ಹೆಸರುಗಳು ಅದೇಕೋ ತೆರೆಮರೆಗೆ ಸರಿದಿದ್ದವು ಎಂದು ಅನಿಸುತ್ತದೆ. ಅದಕ್ಕೆ ಮುಖ್ಯ ಕಾರಣ ಆರ್.ಎಸ್.ಎಸ್ ಮತ್ತು ಸಂಘ ಪರಿವಾರಗಳ ಕಪಿಮುಷ್ಟಿಗೆ ಪತ್ರಿಕೆಗಳು ಮತ್ತು ಟಿವಿ ಮಾಧ್ಯಮಗಳು ಸಿಕ್ಕಿದ್ದು ಎಂದು ಒಂದು ಕಡೆ ಊಹಿಸಬಹುದಾದರೂ ಇನ್ನೊಂದು ಕಡೆ ಬಿಜೆಪಿ ಪ್ರವರ್ಧಮಾನಕ್ಕೆ ಬಂದದ್ದು ಎಂದು ಹೇಳಬಹುದು. ಅದುವರೆಗೂ ಕಾಂಗ್ರೆಸ್ ಮತ್ತು ಎಡಪಂಥೀಯರ ಕೈಯಲ್ಲಿದ್ದ ಮಾಧ್ಯಮಗಳು ಈಗ ಬಲಪಂಥೀಯರ ಕೈ ಸೇರಿದ್ದು ಇರಬಹುದು.

ಲಂಕೇಶರು ತಾತ್ವಿಕವಾಗಿ ಆರ್.ಎಸ್.ಎಸ್ ಮತ್ತು ಸಂಘ ಪರಿವಾರಗಳನ್ನು ನೇರವಾಗಿ ವಿರೋಧಿಸುತ್ತಿದ್ದರಿಂದ ಲಂಕೇಶ್ ಪತ್ರಿಕೆಯಲ್ಲಿ ಬರೆಯುತ್ತಿದ್ದ ಬಹಳಷ್ಟು ಲೇಖಕರಿಗೆ ಹಿನ್ನಡೆಯಾಗಲು ಕಾರಣವಾಯಿತು ಎಂದು ಊಹಿಸಬಹುದು ಕೂಡ. ಇನ್ನು ಲಂಕೇಶ್ ಪತ್ರಿಕೆಯಲ್ಲಿ ಬರೆಯುತ್ತಿದ್ದಾಗ ಸಮಾಜವಾದಿಗಳು, ಮಾರ್ಕ್ಸ್ ವಾದಿಗಳ ತರಹ ಇದ್ದ ಕೆಲವು ಕವಿಗಳು ಲಂಕೇಶರ ನಿರ್ಗಮನದ ನಂತರ ರಾಜಕೀಯ ವ್ಯಕ್ತಿಗಳ ರೀತಿ ವೈಯುಕ್ತಿಕ ಲಾಭಕ್ಕಾಗಿ ಹಿಂಬಾಗಿಲ ಮೂಲಕ ಆರ್.ಎಸ್.ಎಸ್ ಮತ್ತು ಸಂಘ ಪರಿವಾರಗಳಿಗೂ ಹತ್ತಿರವಾಗಿ ಅಲ್ಲಿಯೂ ಸಲ್ಲಲು ಆರಂಭಿಸಿದರು ಎಂದು ಕೂಡ ಕಾಣುತ್ತದೆ.

ಇನ್ನು ಸಾಮಾನ್ಯ ಓದುಗನೊಬ್ಬ ಯಾವುದೇ ಪಂಥ ಬೇಧವಿಲ್ಲದೆ ಒಳ್ಳೆಯ ಸಾಹಿತ್ಯವನ್ನು ಯಾರೇ ಬರೆದರೂ ಓದುತ್ತೇವೆ ಎಂದು ಓದಿದಾಗ ಅವನಿಗೆ ಲಾಭವೇ ಹೆಚ್ಚು ಎಂದು ಅನಿಸಬಹುದು. ಈ ಲೇಖಕ ಎಡವೋ ಬಲವೋ ಎಂದು ತಲೆಕೆಡಿಸಿಕೊಳ್ಳದೆ ಓದಿದಾಗ ಅವನ ಅರಿವಿಗೆ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂದು ಹೊಳೆಯಬಹುದು. “ತನ್ನ ಅರಿವೇ ತನಗೆ ಗುರು” ಎಂದು ಅರಿವು ತೋರಿಸಿದ ಸಾಹಿತ್ಯವನ್ನು ಓದಬಹುದು.  

ಕೆಲವು ವರ್ಷಗಳ ಹಿಂದೆ ನಟರಾಜ್ ಹುಳಿಯಾರರ “ಮಾಯಾಕಿನ್ನರಿ” ಎಂಬ ಅದ್ಭುತ ಕತೆಯನ್ನು ಓದಿದ ಮೇಲೆ ಇವರ ಇತರ ಕತೆಗಳನ್ನು ಓದಲೇ ಬೇಕು ಎಂಬ ಭಾವ ಮೂಡಿತು. ಆಗ ನಾನು ಅಮೆರಿಕಾದಲ್ಲಿದ್ದರಿಂದ ತಕ್ಷಣವೇ ಇವರ ಕತೆಗಳು ನನಗೆ ಸಿಗಲಿಲ್ಲ. ಮಾಯಾಕಿನ್ನರಿ ಕತೆಯನ್ನೇ ಮತ್ತೇ ಮತ್ತೇ ಓದಿದ ಮೇಲೆ ಈ ಕತೆ ಕನ್ನಡದ ಶ್ರೇಷ್ಠ ಕತೆಗಳ ಸಾಲಿಗೆ ಖಂಡಿತ ಸೇರಿಸಬಹುದು ಎಂದು ಅನಿಸಿತು.  

ಇನ್ನು “ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು” ಎಂಬ ಈ ಕಥಾಸಂಕಲನದ ಬಗ್ಗೆ ಹೇಳುವುದಾದರೆ ಇದೊಂದು ತುಂಬಾ ಒಳ್ಳೆಯ ಕಥಾಸಂಕಲನ. ಇಲ್ಲಿ ಎಂಟು ಕತೆಗಳಿವೆ. ಅವು ಕೆಳಗಿನಂತಿವೆ. ಈ ಕಥಾಸಂಕಲನದ ಬಗ್ಗೆ ನಾಡಿನ ಪ್ರಮುಖ ವಿಮರ್ಶಕರುಗಳಾದ ಟಿ.ಪಿ. ಅಶೋಕ, ಓ.ಎಲ್.ನಾಗಭೂಷಣ ಸ್ವಾಮಿ, ಕೃಷ್ಣಮೂರ್ತಿ ಹನೂರು, ಯು.ಆರ್. ಅನಂತಮೂರ್ತಿ, ಎಚ್, ನಾಗವೇಣಿಯವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇದ್ದು ಪಲ್ಲವ ಪ್ರಕಾಶನದಿಂದ ಮೂರನೇ ಮುದ್ರಣ ಕಂಡಿದೆ.

ಈ ಕತೆಗಳ ಒಂದು ನ್ಯೂನ್ಯತೆ ಎಂದು ಹೇಳುವುದಾದರೆ ಇವು ವಾಸ್ತವದಲ್ಲಿ ಬದುಕಿದ್ದ ರಾಜಕೀಯ ವ್ಯಕ್ತಿಗಳ ಅಥವಾ ಸಾಹಿತಗಳ ಕತೆಯೇ ಎಂದು ನೇರವಾಗಿ ಗೊತ್ತಾಗುವುದರಿಂದ ಅಲ್ಲಿನ ಪಾತ್ರಗಳು ಅವರ ಹಿಂಬಾಲಕರೋ ಅಥವಾ ಅವರ ಮನೆಯವರೋ ಜಗಳಕ್ಕೆ ಬಂದರು ಬರಬಹುದು. ಕಾರಣವನ್ನು ಆ ಕತೆಯಲ್ಲಿಯೇ ಹೇಳುತ್ತೇನೆ.

೧. ಕೋಟೆಮನೆಯ ಪಾಠಗಳು  

ಕೋಟೆಮನೆಯ ಪಾಠಗಳು ಒಂದು ಅಸಂಬದ್ಧ (absurdism) ಸಾಹಿತ್ಯಕ್ಕೆ ಸೇರುವ ಕತೆ. ಇಲ್ಲಿನ ಕಥಾನಾಯಕಿ ಡ್ಯಾನ್ಸರ್ ಮತ್ತು ಪೈಂಟರ್. ಅವಳು ರಾಜಕೀಯ ನಾಯಕರಾದ ಸದಾಶಿವನಾಯಕರ ಗೆಳತಿ.  ಸದಾಶಿವನಾಯಕರು ಹಿಂದೆ ಮುಖ್ಯಮಂತ್ರಿಯಾಗಿದ್ದವರು. ಅವರು ಚಿತ್ರದುರ್ಗದ ನಾಯಕರ ವಂಶದವರು. ಅಲ್ಲಿ ಅವರಿಗೆ ಪರಂಪರಾಗತವಾಗಿ ಬಂದ ಕೋಟೆಯಂತಹ ಅರಮನೆಯಿದೆ. ಸದಾಶಿವನಾಯಕರು ತಮ್ಮ ಡ್ಯಾನ್ಸರ್ ಗೆಳತಿಯನ್ನು ಆ ಕೋಟೆಯಂತಹ ಅರಮೆಯಲ್ಲಿಟ್ಟಿದ್ದಾರೆ. ಅದೊಂದು ಧರ್ಮಛತ್ರದ ತರಹ ಇರುವ ಮನೆ. ಅಲ್ಲಿ ಯಾರು ಬರುತ್ತಾರೆ, ಯಾರು ಹೋಗುತ್ತಾರೆ. ಯಾರು ಯಾರಿಗೆ ಹೇಗೆ ಸಂಬಂಧ ಏನು ತಿಳಿಯುವುದಿಲ್ಲ. ಕಥಾನಾಯಕಿ ಡ್ಯಾನ್ಸರ್ ಭಾನು, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆಯವರ ಅಂತರಂಗದ ಪ್ರೇಯಸಿ ಪ್ರತಿಭಾ ಪ್ರಹ್ಲಾದ್ ಅವರನ್ನು ಜ್ಞಾಪಿಸುತ್ತಾರೆ. ಹೆಗಡೆಯವರಿಗಿಂತ ಎಷ್ಟೋ ವರ್ಷ ಚಿಕ್ಕವರಾಗಿದ್ದ ಪ್ರತಿಭಾರಂತೆ ಭಾನು ಕೂಡ ಚಿಕ್ಕ ಯುವಕಿಯಾಗಿ ಕಾಣುತ್ತಾರೆ.

ಸದಾಶಿವನಾಯಕರು ರಾಮಕೃಷ್ಣ ಹೆಗಡೆಯವರ ರೀತಿಯೇ ಕಾಣುತ್ತಾರೆ. ಆ ಕಾಲದ ರಾಜಕೀಯ ಚರಿತ್ರೆ ಗೊತ್ತಿದ್ದವರಿಗೆ ಚೆನ್ನಾಗಿ ತಿಳಿದ ಹಾಗೆ ಚಿತ್ರದುರ್ಗದ ಪ್ರಸಿದ್ಧ ರಾಜಕಾರಣಿ ಕರ್ನಾಟಕದ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಸಿದ್ಧವನಹಳ್ಳಿ ನಿಜಲಿಂಗಪ್ಪನವರ ಶಿಷ್ಯರಾಗಿದ್ದವರು ರಾಮಕೃಷ್ಣ ಹೆಗಡೆಯವರು. ಈ ರಾಜಕೀಯ ಇತಿಹಾಸವನ್ನು ಬಿಟ್ಟು ನೋಡಿದರೆ ಈ ಕತೆಯ ನಾಯಕಿಗೆ ಇತಿಹಾಸಕಾರನೊಬ್ಬ ಆತ್ಮಚರಿತ್ರೆ ಬರೆಯಲು ಹೇಳುತ್ತಾನೆ. ಕಥನಾಯಕಿ ಕೊನೆಗೆ ತನ್ನ ಆತ್ಮ ಚರಿತ್ರೆ ಬರೆದರೆ ಅದು ಸದಾಶಿವನಾಯಕನ ಆತ್ಮಚರಿತ್ರೆಯೇ ಆಗುವುದನ್ನು ಕಂಡುಕೊಳ್ಳುತ್ತಾಳೆ. ಈ ಕತೆ ಸಂಕೀರ್ಣ ಸಂಬಂಧಗಳನ್ನು ಅನಾವರಣ ಮಾಡುತ್ತದೆ.  

೨. ಬಸವಲಿಂಗಪ್ಪನವರು ಮತ್ತು ಡೇವಿಡ್ ಸಾಹೇಬರು

ಇದೊಂದು ಅದ್ಭುತ ಕತೆ. ಇಲ್ಲಿ ದಲಿತ ಪೀವನ್ ಒಬ್ಬ ಹೇಗೆ ಕರ್ನಾಟಕದ ಪ್ರಸಿದ್ಧ ರಾಜಕಾರಣಿ ಮತ್ತು ಕನ್ನಡದ ಕೆಲವರ ಸಾಹಿತ್ಯವನ್ನು ಬೂಸಾ ಸಾಹಿತ್ಯ ಎಂದು ಕರೆದಿದ್ದ ಮತ್ತು ದಲಿತರಲ್ಲಿ ಸ್ವಾಭಿಮಾನದ ಕಿಚ್ಚನ್ನು ಹಚ್ಚಿದ್ದ ಬಸವಲಿಂಗಪ್ಪನವರ ಪ್ರಭಾವದಿಂದ ಮತ್ತು ತಮ್ಮ ಕಚೇರಿಯ ಮುಖ್ಯ ಅಧಿಕಾರಿಗಳಾದ ಡೇವಿಡ್ ಸಾಹೇಬರಿಂದ ಹೇಗೆ ತನ್ನ ಸ್ವಾಭಿಮಾನವನ್ನು ಹೆಚ್ಚಿಸಿಕೊಂಡ ಎಂದು ತೋರಿಸುತ್ತದೆ. ಇದು ಜಾತೀಯತೆಯ ವಿಷವೃಕ್ಷಕ್ಕೆ ಸಿಕ್ಕಿ ನರಳಿದ್ದ ವ್ಯಕ್ತಿಯೊಬ್ಬನ ಬದುಕಿನಲ್ಲಿ ಆಗುವ ಬದಲಾವಣೆಯನ್ನು ಚೆನ್ನಾಗಿ ತೋರಿಸುತ್ತದೆ. ಈ ಕತೆಗೆ ಮಯೂರ ಮಾಸ ಪತ್ರಿಕೆಯ ವರ್ಷದ ಉತ್ತಮ ಕತೆ ಪ್ರಶಸ್ತಿಯೂ ಸಿಕ್ಕಿದೆ.

೩. ಹೊಸಮನೆ ದೇವರು

ಹೊಸಮನೆ ದೇವರು ಕೂಡ ಭ್ರಷ್ಟ ವ್ಯವಸ್ಥೆಯೊಳಗೆ ಸಿಕ್ಕಿ ಚೆನ್ನಾಗಿ ಹಣ ಸಂಪಾದಿಸಿದ ವ್ಯಕ್ತಿಯೊಬ್ಬ ಒಂದು ಬೃಹತ್ ಮನೆಯನ್ನು ಕಟ್ಟಿಸಿ ಅದರ ಗೃಹ ಪ್ರವೇಶ ಮಾಡಲು ಯತ್ನಿಸುತ್ತಿರುವಾಗ ಅವನ ಮನೆಯ ಮುಂದೆಯೇ ತಮಿಳು ಜನರ ಸ್ಲಮ್ ಒಂದು ಪ್ರತ್ಯಕ್ಷವಾಗುತ್ತದೆ. ಅಂದರೆ ತಮಿಳು ಜನರ ಕೊಳಚೆ ಪ್ರದೇಶವೊಂದು ಇವನ ಮನೆಯ ಮುಂದೆಯೇ ನಿರ್ಮಾಣವಾಗುತ್ತದೆ. ಆ ಕೊಳಚೆ ಪ್ರದೇಶದ ಮಹಿಳೆಯರು ಮುಂಜಾನೆ ಇವನ ಮನೆಯ ಮುಂದಿನ ದೊಡ್ಡ ಮೋರಿಯ ಪಕ್ಕದಲ್ಲಿಯೇ ಮಲ ಮೂತ್ರ ವಿಸರ್ಜನೆಗೆ ಕೂರುತ್ತಾರೆ. ಅದು ಇವನಿಗೂ ಇವನ ಹೆಂಡತಿಗೂ ಅಸಹ್ಯ ಎಂಬ ಭಾವ ಮೂಡಿಸಿ ಆ ಕೊಳಚೆ ಪ್ರದೇಶದ ಜನರನ್ನೆಲ್ಲಾ ಅಲ್ಲಿಂದ ಎತ್ತಂಗಡಿ ಮಾಡಿಸಲು ಭಗೀರಥ ಪ್ರಯತ್ನ ಮಾಡುತ್ತಾನೆ. ಆ ಜನರನ್ನು ಭಾರತದಲ್ಲಿನ ಭ್ರಷ್ಟ ವ್ಯವಸ್ಥೆಯ ಸಹವಾಸವೇ ಬೇಡ ಎಂದು ಅಮೆರಿಕಾಕ್ಕೆ ಹೋಗಲು ಪ್ರಯತ್ನಿಸುತ್ತಾನೆ. ಅಲ್ಲಿ ಸೋಲುತ್ತಾನೆ. ಇಷ್ಟೆಲ್ಲಾ ಆಗಿ ಕೊನೆಗೆ ಆ ವ್ಯಕ್ತಿಗೆ ಕೊಳಚೆ ಪ್ರದೇಶವೇ ಅಸಹ್ಯವಾಗುತ್ತದೆ. ಅದೇ ಕತೆಯ ರಹಸ್ಯ.

೪. ದಾದಾ ಕ ಪಹಾಡ್

ದಾದಾ ಕ ಪಹಾಡ್ ಅಂದರೆ ಬಾಬಾಬುಡನ್ ಗಿರಿ. ಆ ಬಾಬಾಬುಡನ್ ಗಿರಿಯಿಂದ ಗಿಡ ಮೂಲಿಕೆಗಳನ್ನು ಕಿತ್ತು ತಂದು ಅದರಿಂದ ಔಷಧಗಳನ್ನು ಮಾಡಿ ಮಾರುತ್ತಿದ್ದ ಮುಸ್ಲಿಮ್ ವ್ಯಕ್ತಿಯೊಬ್ಬನಿಗೆ ಅವನ ಹಳ್ಳಿಯ ಪ್ರಗತಿಪರ ಯುವಕರೆಲ್ಲ ಸೇರಿಕೊಂಡು ಇವನು ಕಣ್ಣುಕಟ್ಟು ವಿದ್ಯೆ ಮಾಡುತ್ತಾನೆ. ಜನರಿಗೆ ಯಾವುದು ಯಾವುದು ಕೆಟ್ಟ ಔಷಧಿಗಳನ್ನು ಕೊಡುತ್ತಾನೆ ಎಂದು ಭಾವಿಸಿ ಆ ಊರಿಗೆ ಆಸ್ಪತ್ರೆ ಬರುವಂತೆ ಮಾಡಿ ಅವನಿಗೆ ಬರುತ್ತಿದ್ದ ಆಧಾಯದ ಮೂಲವನ್ನು ನಿಲ್ಲಿಸುತ್ತಾರೆ. ಆ ಮುಸ್ಲಿಮ್ ವ್ಯಕ್ತಿ ಆಧಾಯ ಇಲ್ಲದ ಆ ಊರನ್ನು ಬಿಟ್ಟು ಬೇರೆಲ್ಲೋ ಹೋಗುತ್ತಾನೆ. ಈ ಕತೆಯ ನಾಯಕ ಓದಿ ಮನೋವೈದ್ಯನಾಗಿ ಬೆಂಗಳೂರು ಸೇರುತ್ತಾನೆ. ಕೊನೆಗೆ ಕಥಾನಾಯಕನ ಬದುಕಿನಲ್ಲಿ ಏನೇನೋ ಆಗಿ ತಾನೊಬ್ಬ ವ್ಯಾಪಾರಿಯಾಗುತ್ತಾನೆ. ಒಂದು ದಿನ ಆ ಮುಸ್ಲಿಂ ವ್ಯಕ್ತಿಯನ್ನು ಆಕಸ್ಮಿಕವಾಗಿ ಭೇಟಿಯಾದಾಗ ಅದು ಕತೆಯಲ್ಲಿ ಮಹತ್ತರವಾದ ತಿರುವಾಗುತ್ತದೆ. ಅಲ್ಲೊಂದು ಅದ್ಭುತ ಮಾನವೀಯ ಪ್ರಪಂಚ ತೆರೆದುಕೊಳ್ಳುತ್ತದೆ.

೫. ಜ್ಞಾಪೀಠದ ಹಾದಿಯಲ್ಲಿ

ಜ್ಞಾಪೀಠದ ಹಾದಿಯಲ್ಲಿ ಕತೆ ಕನ್ನಡದ ಜ್ಞಾನಪೀಠ ಸಾಹಿತಿಯೊಬ್ಬರ ಚರಿತ್ರೆಯ ರೀತಿಯೇ ಕಾಣುತ್ತದೆ. ಇಲ್ಲಿ ಸಾಹಿತಿಯೊಬ್ಬರಿಗೆ ಜ್ಞಾನಪೀಠ ಸಿಗುತ್ತದೆ ಎಂದು ತಿಳಿದಾಗ ಸಂದರ್ಶನಕ್ಕೆ ಬರುವ ಹುಡುಗ ಮತ್ತು ಸಾಹಿತಿಯ ನಡುವೆ ನಡೆವ ಸಂಭಾಷಣೆಯ ರೀತಿ ಕಂಡರೂ ಇಲ್ಲಿ ಸಾಹಿತಿಯೊಬ್ಬನ ನುಡಿಗೂ ನಡೆಗೂ ಬದಲಾವಣೆಯಾದರೆ ಏನಾಗುತ್ತದೆ ಎಂಬ ಜಿಜ್ಞಾಸೆ ಹುಟ್ಟಿಸುತ್ತದೆ. ಸಾಹಿತಿಯ ಬರವಣಿಗೆಯಲ್ಲಿ ಏನನ್ನು ಬರೆಯಬೇಕು ಏನನ್ನು ಬರೆಯಬಾರದು ಎಂಬ ವಾದ ತರ್ಕಕ್ಕೆ ನಿಲುಕದ್ದು. ಆದರೆ ಓದುಗನಿಗೆ ಸಾಹಿತಿ ಬರೆದದ್ದು ಅರ್ಥವಾಗದೆ ಅವನು ಬರೆದ ಯಾವ ಕೃತಿಯೂ ಓದುಗನ ನೆನಪಿನಲ್ಲಿ ನಿಲ್ಲದಿದ್ದರೆ ಆ ಸಾಹಿತ್ಯಕ್ಕೆ ಬೆಲೆ ಇರುವುದಿಲ್ಲ. ಆಗ ಸಾಹಿತಿಗೆ ಜ್ಞಾನಪೀಠವನ್ನು ಪಡೆಯಬೇಕೋ ಅಥವಾ ತಿರಸ್ಕರಿಸಬೇಕೋ ಎಂಬ ಜಿಜ್ಞಾಸೆ ಮೂಡಿ ಅವನನ್ನು ಕಾಡುತ್ತದೆ. ಇದು ಇಂದಿನ ಎಷ್ಟೋ ಲೇಖಕರ ಸಾಹಿತ್ಯದ ಚರಿತ್ರೆಯು ಆಗಿ ಕಾಣುತ್ತದೆ.  

೬.  ಫಾಲ್ಸ್ ಸರ್ಟಿಫಿಕೇಟ್

ಭಾರತದಲ್ಲಿ ಜಾತಿಗಳಿಂದ ಏನೆಲ್ಲಾ ಆಗುತ್ತವೆ ಎಂದು ಪ್ರತಿನಿತ್ಯ ನೋಡುತ್ತಿರುತ್ತೇವೆ. ಅದರಲ್ಲೂ ಶಾಲಾ ಕಾಲೇಜುಗಳಲ್ಲಿ ಮತ್ತು ಕಚೇರಿಗಳಲ್ಲಿ ಎಷ್ಟೋ ಜನರನ್ನು ಅವರ ಜಾತಿಗಳಿಂದ ಅಳೆದು ಹಿಯ್ಯಾಳಿಸುತ್ತರಿವುದನ್ನು ನೋಡಿರುತ್ತೇವೆ. ಇಲ್ಲೊಬ್ಬನ ಹೆಸರು ರಾಘವೇಂದ್ರ ಮೂರ್ತಿ ಆದರೆ ಅವನು ಜಾತಿಯಲ್ಲಿ ದಲಿತ. ತನ್ನ ಮಕ್ಕಳಿಗೂ ಆ ಜಾತಿಯ ಸುಳಿಯಿಂದ ತಪ್ಪಿಸಲು ಜಾತಿ ಸರ್ಟಿಫಿಕೇಟ್ ಕಾಲಮ್ಮನ್ನು ಹಾಗೆಯೇ ಬೀಡಲು ನೋಡುತ್ತಾನೆ. ಆಗ ಅದರಿಂದ ಏನೇನೋ ಆಗುತ್ತದೆ. ಕೊನೆಗೆ ಈ ಎಲ್ಲಾ ಜಂಜಾಟಗಳಿಗೆ ತೆರೆ ಎಳೆಯುವ ಹಾಗೆ ತನ್ನ ಕುಟುಂಬ ಸಮೇತ ಬೌದ್ಧ ಧರ್ಮಕ್ಕೆ ಮತಾಂತರರವಾಗುತ್ತಾನೆ. ಅಲ್ಲಿ ಅವನ ಸಮಸ್ಯೆಗಳಿಗೆಲ್ಲಾ ಮುಕ್ತಿ ಸಿಗುತ್ತದೆ. ಇದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಹಿಂದೂ ಧರ್ಮವನ್ನು ಬಿಟ್ಟು ಏಕೆ ಬೌದ್ಧ ಧರ್ಮವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಎತ್ತಿ ತೋರಿಸುವ ಕತೆ.  

೭.  ಆರ್ಟ್ ಆಫ್ ಲೈಯಿಂಗ್

ಇದು ಆಧುನಿಕತೆ ಅದರಲ್ಲೂ ಮೊಬೈಲ್ ಫೋನ್ ಬಂದ ಮೇಲೆ ಮನುಷ್ಯ ಹೇಗೆ ಸುಳ್ಳು ಹೇಳುವುದನ್ನು ಹೆಚ್ಚು ಕರಗತ ಮಾಡಿಕೊಂಡಿದ್ದಾನೆ ಎಂದು ಮಾರ್ಮಿಕವಾಗಿ ತೋರಿಸುವ ಕತೆ. ಪ್ರತಿನಿತ್ಯ ಎಷ್ಟೋ ಸಂಬಂಧಗಳು ಮತ್ತು ವ್ಯವಹಾರಗಳು ಹೇಗೆ ಸುಳ್ಳಿನ ಮೇಲೆಯೇ ನಡೆಯುತ್ತಿವೆ ಎಂದು ಈ ಕತೆ ಚೆನ್ನಾಗಿ ತೋರಿಸುತ್ತದೆ.  

೮. ಸರಸ್ವತಿ ಸನ್ನಿಧಿಯಲ್ಲಿ

ಇದು ಇತ್ತೀಚೆಗೆ ಸಾಹಿತ್ಯ ವಿಮರ್ಶೆ ಹೇಗೆಲ್ಲಾ ನಡೆಯುತ್ತದೆ ಎಂದು ತೋರಿಸುವ ಕತೆ. ಇಲ್ಲಿ ಎಷ್ಟೋ ಕೆಟ್ಟ ಕೃತಿಗಳನ್ನು ಟಾಪ್ ಟೆನ್ ಲಿಸ್ಟಲ್ಲಿ ಸೇರಿಸಿ ಇದು ಶ್ರೇಷ್ಠ ಕೃತಿ ಎಂದು ಹೇಳುವ ಪರಿಪಾಠ ಬೆಳೆದಿದೆ. ವಾರದ ಹಿಂದೆ ಹದಿನೈದು ದಿನದ ಹಿಂದೆ ಪ್ರಕಟವಾಗಿರುವ ಕೃತಿಗಳನ್ನು ವರ್ಷದಲ್ಲಿ ಅತೀ ಚರ್ಚಿತ ಕೃತಿ ಎಂದು ಬಿಂಬಿಸಲಾಗುತ್ತದೆ. ಇದು ಸಾಹಿತ್ಯ ಲೋಕದಲ್ಲಿ ನಡೆಯುತ್ತಿರುವ ಮಾಫಿಯಾ ಎಂದೇ ಹೇಳಬಹುದು. ಒಬ್ಬ ಪ್ರಾಮಾಣಿಕ ವಿಮರ್ಶಕನಿಗೆ ಇದು ಒಳ್ಳೆಯ ಕೃತಿ, ಇದು ಕೆಟ್ಟ ಕೃತಿ ಎಂದು ಸಹಜವಾಗಿಯೇ ಗೊತ್ತಾಗುತ್ತದೆ. ಇನ್ನು ಒಬ್ಬ ಒಳ್ಳೆಯ ಲೇಖಕನಿಗೆ ವಿಮರ್ಶಕ ಅತೀಯಾಗಿ ಹೊಗಳುತ್ತಿದ್ದಾನೋ ಅಥವಾ ಸುಮ್ಮನೆ ತೆಗಳುತ್ತಿದ್ದಾನೋ ಸರಿಯಾಗಿ ತಿಳಿಯುತ್ತದೆ. ಇವನ್ನೆಲ್ಲಾ ನೋಡಿದರೆ ಯಾವುದೋ ಸ್ವಲಾಭಕಾಗಿ ಅಥವಾ ಇನ್ನೇನೋ ಲಾಭಕ್ಕಾಗಿ ಒಂದು ಕೃತಿಯನ್ನು ಹೊಗಳುವುದು ಅಥವಾ ತೆಗಳುವುದು ಹೇಗೆ ನಡೆಯುತ್ತದೆ ಎಂದು ಈ ಕತೆ ಮಾರ್ಮಿಕವಾಗಿ ತೋರಿಸುತ್ತದೆ.

ನಟರಾಜ್ ಹುಳಿಯಾರು ತುಂಬಾ ವರ್ಷಗಳಿಂದ ಸಾಹಿತ್ಯವಲಯದಲ್ಲಿ ಅದರಲ್ಲೂ ಅಕಾಡೆಮಿಕ್ ವಲಯದಲ್ಲಿ ಚೆನ್ನಾಗಿ ಗುರುತಿಸಿಕೊಂಡಿರುವವರು ಹಾಗೂ ಎಲ್ಲರಿಗೂ ಚಿರಪರಿಚಿತರಾಗಿರುವವರು. ಇವರು ಇಂಗ್ಲಿಷ್ ಪ್ರಾಧ್ಯಾಪಕರಾಗಿರುವುದು ಅದಕ್ಕೆ ಪ್ಲಸ್ ಪಾಯಿಂಟ್ ಕೂಡ ಆಗಿರಬಹುದು. ಈಗಾಗಲೇ ಮೂರು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡಿದಿದ್ದಾರೆ. ಇನ್ನು ಹಲವು ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಪಡೆದಿದ್ದಾರೆ. ಇವರಿಂದ ಇನ್ನು ಹೆಚ್ಚು ಹೆಚ್ಚು ಸಾಹಿತ್ಯ ಕೃತಿಗಳು ಮೂಡಿ ಬರಲಿ ಎಂದು ಶುಭ ಹಾರೈಸುತ್ತಿದ್ದೇನೆ.

‍ಲೇಖಕರು Avadhi

December 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This