ಎಚ್ಹೆಸ್ವಿ ಬರೆವ ಅನಾತ್ಮ ಕಥನ: ನಿನಗೆ ನನ್ನ ಕೊನೇ ನಮಸ್ಕಾರ..

ಅಳಿಯಲಾರದ ನೆನಹು-೪

ಮೂರ್ತೀ… ನೀನು ಹೋದ ಮೇಲೆ..

ಎಚ್ ಎಸ್ ವೆಂಕಟೇಶಮೂರ್ತಿ

ಮೂರ್ತೀ… ನೀನು ಹೋದ ಮೇಲೆ ಹೀಗೆ ನಿನಗೊಂದು ಪತ್ರ ಬರೆಯುವ ಸಂಭವ ಬರಬಹುದೆಂದು ನಾನು ಕನಸು ಮನಸಲ್ಲೂ ಎಣಿಸಿರಲಿಲ್ಲ. ನನಗೆ ಹೃದಯಕ್ಕೆ ಹತ್ತಿರವಾಗಿರುವ ಅನೇಕ ಶಿಷ್ಯರಿದ್ದಾರೆ. ನೀನು ಯಾವಾಗಲೂ ಅವರನ್ನು ಹಿಂದಕ್ಕೆ ತಳ್ಳಿ ಮತ್ತೆ ಮತ್ತೆ ನನ್ನ ಎದೆಮಿಡಿತಕ್ಕೆ ಕಿವಿ ಹಚ್ಚುತ್ತಿದ್ದ ಹುಡುಗ. ಸದಾ ಹಸನ್ಮುಖಿ. ಸದಾ ವಿಚಾರಪರ. ಸದಾ ಧ್ಯಾನಮಗ್ನ. ವೈದ್ಯಕೀಯವಷ್ಟೇ ನಿನ್ನ ಆಸಕ್ತಿಯಾಗಿರಲಿಲ್ಲ. ಅದ್ಯಾವಾಗ ಬಿಡುವು ಮಾಡಿಕೊಳ್ಳುತ್ತಿದ್ದೆಯೋ! ಇತ್ತೀಚೆಗೆ ಬಂದ ಕನ್ನಡದ ಉತ್ತಮ ಪುಸ್ತಕವನ್ನ ನೀನು ಯಾವ ಮಾಯದಲ್ಲೋ ಓದಿ ಮುಗಿಸಿರುತ್ತಿದ್ದೆ. ಬರೀ ಕಥೆ ಕಾದಂಬರಿಯಲ್ಲ ಮಹರಾಯ. ಗಹನ ಗಂಭೀರ ಕಾವ್ಯ ಕೂಡಾ ನಿನ್ನ ಆಸಕ್ತಿಯ ವಿಷಯವಾಗಿತ್ತು. ಬೇಂದ್ರೆ, ಅಡಿಗ, ಕೆ ಎಸ್ ನ ಯಾವಾಗ ಅಂದರೆ ಆವಾಗ ನಿನಗೆ ನೆನಪಾಗುತ್ತಿದ್ದರು. ನಿಮ್ಮ ಅತ್ತಿಗೆ ಒಂದು ಕಾಲದಲ್ಲಿ ಸೊಗಸಾಗಿ ಹಾಡುತ್ತಿದ್ದರಲ್ಲ! ಅವರ ಪ್ರಭಾವ ಇರಬೇಕು. ನೀನು ಹಾಡುಗಾರಿಕೆಗೆ ಮನತೆತ್ತವನಾಗಿದ್ದೆ. ಕ್ಲಾಸಿಕಲ್, ಭಾವಗೀತೆ ಯಾವುದೂ ಆಗಬಹುದು. ಅದೆಷ್ಟು ಬಾರಿ ನಮ್ಮ ಮನೆಯ ಸಂಗೀತ ಕಾರ್ಯಕ್ರಮಗಳಿಗೆ ನೀನು ಬಂದಿದ್ದೀಯ. ಬಂದವ ಎಲ್ಲೋ ಹಿಂದಿನ ಸಾಲಲ್ಲಿ ಕೂತು ಸಂಗೀತ ಕೇಳುವಲ್ಲಿ ಮಗ್ನನಾಗುತ್ತಿದ್ದೆ. ನಾನು ನಿನ್ನನ್ನು ಬಲವಂತವಾಗಿ ಮುಂದೆ ಎಳೆದುಕೊಂಡು ಬರಬೇಕಷ್ಟೆ. ಗುಪ್ತ ರಸಿಕನಾಗಿರುವುದು ನಿನಗೆ ಯಾವತ್ತೂ ಪ್ರಿಯವಾದ ಸಂಗತಿಯಾಗಿತ್ತು.

ಚಿತ್ರ: ಅಶುತೋಶ್

ನಿನ್ನನ್ನು ಮೊಟ್ಟಮೊದಲು ನಾನು ಕಂಡ ದಿನ ಈವತ್ತೂ ನೆನಪಿದೆ ಮೂರ್ತಿ. (೧೯೬೭-೬೮?). ಮಲ್ಲಾಡಿಹಳ್ಳಿಯ ಹೈಸ್ಕೂಲಲ್ಲಿ ನಾನು ಮೆಷ್ಟ್ರು. ಬೆಳಿಗ್ಗೆ ಫ಼ಸ್ಟ್ ಪೀರಿಯೆಡ್. ಮೊದಲ ಸ್ಟಾಂಡರ್ಡ್ ತರಗತಿ. ಹಾಜರಿ ಕೂಗುತ್ತಾ ಇದ್ದೇನೆ. ಪಟ್ಟಿಯಲ್ಲಿ ಒಂದು ಹೊಸ ಹೆಸರು ಸೇರ್ಪಡೆಯಾಗಿದೆ. ಎಂಥ ಆಶ್ಚರ್ಯ- ಇನಿಷಿಯಲ್ಸ್ ಕೂಡ ನನ್ನದೇ ಆಗಿರುವ ನನ್ನದೇ ಹೆಸರು. ಎಚ್.ಎಸ್.ವೆಂಕಟೇಶಮೂರ್ತಿ. ನಾನು ಮುಗುಳ್ನಗುತ್ತಾ ಕತ್ತೆತ್ತಿ ಯಾರು ಈ ಮಹರಾಯ ಎಂದು ನೋಡಿದರೆ ಮೊದಲ ಬೆಂಚಲ್ಲಿ ತೆಳ್ಳಗೆ ಬೆಳ್ಳಗೆ ಕೂತಿರುವ ನೀನು ಕಾಣುತ್ತಿ. ನಾನು ನಿನ್ನ ಕಡೆ ನೋಡಿದಾಗ ಮತ್ತೆ ನೀನು ಎದ್ದು ನಿಲ್ಲುತ್ತಿ.ಇಡೀ ತರಗತಿ ಈ ನಾಟಕವನ್ನು ಈಗ ಕುತೂಹಲದಿಂದ ಪರಿಭಾವಿಸುತ್ತಾ ಇದೆ.

ನಾನು: ನನ್ನ ಹೆಸರು ಏನು ಅಂತ ನಿನಗೆ ಗೊತ್ತಾ ಮಗು?

ನೀನು: ಗೊತ್ತು ಸರ್! ಎಚ್.ಎಸ್.ವೆಂಕಟೇಶಮೂರ್ತಿ!

ನಾನು: ನೀನು ಚೆನ್ನಾಗಿ ಓದಬೇಕು. ಓದದಿದ್ದರೆ ವೆಂಕಟೇಶಮೂರ್ತಿ ದಡ್ಡ ಎನ್ನುತ್ತಾರೆ ಎಲ್ಲಾ…

ನೀನು:(ನಕ್ಕು) ಚೆನ್ನಾಗಿ ಓದುತ್ತೇನೆ ಸರ್…

ನಾನು: ಓದಿ ಮುಂದೆ ಏನಾಗಬೇಕು ಅಂತ ಇದ್ದೀ ನೀನು…

ನೀನು:(ಮೌನ)

ನಾನು: ಹೇಳು… ಏನಾಗಬೇಕು ಅಂತ ನಿನ್ನ ಆಸೆ?

ನೀನು:(ಎಡಗಣ್ಣು ಅರೆಮಾಡಿ, ಬಲಗಣ್ಣ ಹುಬ್ಬ ಎತ್ತರಿಸಿ, ನಿನ್ನ ಯಾವತ್ತಿನ ಏಕಾಗ್ರ ಭಂಗಿಯಲ್ಲಿ) ಡಾಕ್ಟರ್…!

ಏನಾಗಬೇಕೋ ಗೊತ್ತಿಲ್ಲ ಅನ್ನುತ್ತಿ ಅಂದುಕೊಂಡಿದ್ದೆ. ನೀನು ಉತ್ತರಿಸಿದ ಭಂಗಿ ನನ್ನನ್ನು ಬೆರಗುಗೊಳಿಸಿತು. ಆವತ್ತಿನಿಂದ ಯಾವಾಗ ನಿಮ್ಮ ಕ್ಲಾಸಿಗೆ ಬಂದರೂ ನಿನ್ನ ಮೇಲೆ ನನ್ನ ಒಂದು ಕಣ್ಣು ಇದ್ದೇ ಇರುತ್ತಿತ್ತು. ನಿನಗೆ ಕನ್ನಡ ಮತ್ತು ಗಣಿತ ಕಲಿಸುತ್ತಿದ್ದೆ ನಾನು. ಯಾವುದೇ ಪ್ರಶ್ನೆಗೂ ಮೊದಲು ಕೈಯೆತ್ತಿ ಉತ್ತರ ಹೇಳಲು ಸಿದ್ಧನಾಗುತ್ತಿದ್ದವ ನೀನು. ಬೇರೆ ಅಧ್ಯಾಪಕರೂ ಹೇಳುತ್ತಿದ್ದರು. ಎಲ್ಲಾ ಕ್ಲಾಸಿನಲ್ಲೂ ನೀನು ಮುಂದಿದ್ದೆ. ಚೂಟಿಯಾಗಿದ್ದೆ. ಆಟ ಓಟದಲ್ಲಿ ತೊಡಗದಿದ್ದರೂ ಪುಸ್ತಕಭಂಡಾರದಲ್ಲಿ ಬಿಡುವಿನ ವೇಳೆಯಲ್ಲಿ ನನ್ನ ಕಣ್ಣಿಗೆ ಬೀಳುತ್ತಿದ್ದ ಏಕೈಕ ವಿದ್ಯಾರ್ಥಿ ನೀನು. ನಿನಗೆ ನಾನು ಕುವೆಂಪು ಅವರ ಮಲೆನಾಡಿನ ಚಿತ್ರಗಳನ್ನ ಓದಿಸಿದೆ. ಗೊರೂರರ ನಮ್ಮೂರ ರಸಿಕರು ಓದಿಸಿದೆ. ಕಾರಂತರ ಬೆಟ್ಟದ ಜೀವ ಓದಿಸಿದೆ. ಕೊನೆಗೆ ಅನಂತಮೂರ್ತಿಯವರ ಸಂಸ್ಕಾರವನ್ನೂ. ಒಂದು ಬಾರಿ ನಾನು ಮತ್ತು ನನ್ನ ಪತ್ನಿ(ಆಗಷ್ಟೇ ನನಗೆ ಮದುವೆಯಾಗಿತ್ತು)ನಿಮ್ಮ ಮನೆಗೆ ಬಂದಾಗ ನಿಮ್ಮ ತಾಯಿ ಸಂಕೋಚದಿಂದ, “ನಮ್ಮ ಮೂರ್ತಿ ಇನ್ನೂ ಚಿಕ್ಕವನು…ಅವನಿಗೆ ಸಂಸ್ಕಾರದಂಥ ಕಾದಂಬರಿ ಯಾಕೆ ಓದಲು ಕೊಡಿತ್ತೀರಿ?” ಎಂದರು. ನಾನು ಮೆಚ್ಚಿದ್ದೆಲ್ಲಾ ನನ್ನ ಹುಡುಗರಿಗೂ ಓದಿಸಬೇಕೆಂಬ ಉತ್ಸಾಹದಲ್ಲಿದ್ದ ನನಗೆ ಈ ಸಂಗತಿ ಹೊಳೆದೇ ಇರಲಿಲ್ಲ. ಆಮೇಲೆ ನೀನು ನನ್ನ ಬಳಿ ಹೇಳಿದೆ: “ನಮ್ಮ ತಾಯಿ ಹಾಗಂದರೂ ಅಂತ ಬೇಜಾರು ಮಾಡ್ಕೋ ಬೇಡಿ ಸರ್…ನನಗೆ ಸಂಸ್ಕಾರ ಇಷ್ಟ ಆಗಿದೆ!”.

ಸ್ಕೂಲಲ್ಲಿ ನಿಮಗೆ ಕುಮಾರವ್ಯಾಸನ ಕಾವ್ಯದ ಗದ್ಯಾನುವಾದವನ್ನು ಓದಲಿಕ್ಕೆ ಇಟ್ಟಿದ್ದರು. ಕರ್ಣ ಭೇದನ ಸಂದರ್ಭ. ನಾನು ಗದ್ಯವನ್ನು ಓದದೆ ಮೂಲ ಭಾರತದ ಆ ಪ್ರಸಂಗವನ್ನೇ ನಿಮ್ಮ ತರಗತಿಯಲ್ಲಿ ಓದಿ ಹೇಳಿದಾಗ ಹುಡುಗರೆಲ್ಲಾ ಮಂತ್ರಮುಗ್ಧರಾಗಿದ್ದರು. ನಿನ್ನ ಕಣ್ಣಲ್ಲಿ ನೀರು ಒಸರುತ್ತಿದ್ದುದನ್ನು ನಾನು ಓರೆಗಣ್ಣಲ್ಲಿ ನೋಡಿದೆ. ತರಗತಿ ಮುಗಿದ ಮೇಲೆ ನೀನು ನನ್ನ ಬಳಿ ಬಂದೆ. ಸ್ಟಾಫ್ ರೂಮಲ್ಲಿ ಯಾರೂ ಇರಲಿಲ್ಲ. ಏನು ಮೂರ್ತಿ? ಎಂದು ನಾನು ಕೇಳಿದಾಗ , ನೀನು ಸಂಕೋಚದಿಂದ, ಕುಮಾರವ್ಯಾಸನ ಆ ಪದ್ಯಗಳನ್ನು ನನಗೆ ಕೊಡಿ ಸರ್…ನಾನವನ್ನು ಕಂಠಪಾಠ ಮಾಡಿಕೊಳ್ಳುತ್ತೇನೆ! ಹದಿನಾಲಕ್ಕು ವರ್ಷದ ಹುಡುಗನ ಬಾಯಿಂದ ಈ ಮಾತು. ನಾನು ಬಿಗಿಯಾಗಿ ನಿನ್ನ ಕೈ ಹಿಡಿದು, ನೀನು ನಮ್ಮ ಮನೆಗೆ ಬಾ…ನಿನಗೆ ಆ ಪದ್ಯಗಳನ್ನು ನಾನು ಬರೆದುಕೊಡುತ್ತೇನೆ” ಎಂದೆ. ನೀನು ಸ್ಕೂಲು ಮುಗಿದ ಮೇಲೆ ಮನೆಗೆ ಹೋಗುವ ಮೊದಲು ನಮ್ಮ ಮನೆಗೆ ಬಂದೆ. ನನ್ನ ಪತ್ನಿ ನಗುತ್ತಾ ನಿಮ್ಮ ಪಟ್ಟಶಿಷ್ಯ ಬಂದಿದಾನೆ !ಎಂದು ಹುಬ್ಬು ಎಗರಿಸಿದಳು.

ಏನೋ ಮಾತಿಗೆ ಹೇಳಿದ್ದಲ್ಲ. ಕುಮಾರವ್ಯಾಸನ ಸುಮಾರು ಹದಿನೈದು ಪದ್ಯಗಳನ್ನು ನೀನು ಒಂದು ವಾರದಲ್ಲಿ ಬಾಯಿಪಾಠ ಮಾಡಿಕೊಂಡು ಬಂದು ನನಗೆ ಒಪ್ಪಿಸಿದೆ. ವರ್ಷದ ಕೊನೆಯಲ್ಲಿ ವಿದ್ಯಾರ್ಥಿಸಂಘದ ಉತ್ಸವದಲ್ಲಿ ನೀನು ಆ ಪದ್ಯಗಳನ್ನು ವ್ಯಾಸಪೀಠದ ಬೃಹತ್ ಸಭೆಯಲ್ಲಿ ಅಭಿನಯಿಸಿ ತೋರಿಸಬೇಕು ಎಂಬುದು ನನ್ನ ಅಪೇಕ್ಷೆಯಾಗಿತ್ತು. ಸ್ವಲ್ಪವಾದರೂ ಹಿಂಜರಿದೆಯಾ ನೀನು? ಓಹೋ…ಆಗಬಹುದು ಸರ್! ಎಂದೆ. ಆವತ್ತು ನಾನೇ ಮನೆಯಿಂದ ರೇಷ್ಮೆ ಪಂಚೆ ತಂದು ನಿನಗೆ ಕಚ್ಚೆ ಹಾಕಿ ಉಡಿಸಿದೆ. ಮಡೀಕೋಲಿನ ಹಾಗೆ ತೆಳ್ಳಗೆ ಬಳುಕುತ್ತಿದ್ದ ಹುಡುಗ ನೀನು. ನನ್ನ ಮುಗುಟ ಸೊಂಟದ ಕೆಳಗೆ ಇಷ್ಟು ದಪ್ಪ ಉಬ್ಬಿಕೊಂಡು ವಿಚಿತ್ರವಾಗಿ ಕಾಣುತ್ತಾ ಇದ್ದೆ ನೀನು. ನಿನಗೆ ಕುಡಿಮೀಸೆ ತಿದ್ದಿ, ತಿಲಕ ಇಟ್ಟು, ನಮ್ಮ ಅಜ್ಜಿಯ ಹತ್ತಿ ಹೆಕ್ಕುವ ಬಿಲ್ಲನ್ನು ಹೆಗಲಿಗೆ ಸೆಕ್ಕಿಸಿ…ಆಹಾ..ಈಗ ನೋಡಪ್ಪಾ..ನೀನು ಸಾಕ್ಷಾತ್ ಕರ್ಣನೇ..ಎಂದು ನಾನು ಪ್ರೀತಿಯಿಂದ ನಿನ್ನ ಬೆನ್ನಿಗೆ ಗುದ್ದಿದೆ. ಕಾರ್ಯಕ್ರಮದಲ್ಲಿ ಅದೆಷ್ಟು ಭಾವಾವೇಶದಿಂದ ನೀನು ಕರ್ಣನ ಪಾತ್ರವನ್ನು ಅಭಿನಯಿಸಿದ್ದೆ! ಎಲ್ಲರೂ ನಿನ್ನನ್ನು ಹೊಗಳಿದ್ದೂ ಹೊಗಳಿದ್ದೇ! ನಮ್ಮ ಟಿಎಸ್ಸಾರ್ ಅಂತೂ( ನಮ್ಮ ಸ್ಕೂಲಿನ ಹೆಡ್ಮಾಸ್ಟರ್) ಆನಂದ ತುಂದಿಲರಾಗಿದ್ದರು!

ನೀನು ಈ ವೇಳೆಗೆ ನನಗೆ ತುಂಬ ಆಪ್ತನಾಗಿಹೋಗಿದ್ದೆ. ನಮ್ಮ ಮನೆಯ ಹುಡುಗನಾಗಿಯೇ ಹೋಗಿದ್ದೆ. ನನ್ನ ಅಮ್ಮ , ಅಜ್ಜಿ, ಪತ್ನಿ ಎಲ್ಲರಿಗೂ ನೀನು ಅಚ್ಚುಮೆಚ್ಚು. ದಿನಾ ಸಂಜೆ ಬಂದು ನನ್ನ ರೂಮಿನಲ್ಲಿ ಕೂತು ಗಣಿತದ ಅಭ್ಯಾಸ ಮಾಡುತ್ತಿದ್ದೆ. ನೂರಕ್ಕೆ ನೂರು ಅಂಕ ಪಡೆಯುವುದು ನಿನಗೆ ಲೀಲಾಜಾಲವಾಗಿ ಹೋಯಿತು! ನೀನು ಎಸ್ ಎಸ್ ಎಲ್ ಸಿ ಉನ್ನತ ದರ್ಜೆಯಲ್ಲಿ ಮುಗಿಸಿ ಪಿ ಯು ಸಿ ಮುಗಿಸಿ ಮೆಡಿಕಲ್ ಗೆ ಸೀಟ್ ಪಡೆದಾಗ ಅದನ್ನು ನನಗೆ ಹೇಳುವುದಕ್ಕೆ, ಮತ್ತೂ ಕೆಲವು ಸರ್ಟಿಫಿಕೇಟ್ ಶಾಲೆಯಿಂದ ಪಡೆಯುವುದಕ್ಕೆ ನಿನ್ನ ಅಣ್ಣನ ಜೊತೆ ಮಲ್ಲಾಡಿಹಳ್ಳಿಗೆ ಬಂದೆ. ಆ ವೇಳೆಗೆ ನಿಮ್ಮ ತಂದೆಗೆ ಬೇರೆಲ್ಲಿಗೋ ವರ್ಗವಾಗಿ ಅವರು ಮಲ್ಲಾಡಿಹಳ್ಳಿ ಬಿಟ್ಟಿದ್ದರಲ್ಲ? ನಮ್ಮ ಮನೆಯಲ್ಲೇ ನೀವು ಉಳಿದಿರಿ. ನಿನ್ನ ಉತ್ಕರ್ಷ ನನಗೆ ಅಭಿಮಾನದ ಸಂಗತಿಯಾಗಿತ್ತು. ನಿನ್ನಿಂದ ನಿಮ್ಮ ಮನೆಯವರೆಲ್ಲಾ ನನಗೆ ಆಪ್ತರಾದರು. ನಾನು ಎಂ.ಎ ಓದಲಿಕ್ಕೆ ಬೆಂಗಳೂರಿಗೆ ಬಂದಾಗ ಮೊದಲ ಠಿಕಾಣಿ ನಿಮ್ಮ ಮನೆಯಲ್ಲೇ. ಆವತ್ತು ಏನೋ ಹಬ್ಬ ಕಾಣಯ್ಯ. ನಿಮ್ಮ ತಾಯಿ ಒತ್ತುಸೇವಿಗೆ ಮಾಡಿದ್ದರು. ಅದರ ರುಚಿ ಇನ್ನೂ ನನ್ನ ನಾಲಗೆ ಮೇಲೆ ಇದೆ. ನಿನ್ನ ಅಣ್ಣಂದಿರು ನನ್ನ ಆಪ್ತ ಗೆಳೆಯರಾದರು. ನಿಮ್ಮ ಮನೆಯ ಕಷ್ಟ ಸುಖಗಳಲ್ಲಿ ನಾನೂ, ನಮ್ಮ ಮನೆಯ ಕಷ್ಟ ಸುಖಗಳಲ್ಲಿ ನೀನೂ ಪಾಲುಗಾರರಾಗುವುದು ಶುರುವಾಯಿತು. ಇದಲ್ಲವಾ ಅನುಬಂಧ ಅಂದರೆ…

ಎಂ ಬಿ ಬಿ ಎಸ್ ಮುಗಿಸಿದ ನೀನು ಉನ್ನತ ವ್ಯಾಸಂಗಕ್ಕಾಗಿ ಲಂಡನ್ ಗೆ ಹೋದೆ. ಅಲ್ಲಿ ಇಪ್ಪತ್ತೆಂಟು ಎಂತೆಂಥದೋ ನನಗೆ ಹೇಳಲಿಕ್ಕೇ ಬಾರದ ಡಿಗ್ರಿ ಸಂಪಾದಿಸಿದೆ. ವಿಖ್ಯಾತ ಸರ್ಜನ್ ಆದೆ. ಎಷ್ಟೋ ವರ್ಷಗಳ ನಂತರ ತಿರುಗಿ ಭಾರತಕ್ಕೆ ಬಂದು ಇಲ್ಲೇ ನೆಲೆಸಿದೆ. ನೀನು ಬೆಂಗಳೂರಿಗೆ ಬಂದದ್ದು ನನಗೆ ನಿಧಿಯೇ ಕೈವಶವಾದಂತಾಯಿತು. ಭಾರಿ ಭಾರಿ ಕಾಹಿಲೆಗಳು ಇರಲಿ, ನೆಗಡಿ ತಲೆ ನೋವಿಗೂ ನಾನು ನಿನ್ನ ಬಳಿ ಓಡಿ ಬರುತ್ತಾ ಇದ್ದೆ! “ಇದಕ್ಕೆಲ್ಲಾ ಮಾತ್ರೆ ಔಷಧ ಯಾಕೆ ಸರ್…ಬೆಚ್ಚಗೆ ಕಾಫಿ ಕುಡಿದು ಮಲಗಿ..!” ಎನ್ನುತ್ತಿದ್ದೆ ನೀನು! ನನ್ನ ಪತ್ನಿಗೆ ಲಿವರ್-ಗೆ ಸಂಬಂಧಿಸಿದ ತೀವ್ರ ಸ್ವರೂಪದ ಕಾಹಿಲೆಯಾದಾಗ ಅವಳನ್ನು ಉಳಿಸಲು ನೀನು ಎಷ್ಟೊಂದು ಹೋರಾಡಿದೆ ಎಂಬುದು ನನಗೆ ಮಾತಿನಲ್ಲಿ ವಿವರಿಸಲು ಬರುವುದಿಲ್ಲ. ನಿಮ್ಮ ವೈದ್ಯಕೀಯ ಭಾಷೆಯೇ ಬೇರೆಯಲ್ಲಪ್ಪಾ! ಮೂರ್ತಿಯನ್ನು ನೋಡಿದರೆ ಸಾಕು, ನನ್ನ ಬಾಧೆಗಳೂ ಕೂಡಲೇ ಕಡಿಮೆಯಾಗುತ್ತವೆ ಎನ್ನುತ್ತಿದ್ದಳು ನನ್ನ ಹೆಂಡತಿ. ಅವಳಿಗೆ ತಗುಲಿರುವ ಕಾಹಿಲೆ ಎಂಥ ಮಾರಕ ಸ್ವರೂಪದ್ದು ಎಂಬುದು ನಿನಗೆ ಗೊತ್ತಿತ್ತು. ಒಮ್ಮೆ ನನ್ನನ್ನು ಕರೆದು ಒಬ್ಬನಿಗೇ ಹೇಳಿದೆ. “ಸರ್ ..ರಾಜಲಕ್ಷ್ಮಿ ಇನ್ನು ಬಹಳ ದಿನ ಉಳಿಯುವುದಿಲ್ಲ…ಹೆಚ್ಚು ಅಂದರೆ ಆರು ತಿಂಗಳು ಬದುಕಿಯಾರು ಅಷ್ಟೆ… ಅದನ್ನು ಅವರಿಗೆ ಹೇಳುವುದು ನನ್ನ ಧರ್ಮ…ಅವರಿಂದ ಅದನ್ನು ಮುಚ್ಚಿಡುವುದು ಬೇಡ…”

ನಾನು ನಿನ್ನನ್ನು ಅವಳಿಗೆ ಈ ವಿಷಯ ತಿಳಿಸುವುದು ಬೇಡ ಎಂದು ಬಲವಂತದಿಂದ ಒಪ್ಪಿಸಿದೆ. ಇರುವಷ್ಟು ಕಾಲ ಅವಳ ಸೇವೆ ಮಾಡುವುದು ಎಂದು ನಿಶ್ಚಯಿಸಿದೆ. ಮನೆಯಲ್ಲಿ ಯಾರಿಗೂ ಈ ವಿಷಯ ತಿಳಿಸಲಿಲ್ಲ. ಹೊಟ್ಟೆಯಲ್ಲಿ ಬೆಂಕಿಯನ್ನು ಇಟ್ಟುಕೊಂಡು ಹೇಗೋ ದಿನ ತಳ್ಳಿದೆ. ಯಾವ ಸಮಯದಲ್ಲಿ ಕೂಗಿದರೂ , ನಿನಗೆ ಎಷ್ಟೇ ಕೆಲಸದ ಒತ್ತಡವಿದ್ದರೂ ಮನೆಗೆ ಓಡಿ ಬರುತ್ತಾ ಇದ್ದೆ. ಜೊತೆಗೆ ನಿನಗೆ ಸರಿಜೋಡಿಯಾಗಿದ್ದ ಪತ್ನಿಯನ್ನೂ ಕರೆದುಕೊಂಡು. ಸದಾ ನೀನು ಕಾಲಪುರುಷನೊಂದಿಗೆ ಹೋರಾಟ ಮಾಡುವ ಮಹಾಯೋಧನಾಗಿದ್ದೆ. ಎಷ್ಟು ಜನರನ್ನು ಮೃತ್ಯುವಿನ ಹಿಡಿತದಿಂದ ಪಾರು ಮಾಡಿದೆಯೋ…!( ತಾತ್ಕಾಲಿಕವೇ ಆದರೂ ಅದು ಮಹಾ ಸಾಧನೆಯೇ). ಎಷ್ಟು ಜನರನ್ನು ದೈಹಿಕ ಮತ್ತು ಮಾನಸಿಕ ವೇದನೆಯಿಂದ ಪಾರುಮಾಡಿದೆಯೋ…. ಕೆಲವು ಬಾರಿ ಗಂಟೆಗಟ್ಟಲೆ ಸರ್ಜರಿ ನಡೆಸುತ್ತಿದ್ದೆ. ನನ್ನ ಸೊಸೆ ನಿನ್ನಿಂದ ಪುನರ್ಜನ್ಮವನ್ನೇ ಪಡೆದಳು. ಮೂರು ಗಂಟೆಯ ಸುದೀರ್ಘ ಸರ್ಜರಿ. ನೀನು ಒ.ಟಿ-ಯಿಂದ ಹೊರಗೆ ಇಣುಕಿ-“ಆಪರೇಷನ್ ಆಯಿತು. ಏನೂ ಭಯವಿಲ್ಲ” ಎಂದಾಗ ನಾನು ಮಾತಾಡದೆ ನಿನ್ನ ಮುಖವನ್ನೇ ನೋಡುತ್ತಾ ಇದ್ದೆ. ಆ ಮುಖದಲ್ಲಿ ಬೆವರ ಹನಿಗಳು ತುಂಬಿದ್ದವು. ಅವನ್ನು ಒರೆಸಿಕೊಳ್ಳುತ್ತಾ ನೀನು ಮಾತಾಡಿದ್ದು.

ನಿನ್ನ ಕಾಲ ತುಂಬ ಬೆಲೆಯುಳ್ಳದ್ದು ಅಂತ ನನಗೆ ಗೊತ್ತಿತ್ತು. ದೂರವಾಣಿ ಮಾಡಿದಾಗ ಯಾವಾಗಲೂ ಎರಡು ನಿಮಿಷ ಮಾತಾಡಬಹುದೇ ಎಂದು ಕೇಳಿಕೊಂಡು ಮಾತಾಡುತ್ತಿದ್ದೆ. ನಿನ್ನೊಂದಿಗೆ ಕಾಡುಹರಟೆ ಮಹಾ ಪಾಪ ಅಂತ ಯಾವಾಗಲೂ ನನಗೆ ಅನ್ನಿಸುತ್ತಿತ್ತು.ನಿನ್ನ ಸಂದರ್ಶನಕ್ಕಾಗಿ ರೋಗಿಗಳು ಸಾಲುಗಟ್ಟಿ ನಿಲ್ಲುತ್ತಿದ್ದರು. ನಾನೇ ಎಷ್ಟೋ ಬಾರಿ ಗಂಟೆಗಟ್ಟಲೆ ನಿನಗಾಗಿ ಕಾದಿದ್ದೇನೆ. ನೀವು ಮನೆಗೆ ಬರಬಾರದೇ? ಇಲ್ಲೇಕೆ ಕಾಯುತ್ತೀರಿ ಅನ್ನುವೆ ನೀನು. ನೀನು ಎಷ್ಟೇ ಸಲುಗೆ ನೀಡಿದರೂ ನನಗೆ ಮಾತ್ರ ಸಂಕೋಚವೇ.ನಿನಗೆ ಸಮಯದ ಅರಕೆ ಇದೆ ಅಂತ ನನಗೆ ಯಾವಾಗಲೂ ಅನ್ನಿಸುತ್ತಿತ್ತು. ಇಷ್ಟರ ಮಧ್ಯೆ ನೀನು ಕನ್ನಡ ಇಂಗ್ಲಿಷ್ ಸಾಹಿತ್ಯದ ಉತ್ಕೃಷ್ಟ ಕೃತಿಗಳನ್ನು ಓದುವುದು ಮಾತ್ರ ನಿಲ್ಲಿಸಲೇ ಇಲ್ಲ. ಔದ್ಯೋಗಿಕ ಒತ್ತಡ ಎಷ್ಟೇ ಇದ್ದರೂ ಕನ್ನಡದ ಒಳ್ಳೆಯ ನಾಟಕಗಳನ್ನ ನೀನು ಯಾವತ್ತೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ನನ್ನ ಯಾವುದೋ ಪದ್ಯ ಪ್ರಜಾವಾಣಿಯಲ್ಲೋ ಪ್ರಭಾದಲ್ಲೋ ವಿಜಯಕರ್ನಾಟಕದಲ್ಲೋ ಓದಿ ನೀನು ಫೋನ್ ಮಾಡುತ್ತಿದ್ದೆ. ಎರಡು ಆಪರೇಷನ್ ಗಳ ಮಧ್ಯದ ಬಿಡುವಿನಲ್ಲಿ ಇದ್ದೇನೆ ಎಂದು ನಕ್ಕು, ನಿಮ್ಮ ಕವಿತೆ ಓದಿದೆ…ಬಹಳ ಹಿಡಿಸಿತು.. ಎನ್ನುತ್ತಿದ್ದೆ. ನೀನು ಸರ್ಜರಿಯಲ್ಲಿ ಇದ್ದಾಗ ನನ್ನ ಫೋನ್ ಬಂದಿದ್ದರೆ, ಒ.ಟಿ ಇಂದ ಹೊರಗೆ ಬಂದ ಕೂಡಲೇ ನನಗೆ ಫೋನ್ ಮಾಡುತ್ತಿದ್ದೆ. “ಸರ್..ಫೋನ್ ಮಾಡಿದ್ದಿರಿ. ಏನು ಸಮಾಚಾರ…?” ಮೂರ್ತೀ..ಯಾಕೋ ವಿಪರೀತ ತಲೆ ಭಾರ ಕಾಣಯ್ಯಾ…! “ಏಕೆ..ಇವತ್ತು ನಿಮ್ಮ ಸೊಸೆ ಇನ್ನೂ ನಿಮಗೆ ಕಾಫಿ ಕೊಟ್ಟಿಲ್ಲವೇ?”

ಈಗ ಯಾರಿಗೆ ಫೋನ್ ಮಾಡಲಿ ಮೂರ್ತಿ? ನಿಜಕ್ಕೂ ತಲೆ ಭಾರವಾಗಿದೆ. ಕಣ್ಣೀರಲ್ಲಿ ಯಾರೋ ಆಸಿಡ್ ಬೆರೆಸಿದ ಹಾಗಿದೆ. ಹೇಗೆ ಭಗ ಭಗ ಕಣ್ಣು ಉರಿಯುತ್ತವೆ ಗೊತಾ? ಗಾಜಿನ ಪೆಟ್ಟಿಗೆಯಲ್ಲಿ ತಣ್ಣಗೆ ಮಲಗಿದ್ದೀ ನೀನು. ನಿನ್ನ ಸಂದರ್ಶನಕ್ಕೆ ಈವತ್ತು ಯಾರೂ ಕಾಯಬೇಕಾಗಿಲ್ಲ. ಒಂದು ಗಂಟೆಯಿಂದ ನಾನು ಗರ ಬಡಿದವನಂತೆ ಕೂತೇ ಇದ್ದೀನಿ. ತಲೆ ಸ್ವಲ್ಪ ಪಕ್ಕಕ್ಕೆ ತಿರುಗಿಸಿ ನೀನು ಮಲಗಿದ್ದೀ. ಅದು ಯಾವತ್ತೂ ನಿನಗೆ ಪ್ರಿಯವಾದ ಭಂಗಿ. ರೋಗಿಗಳಿಂದ ಎಲ್ಲ ವಿವರ ಪಡೆದ ಮೇಲೆ ಬಲಕ್ಕೆ ಕೊಂಚ ತಲೆ ಬಾಗಿಸಿ ನೀನು ಕಣ್ಣುಮುಚ್ಚಿ ಧ್ಯಾನಿಸುತ್ತಿದ್ದೆ. ಯಾವತ್ತೂ ಸುಳ್ಳು ಭರವಸೆ ಕೊಡುತ್ತಿರಲಿಲ್ಲ. ಆದುದರಿಂದಲೇ, “ನಾನು ನೋಡಿಕೊಳ್ತೀನಿ ಬಿಡಿ” ಎಂದು ನೀನು ಎಂದಾಗ ನನಗೆ ತಲೆ ಹಗುರವಾಗಿ ಹೋಗುತ್ತಾ ಇತ್ತು. ನಿನಗೆ ಲಿವರ್ ಕ್ಯಾನ್ಸರ್ ಎಂಬುದು ದೃಢಪಟ್ಟ ಮೇಲೆ ನಿನ್ನನ್ನು ನೋಡಲು ನಿಮ್ಮ ಮನೆಗೆ ನಾನು ಬಂದದ್ದು ನೆನಪಿನಲ್ಲಿದೆಯಾ? ಇದು ಕೇವಲ ಒಂದು ತಿಂಗಳ ಹಿಂದಷ್ಟೆ! ಎಷ್ಟು ಇಳಿದುಹೋಗಿದ್ದೆ ನೀನು. ಮುಖದ ತುಂಬ ಬರೀ ಕಣ್ಣುಗಳೇ ಕಾಣುತ್ತಿದ್ದವಲ್ಲಯ್ಯಾ? ನಿನ್ನೊಂದಿಗೆ ಏನು ಮಾತಾಡಬೇಕೋ ತಿಳಿಯದೆ ನಾನು ಪೆಚ್ಚಾಗಿ ಕೂತಿದ್ದೆ. ನನ್ನ ಕತ್ತನ್ನೇ ಗಮನಿಸುತ್ತಿದ್ದ ನೀನು ತಕ್ಷಣ ಎದ್ದು ನನ್ನ ಬಳಿಗೆ ಬಂದು ಸ್ವಲ್ಪ ಹಾಗೇ ಇರಿ ಎಂದು ಯಾವುದೋ ಪರೀಕ್ಷೆಗೆ ತೊಡಗಿದೆ. ಆ ಕ್ಷಣ ನೀನು ರೋಗಿಯಲ್ಲ; ವೈದ್ಯನಾಗಿ ಥಟ್ಟನೆ ರೂಪಾಂತರಗೊಂಡಿದ್ದೆ. ಎರಡೂ ಕಡೆ ಕೊರಳನ್ನು ಒತ್ತಿ ಒತ್ತಿ ಪರೀಕ್ಷಿಸಿ, ಎರಡೂ ಕಡೇ ಹೀಗೆ ಊತ ಇದೆಯಾ ಎಂದೆ. ನಾನು ಹೌದು ಎಂದಾಗ , ಹಾಗಾದರೆ ಏನೂ ತೊಂದರೆಯಿಲ್ಲ ಎಂದೆ. ಇಷ್ಟು ಹೇಳಿ ನೀನು ಹಿಂತಿರುಗಿ ಸೋಫಾದ ಬಳಿಗೆ ಹೋಗುವಾಗ ಮತ್ತೆ ನಿನ್ನ ಮುಖದಲ್ಲಿ ಕಾಯಿಲೆಯ ಲಕ್ಷಣ ಎದ್ದು ಕಾಣುತಾ ಇತ್ತು.

ಲಿವರ್-ಗೆ ಸಂಬಂಧಿಸಿದ ನಿನ್ನ ಕಾಹಿಲೆ ತೀವ್ರವಾದಾಗ ಕೂಡಾ ನೀನು ಕೆಲವು ಕ್ಯಾನ್ಸರ್ ಆಪರೇಷನ್ ಯಶಸ್ವಿಯಾಗಿ ನಿರ್ವಹಿಸಿದ್ದು ನಿನ್ನ ಆತ್ಮಶಕ್ತಿಯ ಕುರುಹು ಎನ್ನಲೇ? ನಿನಗೆ ಆತ್ಮ ಗೀತ್ಮ ಇವುಗಳಲ್ಲೆಲ್ಲಾ ನಂಬಿಕೆಯೇ ಇರಲಿಲ್ಲವಲ್ಲಾ…ಬದುಕುವುದು ಒಂದು ಹೋರಾಟ…ಅದರಲ್ಲಿ ಸಾಯುವವರೆಗೂ ನಾವು ತೊಡಗಿರಲೇ ಬೇಕು ಅನ್ನೋದನ್ನು ನೀನು ನಿನ್ನ ಕಿರಿಯಂದಿನ, ಮಿತ ಅರಿವಿನ, ಮೇಷ್ಟ್ರಿಗೆ ನಿಶ್ಶಬ್ದವಾಗಿ ಬೋಧಿಸಿದ್ದೆ. ಯಾರಿಗಾದರೂ ಏನಾದರೂ ಉಪಕಾರ ಮಾಡಿದ್ದೇನೆ ಎಂಬ ತೃಣಮಾತ್ರ ಅಹಂಕಾರವೂ ಇಲ್ಲದೆ, ಆರುವ ದೀಪದಂತೆ ಹೇಗೆ ನಿನ್ನಲ್ಲೇ ನೀನು ಈಗ ಮುಳುಗಿಹೋಗಿದ್ದೀ…ಥ್ಯಾಂಕ್ ಯೂ ನನ್ನ ಮುದ್ದು ಹುಡುಗ..ನಿನಗೆ ನನ್ನ ಕೊನೇ ನಮಸ್ಕಾರ….

(೨೦-೪-೨೦೧೦)

*****

‍ಲೇಖಕರು avadhi

April 15, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಚ್ ಎಸ್ ವಿ ಕಾಲಂ: ಮತ್ತೆ, ಮರೆತ ಇತಿಹಾಸದ ಮರುಗಳಿಕೆ..

ತಾವರೆಯ ಬಾಗಿಲು-೧೮ ಎರಡು ಸಾವಿರ ವರ್ಷಗಳ ಹಿಂದೆ ತೆಂಕಣಭಾರತದ ದೇಶ-ಕಾಲ-ಪರಿಸ್ಥಿತಿ ಹೇಗಿತ್ತೆಂದು ನಾವು ಊಹಿಸುವುದೂ ಸಾಧ್ಯವಿಲ್ಲ. ಮರೆತು ಹೋದ...

ಎಚ್ ಎಸ್ ವಿ ಕಾಲಂ: ಕಾವ್ಯದಲ್ಲಿ ಭಾಷೆಯಲ್ಲದ ಭಾಷೆಯ ಮಿಡುಕಾಟ..

ತಾವರೆಯ ಬಾಗಿಲು-೧೬ ಕಾವ್ಯಕ್ಕೆ ಭಾಷೆಯೇ ಮೂಲ ಸಾಮಗ್ರಿ. ಭಾಷೆಯ ಮೂಲಕ ಕವಿಗಳು ತಮ್ಮ ಲೌಕಿಕಾಲೌಕಿಕ ಅನುಭವಗಳನ್ನು ಅಭಿವ್ಯಕ್ತಿಸುತ್ತಾರೆ. ಹಾಗೆ...

9 ಪ್ರತಿಕ್ರಿಯೆಗಳು

 1. GVA

  I guess date mentioned in the article is wrong..Nice piece of work..Have read lot of articles admiring teachers.This is a reverse tribute and it is sad too,,

  ಪ್ರತಿಕ್ರಿಯೆ
 2. Nalini Maiya

  Every moment of friendship and love we experience in life is so very precious! It is better to have loved and lost than to never love! Beautiful article!

  ಪ್ರತಿಕ್ರಿಯೆ
 3. ಮುರಳೀಧರ ಸಜ್ಜನ.

  ಏಲ್ಲೆಲ್ಲೋ ಹೋಗಿ, ತಿರುಗಿ, ಕೂತು, ಜತೆಯಾಗಿ, ಮಾತನಾಡಿ, ಮಾತನಾಡಿಸಿ ಮುಂದುವರಿದು ವಿಚಿತ್ರ ತಿರುವು ಪಡೆದಿದ್ದು ಆಶ್ಚರ್ಯ ಮತ್ತು ಸತ್ಯ.ಕಥೆ ಚೆನ್ನಾಗಿದೆ ಸರ್……

  ಪ್ರತಿಕ್ರಿಯೆ
 4. HSV Murthy

  ಪ್ರಿಯರೇ,
  ಡಾ|ಮೂರ್ತಿ ೧೯೬೭,೬೮,೬೯ನೇ ಇಸವಿಯಲ್ಲಿ ಮಲ್ಲಾಡಿಹಳ್ಳಿಯಲ್ಲಿ ನನ್ನ ವಿದ್ಯಾರ್ಥಿಯಾಗಿದ್ದ. ವೈದ್ಯನಾದ ಮೇಲೆ ಲಂಡನ್ನಿನಲ್ಲಿ ಎಫ್.ಆರ್.ಸಿ.ಎಸ್ ಮಾಡಿದ. ಅನೇಕ ವರ್ಷ ಹೊರದೇಶಗಳಲ್ಲಿ ಇದ್ದವನು ಕಳೆದ ಹತ್ತು ವರ್ಷಗಳಿಂದ ಬೆಂಗಳೂರಲ್ಲಿ ನೆಲೆಸಿದ್ದ. ಬೆಂಗಳೂರಿನ ಸುವಿಖ್ಯಾತ ಸರ್ಜಿಕಲ್ ಗ್ಯಾಸ್ಟ್ರೋ ಎಂಟಿರಾಲಜಿಸ್ಟ್ ವೈದ್ಯರಲ್ಲಿ ಒಬ್ಬನಾಗಿದ್ದ. ಲಿವರ್ ಕ್ಯಾನ್ಸರ್ ಇಂದ ದಿನಾಂಕ ೮ಎಪ್ರಿಲ್ ೨೦೧೦ರಂದು, ಚನ್ನೈನಲ್ಲಿ ಶಸ್ತ್ರಚಿಕಿತ್ಸೆಯನಂತರ ಚೇತರಿಸಿಕೊಳ್ಳಲಾಗದೆ ವಿಧಿವಶನಾದ. ಆಗ ಅವನಿಗೆ ಕೇವಲ ಐವತ್ತೈದು ವರ್ಷ. ಮಗ, ಮಗಳು, ಪತ್ನಿ ಮತ್ತು ಅಪಾರ ಆತ್ಮೀಯರಿಂದ ದೂರವಾದ ಮೂರ್ತಿ, ಕನ್ನಡದ ಖ್ಯಾತ ವಿಮರ್ಶಕ ಡಾ|ಎಚ್.ಎಸ್.ರಾಘವೇಂದ್ರರಾವ್ ಅವರ ಕಿರಿಯ ಸೋದರ.ನನ್ನ ಮತ್ತು ಅವನ ಸಂಬಂಧ ನಲವತ್ತು ವರ್ಷಕ್ಕೂ ದೀರ್ಘಾವಧಿಯದು. ಈ ಬರೆಹ ನನ್ನ ಈ ಪ್ರೀತಿಯ ಕಿರಿಮಿತ್ರನಿಗೆ ನನ್ನ ಅಶ್ರುತರ್ಪಣ.-ಎಚ್ಚೆಸ್ವಿ.

  ಪ್ರತಿಕ್ರಿಯೆ
 5. ಗುರುಪ್ರಸಾದ ಕಾಗಿನೆಲೆ

  ಯಾವುದೋ ಸಂದರ್ಭದಲ್ಲಿ ಡಾ ಎಚ್ ಎಸ್ ರಾಘವೇಂದ್ರರಾವ್ ರ ಮನೆಗೆ ಹೋಗಿದ್ದಾಗ ಅವರ ತಮ್ಮ ಡಾ ಎಚ್ ಎಸ್ ವೆಂಕಟೇಶಮೂರ್ತಿಯವರ ಜತೆಗೆ ಹತ್ತು ನಿಮಿಷಗಳ ಮಾತುಕತೆಯೂ ಆಗಿತ್ತು. ಬಹಳ ದಿನಗಳೇನೂ ಆಗಿಲ್ಲ. ಅವರು ಈಗಿಲ್ಲವೆಂದರೆ ನಂಬುವುದೂ ಕಷ್ಟ. ಸಾಹಿತ್ಯ, ವೈದ್ಯಕೀಯ ವೃತ್ತಿಯ ನಮ್ಮ ಸಮಾನ ಆಸಕ್ತಿಗಳ ಹೊರತಾಗಿಯೂ ಅವರು ಒಬ್ಬ ಒಳ್ಳೆಯ ಮನುಷ್ಯನಾಗಿ ನನ್ನ ಮನಸೆಳೆದಿದ್ದರು. ನಂತರ ಒಂದೆರಡು ಬಾರಿ ಎಚ್ಚೆಸ್ಸಾರ್ ಮನೆಗೆ ಹೋದಾಗಲೂ ಅವರ ಭೇಟಿಯಾಗಿರಲಿಲ್ಲ. ಯಾರಿಗೆ ಗೊತ್ತಿತ್ತು, ಅದೇ ನಮ್ಮ ಕಡೆಯ ಭೇಟಿಯಾಗಿತ್ತು ಎಂದು. ಇನ್ನೂ ಮನೆಯ ವಿಳಾಸ ಕೊಡಬೇಕಾದರೆ, “ನಿಮ್ಮ ಮನೆಯಿಂದ ಬರಬೇಕಾದರೆ ಬಲಗಡೇ ನೊಡಿ ಬನ್ನಿ ಗುರುಪ್ರಸಾದ್ ಅಲ್ಲಿ ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅನ್ನೋ ಹೆಸರಿನ ಬೋರ್ಡಿದೆ. ಆ ಮನೆಯ ಆವರಣದಲ್ಲಿಯೇ ನಾವಿರೋದು” ಎಂಬ ಎಚ್ಚೆಸ್ಸಾರ್ ರ ಮಾತು ಇನ್ನೂ ನನಗೆ ಕಿವಿಯಲ್ಲಿ ಮೊಳೆಯುತ್ತಾ ಇದೆ. ಸರ್, ಈ ನಿಮ್ಮ ಲೇಖನ ಓದಿ ಮನಸ್ಸು ಕಲಕಿಹೋಯಿತು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: