‘ಸುಧಾರಣೀಕರಣ’ ಮತ್ತು ‘ಏಕೀಕರಣ ‘- ನೆನಪುಗಳ ಎರಡು ದಿನಗಳು..

ಇದು ರಾಜ್ಯೋತ್ಸವದ ದಿನಾಚರಣೆ ಸಂದರ್ಭದಲ್ಲಿ   ಬಿ ಎ ವಿವೇಕ ರೈ ಅವರು  ಬರೆದ  ಲೇಖನ.

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ-

ಅಕ್ಟೋಬರ್ ೩೧ ,ಜರ್ಮನಿಯಲ್ಲಿ  ’ಸುಧಾರಣೀಕರಣದ ದಿನ’ (ರೆಫಾರ್ಮೆಶನ್  ಡೇ ).ಜರ್ಮನಿಯ ವಿತ್ತೆನ್ ಬೆರ್ಗ್ ನಲ್ಲಿ  ಮಾರ್ಟಿನ್ ಲೂಥೆರ್ ೧೫೧೭ರಲ್ಲಿ ಕೆಥೋಲಿಕ್ ಚರ್ಚ್ ವಿರುದ್ಧ ದಂಗೆ ಎದ್ದ ದಿನ. ಅದರ ಪರಿಣಾಮವಾಗಿ ಆ ದಿನ ಪ್ರೊಟೆಸ್ಟೆಂಟ್  ಪಂಥ ಜನ್ಮತಾಳಿತು.ಕ್ರಿಶ್ಚಿಯನ್ ಕೆಥೋಲಿಕ್ ಧರ್ಮದ ಪೋಪ್ ರನ್ನು ಮಾರ್ಟಿನ್ ಲೂಥೆರ್ ನೇರವಾಗಿ ಟೀಕಿಸಿದ.ಚರ್ಚ್ ಗಳು ಧನಸಂಗ್ರಹದ ಮೂಲಕ ಪಾಪದ ಕೆಲಸಮಾಡುತ್ತಿವೆ ಎಂದು ಆತ ಪ್ರತಿಭಟಿಸಿದ.ಈತನ ಬಂಡಾಯದ ಹೋರಾಟದಲ್ಲಿ ವಿತ್ತೆನ್ ಬೆರ್ಗ್ ವಿಶ್ವವಿದ್ಯಾನಿಲಯ (ಸ್ಥಾಪನೆ ೧೫೦೨) ಪ್ರಮುಖ ಪಾತ್ರವನ್ನು ವಹಿಸಿತು.ಧರ್ಮದ ಸಾಂಪ್ರದಾಯಿಕತೆಯ ವಿರುದ್ಧದ ಮಾರ್ಟಿನ್ ಲೂಥರ್ ನ ಬಂಡಾಯದ ಫಲವಾಗಿ ಹುಟ್ಟಿಕೊಂಡ ಪಂಥವನ್ನು ಲೂಥರನ್ ಎಂದೂ ಕರೆಯುತ್ತಾರೆ.ಪ್ರತಿರೋಧ (ಪ್ರೊಟೆಸ್ಟೆಂಟ್ ) ಇದ್ದಾಗ ಮಾತ್ರ ಸುಧಾರಣೆ ಆಗಲು ಸಾಧ್ಯ ಎನ್ನುವ ಇತಿಹಾಸದ ದಾಖಲೆಗಳಲ್ಲಿ ಜರ್ಮನಿಯ ಅಕ್ಟೋಬರ ೩೧ರ ‘ಸುಧಾರಣೀಕರಣದ ದಿನ’ಕ್ಕೆ ಒಂದು ಮಹತ್ವದ ಸ್ಥಾನ ಇದೆ.

ಇವತ್ತು ನವಂಬರ ಒಂದು .ನಮ್ಮ ಕರ್ನಾಟಕದಲ್ಲಿ ‘ಏಕೀಕರಣ’ದ ನೆನಪಿನಲ್ಲಿ ರಾಜ್ಯೋತ್ಸವದ ಸಂಭ್ರಮ.ಕಳೆದ ಒಂದು ವಾರದಿಂದ ಅಂತರ್ಜಾಲದಲ್ಲಿ ,ಇ-ಪತ್ರಿಕೆಗಳಲ್ಲಿ ಕರ್ನಾಟಕದ ಸುದ್ದಿಗಳನ್ನು ಓದುತ್ತಿದ್ದೇನೆ.ಕಳೆದ ಭಾನುವಾರದ ಮತ್ತು ಇವತ್ತಿನ ಕನ್ನಡ ಇ-ಪತ್ರಿಕೆಗಳಲ್ಲಿ ಕನ್ನಡ,ಕರ್ನಾಟಕ ,ರಾಜ್ಯೋತ್ಸವದ ಬಗ್ಗೆ ಬರಹಗಳು ಓದಲು ದೊರೆತವು .ಆದದ್ದು ಆಗಬೇಕಾದದ್ದು ಏನು ಎಂಬ ಬಗ್ಗೆ ಪ್ರತೀವರ್ಷ ನವಂಬರದಲ್ಲಿ ಆಲೋಚನೆಗಳು ವಿಮರ್ಶೆಗಳು ಹರಿದುಬರುತ್ತವೆ.ನವಂಬರ ಕಳೆದೊಡನೆಯೇ ಮತ್ತೆ ಮಂಜು ಮುಸುಕಿ ಮಾಯವಾಗುತ್ತವೆ.

‘ಏಕೀಕರಣ ‘ ಎನ್ನುವುದು ಒಂದು ಅರ್ಥದಲ್ಲಿ ‘ಸುಧಾರಣೀಕರಣ’ ದ ಮೊದಲ ಮಹತ್ವದ ಕ್ರಾಂತಿಯ ಘಟ್ಟ. ಕರ್ನಾಟಕದ ಏಕೀಕರಣ ಎನ್ನುವುದು ,ಅದು ಅನನ್ಯತೆ ,ಅಭಿಮಾನ , ನೆಮ್ಮದಿಗಳ ಸಹಿತ ಕರ್ನಾಟಕದ ಜನರು ಒಂದು ಕುಟುಂಬದವರಂತೆ ಒಟ್ಟಾಗಿ ಬಾಳಲು ಅವಕಾಶ ಕಲ್ಪಿಸಿಕೊಡಬೇಕಾದ ಮೆಟ್ಟಿಲು ಮತ್ತು ತೊಟ್ಟಿಲು. ಕಳೆದ ಐವತ್ತೈದು ವರ್ಷಗಳಲ್ಲಿ ಅದು ಎಷ್ಟು ಸಾಧ್ಯ ಆಗಿದೆ ಮತ್ತು ಆಗಿಲ್ಲ,ಯಾಕೆ ಆಗಿಲ್ಲ ಎನ್ನುವ ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಮತ್ತು ಉತ್ತರಗಳನ್ನು ಕಂಡುಕೊಳ್ಳುವುದು  ಕನ್ನಡ ಭಾಷೆಯ ಬಳಕೆ ಮತ್ತು ಬೆಳವಣಿಗೆಯಷ್ಟೇ  ಪ್ರಸ್ತುತವಾದದ್ದು.

ಕರ್ನಾಟಕದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆ ಯಾವ ಮಟ್ಟಕ್ಕೆ ಬಂದು ಮುಟ್ಟಿದೆ ,ಅದು ಈ ನಾಡಿನ ಎನ್ನ ಜನವರ್ಗದವರನ್ನು ‘ಏಕೀಕರಣ’ ಮಾಡಲು ಸಾಧ್ಯವಾಗಿದೆಯೇ ಎನ್ನುವ ಪ್ರಶ್ನೆ ಈಗ ಹಿಂದೆಂದಿಗಿಂತಲೂ ಆತಂಕಕಾರಿಯಾಗಿದೆ.ರಾಜ್ಯದ ಆರ್ಥಿಕ ಪ್ರಗತಿಯ ಬಗ್ಗೆ ಅಧಿಕೃತ ದಾಖಲೆಗಳು ಕೊಡುವ ಅಂಕೆಸಂಖ್ಯೆಗಳು ‘ಸರ್ವರಿಗೆ ಸಮಬಾಳು ,ಸರ್ವರಿಗೆ ಸಮಪಾಲು’ ಕೊಡಲು ಸಾಧ್ಯವಾಗಿಲ್ಲ.ಸಾಮಾಜಿಕವಾಗಿ ೫೫ ವರ್ಷಗಳ ಹಿಂದೆ ಇದ್ದದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜಾತಿ,ಧರ್ಮ,ಪಕ್ಷ,ವರ್ಗಗಳ ಮೂಲಕ ಛಿದ್ರೀಕರಣ ನಡೆದಿದೆ  , ನಡೆಯುತ್ತಿದೆ. ಕನ್ನಡ ಭಾಷೆಯೊಂದೇ ನಮ್ಮನ್ನೆಲ್ಲ ಒಂದುಗೂಡಿಸಲು ಸಾಧ್ಯ ಆಗುತ್ತಿಲ್ಲ ಎನ್ನುವುದು ಸ್ಪಷ್ಟವಾಗಿ ಅನುಭವಕ್ಕೆ ಬಂದಿದೆ. ಒಂದು ಕೂಡು ಕುಟುಂಬವಾಗಿ ಕರ್ನಾಟಕ ರೂಪುಗೊಳ್ಳಬೇಕು ಎನ್ನುವ  ಕರ್ನಾಟಕ ಏಕೀಕರಣದ ಹೋರಾಟದ ನಮ್ಮ  ಹಿರಿಯರ ಹಂಬಲದ ಹಿಂದಿನ ಪ್ರಜಾಪ್ರಭುತ್ವದ ತತ್ವ ಇಂದು ಕಣ್ಮರೆಯಾಗುತ್ತಿದೆ.

ನವಂಬರ ೧,೧೯೫೬.ನಾನು ಆಗ ಹತ್ತು ವರ್ಷದ ಹುಡುಗ.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಣಚಾ ಗ್ರಾಮದ ಪರಿಯಾಲ್ತಡ್ಕ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಐದನೆಯ ತರಗತಿಯಲ್ಲಿ ಇದ್ದೆ.ಆ ದಿನ ಈ ಸುದ್ದಿಯನ್ನು ಹೇಳಿ ಶಾಲೆಯಲ್ಲಿ ಸಂಭ್ರಮ ಆಚರಿಸಿದರು.ಆ ಆವರೆಗೆ ನಮ್ಮ ಗ್ರಾಮ ,ತಾಲೂಕು,ಜಿಲ್ಲೆ -ಮದ್ರಾಸ್ ಪ್ರಾಂತ್ಯದಲ್ಲಿ ಇತ್ತಂತೆ.ಇನ್ನು ಮುಂದೆ ಮೈಸೂರು/ಕರ್ನಾಟಕ ರಾಜ್ಯಕ್ಕೆ ಸೇರುತ್ತದಂತೆ. ಆ ವಯಸ್ಸಿನಲ್ಲಿ ನನಗೆ ವ್ಯತ್ಯಾಸ ಏನೂ ಕಾಣಲಿಲ್ಲ.ನಮಗೆ ಕನ್ನಡವನ್ನೇ ಕಲಿಸುತ್ತಿದ್ದದ್ದು.ಮದ್ರಾಸ್ ರಾಜ್ಯದ ಭಾಷೆ ತಮಿಳ್ ಎಂದೂ ನನಗೆ ಆಗ ಗೊತ್ತಿರಲಿಲ್ಲ.’ನೂತನ ಪಾಠಮಾಲೆ ‘ಆಗ  ನಮ್ಮ ಕನ್ನಡ ಪುಸ್ತಕಗಳು.ಇಂಗ್ಲಿಶ್ ಒಂದು ಭಾಷೆಯಾಗಿ ಇದ್ದದ್ದು ಏಳು ಮತ್ತು ಎಂಟನೆಯ ತರಗತಿಗಳಲ್ಲಿ.ಇಂಗ್ಲಿಷಿನಲ್ಲಿ ಮಾಧ್ಯಮ ಒಂದು ಇದೆ ಎನ್ನುವ ಕಲ್ಪನೆಯೇ ಇಲ್ಲದ ಕಾಲ ಅದು.

ಪ್ರಾಚೀನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುಸಂಖ್ಯಾತರ ಮಾತೃಭಾಷೆ ತುಳು.ಇನ್ನು ಅನೇಕರದ್ದು ಮನೆಮಾತು  ಕೊಂಕಣಿ, ಮರಾಟಿ ,ಬ್ಯಾರಿ,ಮಲೆಯಾಳ.ಕನ್ನಡದಲ್ಲೂ ಹವ್ಯಕ,ಕೋಟ,ಗೌಡ,ಕೋಟೆಯವರ ಕನ್ನಡದ ಉಪಭಾಷೆಗಳು ಅನೇಕರವು.ಆದರೆ ಇವರೆಲ್ಲರೂ ತಮ್ಮ ಮಾತೃಭಾಷೆ ,ಉಪಭಾಷೆ ,ಜಾತಿ,ಧರ್ಮಗಳ ಭೇದ ಇಲ್ಲದೆ ಒಂದೇ ರೀತಿಯ ಕನ್ನಡವನ್ನು ಶಾಲೆಗಳಲ್ಲಿ ಕಲಿಯುತ್ತಿದ್ದರು.ಹೀಗೆ ಆ ಕಾಲದಲ್ಲಿ ಕರಾವಳಿ ಕರ್ನಾಟಕದಲ್ಲಿ ಶಾಲೆಗಳಲ್ಲಿ ‘ಕನ್ನಡ’ ಎನ್ನುವುದು ವಿಭಿನ್ನ ಮಾತೃಭಾಷೆ ,ಜಾತಿ,ಧರ್ಮ,ಲಿಂಗ,ವರ್ಗಗಳ ಭಿನ್ನತೆಗಳ ನಡುವೆಯೇ ಒಂದು ಬಗೆಯ ಸಾಮಾಜಿಕ ಏಕೀಕರಣವನ್ನು ಉಂಟುಮಾಡಿತ್ತು.

ಆದರೆ ಈಗ ಸರಕಾರೀ ಕನ್ನಡ ಶಾಲೆಗಳನ್ನು ವಿದ್ಯಾರ್ಥಿಗಳ ಕೊರತೆಯ ಕಾರಣಕ್ಕಾಗಿ ಮುಚ್ಚುವ ಕರ್ನಾಟಕ ಸರಕಾರದ ನಿರ್ಧಾರ ಏಕೀಕರಣ ತತ್ವಕ್ಕೆ ವಿರೋಧವಾದದ್ದು.ಇಂಗ್ಲಿಶ್ ಮಾಧ್ಯಮ ಶಾಲೆಗಳಿಗೆ ಅನುಮತಿ ಕೊಟ್ಟು ,ಸರಕಾರೀ ಶಾಲೆಗಳಿಗೆ ಸೌಲಭ್ಯ ಕಲ್ಪಿಸದೆ ,ಈಗ ಲಾಭನಷ್ಟದ ಲೆಕ್ಕಾಚಾರ ಹಾಕಿ ,ಕನ್ನಡ ಶಾಲೆಗಳ ಕಡಿತ ಮಾಡುತ್ತಾ ಹೋದರೆ ಅದಕ್ಕೆ ಕೊನೆಯೇ ಇರುವುದಿಲ್ಲ.ಕನ್ನಡ ಮಾಧ್ಯಮವನ್ನು ಸಮಾನ ಶಿಕ್ಷಣ ನೀತಿಯನ್ನಾಗಿ ಮಾಡಿ,ಅ ಶಾಲೆಗಳಲ್ಲಿ ಇಂಗ್ಲಿಶ್ ನ್ನು ಒಂದು ಭಾಷೆಯಾಗಿ ವೈಜ್ಞಾನಿಕವಾಗಿ ಕಲಿಸುವ ವ್ಯವಸ್ಥೆ ಮಾಡದ ಕಾರಣ ,ಶಿಕ್ಷಣದಲ್ಲಿ ಛಿದ್ರೀಕರಣ  ಪ್ರಾಥಮಿಕ ಹಂತದಲ್ಲೇ ಆರಂಭ ಆಗಿದೆ.

ಇದಕ್ಕೆ ಪೂರಕವಾಗಿ ಕರ್ನಾಟಕದ ಒಳಗಡೆ ಉದ್ಯೋಗಗಳ  ಸೃಷ್ಟಿಯ ಕೆಲಸ ಸಮರ್ಪಕ ಯೋಜನೆ  ಮತ್ತು ಅನುಷ್ಠಾನ ಆಗಲೇ ಇಲ್ಲ.ಕರ್ನಾಟಕವನ್ನು ಆಳಿದ ಎಲ್ಲ ಸರಕಾರಗಳು ತಮ್ಮ ರಾಜಕೀಯ ಲಾಭಕ್ಕಾಗಿ ಜನರನ್ನು ಬಳಸಿಕೊಂಡರೆ ಹೊರತು ಅವರಿಗೆ ಗೌರವಯುತವಾಗಿ ಬದುಕುವ ಆಸರೆಯನ್ನು ಒದಗಿಸಲಿಲ್ಲ.ಕಳೆದ ಕೆಲವು ದಶಕಗಳಿಂದ ರಾಜಕೀಯವು ನಮ್ಮ ಕರ್ನಾಟಕದ ಏಕೀಕರಣವನ್ನು ನಾಶಮಾಡುತ್ತಿದೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಈಗಿನ ಪ್ರಮಾಣದಲ್ಲಿ ಜನರು ರಾಜಕೀಯ ಪಕ್ಷ ಮತ್ತು ನಾಯಕರ ಮೇಲೆ ಅವಲಂಬಿತರಾಗಿ ಬದುಕುತ್ತಿರಲಿಲ್ಲ.ಯಾವ ರಾಜಕೀಯ ಪಕ್ಷ ,ಬಣ,ನಾಯಕ ,ಜಾತಿ,ಧರ್ಮ,ಮಠ -ಇವು ಯಾವುದರ ಹಂಗು ಇಲ್ಲದೆಯೇ ಕರ್ನಾಟಕದ ಬಹುತೇಕ ಮಂದಿ ಸ್ವತಂತ್ರವಾಗಿ ಯೋಚಿಸಬಲ್ಲ,ಬದುಕಬಲ್ಲ ವಾತಾವರಣ ಇತ್ತು.ಆದರೆ ಈಗ ಮುಖ್ಯವಾಗಿ ಆರ್ಥಿಕ ಕಾರಣಗಳಿಂದಾಗಿ ಬಹಳ ಮಂದಿ ಜನರು – ರಾಜಕೀಯ ಪಕ್ಷಗಳು,ಅವುಗಳ ಅಂಗಸಂಸ್ಥೆಗಳು,ನಾಯಕರು,ಅವರ ಉದ್ಯಮಗಳು,ಧಾರ್ಮಿಕ ಹಾಗೂ ಉದ್ಯಮದ ವ್ಯಕ್ತಿಗಳು -ಇವುಗಳ ಆಶ್ರಯದಲ್ಲಿ ಹಾಗೂ ಇವರ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅವಲಂಬಿತರಾಗಿದ್ದಾರೆ.ಇದರಿಂದ ಎರಡು ರೀತಿಯ ಛಿದ್ರೀಕರಣಗಳು  ನಡೆಯುತ್ತಿವೆ.ಒಂದು ,ಸಾಮಾಜಿಕ ನೆಲೆಯಲ್ಲಿ.ಇನ್ನೊಂದು ಆರ್ಥಿಕ ನೆಲೆಯಲ್ಲಿ.ಇವು ಎರಡೂ ನೆಲೆಗಳು ‘ಕರ್ನಾಟಕ ಏಕೀಕರಣ’ದ ಮೂಲ ಉದ್ದೇಶವನ್ನು ಭಂಗಗೊಳಿಸುತ್ತಿವೆ.

ಕರ್ನಾಟಕ ಏಕೀಕರಣದ ಬಳಿಕದ ಆರಂಭದ ಮೂವತ್ತು ವರ್ಷಗಳಲ್ಲಿ ನಮ್ಮ ಹಿರಿಯರಲ್ಲಿ ಮತ್ತು  ಯುವಜನಾಂಗದಲ್ಲಿ  ಇದ್ದ ವೈಚಾರಿಕತೆಯ ಶಕ್ತಿ ಕಡಮೆಯಾಗುತ್ತಾ ಬಂದಿದೆ.ಕನ್ನಡ ಪತ್ರಿಕೆಗಳನ್ನು ,ಕನ್ನಡ ಪುಸ್ತಕಗಳನ್ನು ಓದುವವರು,ಕನ್ನಡವನ್ನು ಅಂತರಜಾಲದಲ್ಲಿ ಬಳಸುವವರು,ಕನ್ನಡ ವಾಹಿನಿಗಳನ್ನು ನೋಡುವವರು -ಹೀಗೆ ಕನ್ನಡಕ್ಕೆ ತೆರೆದುಕೊಳ್ಳುವವರ ಸಂಖ್ಯೆ ಖಂಡಿತ ಹೆಚ್ಚಾಗಿದೆ.ಇದು ಸಂತೋಷದ ಸಂಗತಿ.ಆದರೆ ಬಹುರೂಪಿ ಸಾಮಾಜಿಕ ವಿಷಯಗಳ  ಅಧ್ಯಯನದ ಆಳ ಅಗಲ,ವಿಚಾರಗಳನ್ನು ಮುಕ್ತವಾಗಿ ಪರಿಶೀಲಿಸುವ ಮತ್ತು ಧೈರ್ಯವಾಗಿ  ವಿಮರ್ಶಿಸುವ ಮನೋಧರ್ಮ ಹಾಗೂ ವಾತಾವರಣ -ಇದು ನಮ್ಮ ಕರ್ನಾಟಕದಲ್ಲಿ ಕಡಮೆಯಾಗುತ್ತಿದೆ.ಒಂದು ನಾಡಿನ ಶಕ್ತಿ ಮತ್ತು ಹಿರಿಮೆ ಉಳಿಯುವುದು ಇಂತಹ ‘ಸುಧಾರಣೀಕರಣ’ ದ ಪ್ರಯತ್ನಗಳ ಮೂಲಕ.ಅದಿಲ್ಲವಾದರೆ ಏಕೀಕರಣ ಎನ್ನುವುದು ಒಂದು ದಿನ ಇಲ್ಲವೇ ಒಂದು ತಿಂಗಳ ಜಾತ್ರೆಯಾಗಿ ಮಾತ್ರ ಕಳೆದುಹೋಗುತ್ತದೆ.

೧೯೬೮ರಲ್ಲಿ ನನಗೆ ಮಂಗಳೂರಿನ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಎಂ.ಎ.ಗೆ ಪ್ರವೇಶ ದೊರೆತಾಗ ನನ್ನ ತಂದೆಯ ಮಾತಿನಂತೆ ನಮಗೆಲ್ಲ ಆದರ್ಶ ಪ್ರಾಯರೂ ಮಾರ್ಗದರ್ಶಕರೂ ಆಗಿದ್ದ ಡಾ.ಶಿವರಾಮ ಕಾರಂತರ ಬಳಿಗೆ ,ಪುತ್ತೂರಿನಲ್ಲಿ ಇದ್ದ  ಅವರ ಮನೆ ‘ಬಾಲವನ’ಕ್ಕೆ  ಹೋದೆ.ವಿಜ್ಞಾನದ ಪದವಿ ಪಡೆದ ನಾನು ಕನ್ನಡದಲ್ಲಿ ಎಂ ಎ ಮಾಡುವ ಪ್ರಸ್ತಾವಕ್ಕೆ ಆ ಕಾಲದಲ್ಲಿ ಸಾಕಷ್ಟು ತಿರಸ್ಕಾರ ಇತ್ತು.ನನ್ನ ತಂದೆ ,ನನ್ನಕನ್ನಡ  ಗುರುಗಳಾದ ಪ್ರೊ.ವಿ.ಬಿ.ಮೊಳೆಯಾರರು ಮತ್ತು ಕಾರಂತರು ಮಾತ್ರ ಆ ಕಾಲದಲ್ಲಿ ನಾನು ಎಂ ಎ ಮಾಡಲು ಉತ್ತೇಜನ ಕೊಟ್ಟವರು.ಕಾರಂತರ ಬಳಿಗೆ ಹೋದಾಗ ಅವರು ಹೇಳಿದ್ದು ನೆನಪಿದೆ :’ಬರೇ ಕನ್ನಡ ಸಾಹಿತ್ಯ ಓದಿದರೆ ಸಾಲದು.ಆಂತ್ರಪಾಲಜಿ ಕೂಡಾ ಓದಬೇಕು’. ಆಗ ನನಗೆ ಅದರ ಅರ್ಥ ಏನೆಂದು ಗೊತ್ತಾಗಲಿಲ್ಲ.ಆದರೆ ಮುಂದೆ ಎಂ.ಎ.ಮುಗಿಸಿ ,ಅದೇ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಎ.ವಿದ್ಯಾರ್ಥಿಗಳಿಗೆ ,ಸಾಂಸ್ಕೃತಿಕ ಮಾನವವಿಜ್ಞಾನ ವಿಷಯವನ್ನು  ಪಾಠ ಮಾಡಬೇಕಾಯಿತು.ಆ ವಿಷಯದ ಪ್ರಾಥಮಿಕ ಪರಿಚಯ ಇಲ್ಲದ ನಾನು ಆಗ ನನಗೆ ಸಿಕ್ಕಿದ, ಇಂಗ್ಲಿಶ್  ನಲ್ಲಿ ಇದ್ದ ಆಂತ್ರಪಾಲಜಿ ಪುಸ್ತಕಗಳನ್ನು  -ಕ್ರೋಬರ್,ಹಮ್ಮೊಂಡ್,ಬೆಯಲ್ಸ್ -ಹೊಯಿರ್ ಇತ್ಯಾದಿ -ಕೊಂಡುಕೊಂಡು ತಂದೆ.ಇಂಗ್ಲಿಷ್-ಕನ್ನಡ ನಿಘಂಟುವಿನ ಸಹಾಯದಿಂದ ಅರ್ಥಮಾಡಲು ಪ್ರಯತ್ನಿಸಿ ,ಟಿಪ್ಪಣಿ ಮಾಡಿಕೊಂಡು ,ಎಂ.ಎ.ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ  ಪಾಠಮಾಡಿದೆ.ಧರ್ಮ ದೇವರ ಉಗಮ ಮತ್ತು ಕಾರ್ಯ ,ಮಾಂತ್ರಿಕತೆ,ವಿವಾಹ,ಕುಟುಂಬ,ಬಂಧುತ್ವ ,ನಿಶಿದ್ಧತೆ ,ಸಮಾಜ ಮತ್ತು ಅರ್ಥಿಕತೆಗಳ ಸಂಬಂಧ -ಹೀಗೆ ಕನ್ನಡ ಭಾಷೆಯಲ್ಲಿ ಸಾಹಿತ್ಯದ ಆಚೆಗಿನ ಜಗತ್ತೊಂದು ನನಗೆ ತೆರೆದುಕೊಂಡಿತು.ಆಗ ಕಾರಂತರ ಮಾತುಗಳ ಅರ್ಥ ನಿದಾನವಾಗಿ ಹೊಳೆಯತೊಡಗಿತು.

ಮುಂದೆ ಕಾರಂತರ ಸಾಹಿತ್ಯವನ್ನು ಓದಲು  ತೊಡಗಿದಂತೆಲ್ಲ ಕನ್ನಡ ಭಾಷೆಯ ಮೂಲಕವೇ ನಾವು ಇರುವ ಸ್ಥಿತಿಯಿಂದ ಹೇಗೆ ಮುಂದಕ್ಕೆ ಹೋಗುವುದು ಎನ್ನುವ ಯೋಚನೆಗಳ ಸುಳುಹು ದೊರೆಯತೊಡಗಿತು.ಅವರ ‘ಹುಚ್ಚುಮನಸ್ಸಿನ ಹತ್ತುಮುಖಗಳು ‘ ಗ್ರಂಥದ ಈ ಮಾತುಗಳು ನನ್ನನ್ನು ಪ್ರಭಾವಿಸಿದವು :” ಗತಿ ಎಂದರೆ ಇದ್ದಂತಿರುವ ಸ್ಥಿತಿಯಲ್ಲ ; ಮುಂದುವರಿಕೆ. ಹಾಗೆ ಸಾಗುತ್ತಿರುವ ಜೀವಿಗೆ ಅದು ತಿಳಿಯಬೇಕಾದ ವಿದ್ಯಮಾನ.ಆಗ ತಿಳಿಯುವ ಶಕ್ತಿ ಜಾಗೃತವಾಗಿದ್ದರೆ ಮಾತ್ರವೇ ಸಮಾಧಾನ . ಅದು ಜಾಗ್ರತವಾಗಿರುವಷ್ಟು ದಿನ, ತಿಳಿದು ,ವರ್ತಿಸುವ ಬದುಕು ತೃಪ್ತಿಕೊಡಬಲ್ಲ ಬದುಕು -ಎನಿಸುತ್ತದೆ ನನಗೆ.” ಈ ದೃಷ್ಟಿಯಿಂದ ಅವರ ‘ವಿಚಾರಸಾಹಿತ್ಯ ನಿರ್ಮಾಣ’(೧೯೬೮) ನನಗೆ ಇಂದಿಗೂ ಬಹಳ ಮಹತ್ವದ ಗ್ರಂಥವಾಗಿ ಕಾಣಿಸುತ್ತದೆ.ಜ್ನಾನಸಾಹಿತ್ಯ,ಸಾಂಸ್ಕೃತಿಕ ಸಾಹಿತ್ಯ ,ವಿಜ್ಞಾನ ಸಾಹಿತ್ಯ ಎನ್ನುವ ಸಾಹಿತ್ಯ ನಿರ್ಮಾಣದ ಬಗೆಗಳನ್ನು ವಿವರಿಸುತ್ತಾ ಕಾರಂತರು  ,ಇವೆಲ್ಲವೂ ಹೇಗೆ ವಿಚಾರಸಾಹಿತ್ಯದ ನಿರ್ಮಾಣದ ಕೆಲಸಕ್ಕಾಗಿಯೇ ದುಡಿಯಬೇಕು ಎನ್ನುವುದನ್ನು ವಿವರಿಸುತ್ತಾರೆ.” ಪೂರ್ವಗ್ರಹಗಳ ಪೀಡೆ ಇಲ್ಲದಿರುವ ಚಟವನ್ನು ನಾವು ಬೆಳೆಯಿಸಬೇಕು.ಮತಧರ್ಮಗಳ ವಿಚಾರವಾದರೂ ಸರಿಯೇ , ಸಾಂಸ್ಕೃತಿಕ ಸಾಮಾಜಿಕ ಸಂಗತಿಯಾದರೂ  ಸರಿಯೇ ” ಎನ್ನುವುದು ಅವರ ಮುಖ್ಯವಾದ ಇನ್ನೊಂದು ಮಾತು.

ಕಾರಂತರು ಕನ್ನಡದಲ್ಲಿ ವಿಜ್ಞಾನ ಸಾಹಿತ್ಯವನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಾಣ ಮಾಡಿದರು.ಮಕ್ಕಳ ವಿಶ್ವ ಕೋಶದಿಂದ  ಪರಮಾಣು ಸಹಿತ ಪರಿಸರ ವಿಜ್ಞಾನವನ್ನು ಅವರು ಕನ್ನಡದಲ್ಲಿ ತಂದುಕೊಟ್ಟರು .ಸಾಂಸ್ಕೃತಿಕ ಸಾಹಿತ್ಯದಲ್ಲಿ ಕರ್ನಾಟಕದ ಸಾಮಾಜಿಕ  ಬದುಕಿನ ಎಲ್ಲ ಶಕ್ತಿ ಮತ್ತು ದೌರ್ಬಲ್ಯಗಳನ್ನು ಬಿಂಬಿಸಿದರು.ಚೋಮ,ಕುಡಿಯರು,ಮಠದ ಸ್ವಾಮಿಗಳು,ಸಮಾಧಿಯಾದ ಸರಸಮ್ಮರು,ಮೂಕಜ್ಜಿ ಯಂತಹ  ನೂರಾರು ಮನುಷ್ಯರು ಮತ್ತು ಕೇವಲ ಮನುಷ್ಯರ ಜೊತೆಗೆಯೇ ಬೆಟ್ಟ ಹೊಳೆ ಕಡಲು ಕಾಡುಗಳು ಕನ್ನಡ ಸಾಹಿತ್ಯ ಜಗತ್ತಿನನಲ್ಲಿ ಜೀವ ತಾಳಿದವು.ಅದರ ಜೊತೆಗೆ ಕಾರಂತರು ಜ್ಞಾನ ಮತ್ತು ಸಾಂಸ್ಕೃತಿಕ ಸಾಹಿತ್ಯಗಳ ಮುಂದುವರಿಕೆಯಾಗಿ  ವಿಚಾರಸಾಹಿತ್ಯವನ್ನು ನಿರ್ಮಿಸಿ ಬದುಕಿನ ನೆಲೆಗಳನ್ನು ಕುಲುಕಿದರು ,ಛೇದಿಸಿದರು.’ನಮ್ಮ ಅಳತೆಯನ್ನು ಮೀರಲಾರದ ದೇವರು’ ಎನ್ನುವ ಅವರ ಪ್ರಬಂಧ ಅದು ಕೇವಲ ಮಾನವವಿಜ್ನಾನದ ತಿಳುವಳಿಕೆಯಿಂದ ರೂಪು ತಾಳಿದ್ದು ಅಲ್ಲ.ಅದರ ಹಿಂದೆ ತಾವು ಕರಾವಳಿ ಜಿಲ್ಲೆಯಲ್ಲಿ ಕಂಡ ಅನುಭವದ ದಟ್ಟ ಸಾಮಗ್ರಿ ಕೂಡಾ ಇದೆ.ಅದು ಅವರ ಕೆಲವು ಕಾದಂಬರಿಗಳ ಥೀಸಿಸ್ ಕೂಡಾ ಹೌದು.

ಇಲ್ಲಿ ಕಾರಂತರನ್ನು ಒಂದು ಸಾಂಸ್ಕೃತಿಕ ರೂಪಕವಾಗಿ ಮಾತ್ರ ಕೊಟ್ಟಿದ್ದೇನೆ.ಕನ್ನಡದಲ್ಲಿ ಕುವೆಂಪು,ಬೇಂದ್ರೆ ,ಮಾಸ್ತಿ ಪರಂಪರೆಯಿಂದ ತೊಡಗಿ ಇಂತಹ ‘ಸುಧಾರಣೀಕರಣ’ದ ಸಾಹಿತಿ ಚಿಂತಕರ ದೊಡ್ಡ ಇತಿಹಾಸ  ಇದೆ.ಇವರೆಲ್ಲಾ ಕರ್ನಾಟಕದ ಏಕೀಕರಣವನ್ನು ಸಾಧಿಸಿದವರು.ಇವರ ಸಾಹಿತ್ಯದ ಸಾಲುಗಳ ಉದ್ಧರಣೆಯ  ಜೊತೆಗೆ ಇವರ ಬದುಕಿನ ಸಾಲುಗಳನ್ನೂ ನಮ್ಮ ಉದ್ಧಾರಕ್ಕೆ ಬಳಸಬೇಕು.

ಕನ್ನಡವು ಅನ್ನದ ಭಾಷೆಯಾಗಬೇಕು ಎಂದು ನಾವು ಹೇಳುತ್ತಿರುತ್ತೇವೆ.ಅದು ನಮ್ಮದೇ ಅನ್ನದ ಭಾಷೆಯಾದರೆ ಮತ್ತು ಒಟ್ಟಾಗುವ ಮನಸ್ಸುಗಳು ಮತ್ತೆ ತೆರೆದುಕೊಂಡರೆ ಮತ್ತು ಬೆರೆತುಕೊಂಡರೆ ‘ ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು’ ನಮ್ಮ ಚೆಲುವ ಕನ್ನಡ ನಾಡು ಮತ್ತೊಮ್ಮೆ ಉದಯವಾಗಬಹುದು.

ಕನ್ನಡ ರಾಜ್ಯೋತ್ಸವದ ನೆನಪಿನ ಪ್ರೀತಿಯ ನೆನಕೆಗಳು.

 

‍ಲೇಖಕರು avadhi

November 4, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

  1. savitri

    ಸರ್ ಲೇಖನ ಚೆನ್ನಾಗಿದೆ. ಕನ್ನಡಿಗರನ್ನು ಖಂಡಿತ ಎಚ್ಚರಿಸುವ ಲೇಖನ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: