ಸರೋಜಿನಿ ಪಡಸಲಗಿ ಸರಣಿ 4: ಜೋರಾಗಿ ಬೆವೆತೆ ಆ ಬೆಳಗಿನ ಚಳಿಯಲ್ಲೂ..

ಜೋರಾಗಿ ಬೆವೆತೆ ಆ ಬೆಳಗಿನ ಚಳಿಯಲ್ಲೂ

|ಕಳೆದ ಸಂಚಿಕೆಯಿಂದ|

ಹಳ್ಳಿ ಜನರ ಮುಗ್ಧತೆ, ಸರಳತೆ  ಮನ ತಟ್ಟುತ್ತಿದ್ದದ್ದಂತೂ ನಿಜವೇ ನಿಜ. ಈ ಸರಳತೆ  ಎಲ್ಲರಲ್ಲೂ ಬಂದರೆ  ಹೇಗಿದ್ದೀತು ಅಂತ  ಯಾವಾಗಲೂ ಯೋಚಿಸುತ್ತಿದ್ದೆ. ಯಾವ ಸೌಲಭ್ಯಗಳೂ ಲಭ್ಯವಿಲ್ಲದಿರುವಾಗಿನ  ಅಭಾವ ವೈರಾಗ್ಯದ ಪ್ರಭಾವವೋ ಏನೋ! ಮಕ್ಕಳ ಸಲುವಾಗಿಯಾದರೂ  ಹೇಗೋ ಅನುವು  ಮಾಡಿಕೊಂಡು 2-3 ವಾರಕ್ಕೊಮ್ಮೆ ಹುಬ್ಬಳ್ಳಿಗೆ ಒಂದು 5-6 ಗಂಟೆ ಕಾಲ ಹೋಗಿ ಬರುತ್ತಿದ್ದೆವು, ಸಾಧ್ಯವಾದಾಗ ಆಗಲೂ ಇನ್ನೊಬ್ಬ ಡಾಕ್ಟರ್ ಗೆ ಜವಾಬ್ದಾರಿ ವಹಿಸಿದ್ದರೂ ಸುರೇಶ ಅವರ ಲಕ್ಷ್ಯ ಎಲ್ಲಾ ಆ ಪೇಷಂಟ್, ಆಸ್ಪತ್ರೆ ಇವುಗಳ ಸುತ್ತಲೇ ಇರೋದು.

ಆಗ ಮೊಬೈಲ್ ಫೋನ್ ಸೌಲಭ್ಯ ಇರಲಿಲ್ಲ ಇನ್ನೂ. ಒಂದೊಂದು ಸಲ ಜೋರು ಸಿಟ್ಟು ಬರೋದು. ಆದರೆ ದಿನ ಬೆಳಗೆದ್ದು ಅದೇ  ವಾತಾವರಣದಲ್ಲಿ ಇರುತ್ತಿದ್ದ ನನಗೂ ಏನೋ ಒಂಥರಾ ಬೇಚೈನ  ಇರುತ್ತಿತ್ತು. ಆದರೆ ಮಕ್ಕಳಿಗೂ ಸ್ವಲ್ಪ ಬದಲಾವಣೆ ಬೇಕಲ್ಲಾ. ಅಲ್ಲಿ ಯಾವುದೇ ಸಿನಿಮಾ ಥೀಯೇಟರ್ ವಗೈರೆ  ಇರಲಿಲ್ಲ. ಅದರಲ್ಲೇ ಇಷ್ಟೊಂದು ಮುಳುಗಿ ಹೋಗಿದ್ದ ನನಗೂ ಗಾಬರಿ ಬೀಳಿಸುವ ಘಟನೆಗಳು  ಆಗಾಗ ಘಟಿಸುತ್ತಲೇ ಇದ್ವು ಹಳ್ಳೀ ಜನರ ಸರಳತೆ ಮುಗ್ಧತೆಗೆ ಕಪ್ಪು ಚುಕ್ಕೆಯಂತೆ! ಇಲ್ಲಿ ಒಂದು ಘಟನೆ ಹೇಳ್ತೀನಿ.

ವೈದ್ಯಾಧಿಕಾರಿ  ಜೊತೆಗೆ  ಆಡಳಿತಾಧಿಕಾರಿ ಕೂಡಾ  ಆಗಿದ್ದುದರಿಂದ ನನ್ನ ಪತಿಗೆ ಧಾರವಾಡ  D.H.O (ಜಿಲ್ಲಾ ಆರೋಗ್ಯಾಧಿಕಾರಿ ಆಫೀಸ್) ಆಫೀಸ್ ನಲ್ಲಿ  ಮೀಟಿಂಗ್ ‌ಗೆ  ಹೋಗಬೇಕಾಗಿ ಬರ್ತಿತ್ತು. ರಸ್ತೆ ವ್ಯವಸ್ಥೆ ಸರಿ ಇಲ್ಲದ್ರಿಂದ  ಬರೋದು ಲೇಟಾಗೋದು ಒಂದೊಂದು ಸಲ. ಅಲ್ಲೇ ಬಿಡೋದು ತಡ  ಆಗೋ ಹಾಗಿದ್ರೆ ಅಲ್ಲೇ ಉಳಿಯೋ ಸಂದರ್ಭಗಳೂ ಬರ್ತಾ ಇತ್ತು.

ಸವಣೂರಿನಲ್ಲಿ ಇರೋ ನನ್ನ ದೊಡ್ಡ ಭಾವನವರ ಆರೋಗ್ಯ ಸ್ಥಿತಿ ಚೆನ್ನಾಗಿರಲಿಲ್ಲ. ಹೀಗಾಗಿ ಅಲ್ಲಿ ಹೋಗೋ ಪ್ರಸಂಗ ಬರ್ತಿತ್ತು. ಎಲ್ಲೇ ಹೋಗಿರಲಿ ಅವರು ಬರೋ ವರೆಗೂ ನನಗೆ ಜಾಗರಣೆ  ಖಾತ್ರಿ. ಬೆಡ್ ರೂಂ ಗೆ ಹೊಂದಿದಂತಿದ್ದ ಡೈನಿಂಗ್ ಹಾಲ್ ನಲ್ಲಿ ನನ್ನ ಶಯನ ಆಗ, ಮಕ್ಕಳನ್ನು ರೂಂ ನಲ್ಲಿ ಮಲಗಿಸಿ. ಒಂದು ರಾಶಿ  ಪುಸ್ತಕ, ಒಂದು ಲ್ಯಾಟಿನ್ ನನ್ನ ಪಕ್ಕ. ಎಲ್ಲಾ ಲೈಟ್ಸ್ ಆಫ್! 

ಯಾರಾದರೂ ಕಿಟಕೀಲಿಣುಕಿದ್ರೂ ಒಳಗಿನದು ಏನೂ ಕಾಣಬಾರದು ಅವರಿಗೆ ಎಂಬ ಮುನ್ನೆಚ್ಚರಿಕೆ ಕ್ರಮ ಇದು! ಆದರೆ ಮುಂಬಾಗಿಲ ಮುಂದಿನ ಲೈಟ್ ಕಾಯಂ ಉರೀತಿತ್ತು. ಒಂದೇ ಮಾತಿನಲ್ಲಿ ಹೇಳುವುದಾದರೆ ಅವರು ಊರಿನಲ್ಲಿಲ್ಲದಾಗ ರಾತ್ರಿ ನಿದ್ದೆ ನನಗೆ  ಪೂರಾ ಮರೆತ  ಲೆಕ್ಕ ಆಗಿತ್ತು. ಬಹುಶಃ ಈಗಲೂ ಅದೇ ರೂಢಿ ಮುಂದುವರೆದ ‌ಹಾಗಿದೆ ಅನಕೋತೀನಿ ನಾ.

ನಮ್ಮ ದೊಡ್ಡ  ಭಾವನವರ  ಆರೋಗ್ಯ ಬಹಳೇ  ಕೆಡ್ತಾ  ಬಂತು. ಹೀಗಾಗಿ ದಿನ ಬಿಟ್ಟು ದಿನ ಆಸ್ಪತ್ರೆ ಕೆಲಸ  ಮುಗಿಸಿ ಸವಣೂರಿಗೆ ಹೋಗಿ ಬರೋರು  ಸ್ಕೂಟರ್ ಮೇಲೆ. ಒಂದೆರಡು ತಾಸು ಅಲ್ಲಿದ್ದು  ಅವರ ಆರೋಗ್ಯ ಸ್ಥಿತಿ ನೋಡಿಕೊಂಡು ಬರ್ತಿದ್ರು. ಒಂದು ಸಲ ಹೀಗೇ ಹೋದಾಗ  ಅವರ ಆರೋಗ್ಯ ತುಂಬಾ ಏರುಪೇರಾಗಿತ್ತು, ಚಿಂತಾಜನಕ ಅನ್ನೋ ಅಷ್ಟು. ಹೀಗಾಗಿ ನನ್ನ ಪತಿ ಅಲ್ಲಿಯೇ  ಉಳಿಯಬೇಕಾಯ್ತು. ಹೋಗುವಾಗ ಸೂಕ್ಷ್ಮವಾಗಿ  ಹೇಳಿ ಹೋಗಿದ್ರು.ಅವರು ಊರಲ್ಲಿ ಇಲ್ಲ ಅಂದ್ರೆ ನಾನು ರಾತ್ರಿ ಪೂರ್ತಿ ಎಚ್ಚರಾನೇ ಮೇಲೆ ಹೇಳಿದಂತೆ.

ಮಕ್ಕಳನ್ನು ಮಲಗಿಸಿ ನಾನು ಯಥಾಪ್ರಕಾರ ಡೈನಿಂಗ್ ಹಾಲ್ ನಲ್ಲಿ ಚಾಪೆ ಹಾಸಿ ಒಂದು ಲ್ಯಾಟಿನ್ ಹಚ್ಚಿಟ್ಟುಕೊಂಡು , ಲೈಟ್ಸ್ ಎಲ್ಲಾ ಆರಿಸಿ ಪುಸ್ತಕ ರಾಶಿಯ ಪಕ್ಕದಲ್ಲಿ ನನ್ನ ಓದಿನಲ್ಲಿ ತಲ್ಲೀನಳಾಗಿದ್ದೆ. ಕ್ವಾರ್ಟರ್ಸ್ ತುಂಬ ದೊಡ್ಡದಾಗಿತ್ತು ಅದು. ಎಲ್ಲಾ ಕಡೆಯ ಬಾಗಿಲುಗಳನ್ನು ಬಂದು ಮಾಡಿ  ನನ್ನ ಓದು ನಡೆದಿತ್ತು ಆ ಹಾಲ್ ನಲ್ಲಿ. ವಂಶವೃಕ್ಷದ ಕಾತ್ಯಾಯಿನಿ ಯಲ್ಲಿ ಮುಳುಗಿ  ಹೋಗಿದ್ದೆ.

ಇದ್ದಕ್ಕಿದ್ದಂತೆ ಕಾಲಿಂಗ್ ಬೆಲ್ ಸದ್ದಾಯಿತು. ಗಡಿಯಾರ  ನೋಡಿದೆ – ಮಧ್ಯರಾತ್ರಿ 1.30. ಅದೇನು ಹೊಸದಲ್ಲ ನನಗೆ. ರಾತ್ರಿ ಪೂರ್ತಿ ಕಣ್ತುಂಬ ನಿದ್ದೆ ಮಾಡೋದು ಅಪರೂಪವೇ ಆಗಿತ್ತು. ನನ್ನ ಪತಿ ಮಧ್ಯರಾತ್ರಿ ಇರಲಿ, ಬೆಳಗಿನ  3-4 ಗಂಟೆ  ಇರಲಿ ಹಾಸ್ಪಿಟಲ್ ಗೆ ಓಡಾಡೋದು ಇದ್ದೇ ಇರುತಿತ್ತು.

ನಾ ಎದ್ದು ಬಾಗಿಲು ಹಾಕಿ ಕೊಳ್ಳೋದು, ತೆಗೆಯೋದು  ನಡೆದೇ ಇರ್ತಿತ್ತು. ನಾ ಹೊರಗಿನ  ಕೀಲಿ ಹಾಕೊಂಡು ಹೋಗ್ತೀನಿ‌ ಅಂತ ಅಂದ್ರೂ  ಅದು ನನಗೆ ಸರಿ  ಹೋಗ್ತಿರಲಿಲ್ಲ. ಸರಿ ಈಗ  ಮತ್ತೆ ಆ ಘಟನೆಯತ್ತ ಬರ್ತೀನಿ. ಮುಂಬಾಗಿಲ ಪಕ್ಕದಲ್ಲಿದ್ದ ದೊಡ್ಡ ಕಿಟಕಿಯ ಒಂದು ಬಾಗಿಲು ತೆಗೆದು ನೋಡಿದೆ – ಯಾಕೋ ಎಂದೂ ಇಲ್ಲದ  ಹೆದರಿಕೆ ಆಯ್ತು ನಂಗೆ.

ಮೊದಲ ಬಾರಿಗೆ  ಹೀಗಾದದ್ದು. ಹೊರಗೆ  ನಿಂತವರು ಇಬ್ಬರು ಧಡೂತಿ ಹೆಂಗಸರು – ಅಂದ್ರೆ “ಸೀರೆ ಉಟ್ಟವರು.” ಒಬ್ಬಳ  ಸೊಂಟದ ಮೇಲೆ  ಅವರು ಹೇಳುವಂತೆ ಆಕೆಯ ಮಗ. ಆತನ ಕಾಲು ನೆಲಕ್ಕೆ ತಾಗುತ್ತಿತ್ತು. ಪೂರ್ತಿ ಕಂಬಳಿಯಿಂದ  ಮುಚ್ಚಿದ್ರು ಆ ‘ ಮಗು’ ವನ್ನು! ನಾ ಸ್ವಲ್ಪ ಸುಧಾರಿಸಿಕೊಂಡು ಏನು ಬೇಕಿತ್ತವಾ ಅಂದೆ.” ಡಾಕ್ಟರ್ ಸಾಹೇಬ್ರ ಇಲ್ಲಾ ಯವ್ವಾ” ಅಂದ್ಲಾಕೆ. ಆಕೆ ಧ್ವನಿ ಬಹಳೇ ಗಡಸು.’ ಇಲ್ಲಾ ಅವರು ಊರಾಗಿಲ್ಲಾ ಸಧ್ಯಾ. ಬರ್ತಾರೆ, ಇನ್ನೂ ಸ್ವಲ್ಪ ತಡಾ ಆದೀತವಾ’ ಅಂದೆ. 

“ಹಂಗಾರ ಬಾಗ್ಲಾ  ತಗೀ ಯವ್ವಾ. ನಾವಿಲ್ಲೇ ಕೂತ್ಕೋತೀವಿ  ಅಲ್ಲಿ ಮಟಾ” ಅಂದ್ಲು ಆಕಿ. ನಾ  “ಅಲ್ಲೆ ಇನ್ನಿಬ್ರು ಡಾಕ್ಟರ್ ಇದ್ದಾರ ನೋಡವಾ. ಅವರ ಹತ್ರ ತೋರಸ್ರಿ” ಅಂದೆ. “ಇಲ್ಲ ಯವ್ವಾ ನಾವು ಯಾವಾಗಲೂ ಇಲ್ಲೇ ತೋರಸೋದು. ಬಾಕ್ಲಾ ತಗೀ ಯವ್ವಾ” ಒಂದೇ ಹಟನಾ ಮತ್ತೆ ‘ಆ ಇಬ್ರು ಡಾಕ್ಟರ್ ಪೈಕಿ ಯಾರಿಗಾದರೂ ತೋರಿಸಿ ಕೊಂಡು ಹೋಗ್ರೆವಾ’ ಅಂದ್ರೂ  ಊಂ ಹೂಂ! “ಯವ್ವಾ ನಿನಗ ಮಕ್ಕಳಿಲ್ಲಾ ತಂಗಿ? ಹಿಂಗ್ಯಾಕ ಮಾಡ್ತಿ, ಬಾಗಲಾ ತಗಿ” ಒಂದೇ ಮಾತು ಆಕೇದು. ಇನ್ನೊಬ್ಬಳ  ಮಾತೇ ಇಲ್ಲ! ನಾ ಹೇಳ್ದೆ- “ಅಲ್ಲೆ ಆಸ್ಪತ್ರೆ ಒಳಗ ಕೂತಿರ್ರಿ.

ಡಾಕ್ಟರು ಬಂದ ಮ್ಯಾಲೆ  ತೋರಿಸಿಕೊಂಡು ಹೋಗ್ರೆವಾ” ಅಂದೆ ಕೊನೆಗೆ. ಅದಕ್ಕೂ ತಯಾರಿಲ್ಲ ಆಕೆ! “ಬಾಗಿಲು ತಗೀ ಯವ್ವಾ.. ನಾವಿಲ್ಲೇ ಕುಂತಿರತೀವಿ  ಸಾಹೇಬ್ರು ಬರೋಮಟಾ”. ಹತ್ತು- ಹದಿನೈದು ನಿಮಿಷ ಇದರಲ್ಲೇ ಹೋಯ್ತು.ಕೊನೆಗೆ ಆಕೆ ಆ “ಡಾಕ್ಟರ್ ಮನಿ ಗೊತ್ತಿಲ್ಲವಾ. ತೋರಸ ಬಾ” ಅಂದ್ಲು. ಆಗ ನಾ ಕಿಟಕಿಯಿಂದ ಕೈ ಹೊರಗೆ ಚಾಚಿ “ಅಲ್ಲಿದೆ ನೋಡವಾ” ಅಂದೆ. ಆಗ ಇನ್ನೊಬ್ಬ ‘ಹೆಂಗಸು’ ನನ್ನ ಕೈಯನ್ನೇ ದಿಟ್ಟಿಸುತ್ತಾ ಮೆಲ್ಲಗೆ ನನ್ನೆಡೆಗೆ  ಗೋಣು ಸ್ವಲ್ಪಾನೇ ತಿರುಗಿಸಿದ್ಲು.

ಆಕೆ ಮುಖ ಮರೆಮಾಡಿದ  ಸೆರಗು ಚೂರೇ ಚೂರು ಸರಿದು ಸಣ್ಣ ಮೀಸೆ ಕಂಡಂಗಾಯ್ತು. ಪಟ್ಟನೇ ಕಿಟಕಿ ಬಂದ್ ಮಾಡಿ ಒಳಗೆ ಬಂದು ವ್ಹರಾಂಡಾ ಮತ್ತು ಡೈನಿಂಗ್ ಹಾಲ್ ನ ಮಧ್ಯೆ ಇದ್ದ ಬಾಗಿಲಾನೂ ಬಂದ್ ಮಾಡ್ದೆ. ಎದೆ ಧಡ ಧಡ ಶಬ್ದ ಜೋರಾಗಿತ್ತು. ಸುಮ್ಮನೇ ಕುಳಿತೆ. ನನ್ನ ಭ್ರಮೆ ಇರಬಹುದು ಅಂತ ಸಮಾಧಾನ ಮಾಡ್ಕೊಂಡೆ. 

ಹಾಸ್ಪಿಟಲ್ ನಲ್ಲಿ ರಾಮಣ್ಣ ಮಲಗಿದ್ದ. ಕೂಗೋದು ಹ್ಯಾಗೆ? ನನ್ನ ಧ್ವನಿ ಅಲ್ಲಿ ವರೆಗೂ ಹೋಗೋ ಸಾಧ್ಯತೆಯೇ ಇರಲಿಲ್ಲ. ಪಕ್ಕದ  ಕ್ವಾಟರ್ಸ್ ನಲ್ಲಿ ಇದ್ದ ಕುಲಕರ್ಣಿ ಸಿಸ್ಟರ್ ಏನೋ ಕಾರ್ಯಕ್ರಮ ಅಂತ ತಮ್ಮೂರಿಗೆ  ಹೋಗಿದ್ರು. ಮನೆಗಳು ಸ್ವಲ್ಪ ದೂರ ದೂರಾನೇ  ಇದ್ವು. ಹೊರಗಡೆ  ಅವರು  ಬಾಗಿಲು ತಟ್ಟುವುದು, ಬಾಗಲಾ ತಗೀ ಯವ್ವಾ ಅನ್ನೋದು ನಡೆದೇ ಇತ್ತು. ಭರ್ತಿ ನಿದ್ದೆ ಸಮಯ, ಯಾರನ ಹೆಂಗೆ ಕೂಗೋದು? ಕೂಗಿದ್ರೂ ಕೇಳಿಸಬೇಕಲ್ಲ!?

ಒಳಗೆ ಬಂದ ನಾನು ಮಲಗಿದ್ದ ಮಕ್ಕಳತ್ತ ನೋಡ್ದೆ- ಗಾಢ ನಿದ್ರೆಯಲ್ಲಿ ಆ  ಮುಗ್ಧ ಮಕ್ಕಳು! ಹೊರಗೆ  ಈ ಪ್ರಶಾಂತತೆಯನ್ನು ಅಣುಕಿಸುವಂಥ, ವೈರುಧ್ಯತೆಯ ಸಾಕಾರ ಮೂರ್ತಿಗಳು ಎನಿಸಿತು ಒಂದು ಕ್ಷಣ. ಆ  ಲ್ಯಾಟಿನ್ ಚಿಕ್ಕದು ಮಾಡಿ  ಬೆಡ್ ರೂಂ ನಲ್ಲಿ ಇಟ್ಟು  ಬಾಗಿಲು ಮುಂದೆ  ಮಾಡಿದೆ ಮಕ್ಕಳಿಗೆ ಎಚ್ಚರಾದ್ರೆ  ಹೆದರಿಯಾವು  ಅಂತ.

ನಾ ಮುದುರಿ ಅಲ್ಲೇ ಡೈನಿಂಗ್ ಹಾಲ್ ನಲ್ಲಿ ಚೇರ್ ಮೇಲೆ ಕುಳಿತೆ. ಮುಂದೆ ಸುಮಾರು ಹತ್ತು ನಿಮಿಷಗಳ ನಂತರ  ಎಲ್ಲಾ ಸ್ತಬ್ಧ ಆಯ್ತು. ಗಡಿಯಾರ  ನೋಡಿದೆ – 2.15! ಬಾಪರೇ ಬಾಪ್!  ಮುಕ್ಕಾಲು ಗಂಟೆ  ಇವರ ಗಲಾಟೆ  ನಡೀತಾ ಅನ್ಕೊಂಡೆ. ಹಾಲ್ ನ  ಕಿಟಕಿಯಿಂದ  ಆಸ್ಪತ್ರೆಯತ್ತ ನೋಡಿದ್ರೆ ಎಂದೂ ಇಲ್ಲದ ಶಾಂತತೆ  ಇಂದು ಅಲ್ಲಿ! ನಿದ್ದೆ ಅಂತೂ  ಗಾವುದ ದೂರ. ಹಾಗೇ ಮತ್ತೆ ಅರ್ಧ ಗಂಟೆ ಕಳೀತು. ಮೆಲ್ಲಗೆ , ಲೈಟ್ ಹಾಕದೇ  ಹೊರಬಂದು ಕಿಟಕಿ ಸಂದೀಲಿ  ಇಣುಕಿದೆ.

ಯಾರೂ ಕಾಣಲಿಲ್ಲ. ಲೇಡಿ ಡಾಕ್ಟರ್ ಹತ್ರ ಅಥವಾ ಮತ್ತೊಬ್ಬ ಡಾಕ್ಟರ್ ಹತ್ರ ತೋರಿಸಿ ಕೊಂಡು ಹೋಗಿರ ಬೇಕು ಅನ್ಕೊಂಡು ಒಳಗೆ ಬಂದು ಮತ್ತೆ ನನ್ನ  ಓದು ಶುರು ಮಾಡಿದೆ. ಒಂದೇ ಒಂದು ಅಕ್ಷರವೂ ತಲೆಗಿಳಿಯಲಿಲ್ಲ.

ಮತ್ತೆ  ಬಾಗಿಲು ಸದ್ದು. ನಾ ಕಾಲಿಂಗ್ ಬೆಲ್ ಆಫ್ ಮಾಡಿದ್ದೆ. ಗಡಬಡಿಸಿ ಗಡಿಯಾರ  ನೋಡಿದೆ – 4.45!  ಓ ಬೆಳಗು ಹತ್ತಿರ ಬರುತಿದೆ ಅಂತ  ಮೆಲ್ಲನೆ  ಕಿಟಕಿಲಿಣುಕಿದೆ. ಹೊರಗೆ ನನ್ನ ಪತಿ! ಸ್ಕೂಟರ್  ಸದ್ದೂ ಕೇಳದಷ್ಟು  ಗಾಬರಿಯಲ್ಲಿ ಮುಳುಗಿದ್ದೆ ನಾನು. ಬಾಗಿಲು ತೆಗೆದೆ, ಅವರು  ಒಳ ಬಂದ ತಕ್ಷಣ  ಧಡ್ ಅಂತ ಬಾಗಿಲು  ಹಾಕಿ ಲೈಟ್  ಹಚ್ಚಿದೆ. ನನ್ನ ಹುಚ್ಚೆದ್ದ  ಮುಖ  ನೋಡಿ ಏನಾಯ್ತು ಅಂತ ಕೇಳಿದಾಗ ಎಲ್ಲಾ ಕತೆ ಹೇಳ್ದೆ. ಆಗ ಬಾಗಿಲು ತೆರೆದು ಹೊರಬಂದು ನನ್ನ  ಪತಿ  ರಾಮಣ್ಣನ  ಕೂಗಿದಾಗ, ಅದೇ ಆಗ ಎದ್ದಿದ್ದ ಆತ ಓಡುತ್ತ  ಬಂದು ನಿಂತ.

ಎಲ್ಲ ಹಕೀಕತ್ತು ಹೇಳಿ ಅಲ್ಲಿ ಆಸ್ಪತ್ರೇಲಿ  ಯಾರಾದರೂ  ಕಾಯ್ತಿದಾರಾ ಅಂತ ಕೇಳಿದಾಗ ‘ ಯಾರೂ ಇಲ್ಲ ರೀ ಸಾಹೇಬ್ರ ‘ ಅಂದಾ. ಸುರೇಶ ಆತನ್ನ ಜಬರಿಸಿದಾಗ ,”ನಿನ್ನೆ ಯಾಕೋ ಭಾಳ  ದಣಿವಾಗಿತ್ರಿ ಸಾಹೇಬ್ರ. ಅದಕ ಏನೋ ಖಬರಗೆಟ್ಟ ನಿದ್ದಿ ಹತ್ತಿತ್ರೀ”  ಅಂತ ಮುಖ  ಕೆಳಗೆ ಮಾಡಿದ.’ ಇರಲಿ ಬಿಡಪಾ. ಆದ್ರೂ ರಾತ್ರಿ  ಪಾಳೀನ್ಯಾಗ ಇರಾವ್ರು ಒಂಚೂರು ಎಚ್ಚರ ಇರತಿರ್ಯಪಾ ‘ ಅಂದೆ ನಾನು. ತಲೆಯಾಡಿಸಿ ಹೋದ ಆತ. ಆಮೇಲೆ  ಪ್ರಯತ್ನ ಪಟ್ಟರೂ ನಿದ್ದೆ ಹತ್ರಾನೂ  ಸುಳಿಯಲಿಲ್ಲ.

ಬೆಳಗು ಹರೀತಿದ್ದ  ಹಾಗೆ  ಆ ಇಬ್ರೂ ಡಾಕ್ಟರ್ ಮನೇಲಿ ಕೇಳಿದ್ರೆ ಅವರು ತಮ್ಮ ಹತ್ರ ಯಾರೂ ಬರಲಿಲ್ಲ ಅಂದ್ರು. ಒಂದು  ಕ್ಷಣ  ಜೋರಾಗಿ ಬೆವೆತೆ ಆ ಬೆಳಗಿನ ಚಳಿಯಲ್ಲೂ! ಜೋಲಿ ಹೋಗುವಂತಾದರೂ ನನ್ನ ನಾ ಸಾವರಿಸಿಕೊಂಡು ಗಟ್ಟಿಯಾಗಿ ನಿಂತೆ!

|ಮುಂದಿನ ಸಂಚಿಕೆಯಲ್ಲಿ|

‍ಲೇಖಕರು Avadhi

November 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರೈತರ ‘ಚಲೋ ದಿಲ್ಲಿ’

ರೈತರ ‘ಚಲೋ ದಿಲ್ಲಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಹಿಂದೆ ದಿಲ್ಲಿ ಮತ್ತು...

ಎಸ್‌ ಸಾಯಿಲಕ್ಷ್ಮಿ ಸರಣಿ 5: ಮರಿ ಕೋಗಿಲೆ ಬಾಯಿ ತೆರೆಯಿತು…

ಎಸ್‌ ಸಾಯಿಲಕ್ಷ್ಮಿ ಸರಣಿ 5: ಮರಿ ಕೋಗಿಲೆ ಬಾಯಿ ತೆರೆಯಿತು…

ಎಸ್. ಸಾಯಿಲಕ್ಷ್ಮಿ ಸ್ನೇಹಗಾನಕ್ಕೆ ರಿತೀಷಾ ಎಂಬ ಬಾಲಾದ್ಭುತದ ಪ್ರವೇಶ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು...

ಮಾಯಾ ಏಂಜೆಲೊ

ಮಾಯಾ ಏಂಜೆಲೊ

ಆರ್ ವಿಜಯರಾಘವನ್ ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು...

3 ಪ್ರತಿಕ್ರಿಯೆಗಳು

 1. Name *ಶೀಲಾ

  “ಒಬ್ಬ ವೈದ್ಯನ ಪತ್ನಿಯ ಅನುಭವಗಳ ಗಂಟು ಬಿಚ್ಚಿದಾಗ” ಈ ಸರಣಿಯ ಲೇಖನಗಳು ಸುಂದರವಾಗಿ ಮೂಡಿಬರುತ್ತಿವೆ

  ಪ್ರತಿಕ್ರಿಯೆ
 2. Shrivatsa Desai

  ಈ ಬಾರಿಯ ಲೇಖನ ರಕ್ತ ಹೆಪ್ಪುಗಟ್ಟುವಂಥದು! ಡಾಕ್ಟರ್ ಪತ್ನಿಗೆ ಒಮ್ಮೆ, ಪುಷ್ಪವೃಷ್ಟಿ, ಇನ್ನೊಮ್ಮೆ ಬರುವ ಅಗ್ನಿಪರೀಕ್ಷೆ! ಯಾವ ಹುತ್ತಲ್ಲಿ ಯಾವ ಸರ್ಪ? ಕೊರಳ ಮೇಲೆ ಬಿದ್ದದ್ದು ಹಾರವೋ, ಹಾವೋ? ಮುಂದಿನ ಕಂತಿನಲ್ಲಿ ಏನು ಕಾದಿದೆಯೋ! ಶ್ರೀವತ್ಸ

  ಪ್ರತಿಕ್ರಿಯೆ
 3. Sarojini Padasalgi

  ಧನ್ಯವಾದಗಳು ಅವಧಿ ಈ ಅವಕಾಶ ಒದಗಿಸಿದ್ದಕ್ಕೆ!
  ಶೀಲಾ , ನೀವೆಲ್ಲಾ ನನ್ನ ಅನುಭವಗಳೊಂದಿಗೆ ಸ್ಪಂದಿಸುತ್ತಿರುವುದು ನಿಜಕ್ಕೂ ನನಗೆ ಸಾರ್ಥಕ್ಯ ಭಾವ ಮೂಡಿಸಿದೆ.ಧನ್ಯವಾದಗಳು.
  ಶ್ರೀವತ್ಸ ದೇಸಾಯಿಯವರೇ, ನಿಮಗೆ ಅನಂತ ವಂದನೆಗಳೊಂದಿಗೆ ಧನ್ಯವಾದಗಳು.ನಿಮ್ಮ ಆಸಕ್ತಿ, ಆಸ್ಥೆ ನಿಜಕ್ಕೂ ಪ್ರೋತ್ಸಾಹದಾಯಕ ನಂಗೆ.
  ಮುಂದಿನ ಕಂತಿನಲ್ಲಿಯೂ ಭಯ ಬೆರೆತ ಅನುಭವವೇ.ಸ್ವಲ್ಪ ಬೇರೆ ಥರ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: