ನನ್ನ ಗೆಳೆಯ ಬರಗೂರು..

ಬಹು ಹಿಂದೆ ತನ್ನ ಆತ್ಮೀಯ ಗೆಳೆಯ ಬರಗೂರು ರಾಮಚಂದ್ರಪ್ಪನವರ ಕುರಿತು

ಆರ್. ವಿ. ಭಂಡಾರಿಯವರು ಬರೆದ ಅಪ್ರಕಟಿತ ಲೇಖನ ಇದು.

ಬರಗೂರು ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ

ಈ ಹೊತ್ತಿನಲ್ಲಿ ಈ ಲೇಖನ ನಿಮ್ಮ ಮುಂದೆ..

 

ಬಂಡಾಯದ ಗೆಳೆಯರಾಗಿ ಬರಗೂರು ರಾಮಚಂದ್ರಪ್ಪ

r-v-bhandari

ಆರ್. ವಿ. ಭಂಡಾರಿ

ಪ್ರೊ. ಬರಗೂರು ರಾಮಚಂದ್ರಪ್ಪ ಮತ್ತು ಪ್ರೊ. ಚಂದ್ರಶೇಖರ ಪಾಟೀಲ ಈ ಇಬ್ಬರು ಬಂಡಾಯ ಸಾಹಿತ್ಯ ಸಂಘಟನೆಯ ಮುಖ್ಯ ಚಾಲಕ ಶಕ್ತಿಗಳಾಗಿದ್ದರು.

ಯಾವುದೇ ಬಂಡಾಯ ಸಾಹಿತ್ಯ ಸಮ್ಮೇಳನ ಅಥವಾ ವಿಚಾರ ಸಂಕಿರಣದಲ್ಲಿ ಬರಗೂರು ಅವರ ಜವಾಬ್ದಾರಿ ಪ್ರಸ್ತಾವನೆ ಮಾಡುವುದು. ಚಂಪಾ ಇಡೀ ದಿನ, ಎರಡು ಮೂರು ದಿನ ಆದರೆ ಎರಡು ಮೂರು ದಿನವೂ ಕುಳಿತು ಇಡೀ ಸಮ್ಮೇಳನದ ಆಶಯವನ್ನು ಕ್ರೋಢೀಕರಿಸುತ್ತಿದ್ದರು. ಬರಗೂರು ಅವರು ಗಂಭೀರವಾದ ಮುನ್ನೋಟದಿಂದ ಇಡೀ ಸಮಾರಂಭದ ಆಶಯವನ್ನು ರೂಪುಗೊಳಿಸಿ, ಅದರ ಚೌಕಟ್ಟನ್ನು ತೋರಿಸಿ ಮುಂದಿನವರ ಕೈಗೆ ಕೊಡುತ್ತಿದ್ದರು.

bandaya-sahitya-sammelana2ಹಾಗೆ ಚರ್ಚೆಗೆ, ಸಮ್ಮೇಳನಕ್ಕೆ ಒಂದು ಶಿಸ್ತು ಹಾಗೂ ಬೌದ್ಧಿಕ ವಿಸ್ತಾರ ಬರಬೇಕಾರೆ ಬರಗೂರು ಅದನ್ನು ಪ್ರಸ್ತಾಪಿಸಬೇಕು. ಅಂತ್ಯದವರೆಗೆ ನಡೆದ ಚರ್ಚೆಯ ಅಡ್ಡತಿಡ್ಡಗಳನ್ನ ಕತ್ತರಿಸಿ ಸರಿಮಾಡಿ ಅದು ಹೊರಟ ಆಶಯ ಹಾಗೂ ತಲುಪಿದ ಶಿಖರವನ್ನು ಗುರುತಿಸಿ, ಚೂಪುಗೊಳಿಸುತ್ತಿದ್ದವರು ಚಂದ್ರಶೇಖರ ಪಾಟೀಲ; ಇಬ್ಬರು ಚತುರರೇ.

ಬರಗೂರು ದೀರ್ಘಕಾಲ ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿ ಸಂಘಟನೆಯನ್ನು ಮುನ್ನಡೆಸಿದರು. ಆದರೆ ಅದೇ ಸ್ಥಾನದಲ್ಲಿ ತಾನೇ ಮುಂದುವರಿದು ಏಕಮೇವಾ ದ್ವಿತೀಯ ಮುಂದಾಳು ಆಗಬೇಕೆಂದು ಅವರು ಎಂದೂ ಆಶಿಸಿರಲಿಲ್ಲ. ಹಾಗಂತ ಅವರೇನೂ ನನ್ನೊಡನೆ ಇದನ್ನು ಹೇಳಿದ್ದಲ್ಲ. ಆದರೆ ಪ್ರತಿ ವಾರ್ಷಿಕ ಸಭೆಯಲ್ಲಿ ನಡೆಯುವ ಸಂಘಟನಾ ಸಭೆಯಲ್ಲಿ ನಡೆಯುವ ಚರ್ಚೆಯಿಂದ ನಾನು ಅಂದುಕೊಂಡದ್ದು ಹಾಗೆ. ಸಂಚಾಲಕರನ್ನು ಆರಿಸುವಾಗ ಅವರು ಪ್ರತಿಸಲ ತನ್ನನ್ನು ಬಿಡಬೇಕೆಂದೂ ಆಸ್ಥಾನದಲ್ಲಿ ಹೊಸಬರು ಬರಬೇಕೆಂದೂ ಅನ್ನುತ್ತಿದ್ದರು. ಇದರಿಂದ ಸಂಘಟನೆಗೆ ಹೊಸ ಸಂಚಾಲಕರನ್ನು ಬೆಳೆಸಬೇಕೆಂಬ ಅವರ ಹಂಬಲ ಗೊತ್ತಾಗುತ್ತಿತ್ತು. ಆದರೆ ಮುಂದಾಳತ್ವದ ಸಮ್ಮೋಹನಿ ಶಕ್ತಿ ಅವರಲ್ಲಿ ಇದ್ದುದರಿಂದಲೇ ಮತ್ತೆ ಅವರನ್ನೇ ಸಂಚಾಲಕರನ್ನಾಗಿ ಮಾಡಲಾಗುತ್ತಿತ್ತು.

ಅದರೂ ಸಂಘಟನೆ ಚಂಪಾ ಮತ್ತು ಬರಗೂರರ ಪರ್ಯಾಯ ಶಕ್ತಿಯನ್ನು ಬೆಳೆಸಿಕೊಳ್ಳದಿರುವುದು ಈಗ ನಮಗೆ ಕಾಣುತ್ತದೆ. ಅಥವಾ ಚರಿತ್ರೆಯ ಅವಶ್ಯಕತೆಯನ್ನು ಪೂರೈಸಿದ ನಂತರ ಸಂಘಟನೆ ಹಿಂದೆ ಸರಿಯುವುದೇ ಸಹಜ ನಿಯಮವೋ ಏನೋ?. ಹಾಗಂದ ಮಾತ್ರಕ್ಕೆ ಬಂಡಾಯದ ತಾತ್ವಿಕ ಸ್ವರೂಪವನ್ನು ಬಂಡಾಯದ ಗೆಳೆಯರು ಬೆಳೆಸಿಕೊಂಡಿಯೇ ಇದ್ದಾರೆ. ಅದಲ್ಲದೆ ಬಂಡಾಯದ ಜನಪರವಾದ ನಿಲುವೇ ಇಂದಿನ ಸಾಹಿತ್ಯದ ಮುಖ್ಯ ಕಾಳಜಿಯಾಗಿರುವುದು ಬಂಡಾಯ ಸಾಹಿತ್ಯ ಚಳುವಳಿಯ ಅಂತಿಮ ಆಶಯದ ವಿಸ್ತಾರವೇ ಆಗಿದೆ.

ಬರಗೂರು ಓರ್ವ ಸಂಘಟಕರಾಗಿ ಬಹುಜನರ ಮನ ಗೆದ್ದಿದ್ದರು. ಅದಕ್ಕೆ ಅವರ ಸಂಘಟನಾ ಚಾತುರ್ಯದಂತೆ ವೈಯಕ್ತಿಕ ಗುಣವೂ ಕಾರಣವಾಗಿದೆ.

ಬಂಡಾಯ ಸಾಹಿತ್ಯ ಸಂಘಟನೆ ಯಾವುದೇ ಒಂದು ರಾಜಕೀಯ ಪಕ್ಷದ ಬದ್ಧತೆಯನ್ನು ಹೊಂದಿರಲಿಲ್ಲ. ಅದರಲ್ಲಿ ಲೋಹಿಯಾವಾದಿಗಳು, ಮಾರ್ಕ್ಸ್ ವಾದಿಗಳು ಮತ್ತು ಅಂಬೇಡ್ಕರ್ ವಾದಿಗಳು ಮುಖ್ಯ ಶಕ್ತಿಗಳಾಗಿದ್ದರೂ ಪ್ರಗತಿಪರ ಧೋರಣೆಯ ತಾತ್ವಿಕತೆಯನ್ನು ಹೊಂದಿದವರೆಲ್ಲ ಇದ್ದರು.

ಆದ್ದರಿಂದ ಅದು ಬಂಡವಾಳಿಗ ರಾಜಕೀಯ ಪಕ್ಷಗಳಲ್ಲಿಯಂತೆ ಮೇಲಿನವರಿಗೆ ‘ಹುಜೂರ್’ ಹೇಳುವಂತಹ ಅಥವಾ  ಏಕ ಮುಖವಾದ ಕೇಂದ್ರವನ್ನು ಹೊಂದಿದ; ಪ್ರಶ್ನೆ ಕೇಳದಿರುವುದ್ನನೇ ಶಿಸ್ತನ್ನಾಗಿ (ತಾತ್ವಿಕತೆಯನ್ನಾಗಿ) ಮಾಡಿಕೊಂಡ ಆರ್.ಎಸ್.ಎಸ್. ನಂತಹ ಸಂಘಟನೆಯಾಗಿರಲಿಲ್ಲ. ಅಲ್ಲಿ ಅನೇಕ ಅಭಿಪ್ರಾಯಗಳು, ಅನೇಕ ಪ್ರಶ್ನೆಗಳು ಇರುತ್ತಿದ್ದವು. ಆದ್ದರಿಂದ ಅವರ ಸಂಘಟನೆಯ ಕೆಲಸ ಕಷ್ಠಕರವಾದುದು.

ಬರಗೂರರಿಗೆ ಇಂಥ ಸಂಘಟನೆಯನ್ನು ಮುನ್ನಡೆಸುವಲ್ಲಿ ನಾಲ್ಕು ಗುಣಗಳು ಸಹಾಯಕವಾಗಿದ್ದವು. ಮೊದಲನೆಯದಾಗಿ, ಅವರು ಒಂದು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ, ಪ್ರಾಧ್ಯಾಪಕ ಆಗಿದ್ದರು. ಅಷ್ಟು ಮಾತ್ರವಲ್ಲ, ಅವರು ಉತ್ತಮ ಬೋಧನಾ ಶಕ್ತಿ ಹೊಂದಿದವರಾಗಿದ್ದರು. ಅಲ್ಲದೇ ಅವರು ವಿದ್ಯಾರ್ಥಿಗಳ ಹಿತಚಿಂತಕರಾಗಿದ್ದರು. ಬೇರೆ ಬೇರೆ ಸಂಘಟನಾತ್ಮಾಕ ನೆಲೆಯಲ್ಲಿ ಅವರ ವಿದ್ಯಾರ್ಥಿಗಳಿರುತ್ತಿದ್ದರು. ಎರಡನೆಯದಾಗಿ, ಅವರು ಆಳ ಜನಪರ ನಿಲುವಿನವರಾಗಿದ್ದರು. ಅವರು ಸೈದ್ಧಾಂತಿಕವಾಗಿ ಬಹಳ ಗಟ್ಟಿಯಾದವರು. ಹಾಗೆಯೇ ಗಂಭೀರ ಅಭ್ಯಾಸಗಳಿಗೆ ಚಿಂತಕರೂ ಆಗಿದ್ದರು.

ಒಂದು ತುರ್ತಿನ ಸಂದರ್ಭದಲ್ಲಿ ಅವರು ತೆಗೆದುಕೊಳ್ಳುವ ನಿಲುವು ಈ ಚಿಂತನೆಯ ಫಲವೇ ಆಗಿರುತ್ತಿತ್ತು. ಉದಾಹರಣೆಗೆ ಕನ್ನಡ ಚಳವಳಿ (ಗೋಕಾಕ್ ಚಳವಳಿ)ಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಅದು ಜನಾಂಗೀಯ ಅಥವಾ ಧರ್ಮೀಯ ವಿರೋಧಿ ಆಗಬಹುದೆಂಬುದು ಗೊತ್ತಾದೊಡನೆ ಬಂಡಾಯ ಸಂಘಟನೆ ಅದರಿಂದ ಹಿಂದೆ ಸರಿಯಿತು. ಮಾತ್ರವಲ್ಲ, ಅದಕ್ಕೆ ಸಾಧ್ಯವಾದಷ್ಟು ನೈತಿಕ ತಡೆಯನ್ನೊಡ್ಡಿತು.

ಅಂಥ ಗಂಭೀರ ಅಭ್ಯಾಸ, ಚಿಂತನೆ ಇದ್ದುದರಿಂದಲೇ ಆಗ ನವ್ಯದ ಘಟಾನುಘಟಿಗರು ಬಂಡಾಯ ಸಾಹಿತ್ಯದ ಚಳುವಳಿಯ ಮೇಲೆ ಮಾಡುತ್ತಿದ್ದ ಟೀಕೆಗೆ ಉತ್ತರ ಕೊಡುವುದು ಸಾಧ್ಯವಾಯಿತು. ಇಂಥಲ್ಲಿ ತುಸು ಸಂರಕ್ಷಣಾ ತಂತ್ರ ಇದ್ದರೆ ಸಾಂದರ್ಭಿಕವಾಗಿ ಉಚಿತವೇ ಆಗುತ್ತದೆ. ಈ ಸಂಗತಿಯಲ್ಲಿ ಪ್ರೊ. ಚಂದ್ರಶೇಖರ ಪಾಟೀಲರೂ ಅಷ್ಟೇ ಭಾಗಿಗಳು.

ಮೂರನೆಯದಾಗಿ, ಅವರು ಪ್ರಜಾಪ್ರಭುತ್ವವಾದಿಗಳಾಗಿದ್ದರು. ಮೂಲತಃ ಅವರು ಮಾರ್ಕ್ಸ್ ವಾದಿಗಳೇ. ಆದರೆ ಸಂಘಟನೆಯಲ್ಲಿ ಅನೇಕ ತಾತ್ವಿಕ ನಿಲುವಿನವರಿದ್ದುದರಿಂದ ಒಂದು ಬಹುಮುಖಿ ಸಂಸ್ಕೃತಿಯನ್ನು ಹೊರೆಯುವ ಜವಾಬ್ದಾರಿ ಕೂಡ ಸಂಚಾಲಕರಿಗಿರಬೇಕಾಗುತ್ತದೆ. ಅಂಥ ಗುಣವಿಶೇಷ ಅವರದ್ದಾಗಿತ್ತು. ಅವರೂ ಎಂದೂ ತಮ್ಮ ವಾದವನ್ನು ಹಠ ಎಂಬಂತೆ ಮಂಡಿಸುತ್ತಿರಲಿಲ್ಲ. ಅದು ಪ್ರಸ್ತಾವನೆಯ ರೂಪದಲ್ಲಿದ್ದು ಸಂವಾದಕ್ಕೆ ತೆರೆದಿರುತ್ತಿತ್ತು.

ಚರ್ಚೆಯಲ್ಲಿ ಅವರೆಂದೂ ಸಿಟ್ಟಿಗೇಳುತ್ತಿರಲಿಲ್ಲ. ಅತಿಕ್ರಮಿಸುತ್ತಿರಲಿಲ್ಲ. ನಾಳೆಯಿಂದ ಎಲ್ಲವನ್ನು ಆರಿಸಿ ಅದಕ್ಕೆ ತಾತ್ವಿಕ ನಿಲುವಿನಿಂದ ಮತ್ತು ಅಷ್ಟೇ ಸಾವಧಾನದಿಂದ ಉತ್ತರಿಸುತ್ತಿದ್ದರು ಮತ್ತು ಅದು ಒಟ್ಟಾರೆಯಾಗಿ ಸಂಘಟನೆಯ ಪ್ರಣಾಳಿಕೆಗೆ ಬದ್ಧವಾಗೇ ಇರುತ್ತಿತ್ತು.

ನಾಲ್ಕನೆಯದಾಗಿ, ಅವರ ವ್ಯಕ್ತಿತ್ವ ಪಾರದರ್ಶಕವಾಗಿತ್ತು. ಅರಾಜಕತೆ, ಸ್ವೇಚ್ಛೆ ಇವೇ ಮೊದಲಾದ ಅಶಿಸ್ತು ಸಾಹಿತಿಗಳಿಗಾಗೇ ಇದ್ದದ್ದು ಎಂದು ನಂಬಿದ ಸಾಹಿತಿಗಳ ಬಳಗದ ಸದಸ್ಯರಾಗಿರಲಿಲ್ಲ ಅವರು. ಅವರಿಗೆ ಸಂಘಟನೆಯವರು (ಹಿಂದುಗಡೆ) ಪ್ರೀತಿಯಿಂದ ‘ಸಂತ’ ಎಂದು ಕರೆಯುತ್ತಿದ್ದರು. (ಶಿಶುನಾಳ ಶರೀಫ) ಮಲೆಯ ಮಾದೇಶ್ವರ, ಸೂಫಿ ಸಂತ ಇತ್ಯಾದಿಗಳು ಸಂಘಟನೆಯಲ್ಲಿ ಇದ್ದರು!) ಅವರು ಬಂಡಾಯದ ಸಂಗತಿಗಳ ವೈಯಕ್ತಿಕ ನೋವು, ನಲಿವುಗಳಿಗೂ ಸ್ಪಂದಿಸುತ್ತಿದ್ದರು.

bandaya-sahitya-sammelana1ಸಂಘಟನೆಯ ತಾತ್ವಿಕ ಆದೇಶವೇ ಅಂತಿಮ ಸ್ವೀಕಾರ ಎಂದು ಅವರು ಅಂದುಕೊಳ್ಳುತ್ತಿದ್ದರು. ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸರಕಾರದಿಂದ ನೇಮಕ ಆದಾಗ ಈ ಪ್ರಶ್ನೆ ಮುಂದೆ ಬಂತು. ಅದು ಸ್ವಾಯತ್ತ ಸಂಸ್ಥೆಯೊಂದಕ್ಕೂ ಸರಕಾರ ಕೃಪಾ ಪೋಷಿತವಾಗಿದ್ದುದು, ಆದ್ದರಿಂದ ಆ ಸ್ಥಾನವನ್ನು ಸ್ವೀಕರಿಸಬೇಕೆ, ಬೇಡವೇ ಎಂಬುದು ಆಗ ಅವರು ಅದರ ಅಂತಿಮ ನಿರ್ಧಾರವನ್ನು ಸಂಘಟನೆಯ ತೀರ್ಮಾನಕ್ಕೇ ಬಿಟ್ಟಿದ್ದರು. ಸಂಘಟನೆ ಯಾವಾಗ ಹಿಂದಕ್ಕೆ ಕರೆಯುತ್ತದೋ ಆಗ ತಾನು ರಾಜೀನಾಮೆ ಕೊಡುವುದಾಗಿ ಬಹಿರಂಗ ಹೇಳಿಕೆ ಕೊಟ್ಟಿದ್ದರು. ಒಮ್ಮೆ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದಾಗ ಕೂಡ ಅವರು ರಾಜಿನಾಮೆ ಕೊಟ್ಟಿದ್ದ ನೆನಪು.

ಕನ್ನಡದಲ್ಲಿ ಸಾಂಸ್ಕೃತಿಕ ಸಾಹಿತ್ಯ ವಿಮರ್ಶೆಯನ್ನು ಕಟ್ಟಿ ಬೆಳೆಸುವುದರಲ್ಲಿ ಅವರು ವಿಶೇಷ ಆಸಕ್ತಿ ತೋರಿದ್ದಾರೆ. ಅದನ್ನು ನೆಲೆಗೊಳಿಸುವಲ್ಲಿ ಅವರ ಪಾಲು ವಿಶೇಷವೇ. ಬಂಡಾಯವನ್ನು ಅಂತಹ ತಾತ್ವಿಕ ನಿಲುವಿನ ಮೇಲೆ ಗಟ್ಟಿಗೊಳಿಸುವ ಉದ್ದೇಶದಿಂದಲೇ ಸಂಘಟನೆ ಆಶ್ರಯದಲ್ಲಿ ಒಂದು ಸ್ವತಂತ್ರ, ನಿಯತಕಾಲಿಕ ಪತ್ರಿಕೆಯನ್ನು ತರಬೇಕೆಂದು ಆಶಿಸಿದ್ದರು. (ಆಗಲೇ ‘ಸಂಕ್ರಮಣ’ ‘ಅನ್ವೇಷಣೆ’ ಆಸರೆಯಾಗಿದ್ದವು). ಅಂಥ ಆಶಯದ ಫಲವಾಗಿ ‘ಬಂಡಾಯ ಸಾಹಿತ್ಯ’ ದ್ವೈಮಾಸಿಕ ಹೊರಬಂತು. ಅದರ ಸಂಪಾದಕ ಹೊಣೆಯನ್ನು ಅವರೇ ಹೊತ್ತಿದ್ದರು. ಅದು ಒಂದೆರಡು ಸಂಚಿಕೆಗೇ ನಿಂತು ಹೋದುದು ಬಂಡಾಯದ ಸಂಗಾತಿಗಳ ಗಂಭೀರ ಕಾಳಜಿಯ ಕೊರತೆಯನ್ನು ತೋರುತ್ತದೆಂದು ವಿಷಾದಿಸಬೇಕಾಗಿದೆ.

ಇಂಥ ಜನಪರ ಸಂಸ್ಕೃತಿಯ ಕಾಳಜಿಯನ್ನು ಗಟ್ಟಿಗೊಳಿಸುವುದು ಮತ್ತು ಅದಕ್ಕೆ ಒಂದು ವಿಸ್ತಾರವಾದ ವಿನ್ಯಾಸವನ್ನು ಕೊಡುವ ಕನಸಿನ ಫಲವಾಗಿಯೇ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದರು. ಅಲ್ಲಿ ಅವರು ಆ ಕೆಲಸವನ್ನು ಅವಿಶ್ರಾಂತವಾಗಿ ಮಾಡಿದ್ದಾರೆ. ಮಾಡಿದ್ದೆಲ್ಲ ಪರಿಪೂರ್ಣ ಎನ್ನುವ ಅರ್ಥದಲ್ಲಿ ಹೇಳಿದ್ದಲ್ಲ ಇದು.

ಸಾಂದರ್ಭಿಕವಾದ ತುರ್ತಿನಿಂದಲೂ, ಮನುಷ್ಯ ಸಮಾಜ ಮಿತಿಯಿಂದಲೂ, ಕೆಲವು ಓರೆ ಕೋರೆಗಳು ಉಂಟಾಗಿರಬಹುದು. ಆದರೆ ಅದು ಅವರ ಬದ್ಧತೆಯನ್ನು ಪ್ರಶ್ನಿಸುವಂತಹದ್ದಲ್ಲ.

ಈ ಎಲ್ಲ ಸಂಗತಿಗಳಿಂದ ಬರಗೂರು ರಾಮಚಂದ್ರಪ್ಪ ಬಂಡಾಯದ ಗೆಳೆಯರಾಗಿ, ಬಂಡಾಯವಲ್ಲದವರಿಗೂ ಸೌಜನ್ಯ ಸಹಾನುಭೂತಿಯ ವ್ಯಕ್ತಿಯಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ.

‍ಲೇಖಕರು Admin

December 3, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This