ಇಲ್ಲಿ ಯಾರೂ ಗೆಲ್ಲಲಿಲ್ಲ…

ಗಾಳಿಬೆಳಕು

ನಟರಾಜ ಹುಳಿಯಾರ್

‘ಸೋಲು ಎನ್ನುವುದು ಎಷ್ಟು ಭಯಾನಕವಾದದ್ದು ನೋಡಿ’ ಎಂದರು ಬರಗೂರು. ಹೈದರಾಬಾದ್ನ ವಿಮಾನ ನಿಲ್ದಾಣದಲ್ಲಿ ಭಾನುವಾರ ರಾತ್ರಿ 11ಗಂಟೆಯಲ್ಲಿ ಮೂಲೆಯ ಕುಚರ್ಿಯೊಂದರಲ್ಲಿ ಒಬ್ಬರೇ ಕೂತಿದ್ದ ಮಿರಾಜುದ್ದೀನ್ಪಟೇಲ್ ಅರೆಗಳಿಗೆ ಕತ್ತೆತ್ತಿ ನಮ್ಮನ್ನು ನೋಡಿದವರೇ, ನಾವು ಗುರುತು ಹಿಡಿದೇ ಬಿಟ್ಟವೇನೋ ಎಂಬ ಅಳುಕಿನಿಂದ ಮೆಲ್ಲಗೆ ಕತ್ತು ಕೆಳಗಿಳಿಸಿ ಓರೆಯಾದರು. ಅವತ್ತು ಮಧ್ಯಾಹ್ನ ತಾನೇ ಬಂದಿದ್ದ ಚುನಾವಣಾ ಫಲಿತಾಂಶದ ಹೊರೆಹೊತ್ತ ಜೆಡಿಎಸ್ ಅಧ್ಯಕ್ಷ ಮಿರಾಜುದ್ದೀನ್ ತಮ್ಮೊಳಗೆ ಮುಳುಗಿದ್ದರು. ಅವರ ಬಳಿ ಹೋಗಿ ಏನಾದರೂ ಮಾತಾಡೋಣವೆಂದುಕೊಂಡರೂ, ಅದು ಕೂಡ ಕೃತಕವಾಗಿಬಿಡುತ್ತದೇನೋ ಎನಿಸಿ ಬರಗೂರು, ಸಂದೀಪ್ಶಾಸ್ತ್ರಿ ಹಾಗೂ ನಾನು ಸುಮ್ಮನಾದೆವು.
ಈ ಚುನಾವಣೆಯ ಫಲಿತಾಂಶ ನಮ್ಮಂಥ ಸಾಮಾನ್ಯರಿಗೇ ಸಿಡಿಲಿನಂತೆ ಎರಗಿದಂತೆ ಕಾಣತೊಡಗಿದ್ದಾಗ ಒಂದು ಪಕ್ಷದ ಅಧ್ಯಕ್ಷರಿಗೆ ಹೇಗನ್ನಿಸಿರಬಹುದು? ಆ ರಾತ್ರಿ ಸುಮಾರು 12:30ರ ಹೊತ್ತಿಗೆ ಎರಡು ನಿಮಿಷ ಮಿರಾಜುದ್ದೀನ್ಪಟೇಲ್ ಎದುರಾಗಿಯೇ ಬಿಟ್ಟರು. ‘ಸಾರಿ ಸರ್, ಇದೇನು ಹೀಗಾಗಿ ಬಿಟ್ಟಿತಲ್ಲ’ ಎಂದೆ. ಮಿರಾಜುದ್ದೀನ್ ಹುಮ್ನಾಬಾದಿನಲ್ಲಿ ಸ್ಪಧರ್ಿಸಿ ಸೋತಿದ್ದರು. `22ನೇ ತಾರೀಖಿನ ಚುನಾವಣೆಗೆ ಮುನ್ನ, 20ನೆಯ ತಾರೀಖು ರಾತ್ರಿ ಎಲ್ಲ ಬದಲಾಯಿತು. ಅಷ್ಟೊಂದು ಹೆಂಡ ಹಂಚಿದರೆ ನಮ್ಮಂಥವರು ಏನು ಮಾಡೋದು?’ ಮಿರಾಜುದ್ದೀನ್ ಎಂದರು. ಅವರು ಆ ಥರದ ಸರಿರಾತ್ರಿಯ ಹಂಚುವಿಕೆಗೆ ವಿರುದ್ಧವಾಗಿರಬಹುದು. ಆದರೆ ಅವರ ಪಕ್ಷವೂ ಎಲ್ಲೆಡೆ ಹೆಂಡ, ಹಣ ಹಂಚಿತ್ತು. ಕಾಂಗ್ರೆಸ್, ಬಿಜೆಪಿಗಳೂ ಹಂಚಿದ್ದವು.

ಬಿಜೆಪಿಯಂತೂ ಹೆಂಡ ಹಣದ ಜೊತೆಗೆ ಧರ್ಮ, ಜಾತಿಯನ್ನೂ ಭಯಾನಕವಾಗಿಯೇ ಹಂಚಿತ್ತು. ಆ ನಂತರ ಕುದುರೆ ಖರೀದಿಯ ಮೂಲಕ ಆ ಪಕ್ಷ ಅಧಿಕಾರಕ್ಕೆ ಬಂದಿದೆ. ಕನರ್ಾಟಕದ ರಾಜಕಾರಣದಲ್ಲಿ ಜೆಡಿಎಸ್, ಬಿಜೆಪಿ ಹಿಂಬಾಗಿಲಿನಿಂದ, ರಾತ್ರೋರಾತ್ರಿ ಸರ್ಕಸ್ ಮಾಡಿ ಅಧಿಕಾರಕ್ಕೆ ಬಂದ ಮೇಲೆ ಕನರ್ಾಟಕದ ರಾಜಕಾರಣ ಮುಟ್ಟಿದ ರಸಾತಳ ಇದಿಗ 110ಸೀಟು ಪಡೆದ ಪಕ್ಷ ಅಧಿಕಾರಕ್ಕಾಗಿ ನಡೆಸಿದ ಲಜ್ಜೆಗೇಡಿ ಖರೀದಿಯಲ್ಲಿ ತನ್ನ ಅತ್ಯಂತ ಕೆಳಮಟ್ಟ ಮುಟ್ಟಿದೆ. ಇನ್ನುಮುಂದೆ ಕನರ್ಾಟಕದ ಮೂರು ಮುಖ್ಯ ಪಕ್ಷಗಳು ಮೌಲ್ಯ, ಸತ್ಯ ಎಂಬ  ಶಬ್ಧಗಳನ್ನು ಬಳಸಿದರೆ  ಜನ ನಗುತ್ತಾರೆ  ಹಾಗೂ ಉಗಿಯುತ್ತಾರೆ ಎಂಬುದು ಎಲ್ಲ ಪಕ್ಷಗಳಿಗೂ ನೆನಪಿರಲಿ. ಆದ್ದರಿಂದಲೇ ಯಡಿಯೂರಪ್ಪ 40ಸಾವಿರ ಮತಗಳ ಅಂತರದಿಂದ ಗೆದ್ದರೂ, ಕುಮಾರಸ್ವಾಮಿ ಮೂವತ್ತು ಸಾವಿರ ಅಂತರದಿಂದ ಗೆದ್ದರೂ ಇವರ್ಯಾರೂ ನಿಜಕ್ಕೂ ಗೆದ್ದಂತೆ ಅನ್ನಿಸುತ್ತಿಲ್ಲ.
ಮೊನ್ನೆ ಜೆಡಿಎಸ್ ಶಾಸಕರಿಗೂ ಖರೀದಿಯ ಗಾಳ ಎಸೆಯಲಾಗಿದ್ದು ಕೂಡ ಎಲ್ಲರಿಗೂ ಗೊತ್ತಿದೆ. ಹತ್ತು ಶಾಸಕರು ಜೆಡಿಎಸ್ಗೆ ರಾಜಿನಾಮೆ ನೀಡಿದರೆ ತಲಾ ನೂರು ಕೋಟಿ ಕೊಡುವ ಮಾತಾಗಿತ್ತು ಎಂಬ ಸುದ್ದಿ ಕೂಡ ಸುಳ್ಳಿರಲಿಕ್ಕಿಲ್ಲ. ದುಡ್ಡು ಚೆಲ್ಲಿ ದುಡ್ಡು ಬೆಳೆವ ನೀಚ ರಾಜಕಾರಣದಲ್ಲಿ ಯಾವುದೂ ಉತ್ಪ್ರೇಕ್ಷೆ ಎನಿಸುವುದಿಲ್ಲವೇನೋ. ಇದೆಲ್ಲದರ ನಡುವೆ ಜೆಡಿಎಸ್ ಶಾಸಕರ ‘ಬಾಡಿಲಾಂಗ್ವೇಜ್’ ಕರುಣಾಜನಕವಾಗಿತ್ತು. ಚುನಾವಣೆ ಗೆದ್ದಿರುವ ಶಾಸಕರು ಕೂಡ ಸೋತು ಕಂಗೆಟ್ಟವರಂತೆ, ಬರೇ ಶಾಸಕರಾಗೇ ತಮ್ಮ ಕ್ಷೇತ್ರಕ್ಕೆ ಕೆಲಸ ಮಾಡುವುದು ಬೇಕಾದಷ್ಟಿದೆ ಎಂಬುದನ್ನು ಮರೆತವರಂತೆ, ಇನ್ನೆಂದೂ ಪರೀಕ್ಷೆ ಕಟ್ಟಲಾಗದ ವಿದ್ಯಾಥರ್ಿಗಳಂತೆ ಅಡ್ಡಾಡುತ್ತಿದ್ದರು!
ಇವರಲ್ಲಿ ಕೆಲವರು ಈ ಹಿಂದೆ ಧರಂಸಿಂಗ್ಗೆ ಕೈಕೊಟ್ಟು ಕುಮಾರಸ್ವಾಮಿಯವರ ಹಿಂದೆ ಹೋದಾಗ ಅವರ ಮುಖಗಳು ಹೇಗೆ ಹೊಳೆಯುತ್ತಿದ್ದವು ಎಂಬುದನ್ನು ನೆನೆಸಿಕೊಂಡರೆ, ಇವತ್ತು ಇಳಿಬಿದ್ದ ಮುಖಗಳ ಬಗ್ಗೆ ಜನರಲ್ಲಿ ಅಷ್ಟೇನೂ ಕನಿಕರ ಹುಟ್ಟಲಾರದು. ಹಾಗೆಯೇ ಇವರೆಲ್ಲ ಕುಮಾರಸ್ವಾಮಿ, ದೇವೇಗೌಡರು ಹೇಳಿದ್ದಕ್ಕೆಲ್ಲ ಹೂಂಗುಟ್ಟಿ ತಂದುಕೊಂಡ ಸ್ಥಿತಿ ಇದು ಎಂಬ ಬಗ್ಗೆ ಯಾರಿಗೂ ಅನುಮಾನವಿರಲಾರದು.


ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಮುಖ್ಯಮಂತ್ರಿಯಾದಾಗ ಹಲವರು ಅದನ್ನು ಅಪ್ಪ-ಮಕ್ಕಳ ನಾಟಕ ಎಂದು ಜರೆದಿದ್ದರಲ್ಲಿ ಅರ್ಧ ಸತ್ಯ, ಅರ್ಧ ನಿಜ ಇರಬಹುದು. ಆದರೆ ಬಿಜೆಪಿಯಂಥಹ ಪಕ್ಷ ಸ್ಥಳೀಯ ಪಕ್ಷಗಳ ಹೆಗಲೇರಿ ಅವನ್ನು ಮೆಲ್ಲಗೆ ನುಂಗುತ್ತದೆ ಎಂಬುದು ಅನುಭವಶಾಲಿ ದೇವೇಗೌಡರಿಗೆ ಖಚಿತವಾಗಿ ಗೊತ್ತಿತ್ತು. ಅದನ್ನು ಅವರು ಆಡಿಯೂ ತೋರಿಸಿದ್ದರು. ಬಿಜೆಪಿ ಕಳೆದ ಚುನಾವಣೆಯಲ್ಲಿ ಜೆಡಿಯು ಜೊತೆ ಮೈತ್ರಿ ಮಾಡಿಕೊಂಡು ಉತ್ತರ ಕನರ್ಾಟಕದ ಹಲವೆಡೆ ವೋಟುಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು; ಪರಿಣಾಮವಾಗಿ ಈ ಸಲ ಜೆಡಿಯು ಪಕ್ಷದ ತಳಹದಿಯೇ ನಾಶವಾಗಿ ಅದು ಒಂದು ಸೀಟನ್ನು ಕೂಡ ಪಡೆಯಲಾಗಲಿಲ್ಲ. ಜೆಡಿಯುನ ಉತ್ತಮ ನಾಯಕರಾದ ಸೋಮಶೇಖರ್, ಮಾಧುಸ್ವಾಮಿ ಥರದವರು ಕೂಡ ಗೆಲ್ಲಲಾಗಲಿಲ್ಲ. ಎಲ್ಲ ಒಳ್ಳೆಯ ನಾಯಕರನ್ನೂ ಪಕ್ಷದಿಂದ ಓಡಿಸಿ ಗೆಲ್ಲಬಲ್ಲೆನೆಂಬ ಜೆಡಿಎಸ್ ಪಕ್ಷದ ಠೇಂಕಾರದ ದೌರ್ಬಲ್ಯವನ್ನು ಬಿಜೆಪಿ, ಕಾಂಗ್ರೆಸ್ ಎರಡೂ ಸಮರ್ಥವಾಗಿಯೇ ಬಂಡವಾಳವಾಗಿಸಿಕೊಂಡವು. ಕುಮಾರಸ್ವಾಮಿಯವರ ಅಪಕ್ವತೆ ಮತ್ತು ಅಪ್ರಬುದ್ಧತೆಯ ಜೊತೆಗೆ ದೇವೇಗೌಡರ ಲೆಕ್ಕಾಚಾರಗಳೂ ಉಲ್ಟಾ ಹೊಡೆದವು.
ಮಾಯಾವತಿ ಹಾಗೂ ಮುಲಾಯಂ ಅನುಭವದಿಂದ ದೇವೇಗೌಡ ಹಾಗೂ ಕುಮಾರಸ್ವಾಮಿ ಯಾವ ಪಾಠವನ್ನೂ ಕಲಿಯಲೆತ್ನಿಸಲಿಲ್ಲ. ಕೆಲಕಾಲ ಬಿಜೆಪಿಯ ಜೊತೆ ಸರಸವಾಡಿದ ಉತ್ತರ ಪ್ರದೇಶದ ಮಾಯಾವತಿ ಹಾಗೂ ಮುಲಾಯಂಸಿಂಗ್ ಕ್ರಮೇಣ ಬಿಜೆಪಿಯಿಂದ ದೂರವಾದರು; ಹಾಗೆ ದೂರವಾದದ್ದರಿಂದ ಒಬ್ಬರ ನಂತರ ಇನ್ನೊಬ್ಬರು ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿದು ಆಳುತ್ತಿದ್ದಾರೆ ಎಂಬುದನ್ನು ಜೆಡಿಎಸ್ನಂಥ ಪ್ರಾದೇಶಿಕ ಪಕ್ಷಗಳು ಸರಿಯಾಗಿ ಅಧ್ಯಯನ ಮಾಡಲೇ ಇಲ್ಲ. ‘ರಾಷ್ಟ್ರೀಯ’ ಎನ್ನಲಾಗುವ ಪಕ್ಷಗಳು ಯಾವಾಗಲೂ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳನ್ನು ನುಂಗುತ್ತಲೇ ಬದುಕಲೆತ್ನಿಸುತ್ತವೆ. ಮಾಯಾವತಿಯವರು ತೋರುವ ನಿರಂತರ ಕಾಂಗ್ರೆಸ್ ವಿರೋಧಿ ನಿಲುವಿಗೆ ಈ ತಿಳುವಳಿಕೆಯೇ ಮುಖ್ಯ ಕಾರಣ. ಮುಲಾಯಂಸಿಂಗ್ ಈಚೆಗೆ ಕಾಂಗ್ರೆಸ್ ಜೊತೆ ಸಣ್ಣ ಸರಸ ಆರಂಭಿಸಿದ್ದಾರೆ, ನಿಜ. ಆದರೆ ರಾಷ್ಟ್ರೀಯ ಪಕ್ಷಗಳ ಧೃತರಾಷ್ಟ್ರಾಲಿಂಗನದಲ್ಲಿ ತಮ್ಮಂಥ ಪಕ್ಷಗಳ ಪಕ್ಕೆಲುಬುಗಳು ಹೇಗೆ ಮುರಿಯುತ್ತವೆ ಎಂಬುದು ಮುಲಾಯಂಗೆ ಗೊತ್ತಿದೆ.
ಬಿಹಾರದ ನಿತೀಶ್ಕುಮಾರ್ ಕೂಡ ಈ ಅರಿವಿನಿಂದಲೇ ಈಚೆಗೆ ಬಿಜೆಪಿಯ ಭಿನ್ನಮತೀಯ ಚಟುವಟಿಕೆಗೆ ನೀರೆರೆದು ತಮ್ಮ ಜೆಡಿಯುನ ಎಲ್ಲೆ ವಿಸ್ತರಿಕೊಳ್ಳಲೆತ್ನಿಸಿದ್ದಾರೆ. ತೆಲುಗುದೇಶಂನ ಚಂದ್ರಬಾಬುನಾಯ್ಡು ರಾಷ್ಟ್ರೀಯ ಪಕ್ಷಗಳ ಸಹವಾಸ ಮಾಡಿ ತಮ್ಮ ವೋಟ್ ಬೇಸ್ ಕಳೆದುಕೊಂಡು ಈಗ ಮತ್ತೆ ಸ್ವತಂತ್ರವಾಗಿ ಪಕ್ಷ ಕಟ್ಟಲಾರಂಭಿಸಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ, ಎಐಎಡಿಎಂಕೆಯಂಥ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್, ಬಿಜೆಪಿಗಳ ಜೊತೆ ಸರಸವಾಡಿದರೂ, ರಾಜ್ಯದ ವಿಧಾನಸಭಾ ಕ್ಷೇತ್ರಗಳ ಎಂಟು ಹತ್ತು ಸೀಟುಗಳನ್ನಷ್ಟೇ ಚೌಕಾಶಿ ಮೂಲಕ ದಯಪಾಲಿಸುತ್ತಾ ತಂತಮ್ಮ ಪ್ರಾಬಲ್ಯ ಉಳಿಸಿಕೊಂಡೇ ಬಂದಿದ್ದಾರೆ. ಒರಿಸ್ಸಾದಲ್ಲಿ ಬಿಜುಜನತಾದಳ ಕೂಡ ಹೆಚ್ಚು ಕಡಿಮೆ ಇದೇ ಮಾದರಿ ಅನುಸರಿಸಿಕೊಂಡು ಬಂದಿದೆ. ಇದರಿಂದಾಗಿ ಮೇಲೆ ಹೇಳಿದ ಅನೇಕ ರಾಜ್ಯಗಳಲ್ಲಿ ಪ್ರಚ್ಛನ್ನ ಕೋಮುವಾದಿಯಲ್ಲದ ಹಾಗೂ ತೀರಾ ಜಡವಲ್ಲದ ಪ್ರಾದೇಶಿಕ ಎನ್ನಬಹುದಾದ ಪಕ್ಷಗಳು ಅಧಿಕಾರ ಉಳಿಸಿಕೊಂಡು ಬಂದಿವೆ;
ಅವು ಒಮ್ಮೆ ಅಧಿಕಾರ ಕಳೆದುಕೊಂಡರೂ ಮತ್ತೆ ಅಧಿಕಾರ ಪಡೆಯುತ್ತಾ ಬಂದಿವೆ. ಆದರೆ ಯಾವುದೇ ರಾಜ್ಯದಲ್ಲಿ ಎರಡೇ ರಾಷ್ಟ್ರೀಯ ಪಕ್ಷಗಳು ಪ್ರಬಲವಾಗಲು ಬಿಟ್ಟರೆ ಆಯಾ ಪ್ರದೇಶಗಳಿಗೆ ಸೀಮಿತವಾದ, ‘ಪ್ರಾದೇಶಿಕ’ ಎನ್ನಬಹುದಾದ ಪಕ್ಷಗಳು ಬೆಳೆಯಲಾರವು. ಆಗ ಜನರ ಆಯ್ಕೆಗಳು ಸೀಮಿತವಾಗತೊಡಗುತ್ತವೆ. ದೂರದ ದಿಲ್ಲಿಯಿಂದ ಆಳಿಸಿಕೊಳ್ಳದೆ, ಸ್ಥಳೀಯವಾದ ಅಧಿಕಾರ ಕೇಂದ್ರಗಳುಳ್ಳ ಈ ಬಗೆಯ ಪಕ್ಷಗಳು ಹಲವು ಸಲ ಯಶಸ್ವಿಯೂ ಆಗಿವೆ. ಜನತಾಪಕ್ಷ ಕ್ರಮೇಣ ಜನತಾದಳ(ಯು), ಜನತಾದಳ(ಎಸ್), ಬಿಜುಜನತಾದಳಗಳಾಗಿ ಒಡೆದುಹೋಗಿ ಅವೆಲ್ಲ ಹೆಚ್ಚು ಕಡಿಮೆ ಪ್ರಾದೇಶಿಕ ಪಕ್ಷಗಳಾಗಿವೆಯಷ್ಟೆ. ಅಂಥ ಪ್ರಾದೇಶಿಕ ಪಕ್ಷವನ್ನು ಗಟ್ಟಿಯಾಗಿಸುವ ಒಂದು ಅವಕಾಶವನ್ನು ಜೆಡಿಎಸ್ ಕನರ್ಾಟಕದಲ್ಲಿ ಕೈಯಾರೆ ಕೊಲೆ ಮಾಡಿದೆ.
ಇಂಥ ಜೆಡಿಎಸ್ ಇವತ್ತು ಬಿಜೆಪಿ ತನ್ನನ್ನು ಒಡೆಯುತ್ತಿದೆ ಎಂದು  ಘೀಳಿಡುತ್ತಿದೆ; ಎರಡು ವರ್ಷಗಳ ಕೆಳಗೆ ಇದೇ ಜೆಡಿಎಸ್ ಕಾಂಗ್ರೆಸ್ನ ಡಿ.ಕೆ.ಶಿವಕುಮಾರ್ ನಮ್ಮ ಪಕ್ಷವನ್ನು ಒಡೆಯುತ್ತಿದ್ದಾರೆ ಎಂದು ಚೀರುತ್ತಾ ಬಿಜೆಪಿಯ ಜೊತೆ ರೆಸಾಟರ್್ ರಾಜಕಾರಣದಲ್ಲಿ ತೊಡಗಿತು. ಹೀಗಾಗಿ ಕನರ್ಾಟಕದಲ್ಲಿ ಮೂರು ಪಕ್ಷಗಳ ಉತ್ತಮ ವ್ಯವಸ್ಥೆಯ ಸಾಧ್ಯತೆಯನ್ನು ಅದು ತಂತಾನೇ ಹಾಳುಮಾಡಿಕೊಂಡಿತು! ಯಾವುದೇ ರಾಜ್ಯಕ್ಕೆ ಟೂ ಪಾಟರ್ಿ ಸಿಸ್ಟಮ್ ಸ್ಥಿರತೆಯನ್ನು ಕೊಡುವಂತೆ ಕೆಲವರಿಗೆ ಕಾಣಬಹುದು. ಆದರೆ ಹೆಚ್ಚು ಪಕ್ಷಗಳ ಪರ್ಯಾಯ ಇಲ್ಲದ ರಾಜ್ಯದಲ್ಲಿ ಬರಬರುತ್ತಾ ಎರಡು ಪಕ್ಷಗಳ ಸವರ್ಾಧಿಕಾರ ಭೀಕರವಾಗತೊಡಗುತ್ತದೆ. ಜನರಿಗೆ ಹೆಚ್ಚು ಪರ್ಯಾಯಗಳೇ ಇಲ್ಲವಾಗತೊಡಗುತ್ತವೆ.
ಇವತ್ತು 110ಸೀಟುಗಳನ್ನು ಪಡೆದ ಬಿಜೆಪಿ ಬೀಗುತ್ತಿದ್ದರೆ, ಎಂಬತ್ತು ಸೀಟು ಪಡೆದ ಕಾಂಗ್ರೆಸ್ ಕೈ ಹಿಸುಕಿಕೊಳ್ಳುತ್ತಿದೆ. ಆದರೆ ತನ್ನ ಪರವಾಗಿ ಯಾವ ಅಲೆಯೂ ಇಲ್ಲದ ಕಾಂಗ್ರೆಸ್ 80ಸೀಟು ಪಡೆದದ್ದಕ್ಕೆ ಜನರಿಗೆ ಕೃತಜ್ಞವಾಗಿರಬೇಕು. ಕಾಂಗ್ರೆಸ್ ಪಕ್ಷ ಚುನಾವಣೆಯ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷದ ಠೇಂಕಾರ ತೋರದೆ, ಬಿಎಸ್ಪಿ, ಎಸ್ಪಿ ಪಕ್ಷಗಳೊಂದಿಗೆ ಕೊಂಚ ತಗ್ಗಿ ಹೊಂದಾಣಿಕೆ ಮಾಡಿಕೊಂಡಿದ್ದರೆ ಅದು ಇನ್ನೂ ಉತ್ತಮ ಸ್ಥಿತಿಯಲ್ಲಿರುತ್ತಿತ್ತು; ಅಥವಾ ಅದೂ ಕೂಡ ಇವತ್ತು ಕುದುರೆ ಖರೀದಿ ಅಥವಾ ಜೆಡಿಎಸ್ ವಿಭಜನೆಯ ಆಟದಲ್ಲಿ ತೊಡಗುತ್ತಿತ್ತೇನೋ!
ಈ ಸಾರಿ ಜನತೆಯ ತೀಪರ್ು ವಿಶಿಷ್ಟವಾಗಿದೆ: ಒಂದು ಪಕ್ಷವನ್ನು ಸಿಂಗಲ್ ಲಾಜರ್ೆಸ್ಟ್ ಪಾಟರ್ಿಯಾಗಿ ಆಯ್ಕೆ ಮಾಡಿರುವ ಜನ ಇನ್ನೊಂದಕ್ಕೆ 80 ಸೀಟು ಹಾಗೂ ಮತ್ತೊಂದಕ್ಕೆ 29 ಸೀಟು ಕೊಟ್ಟಿದ್ದಾರೆ. ಇಂಥ ಸಂದರ್ಭದಲ್ಲಿ 109 ಸೀಟುಗಳನ್ನುಳ್ಳ ವಿರೋಧ ಪಕ್ಷ ಆಡಳಿತ ಪಕ್ಷಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಬಲ್ಲದು. ಈ ಪ್ರಜ್ಞೆ ಎರಡೂ ಈ ಪಕ್ಷಗಳಿಗಿದ್ದರೆ ಒಳಿತು. ಹತ್ತಾರು ವರ್ಷಕಾಲ ಉತ್ತಮ ಹಾಗೂ ಪರಿಣಾಮಕಾರಿ, ವಿರೋಧ ಪಕ್ಷದ ನಾಯಕರಾಗಿದ್ದರಿಂದಲೇ ಯಡಿಯೂರಪ್ಪ ಇವತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಸಲೀಸಾಗಿ ಏರಿದ್ದಾರೆ ಎಂಬ ಸತ್ಯವನ್ನು ಇವತ್ತಿನ ವಿರೋಧ ಪಕ್ಷಗಳ ನಾಯಕರು ಅರಿತರೆ ಒಳ್ಳೆಯದು. ಯಾಕೆಂದರೆ, ಇನ್ನು ಹನ್ನೊಂದು ತಿಂಗಳೊಳಗೆ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಈ ವಿರೋಧ ಪಕ್ಷಗಳು ನಿರ್ವಹಿಸಬೇಕಾದ ದೊಡ್ಡ ಹೊಣೆ ಇದೆ ಎಂಬ ಎಚ್ಚರ ಹಾಗೂ ನಿರೀಕ್ಷೆ ಈ ಪಕ್ಷಗಳಿಗೆ ಇದ್ದರೆ ಮಾತ್ರ ಅವು ಹೆಚ್ಚು ಜಾಗರೂಕತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಬಹುದೆಂದು ಕಾಣುತ್ತದೆ.

 

‍ಲೇಖಕರು avadhi

May 31, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

2 ಪ್ರತಿಕ್ರಿಯೆಗಳು

 1. ಸಿದ್ದಮುಖಿ

  ನಿಮ್ಮ ಬರವಣಿಗೆಗಳು ಬೇಗ ಬೇಗ ಅಫ್ ಡೇಟ್ ಆಗಿ ಬಂದರೆ ತುಂಬಾ ಒಳ್ಳೆಯದು. ಗಾಳಿಯೂ ಬೆಳಕೂ ನೀರೂ ಬೆಂಕಿಯೂ
  ಬೇಕು. ಗಾಳಿ ಜೋರಾಗಿ ಬೀಸಲಿ ಉಸುರುಗಟ್ಟಿದ ವಾತಾವರಣ ಕೊಚ್ಚಿ ಹೋಗಲಿ, ಬೆಳಕು ಬೀಸಾಗಿ ಬೀಳಲಿ
  ಕತ್ತಲೆ ಉರುವೆ ಇಲ್ಲದಂತಾಗಲಿ, ಬರಲಿ ವಿಜ್ಞಾನ ಬುದ್ದಿ.

  ಪ್ರತಿಕ್ರಿಯೆ
 2. Devu

  ಜೆಡಿಎಸ್‌ನಲ್ಲಿ ಇದ್ದ ಮೆರಾಜುದ್ದೀನ್ ಅವರು ಕಾಂಗ್ರೆಸ್‌ ಸಂಸ್ಕೃತಿಯ ರಾಜಕಾರಣದಿಂದ ಹೊರತಾಗಿದ್ದವರು. ಅವರ ಪಕ್ಷ ರಾಜ್ಯದ ಬೇರೆ ಕಡೆಗಳಲ್ಲಿ ಹೆಂಡ- ಹಣ ಹಂಚಿ ಚುನಾವಣೆ ನಡೆಸಿರಬಹುದು. ಮೆರಾಜ್‌ ಪ್ರೀತಿ- ವಿಶ್ವಾಸ- ಸಹಬಾಳ್ವೆ ಹಂಚಲು ಹೋದರು. ಬಲಶಾಲಿಗಳು ಮೇಲುಗೈ ಹೊಂದಿದರು. ಮೆರಾಜ್‌ ಅವರ ಸೋಲು ಕೇವಲ ಅವರದ್ದಾಗಿರಲಿಲ್ಲ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: