101 ನೇ ನಂಬರಿನ ಆ ಮನೆಯಲ್ಲಿ ಇಡೀ 'ಋತುವಿಲಾಸ'

ತಮ್ಮ ಮೂರು ಸಮಗ್ರ ಸಂಕಲನಗಳು ಒಟ್ಟಿಗೆ ಬಿಡುಗಡೆಯಾದ ಸಂಭ್ರಮದಲ್ಲಿದ್ದಾರೆ ಎಚ್ ಎಸ್ ವಿ.
ತಮ್ಮ ಕೃತಿಗಳು ಎದ್ದು ನಿಂತ ಬಗೆಯ ಒಂದು ಮೆಲುಕು ಇಲ್ಲಿದೆ.
-ಎಚ್ ಎಸ್ ವೆಂಕಟೇಶ ಮೂರ್ತಿ

ತಾನು ಬರೆದದ್ದನ್ನು ಒಟ್ಟಿಗೇ ಹೀಗೆ ಜೋಡಿಸಿಕೊಡುವವಾಗ ತಾನು ಇಷ್ಟೆಲ್ಲಾ ಬರೆದದ್ದುಂಟಾ ಎಂದು ಲೇಖಕನಿಗೇ ಆಶ್ಚರ್ಯವಾಗುತ್ತದೆ. ಒಟ್ಟು ಸಂಗ್ರಹಗಳು ಬಂದ ಮೇಲೆ ಆಸಕ್ತರು ದಶಕಗಳ ಹಿಂದಿನ ಬಿಡಿಪ್ರತಿಗಳಿಗಾಗಿ ತಡಕಾಡುವ ಅಗತ್ಯವಿರುವುದಿಲ್ಲ. ದಪ್ಪ ಪುಸ್ತಕ ರ್‍ಯಾಕಿನಲ್ಲಿ ಇದ್ದಾಗ ಅದು ಕಣ್ಣುತಪ್ಪಿಹೋಗುವ ಭಯವಿಲ್ಲ! ಬೇಡವೆಂದರೆ ನಾವೇ ಮರೆಸಿ ಇಡಬೇಕಷ್ಟೆ!
ಈ ಕೃತಿಗಳನ್ನು ಕಣ್ಣ ಮುಂದೆ ಹರಡಿಕೊಂಡು ಕೂತಾಗ, ನನ್ನ ಅನೇಕ ಹಳೆಯ ನೆನಪುಗಳು ಅಜ್ಞಾತದಿಂದ ನಿಧಾನಕ್ಕೆ ಮೇಲೇಳುವ ಬೆರಗು ವಿಶೇಷ ಖುಷಿ ಕೊಡುತ್ತದೆ. ಸಿಂದಾಬಾದನ ಆತ್ಮಕಥೆ ಸಾಕ್ಷಿಯಲ್ಲಿ ಪ್ರಕಟವಾದಾಗ ನನ್ನ ಪ್ರಿಯ ಮಿತ್ರ ಉಪಾಧ್ಯ (ಆಗಿನ್ನೂ ಡಾ ಆನಂದರಾಮ ಉಪಾಧ್ಯ ಆಗಿರಲಿಲ್ಲ) ನನ್ನ ಮನೆಗೆ ಬಂದು-“ಸಾಕ್ಷಿಯಲ್ಲಿ ನಿಮ್ಮ ಸಿಂದಾಬಾದನ ಆತ್ಮಕಥೆ ಓದಿ ನನ್ನ ಪರಿಚಯದ ಗೆಳೆಯರೊಬ್ಬರು ತುಂಬಾ ಇಷ್ಟಪಟ್ಟಿದ್ದಾರೆ. ನಿಮ್ಮನ್ನು ಪರಿಚಯಮಾಡಿಕೊಡಲು ಕೇಳಿದ್ದಾರೆ” ಎಂದರು. ಹೀಗೆ ಪದ್ಯವೊಂದರ ಮೂಲಕ ನನಗೆ ಹತ್ತಿರವಾದ ಗೆಳೆಯ ಕೆ.ಸತ್ಯನಾರಾಯಣ. ಆಗ ಅವರು ರಿಸರ್ವ್ ಬ್ಯಾಂಕ್ ಉದ್ಯೋಗಿಯಾಗಿದ್ದರು. ಬಸವನಗುಡಿ ಪಾರ್ಕ್ ಬಳಿ ಒಂದು ವಟಾರದ ಮನೆಯಲ್ಲಿ ಅವರು ಗೆಳೆಯರೊಂದಿಗೆ ವಾಸವಾಗಿದ್ದರು (೧೯೭೭ರ ಸುಮಾರು). ಆಮೇಲೆ ಅದೆಷ್ಟು ಬಾರಿ ನಾವು ಆ ಪುಟ್ಟ ಮನೆಯಲ್ಲಿ ಕೂತು ಸಾಹಿತ್ಯದ ಬಗ್ಗೆ ಚರ್ಚಿಸಿದ್ದೇವೆಯೋ!
ತುಷಾರದಲ್ಲಿ ನನ್ನ ಪುಟ್ಟಾರಿಯ ಮತಾಂತರ ಪ್ರಕಟವಾಯಿತು. ಆ ಪುಟ್ಟಾರಿಯ ಮತಾಂತರ ಬರೆದದ್ದು ಚನ್ನಗಿರಿ ತಾಲ್ಲೋಕಿನ ತಾವರಕೆರೆ ಎಂಬ ಸಣ್ಣ ಊರಿನಲ್ಲಿ. ಅಲ್ಲಿ ನನ್ನ ಷಡ್ಕ ಎನ್ ಆರ್ ಕೆ ಶಾಲಾ ಅಧ್ಯಾಪಕರಾಗಿದ್ದರು. ನಾನು ರಜಾಕಾಲದಲ್ಲಿ ಬಂದು ಅವರಲ್ಲಿ ವಾರೊಪ್ಪತ್ತು ಇದ್ದು ಅಲ್ಲೇ ಒಂದು ಕಥೆಗಿತೆ ಬರೆಯಬೇಕೆಂಬುದು ಅವರ ಅಪೇಕ್ಷೆ!ಅದಕ್ಕಾಗಿ ಆ ಮಹಾರಾಯರು ಏನೆಲ್ಲಾ ಸಿದ್ಧತೆ ಮಾಡಿದ್ದರು! ನನಗಾಗಿ ಒಂದು ಖಾಲಿ ಮನೆಯನ್ನು ತೆರವುಗೊಳಿಸಿದ್ದರು. ಅಲ್ಲಿಗೆ ಹೊತ್ತು ಹೊತ್ತಿಗೆ ನನಗೆ ತಿಂಡಿ ಕಾಫಿ ಬರುತ್ತಾ ಇತ್ತು. ದಿನವೆಲ್ಲಾ ಬರೆಯುತ್ತಾ ಇದ್ದೆ. ರಾತ್ರಿ ಆಗಿನ್ನೂ ಚಿಕ್ಕವರಾಗಿದ್ದ ನನ್ನ ಷಡ್ಕರ ಮಕ್ಕಳು ಬರೆದದ್ದಷ್ಟನ್ನೂ ಓದಿ ಮತ್ತೆ ನಾಳೆ ಕಥೆಯ ಮುಂದಿನ ಭಾಗವನ್ನು ಓದುವುದಕ್ಕೆ ಕಾತರತೆಯಿಂದ ಸಿದ್ಧರಾಗುತ್ತಾ ಇದ್ದರು! ಆ ಕಥೆಯಲ್ಲಿ ಬರುವ ಸಾಹಸೀ ರೈತ ಭೋಜಣ್ಣ ಅಲ್ಲಿಯೇ ನಾನು ಕಂಡವರು! ತಮ್ಮ ಪಾತ್ರ ಕಥೆಯಲ್ಲಿ ಮೂಡುವುದನ್ನು ಓದಿ ಓದಿ ಅವರೂ ರೋಮಾಂಚಿತರಾಗುತ್ತಿದ್ದರು. ಹೀಗೆ ವಾಸ್ತವ ಕಲ್ಪನೆ ಎಲ್ಲವನ್ನೂ ಮಿದ್ದುಕೊಂಡು ನಿರ್ಮಾಣವಾದ ಕಥೆಯದು. ಅದನ್ನು ಮುಗಿಸಲಿಕ್ಕೆ ನಾನು ತೆಗೆದುಕೊಂಡ ಸಮಯ ಸರಿಯಾಗಿ ಒಂದು ವಾರ. ಮುಂದೆ ಪುಟ್ಟಾರಿಯ ಮತಾಂತರ ಪತ್ರಿಕೆಯಲ್ಲಿ ಪ್ರಕಟವಾದಾಗ , ಮೈಸೂರಿಂದ ಅನಿರೀಕ್ಷಿತವಾಗಿ ಕಾಳೇಗೌಡ ನಾಗವಾರರು ಪತ್ರವೊಂದನ್ನು ಬರೆದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾವು ಬೇರೆ ಬೇರೆ ತಾತ್ವಿಕತೆಯ ಲೇಖಕರಾಗಿದ್ದರೂ ಪರಸ್ಪರ ಮೆಚ್ಚುವ ಸೌಹಾರ್ದತೆ ಇದ್ದದ್ದು ನನಗೆ ಈವತ್ತೂ ತುಂಬ ಪ್ರಿಯವಾದ ಸಂಗತಿ ಅನ್ನಿಸುತ್ತಿದೆ.
ನನ್ನ ಒಣಮರದ ಗಿಳಿಗಳು ಎಂಬ ಕೃತಿಯ ಬಹಳಷ್ಟು ಕವಿತೆಗಳನ್ನು ಹುಚ್ಚುಹಿಡಿದವನ ಹಾಗೆ ನಾನು ಪರೀಕ್ಷೆಯ ಬಿಡುವಿನಲ್ಲಿ ಸ್ಟಾಫ್ ರೂಮಿನ ಏಕಾಂತದಲ್ಲಿ ಬರೆದದ್ದು. ಬರೆದ ಪದ್ಯಗಳನ್ನೆಲ್ಲಾ ಜೋಡಿಸಿ, ಕೀರ್ತನಾಥ ಕುರ್ತಕೋಟಿಯವರಿಗೆ ಮುನ್ನುಡಿ ಕೇಳಿ ಪದ್ಯಗಳನ್ನು ಕಳಿಸಿಕೊಟ್ಟೆ. ಆಗ ನನ್ನ ನೇರ ಪರಿಚಯವೂ ಅವರಿಗೆ ಇರಲಿಲ್ಲ. ಬರೆದರೆ ಬರೆಯುತ್ತಾರೆ, ಇಲ್ಲವಾದರೆ ಆಗುವುದಿಲ್ಲ ಎನ್ನುತ್ತಾರೆ! ಅಷ್ಟೇ ತಾನೆ ಎಂದುಕೊಂಡು ಒಂದು ಮೊಂಡು ಧೈರ್ಯದಲ್ಲಿ ಕವಿತೆಗಳನ್ನ ಕೀರ್ತಿಯವರಿಗೆ ಕಳಿಸಿ, ಈ ವಿಷಯ ನನ್ನ ಆಪ್ತಗೆಳೆಯರಿಗೂ ಹೇಳದೆ ತೆಪ್ಪಗೆ ನನ್ನ ದೈನಿಕದಲ್ಲಿ ತೊಡಗಿಕೊಂಡಿದ್ದೆ. ನಾನು ಕವಿತೆಗಳನ್ನು ಕಳಿಸಿ ಒಂದು ತಿಂಗಳಾಗಿರಬಹುದು. ಆವತ್ತು ನಮ್ಮ ಮನೆಗೆ ಪ್ರಿಯ ಮಿತ್ರರಾದ ಎಚ್.ಎಸ್.ಮಾಧವರಾವ್, ಮತ್ತು ನನ್ನ ಅತ್ಯಂತ ಪ್ರೀತಿಯ ವಿದ್ಯಾರ್ಥಿಮಿತ್ರ ಡಾ ಮೂರ್ತಿ ಊಟಕ್ಕೆ ಬಂದಿದ್ದರು. ಮೂರ್ತಿ ಲಂಡನ್ನಿನಲ್ಲಿ ಉನ್ನತ ವ್ಯಾಸಂಗ ಮುಗಿಸಿ ಬೆಂಗಳೂರಿಗೆ ಹಿಂದಿರುಗಿದ್ದ ಸಂದರ್ಭ. ತ್ಯಾಗರಾಜನಗರದಲ್ಲಿ ಒಂದು ಸಣ್ಣ ಮನೆಯಲ್ಲಿ ಬಾಡಿಗೆಗಿದ್ದೆ. ನನ್ನ ಇಬ್ಬರು ಅಜ್ಜಿಯರು, ನನ್ನ ನಾಲ್ವರು ಮಕ್ಕಳು, ಪತ್ನಿ-ಎಲ್ಲಾ ಆ ಕಿಷ್ಕಿಂಧೆಯಲ್ಲಿ ಹೇಗೆ ಬದುಕುತ್ತಿದ್ದೆವೋ ಈವತ್ತು ಆಶ್ಚರ್ಯವಾಗುತ್ತದೆ. ಒಳಗೆ ಕೂತು ಬರೆಯುವುದಕ್ಕೆ ಜಾಗವಿರಲಿಲ್ಲ. ಹಾಗಾಗಿ ನನ್ನ ಬಹುಪಾಲು ಬರವಣಿಗೆಯನ್ನು ಒಂದು ಕಡ್ಡಿ ಚಾಪೆ ಹಾಕಿಕೊಂಡು ನಾಕಡಿ ಅಗಲದ ಕಾಂಪೌಂಡಿನ ಜಾಗದಲ್ಲಿ ಬರೆಯುತ್ತಾ ಇದ್ದೆ. ಆ ಪಾರಿವಾಳದ ಗೂಡಿಗೆ ಅಡಿಗರು, ಅನಂತಮೂರ್ತಿ, ಕಿರಂ, ಬಾಲು, ಸತ್ಯನಾರಾಯಣ, ಉಪಾಧ್ಯ, ರಾಮಚಂದ್ರಶರ್ಮ, ಎನ್.ಎಸ್.ಎಲ್, ಸುಬ್ಬಣ್ಣ, ಸಿ.ಅಶ್ವಥ್-ಇಂಥಾ ಘಟಾನುಘಟಿಗಳೆಲ್ಲಾ ಬಂದುಹೋಗಿದ್ದಾರೆ.
ಆ ವಿಷಯ ಇರಲಿ. ಮಾಧು ಮತ್ತು ಡಾ ಮೂರ್ತಿ ನಮ್ಮ ಮನೆಗೆ ಊಟಕ್ಕೆ ಬಂದ ವಿಷಯ ಹೇಳುತ್ತಾ ಇದ್ದೆ. ಮುಂಬಾಗಿಲು ಹಾಕಿದ್ದೆವೇ? ಪೋಸ್ಟಿನವನು ಒಂದು ಭಾರವಾದ ಲಕೋಟೆಯನ್ನು ಕಿಟಕಿಯಲ್ಲಿ ತೂರಿಸಿ ನಾವು ಊಟಮಾಡುತ್ತಾ ಕೂತಿದ್ದ ಹಾಲಿಗೇ ಇಳಿಬಿಟ್ಟ. ಧೊಪ್ಪೆಂದು ಸಶಬ್ದವಾಗಿ ನೆಲಕ್ಕೆ ಬಿದ್ದ ಆ ಲಕೋಟೆಯನ್ನು ಒಡೆದು ನೋಡುತ್ತೇನೆ: ಕೀರ್ತಿ ತಮ್ಮ ಮುನ್ನುಡಿ ಬರೆದು ಕಳಿಸಿದ್ದಾರೆ! ಆಗ ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಆ ಮುನ್ನುಡಿಯನ್ನು ಮೊಟ್ಟ ಮೊದಲು ಓದಿದವರು ಮಾಧು ಮತ್ತು ಮೂರ್ತಿ.
ನನಗೆ ಹೆಸರು ಮತ್ತು ಪ್ರತಿಷ್ಠೆ ತಂದುಕೊಟ್ಟ ಋತುವಿಲಾಸ ನಾನು ಬರೆದದ್ದು ತ್ಯಾಗರಾಜನಗರದ ಮನೆಯ ಕಾಂಪೌಂಡಿನಲ್ಲಿ ಕೂತು! ನಾನೂ ಡಾ ಶ್ರೀರಾಮ ಭಟ್ಟರು ಋತುಸಂಹಾರ ಅಭ್ಯಾಸ ಮಾಡಿದ್ದು ಅದೇ ಜಾಗದಲ್ಲಿ. ಕೆಲವು ಬಾರಿ ಭಟ್ಟರ ಅವ್ಟ್ ಹೌಸಿನ ಪುಟ್ಟ ಮನೆಯಲ್ಲಿ. ಇಡೀ ಋತುವಿಲಾಸ ೧೦೧ ನಂಬರಿನ ಆ ಮನೆಯ ಉಸಿರುಕಟ್ಟಿಸುವ ಕಿರುಕೋಣೆಯಲ್ಲಿ ಓದಿ ಎನ್.ಎಸ್.ಎಲ್ ಶಹಬಾಸ್ ಹೇಳಿದ್ದು ಅದೇ ಮನೆಯಲ್ಲಿ!
ನನ್ನ ಅನೇಕ ಬರವಣಿಗೆಯ ಹಿಂದೆ ಇರುವ ದಾರುಣ ನೆನಪುಗಳೂ ಆ ನೂರೊಂದನೇ ನಂಬರಿನ ಮನೆಯನ್ನ ಧ್ಯಾನಕ್ಕೆ ತರುತ್ತಾ ಇವೆ. ಸದ್ಯಕ್ಕೆ ಆ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳದೆ, ಒಂದು ಖುಷಿಯ ನೆನಪನ್ನು ನಿಮ್ಮ ಎದುರಿಗಿಟ್ಟು ಈ ಬರವಣಿಗೆ ಮುಗಿಸುತ್ತೇನೆ. ಕ್ರಿಯಾಪರ್ವ ಬರೆದು ಮುಗಿಸಿದ್ದೆ(೧೯೮೦). ಆ ಪದ್ಯವನ್ನ ಅನಂತಮೂರ್ತಿಗಳಿಗೆ ಓದಬೇಕೆಂದು ನಾನು ಮತ್ತು ಬಾಲು ಮೈಸೂರಿಗೆ ಹೋಗಿದ್ದೆವು. ಕಂಚಿನ ತೇರು ಮೊದಲಾದ ಪದ್ಯಗಳನ್ನು ಕ್ರಿಯಾಪರ್ವದೊಂದಿಗೆ ಅನಂತಮೂರ್ತಿಯವರಿಗೆ ಓದಿ ಮುನ್ನುಡಿ ಬರೆಯಲು ಕೇಳಿದ್ದಾಯಿತು. ಅವರು ಮುಗುಳ್ನಕ್ಕು ಸ್ವಲ್ಪ ಕಾಲಾವಕಾಶ ಬೇಕು! ಪರವಾಗಿಲ್ಲ ತಾನೇ?ಎಂದರು. ಆಯಿತು-ಎಂದು ನಾವು ಬೆಂಗಳೂರಿಗೆ ಹಿಂದಿರುಗಿದೆವು. ಆಮೇಲೆ ಪ್ರತಿದಿನ ಮುನ್ನುಡಿಯಿರುವ ಲಕೋಟೆಯನ್ನು ಕಾಯುತ್ತಾ ಇದ್ದೆ. ಲಕೋಟೆ ಬರಲಿಲ್ಲ. ಒಂದು ರಾತ್ರಿ ಕಾಲೇಜಿನಿಂದ ಮನೆಗೆ ಬಂದಾಗ ನನ್ನ ಹೆಂಡತಿ ಸಂಭ್ರಮದಿಂದ ಅನಂತಮೂರ್ತಿಯವರು ಬಂದು ಮುನ್ನುಡಿ ಕೊಟ್ಟು ಹೋಗಿದ್ದಾರೆ. ಸ್ವಲ್ಪಹೊತ್ತು ಕಿರಂ ಮನೆಯಲ್ಲಿ ಇರುತ್ತಾರಂತೆ. ಹೋಗಿ ನೋಡಿ. ಇದ್ದರೂ ಇರಬಹುದು-ಎಂದಳು. ಆಗ ಮೊಬೈಲ್ ಇತ್ಯಾದಿ ಸೌಕರ್ಯವಿರಲಿಲ್ಲ. ನನ್ನ ಸುವೇಗ ಹತ್ತಿಕೊಂಡು ನಾಗಸಂದ್ರದ ಬಳಿ ಇದ್ದ ಕಿರಂ ಮನೆಗೆ ದೌಡಾಯಿಸಿದೆ. ಅನಂತಮೂರ್ತಿ ಅಲ್ಲಿ ಇದ್ದರು. ಬಹಳಹೊತ್ತು ಅನಂತಮೂರ್ತಿ, ಕಿರಂ ಜೊತೆ ಮಾತಾಡಿ ನಾನು ಮನೆಗೆ ಹಿಂದಿರುಗಿದಾಗ ರಾತ್ರಿ ಹನ್ನೊಂದೇ ಆಗಿ ಹೋಗಿತ್ತು.

‍ಲೇಖಕರು avadhi

February 24, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

7 ಪ್ರತಿಕ್ರಿಯೆಗಳು

 1. ವಸುಧೇಂದ್ರ

  ಲೇಖನ ತುಂಬಾ ಖುಷಿ ಕೊಟ್ಟಿತು. ಎಷ್ಟೊಂದು ಪ್ರೀತಿಯಿಂದ ನೆನಪುಗಳನ್ನು ನಮ್ಮೊಡನೆ ಹಂಚಿಕೊಂಡಿದ್ದೀರೆ! ಆ ಪ್ರೀತಿಯ ಮನೋಭಾವವೇ ನಿಮ್ಮ ಬರವಣಿಗೆಯನ್ನು ಮತ್ತಷ್ಟು ಓದಲು ಪ್ರೇರೇಪಿಸುತ್ತವೆ. ನಿಮಗೆ ಅಭಿನಂದನೆಗಳು ಸಾರ್.

  ಪ್ರತಿಕ್ರಿಯೆ
 2. Vivek Shanbhag

  ತುಂಬಾ ಚೆನ್ನಾಗಿದೆ. ಇದನ್ನು ದಯವಿಟ್ಟು ಮುಂದುವರಿಸಿ.
  ವಿವೇಕ ಶಾನಭಾಗ

  ಪ್ರತಿಕ್ರಿಯೆ
 3. ಸೂರಿ

  ತುಂಡು ತುಂಡಾಗಿ ಮಾಡದೆ ಒಮ್ಮೆಯೇ ಎಲ್ಲವನ್ನೂ ಬರೆದುಬಿಡಿ ಮೇಷ್ಟ್ರೇ. ತುಂಬಾ ಆಪ್ತವಾಗಿದೆ. ನಿಮ್ಮ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತ, ನಮ್ಮನ್ನು ನಿಮ್ಮ ಪರಿಧಿಯೊಳಗೆ ಸೆಳಕೊಂಡಿದುದಕ್ಕೆ ಧನ್ಯವಾದಗಳು. ನಿಮ್ಮ ನೆನಪುಗಳು ನಮಗೆ ಜೀವನ-ಸಂಬಂಧಿ ಕಲಿಕೆಗಳು. ಸೂರಿ.

  ಪ್ರತಿಕ್ರಿಯೆ
 4. chandra aithal

  Can anyone please give me the email or phone number of Dr. H.S.V? I need to get his permission to present one of his plays in Los Angeles, CA.
  Thank you for the help.
  Chandra

  ಪ್ರತಿಕ್ರಿಯೆ
 5. ಗುರುಪ್ರಸಾದ ಕಾಗಿನೆಲೆ

  ಬಹಳ ಚೆನ್ನಾಗಿದೆ. ಮುಂದಿನ ಕಂತುಗಳಿಗಾಗಿ ಕಾಯುತ್ತೇನೆ. ಬೇಗ ಬರೆಯಿರಿ ಸರ್.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: