ಸಂದೀಪ್ ಈಶಾನ್ಯ
ಸಿಕ್ಕರೆ ಕೇಳುವುದಿದೆ ದೇವರಿಗೆ
ನಾಲ್ಕೈದು ಪ್ರಶ್ನೆಗಳ
ಯಾಕೆ ನಿಮ್ಮಲ್ಲಿ ಯಾರೂ ಬಡವರಿಲ್ಲ
ಎಲ್ಲರ ಕಿಸೆಯಲ್ಲೂ ಉಂಟು ಸಾಕೆನ್ನುವಷ್ಟು ದುಡ್ಡು
ಹಾಗೂ ವಿವಿಧ ಆಕಾರದ ಚಿನ್ನದ ಕಿರೀಟ
ನಿಮ್ಮ ಸಂಗೀತ ತರಬೇತಿ ಎಲ್ಲಿ
ಎಲ್ಲರ ಬಳಿಯಲ್ಲೂ ಇದೆ ಅಲ್ಲವೇ
ವೀಣೆ, ಕೊಳಲು ಸಿತಾರು
ನಿಮ್ಮದು ಕೂತಲ್ಲೇ ಮನುಕುಲ ಉಳಿಸುವ ಯೋಜನೆಯೋ
ಅದಾಗುವುದಿಲ್ಲ ಬಿಟ್ಟು ಬನ್ನಿ
ನೀವಿರುವ ಕೊಳದ ಮೇಲಿನ ತಾವರೆಯನು
ಸುಮ್ಮನೆ ಆಯುಧಗಳನ್ನು ಹಿಡಿದು
ದಣಿಯುವುದಕ್ಕೆ ನಿಮಗೆ ಏಳೆಂಟು ಕೈಗಳೆ
ಯುದ್ಧದಲ್ಲಿ ತನ್ನ ಎರಡೂ ಕೈಗಳನ್ನು
ಕಳೆದುಕೊಂಡ ಯೋಧ ರೋದಿಸುತ್ತಿದ್ದಾನೆ
ನಿಮ್ಮ ಒಂದು ಕೈಯನ್ನಾದರು ನೀಡಿ ಸಹಕರಿಸಿ
ಕ್ಯಾಲೆಂಡರಿನಲ್ಲಿ ಚೆಲ್ಲಾಡುವುದಕ್ಕೆ ನಿಮಗೆ
ಹೊನ್ನಿನ ನಾಣ್ಯ ಬೇಕೆ
ದೂರದ ಬಸ್ ಸ್ಟಾಂಡಿನಲ್ಲಿ
ತನ್ನ ಮೊಲೆಗಳನ್ನು ಅಡವಿಡಲು
ನಿಂತಿರುವ ಹೆಂಗಸಿಗೂ ಸ್ವಲ್ಪ ನೀಡಿ
ಬದುಕಲು ಬಿಡಿ
ಬಡವನ ಮನೆಯ ಉಚಿತ ಊದು ಬತ್ತಿಯ
ಸುವಾಸನೆಗೆ ಹಾತೊರೆಯಬೇಡಿ
ಸೃಷ್ಟಿಕರ್ತ ಬ್ರಹ್ಮನೊಂದಿಗೆ ಸಂವಾದ
ಮಂಡಿಸಿ
ಒಪ್ಪಿಸಿ
ಅವನ ಒಂದು ತಲೆಯನ್ನಾದರು
ನಮಗೆ ನೀಡಲು ಹೇಳಿ
ಇಲ್ಲಿ ತಲೆ ಇಲ್ಲದವರೇ ನಮ್ಮನ್ನು ಆಳುತ್ತಿದ್ದಾರೆ
ಮನುಜರು ತುಂಬಾ ಮುಂದಿದ್ದಾರೆ
ಈಗಲೇ ನಿಮ್ಮಲ್ಲಿರುವ ಪ್ರಾಣಿವಾಹನವನ್ನು
ಕಾಡಿಗೆ ಅಟ್ಟಿ
ಇಲ್ಲವಾದಲ್ಲಿ
ದೇವಲೋಕಕ್ಕೆ ಬಂದಿಳಿಯಬಹುದು
ಪ್ರಾಣಿದಯಾ ಸಂಘದ ನೀಲಿ ವ್ಯಾನೂ..
Kavana tumba chennaide